Site icon Vistara News

Amrit Mahotsav | ಸಾವಂತವಾಡಿಯಲ್ಲಿ ಸಶಸ್ತ್ರ ಬಂಡಾಯ

Vistara-Logo-Azadi-ka-amrit-Mahotsav
http://vistaranews.com/wp-content/uploads/2022/08/ಸಾವಂತವಾಡಿ.mp3

ಹಿಂದಿನ ಕಾಲದಲ್ಲಿ ಮರಾಠಾ ಸರದಾರರನ್ನು ಸಾವಂತರು ಎನ್ನಲಾಗುತ್ತಿತ್ತು. ಭಾರತದ ಪಶ್ಚಿಮ ಕರಾವಳಿ ಪ್ರದೇಶದಲ್ಲಿರುವ ಸಾವಂತವಾಡಿ ಅವರ ಅಧಿಕಾರದ ಕೇಂದ್ರವಾಗಿತ್ತು. ೧೮೧೯ ಫೆಬ್ರವರಿ ೧೭ರ ಒಪ್ಪಂದದಂತೆ ಸಾವಂತವಾಡಿಯು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತ್ತು. ೧೮೪೪ ಮತ್ತು ೧೮೪೫ರಲ್ಲಿ ಸಾವಂತವಾಡಿ ಮತ್ತು ಪಕ್ಕದ ಕೊಲ್ಹಾಪುರ ಪ್ರದೇಶಗಳು ಭಾರಿ ಬ್ರಿಟಿಷ್ ವಿರೋಧಿ ದಂಗೆಗಳಿಗೆ ಸಾಕ್ಷಿಯಾದವು. ೧೮೪೪ ನವೆಂಬರ್‌ನಲ್ಲಿ ಸಾವಂತವಾಡಿಯ ಮನೋಹರಗಡದಲ್ಲಿ ಜನರಿಂದ ದಂಗೆ ನಡೆಯಿತು. ಈ ದಂಗೆ ಮತ್ತು ಕೊಲ್ಹಾಪುರ ಗಲಭೆಗಳು ಬ್ರಿಟಿಷ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಧಾರವಾಡ ಮತ್ತು ಬೆಳಗಾಂ ಕೋಟೆಗಳನ್ನು ಬ್ರಿಟಿಷರಿಂದ ವಶಪಡಿಸಿಕೊಳ್ಳಲು ಸಂಘಟಿತ ಯೋಜನೆ ನಡೆದಿದ್ದು, ಬ್ರಿಟಿಷರ ವಿರುದ್ಧ ದೇಶದ ಆ ಭಾಗದಲ್ಲಿ ಜನರನ್ನು ಸಿಡಿದೇಳುವಂತೆ ಮಾಡಲಾಗಿತ್ತು.

೧೮೪೫ ಫೆಬ್ರವರಿಯಲ್ಲಿ ಬ್ರಿಟಿಷರ ಹಳೆಯ ವೈರಿಯಾದ ಪೊಂಡ್ ಸಾವಂತ್ ತಂಬೋಲೆಕರ್ ತನ್ನ ಎಂಟು ಮಂದಿ ಮಕ್ಕಳೊಂದಿಗೆ ಸಾವಂತವಾಡಿಯ ಉತ್ತರಾಧಿಕಾರಿಯಾಗಲಿರುವ ೧೬ರ ಹರೆಯದ ಅಣ್ಣಾಸಾಹೇಬ್ ಸರ್ದೇಸಾಯಿ ಜೊತೆಗೆ ಸೇರಿದರು. ಸಾವಂತರು ಬ್ರಿಟಿಷ್ ವಿರೋಧಿ ದಂಗೆಗಳಲ್ಲಿ ಮಂಚೂಣಿ ಪಾತ್ರ ವಹಿಸಿ ಗೋವಾದಲ್ಲಿ ಆಶ್ರಯ ಪಡೆದರು. ಗೋವಾದ ಪೋರ್ಚುಗೀಸ್ ಆಡಳಿತವು ಅಣ್ಣಾಸಾಹೇಬ್ ಮತ್ತು ಸಾವಂತರನ್ನು ಬ್ರಿಟಿಷರಿಗೆ ಒಪ್ಪಿಸಲು ನಿರಾಕರಿಸಿ, ಅವರನ್ನು ರಾಜಕೀಯ ನಿರಾಶ್ರಿತರೆಂದು ಆದರಿಸಿತು.

