Site icon Vistara News

ಕ್ರಾಂತಿಯ ಕಿಡಿಗಳು ಅಂಕಣ | 24 ವರ್ಷ ಸೆರೆಯಲ್ಲಿದ್ದ ಸ್ವಾತಂತ್ರ್ಯ ಸೇನಾನಿ ಸೇತುಪತಿ

ಸ್ವಾತಂತ್ರ್ಯದ ಕಿಡಿಗಳು
http://vistaranews.com/wp-content/uploads/2022/08/podcast.mp3

ಆತ ಬದುಕಿದ್ದುದು ಕೇವಲ 48 ವರ್ಷಗಳು ಮಾತ್ರ. ಆದರೆ ತನ್ನ ಜೀವಿತಾವಧಿಯ 24 ವರ್ಷ ಆತ ಜೈಲಿನಲ್ಲೇ ಕಳೆದಿದ್ದ. ಆತನೆಸಗಿದ ‘ಅಪರಾಧ’ವೆಂದರೆ ಬ್ರಿಟಿಷರನ್ನು ಎದುರು ಹಾಕಿಕೊಂಡಿದ್ದು. ಅವರ ವಿರುದ್ಧ ಸೈನ್ಯದೊಂದಿಗೆ ಸೆಣಸಿದ್ದು, ಈ ‘ಅಪರಾಧ’ಕ್ಕಾಗಿ ಆತ ಜೈಲಿನ ನಾಲ್ಕು ಗೋಡೆಗಳ ನಡುವೆಯೇ ತನ್ನ ಕೊನೆಯುಸಿರು ಬಿಡಬೇಕಾಯಿತು.

ಆತನೇ ತಮಿಳುನಾಡಿನ ರಾಮನಾಥಪುರಂ ಸ್ವತಂತ್ರ ಸಂಸ್ಥಾನದ ರಾಜನಾಗಿದ್ದ ಮುತ್ತುರಾಮಲಿಂಗ ವಿಜಯರಘುನಾಥ ಸೇತುಪತಿ (1760-1809). ನಮ್ಮ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857) ನಡೆದ 48 ವರ್ಷಗಳಿಗೂ ಮುನ್ನವೇ ಸೇತುಪತಿ ಮಹಾರಾಜ ಸ್ವಾತಂತ್ರ್ಯಕ್ಕಾಗಿ ಹೋರಾಡಿ, 24 ವರ್ಷ ಸೆರೆವಾಸ ಸಹಿಸಿ ಪ್ರಾಣಾರ್ಪಣೆ ಮಾಡಿದ್ದ. ಆದರೂ ಇತಿಹಾಸಕಾರರು ಇಂತಹ ಒಬ್ಬ ಮಹಾನ್ ಸ್ವಾತಂತ್ರ್ಯ ಸೇನಾನಿಯ ತ್ಯಾಗ, ಬಲಿದಾನ, ಹೋರಾಟಗಳ ಕುರಿತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಧ್ಯಾಯಗಳಲ್ಲಿ ಒಂದೇ ಒಂದು ಪುಟವನ್ನು ದಾಖಲಿಸದಿರುವುದಕ್ಕೆ ಕಾರಣವೇನು ಎಂದು ಆಶ್ಚರ್ಯ, ಆಘಾತ ಎರಡೂ ಆಗುತ್ತದೆ. ಆತ ದಕ್ಷಿಣ ಭಾರತಕ್ಕೆ ಸೇರಿದವನೆಂದೋ ಅಥವಾ ಆತನೊಬ್ಬ ಮದ್ರಾಸಿಗನೆಂದೋ ತಾತ್ಸಾರವಿದ್ದಿರಬಹುದು.

