ಮುಂಬೈ: ಕೆಲವು ವರ್ಷಗಳಿಂದ ಸೊರಗಿದ್ದ ಬಾಲಿವುಡ್ ಈ ವರ್ಷ ಚೇತರಿಕೆ ಕಂಡಿದೆ. ಹಿಂದಿ ಚಿತ್ರಗಳು ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿವೆ. ʼಜವಾನ್ʼ, ʼಪಠಾಣ್ʼ ಮತ್ತು ʼಗದರ್ 2ʼ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಿವೆ. ʼಅನಿಮಲ್ʼ ಚಿತ್ರ ಈಗಾಗಲೇ 800 ಕೋಟಿ ರೂ.ಗಿಂತ ಅಧಿಕ ಗಳಿಕ ಮಾಡಿ ಮುನ್ನುಗ್ಗುತ್ತಿದೆ. ಇದರ ಜತೆಗೆ ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪೈಕಿ ಟಾಪ್ 10ರಲ್ಲಿ ಬಾಲಿವುಡ್ ಸಿನಿಮಾಗಳ ಸಂಖ್ಯೆ ಹೆಚ್ಚಿದೆ (Google’s most searched movies of 2023). ಈ ಬಗ್ಗೆ ವಿವರ ಇಲ್ಲಿದೆ (Year Ender 2023).
ಜವಾನ್
ಕಾಲಿವುಡ್ ಜನಪ್ರಿಯ ನಿರ್ದೇಶಕ ಅಟ್ಲೀ ಆ್ಯಕ್ಷನ್ ಕಟ್ ಹೇಳಿದ ಮೊದಲ ಬಾಲಿವುಡ್ ಚಿತ್ರ ‘ಜವಾನ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಜತೆಗೆ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಸಿನಿಮಾ ಎನಿಸಿಕೊಂಡಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರದಲ್ಲಿ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿದ್ದರು. ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಗಳಿಕೆ ಬರೋಬ್ಬರಿ 1,160 ಕೋಟಿ ರೂ.
ಗದರ್ 2
ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಹಿಂದಿ ಚಿತ್ರಗಳ ಪೈಕಿ ʼಗದರ್ 2ʼ ಕೂಡ ಒಂದು. ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಈ ಬಾಲಿವುಡ್ ಚಿತ್ರ 2001ರ ʼಗದರ್ʼ ಚಿತ್ರದ ಮುಂದುವರಿದ ಭಾಗ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಅಮೀಶಾ ಪಟೇಲ್, ಉತ್ಕರ್ಷ್ ಶರ್ಮ ಮತ್ತಿತರರು ನಟಿಸಿದ್ದಾರೆ. ಅನಿಲ್ ಶರ್ಮಾ ನಿರ್ದೇಶಿಸಿದ್ದಾರೆ.
ಓಪನ್‌ಹೈಮರ್
ಹಾಲಿವುಡ್ ಚಿತ್ರ ʼಓಪನ್‌ಹೈಮರ್ʼ ಭಾರತದಲ್ಲೂ ಉತ್ತಮ ಗಳಿಕೆ ಕಂಡಿದೆ. ಕ್ರಿಸ್ಟೋಫರ್ ನೊಲನ್ ನಿರ್ದೇಶನದ ಈ ಸಿನಿಮಾ ಪರಮಾಣು ಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಭೌತಶಾಸ್ತ್ರಜ್ಞ ಜೆ. ರೆಬಾರ್ಟ್ ಓಪನ್‌ಹೈಮರ್ ಅವರ ಜೀವನವನ್ನು ತೆರೆ ಮೇಲೆ ಬಿಚ್ಚಿಟ್ಟಿತ್ತು. ನಟ ಸಿಲಿಯನ್ ಮರ್ಫಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದು ಜಾಗತಿಕವಾಗಿ ಬರೋಬ್ಬರಿ 7,921.91 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಆದಿಪುರುಷ್
ಪ್ಯಾನ್ ಇಂಡಿಯಾ ಚಿತ್ರ ʼಆದಿಪುರುಷ್ʼ ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಬಹುಶಃ ಈ ವರ್ಷ ಅತೀ ಹೆಚ್ಚು ಟ್ರೋಲ್‌ಗೆ ಗುರಿಯಾದ ಚಿತ್ರವೂ ಇದೇ ಇರಬೇಕು. ರಾಮಾಯಣವನ್ನು ಆಧರಿಸಿ ತಯಾರಾದ ಈ ಚಿತ್ರ ಕೆಟ್ಟ ಗ್ರಾಫಿಕ್ಸ್ ಕಾರಣಕ್ಕೆ ಸುದ್ದಿಯಾಗಿತ್ತು. ಓಂ ರಾವತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಕೃತಿ ಸನೂನ್, ಸೈಫ್ ಆಲಿಖಾನ್ ಮತ್ತಿತರರು ನಟಿಸಿದ್ದರು. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರದ ಗಳಿಕೆ ಕೇವಲ 350 ಕೋಟಿ ರೂ. ಎನ್ನಲಾಗಿದೆ.
