Site icon Vistara News

Amrit Mahotsav | ಆದಿವಾಸಿಗಳ ಹಕ್ಕುಗಳ ಧ್ವನಿಯಾಗಿದ್ದ ಅಲ್ಲೂರಿ ಸೀತಾರಾಮ ರಾಜು

amrit mahotsav
https://vistaranews.com/wp-content/uploads/2022/08/alluri.mp3

ಭಾರತದ ಸ್ವಾತಂತ್ರ್ಯಕ್ಕೆ ತ್ಯಾಗ, ಬಲಿದಾನ ಮಾಡಿದ ಅಸಂಖ್ಯ, ಅಗಣಿತ, ಅಜ್ಞಾತ ವೀರರು ಯಾವುದೋ ಒಂದು ವರ್ಗಕ್ಕೆ, ಒಂದು ಸಮುದಾಯಕ್ಕೆ ಸೇರಿದವರಾಗಿರಲಿಲ್ಲ. ಸಮಾಜದ ಎಲ್ಲಾ ಸಮುದಾಯಗಳ ಜನರೂ ಸ್ವಾತಂತ್ರ್ಯ ಹೋರಾಟದ ಯಜ್ಞದಲ್ಲಿ ಸಮಿಧೆಯಾಗಿ ಉರಿದರು.

ಸ್ವಾತಂತ್ರ್ಯದ ಹೋರಾಟದಲ್ಲಿ ಆದಿವಾಸಿಗಳೆಂದು ಕರೆಯಲಾಗುವ, ನಾಗರಿಕತೆಯಿಂದ ದೂರ ಉಳಿದಿರುವ ಜನರೂ ಪಾಲ್ಗೊಂಡಿದ್ದರು. ಇದಕ್ಕೆ ಉಜ್ವಲ ನಿದರ್ಶನವೆಂದರೆ ಅಲ್ಲೂರಿ ಸೀತಾರಾಮ ರಾಜು ಎಂಬ ಕ್ರಾಂತಿಕಾರಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹಾಗೂ ಆದಿವಾಸಿ ಜನರ ಹಕ್ಕುಗಳಿಗಾಗಿ ತನ್ನ ಪ್ರಾಣವನ್ನೇ ತೆತ್ತ ಹೋರಾಟಗಾರ. ಮೊದಲ ಬಾರಿಗೆ ಆದಿವಾಸಿಗಳ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದವರೇ ಅಪ್ಪಟ ದೇಶಪ್ರೇಮಿಯಾಗಿದ್ದ ಅಲ್ಲೂರಿ ಸೀತಾರಾಮರಾಜು. ಇವರನ್ನು ಜನರು ಪ್ರೀತಿ ಹಾಗೂ ಗೌರವದಿಂದ ʼಮಾನ್ಯಂ ವೀರುಡುʼ ಎಂದೇ ಕರೆಯುತ್ತಿದ್ದರು.

ಅಲ್ಲೂರಿ ಸೀತಾರಾಮ ರಾಜು ಹುಟ್ಟಿದ್ದು ೧೮೯೮ ಜುಲೈ ೪ ರಂದು, ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಭಿಮನಿಪಟ್ನಾಮ್‌ ಎಂಬಲ್ಲಿ. ಅಲ್ಲೂರಿ ಸೀತಾರಾಮ ರಾಜು ತಂದೆ ದೇಶಭಕ್ತರಾಗಿದ್ದರು. ಮಗನಿಗೆ ದೇಶಪ್ರೇಮದ ಪಾಠ ಹೇಳಿಕೊಡುತ್ತಾ ಆತನನ್ನು ಬೆಳೆಸಿದರು. ಪುಟ್ಟ ಬಾಲಕನಾಗಿದ್ದಾಗ ಸೀತಾರಾಮ ರಾಜು ಆಂಗ್ಲ ಅಧಿಕಾರಿಯೊಬ್ಬನಿಗೆ ಸೆಲ್ಯೂಟ್‌ ಹೊಡೆದಿದ್ದನ್ನು ನೋಡಿದ ತಂದೆ ಕೆಂಡಾಮಂಡಲರಾಗಿ ಮಗನಿಗೆ ಏಟುಕೊಟ್ಟು, ಇನ್ನುಮುಂದೆ ನೀನು ಯಾವತ್ತೂ ಆಂಗ್ಲರಿಗೆ ಸೆಲ್ಯೂಟ್‌ ಹಾಕಬಾರದು ಎಂದು ತಾಕೀತು ಮಾಡಿದ್ದರು. ಹೀಗೆ ಚಿಕ್ಕ ಪ್ರಾಯದಲ್ಲೆ ಬ್ರಿಟಿಷರ ವಿರುದ್ಧ ದ್ವೇ಼ಷದ ಮನೋಭಾವ ಸೀತಾರಾಮ ರಾಜು ಅವರಲ್ಲಿ ಮೂಡಿಸಲಾಗಿತ್ತು.