ಇಡೀ ತಮಿಳುನಾಡಿನ ಎಲ್ಲ ಸಂಸ್ಥಾನದ ದೊರೆಗಳು ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಮರವಾರ ಪ್ರದೇಶದ ದೊರೆಗಳು ಮಾತ್ರ ಇಂಗ್ಲಿಷರ ಹಂಗಿರನಮನೆಯ ಕೃಪಾಕಟಾಕ್ಷವನ್ನು ತಿರಸ್ಕರಿಸಿದರು. ಈ ಎಲ್ಲ ದೊರೆಗಳಿಗೆ ರಾಮನಾಥಪುರಂ ಸಂಸ್ಥಾನದ ರಾಜ ಮುತ್ತುರಾಮಲಿಂಗ ಸೇತುಪತಿ ಮುಖಂಡನಾಗಿದ್ದ. ಮುತ್ತುರಾಮಲಿಂಗ ಇನ್ನೂ ಹನ್ನೆರಡು ವರ್ಷ ಹುಡುಗನಾಗಿದ್ದಾಗ, ಇಂಗ್ಲಿಷರು ರಾಮನಾಥಪುರಂ ಕೋಟೆಯನ್ನು ಫಿರಂಗಿಗಳಿಂದ ಉಡಾಯಿಸಿ, ಆರ್ಕಾಟ್ ನವಾಬನಿಗೆ ವಿಜಯ ತಂದುಕೊಟ್ಟಿದ್ದರು. ಆರ್ಕಾಟ್ ನವಾಬ ಇಂಗ್ಲೀಷರ ನೆರವಿನಿಂದ ಎಲ್ಲ ಪಾಳೇಗಾರರ ಕೋಟೆಕೊತ್ತಲಗಳನ್ನು ನಿರ್ದಯವಾಗಿ ವಶಪಡಿಸಿಕೊಳ್ಳುತ್ತಾ ಸಾಗಿದ್ದ. ರಾಮನಾಥಪುರಂ ಕೋಟೆಯನ್ನು ನಾಶಪಡಿಸಿದ ಬಳಿಕ, ಇಂಗ್ಲಿಷ್ ಸೈನ್ಯ 12ರ ಹರೆಯದ ರಾಜ ಮುತ್ತುರಾಮಲಿಂಗ ಸೇತುಪತಿಯನ್ನು ಆತನ ತಾಯಿ ಮತ್ತು ಇಬ್ಬರು ಸೋದರಿಯರ ಸಹಿತ ಬಂಧಿಸಿ 1772ರಲ್ಲಿ ತಿರುಚ್ಚಿರಾಪಳ್ಳಿ ಕೋಟೆಯಲ್ಲಿ ಸೆರೆಯಲ್ಲಿಟ್ಟಿತ್ತು.
ಸೇತುಪತಿಯ ಬಂಧನದಿಂದ ರಾಮನಾಥಪುರಂ ಸಂಸ್ಥಾನದ ಜನರೆಲ್ಲ ಸಿಡಿದೆದ್ದರು. ಅಲ್ಲಲ್ಲಿ ಅಶಾಂತಿ, ದಂಗೆಗಳಾದವು. ಇಂಗ್ಲಿಷರು ಹಾಗೂ ಆರ್ಕಾಟ್ ನವಾಬನ ವಿರುದ್ಧ ಜನ ದ್ವೇಷ ಸಾಧನೆಗೆ ತೊಡಗಿದರು. ಪರಿಸ್ಥಿತಿ ವಿಷಮಸ್ಥಿತಿಗೆ ಹೋಗುವುದನ್ನರಿತ ಆರ್ಕಾಟ್ ನವಾಬ ಹತ್ತು ವರ್ಷಗಳ ಬಳಿಕ ಯುವರಾಜ ಮುತ್ತುರಾಜಲಿಂಗ ಸೇತುಪತಿಯನ್ನು ಬಿಡುಗಡೆಗೊಳಿಸಿ, ಆತನೊಂದಿಗೆ ಒಂದು ಶಾಂತಿ ಒಪ್ಪಂದವನ್ನು ಮಾಡಿಕೊಂಡ.

