ಗುಲಬರ್ಗಾ ಜಿಲ್ಲೆಯ ಭೀಮಾ ಮತ್ತು ಕೃಷ್ಣ ನದಿಗಳ ನಡುವಿನ ಪ್ರದೇಶವೇ ಸುರಪುರ. ಊರಿಗೆ ಮೊದಲಿದ್ದ ಹೆಸರು ಶೂರಪುರ. ಅಲ್ಲಿನ ರಾಜ ದೊಡ್ಡವೆಂಕಟಪ್ಪ ನಾಯಕ. ಶೌರ್ಯ, ಪರಾಕ್ರಮದಲ್ಲಿ ಆತನಿಗೆ ಯಾರೂ ಸರಿಸಾಟಿ ಇರಲಿಲ್ಲ. ಹೈದರಾಲಿ, ಟಿಪ್ಪುಸುಲ್ತಾನ್ ಕೂಡ ವೆಂಕಟಪ್ಪನಾಯಕನ ಗೊಡವೆಗೆ ಹೋಗಲು ಹೆದರುತ್ತಿದ್ದರು. ಆತನ ಮಗನೇ ಚಿಕ್ಕವೆಂಕಟಪ್ಪ ನಾಯಕ.
೧೮೪೧ರಲ್ಲಿ ದೊಡ್ಡವೆಂಕಟಪ್ಪ ನಾಯಕ ಕಾಲವಾದಾಗ ಚಿಕ್ಕವೆಂಕಟನಿಗೆ ಆಗಿನ್ನು ಏಳು ವರ್ಷ. ಬ್ರಿಟಿಷರು ತಮ್ಮ ಕೈವಾಡಕ್ಕೆ ಇದೇ ತಕ್ಕ ಸಮಯವೆಂದು ಭಾವಿಸಿದರು. ದೊಡ್ಡವೆಂಕಟಪ್ಪ ನಾಯಕನ ತಮ್ಮ ಪೆದ್ದನಾಯಕನೆಂಬ ಸ್ವಾರ್ಥಿಯನ್ನು ಒಳಗಿಂದೊಳಗೇ ಎತ್ತಿಗಟ್ಟಿದರು. ಇನ್ನೂ ಚಿಕ್ಕವನಾಗಿದ್ದ ರಾಜಕುಮಾರನ ಹಿತ ಚಿಂತನೆಗೆಂದು ಮೇಜರ್ ಟೇಲರ್ ಎಂಬ ಆಂಗ್ಲ ಅಧಿಕಾರಿಯನ್ನು ನೇಮಿಸಿದರು. ಹೇಗಾದರೂ ಮಾಡಿ ಸುರಪುರದ ಆಳ್ವಿಕೆಯನ್ನು ತಮ್ಮ ಕೈವಶ ಮಾಡಿಕೊಳ್ಳಬೇಕೆಂಬುದೇ ಬ್ರಿಟಿಷರ ಕುಟಿಲ ತಂತ್ರವಾಗಿತ್ತು.
ಆದರೆ ರಾಜಕುಮಾರ ಚಿಕ್ಕವೆಂಕಟನ ತಾಯಿ ಈಶ್ವರಮ್ಮ ರಾಜ್ಯಸೂತ್ರಗಳನ್ನು ಬ್ರಿಟಿಷರಿಗೆ ಬಿಟ್ಟುಕೊಡಲಿಲ್ಲ. ತನ್ನ ಮಗ ಶೂರನೂ ಸ್ವಾಭಿಮಾನಿಯೂ ಆಗುವಂತೆ ಆಸಕ್ತಿ ವಹಿಸಿದಳು. ಚಿಕ್ಕವೆಂಕಟಪ್ಪ ಪ್ರಾಪ್ತ ವಯಸ್ಕನಾಗುತ್ತಲೇ ತಾಯಿಯಿಂದ ರಾಜ್ಯಾಡಳಿತವನ್ನು ವಹಿಸಿಕೊಂಡನು. ಕಪಟಿಯೂ ಸ್ವಾರ್ಥಿಯೂ ಆಗಿದ್ದ ಪೆದ್ದನಾಯಕನನ್ನು ಮೂಲೆಗೊತ್ತಿದನು. ಟೇಲರನ ಜತೆ ಸ್ನೇಹವಿದ್ದರೂ ರಾಜ್ಯಾಡಳಿತದ ಪ್ರಶ್ನೆ ಬಂದಾಗ ತನ್ನ ಸ್ವಾತಂತ್ರ್ಯಪ್ರಿಯತೆ, ಸ್ವಾಭಿಮಾನವನ್ನು ಬಿಟ್ಟುಕೊಡುತ್ತಿರಲಿಲ್ಲ. ವಯಸ್ಸು ಚಿಕ್ಕದಾದರೂ ಹೆಚ್ಚಿನ ಸಾಹಸದಿಂದ ರಾಜ್ಯದ ಆಗುಹೋಗುಗಳನ್ನು ತನ್ನ ಹಿಡಿತದಲ್ಲಿ ತಂದುಕೊಳ್ಳತೊಡಗಿದ. ಏಕೆಂದರೆ ಎಳೆತನದಿಂದಲೂ ಆತ ತಾಯಿಯ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರ ಪರಾಕ್ರಮದ ಕಥೆಗಳನ್ನು ಕೇಳುತ್ತಲೇ ಬೆಳೆದಿದ್ದನು. ಬ್ರಿಟಿಷರು ಎಂದಿದ್ದರೂ ಪರಕೀಯರು. ಅವರನ್ನು ಒಂದಲ್ಲ ಒಂದು ದಿನ ಸಮುದ್ರದಾಚೆಗೆ ಹೊಡೆದೋಡಿಸಲೇ ಬೇಕೆಂಬುದು ಆತನಿಗೆ ಸ್ಪಷ್ಟವಾಗಿತ್ತು. ಹಾಗಾಗಿ ಆತ್ಮವಿಶ್ವಾಸದಿಂದ ತನ್ನ ಸೈನ್ಯ ಬಲ ಹೆಚ್ಚಿಸಿಕೊಂಡ. ಅವನ ನಾಯಕತ್ವದಲ್ಲಿ ೧೨,೦೦೦ ಸಂಖ್ಯೆಯ ಬೇಡರ ಪಡೆ ಸುಸಜ್ಜಿತವಾಯಿತು.
೧೮೫೩ರ ಮಾರ್ಚ್ ೧೦ರಂದು ಚಿಕ್ಕವೆಂಕಟಪ್ಪ ನಾಯಕನಿಗೆ ಕಂಪನಿ ಸರ್ಕಾರ ಪತ್ರವೊಂದನ್ನು ಕಳುಹಿಸಿತು. ಅದನ್ನು ಬರೆದವರು ಗವರ್ನರ್ ಜನರಲ್ ಡಾಲ್‌ಹೌಸಿ. ಸುರಪುರದಲ್ಲಿ ಒಬ್ಬ ಬ್ರಿಟಿಷ್ ರಾಜಕೀಯ ಸಲಹೆಗಾರನನ್ನು ನೇಮಿಸಿಕೊಳ್ಳಬೇಕು; ಆತನ ವೆಚ್ಚಕ್ಕಾಗಿ ವರ್ಷಕ್ಕೆ ೨೦ ಸಾವಿರ ರೂ. ಕೊಡಬೇಕೆಂಬುದು ಆ ಪತ್ರದ ಆದೇಶವಾಗಿತ್ತು.
ಈ ಪತ್ರ ವೆಂಕಟಪ್ಪನನ್ನು ಕೆರಳಿಸಿತು. ಉರಿಯವ ಗಾಯಕ್ಕೆ ಉಪ್ಪು ಸವರಿದಂತಾಯಿತು. ‘ನಮಗೆ ರಾಜ್ಯಾಡಳಿತ ಹೇಗೆ, ನಡೆಸಬೇಕೆಂದು ಚೆನ್ನಾಗಿ ಗೊತ್ತು. ನಿಮ್ಮ ಸಲಹೆಗಾರರ ಅಗತ್ಯ ನಮಗಿಲ್ಲ’ ಎಂದು ಮುಖಕ್ಕೆ ಹೊಡೆದಂತೆ ಪ್ರತ್ಯುತ್ತರ ನೀಡಿದ. ಡಾಲ್‌ಹೌಸಿ ಇಂಗು ತಿಂದ ಮಂಗನಂತಾದ.
