Site icon Vistara News

ಪೋಸ್ಟ್‌ ಬಾಕ್ಸ್‌ 143 ಅಂಕಣ | ಹಾಡಿನ ಸಾಲು ಗುಂಗು ಹಿಡಿಸಿ ಮತ್ತಷ್ಟು ದಿನ ಓಡ್ತದೆ, ಮತ್ತೊಂದು ಸಿಗುವ ತನಕ

ಡಿಯರ್ ಜಂಟಲ್ಮನ್,

ಇನ್ನೊಂದೇ ಒಂದು ಸಲ ಆ ಹಾಡಿನ ಸಾಲಿನ ಬಗ್ಗೆ ಮಾತಾಡಿದರೆ ನೀನು ಖಂಡಿತಾ ನೀನು ನನ್ನ ಯಾವ್ದಾದರೂ ಎತ್ತರದ ಬಿಲ್ಡಿಂಗಿನಿಂದ ತಳ್ಳೋದು ಗ್ಯಾರಂಟಿ. ಹ ಹ್ಹ. ಅಷ್ಟೊಂದು ತಲೆತಿಂದುಬಿಟ್ಟಿದೀನಿ.

ನಿಂಗೊತ್ತಾ? ರೈಲಲ್ಲಿ ಜನರಲ್ ಬೋಗೀಲಿ ಕಿಟಕಿ ಸೀಟಲ್ಲಿ ಕೂತು, ಕಿವಿಗೆ ಇಯರ್ ಫೋನ್ ಹಚ್ಚಿ, ಸುತ್ತಲ ಜನರನ್ನೂ, ಲೋಕವನ್ನೂ ಮರ್ತು ಹಾಡು ಕೇಳುತ್ತಾ ಮಾಯಾಚಾಪೆಯಲಿ ತೇಲುವುದಕ್ಕೆ ಸ್ವರ್ಗಸಮಾನ ಸುಖ ಅಂತ ಹೆಸರು! ಕೇಳದು ಅಂದ್ರೆ ಹೆಂಗೆ? ಉದ್ದದ ಪ್ರಯಾಣವಿಡೀ ಒಂದೇ ಹಾಡು. ರಿಪೀಟ್ ಮೋಡು. ಒಂದು ಹಾಡು ಹಾಗೆ ರಿಪೀಟ್ ಮೋಡಲಿ ಒಂದು ವಾರವಾದ್ರೂ ಓಡ್ತದೆ. ಅದರಲ್ಲೂ ಯಾವ್ದೋ ಒಂದು ಸಾಲು. ಕೇಳೀ ಕೇಳೀ ಕೇಳೀ ಉಜ್ಜಾಡೋದು. ಅದನ್ನು ಮೀರಿದ ಹಾಡು ಮತ್ತು ಸಾಲು ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲವೆನಿಸಿರುತ್ತದೆ. ಆಮೇಲೆ ಮತ್ಯಾವುದೋ ಹಾಡು, ಮತ್ಯಾವುದೋ ಸಾಲು ಗುಂಗು ಹಿಡಿಸಿ ಒಂದಷ್ಟು ದಿನ ಅದೂ ಓಡ್ತದೆ. ಮತ್ತೊಂದು ಸಿಗುವತನಕ.

ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ನಿನ ನೂಕುನುಗ್ಗಲಿನ ನಡುವೆಯೂ ಕಿವಿಯಲ್ಲಿ ಪಂಡಿತ ವೆಂಕಟೇಶಮೂರ್ತಿಗಳು “ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು, ಮಾನದಲಿ ಮನವ ತಗ್ಗಿಸಲುಬಹುದು, ಪ್ರಾಣನಾಯಕನಾದ ಆದಿಕೇಶವರಾಯ ಜಾಣಶ್ರೀಕೃಷ್ಣಾ” ಅಂತ ಹಾಡ್ತಿದ್ದರೆ ಮೆಟ್ರೋದ ಒತ್ತಡಕರಗಿ ಮನಸು ಎಲ್ಲೋ ಲೀನ. ಯಾವುದೋ ಸ್ಟೇಷನ್ನು ತಲುಪಲು ಹತ್ತಿಳಿಯುವ, ಸರಬರ ಓಡಾಡುವ ಜನರೆಲ್ಲ ಆ ಕ್ಷಣ ನನ್ನ ಪಾಲಿಗೆ ಆ ಹಾಡಿನಿಂದ ವಂಚಿತರಾದಂತೆ, ನಾನೊಬ್ಬಳೇ ಪರಮಭಾಗ್ಯವುಳ್ಳವಳಂತೆ ಅನಿಸುತ್ತಿರುತ್ತದೆ. ನನ್ನ ಹಾಗೇ ಕಿವಿಗೆ ಹಿಯರ್ ಫೋನ್ ಚುಚ್ಚಿದವರ ಕಿವಿಯಲ್ಲೂ ಓಡುತ್ತಿರಬಹುದಾದ ಯಾವುದೋ ಭಾಷೆಯ ಸೊಗಸಾದ ಹಾಡಿನಿಂದ ಆ ಕ್ಷಣ ನಾನೂ ವಂಚಿತಳಾಗಿರಬಹುದು ಕೂಡ. ಯೋಹಾನಿ, “ಮಣಿಕೇ ಮಗ್ಗೇ ಹಿತ್ತೇ, ಪುದುವೇ ನೂರಾಹೆಂಗುಮ್ ಯಾವೀ, ಅವಿಲೇವೀ, ನೆರಿಯೇ ನುಂಬೇನಾಕೆ ಮಗೆನೆನ್ ನೇಹಾವೇಹಾಯಾವೀ ಅವಿಲೇವೀ. ಮಾ ಹಿತಲೆಗಮ ದೆವಟಿನ, ಉರುಪೆಮುಕ ಪೆಟಲಿನ” ಅಂತ ಲಂಕನ್ ಭಾಷೇಲಿ ಹಾಡಿದಾಗ ಹಿಯರ್ ಫೋನು ಚುಚ್ಚಿದ ಪ್ರತಿಕಿವಿಯಲ್ಲೂ ಅದೇ ಹಾಡು ಓಡ್ತಿರಬಹುದು ಅನಿಸ್ತಿತ್ತು. ಜಯಂತ್ ಕಾಯ್ಕಿಣಿ ಹಾಡುಗಳೆಂದರೆ ಪ್ರಾಣ ನನಗೆ, ಗೊತ್ತಲ್ಲ ನಿನಗೆ? “ಎಷ್ಟು ಪಕಳೆಯುಂಟು ಹೇಳು ಸೇವಂತಿಗೆ? ಅಷ್ಟೆ ಬಗೆಯ ಸೆಳೆತ ನನಗೆ ನಿನ್ನೊಂದಿಗೆ” “ಬೇಕಂತ ಸುಮ್ಮನೇ ಗುದ್ದಾಡುದಾ, ಕಣ್ಣಲ್ಲೆ ನಿನ್ನನೂ ಮುದ್ದಾಡುತಾ, ಆಗಾಗ ಮೂಕಳಾದೆ ಮಾತನಾಡುತಾ” “ಕನಸಿನಾ ಕುಲುಮೆಗೆ ಉಸಿರನು ಊದುತಾ ಕಿಡಿಹಾರುವುದು ಇನ್ನು ಖಚಿತಾ” “ಇದಕಿಂತ ಮುಂಚೆ ಇನ್ನೂ, ಸಿಗಬಾರದಿತ್ತೆ ನೀನು, ಇನ್ನಾದರೂ ಕೂಡಿಟ್ಟುಕೋ ನೀ ನನ್ನನೂ, ಕಳೆಯುವ ಮುನ್ನವೆ!” “ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ ನಾ ಬಿಕ್ಕಿ ಅಳಬಾರದೇ?” ಎಂಬೆಲ್ಲ ಅನನ್ಯ ಸಾಲುಗಳನ್ನು ಕೇಳುವಾಗ ಮೆಟ್ರೋದ ಎಸ್ಕಲೇಟರು ಈ ಲೋಕದಿಂದ ಮತ್ತೊಂದು ಲೋಕಕ್ಕೆ ಹಾರಿಸಿಕೊಂಡು ಹೋದಂತೇ ಅನಿಸುತ್ತದೆ. ಮತ್ತು ಆ ಲೋಕದಲ್ಲಿ ನೀನು ನನಗಾಗಿ ಕಾದಿರುವಂತೆಯೂ!