ಮತ್ತೆ ರಾಮನಾಥಪುರಂ ಸಂಸ್ಥಾನ ತನ್ನ ಕೈಗೆ ಬಂದೊಡನೆ, ಯುವರಾಜ ಸೇತುಪತಿಯು ಭೂಸರ್ವೇಕ್ಷಣೆ, ನೀರಾವರಿ ಸೌಲಭ್ಯ, ನೀರಿಲ್ಲದೆಡೆಗೆ ನೀರು ಹರಿಸುವ ಯೋಜನೆ ಇತ್ಯಾದಿ ಅಭಿವೃದ್ಧಿಕಾರ್ಯ ಕೈಗೊಂಡ. ಪಾಶ್ಚಾತ್ಯ ಪದ್ಧತಿಯ ಶೈಕ್ಷಣಿಕ ಸಂಸ್ಥೆಗಳಿಗೆ ಅನುಮತಿ ನೀಡುವುದರ ಜೊತೆಗೆ ಹಲವು ದೇವಾಲಯಗಳ ಜೀರ್ಣೋದ್ಧಾರ, ದೇಗುಲಗಳ ನಿರ್ವಹಣೆಗೆ ದತ್ತಿವ್ಯವಸ್ಥೆ ಹಾಗೂ ಪ್ರಸಿದ್ಧ ರಾಮೇಶ್ವರಂ ದೇಗುಲ ನಿರ್ಮಾಣಕರ‍್ಯವನ್ನು ನಡೆಸಿದ. ನೇಯ್ಗೆ ಉದ್ಯಮಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ, ಮಸ್ಲಿನ್ ಮತ್ತಿತರ ಬೆಲೆಬಾಳುವ ಬಟ್ಟೆಗಳ ರಫ್ತು ಉದ್ಯಮಕ್ಕೆ ಚಾಲನೆ ನೀಡಿದ. ದವಸಧಾನ್ಯಗಳ ಸಂಗ್ರಹಕ್ಕೆ ಸಾಕಷ್ಟು ಶೇಖರಣಾ ಗೃಹಗಳನ್ನು ನಿರ್ಮಿಸಿದ. ಆಂತರಿಕ ಹಾಗೂ ಬಾಹ್ಯ ಶತ್ರುಗಳ ವಿರುದ್ಧ ಸೆಣಸಲು ಅಗತ್ಯವಿರುವ ಯುದ್ಧೋಪಕರಣಗಳು ಹಾಗೂ ಸ್ಫೋಟಕಗಳ ಉತ್ಪಾದನಾ ಕಾರ್ಖಾನೆಗಳನ್ನು ಸ್ಥಾಪಿಸಿದ.
ಈ ನಡುವೆ ಮದ್ರಾಸಿನ (ಈಗ ಚೆನ್ನೈ) ಚೆಪಾಕ್‌ನಲ್ಲಿ ಭಾರಿ ಭವ್ಯ ಅರಮನೆ ನಿರ್ಮಿಸಲು ಹೊರಟ.

ಆರ್ಕಾಟ್ ನವಾಬ ಮೊಹಮ್ಮದ್ ಆಲಿಗೆ ಭಾರೀ ಹಣಕಾಸಿನ ತೊಂದರೆಯ ಸಂಕಟ ಎದುರಾಯಿತು. ಆರ್ಥಿಕ ಸಂಕಟ ನೀಗಿಸಲು ಆತ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯಿಂದ ಶೇ.20ರಿಂದ 30ರ ಬಡ್ಡಿದರದಲ್ಲಿ ಸಾಲ ಪಡೆದನು. ಇದೂ ಸಾಲದೆಂಬಂತೆ ಪಾಳೇಗಾರರ ದೊಂಬಿ, ಮಧುರೈ ಗಲಭೆ, ಮಾಬುಶ್‌ಖಾನ್ ಎಸಗಿದ ದ್ರೋಹ, ಫ್ರೆಂಚರ ಆಕ್ರಮಣಗಳ ಕಿರುಕುಳದಿಂದಾಗಿ ಆರ್ಕಾಟ್ ನವಾಬ ಆರ್ಥಿಕವಾಗಿ ಇನ್ನಷ್ಟು ಹೈರಾಣಾಗಿ ಹೋದ. ನವಾಬನಿಗೆ ಈ ಸಂಕಟದಿಂದ ಪಾರಾಗಲು ಬೇರೆ ದಾರಿಯೇ ಇರಲಿಲ್ಲ. 1787ರಲ್ಲಿ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿ, ತನ್ನೆಲ್ಲ ಅಧಿಕಾರವನ್ನು ಕಂಪನಿಗೆ ಬಿಟ್ಟುಕೊಟ್ಟು ಶರಣಾದ. ವ್ಯಾಪಾರಕ್ಕೆಂದು ಬಂದಿದ್ದ ಇಂಗ್ಲಿಷರು ಕ್ರಮೇಣ ಇಲ್ಲಿನ ದೊರೆಗಳ ದೌರ್ಬಲ್ಯವನ್ನು ದುರುಪಯೋಗಿಸಿಕೊಂಡು ತಾವೇ ಆಳುವವರಾಗಿದ್ದು ಹೀಗೆ. ತಮ್ಮ ಕೈಗೆ ಅಧಿಕಾರ ಸಿಕ್ಕೊಡನೆ ಮಿಲಿಟರಿ ಶಕ್ತಿ ಬಳಸಿ ಎಲ್ಲರನ್ನು ಇಂಗ್ಲಿಷರು ಹದ್ದುಬಸ್ತಿನಲ್ಲಿಟ್ಟರು. ತಮ್ಮ ಆಜ್ಞೆ ಉಲ್ಲಂಘಿಸುವವರ ಮೇಲೆ ದಂಡೆತ್ತಿ ಹೋಗಿ ಶರಣಾಗತರಾಗುವಂತೆ ಮಾಡಿದರು.

