Site icon Vistara News

Amrit Mahotsav | ಮುಳುಬಾಗಿಲು ಸ್ವಾಮಿ ಎಂಬ ಕ್ರಾಂತಿಕಾರಿ

Vistara-Logo-Azadi-ka-amrit-Mahotsav
https://vistaranews.com/wp-content/uploads/2022/08/mulabagilu-1.mp3

ಸ್ವಾತಂತ್ರ್ಯ ಸಮರದ ಆರಂಭದಿಂದಲೂ ಬ್ರಿಟಿಷರ ವಿರುದ್ಧ ಕೊಯಮತ್ತೂರು ಪ್ರದೇಶದಲ್ಲಿ ಜನರನ್ನು ಸಂಘಟಿಸಲು ಕ್ರಾಂತಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು. ಕೊಯಮತ್ತೂರು ಬಳಿ ಇರುವ ಭವಾನಿ ಎಂಬ ಕೈಗಾರಿಕಾ ನಗರದಲ್ಲಿ ಮದ್ದಾಂ(ಆರಾಧನಾ ಸ್ಥಳ)ನ ಮುಖ್ಯಸ್ಥರಾಗಿದ್ದ ಮುಳುಬಾಗಿಲು ಸ್ವಾಮಿ ಎಂಬ ಸನ್ಯಾಸಿ ಬ್ರಿಟಿಷರ ವಿರುದ್ಧ ಜನರನ್ನು ಪ್ರಚೋದಿಸಿ ಸಂಘಟನೆಯಲ್ಲಿ ತೊಡಗಿದ್ದರು. ತನ್ನ ಅನುಯಾಯಿಗಳಿಂದ ‘ಗುರು’ ಎಂದು ಕರೆಸಿಕೊಳ್ಳುತ್ತಿದ್ದ ಸ್ವಾಮಿ ಸೇಲಂನಲ್ಲಿ ಇನ್ನೊಂದು ಮದ್ದಾಂ ಹೊಂದಿದ್ದರು. ಈ ಸ್ವಾಮಿಯ ಬಗ್ಗೆ ಬಹುತೇಕ ಜನರಿಗೆ ಅಪಾರ ಗೌರವ ಹಾಗೂ ಪೂಜ್ಯ ಭಾವನೆ ಇತ್ತು. ಆತನ ಅನುಯಾಯಿಗಳಲ್ಲಿ ಹೆಚ್ಚಿನವರು ಕನ್ನಡಿಗರಾಗಿದ್ದರು. ಏಕೆಂದರೆ ಮುಳುಬಾಗಿಲು ಕರ್ನಾಟಕದ ಒಂದು ಪ್ರದೇಶವಾಗಿತ್ತು.

ಭವಾನಿಯಲ್ಲಿರುವ ಮದ್ದಾಂನಲ್ಲಿ ಮುಳುಬಾಗಿಲು ಸ್ವಾಮಿ ದೇಶಭಕ್ತಿಯ ಕುರಿತು ಉಪದೇಶ ಮಾಡುತ್ತಿದ್ದರು.

1857ರ ಮೇ ತಿಂಗಳಲ್ಲಿ ಉತ್ತರ ಭಾರತದಲ್ಲಿ ಸ್ವಾತಂತ್ರ್ಯ ಸಮರ ಪ್ರಾರಂಭವಾದ ಬಳಿಕ, ಅವರು ಪರಕೀಯ ಬ್ರಿಟಿಷ್ ಆಡಳಿತವನ್ನು ಕೊನೆಗಾಣಿಸಬೇಕೆಂದು ಕರೆ ನೀಡಿದರು. ಪ್ರತಿದಿನದ ತನ್ನ ಪೂಜೆಯ ವೇಳೆ, ಸ್ವಾಮೀಜಿ ಲೋಭಾನ ಉರಿಸುತ್ತಾ ‘ಎಲ್ಲಾ ರಕ್ಕಸ ಸಮಾನ ಯುರೋಪಿಯನ್ನರು ನಾಶವಾಗಲಿ’, ‘ಬ್ರಿಟಿಷರ ಆಡಳಿತ ಅಂತ್ಯವಾಗಲಿ’ ಹಾಗೂ ‘ನಾನಾ ಸಾಹೇಬ ಪೇಶ್ವೆಯವರ ಆಡಳಿತ ಜಾರಿಯಾಗಲಿ’ ಎಂದು ಘೋಷಣೆಗಳನ್ನು ಮಂತ್ರದೊಂದಿಗೆ ಪಠಿಸುತ್ತಿದ್ದರು.