೧೮೫೮ರ ಫೆಬ್ರವರಿ ೨ರಂದು ರಾತ್ರಿ ರಾಷ್ಟ್ರೀಯ ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡ ಪೋಂಡ್ ಸಾವಂತನ ಪುತ್ರರು ಗೋವಾದಿಂದ ತಪ್ಪಿಸಿಕೊಂಡರು. ಬಾಬಾ ದೇಸಾಯಿ ನೇತೃತ್ವದಲ್ಲಿ ಸಾವಂತವಾಡಿಯಿಂದ ಕಾರವಾರದವರೆಗಿನ ಅರಣ್ಯ ಸರಹದ್ದಿನುದ್ದಕ್ಕೂ ದಂಗೆಯನ್ನೆಬ್ಬಿಸಿದರು. ಸತ್ತಾರಿ ಮಹಲ್‌ನ ಮುಖ್ಯಸ್ಥ ದೀಪೂಜಿ ರಾಣೆಯವರಿಂದ ಅವರಿಗೆ ಸಕ್ರಿಯ ಬೆಂಬಲ ದೊರಕಿತು. ಕಾರವಾರದ ಗಡಿಗೆ ತಾಗಿರುವ ಕುಡುಚಿ ತಾಲೂಕಿನ ಸೋಮನಕೊಪ್ಪದ ಕೆಲವು ದೇಸಾಯಿಗಳೂ ಬೆಂಬಲ ನೀಡಿದರು.

೧೮೫೮ ಫೆಬ್ರವರಿ ೬ರಂದು ತಾಳೆವಾಡಿಯಲ್ಲಿ ಸುಮಾರು ೨೦೦ ಮಂದಿ ಬ್ರಿಟಿಷ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದರು. ಅಂತೆಯೇ ಸೂಪಾದ ವಾಯುವ್ಯ ದಿಕ್ಕಿಗೆ ೩೦ ಮೈಲು ದೂರದ ಟಿನಿ ಕಣಿವೆ ಪ್ರದೇಶದಲ್ಲಿದ್ದ ಕಸ್ಟಂಹೌಸ್‌ಅನ್ನು ಸುಟ್ಟು ಹಾಕಲು ಯತ್ನಿಸಿದರು. ಫೆಬ್ರವರಿ ೮ರಂದು ವಾರ್ಕುಂಡ್ ಗ್ರಾಮದ ಮೇಲೆ ದಾಳಿ ನಡೆಸಲಾಯಿತು. ಹಾಗೂ ದುದ್ವಲ್‌ನಲ್ಲಿದ್ದ ಕಸ್ಟಂಹೌಸ್‌ಗೆ ಬೆಂಕಿಹಚ್ಚಿ ನಾಶಪಡಿಸಲಾಯಿತು.

ಸಾವಂತವಾಡಿ ಪಡೆಯ ಸಶಸ್ತ್ರ ಚಟುವಟಿಕೆಗಳು ಇನ್ನಷ್ಟು ಪ್ರಬಲವಾಗಿ ಮುಂದುವರಿಯಿತು. ಅವರೆಲ್ಲ ವಾಡಿಯ ಅರಣ್ಯಗಳ ವಿವಿಧ ಕಡೆಗಳಲ್ಲಿ ಹರಡಿಕೊಂಡಿದ್ದರು. ಬ್ರಿಟಿಷರು ಇದನ್ನೆಲ್ಲ ಗಮನಿಸುತ್ತಲೇ ಇದ್ದರು. ಸಾವಂತವಾಡಿಯ ಪಡೆಗಳ ಬಳಿ ಅಗತ್ಯದಷ್ಟು ಸಾಧನಗಳಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಭಾರತೀಯ ಪಡೆಗಳ ಬಲ ನಿಧಾನವಾಗಿ ಕುಸಿಯತೊಡಗಿತು. ಬ್ರಿಟಿಷ್ ಸೈನ್ಯ ಹನುಮಂತ ಸಾವಂತ್‌ನ ಅನೇಕ ಅನುಯಾಯಿಗಳನ್ನು ಸೆರೆ ಹಿಡಿದರು. ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಿದರು.