ಬೇರೆಲ್ಲ ಸಂಸ್ಥಾನದ ದೊರೆಗಳು ಆರ್ಕಾಟ್ ನವಾಬ ಮತ್ತು ಇಂಗ್ಲಿಷರಿಗೆ ಶರಣಾಗಿ, ಅವರು ಹೇಳಿದಂತೆ ಕಪ್ಪಕಾಣಿಕೆ, ತೆರಿಗೆ ಸಲ್ಲಿಸುತ್ತಿದ್ದರೂ ರಾಮನಾಥಪುರಂ ಸಂಸ್ಥಾನದ ದೊರೆ ಸೇತುಪತಿಯು ನವಾಬನಿಗಾಗಲೀ ಇಂಗ್ಲಿಷರಿಗಾಗಲೀ ಕ್ಯಾರೇ ಎನ್ನಲಿಲ್ಲ. ನವಾಬ ಹಾಗೂ ಕಂಪನಿಯ ಅಧಿಕಾರಿಗಳಿಂದ ಬರುತ್ತಿದ್ದ ಪತ್ರಗಳಿಗೆ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಯಾವ ಸಮಾಲೋಚನೆಗೂ ಬಗ್ಗಲಿಲ್ಲ. ಇದು ಇಂಗ್ಲಿಷ್ ಅಧಿಕಾರಿಗಳ ಅಹಂಗೆ ಬಲವಾದ ಆಘಾತ ನೀಡಿತ್ತು. ಸೇತುಪತಿಗೆ ಅಷ್ಟೊಂದು ದುರಹಂಕಾರವೇ? ಆತನ ಹುಟ್ಟಡಗಿಸಲೇಬೇಕೆಂಬ ಹಠ, ದ್ವೇಷ ಬಲವಾಗುತ್ತಾ ಹೋಯಿತು. ಇಂಗ್ಲಿಷ್ ಸೈನ್ಯ ರಾಮನಾಥಪುರಂ ಮೇಲೆ ದಾಳಿ ನಡೆಸಲು ಉತ್ತಮ ಅವಕಾಶಕ್ಕಾಗಿ ಹೊಂಚುಹಾಕುತ್ತಲೇ ಇತ್ತು.

