Site icon Vistara News

Amrit Mahotsav | ಸತಾರಾದ ರಂಗೋ ಬಾಪೂಜಿ ಗುಪ್ತೆಯ ಸಾಹಸ

Amrit Mahotsav
http://vistaranews.com/wp-content/uploads/2022/08/satara.mp3

ಹುಟ್ಟಿದ್ದು 1800ನೇ ಇಸವಿಯಲ್ಲಿ. ತಂದೆ ಕಾರಿಯ (ಭೋರ್) ನಿವಾಸಿಯಾಗಿದ್ದ ಬಾಪೂಜಿ ರಾಮಜಿಪ್ರಭು. ಸತಾರಾ ಗದ್ದುಗೆಯನ್ನು ಉಳಿಸಲು ನಿಸ್ವಾರ್ಥವಾಗಿ ಪ್ರಯತ್ನಿಸಿದ ನಾಯಕ. ಸತಾರಾದ ರಾಜ ಪ್ರತಾಪಸಿಂಹ 1847ರಲ್ಲಿ ಬನಾರಸ್‌ನಲ್ಲಿ ಕೊನೆಯುಸಿರೆಳೆದಾಗ ಆತನ ಸಹೋದರ ಶಹಾಜಿಯನ್ನು ಬ್ರಿಟಿಷರು ಪಟ್ಟಕ್ಕೇರಿಸಿದರು. ಶಹಾಜಿ ವೆಂಕೋಜಿ ಎಂಬ ದತ್ತುಪುತ್ರನನ್ನು ದತ್ತು ತೆಗೆದುಕೊಂಡಿದ್ದ. ಶಹಾಜಿ 1848ರ ಏಪ್ರಿಲ್ 5ರಂದು ನಿಧನನಾದ ಬಳಿಕ ಬ್ರಿಟಿಷ್ ಸರಕಾರ ಸತಾರಾ ಸಂಸ್ಥಾನವನ್ನು ತನ್ನ ವಶಕ್ಕೆ ಪಡೆಯಿತು.

ಪ್ರತಾಪಸಿಂಹನ ಪದಚ್ಯುತಿ ಹಾಗೂ ಗಡೀಪಾರು ವಿದ್ಯಮಾನ ಸಂಸ್ಥಾನದ ಪ್ರಜೆಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಕರಾಡ್‌ನ ದರ‍್ರಾವ್ ಪವಾರ್ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಸೆಣಸಲು ಸಿದ್ಧತೆ ನಡೆಯಿತು.
ಸತಾರಾ ಮೊಕದ್ದಮೆ ಪರ ವಾದಿಸಲು ರಂಗೋ ಬಾಪೂಜಿ ಗುಪ್ತೆಯನ್ನು ಇಂಗ್ಲೆಂಡ್‌ಗೆ ಪ್ರತಾಪಸಿಂಹ ಕಳಿಸಿದ್ದರು. ಗುಪ್ತೆ ಅಲ್ಲಿ ಬ್ರಿಟಿಷ್ ಪಾರ್ಲಿಮೆಂಟ್‌ನ ಸದಸ್ಯರು ಹಾಗೂ ಅನೇಕ ಅಧಿಕಾರಿಗಳನ್ನು ಭೇಟಿಯಾದರು. 14 ವರ್ಷ ಇಂಗ್ಲೆಂಡ್‌ನಲ್ಲಿದ್ದ ಗುಪ್ತೆ ಕೊನೆಗೆ ನಿರಾಶರಾಗಿ 1854ರಲ್ಲಿ ಮರಳಿ ಸತಾರಾಕ್ಕೆ ಬಂದರು. ಇಂಗ್ಲೆಂಡ್‌ಗೆ ತೆರಳಿದ್ದ ಅವರ ಉದ್ದೇಶ ಸಫಲವಾಗಲಿಲ್ಲ. ಗುಪ್ತೆ ಮರಳಿ ಬರುವ ವೇಳೆಗೆ ಪ್ರತಾಪಸಿಂಹ ಗಡೀಪಾರು ಆದೇಶಕ್ಕೊಳಗಾಗಿ ಬನಾರಸ್‌ನಲ್ಲಿ ನಿಧನರಾಗಿದ್ದರು.

