Site icon Vistara News

Amrit Mahotsav | ಬ್ರಿಟಿಷ್ ನರಿಗಳಿಗೆ ಸಿಂಹಸ್ವಪ್ನವಾಗಿದ್ದ ವಾಸುದೇವ ಬಲವಂತ ಫಡ್ಕೆ

amrit mahotsav
https://vistaranews.com/wp-content/uploads/2022/08/padke.mp3

೧೮೫೭ರ ಸ್ವಾತಂತ್ರ್ಯ ಸಂಗ್ರಾಮ ತಣ್ಣಗಾಗಿ ಮತ್ತೆ ಬ್ರಿಟಿಷರು ಭಾರತದ ಉದ್ದಗಲಕ್ಕೂ ತಮ್ಮ ಆಡಳಿತವನ್ನು ವೃದ್ಧಿಸಿ ಭಾರತೀಯರನ್ನು ನಿರ್ವೀರ್ಯರನ್ನಾಗಿ ಮಾಡಿದ್ದ ದಿನಗಳು ಅವು. ಅಂಥ ಕಾಲಘಟ್ಟದಲ್ಲಿ ಮಹಾರಾಷ್ಟ್ರದ ಶಿರಡೋಣ್ ಎಂಬ ಗ್ರಾಮದಲ್ಲಿ ಅನಂತರಾವ್ ಫಡ್ಕೆ ಎಂಬ ವೃದ್ಧನೊಬ್ಬ ತನ್ನ ಹನ್ನೆರಡು ವರ್ಷದ ಮೊಮ್ಮಗನಿಗೆ ಸ್ವಾತಂತ್ರ್ಯ ಸಂಗ್ರಾಮದ ಸಂದೇಶವನ್ನು ರೋಚಕವಾಗಿ ವಿವರಿಸುತ್ತಿದ್ದ. ಆ ಎಳೆಯ ಮನ ನಾನಾ ಸಾಹೇಬ್, ತಾತ್ಯಾಟೋಪೆ, ಝಾನ್ಸಿ ರಾಣಿಯರ ಸ್ವಾಭಿಮಾನ, ಕೆಚ್ಚು, ಕಲಿತನಗಳ ಕಥೆ ಕೇಳಿ ರೋಮಾಂಚನವಾಯಿತು. ತಾನೂ ಯಾಕೆ ಅವರಂತೆ ದೇಶಕ್ಕಾಗಿ ಬದುಕಬಾರದೆಂಬ ಪ್ರಶ್ನೆ ಆತನಲ್ಲಿ ಹುಟ್ಟಿಕೊಂಡಿತು.

ಆ ಬಾಲಕನೇ ೧೮೫೭ರ ಅನಂತರ ಮೊದಲ ಕ್ರಾಂತಿಕಾರಿ ಎಂದು ವಿಖ್ಯಾತನಾದ ವಾಸುದೇವ ಬಲವಂತ ಫಡ್ಕೆ. ಹುಟ್ಟಿದ್ದು ಚಿತ್ಪಾವನ ಬ್ರಾಹ್ಮಣ ಪಂಗಡದಲ್ಲಿ. ಪೇಶ್ವೆಗಳ ಕಾಲದಲ್ಲಿ ಖಿಲ್ಲೇದಾರರಾಗಿ ಕೋಟೆಗಳನ್ನು ಕಾಯುವುದು ಆ ಮನೆತನದ ಕೆಲಸವಾಗಿತ್ತು. ತಂದೆ ಬಲವಂತರಾವ್ ಫಡ್ಕೆ. ತಾಯಿ ಸರಸ್ವತಿ ಬಾಯಿ. ವಾಸುದೇವ ಜನಿಸಿದ್ದು ೧೮೪೫ರ ನವೆಂಬರ್ ೪ರಂದು.