ಆ ಅವಕಾಶ ಬಂದೇ ಬಿಟ್ಟಿತು. ಅದು 8-2-1795. ಈಸ್ಟ್ ಇಂಡಿಯಾ ಕಂಪನಿ ತನ್ನ ಭಾರೀ ಸೈನ್ಯ, ಮದ್ದುಗುಂಡು ಫಿರಂಗಿಗಳೊಂದಿಗೆ ಕರ್ನಲ್ ಸ್ಟೀವನ್‌ಸನ್ ಸಾರಥ್ಯದಲ್ಲಿ ರಾಮನಾಥಪುರಂ ಕೋಟೆಗೆ ಲಗ್ಗೆ ಹಾಕಿತು. ಅನಿರೀಕ್ಷಿತ ಈ ದಾಳಿಯನ್ನೆದುರಿಸಲು ಸೇತುಪತಿಯ ಸೈನ್ಯ ತಯಾರಾಗಿಲಿಲ್ಲ. ನಿಸ್ಸಹಾಯಕ ಸ್ಥಿತಿಯಲ್ಲಿ ರಾಜ ಮುತ್ತುರಾಮಲಿಂಗ ಸೇತುಪತಿ ಇಂಗ್ಲಿಷರ ಬಂಧನಕ್ಕೊಳಗಾಗಬೇಕಾಯಿತು. ದಾಳಿ ನಡೆಸಿದ ಸೈನ್ಯ ಕಲೆಕ್ಟರ್ ಚೌನಿ ಸಮ್ಮುಖದಲ್ಲೇ ಅರಮನೆಯಲ್ಲಿದ್ದ ಹಣ, ಚಿನ್ನ, ವಜ್ರದಾಭರಣಗಳು ಎಲ್ಲವನ್ನು ಎಗ್ಗಿಲ್ಲದೆ ಲೂಟಿ ಹೊಡೆಯಿತು. ಅಂತಃಪುರದಲ್ಲಿದ್ದ ರಾಣಿಯರ ಖಾಸಗಿ ಕೋಣೆಗಳಿಗೂ ನುಗ್ಗಿ ಸಿಕ್ಕಿದವರ ಮೇಲೆಲ್ಲ ಅತ್ಯಾಚಾರ ನಡೆಸಿತು. ಮುತ್ತುರಾಮಲಿಂಗ ಸೇತುಪತಿಯನ್ನು ಮತ್ತೆ ತಿರುಚ್ಚಿರಾಪಳ್ಳಿಯಲ್ಲಿರುವ ಕೋಟೆ ಜೈಲಿಗೆ ಸಾಗಿಸಲಾಯ್ತು. ಹದಿನೈದು ವರ್ಷಗಳ ಹಿಂದೆ ಆದೇ ಜೈಲಿನಲ್ಲಿದ್ದ.

ಸೇತುಪತಿಯ ಬಂಧನದ ಸುದ್ದಿ ಇಡೀ ಮರವಾರ ಪ್ರದೇಶದ 72ಕ್ಕೂ ಹೆಚ್ಚು ಪಾಳೆಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇಂಗ್ಲಿಷರ ಕುಟಿಲತಂತ್ರ ಅವರಲ್ಲಿ ಸೇಡಿನ ಕಿಚ್ಚನ್ನು ಹಚ್ಚಿತ್ತು. ಮೈಲಪ್ಪನ್ ಸರ್ವಾಯಿ ಮತ್ತು ಮುತ್ತುಕರುಪ್ಪ ಥೇವರ್ ನೇತೃತ್ವದಲ್ಲಿ 1802ರಲ್ಲಿ ಪಾಳೇಗಾರರ ಸೈನ್ಯ ಇಂಗ್ಲಿಷರ ವಿರುದ್ಧ ಹೋರಾಟ ನಡೆಸಿತು. ಇದರಿಂದ ಕಂಗಾಲಾದ ಇಂಗ್ಲಿಷರು ಬಂಧನದಲ್ಲಿದ್ದ ರಾಜ ಸೇತುಪತಿಯನ್ನು ತಿರುಚ್ಚಿರಾಪಳ್ಳಿ ಜೈಲಿನಿಂದ ಮದ್ರಾಸಿನ ಅಭೇದ್ಯ ಕೋಟೆ ಜೈಲಿಗೆ ಸಾಗಿಸಿದರು. ದಂಗೆಯೆದ್ದಿದ್ದ ಪಾಳೇಗಾರರನ್ನು ಕುಟಿಲತಂತ್ರಗಳ ಮೂಲಕ ಸದೆಬಡಿದು ಸೋಲಿಸಿದರು. ಸೇತುಪತಿಗೆ, ಹಾಗಾಗಿ ಬಿಡುಗಡೆಯ ಭಾಗ್ಯ ದೊರಕಲೇ ಇಲ್ಲ.