ಅಲ್ಲೂರಿ ಮೆಟ್ರಿಕ್‌ ಓದುತ್ತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಕಾಲೇಜು ಶಿಕ್ಷಣದ ಮೂಲಕ ದೇಶ ಪರ್ಯಟನೆಯಲ್ಲಿ ತೊಡಗಿದ್ದಾಗ ಅವರಿಗೆ ಅನೇಕ ಕ್ರಾಂತಿಕಾರಿ ನಾಯಕರ ಪರಿಚಯ ಆಯ್ತು. ಪರಿಣಾಮವಾಗಿ ತಾನೂ ಕ್ರಾಂತಿಕಾರಿಯಾಗಬೇಕೆಂಬ ಪ್ರಬಲ ಇಚ್ಛೆ ಮನದಲ್ಲಿ ಹುಟ್ಟಿತು. ತಾನು ಸನ್ಯಾಸಾಶ್ರಮ ಸ್ವೀಕರಿಸಿ ದೇಶಸೇವೆ, ಜನಸೇವೆಗಳಲ್ಲಿ ತನ್ನ ಜೀವನವನ್ನು ಸಾರ್ಥಕಗೊಳಿಸಬೇಕೆಂದು ಪ್ರತಿಜ್ಞೆ ಮಾಡಿದರು.

ಈ ದೇಶದ ಸಂಸ್ಕೃತಿ, ಪರಂಪರೆ, ಇವುಗಳ ಕುರಿತು ಮತ್ತಷ್ಟು ಅರಿಯಲು ಶ್ರೇಷ್ಠ ಗ್ರಂಥಗಳ ಅಧ್ಯಯನ ಮಾಡಿದರು. ಬಿಲ್ವಿದ್ಯೆ, ಕುದುರೆ ಸವಾರಿಗಳಲ್ಲಿ ಪರಿಣಿತರಾದರು. ಬ್ರಿಟಿಷರು ಅದೇ ವೇಳೆ ಆದಿವಾಸಿ ಬುಡಕಟ್ಟು ಜನಾಂಗದ ವಿರುದ್ಧ ಅರಣ್ಯಕಾಯ್ದೆ ಜಾರಿಗೆ ತಂದಿದ್ದರು. ಇದನ್ನು ವಿರೋಧಿಸಿ ಸೀತಾರಾಮ ರಾಜು ಕಾನೂನು ಹೋರಾಟಕ್ಕೆ ಸಿದ್ಧರಾದರು. ಆದಿವಾಸಿಗಳನ್ನು ಸಂಘಟಿಸಿ ಹೋರಾಟ ನಡೆಸಿದರು. ಇದರ ಪರಿಣಾಮವಾಗಿ ಮನ್ಯಂ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದ್ದ ಕೋಯಾ ಹಾಗೂ ಚೆಂಚು ಗುಡ್ಡಗಾಡು ಜನಾಂಗದವರಿಗೆ ಅಲ್ಲೂರಿ ಆರಾಧ್ಯ ದೈವವೇ ಆದರು. ಆ ಜನಾಂಗದಲ್ಲಿ ನರಬಲಿ ಪದ್ಧತಿ ಮುಂತಾದ ಹಲವು ಅನಿಷ್ಟ ಪದ್ಧತಿಗಳಿದ್ದವು. ಮದ್ಯಪಾನದ ದುಶ್ಚಟವೂ ಜನರನ್ನು ಆವರಿಸಿತ್ತು. ಸೀತಾರಾಮ ರಾಜು ಅವನ್ನೆಲ್ಲ ತೊಡೆದು ಹಾಕಿದರು.

ಆದಿವಾಸಿಗಳ ಮೇಲೆ ಆಂಗ್ಲರೆಸಗುತ್ತಿದ್ದ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು, ಆದಿವಾಸಿಗಳ ದೊಡ್ಡದೊಂದು ಪಡೆಯನ್ನೇ ಕಟ್ಟಿದರು. ಪೋಲೀಸ್‌ ಠಾಣೆಗಳ ಮೇಲೆ ದಾಳಿ ಮಾಡಿ, ಶಸ್ತ್ರಾಸ್ತ್ರ ವಶಪಡಿಸಿಕೊಂಡು, ಇವರ ಮೇಲೆ ದಾಳಿಗೆ ಬಂದ ಅನೇಕ ಬ್ರಿಟಿಷ್‌ ಅಧಿಕಾರಿಗಳನ್ನು ಅದೇ ಶಸ್ತ್ರಾಸ್ತ್ರಗಳಿಂದಲೇ ಕೊಂದು ಹಾಕಿದರು. ಬ್ರಿಟಿಷರ ಪಾಲಿಗೆ ಸೀತಾರಾಮ ರಾಜು ಸಿಂಹಸ್ವಪ್ನವೇ ಆಗಿದ್ದರು. ಅಲ್ಲೂರಿ ಅವರ ಹೋರಾಟದ ಫಲವಾಗಿ ಆದಿವಾಸಿಗಳು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದರು.