ಬ್ರಿಟಿಷರು ಮಾತ್ರ ಸುಮ್ಮನಿರಲಿಲ್ಲ. ಸಣ್ಣ ಸಂಸ್ಥಾನವಾಗಿದ್ದರೂ ಸುರಪುರವನ್ನು ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳಬೇಕೆಂದು ಹುನ್ನಾರ ಹೊಸೆಯುತ್ತಲೇ ಇದ್ದರು. ವೆಂಕಟಪ್ಪನ ಸ್ವಾತಂತ್ರ್ಯದಾಹವೂ ದಿನದಿನಕ್ಕೆ ಪ್ರಜ್ವಲಿಸತೊಡಗಿತು. ಸುರಪುರದ ಸುತ್ತಮುತ್ತಲಿನ ಮುಖಂಡರನ್ನು ಕ್ರಾಂತಿಕಾರ್ಯಕ್ಕೆ ಒಂದುಗೂಡಿಸಲು ಮೊದಲು ಮಾಡಿದನು. ಈ ವೇಳೆಗೆ ಉತ್ತರದಲ್ಲಿ ಕ್ರಾಂತಿಯ ಕಿಡಿಯೆಬ್ಬಿಸಿದ್ದ ಮುಖಂಡ ನಾನಾ ಸಾಹೇಬನ ಜೊತೆ ಸಂಪರ್ಕ ಸಾಧ್ಯವಾಗಿ, ಕ್ರಾಂತಿಗೆ ಸಿದ್ಧರಾಗಿರುವಂತೆ ನಾನಾ ಸಾಹೇಬ ಪೇಶ್ವೆಯು ವೆಂಕಟಪ್ಪ ನಾಯಕ, ನರಗುಂದದ ಬಾಬಾ ಸಾಹೇಬ, ಮುಂಡರಗಿ ಭೀಮರಾವ್ ಮೊದಲಾದ ಮುಖಂಡರಿಗೆ ನಿರೂಪದ ಪ್ರತಿಗಳನ್ನು ಕಳುಹಿಸಿದನು. ಸ್ವಾತಂತ್ರ್ಯದ ಯುದ್ಧಕ್ಕೆ ಅಗತ್ಯವಾಗಿದ್ದ ಮದ್ದುಗುಂಡುಗಳನ್ನು ತಯಾರಿಸಿ, ಶೇಖರಿಸಿಡಲು ಜಂಬಗಿಯ ದೇಶಮುಖನಾದ ಬಸಲಿಂಗಪ್ಪನಿಗೆ ವೆಂಕಟಪ್ಪ ಜವಾಬ್ದಾರಿ ವಹಿಸಿದನು.
ಆದರೆ ಈ ಸುದ್ದಿ ಹೇಗೋ ಸೊಲ್ಲಾಪುರದ ಜಿಲ್ಲಾಧಿಕಾರಿಗೆ ತಿಳಿಯಿತು. ಆತ ಕೂಡಲೇ ಕ್ರಮ ಕೈಗೊಂಡು ಬಸಲಿಂಗಪ್ಪ ಹಾಗೂ ಆತನ ಮಗನನ್ನು ಬಂಧಿಸಿದ. ಮದ್ದುಗುಂಡುಗಳನ್ನು ಶೇಖರಿಸಿಟ್ಟಿದ್ದ ಕೊಟ್ನಾಲ್ ಕೋಟೆಯನ್ನು ನೆಲಸಮ ಮಾಡಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡನು. ವೆಂಕಟಪ್ಪನ ಮೊದಲ ಪ್ರಯತ್ನ ಹೀಗೆ ಮಣ್ಗೂಡಿತು.