ಸಾಂವಿಧಾನಿಕ ಪ್ರಕ್ರಿಯೆ ಮೂಲಕ ಇಂಗ್ಲೆಂಡ್‌ನಿಂದ ನ್ಯಾಯ ಪಡೆಯುವುದು ರಂಗೋ ಬಾಪೂಜಿ ಉದ್ದೇಶವಾಗಿತ್ತು. ಆದರೆ ಅದರಲ್ಲಿ ನಂಬಿಕೆ ಕಳೆದುಕೊಂಡ ಬಳಿಕ ಬ್ರಿಟಿಷರ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ಸಮರ ಹೂಡುವ ಕಲ್ಪನೆ ಗರಿಗೆದರಿತು. 1854 ಮಾರ್ಚ್ 13ರಂದು ಬಾಂಬೆಯಲ್ಲಿದ್ದಾಗ ಝಾನ್ಸಿ ಮತ್ತು ನಾಗ್ಪುರಗಳೂ ಕೈಜಾರಿ ಹೋದ ಸುದ್ದಿ ಅವರಿಗೆ ತಿಳಿಯಿತು. 1854ರಲ್ಲಿ ಸತಾರಾಕ್ಕೆ ಮರಳಿದ ಬಳಿಕ ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಜನಬಲ, ಧನಬಲ ಹಾಗೂ ಸಾಧನ ಸಲಕರಣೆಗಳ ಸಂಗ್ರಹಕ್ಕೆ ತೊಡಗಿದರು. ಸತಾರಾ, ಕೊಲ್ಹಾಪುರ, ಬೆಳಗಾಂ ಮತ್ತು ಧಾರವಾಡದಲ್ಲಿ ನೆಲೆಗೊಂಡಿದ್ದ ಬ್ರಿಟಿಷ್ ಭಾರತೀಯ ಪಡೆಗಳನ್ನು ಎತ್ತಿ ಕಟ್ಟುವ ಕಾರ‍್ಯದಲ್ಲಿ ನಿರತರಾದರು. 1854 ಜುಲೈಯಿಂದ 1855 ಡಿಸೆಂಬರ್ ತನಕ ರಂಗೋ ಬಾಪೂಜಿ ಉತ್ತರ ಭಾರತದ ವಿವಿಧ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿದರು. ಬಿತೂರ್‌ನಲ್ಲಿ ನಾನಾ ಸಾಹೇಬ ಪೇಶ್ವೆ ಮತ್ತು ತಾತ್ಯಾಟೋಪೆಯವರನ್ನು ಸಂಧಿಸಿ, ಬ್ರಿಟಿಷರ ವಿರುದ್ಧದ ಭವಿಷ್ಯದ ಹೋರಾಟದ ಕುರಿತು ಚರ್ಚಿಸಿದರು. ರಂಗೋ ಬಾಪೂಜಿಯವರ ಪ್ರಮುಖ ಸಹಾಯಕರಾಗಿದ್ದವರೆಂದರೆ: 22ನೇ ಎ.ಐ. ರೆಜಿಮೆಂಟ್‌ನ ದಫೇದಾರ್ ಕಾರ್ಖಾನಿಸ್, ಸತಾರಾ ನ್ಯಾಯಾಲಯದ ಮಾನ್‌ಸಿಂಗ್, ಕರಾಡ್‌ನ ದೌಲತಾ ಪವಾರ್, ಕೊಲ್ಹಾಪುರದ ತಾತ್ಯಾ ಫಡ್ನಿಸ್, ಭೋರ್‌ನ ಮುಖ್ಯಸ್ಥ, ರಾಮೋಶಿಗಳ ಮುಖಂಡ ಸತ್ತು ರಾಮೋಶಿ ಮತ್ತಿತರರು.