ಮುಳುಬಾಗಿಲು ಸ್ವಾಮಿಯವರ ಉಪದೇಶ, ಪ್ರಚೋದನೆ ಭವಾನಿ ನಗರದ ನಿವಾಸಿಗಳನ್ನಲ್ಲದೆ ಹೊರಗಿನವರನ್ನು ಬಡಿದೆಬ್ಬಿಸಿತು. ಜನರು ತಮ್ಮೊಳಗೆ ಮಾತಾಡಿಕೊಳ್ಳುತ್ತಾ ‘ಅನೇಕ ಯುರೋಪಿಯನ್ನರನ್ನು ಬಂಗಾಳದಲ್ಲಿ ಕೊಲ್ಲಲಾಗಿದೆ. ಹಲವರು ಹೆದರಿ ಪರಾರಿಯಾಗಿದ್ದಾರೆ’, ಎಂದು ಹೇಳತೊಡಗಿದರು. ಇಂಗ್ಲಿಷರ ಆಳ್ವಿಕೆಗೆ ಕೊನೆಗಾಲ ಬಂದಿದೆ. ಈರೋಡ್ ರೈಲ್ವೇ ಜಂಕ್ಷನ್‌ನಲ್ಲಿದ್ದ ಯುರೋಪಿಯನ್ ರೈಲ್ವೇ ಅಧಿಕಾರಿ ಪಲಾಯನ ಮಾಡಿದ್ದಾರೆ ಎಂದೂ ಜನರು ಮಾತನಾಡತೊಡಗಿದರು. ಉಳಿದ ಯುರೋಪಿಯನ್ನರೂ ಇದೇ ರೀತಿ ಭಾರತವನ್ನು ಬಿಟ್ಟು ತೊಲಗಬೇಕೆಂದು ಹೇಳತೊಡಗಿದರು.

ಹೀಗೆ ಕೊಯಮತ್ತೂರು ಪ್ರದೇಶದಲ್ಲಿ ಜನಮಾನಸದಲ್ಲಿ ಬ್ರಿಟಿಷರ ವಿರುದ್ಧ ಉದ್ರಿಕ್ತ ಭಾವನೆ ನೆಲೆಸಿತ್ತು. ಅದು ಸ್ವಾತಂತ್ರ್ಯ ಸಮರಕ್ಕೆ ಪೂರಕ ಹಾಗೂ ಬ್ರಿಟಿಷರ ರಾಜ್ಯಾಡಳಿತದ ಮುಂದುವರಿಕೆಗೆ ಮಾರಕವಾಗಿತ್ತು. ಕೊಯಮತ್ತೂರಿನಲ್ಲಿ ಸರ್ಕಾರಿ ಇಂಜಿನಿಯರ್ ಟಿ. ರೀಡ್‌ಗೆ ಬರವಣಿಗೆಗೆ ಸಹಾಯಕನಾಗಿದ್ದವನು ವ್ಯಾಸರಾವ್ ಎಂಬುವನು. ಆತನೊಬ್ಬ ಬ್ರಿಟಿಷರ ಚೇಲಾ ಆಗಿದ್ದ.