ವಿದ್ಯಾಭ್ಯಾಸ ಮುಗಿಸಿ ಪುಣೆಯಲ್ಲಿದ್ದ ಮಿಲಿಟರಿ ಅಕೌಂಟ್ಸ್ ಆಫೀಸಿನಲ್ಲಿ ೧೮೬೫ರಲ್ಲಿ ನೌಕರಿಗೆ ಸೇರಿದಾಗ ಆತನ ವಯಸ್ಸು ಇಪ್ಪತ್ತು. ಮದುವೆಯಾಗಿದ್ದರೂ ಮೊದಲ ಹೆಂಡತಿ ತೀರಿಕೊಂಡಿದ್ದರಿಂದ ಕಿರಿಯ ವಯಸ್ಸಿನ ಗೋಪಿಕಾ ಬಾಯಿಯನ್ನು ಪುನರ್ವಿವಾಹವಾಗಿದ್ದ. ಮಹಾಸ್ವಾಭಿಮಾನಿಯಾಗಿದ್ದ ವಾಸುದೇವ ನಿರಂತರ ವ್ಯಾಯಾಮ ಮಾಡಿ ಶರೀರವನ್ನು ದಷ್ಟಪುಷ್ಟವಾಗಿ ಬೆಳೆಸಿಕೊಂಡಿದ್ದ. ತಾನು ನೌಕರಿ ಮಾಡುತ್ತಿದ್ದ ಕಚೇರಿಯಲ್ಲಿ ಆಂಗ್ಲರ ದೌರ್ಜನ್ಯ ದಬ್ಬಾಳಿಕೆ ಕಂಡು ಒಳಗೊಳಗೆ ಕುದಿಯುತ್ತಿದ್ದ.

ಹೀಗಿರುವಾಗಲೇ ಶಿರಡೋಣಿನಿಂದ ತನ್ನ ತಾಯಿ ತೀವ್ರ ಅನಾರೋಗ್ಯದಲ್ಲಿರುವ ಸುದ್ಧಿ ತಲಪಿತು. ತಾಯಿಯನ್ನು ಕಾಣಲು ರಜೆಗೆ ಕೋರಿಕೆ ಸಲ್ಲಿಸಿದರೂ ಆಂಗ್ಲ ಮೇಲಧಿಕಾರಿ ರಜೆ ನಿರಾಕರಿಸಿದ. ಈ ಘಟನೆ ವಾಸುದೇವನ ಮನದಲ್ಲಿ ಆಂಗ್ಲರ ವಿರುದ್ಧದ ದ್ವೇಷ ಸ್ಫೋಟಗೊಳ್ಳುವಂತೆ ಮಾಡಿತು. ರಜೆ ಚೀಟಿಯನ್ನು ಅಧಿಕಾರಿಯ ಮೇಜಿನ ಮೇಲೆಸೆದು ಸೀದಾ ಶಿರಡೋಣಕ್ಕೆ ಧಾವಿಸಿದ. ಆದರೆ ಅಷ್ಟರೊಳಗೆ ತಾಯಿ ತೀರಿಕೊಂಡು, ಅವರ ಅಂತ್ಯಕ್ರಿಯೆಯೂ ನಡೆದುಹೋಗಿತ್ತು.

ಮತ್ತೆ ಕೆಲಸಕ್ಕೆ ಹಿಂದಿರುಗಿದರೂ ಪರಕೀಯ ಆಂಗ್ಲರ ದೌರ್ಜನ್ಯದ ವಿರುದ್ಧ ಜನರನ್ನು ಬಡಿದೆಬ್ಬಿಸುವ ಕಾರ್ಯದಲ್ಲಿ ನಿರತನಾದ. ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆಯವರ ಪ್ರಖರ ಭಾಷಣಗಳು ವಾಸುದೇವನನ್ನು ಉತ್ಸ್ಫೂರ್ತಗೊಳಿಸಿದವು. ಕೆಲಸದ ಜೊತೆಗೆ ಓಡಾಟ, ಜನಸಂಪರ್ಕ, ಯುವಕರಿಗೆ ವ್ಯಾಯಾಮ ಮತ್ತು ಪ್ರತಿಜ್ಞೆ ನೀಡುವ ಕಾರ್ಯದಲ್ಲಿ ತೊಡಗಿದ.