ಜೈಲಿನಲ್ಲಿದ್ದ ರಾಜ ಸೇತುಪತಿಯನ್ನು ಇಂಗ್ಲಿಷ್ ಸೈನ್ಯದ ಮೇಜರ್ ಬ್ರಕ್ಲಿ ಆಗಾಗ ಭೇಟಿ ಮಾಡಲು ಬರುತ್ತಿದ್ದ. ಆದರೆ ರಾಜ ಸೇತುಪತಿ ಒಂದೇ ಒಂದು ಬಾರಿಯೂ ಆತನತ್ತ ತಿರುಗಿ ನೋಡಲಿಲ್ಲ. ಒಂದೇ ಒಂದು ಮಾತನ್ನು ಆಡಲಿಲ್ಲ. ತನ್ನ ಬಿಡುಗಡೆಗಾಗಿ ಗೋಗರೆಯಲೂ ಇಲ್ಲ. ಸೇತುಪತಿ ಮನದೊಳಗೆ ಇಂಗ್ಲಿಷರ ವಿರುದ್ಧವಿದ್ದ ದ್ವೇಷಾಗ್ನಿ ಕೊತಕೊತನೆ ಕುದಿಯುತ್ತಲೇ ಇತ್ತು. ಅದು ತಣ್ಣಗಾಗಿದ್ದು ಸೇತುಪತಿಯ ಕೊನೆಯುಸಿರು ನಿಂತಾಗಲೇ.

ಶಾರೀರಿಕವಾಗಿ ಮಾನಸಿಕವಾಗಿ ಬಳಲಿದ್ದ, ಅಸಹಾಯಕನಾಗಿದ್ದ ಸೇತುಪತಿಯ ಆರೋಗ್ಯ ದಿನೇ ದಿನೇ ಕುಸಿಯತೊಡಗಿದಾಗ, ಗಾಬರಿಗೊಂಡ ಜೈಲು ಅಧಿಕಾರಿಗಳು ವೈದ್ಯ ಸಲಹೆಯಂತೆ ಸೇತುಪತಿಯನ್ನು ಅವರ ಆಪ್ತಸ್ನೇಹಿತರಾದ ವೆಂಕಟಾಚಲಂ ಚೆಟ್ಟಿಯಾರ್ ನಿವಾಸಕ್ಕೆ ಸಾಗಿಸಿದರು. ಸೈನಿಕರ ಪಹರೆಯಂತೂ ಇದ್ದೇ ಇತ್ತು. ಚೆಟ್ಟಿಯಾರ್ ನಿವಾಸದಲ್ಲಿ ಸೇತುಪತಿ ಇದ್ದಿದ್ದು ಒಂದೇ ದಿನ. ಅಲ್ಲಿ ಎಲ್ಲರೊಡನೆ ಕಾಲ ಕಳೆದ ರಾಜ ಸೇತುಪತಿ ಮರುದಿನ ಕೊನೆಯುಸಿರೆಳೆದರು.

ರಾಜ ಸೇತುಪತಿ ದೈವಾಧೀನರಾದ ಎರಡು ದಿನಗಳ ಬಳಿಕ ಭವ್ಯ ಮೆರವಣಿಗೆಯೊಂದಿಗೆ ಅಂತ್ಯಸಂಸ್ಕಾರ ವಿಧಿಗಳನ್ನು ನೆರವೇರಿಸಲಾಯ್ತು. ಸಕಲ ರಾಜಮರ್ಯಾದೆ ಸಹಿತ ಅಂತ್ಯಕ್ರಿಯೆ ನಡೆಯಿತೆಂದು ತಮಿಳುನಾಡು ಸ್ವಾತಂತ್ರ್ಯ ಸಂಗ್ರಾಮದ ದಾಖಲೆಗಳು ತಿಳಿಸುತ್ತವೆ.