ಆದರೆ ವೆಂಕಟಪ್ಪ ಪ್ರಯತ್ನ ಬಿಡಲಿಲ್ಲ. ಕೊಲ್ಹಾಪುರ, ಧಾರವಾಡ ಹಾಗೂ ಬೆಳಗಾವಿಯಲ್ಲಿ ಠಿಕಾಣಿ ಹೂಡಿದ್ದ, ಇಂಗ್ಲಿಷರಿಗೆ ಸೇರಿದ್ದ ದೇಶೀ ಸೈನ್ಯದ ನಡುವೆ ಅಶಾಂತಿ ಹರಡಿ ಕ್ರಾಂತಿ ಎಬ್ಬಿಸುವ, ಸೈನಿಕರಲ್ಲಿ ಸ್ವಾತಂತ್ರ್ಯದಾಹ ಕೆರಳಿಸುವ ಸಲುವಾಗಿ ತನ್ನ ಗೂಢಚಾರರನ್ನು ಬಿಡತೊಡಗಿದ. ಸೈನಿಕರನ್ನು ತನ್ನೆಡೆಗೆ ಒಲಿಸಿಕೊಳ್ಳತೊಡಗಿದ. ಬ್ರಿಟಿಷರಿಗೆ ಇದು ಗೊತ್ತಾಗಿ ಎಲ್ಲ ಕಡೆ ಮುನ್ನೆಚ್ಚರಿಕೆ ವಹಿಸತೊಡಗಿದರು. ವೆಂಕಟಪ್ಪನ ಕಡೆ ವಾಲಿದ್ದ ಒಂದಿಬ್ಬರು ಸೈನಿಕರನ್ನು ಸೆರೆಹಿಡಿದು ಗಲ್ಲಿಗೇರಿಸಿದರು. ವೆಂಕಟಪ್ಪನ ಜೊತೆ ಕೈಜೋಡಿಸಿದ್ದ ಜಮಖಂಡಿಯ ರಾಜನನ್ನು ಬಂಧಿಸಿ ಬೆಳಗಾವಿಯಲ್ಲಿಟ್ಟರು.
ಇಷ್ಟೆಲ್ಲ ನಿರಾಶೆಯ ಸುದ್ದಿಗಳು ಬಂದೆರಗುತ್ತಿದ್ದರೂ ೨೩ ವರ್ಷದ ತರುಣ ವೆಂಕಟಪ್ಪ ನಾಯಕನ ಹೃದಯ ಕುಗ್ಗಲಿಲ್ಲ. ಅಂತಿಮ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಯೋಚಿಸಿ, ಅರಬರನ್ನು ರೋಹಿಲರನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೈನ್ಯದಲ್ಲಿ ಸೇರಿಸಿಕೊಳ್ಳತೊಡಗಿದ. ಇಂಗ್ಲಿಷರ ವಿರೋಧಿಗಳೆಲ್ಲರೂ ಒಗ್ಗೂಡುವಂತೆ ಪ್ರಯತ್ನಿಸಿದ.
ರಾಜ ವೆಂಕಟಪ್ಪನ ಅಚಲ ಮನೋದಾರ್ಢ್ಯ ಮತ್ತು ಆತನ ಸುಸಜ್ಜಿತ ಸೇನಾಬಲ ಕಂಡು ಬ್ರಿಟಿಷರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು. ಸುರಪುರ ಸಂಸ್ಥಾನ ನಾಶವಾಗದಿದ್ದರೆ ದಕ್ಷಿಣ ಭಾರತದಲ್ಲಿ ತಮ್ಮ ಪ್ರಾಣ, ಸ್ಥಾನಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲವೆಂದು ಅವರಿಗೆ ಮನವರಿಕೆಯಾಯಿತು. ಆಸೆ ಆಮಿಷಗಳಿಗೆ ಜಗ್ಗುವ, ಕುಟಿಲೋಪಾಯದ ಬಲೆಗೆ ಬೀಳುವ ಆಸಾಮಿ ಈತನಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು.
ಅದು ೧೮೫೮ರ ಫೆಬ್ರವರಿ ೭. ವೆಂಕಟಪ್ಪನನ್ನು ಶತಾಯಗತಾಯ ಸದೆಬಡಿಯಲು ಬ್ರಿಟಿಷರು ಲಿಂಗಸೂರಿನ ಸೈನ್ಯವನ್ನು ಸುರಪುರದ ಪಕ್ಕದಲ್ಲಿ ತಂದು ನಿಲ್ಲಿಸಿದರು. ಅದನ್ನು ಕಂಡು ವೆಂಕಟಪ್ಪನ ಕ್ರೋಧಾಗ್ನಿ ಕೆರಳಿತು. ಅದೇ ದಿನ ಆತ ಕೋಟೆಯ ಬಾಗಿಲು ತೆಗೆದು ಶತ್ರುಗಳ ಮೇಲೆ ಆಕ್ರಮಣ ನಡೆಸಿದ. ವೈರಿಗಳನ್ನು ಹಿಮ್ಮೆಟ್ಟಿಸಿದ ನಂತರ ಕೋಟೆಗೆ ಹಿಂದಿರುಗಿ ಬಾಗಿಲ ಹಾಕಿಕೊಂಡ.