ಆತನ ಸಹಾಯಕರು ಅನೇಕ ಹಳ್ಳಿ ಹಾಗೂ ನಗರಗಳಿಗೆ ಭೇಟಿ ನೀಡಿ, ಸೈನ್ಯಕ್ಕೆ ಸೈನಿಕರನ್ನು ಭರ್ತಿ ಮಾಡಿದರು. ಸತಾರಾದಿಂದ ಆರಂಭಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ರಾಷ್ಟ್ರೀಯ ಸ್ತರದ ಹೋರಾಟ ನಡೆಸಲು ರಂಗೋ ಬಾಪೂಜಿ ಯೋಚಿಸಿದ್ದರು. ತನ್ನ ಇಬ್ಬರು ಸೋದರ ಅಳಿಯಂದಿರಾದ ಯಶವಂತರಾವ್ ದೇಶಪಾಂಡೆ ಮತ್ತು ವಾಮನರಾವ್ ದೇಶಪಾಂಡೆ ನೇತೃತ್ವದಲ್ಲಿ ಉತ್ತರ ಭಾರತಕ್ಕೆ 500 ಮಾವಳಿಗಳ ಸೈನ್ಯವೊಂದನ್ನು ರವಾನಿಸಿದರು. ಈ ಸೈನ್ಯ 1857ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಕದನದಲ್ಲಿ ಭಾಗವಹಿಸಿತ್ತು.

ಬ್ರಿಟಿಷ್ ಸರಕಾರದ ವಿರುದ್ಧ ಹೂಡಲಾದ ರಂಗೋಜಿಯವರ ಬಂಡಾಯದ ವಿಷಯ ಬಯಲಾಗುತ್ತಿದ್ದಂತೆ, 1857ರ ಜೂನ್ 11ರಂದು ಸಂಘಟನೆಯ ಅನೇಕ ನಾಯಕರನ್ನು ಬಂಧಿಸಲಾಯಿತು. ರಂಗೋ ಬಾಪೂಜಿ ಕೂಡ ಬಂಧನಕ್ಕೊಳಗಾದರು. ಮೊದಲು ಅವರನ್ನು ರತ್ನಗಿರಿ ಜೈಲಿನಲ್ಲಿಡಲಾಯಿತು. ಅನಂತರ ದೂರದ ಗ್ವಾಲಿಯರ್ ಜೈಲಿಗೆ ಸ್ಥಳಾಂತರಿಸಲಾಯಿತು. ಆದರೆ 1857ರ ಜುಲೈ 5ರಂದು ಗ್ವಾಲಿಯರ್ ಜೈಲಿನಿಂದ ತಪ್ಪಿಸಿಕೊಳ್ಳುವಲ್ಲಿ ರಂಗೋ ಬಾಪೂಜಿ ಯಶಸ್ವಿಯಾದರು.

ಸಿಟ್ಟಿಗೆದ್ದ ಬ್ರಿಟಿಷ್ ಸರ್ಕಾರ ಅವರನ್ನು ಹಿಡಿದು ಕೊಟ್ಟವರಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿತು. ಆದರೆ ಅವರು ಎಲ್ಲಿ ಅಡಗಿದ್ದಾರೆಂಬುದೇ ತಿಳಿಯಲಿಲ್ಲ. ರಂಗೋ ಬಾಪೂಜಿಯವರ ಅಂತ್ಯ ಹೇಗಾಯ್ತು ಎಂಬುದು ಇದುವರೆಗೂ ತಿಳಿದು ಬಂದಿಲ್ಲ.