ಮೊನ್ಮೊನ್ನೆ ನಮ್ ಬಿ ಆರ್ ಲಕ್ಷ್ಮಣರಾವ್ ಒಂದು ಹಾಡು ಹಾಡಿದರಪ್ಪ. ಕವಿಯೇ ಸ್ವತಃ ಸೊಗಸಾಗಿ ಹಾಡುವುದು ಒಂದು ಅಪರೂಪದ್ ವಿಷ್ಯ. ಜಾಲಿಬಾರಿನಲ್ಲಿ ಬರೆದ ಅವರು “ದೇವರೇ ಅಪಾರ ನಿನ್ನ ಕರುಣೆಯ ಕಡಲು” ಅಂತಲೂ ಬರೀತಾರೆ. “ತೋಳಕೊಂದು ಕುರಿಯ ಕೊಟ್ಟೆ, ಸಿಂಹಕ್ಕೆಂದು ಜಿಂಕೆ ಇಟ್ಟೆ, ನರರಿಗೆ ನರರನ್ನೆ ಬಿಟ್ಟೆ ಬೇಟೆಯಾಡಲು” “ನರರಿಗೆಂದೆ ನಗೆಯ ಕೊಟ್ಟೆ. ನಗೆಯಲಿ ಹಲ ಬಗೆಯನಿಟ್ಟೆ, ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು” ಹೀಗೆಲ್ಲ ಬರ್ದು, ಅವರೇ ಹಾಡಿ, ನಾ ಎದುರುಕೂತು ಕೇಳಿ ಹೃದಯ ಅಯೋಮಯವಾದಾಗ ಅರೆಕ್ಷಣದ ಅಂತರವೂ ಇರದೇ ನಿನ್ನ ನೆನಪಾಗುತ್ತದೆ ನನಗೆ. ಜಯಂತ್ ಸರ್ ಬರೆದಂತೆ ನಾ ಹಾಡು ಕೇಳುವಾಗೆಲ್ಲ “ಹೃದಯವು ಹೂವಿನ ಚಪ್ಪರ, ಅದರಲಿ ನಿನ್ನದೇ ಅಬ್ಬರ”. ಪ್ರೇಮಗೀತೆ ಮಾತ್ರವಲ್ಲ, ಭಾವ, ಭಕ್ತಿ, ಫಿಲಾಸಫಿ ಯಾವ ಹಾಡು ಕೇಳಿದರೂ ನಿಂದೇ ನೆನಪು ಕಣೋ. ಹೋದವಾರ ವಿಧ್ಯಾಭೂಷಣರ ಹಾಡಿನ ಲಿಂಕು ಕಳಿಸಿದ್ದೆ ತಾನೆ ನಿನಗೆ? “ವಿಷವಿಕ್ಕಿದವಗೆ ಷಡ್ರಸವನುಣಿಸಲುಬೇಕು. ದ್ವೇಷಮಾಡಿದವನ ಪೋಷಿಸಲುಬೇಕು. ಹುಸಿಯಾಡಿಕೆಡಿಸುವನ ಹಾಡಿಹರಸಲು ಬೇಕು” ಎಂತಾ ಸಾಲು ಇದು. ಅಬ್ಬಾ! ಹೀಗೆ ನನಗೆ “ಆಹ್” ಅನಿಸಿದ ಕ್ಷಣ ನಿನ್ನ ನೆನಪಾಗುತ್ತದೆ. ಆ ಸಾಲನ್ನು ಬರೆದೋ, ಹಾಡಿನಲಿಂಕು ಕಳಿಸಿಯೋ ಕೇಳು ಕೇಳು ಅಂತ ನಿನ್ನ ಜೀವ ತಿಂತೀನಿ.