ಪಠಾಣ್
ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ವರ್ಷಾರಂಭದಲ್ಲಿ ತೆರೆಕಂಡ ಈ ಚಿತ್ರದ ಮೂಲಕ ಶಾರುಖ್ ಸೋಲಿನ ಸುಳಿಯಿಂದ ಹೊರ ಬಂದಿದ್ದರು. ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿದ ಈ ಚಿತ್ರದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದರು. ಸುಮಾರು 250 ಕೋಟಿ ರೂ. ಬಜೆಟ್‌ನ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1,055 ಕೋಟಿ ರೂ. ಕಲೆಕ್ಷನ್ ಮಾಡಿದೆ.
ದಿ ಕೇರಳ ಸ್ಟೋರಿ
ವಿವಾದಗಳಿಂದಲೇ ಸುದ್ದಿಯಾದ ಹಿಂದಿ ಚಿತ್ರ ʼದಿ ಕೇರಳ ಸ್ಟೋರಿʼ ಬಾಕ್ಸ್ ಆಫೀಸ್‌ನಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಜತೆಗೆ 6ನೇ ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇರಳದ ಹಿಂದೂ / ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ / ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ / ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ‘ದಿ ಕೇರಳ ಸ್ಟೋರಿ’ ಸಿನಿಮಾ ಒಳಗೊಂಡಿತ್ತು. ವಿಪುಲ್ ಅಮೃತ್‌ಲಾಲ್ ಶಾ ನಿರ್ದೇಶನದ ಈ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 15-20 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರದಲ್ಲಿ ಗಳಿಸಿದ್ದು ಸುಮಾರು 300 ಕೋಟಿ ರೂ.
ಜೈಲರ್
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಚಿತ್ರ ʼಜೈಲರ್ʼ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್, ವಿನಾಯಕನ್, ತಮನ್ನಾ, ರಮ್ಯಾಕೃಷ್ಣ ಮತ್ತಿತರರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.
ಲಿಯೋ
ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ತ್ರಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅರ್ಜುನ್ ಸರ್ಜಾ, ಸಂಜಯ್ ದತ್, ಗೌತಮ್ ವಾಸುದೇವ್ ಮೆನನ್ ಮತ್ತಿತರರು ಅಭಿನಯಿಸಿದ್ದಾರೆ. ಇದು ಎಂಟನೇ ಸ್ಥಾನದಲ್ಲಿದೆ.
ಟೈಗರ್ 3
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ʼಟೈಗರ್ 3ʼ ಚಿತ್ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಮನೀಷ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್ ಅಭಿನಯಿಸಿದ್ದಾರೆ. 300 ಕೋಟಿ ರೂ. ಬಜೆಟ್‌ನ ಈ ಸಿನಿಮಾ 463 ಕೋಟಿ ರೂ. ಗಳಿಸಿದೆ.
ವಾರಿಸು
ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನೊಂದು ತಮಿಳು ಚಿತ್ರ ʼವಾರಿಸುʼ. ವಿಜಯ್ ಅಭಿನಯದ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ವಂಶಿ ಪೈಡಿಪಳ್ಳಿ ನಿರ್ದೇಶನದ ಈ ಚಿತ್ರ 200 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ 310 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: YEAR ENDER 2023: ಈ ವರ್ಷದ ಅತ್ಯಂತ ವಿವಾದಾತ್ಮಕ ಸಿನಿಮಾಗಳಿವು!