ಅಲ್ಲೂರಿ ಸೀತಾರಾಮ ರಾಜು ಅವರನ್ನು ಸದೆಬಡಿಯುವುದು ಬ್ರಿಟಿಷರಿಗೆ ಅಸಾಧ್ಯವಾದ ಕೆಲಸವೆಂದೇ ಅನಿಸಿತು. ಹೇಗಾದರೂ ಮೋಸದಿಂದ ಅವರನ್ನು ವಂಚಿಸಿ ಕೊಲ್ಲಬೇಕೆಂದು ಸಂಚು ಹೂಡಿದರು. ʼಯುದ್ಧ ಸಾಕು, ಸಂಧಾನಕ್ಕೆ ಬನ್ನಿ, ಮಾತಾಡೋಣʼ ಎಂದು ಆಹ್ವಾನ ನೀಡಿದರು. ಸಂಧಾನಕ್ಕೆ ಕರೆ ನೀಡಿದ ಆಂಗ್ಲರು ಅವರನ್ನು ಮೋಸದಿಂದ ಬಂಧಿಸಿದರು. ಸೀತಾರಾಮ ರಾಜು ಒಬ್ಬ ದರೋಡೆಕೋರನೆಂದು ಬಿಂಬಿಸಲು ಹೊರಟರು. ಗುಂಡು ಹಾರಿಸಿ ಅವರನ್ನು ಕೊಲ್ಲಲು ಮುಂದಾದರು. ಆಗ ಅಲ್ಲೂರಿಯವರು, ʼನೀವು ನನ್ನನ್ನು ಮೋಸದಿಂದ ಕೊಲ್ಲಬಹುದು. ಆದರೆ ಭಾರತಮಾತೆಯ ಗರ್ಭದಲ್ಲಿ ನನ್ನಂಥ ಇನ್ನೂ ಅನೇಕ ಮಕ್ಕಳು ಹುಟ್ಟುತ್ತಾರೆ. ಅವರು ನಿಮ್ಮ ಹುಟ್ಟಡಗಿಸುತ್ತಾರೆʼ ಎಂದು ಗುಡುಗಿದ್ದರು. ಅವರನ್ನು ಅತ್ಯಂತ ಅಮಾನುಷವಾಗಿ ೧೯೨೪ ಮೇ ೭ರಂದು ಆಂಗ್ಲರು ಹತ್ಯೆ ಮಾಡಿದರು.

ʼಅಲ್ಲೂರಿ ಸೀತಾರಾಮ ರಾಜು ಬೇರೆ ದೇಶದಲ್ಲಿ ಜನಿಸಿದ್ದರೆ ಅವರಿಗೆ ಇಲ್ಲಿಗಿಂತಲೂ ಹೆಚ್ಚು ಗೌರವ ದೊರಕುತ್ತಿತ್ತು.ʼ ಎಂದು ಈ ವೀರನ ಕುರಿತು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಹೇಳಿರುವ ಮಾತು ಅಲ್ಲೂರಿಯವರ ಘನ, ಧೀಮಂತ ವ್ಯಕ್ತತ್ವಕ್ಕೆ ಉಜ್ವಲ ಸಾಕ್ಷಿ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಆಂಧ್ರ ಸರ್ಕಾರ ಒಡಿಶಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ ಗಡ್)‌, ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಅಲ್ಲೂರಿ ಸೀತಾರಾಮ ರಾಜು ಅರಣ್ಯವಲಯ ಎಂದು ಘೋಷಿಸಿ ಗೌರವ ಸಲ್ಲಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆ ಸೀತಾರಾಮ ರಾಜು ಅವರ ಹೆಸರಿಟ್ಟು, ಅವರ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ. ಭಾರತ ಸರ್ಕಾರ ೧೯೯೭ರಲ್ಲಿ ಅಲ್ಲೂರಿಯವರ ಜನ್ಮದಿನದ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು.

ಇದನ್ನೂ ಓದಿ | Amrit Mahotsav | ಇಂಗ್ಲಿಷ್‌ನಲ್ಲಿ ಬ್ರಿಟಿಷರನ್ನೇ ಮೀರಿಸುತ್ತಿದ್ದ ರಣವಿಕ್ರಮ ಮುಂಡರಗಿ ಭೀಮರಾಯ

Exit mobile version