ಅನೇಕ ವರ್ಷಗಳ ಬಳಿಕ, ಭಾರತದ ವಿವಿಧೆಡೆ ತಿರುಗಾಡುವ ಅಗೋಚರ ಪೂರ್ವಾಶ್ರಮದ ಹಿನ್ನೆಲೆಯಿರುವ ಸಾಧು ಸನ್ಯಾಸಿಗಳೇ 1857ರ ಸ್ವಾತಂತ್ರ್ಯ ಸಮರದ ನಾಯಕರಿರಬಹುದೆಂದು ಜನರು ಭಾವಿಸಿದ್ದುಂಟು.
ಹೀಗೆ, ವಿದರ್ಭದಲ್ಲಿದ್ದ ದರ್ವ್ಹಾದ ಸಂತ ಬೈರಾಗಿ ಬಾಬಾ ಅವರೇ 1857ರ ದಿನಗಳ ರಂಗೋ ಬಾಪೂಜಿ ಇರಬಹುದೆಂದು ಜನರು ಭಾವಿಸಿದ್ದಿದೆ. ರಂಗೋ ಬಾಪೂಜಿಯವರ, ಶಿಕ್ಷೆಗೆ ಗುರಿಯಾದ ಪುತ್ರ ಸೀತಾರಾಮ್ ಕೂಡ ತನ್ನ ತಂದೆ ಮದ್ರಾಸಿನಲ್ಲಿರುವ, ತಲ್ಲಿಶೆರಿ ಮೂಲದ ಸ್ನೇಹಿತ ಬ್ರೌನ್ ಮನೆಗೆ ಹೋಗಿರಬಹುದೆಂದು ಭಾವಿಸಿದ್ದಾರೆ. ಬ್ರೌನ್ ಈ ಕುರಿತು ಎರಡು ವರ್ಷಗಳ ಹಿಂದೆ ಪತ್ರವೊಂದನ್ನು ಬರೆದಿದ್ದಾಗಿಯೂ ಹೇಳಲಾಗಿದೆ. ಆದರೆ ಇವೆಲ್ಲವೂ ಕೇವಲ ಉಹಾಪೋಹಗಳಷ್ಟೇ.

ಉಳಿದ ಅನೇಕ ಸ್ವಾತಂತ್ರ್ಯ ಸೇನಾನಿಗಳ ವಿಷಯದಲ್ಲಾದಂತೆ ರಂಗೋ ಬಾಪೂಜಿಯವರ ಅಂತಿಮ ದಿನಗಳ ಬಗ್ಗೆಯೂ ಯಾವುದೇ ನಿಖರ ದಾಖಲೆಗಳೂ ದೊರಕದೆ ಅದೊಂದು ನಿಗೂಢ ಸಂಗತಿಯಾಗಿಯೇ ಉಳಿದಿದೆ.
ಆದರೆ ರಂಗೋ ಬಾಪೂಜಿ ನೇತೃತ್ವದಲ್ಲಿ ಹೋರಾಡಿದ ಸೀತಾರಾಂ ಗುಪ್ತೆ, ಮಾನ್‌ಸಿಂಗ್, ಕಿಸನ್‌ಲಾಲ್, ತುಳಜಾರಾಂ, ಸೀತಾರಾಂ ಪ್ರಸಾದ್, ಪಿರಾಜಿ ಅಪ್ಪ ಪವಾರ್ ಮೊದಲಾದ ನೂರಕ್ಕೂ ಹೆಚ್ಚು ಜನರಿಗೆ ಮರಣದಂಡನೆ ಶಿಕ್ಷೆ, ಬಂದೂಕಿನಿಂದ ಉಡಾಯಿಸಲಾಗುವ ಶಿಕ್ಷೆ, ಗಡೀಪಾರು ಶಿಕ್ಷೆ, ಅಂಡಮಾನ್ ಜೈಲಿನಲ್ಲಿ ಕೊಳೆಯಬೇಕಾದ ಶಿಕ್ಷೆ ಕಾದಿತ್ತು.

ಅಗಣಿತ ಮಂದಿಯನ್ನು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಪ್ರೇರೇಪಿಸುವಲ್ಲಿ ರಂಗೋ ಬಾಪೂಜಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ | Amrit Mahotsav | ಪ್ರಥಮ ಸ್ವಾತಂತ್ರ್ಯ ಸೇನಾನಿ ತಿರುನಲ್ವೇಲಿಯ ಪೂಲಿತ್ತೇವನ್

Exit mobile version