ಮುಳುಬಾಗಿಲು ಸ್ವಾಮಿ ಮದ್ದಾಂನಲ್ಲಿ ಸ್ವಾತಂತ್ರ್ಯ ಸಮರದ ಕುರಿತು ಮಾಡುತ್ತಿದ್ದ ಉಪದೇಶ ಹಾಗೂ ಜನರ ಮನದಲ್ಲಿ ಹುದುಗಿರುವ ಬ್ರಿಟಿಷ್ ವಿರೋಧಿ ಧೋರಣೆಗಳು ಮತ್ತು ಅವರೇನು ಮಾತಾಡುತ್ತಿದ್ದಾರೆ ಎಂಬುದನ್ನು ರಹಸ್ಯವಾಗಿ ಬ್ರಿಟಿಷ್ ಆಡಳಿತದ ಗಮನಕ್ಕೆ ವರದಿ ಮಾಡತೊಡಗಿದ.
ಈ ವಿಷಯ ಸ್ವಾಮಿಯ ಶಿಷ್ಯರಿಗೆ ಅರಿವಾಗಿದ್ದೇ ತಡ, ಅವರು ವ್ಯಾಸರಾವ್‌ನನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಗುರುಗಳ ಮೇಲೇನಾದರೂ ಬ್ರಿಟಿಷರು ಕೈಮಾಡಿದ್ದೇ ಆದರೆ, ನಿನ್ನ ಯಜಮಾನ ರೀಡ್ ಜೊತೆಗೆ ನಿನ್ನನ್ನು ಕೊಂದುಹಾಕುತ್ತೇವೆಂದು ವ್ಯಾಸರಾವ್‌ಗೆ ಧಮಕಿ ಹಾಕಿದರು. ಪ್ರಾಣ ಹೋದರೂ ಸರಿಯೇ, ನಮ್ಮ ಗುರುಗಳನ್ನು ಎಂದಿಗೂ ಬಿಟ್ಟುಕೊಡಲಾರೆವು ಎಂದೂ ಹೆದರಿಸಿದರು. ತನ್ನ ಕುಲಬಾಂಧವರಿಗೇ ಹೀಗೆ ದ್ರೋಹವೆಸಗಿದ ವ್ಯಾಸರಾವ್‌ಗಾದರೋ ಒಳಗೊಳಗೇ ಜೀವಭಯ ಕಾಡತೊಡಗಿತ್ತು. ಬೇರೆಯವರ ಮನೆಯಲ್ಲಿರಲಿ, ತನ್ನ ಮನೆಯಲ್ಲೇ ಊಟ ಮಾಡುವುದಕ್ಕೂ ಆತ ಹೆದರುತ್ತಿದ್ದ. ಯಾರಾದರೂ ವಿಷ ಹಾಕಬಹುದೆಂಬ ಭೀತಿಯೂ ಆತನನ್ನು ಕಾಡುತ್ತಿತ್ತು. ವ್ಯಾಸರಾವ್ ತಂದೆ, ಕೋರ್ಟಿನಲ್ಲಿ ವಕೀಲರಾಗಿದ್ದ ಆತನ ಮಾವ ಮತ್ತು ಕುಟುಂಬದ ಇತರರು ವ್ಯಾಸರಾವ್ ವರ್ತನೆಗೆ ಹೇಸಿಗೆಪಟ್ಟು, ಆತನನ್ನು ನಿಂದಿಸಿದರು. ರೀಡ್ ತುಂಬಾ ಒತ್ತಡ ಹೇರಿದಾಗ ವ್ಯಾಸರಾವ್ ಮುಳುಬಾಗಿಲು ಸ್ವಾಮಿಯ ಹೆಸರನ್ನು ಕಾಗದದ ತುಣುಕೊಂದರಲ್ಲಿ ಬರೆದುಕೊಟ್ಟ.