೧೮೫೮ರ ನವೆಂಬರ್ ೨ರಂದು ಪೋರ್ಚುಗೀಸರ ನೆರವಿನೊಂದಿಗೆ ಸಾವಂತರನ್ನು ಎದುರಿಸಲು ಬ್ರಿಗೇಡಿಯರ್ ಜನರಲ್ ಲೆಗ್ರಾಂಡ್ ಜಾಕೋಬ್ ಬಾಂಬೆಯಿಂದ ಗೋವಾಕ್ಕೆ ಹೊರಟನು. ಸಾವಂತ ‘ದಂಗೆಕೋರರು’ ತಾವಾಗಿಯೇ ಶರಣಾದಾಗ ಗೋವಾ ಸರ್ಕಾರ ಅವರನ್ನು ಸಾಗರದಾಚೆ ದೂರದಲ್ಲಿರುವ ಪೋರ್ಚುಗೀಸ್ ವಸಾಹತುಗಳಿಗೆ ಗಡೀಪಾರು ಶಿಕ್ಷೆ ವಿಧಿಸಿ ಕಳಿಸಲಾಗುವುದೆಂದು ಜಾಕೋಬ್‌ಗೆ ಭರವಸೆ ನೀಡಿತು. ನಾನಾ ಸಾವಂತ್ ಮತ್ತು ಇತರ ದಂಗೆಕೋರರನ್ನು ಮೊಝಾಂಬಿಕ್‌ನ ಪೋರ್ಚುಗೀಸ್ ವಸಾಹತುಗೆ ಸ್ಥಳಾಂತರಿಸಲು ಮೊದಲು ಪ್ರಸ್ತಾಪಿಸಲಾಯಿತು. ಆದರೆ ಅನಂತರ ಗಡೀಪಾರಿನ ಸ್ಥಳವನ್ನು ಇಂಡೋನೇಷ್ಯಾದಲ್ಲಿರುವ ಟಿಮರ್ ಎಂಬ ಪೋರ್ಚುಗೀಸ್ ವಸಾಹತುಗೆ ಬದಲಿಸಲಾಯಿತು. ೧೮೫೮ ನವೆಂಬರ್ ೨೦ರೊಳಗೆ ಶರಣಾಗಬೇಕೆಂದು ಕ್ರಾಂತಿಕಾರಿಗಳಿಗೆ ತಿಳಿಸಲಾಯಿತು.

ಇಷ್ಟು ಹೊತ್ತಿಗೆ ಸಾವಂತರು ಮತ್ತು ಅವರ ಅನುಯಾಯಿಗಳು ಪದೇ ಪದೇ ಸಂಭವಿಸಿದ ಸೋಲು, ಕೆಲವು ಸೈನಿಕರ ಪರಿತ್ಯಾಗದಿಂದ ಕುಗ್ಗಿ ಹೋಗಿ, ಕೇವಲ ೮೦ ಮಂದಿಯ ಪಡೆಗೆ ಸೀಮಿತವಾಗಿದ್ದರು. ಹಾಗಾಗಿ ೧೮೫೮ ನವೆಂಬರ್ ೨೦ರಂದು ಮಧ್ಯರಾತ್ರಿ ತಮ್ಮ ಕುಟುಂಬದ ಸದಸ್ಯರ ಸಹಿತ ಪೋರ್ಚುಗೀಸ್ ಕಮ್ಯಾಂಡರ್‌ಗೆ ಶರಣಾಗಬೇಕಾಯಿತು.

ಅನಂತರ ಬಾಂಬೆ ಸರ್ಕಾರ ಕಳುಹಿಸಿದ ‘ಪ್ರಿನ್ಸ್ ಆರ್ಥರ್’ ಎಂಬ ಉಗಿಹಡಗಿನಲ್ಲಿ ಸೆರೆಯಾಳುಗಳನ್ನು ಟಿಮರ್‌ಗೆ ಗೋವಾ ಸರ್ಕಾರವು ಗಡೀಪಾರು ಮಾಡಿತು. ಇದರೊಂದಿಗೆ ಸಾವಂತವಾಡಿ ಪ್ರದೇಶದಲ್ಲಿ ದೇಸಾಯಿಗಳಿಂದ ಭುಗಿಲೆದ್ದ ದಂಗೆ ಬಹುಪಾಲು ಅಂತ್ಯಗೊಂಡಿತು.

ಸಾಧನ ಸಲಕರಣೆಗಳ ಕೊರತೆ, ಸೂಕ್ತ ಯೋಜನೆ ಇಲ್ಲದಿದ್ದುದು, ಶತ್ರುಬಲದ ಅಂದಾಜನ್ನು ಗ್ರಹಿಸದಿದ್ದುದು – ಸಾವಂತರ ಸೋಲಿಗೆ ಕಾರಣವಾಯಿತು.

ಇದನ್ನೂ ಇದೆ | Amrit Mahotsav | ಬ್ರಿಟಿಷರ ದಾಸ್ಯ ಬಯಸದೇ ಹುತಾತ್ಮನಾದ ಸುರಪುರದ ವೀರ ಚಿಕ್ಕವೆಂಕಟಪ್ಪ ನಾಯಕ

Exit mobile version