ಪುಣೆಯಲ್ಲಿ ಸುಶಿಕ್ಷಿತ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅವರ ಬದ್ಧತೆಯ ಬಗ್ಗೆ ವಾಸುದೇವನಿಗೆ ವಿಶ್ವಾಸವಿರಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡ ಬೇಕಾದರೆ ಇಂಥವರನ್ನು ಕಟ್ಟಿಕೊಂಡು ಪ್ರಯೋಜನವಿಲ್ಲವೆನಿಸಿತು. ಆತ ರಾಮೋಶಿ ಎಂಬ ಗುಡ್ಡಗಾಡು ವನವಾಸಿ ಜನರನ್ನು ಸಂಪರ್ಕಿಸಿದ. ಅವರು ವಾಸಿಸುತ್ತಿದ್ದ ಪ್ರದೇಶಗಳಿಗೆ ತೆರಳಿ ಅವರೊಡನೆ ಕಲೆತು ಅವರ ವಿಶ್ವಾಸ ಸಂಪಾದಿಸಿದ. ದೇಶಕ್ಕೆ ಬಂದೆರಗಿದ ವಿಪತ್ತನ್ನು ದೂರಗೊಳಿಸಲು ಹೋರಾಟ ನಡೆಸಬೇಕೆಂಬ ವಾಸುದೇವನ ಮಾತಿಗೆ ರಾಮೋಶಿಗಳು ತಲೆದೂಗಿದರು. ಆತನನ್ನು ತಮ್ಮ ನಾಯಕನನ್ನಾಗಿ ಪರಿಗಣಿಸಿ, ‘ಮಹಾರಾಜ್’ ಎಂದು ಕರೆದರು.

ಪುಣೆಯ ನಾಗರಿಕರಿಗೆ ಕ್ರಾಂತಿ ಮತ್ತು ಸ್ವರಾಜ್ಯ ಸ್ಥಾಪನೆಯ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಸಲು ಸ್ವತಃ ಕೈಯಲ್ಲಿ ತಮಟೆ ಹಿಡಿದುಕೊಂಡು ಪುಣೆಯ ಬೀದಿಬೀದಿಗಳಲ್ಲಿ ಸಂಚರಿಸಿದ. ‘ಇಂಗ್ಲಿಷರನ್ನು ಒದ್ದೋಡಿಸಿ ಸ್ವರಾಜ್ಯ ಗಳಿಸುವುದು ಹೇಗೆಂಬುದನ್ನು ತಿಳಿಸುತ್ತೇನೆ. ಬನ್ನಿ’ ಎಂದು ಘೋಷಿಸಿದ. ಬ್ರಿಟಿಷರೆಂದರೆ ಗಡಗಡನೆ ನಡುಗುವ ಜನರಿಗೆ ವಾಸುದೇವನ ಈ ಧೈರ್ಯ ಕಂಡು ಆಶ್ಚರ್ಯವಾಯಿತು. ಅದೇ ವೇಳೆ ಭೀಕರ ಬರಗಾಲ ಬಂದು ಜನರ ಸ್ಥಿತಿ ಶೋಚನೀಯವಾಯಿತು. ಜನರಿಗೆ ಔಷಧಿ, ಆಹಾರಗಳ ನೆರವು ನೀಡುವ ನೆಪದಲ್ಲಿ ಕ್ರಿಶ್ಚಿಯನ್ನರು ಬಡ ಹಿಂದು ಜನರ ಮತಾಂತರವನ್ನು ಎಗ್ಗಿಲ್ಲದೆ ಮಾಡುತ್ತಿದ್ದರು. ಇನ್ನೊಂದೆಡೆ ಆಹಾರ, ನೀರಿಲ್ಲದೆ ಜನರು ಬೀದಿಯ ಹೆಣಗಳಾಗುತ್ತಿದ್ದರು. ಇಂಗ್ಲಿಷ್ ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿತ್ತು. ಈ ವಿದ್ಯಮಾನ ವಾಸುದೇವನನ್ನು ಬಡಿದೆಬ್ಬಿಸಿತು. ಇನ್ನು ಸುಮ್ಮನಿರುವುದು ಸರಿಯಲ್ಲ ಎನಿಸಿತು. ಹೆಂಡತಿ ಮತ್ತು ಪುಟ್ಟ ಮಗಳನ್ನು ತೊರೆದು ರಾತ್ರೋರಾತ್ರಿ ಮನೆ ಬಿಟ್ಟು ಹೊರಟ. ಬ್ರಿಟಿಷರ ವಿರುದ್ಧ ರಾಮೋಶಿಗಳ ಪಡೆಕಟ್ಟಿ ಕ್ರಾಂತಿಕಾರ್ಯಕ್ಕೆ ನಾಂದಿ ಹಾಡಿದ. ಆದರೆ ಹೋರಾಟಕ್ಕೆ ಹಣ ಬೇಕಲ್ಲ. ಅದಕ್ಕಾಗಿ ಬ್ರಿಟಿಷರ ಬಾಲಬಡುಕ ಸಾಹುಕಾರರನ್ನು ಲೂಟಿ ಮಾಡಲು ನಿರ್ಧರಿಸಿದ. ಸಾಹುಕಾರರಿಂದ ಹಣ ಕಸಿದುಕೊಂಡು, ಅವರಿಗೆ ಪ್ರಾಮಿಸರಿ ನೋಟ್ ಬರೆದು ಕೊಟ್ಟ. ‘ಸ್ವರಾಜ್ಯ ಬಂದ ಮೇಲೆ ನಿಮ್ಮ ಹಣ ಹಿಂದಿರುಗಿಸುವೆ’ ಎಂದು ಭರವಸೆ ನೀಡಿದ.

