Site icon Vistara News

Amrit Mahotsav | ಬ್ರಿಟಿಷರ ವಿರುದ್ಧ ದಂಗೆ ಸಂಘಟಿಸಿದ್ದ ಅಪ್ಪಾಸಾಹೇಬ ಪಟವರ್ಧನ್‌

Vistara-Logo-Azadi-ka-amrit-Mahotsav
https://vistaranews.com/wp-content/uploads/2022/08/appa-saheb.mp3

1857ರ ಜೂನ್‌ ಬಳಿಕ ಜಮಖಂಡಿ ಸಂಸ್ಥಾನದ ಮುಖ್ಯಸ್ಥರಾಗಿದ್ದ ರಾಮಚಂದ್ರರಾವ್‌ ಅಲಿಯಾಸ್‌ ಅಪ್ಪಾಸಾಹೇಬ ಪಟವರ್ಧನ್‌ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಬ್ರಿಟಿಷರ ವಿರುದ್ಧ ದಂಗೆಯನ್ನು ಸಂಘಟಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಅವರು ನರಗುಂದ, ಸತಾರಾ, ಕೊಲ್ಲಾಪುರ, ಶೋರಾಪುರ, ಸಾಂಗ್ಲಿ, ಮೀರಜ್‌ ಮುಂತಾದ ಸಂಸ್ಥಾನಗಳೊಂದಿಗೆ ಸಂಪರ್ಕ ಹೊಂದಿದ್ದರು. ರಾಮದುರ್ಗದ ಕರ್ನಲ್‌ ಜಾಕೋಬ್‌ಗೆ 1858 ಮೇ 29ರಂದು ಸಿ.ಜೆ. ಮ್ಯಾನ್‌ಸನ್‌ ಬರೆದ ಪತ್ರದಲ್ಲಿ ಸಾಂಗ್ಲಿ ಮತ್ತು ಮೀರಜ್‌ಅನ್ನು ಬಲಪ್ರಯೋಗಿಸಿ ತಕ್ಷಣ ವಶಪಡಿಸಿಕೊಳ್ಳುವಂತೆ ಆಗ್ರಹಿಸಿದ್ದ. ಜಮಖಂಡಿಯ ರಾಜ ಅಪ್ಪಾಸಾಹೇಬ ಪಟವರ್ಧನ್ ರಿಗೆ ದಂಗೆಯ ವಿಷಯದಲ್ಲಿ ಸಾಥ್‌ ನೀಡಿದವರೆಂದರೆ ಜಮಖಂಡಿ ಪಡೆಗಳ ಕಮ್ಯಾಂಡೆಂಟ್‌ ಆಗಿದ್ದ ಛೋಟುಸಿಂಗ್.

ರಾಮಚಂದ್ರರಾವ್‌ ತಮ್ಮ ಕೋಟೆಗಳನ್ನು ಬಲಪಡಿಸಿಕೊಂಡರು. ಜನರು ಮತ್ತು ಸಾಧನ ಸಲಕರಣೆಗಳನ್ನು ಒಗ್ಗೂಡಿಸಿದರು. ಹಲವು ಬ್ರಿಟಿಷ್‌ ಸೈನಿಕ ಠಾಣೆಗಳಿಗೆ ಗುಪ್ತಚರರನ್ನು ಕಳಿಸಿ ಸ್ವಾತಂತ್ರ್ಯ ಸಮರದೊಂದಿಗೆ ಕೈ ಜೋಡಿಸುವಂತೆ ಸಿಪಾಯಿಗಳನ್ನು ಪ್ರಚೋದಿಸಿದರು. ರಾಮಚಂದ್ರರಾವ್‌ ಅವರ ಈ ಚಾಲಾಕಿತನದ ರಣತಂತ್ರಗಳನ್ನು ಪತ್ತೆ ಹಚ್ಚುವುದು ಬ್ರಿಟಿಷ್‌ ಸರ್ಕಾರಕ್ಕೆ ಕಷ್ಟವೆನಿಸಿತು. ಕೊನೆಗೆ 1858ರ ಮಾರ್ಚ್‌ನಲ್ಲಿ ಅಪ್ಪಾಸಾಹೇಬ್‌ ಅವರನ್ನು ಬ್ರಿಟಿಷ್‌ ಸರ್ಕಾರ ಬಂಧಿಸಿ, ಜಮಖಂಡಿಯಿಂದ ಹೊರಗೆ ಗಡೀಪಾರು ಮಾಡಿತು. ಬೆಳಗಾಂನಲ್ಲಿ ಛೋಟುಸಿಂಗ್‌ ಅವರನ್ನು ಬಂಧಿಸಿ, 1858ರ ಅಕ್ಟೋಬರ್‌ನಲ್ಲಿ ಜಮಖಂಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಆ ಮರಣದಂಡನೆ ಶಿಕ್ಷೆ ಎಷ್ಟು ಘೋರವಾಗಿತ್ತೆಂದರೆ ಹೆದರಿಸುವುದಕ್ಕಾಗಿಯೇ ಬ್ರಿಟಿಷರು ಇಂತಹ ಘೋರ ಶಿಕ್ಷೆ ವಿಧಿಸುತ್ತಿದ್ದರು.