ಹಾಡು ಮಾತ್ರವಲ್ಲ, ಈ ಲೋಕದಲ್ಲಿನ ನನ್ನೆಲ್ಲ ಬೆರಗುಗಳಿಗೂ ನೀನು ನೆನಪಾಗ್ತೀ ಕಣೋ. ನನ್ನ ಎಕ್ಸೈಟ್‍ಮೆಂಟ್ನ ಹಂಚ್ಕೋಬೇಕು ಅನ್ನೋದರ ಜೊತೆಗೆ ಅಂತದ್ದೊಂದು ಬೆರಗು ನಿನ್ನದೂ ಆಗಲಿ ನೀನದನ್ನ ಕಳ್ಕೋಬಾರದು ಅನಿಸ್ತಿರ್ತದೆ. ಆದರೆ ಹುಡುಗಾ, ನನ್ನ ಬೆರಗು ನಿನ್ನದೂ ಯಾಕಾಗಬೇಕು? ಒಬ್ಬರಿಗೆ ಬೆರಗೆನಿಸಿದ್ದು ಇನ್ಯಾರಿಗೋ ನೀರಸಸಂಗತಿ ಅನಿಸಲಿಕ್ಕೂ ಸಾಕು. ಇಟ್ ಡಿಪೆಂಡ್ಸ್… ಆದರೆ ಹಾಡಿನಸಾಲುಗಳು ಖಂಡಿತಾ ನಿನಗೂ ಇಷ್ಟವಾಗಲೇಬೇಕು. ಎಷ್ಟಾದರೂ ಕನ್ನಡದ ಕಂದನೇ ತಾನೇ ನೀನು? ಸೂಕ್ಷ್ಮವೂ ಇದ್ದೀ. ಇಷ್ಟವೇನೋ ಆದೀತು. ಆದರೆ ನನಗೆ ವಾವ್ ಅನಿಸಿದ್ದು ನಿನಗೆ ಒಕೆ ಒಕೆ ಅನಿಸಲೂಬಹುದು. ಅದೆಲ್ಲಕ್ಕೂ ಮುಖ್ಯ ನಾನು ಹಾಡಿನಲ್ಲಿ ತೇಲಿಕಳೆದುಹೋಗುವಾಗ , ಇನ್ಯಾವುದೋ ವಿಷಯದಲ್ಲಿ ಕಣ್ಣೂಬಾಯಿ ಬಿಟ್ಕೊಂಡು ಅಚ್ಚರಿಗೊಳಗಾದಾಗ “ಇಲ್ನೋಡೋ, ಇದ್ ಕೇಳೋ” ಅಂತ ಕಳಿಸಿದ ಹೊತ್ತಲ್ಲಿ ನಿನ್ನ ಸಮಯ ಸಂದರ್ಭಗಳು ಅದಕ್ಕೆ ಪೂರಕವಾಗಿರಬೇಕಲ್ಲ? ಹೀಗೆ ನನಗೂ ಆದೀತು. ಆದರೆ ಕಡಿಮೆ. ಎಲ್ಲವನ್ನೂ ಒಂದು ಫೋಲ್ಡರು, ಫೈಲು ಮಾಡುತ್ತಾ ನಿಭಾಯಿಸುವವನು ನೀನು. ನನ್ನ ಪೂರಾ ಸಿಸ್ಟಮ್ಮೇ ನಿನ್ನ ಹೆಸರಲ್ಲಿದೆ! ನನ್ನ ಬೆರಗು ನಿನ್ನದಾಗಬೇಕಿಲ್ಲ ನಿಜ. ಆದರೆ ನೀನೊಮ್ಮೆ ಅದನ್ನು ನೋಡಲಿ ಅನಿಸುತ್ತದೆ. ನೀ ತಿರುಗಿನೋಡಿದಾಗೆಲ್ಲ ನನ್ನ ಬೆರಗಿನ ಖುಷಿ ದುಪ್ಪಟ್ಟಾಗುತ್ತದೆ.