ಕ್ರಾಂತಿಯ ದೀಕ್ಷೆ ತೊಟ್ಟ ವಾಸುದೇವನಿಗೆ ವನವಾಸಿಯ ಗುಡಿಸಲುಗಳೇ ಮನೆಗಳಾದವು. ಕುದುರೆ ಹತ್ತಿ ಎಲ್ಲೆಡೆ ಸಂಚರಿಸಿ ಬ್ರಿಟಿಷ್ ಅಧಿಕಾರಿಗಳ ಗುಂಡಿಗೆ ಗಡಗಡ ನಡುಗುವಂತೆ ಮಾಡಿದ. ಬ್ರಿಟಿಷರಿಗೆ ಬೇರೆ ದಾರಿಯೇ ಕಾಣದೆ ಆತನ ತಲೆಗೆ ನಾಲ್ಕು ಸಾವಿರ ರೂ.ಗಳ ಬಹುಮಾನ ಘೋಷಿಸಿದ ಭಿತ್ತಿಚಿತ್ರಗಳನ್ನು ಎಲ್ಲೆಡೆ ಅಂಟಿಸಿದರು. ಇದಕ್ಕೆ ಪ್ರತಿಯಾಗಿ ವಾಸುದೇವನೂ ಆಂಗ್ಲ ಗವರ್ನರ್ ಮತ್ತು ಕಲೆಕ್ಟರ್ ತಲೆಗಳನ್ನು ತಂದುಕೊಟ್ಟವರಿಗೆ ತಾನು ದುಪ್ಪಟ್ಟು ಬಹುಮಾನ ನೀಡುವುದಾಗಿ ಪ್ರತಿಘೋಷಣೆ ಹೊರಡಿಸಿದ. ಗವರ್ನರ್ ರಿಚರ್ಡ್ ಟೆಂಪಲ್‌ನಂತೂ ಹೆದರಿಹೋದ. ಫಡ್ಕೆ ಎಂಬ ಹೆಸರು ಬ್ರಿಟಿಷರ ನಿದ್ದೆಗೆಡಿಸಿತು. ಪುಣೆಯ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಮೇಜರ್ ಹೆನ್ರಿ ವಿಲಿಯಂ ಡೇನಿಯಲ್ ಫಡ್ಕೆಯ ಬೇಟೆಗೆ ಹೊರಟ.

ವಾಸುದೇವ ಫಡ್ಕೆ ಭೂಗತನಾಗಿ ಹಳ್ಳಿಯಿಂದ ಹಳ್ಳಿಗೆ ಸಂಚರಿಸಿದ. ತನ್ನ ಬಲಗೈ ಬಂಟ ದೌಲತ್‌ರಾವ್‌ನನ್ನು ರಕ್ಷಣೆಗೆ ನೇಮಿಸಿಕೊಂಡ. ಆದರೆ ದೌಲತ್‌ರಾವ್‌ನನ್ನು ಡೇನಿಯಲ್ ಠಿಸುಬಾಯ್ ಬೆಟ್ಟದ ಮೇಲೆ ನಡೆದ ಹಣಾಹಣಿಯಲ್ಲಿ ಕೊಂದುಹಾಕಿದ.