ಸುರಪುರದ ಅಭೇದ್ಯ ಕೋಟೆಯನ್ನು ವಶಪಡಿಸಿಕೊಳ್ಳಲು ಕೊನೆಗೂ ಇಂಗ್ಲೀಷರಿಗೆ ಸಾಧ್ಯವಾಗಲಿಲ್ಲ. ಆದರೆ ಇಂಗ್ಲಿಷರ ಕಂತ್ರಿ ಬುದ್ಧಿ ಎಲ್ಲಿ ಹೋದೀತು! ವೆಂಕಟಪ್ಪ ನಾಯಕನ ಆಪ್ತ ಸಲಹೆಗಾರನಾಗಿದ್ದ ವಾಗನಗೇರಿ ಭೀಮರಾಯನನ್ನು ಸಂಪರ್ಕಿಸಿ, ಆತನಿಗೆ ಆಂಗ್ಲರು ಆಸೆ ಆಮಿಷ ಒಡ್ಡಿದರು. ಭೀಮರಾಯ ಆಂಗ್ಲರೆಸೆದ ಎಂಜಲು ಕಾಸಿಗೆ ಜೊಲ್ಲು ಸುರಿಸುತ್ತಾ, ದೇಶದ್ರೋಹಿಯಾಗಿ ಕೋಟೆಯ ಬಾಗಿಲನ್ನು ತೆಗೆಸಿ, ಆಂಗ್ಲರನ್ನು ಒಳಕ್ಕೆ ಬರಮಾಡಿಕೊಂಡ. ವೆಂಕಟಪ್ಪ ಶತ್ರುಗಳಿಗೆ ವಶವಾದನೆಂಬ ಸುಳ್ಳು ಸುದ್ಧಿಯನ್ನೂ ಹರಡಿದ. ಅದನ್ನು ಕೇಳಿಸಿಕೊಂಡ ಸುರಪುರದ ಸೇನಾಸಮೂಹ ಕಂಗೆಟ್ಟು ಹತಾಶವಾಯಿತು. ಸೈನಿಕರು ಹೆದರಿ ದಿಕ್ಕು ದಿಕ್ಕಿಗೆ ಚದುರಿಹೋದರು.
ಸುದ್ಧಿ ತಿಳಿದ ವೆಂಕಟಪ್ಪ ನಾಯಕನಿಗೆ ಬರ ಸಿಡಿಲೆರಗಿದಂತಾಯ್ತು. ಇಂಗ್ಲಿಷರ ಸೈನ್ಯ ಪ್ರವಾಹದೋಪಾದಿಯಲ್ಲಿ ಕೋಟೆಯೊಳಗೆ ನುಗ್ಗಿ ಬರುತ್ತಿತ್ತು. ಕತ್ತಿ ಹಿರಿದು ಒಬ್ಬನೇ ಹೋರಾಡಿ ವೀರನಂತೆ ಮಡಿಯಲೇ? ಎಂದು ಒಂದು ಕ್ಷಣ ಯೋಚಿಸಿದ. ಆದರೆ ವಿಧರ್ಮಿ ವೈರಿಗಳನ್ನು ಇನ್ನೊಮ್ಮೆ ಸೋಲಿಸಬೇಕೆಂದು ಒಳಮನಸ್ಸು ಹೇಳಿತು. ತಪ್ಪಿಸಿಕೊಂಡು ಅಶ್ವಾರೂಢನಾಗಿ ಊರು ದಾಟಿ ಹೈದರಾಬಾದಿಗೆ ಹೊರಟನು.
ಹೈದರಾಬಾದಿನ ನಿಜಾಮ, ಮತ್ತವನ ಮಂತ್ರಿ ಸಾಲಾರ್‌ಜಂಗ್ ತನಗೆ ನೆರವು ನೀಡಬಹುದೆಂದು ಭಾವಿಸಿದ್ದ ವೆಂಕಟಪ್ಪನಿಗೆ ಆಘಾತವಾಯಿತು. ಕಪಟಕ್ಕೆ, ಸ್ವಾರ್ಥಸಾಧನೆಗೆ ಹೆಸರಾಗಿದ್ದ ಸಾಲಾರ್‌ಜಂಗ್ ಸುರಪುರದ ದೊರೆಯನ್ನು ಹಿಡಿದು ನೇರವಾಗಿ ಬ್ರಿಟಿಷರ ವಶಕ್ಕೆ ಒಪ್ಪಿಸಿಬಿಟ್ಟ. ಸಿಕಂದರಾಬಾದಿನ ಸೆರೆಮನೆಯಲ್ಲಿ ವೆಂಕಟಪ್ಪನಾಯಕ ಬಂಧಿತನಾಗಬೇಕಾಗಿ ಬಂತು.