ಆ ಕ್ಷಣಕ್ಕೆ ಏನು ದಕ್ಕತ್ತೋ ಅಷ್ಟೇ ಬದುಕು ಅನಿಸತ್ತೆ ಕಣೋ. ಅಲ್ಲಿ ಜೀವಿಸಿಬಿಡಬೇಕು. ಮುಂದಿನದು ದೇವರಾ ಚಿತ್ತ ಅನ್ನೋಳು ನಾನು. ಮುಂದೆಂದೋ ಆಗುವುದರತ್ತ ಬಹುತೇಕ ನಿನ್ನ ಚಿತ್ತ. ಹೊರಬದುಕಿನ ದೊಡ್ ದೊಡ್ ಸಂಗತಿಗಳಿಗೆ ಆ ನೋಟ ಬೇಕು, ಸರಿ. ಹಾಗಂತ ತೀರಾ ಸಣ್ ಸಣ್ ಖುಷಿಗಳನ್ನೂ ಯಾವತ್ತಿಗೋ ಅಂತ ಕಾದಿರಿಸಿಕೋಬೇಕಾ ಹೇಳು? ಕೆಲವೆಲ್ಲ ಐಸ್ಕ್ರೀಮಿನ ಹಾಗೆ ಕಂದಾ. ಕಾಲಕ್ಕಾಗಿ ಕಾಯುತ್ತಾ ಕೂತರೆ ಕೆಲವು ಭಾವಗಳು ಕರಗಿಯೇ ಹೋಗುತ್ತದೆ. ಅಂತದನ್ನೆಲ್ಲ ಅನಿಸಿದ ಕ್ಷಣವೇ ಹೇಳಿಬಿಡಬೇಕು. ಅದನ್ನು ಕಾಪಿಟ್ಟುಕೊಂಡು ಸಮಯಕ್ಕೆ ಕಾದು ಒಳ್ಳೆ ಪ್ಯಾಕೇಜು ಮಾಡಿ ಕೊಟ್ಟರೆ, ಒಳಗೇನೂ ಉಳಿದಿರುವುದೇ ಇಲ್ಲ! ಚಿಗುರುವ ಕಾಲಕ್ಕೆ ಸಹಜವಾಗಿ ಚಿಗುರುವುದು ಪ್ರಕೃತಿಯ ರೀತಿ. ನಮ್ಮ ಸಮಯ, ಯೋಚನೆ, ಯೋಜನೆಗಳನ್ನು ಅದರ ಮೇಲೆ ಹೇರಬಹುದಾ ಹೇಳು? ಚಿಗುರಿಗೆ ಪೋಸ್ಟ್ಪೋನ್ ಭಾಗ್ಯ ಕೊಡಲು ಹೋದರೆ ಒಣಗುವ ಕಾಲ ಬಂದಿರತ್ತೆ ಅಷ್ಟೆ. ಕೆಲವು ಸಂಗತಿಗಳಷ್ಟೇ ವೈನ್ ಹಾಗೆ. ಹಳತಾದಷ್ಟೂ ಒಳ್ಳೆಯದು. ಎಲ್ಲವೂ ಅಲ್ಲ, ಪ್ರೇಮದಲ್ಲಂತೂ ಅಲ್ಲ, ಪ್ರೇಮ ಹೂವಿನ ಹಾಗೆ, ಹಣ್ಣಿನ ಹಾಗೆ ಇಟ್ಟು ಕಾಯಲಾಗದು ಕಣೋ.

ಓಡೋಡಿ ಬಂದು ಅಪ್ಪಿಕೊಳ್ಳುವ ಕಾಲಕ್ಕೆ ನೀನು,
ಕಲ್ಲಾಗಿಯೇ ಹೋಗಿರಬಹುದು ನಾನು.
ಈಗ ಕೈಯಾದರೂ ಹಿಡಿಯಬಹುದಲ್ಲ?
ಅಲ್ಲಿ ಜಾಲಿ ಮುಳ್ಳೇನಿಲ್ಲ!

ಕಾರಣ ಬೇಕಾದ್ದಿರಲಿ, ನಾನು ಕೇಳಿದಾಗ ನೀನು ಕೊಡಿಸದ ಐಸ್ಕ್ರೀಮನ್ನು ನೀನು ಕೊಡಿಸಿದ ದಿನ ತಿಂತೀನಿ ಅನ್ಕೊಂಡಿದೀಯಾ? ನೋ…ನೆವರ್ ಮತ್ತು ನೆವರ್! ದೇಹಕ್ಕೆ ಮಾತ್ರವಲ್ಲ ಭಾವನೆಗಳಿಗೂ ಹಸಿವಾದಾಗ ಊಟ ಬೇಕಾಗ್ತದೆ. ಬಿಡುವಾದಾಗ ಅಲ್ಲ.

ನನ್ನ ಕತೆ ಒಮ್ಮೆ ಕೇಳು ಪ್ಲೀಸ್ ಅಂದಾಗೆಲ್ಲ
“ಮತ್ತೆ ಕೇಳೋಣ” ಅನ್ನುವ ನೀನು
ಒಂದೊಮ್ಮೆ
“ಹೇಳು ಏನು ನಿನ್ನ ಕತೆ” ಅಂತ ಕೇಳುತ್ತೀ
ಆದರೆ
ಆಗ ನನಗೆ ಹೇಳುವ ಮನಸಿರುವುದಿಲ್ಲ
ನಾನು ನನ್ನ ಕತೆಯನ್ನು ಮೀರಿಬಿಟ್ಟಿರುತ್ತೇನೆ.
ಕತೆ ಕಳೆದುಕೊಂಡ ನಿನ್ನದು
ಅದೃಷ್ಟವೋ ದುರದೃಷ್ಟವೋ ಹೇಗೆ ಹೇಳಲಿ? |

ಆಯ್ತು ಬಿಡು. ಇದ್ ನೋಡು, ಇದ್ ಕೇಳು, ಲವ್ ಯೂ ಅಂದಾಗೆಲ್ಲ ಸ್ವಲ್ಪವಾದರೂ ಆರ್ದ್ರವಾಗಿ ಉತ್ತರಿಸು. ಪ್ರೇಮವೆಂದರೇ ಪುಟ್ಟ ಮಗು ಕಣೋ. ರಚ್ಚೆ ಹಿಡಿಯುವುದದರ ಮೂಲಗುಣ. ಪುಟ್ಟ ಕೂಸಿಗೆ ತಂದೆ ಎಂತವನಾದರೆ ಏನು? ಹಠ ಅದರ ಹಕ್ಕು.