ಇತ್ತ ವಾಸುದೇವ ಬ್ರಿಟಿಷರ ಕಣ್ತಪ್ಪಿಸಿ ತನ್ನ ಕಾರ‍್ಯಕ್ಷೇತ್ರವನ್ನು ಮಹಾರಾಷ್ಟ್ರದಿಂದ ಹೈದರಾಬಾದ್‌ನ ನಿಜಾಂಷಾಹಿ ಪ್ರದೇಶಕ್ಕೆ ಸ್ಥಳಾಂತರಿಸಿದ. ಅಲ್ಲಿ ಪ್ರಭಾವಿ ವ್ಯಕ್ತಿ ಮೌಲ್ವಿ ಮಹಮದ್ ಸಾಹೇಬನ ನೆರವು ಪಡೆದು ಹೋರಾಟವನ್ನು ಮುಂದುವರೆಸಿದ. ಆದರೆ ಡೇನಿಯಲ್ ಬಿಡಲಿಲ್ಲ. ವಾಸುದೇವನ ಬೆನ್ನತ್ತಿ ಎಲ್ಲೆಡೆ ಆತನ ಶೋಧಕಾರ್ಯ ಮುಂದುವರಿಸಿದ. ಗಾಣಗಾಪುರದಲ್ಲಿದ್ದಾಗ ರಂಗೋಪಂತ ಎಂಬ ದ್ರೋಹಿ ವಾಸುದೇವನ ಬಗ್ಗೆ ಡೇನಿಯಲ್‌ಗೆ ಮಾಹಿತಿ ಒದಗಿಸಿದ. ಆಗ ವಾಸುದೇವ ಬಲವಂತ ಫಡ್ಕೆಗೆ ತೀವ್ರ ಜ್ವರ. ಜೊತೆಗೆ ಭೀಮಾನದಿಯಲ್ಲಿ ಭಯಂಕರ ಪ್ರವಾಹ. ಆದರೆ ಬೆನ್ನಟ್ಟುತ್ತಿದ್ದ ಪೊಲೀಸರಿಂದ ಪಾರಾಗಲು ಆ ರಣಜ್ವರದಲ್ಲೂ ವಾಸುದೇವ ಭೀಕರ ಪ್ರವಾಹವಿದ್ದ ಭೀಮಾ ನದಿಗೆ ಹಾರಿ ಈಜಿ ಎದುರು ದಡದಲ್ಲಿದ್ದ ದೇವರ ನಾವದಗಿ ಊರನ್ನು ತಲಪಿದ. ಯಾತ್ರಾರ್ಥಿಗಳ ಗುಂಪಿನಲ್ಲಿ ಒಂದು ಕಡೆ ಮಲಗಿಕೊಂಡ.

ಪುಣೆಯಿಂದ ಒಂದೇ ವೇಗದಲ್ಲಿ ವಾಸುದೇವನ ಬೆನ್ನಟ್ಟಿ ಬಂದ ಡೇನಿಯಲ್ ನಡುರಾತ್ರಿ ನಿದ್ದೆಯಲ್ಲಿದ್ದ ವಾಸುದೇವನ ಎದೆಯ ಮೇಲೆ ಕುಳಿತು, ‘ಯು ಆರ್ ಅಂಡರ್ ಅರೆಸ್ಟ್’ ಎಂದು ಕಿರುಚಿದ. ತತ್‌ಕ್ಷಣ ಎಚ್ಚರಗೊಂಡ ವಾಸುದೇವನಿಗೆ ಪರಿಸ್ಥಿತಿ ಕೈಮೀರಿ ಹೋಗಿದೆ ಎನಿಸಿತು. ಆದರೂ ‘ನೀನು ಗಂಡಸಾಗಿದ್ದರೆ ನನ್ನೊಂದಿಗೆ ಯುದ್ಧಕ್ಕೆ ಬಂದು ಹೋರಾಡಿ ಗೆಲ್ಲು’ ಎಂದು ಸವಾಲೆಸೆದ. ಈ ಸಿಂಹದೊಡನೆ ಕಾದಾಡುವ ಧೈರ್ಯ ಆ ನರಿಗೆ ಎಲ್ಲಿಂದ ಬರಬೇಕು!