ಅನಂತರ ವಿಚಾರಣೆಯ ನಾಟಕ ನಡೆಯಿತು. ಮೊದಲು ಸುರಪುರದಲ್ಲಿ ಸಲಹೆಗಾರನಾಗಿದ್ದ ಮೇಜರ್ ಟೇಲರ್, ವೆಂಕಟಪ್ಪ ನಾಯಕನ ಸನ್ನಡತೆ ಕುರಿತು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ, ವೆಂಕಟಪ್ಪ ನಾಯಕನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದಾಗಿ, ನೆಪ ಮಾತ್ರಕ್ಕೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಶಿಕ್ಷೆ ಮುಗಿದ ಮೇಲೆ ಸುರಪುರದ ರಾಜ್ಯವನ್ನು ಹಿಂದಿರುಗಿಸುವುದಾಗಿ ಬ್ರಿಟಿಷರು ಭರವಸೆ ನೀಡಿದ್ದರು.
ಆದರೆ ವೆಂಕಟಪ್ಪ ನಾಯಕನದು ಹಿಂದು ರಕ್ತ. ಅವನಲ್ಲಿದ್ದುದು ಕನ್ನಡದ ಕೆಚ್ಚು. ಪ್ರತಾಪಸಿಂಹ, ಶಿವಛತ್ರಪತಿ, ಸಂಗೊಳ್ಳಿ ರಾಯಣ್ಣನ ಆದರ್ಶ ಅನುಸರಿಸಿ ಬೆಳೆದ ಅಭಿಮಾನಧನನಿಗೆ ಜೀವವೊಂದು ಲೆಕ್ಕವೆ? ದಾಸ್ಯದ ಬದುಕಿಗಿಂತಲೂ, ಬ್ರಿಟಿಷರ ಹಂಗಿನ ಸೆರೆಮನೆ ವಾಸಕ್ಕಿಂತಲೂ ಸ್ವಾಭಿಮಾನದಿಂದ ಬರುವ ಸಾವು ಮುಂದಿನ ಪೀಳಿಗೆಗಳಿಗೆ ಚೈತನ್ಯ ಎರೆದೀತೆಂದು ಅವನ ಶುದ್ಧ ಅಂತಃಕರಣ ಸಾಕ್ಷಿ ನುಡಿಯಿತು. ನ್ಯಾಯಾಲಯದಿಂದ ಹೊರಬರುತ್ತಲೇ ತನ್ನ ಮೈಗಾವಲಿಗೆ ಬರುತ್ತಿದ್ದ ಆಂಗ್ಲ ಸೈನಿಕನೊಬ್ಬನ ಪಿಸ್ತೂಲಿಗೆ ಕೈಹಾಕಿ ಎಳೆದುಕೊಂಡು, ತನಗೆ ತಾನೇ ಗುಂಡಿಟ್ಟುಕೊಂಡನು. ವೆಂಕಟಪ್ಪ ನಾಯಕನೆಂಬ ಸ್ವಾತಂತ್ರ್ಯಪ್ರೇಮಿಯ ಪ್ರಾಣಪಕ್ಷಿ ಹಾರಿಹೋಯಿತು.
ಸ್ವಾತಂತ್ರ್ಯ ಸಾಧನೆಗಾಗಿ ಆತ್ಮಾಹುತಿಯ ಸಂದೇಶವನ್ನು ಆ ಸಾವು ಸಾರಿತ್ತು.
ಇದನ್ನೂ ಓದಿ | Amrit Mahotsav | ಟೆಲಿಗ್ರಾಫ್ ತಂತಿಗಳನ್ನು ತುಂಡರಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದ ಚೆಂಗಲ್‌ಪೇಟೆ ಕ್ರಾಂತಿಕಾರಿಗಳು