Site icon Vistara News

Yash Birthday: ಈ ಹುಟ್ಟುಹಬ್ಬಕ್ಕೂ ಇರಲ್ಲ ಯಶ್‌! ಪತ್ರ ಬರೆದ ರಾಕಿ ಭಾಯ್‌; ಅಭಿಮಾನಿಗಳಿಗೆ ಭಾರಿ ನಿರಾಸೆ

Rocking Star Yash

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಭರವಸೆಯ ನಟ ಎಂಬ ಖ್ಯಾತಿಯನ್ನು ಪಡೆದಿರುವ ಪ್ಯಾನ್‌ ಇಂಡಿಯಾ ಸಿನಿಮಾ ನಾಯಕ, ರಾಕಿಂಗ್‌ ಸ್ಟಾರ್‌ ಯಶ್‌ (Rocking Star Yash) ಅಭಿಮಾನಿಗಳಿಗೆ ಇದು ನಿರಾಸೆಯ ಸುದ್ದಿ. ಇದೇ ಜನವರಿ 8ಕ್ಕೆ ಯಶ್‌ ಹುಟ್ಟುಹಬ್ಬ (Yash Birthday) ಇದೆ. ಈ ವೇಳೆ ನೆಚ್ಚಿನ ನಟನನ್ನು ನೋಡುವ ಕಾತುರದಲ್ಲಿದ್ದ ಅಭಿಮಾನಿಗಳಿಗೆ ರಾಕಿ ಭಾಯ್‌ ಪತ್ರ ಬರೆದಿದ್ದಾರೆ. ನೂತನ ಚಿತ್ರಕ್ಕೆ (Yash 19 Movie Update) ಸಂಬಂಧಪಟ್ಟಂತೆ ಅನಿವಾರ್ಯವಾಗಿ ತಾವು ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಾರಣ ಹೇಳಿದ್ದಾರೆ. ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ತಮಗೆ ಗಿಫ್ಟ್‌ ಎಂದು ಬರೆದುಕೊಂಡಿದ್ದಾರೆ. ಟಾಕ್ಸಿಕ್‌ ಸಿನಿಮಾದ (Toxic movie) ಪ್ರಯುಕ್ತ ಬ್ಯುಸಿಯಾಗಿರುವುದಾಗಿ ಹೇಳಿದ್ದಾರೆ.

ತಮ್ಮ ಬರ್ತ್‌ ಡೇ ಬಗ್ಗೆ ಪತ್ರದ ಮೂಲಕ ಹೇಳಿಕೊಂಡಿರುವ ಯಶ್‌, ಅಭಿಮಾನಿಗಳಿಗೆ ಸಂಕ್ಷಿಪ್ತವಾಗಿ ಚಂದದ ಪತ್ರ ಬರೆದಿದ್ದಾರೆ. ನಿಮ್ಮೊಂದಿಗೆ ಹುಟ್ಟುಹಬ್ಬದ ದಿನ ಇರಲು ನನಗೂ ಆಸೆ ಇದೆ. ಆದರೆ, ಅನಿವಾರ್ಯವಾಗಿ ನಾನು ಹೋಗಲೇ ಬೇಕಿದೆ. ಇದನ್ನು ನೀವು ಅರ್ಥ ಮಾಡಿಕೊಳ್ಳುವಿರಿ ಎಂದು ಭಾವಿಸಿದ್ದಾಗಿ ಬರೆದುಕೊಂಡಿದ್ದಾರೆ.

ಯಶ್‌ ಪತ್ರದಲ್ಲೇನಿದೆ?

“ಜನವರಿ 8.. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆಯಾಗಿದೆ” ಎಂದು ಯಶ್‌ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ನಿರ್ಮಾಣ ಕ್ಷೇತ್ರಕ್ಕೆ ರಾಕಿ ಭಾಯ್‌ ಎಂಟ್ರಿ; `ಟಾಕ್ಸಿಕ್‌’ನಲ್ಲಿ ಮಲಯಾಳಂ ಖ್ಯಾತ ನಟ?