ರಾಮಚಂದ್ರರಾವ್‌, ಅಲಿಯಾಸ್‌ ಅಪ್ಪಾಸಾಹೇಬ್‌ ಪಟವರ್ಧನ್‌ ಜನಿಸಿದ್ದು 1833ರ ನವೆಂಬರ್‌ 7ರಂದು ಜಮಖಂಡಿ ಪ್ರಾಂತದ ಮುಖ್ಯಸ್ಥರಾಗಿದ್ದ ಗೋಪಾಲ್‌ರಾವ್‌ ಅವರ ದತ್ತುಪುತ್ರ. ಇವರ ಮೂಲ ಹೆಸರು ಗಣಪತರಾವ್‌ ಎಂದಾಗಿತ್ತು. ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಅಪ್ಪಾಸಾಹೇಬರು ತನ್ನ ಪ್ರಾಂತದ ಜವಾಬ್ದಾರಿ ವಹಿಸಿಕೊಂಡರು.

1857ರ ಮಧ್ಯಭಾಗದಿಂದ ಬ್ರಿಟಿಷ್‌ ಸರ್ಕಾರಕ್ಕೆ, ಅಪ್ಪಾಸಾಹೇಬ್‌ ಸ್ವಾತಂತ್ರ್ಯ ಸಮರದ ನಾಯಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಗುಮಾನಿ ಶುರುವಾಯಿತು. ಬಿಜಾಪುರದಲ್ಲಿ ಫಿರಂಗಿಯ ಬಳಕೆಗೆ ಯೋಗ್ಯವಾಗಿರುವ ರೀತಿಯ ಹಲವು ಮಣಗಳಷ್ಟು ಹಾರುಮದ್ದನ್ನು ಅಪ್ಪಾಸಾಹೇಬ್‌ 1858ರ ಜನವರಿಯಲ್ಲಿ ತಯಾರಿಸಿದ್ದರೆಂಬುದನ್ನು ಬ್ರಿಟಿಷ್‌ ಸರ್ಕಾರ ಪತ್ತೆಹಚ್ಚಿತು. ಬ್ರಿಟಿಷರ ರಾಜಕೀಯ ಪ್ರತಿನಿಧಿ ಮ್ಯಾನ್‌ ಸನ್‌ ಅಪ್ಪಾಸಾಹೇಬರಿಗೆ ಖಡಕ್‌ ಪತ್ರ ಬರೆದು, ಮಳೆಗಾಲದಲ್ಲಿ ತನ್ನ ಕೋಟೆಯ ದುರಸ್ತಿ ಮಾಡಿದ್ದರ ಉದ್ದೇಶವೇನೆಂದು ಲಿಖಿತ ಹೇಳಿಕೆಯಲ್ಲಿ ವಿವರಿಸಬೇಕೆಂದು ಸೂಚಿಸಿದನು. ಅಪ್ಪಾಸಾಹೇಬರೂ ಅಷ್ಟೇ ಖಡಕ್‌ ಆಗಿ ಪ್ರತ್ಯುತ್ತರವನ್ನು ಬರೆದರು. ಈ ಖಡಕ್‌ ಪ್ರತ್ಯುತ್ತರದ ಆಧಾರದ ಮೇಲೆ ಅಪ್ಪಾಸಾಹೇಬರನ್ನು ತಕ್ಷಣವೇ ಬಂಧಿಸಲಾಯಿತು. ಅವರನ್ನು ಸೆರೆಯಾಳನ್ನಾಗಿ ಮಾಡಲಾಯಿತು. ಬೆಳಗಾಂಗೆ ಅವರನ್ನು ಕೈದಿಯಾಗಿ ಕಳಿಸಲಾಯಿತು.