ಬದುಕಿದ್ದುದು ಕೇವಲ 48 ವರ್ಷ. ಇಂಗ್ಲಿಷರ ವಿರುದ್ಧದ ಹೋರಾಟದಲ್ಲಿ ಎರಡು ಬಾರಿ ಸೆರೆಸಿಕ್ಕಿ, ಬರೋಬ್ಬರಿ 24 ವರ್ಷ ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಸೇನಾನಿ. ರಾಮನಾಥಪುರಂ ಸಂಸ್ಥಾನದ ರಾಜನಾಗಿದ್ದ ಮುತ್ತುರಾಮಲಿಂಗ ಸೇತುಪತಿ ಕೊನೆಯವರೆಗೂ ರಾಜನಂತೆಯೇ ಸ್ವಾಭಿಮಾನಧನನಾಗಿ ಬದುಕಿದ್ದುದು ಗಮನಾರ್ಹ ಸಂಗತಿ. ಇಂಗ್ಲಿಷರಿಗೆ ಮುಜುರೆ ಸಲ್ಲಿಸಲಿಲ್ಲ. ಪ್ರಾಣಭಿಕ್ಷೆ ಬೇಡಲಿಲ್ಲ. ಅನಾರೋಗ್ಯ ಕಾಡಿದರೂ ಬಿಡುಗಡೆ ಮಾಡಿರೆಂದು ಯಾಚಿಸಲಿಲ್ಲ. ಒಂದೆರಡು ತಿಂಗಳು, ಹೊರಗಿನ ಸಂಪರ್ಕವಿಲ್ಲದೆ ಜೈಲಿನಲ್ಲಿದ್ದರೂ ಎಂಥವರಿಗಾದರೂ ಹುಚ್ಚು ಹಿಡಿದಂತೆ ಆಗುವುದು ಸಹಜ. ರಾಜ ಸೇತುಪತಿಯಾದರೋ ಇಂಗ್ಲಿಷರ ಜೈಲಿನಲ್ಲಿ ಒಟ್ಟು 24 ವರ್ಷ ಅದು ಹೇಗೆ ಕಳೆದರೋ ಗೊತ್ತಿಲ್ಲ.

ತಮಿಳು ಸಾಹಿತ್ಯ, ಜಾನಪದ ಲೋಕ, ಅದಕ್ಕಿಂತಲೂ ಮುಖ್ಯವಾಗಿ ಜನಮನದಾಳದಲ್ಲಿ ರಾಜ ಸೇತುಪತಿಯ ಧೈರ್ಯ, ಸಾಹಸ, ಸಾಧನೆ, ಹೋರಾಟ ಕುರಿತು ನೆನಪುಗಳ ಕಥಾನಕಕ್ಕೆ ಮಾತ್ರ ಸಾವು ಬಂದಿಲ್ಲ. ಸೇತುಪತಿಯ ತ್ಯಾಗ, ಬಲಿದಾನ ಮುಂದೆ ಇನ್ನಷ್ಟು ವೀರರಿಗೆ, ಸಾಹಸಿಗಳಿಗೆ ಬ್ರಿಟಿಷರ ವಿರುದ್ಧ ಹೋರಾಡಲು ಸ್ಫೂರ್ತಿ, ಪ್ರೇರಣೆ ನೀಡಿತು. ಸೇತುಪತಿಯಂತಹ ಮಹಾನ್ ಸ್ವಾತಂತ್ರ್ಯ ಸೇನಾನಿಯ ಧೀರೋದತ್ತ ಬದುಕಿನಿಂದ ಸ್ಫೂರ್ತಿ ಪಡೆದು ಸುಬ್ರಹ್ಮಣ್ಯ ಭಾರತಿ ಎಂಬ ಕವಿ ಹಲವಾರು ಪ್ರೇರಣಾದಾಯಕ ಸ್ವಾತಂತ್ರ್ಯ ಗೀತೆಗಳನ್ನು ರಚಿಸಿ ಯುವಜನಾಂಗವನ್ನು ಪ್ರೇರಿಸಿದರು.

ಸ್ವಾತಂತ್ರ್ಯ ಜ್ಯೋತಿ ನಿರಂತರವಾಗಿ ಬೆಳಗಲು ರಾಜ ಸೇತುಪತಿ ತೈಲವಾದರು.

ಇದನ್ನೂ ಓದಿ | 50 ವರ್ಷ ಸೆರೆಯಲ್ಲಿದ್ದ ಆ ಅಜ್ಞಾತ ಸ್ವಾತಂತ್ರ್ಯ ಸೇನಾನಿ

Exit mobile version