ಆದರೀಗ ಗೆಳೆಯಾ, ನಾನು ನಿನ್ನನ್ನು ಅರ್ಥಮಾಡಿಕೊಳ್ಳಲು ಯತ್ನಿಸುವೆ. ನಿನ್ನಿಂದ ನನಗೆ ನನ್ನಿಂದ ನಿನಗೆ ಕಡೆವರೆಗೂ ಮುಕ್ತಿ ಇಲ್ಲ ಅಂದ ಮೇಲೆ ಇನ್ನೇನ್ ತಾನೇ ಮಾಡಕಾಗತ್ತೆ ಹೇಳು? ಹೊಂದಿಕೊಳ್ಳುವುದೆಂದರೆ ಸುಲಭವೇನಲ್ಲ, ಧ್ರವ ಘನವಾದಂತೆ ಅದು. ನಿನಗಾಗಿ ನನ್ನ ಸ್ವಭಾವ ಬದಲಿಸಿಕೊಳ್ಳುವುದು ಕೂಡ ಹೊಸಹುಟ್ಟು. ಮತ್ತು ಗೊತ್ತಲ್ಲ ನಿನಗೆ? ಪ್ರತಿಹೊಸಹುಟ್ಟೂ ನೋವಿನಿಂದಲೇ ಕೂಡಿರುತ್ತದೆ. ಆದರೆ ಪರವಾಗಿಲ್ಲ. ನಾನು ತಾಳ್ಮೆ ಕಲಿಯುತ್ತೇನೆ. ನಿನ್ನೆಲ್ಲ ಹೊಣೆಗಾರಿಕೆಗಳನ್ನೂ ಮುಗಿಸಿ ಚೂರು ಬಿಡುವಾಗಲು ಬೇಕಾದಷ್ಟು ಸಮಯ ತಗೋ. ನಾನು ಹಾಡು ಕೇಳುತ್ತಾ, ಮಾಯಾಚಾಪೆಯಲಿ ಕೂತು, ಪುಟ್ ಪುಟಾಣಿ ಬೆರಗುಗಳನ್ನೆಲ್ಲ ಜಯನಗರದ ಫುಟ್ಪಾತಿನಲಿ ಬಣ್ಣ ಬಣ್ಣದ ಓಲೆ, ಸರಗಳನ್ನು ಹರಡಿಕೂತ ರಾಜಸ್ಥಾನಿ ಹುಡುಗಿಯಂತೆ ಕೂತು ನಿನಗಾಗಿ ಎಷ್ಟು ಕಾಲವಾದರೂ ಕಾದಿರುತ್ತೇನೆ. ಸಂದ್ಯಾಕಾಲದಲ್ಲಿ ಕೂತು ಮಾತಾಡೋಣ. ಅದಕ್ಕೂ ಒಂದು ಸೊಗಸಿದ್ದೀತು. ಟಿವಿಯ ಲೆವಿಸ್ಟಾ ಜಾಹೀರಾತಿನಂತೆ! ಆದರೆ ಅಷ್ಟು ಕಾಲ ಕಾಯಿಸಿದ್ದಕ್ಕೆ ರಪ್ ರಪಾಂತ ಬಾರಿಸಿ, ಆಮೇಲೇನಿದ್ದರೂ ಮಾತು, ಹಾಡು. ಮತ್ತೆಲ್ಲ.

ಆಯ್ತೇನೋ ಸಾಹೇಬ?

ಈಗೊಂದ್ ಹಾಡು ಕಳಿಸಲಾ ಬೇಡ್ವಾ? ಹ ಹ್ಹ ಹ್ಹ.

ಬೈ . ಲವ್ ಯೂ!

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 ಅಂಕಣ | ಪ್ರತಿಕ್ರಿಯೆಯಲ್ಲ, ಕ್ರಿಯೆಯಾಗು ಒಂದು ದಿನ

Exit mobile version