ಯಶ್‌ `ಟಾಕ್ಸಿಕ್‌’ ಸಿನಿಮಾ ಅನೌನ್ಸ್‌ ಮಾಡಿದ್ದಾಗಿನಿಂದ (Yash 19 Movie Update) ಹೊಸ ಹೊಸ ಅಪ್‌ಡೇಟ್‌ಗಳು ಬರುತ್ತಲೇ ಇವೆ. ಯಶ್ ಕನ್ನಡ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, ‘ಟಾಕ್ಸಿಕ್’ ಸಿನಿಮಾವನ್ನು ಕೇವಲ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಅಷ್ಟೇ ನಿರ್ಮಾಣ ಮಾಡುತ್ತಿಲ್ಲ. ಕೆವಿನ್‌ ಸಂಸ್ಥೆಯ ವೆಂಕಟ್ ಕೆ. ನಾರಾಯಣ್ ಜತೆ ಯಶ್ ತಮ್ಮ ʻಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ʼ ಮೂಲಕ ಕೈ ಜೋಡಿಸಿದ್ದಾರೆ. ಹಾಗೇ ಚಿತ್ರದಲ್ಲಿ ಮಲಯಾಳಂ ಸ್ಟಾರ್‌ ನಟರೊಬ್ಬರು ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುಳಿವೂ ಕೂಡ ವೈರಲ್‌ ಆಗುತ್ತಿದೆ.

ಯಶ್ ಅವರ ಈ ಸಿನಿಮಾ ಬಜೆಟ್ ಬರೋಬ್ಬರಿ 170 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಈ ಬಗ್ಗೆ ಕೆವಿಎನ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇದರ ಜತೆಗೆ ಇನ್ನೊಂದು ಸುದ್ದಿ ಸಖತ್‌ ವೈರಲ್‌ ಆಗಿದೆ. ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಪೂರಕವಾಗಿ, ನಟ ತಮ್ಮ ಇನ್‌ಸ್ಟಾದಲ್ಲಿ ಫಸ್ಟ್‌ ಲುಕ್‌ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಜೋಕರ್‌ ಪಾತ್ರದಲ್ಲಿ ಏನಾದರೂ ಟೊವಿನೋ ಥಾಮಸ್ ಕಾಣಿಸಿಕೊಳ್ಳಲಿದ್ದಾರಾ ಎಂದು ಕಮೆಂಟ್‌ ಮಾಡಿದ್ದಾರೆ. ಜೋಕರ್ ಝಲಕ್‌ನ ಮಾತ್ರ ಟೊವಿನೋ ಥಾಮಸ್ ಹಂಚಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಯುಕೆ, ಯೂರೋಪ್ ಸೇರಿದಂತೆ ಹಲವೆಡೆ ಟೈಟಲ್ ರಿವೀಲ್ ಆಗಿದೆ. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಕೂಡ ಕನ್ಫರ್ಮ್ ಆಗಿದೆ. ಗೀತು ಮೋಹನ್​ದಾಸ್​ ಕಲ್ಪನೆಯ ಕತೆಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 2025ರ ಏಪ್ರಿಲ್‌ 10ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ: Geetu Mohandas: ಯಶ್‌ TOXIC ಚಿತ್ರಕ್ಕೆ ಗೀತು ಮೋಹನ್‌ ದಾಸ್‌ ನಿರ್ದೇಶಕಿ; ಯಾರಿವರು?

ಯಶ್ ಕೆಲವು ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಿಕೊಂಡು ‘ಲೋಡಿಂಗ್’ ಎಂದು ಬರೆದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಯಶ್​ ‘ಲೋಡಿಂಗ್’ ಪೋಸ್ಟರ್ ಹಂಚಿಕೊಂಡ ಕೇವಲ 40 ನಿಮಿಷದಲ್ಲಿ ಆ ಚಿತ್ರಕ್ಕೆ 30 ಸಾವಿರ ಲೈಕ್​ಗಳು ಫೇಸ್​ಬುಕ್​ನಲ್ಲಿ ಬಂದಿದ್ದವು. ‘ಲೋಡಿಂಗ್’ ಪೋಸ್ಟರ್ʼ ಹಾಗೂ ಈ ಪೋಸ್ಟರ್‌ ಕೆಂಪು ಬಣ್ಣವನ್ನು ಹೊಂದಿದ್ದು, ಮುಂದಿನ ಸಿನಿಮಾ ಕೂಡ ಇದೇ ಮಾದರಿಯ ಕಲರ್ ಕಾಂಬಿನೇಷನ್‌ನಲ್ಲಿ ಬರಲಿದೆ ಎಂದು ಫ್ಯಾನ್ಸ್‌ ಊಹಿಸಿದ್ದರು.

Exit mobile version