ಪುಣೆಗೆ ವಾಸುದೇವನನ್ನು ಬಂಧಿಸಿ ಕರೆತಂದು, ವಿಚಾರಣೆಯ ನಾಟಕ ನಡೆಸಿದ ಬಳಿಕ, ನ್ಯಾಯಾಧೀಶ ನ್ಯೂನ್‌ಹ್ಯಾಂ ಜೀವಾವಧಿ ಶಿಕ್ಷೆ ಘೋಷಿಸಿದ. ಆತನನ್ನು ದೂರದ ಸಾಗರದಾಚೆಯ ಅರೇಬಿಯಾದ ಏಡನ್ ನಗರದ ಸೆರೆಮನೆಗೆ ಕಳಿಸಲಾಯಿತು. ವಾಸುದೇವ ಹೊರಡುವಾಗ ತನ್ನ ಉತ್ತರೀಯದಲ್ಲಿ ತಾಯಿನಾಡಿನ ಒಂದು ಹಿಡಿ ಪವಿತ್ರ ಮಣ್ಣನ್ನು ಕಟ್ಟಿಕೊಂಡು ಜೊತೆಗೊಯ್ದ.

ಏಡನ್ ಜೈಲಿನಲ್ಲಿದ್ದಾಗ ಒಮ್ಮೆ ಜೈಲಿನ ಬಾಗಿಲು ಮುರಿದು, ಜೈಲು ಗೋಡೆ ಹಾರಿ ಅರೇಬಿಯಾ ಮರುಭೂಮಿಯಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ಮರಳಿ ಭಾರತಕ್ಕೆ ತೆರಳಿ ಹೋರಾಟ ಮುಂದುವರಿಸುವ ಅಸೀಮ ವಾಂಛೆ ಅವನದಾಗಿತ್ತು. ಆದರೆ ಅರಬ್ಬರ ಹಾಗೂ ಪೊಲೀಸರ ಕಪಿಮುಷ್ಟಿಯಿಂದ ಪಾರಾಗಲು ಸಾಧ್ಯವಾಗಲಿಲ್ಲ. ಕ್ಷಯರೋಗಕ್ಕೆ ತುತ್ತಾಗಿ ೧೮೮೩ ಫೆಬ್ರವರಿ ೧೭ರಂದು ಕೊನೆಯುಸಿರೆಳೆದ. ವಾಸುದೇವನ ಕಳೇಬರದ ಬಲಗೈ ಬಿಡಿಸಿದಾಗ ಅಲ್ಲಿದ್ದದ್ದು ಭಾರತದಿಂದ ಕಟ್ಟಿಕೊಂಡು ಬಂದಿದ್ದ ತಾಯಿನಾಡಿನ ಪವಿತ್ರ ಮಣ್ಣು!

“ನಾವು ಬೆಳಕಿಗಾಗಿ ಹುಡುಕಾಡುವ ಸಂದರ್ಭ ಬಂದಾಗಲೆಲ್ಲ ನಿನ್ನ ಜ್ವಾಲೆಯ ಅಗ್ನಿಕಣವೊಂದು ನಮ್ಮ ಹೃದಯಗಳನ್ನು ಬೆಳಗುತ್ತದೆ. ನಮಗೆ ದಾರಿದೀಪವಾಗುತ್ತದೆ” – ಇದು ಸಾವರ್ಕರ್ ೧೯೪೩ರ ಫೆಬ್ರವರಿ ೧ರಂದು ವಾಸುದೇವ ಫಡ್ಕೆಯ ಸ್ಮಾರಕ ಸ್ತಂಭದ ಮುಂದೆ ನಿಂತು ತಲೆಬಾಗಿ ಹೇಳಿದ ಮಾತುಗಳು.

ಇದನ್ನೂ ಓದಿ | Amrit Mahotsav | ಆದಿವಾಸಿಗಳ ಹಕ್ಕುಗಳ ಧ್ವನಿಯಾಗಿದ್ದ ಅಲ್ಲೂರಿ ಸೀತಾರಾಮ ರಾಜು

Exit mobile version