ಆದರೆ ಅಪ್ಪಾಸಾಹೇಬರ ಮೇಲೆ ಬ್ರಿಟಿಷ್‌ ಸರ್ಕಾರಕ್ಕೆ ಎಲ್ಲಿಲ್ಲದ ಅನುಮಾನ. ಈತ ಬೆಳಗಾಂನಲ್ಲೆ ಹೆಚ್ಚು ಕಾಲವಿದ್ದರೆ ಇನ್ನಷ್ಟು ಅಪಾಯಕರ. ಈತನ ಪ್ರೇರಣೆಯಿಂದ ಇನ್ನಷ್ಟು ಕ್ರಾಂತಿಕಾರಿಗಳು ತಯಾರಾಗಬಹುದೆಂಬ ಆತಂಕದಿಂದ ಅಪ್ಪಾಸಾಹೇಬರನ್ನು ವೆನ್ ಗುರ್ಲಾಗೆ, ಅಲ್ಲಿಂದ ಮತ್ತೆ ರತ್ನಗಿರಿಗೆ ಸ್ಥಳಾಂತರಿಸಲಾಯಿತು. ಕೊನೆಗೆ 1859ರ ಜನವರಿ 7ರಂದು ಅವರನ್ನು ಬಿಡುಗಡೆಗೊಳಿಸಲಾಯಿತು. ಏಪ್ರಿಲ್‌ 17ರಂದು ಜಮಖಂಡಿಗೆ ವಾಪಸ್ಸಾದ ಅಪ್ಪಾಸಾಹೇಬರು ಆ ಪ್ರಾಂತದ ಆಡಳಿತ ಸೂತ್ರವನ್ನು ಮತ್ತೆ ಕೈಗೆತ್ತಿಕೊಂಡರು.

ಅಪ್ಪಾಸಾಹೇಬರು ಇಂಗ್ಲಿಷ್‌ ಭಾಷೆಯಲ್ಲಿ ತುಂಬಾ ಚೆನ್ನಾಗಿ ಮಾತು ಮತ್ತು ಪತ್ರ ವ್ಯವಹಾರ ಬಲ್ಲವರಾಗಿದ್ದರು. ಅವರೊಬ್ಬ ಗಮನಾರ್ಹ ಬುದ್ಧಿಮತ್ತೆ ಇರುವ ವ್ಯಕ್ತಿಯಾಗಿದ್ದರು. ತಮ್ಮ ಬುದ್ದಿವಂತಿಕೆಯ ಬಲದಿಂದಲೇ ಬ್ರಿಟಿಷರ ಗುಂಡಿಗೆಯಲ್ಲಿ ಭೀತಿಯ ಬೀಜವನ್ನು ಬಿತ್ತಿದ್ದರು. ಜಮಖಂಡಿಯ ಜನರಿಗಾಗಿ ಆ ಕಾಲದಲ್ಲೆ ಹಲವು ಶಾಲೆಗಳನ್ನು ತೆರೆದು ಎಲ್ಲರೂ ವಿದ್ಯಾವಂತರಾಗುವಂತೆ ಶ್ರಮಿಸಿದರು. ಔಷಧಾಲಯವನ್ನು ಸ್ಥಾಪಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರು. ನೀರು ಪೂರೈಕೆಗೆ ಟ್ಯಾಂಕ್‌ ನಿರ್ಮಿಸಿದರು. ಉಳುಮೆಗೆ ಉಗಿಯಂತ್ರ ಪರಿಚಯಿಸಿದರು. ಜಮಖಂಡಿ ಜನರ ಸರ್ವತೋಮುಖ ಕಲ್ಯಾಣಕ್ಕಾಗಿ ಇದೇ ಬಗೆಯ ಹಲವಾರು ಕಾರ್ಯಗಳನ್ನು ಕೈಗೊಂಡರು.

1857ರ ಸ್ವಾತಂತ್ರ್ಯ ಸಮರ ನಡೆದ 40 ವರ್ಷಗಳ ಬಳಿಕ ಅಂದರೆ 1897 ಜನವರಿ 12ರಂದು ರಾಮಚಂದ್ರರಾವ್‌ ಅಪ್ಪಾಸಾಹೇಬ ನಿಧನರಾದರು.

ಜಮಖಂಡಿಯ ಜನರು ತಂಪು ಹೊತ್ತಿನಲ್ಲಿ ನೆನಪಿಸಿಕೊಳ್ಳಬೇಕಾದ ಪ್ರಾತಃಸ್ಮರಣೀಯ ಸ್ವಾತಂತ್ರ್ಯ ಸೇನಾನಿ ರಾಮಚಂದ್ರರಾವ್ ಅಪ್ಪಾಸಾಹೇಬ್‌ ಪಟವರ್ಧನ್.

ಇದನ್ನೂ ಓದಿ | Amrit Mahotsav | ಗೋವಾದಲ್ಲಿ ಬಂಡಾಯದ ಕಹಳೆ ಮೊಳಗಿಸಿದ ದೀಪೂಜಿ ರಾಣೆ

Exit mobile version