ಮುಳಬಾಗಿಲು ಸ್ವಾಮಿಯನ್ನು ಬಂಧಿಸುವಲ್ಲಿ ಮೊದಲು ಅಸಹಕಾರ ತೋರಿದವರು ಅಲ್ಲಿನ ತಹಶೀಲ್ದಾರರು. ಹಾಗಾಗಿ ಆ ರಾತ್ರಿಯೇ ರೀಡ್ ತನ್ನ ಠಿಕಾಣಿಯನ್ನು ಬದಲಿಸಬೇಕಾಯಿತು. ತನ್ನ ಬಂದೂಕನ್ನು ಕಾಡತೂಸುಗಳಿಂದ ಭರ್ತಿ ಮಾಡಿಕೊಂಡು ಎಚ್ಚರದಿಂದಲೇ ಇದ್ದ. ತಾಲೂಕು ಕಚೇರಿ ಸಮೀಪ ಒಂದು ದಿನ ಕೆಲವು ಸಂಶಯಾಸ್ಪದ ವ್ಯಕ್ತಿಗಳು ತಿರುಗಾಡುತ್ತಿರುವುದು ಕಂಡುಬಂತು. ‘ಫಕೀರರಂತೆ ವೇಷ ಧರಿಸಿದ ಮೂವರು ತಮ್ಮನ್ನು ಬಿಟ್ಟುಬಿಡಿ, ಬಂಧಿಸಬೇಡಿ’ ಎಂದರು ಅವರು ಮಾತ್ರ ಫಕೀರರಂತೆ ಕಾಣಿಸುತ್ತಿರಲಿಲ್ಲ. ಮೀಸೆ ಗಡ್ಡ ಬಿಟ್ಟ ಸಿಪಾಯಿಗಳಂತೆ ಅಥವಾ ಮುಸಲ್ಮಾನರಂತೆ ಕಾಣಿಸುತ್ತಿದ್ದರು. ಅವರೆಲ್ಲ ದಫೇದಾರರ ಬಳಿ ಮಾತನಾಡುತ್ತಿದ್ದರು. ಫಕೀರರಂತೆ ವೇಷ ಧರಿಸಿದ್ದ ಆ ಮೂವರನ್ನು ಬಂಧಿಸಿ, ಅನಂತರ ತಹಶೀಲ್ದಾರ್ ಅವರನ್ನು ಬಿಡುಗಡೆಗೊಳಿಸಿದರು.
ಕೊನೆಗೂ, ಬಹಳಷ್ಟು ಎಚ್ಚರಿಕೆ ಹಾಗೂ ಸಾಕಷ್ಟು ಸೈನ್ಯಬಲದೊಂದಿಗೆ ಮುಳುಬಾಗಿಲು ಸ್ವಾಮಿಯನ್ನು ಭವಾನಿಯಲ್ಲಿ ಬಂಧಿಸಿ ಬ್ರಿಟಿಷರು ಕೊಯಮತ್ತೂರಿಗೆ ಕರೆತಂದರು. ಅವರ ಬಳಿಯಿಂದ ಕಾಗದಪತ್ರಗಳನ್ನು ಹುಡುಕಲಾಯಿತು. ಸುಮಾರು 200 ಮಂದಿ ಸ್ವಾಮಿಯ ಕಟ್ಟಾ ಬೆಂಬಲಿಗರು ಸ್ವಾಮೀಜಿಯ ರಕ್ಷಣೆಗೆ ಕೊಯಮತ್ತೂರಿಗೆ ಧಾವಿಸಿದರು. ಎಲ್ಲೆಡೆ ಈ ಸಂದರ್ಭದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿತ್ತು.
ಜಿಲ್ಲಾ ಕಲೆಕ್ಟರ್ ಇ.ಬಿ. ಥಾಮಸ್ ಮುಳುಬಾಗಿಲು ಸ್ವಾಮಿಯನ್ನು ತನ್ನ ಕಚೇರಿಯಲ್ಲಿ ಎರಡು ದಿನಗಳ ಕಾಲ ಗೃಹಬಂಧನದಲ್ಲಿಟ್ಟು, ಅನಂತರ 400 ರೂ. ಜಾಮೀನಿನ ಮೇಲೆ ಬಿಡುಗಡೆ ಮಾಡಿದ. ಆದರೆ ಸ್ವಾಮಿಯ ಮೇಲೆ ಬ್ರಿಟಿಷರ ಸಂಶಯದ ಕಣ್ಣು ಸದಾ ನೆಟ್ಟಿತ್ತು.

ಕುಲಬಾಂಧವರಿಂದಲೇ ಮೋಸ, ಬ್ರಿಟಿಷರ ಪರ ಪಕ್ಷಪಾತದಿಂದಾಗಿ 1857ರ ಆಗಸ್ಟ್ ನಲ್ಲಿ ಬ್ರಿಟಿಷ್ ವಿರುದ್ಧದ ಸ್ವಾಮಿಯ ದಂಗೆಯ ಪ್ರಯತ್ನಗಳು ವಿಫಲ ಮುಕ್ತಾಯದ ಹಂತಕ್ಕೆ ತಲುಪಿತು. ಸ್ವಾಮಿಯ ಬಳಿಯಿದ್ದ ಕ್ರಾಂತಿಕಾರ‍್ಯಕ್ಕೆ ಸಂಬಂಧಿಸಿದ ಮೂಲ ಕಾಗದಪತ್ರಗಳು 1857ರ ಸೆಪ್ಟೆಂಬರ್‌ನಲ್ಲಿ ಮುತಿಗಾರ್ ಬ್ರಾಹ್ಮಣನೊಬ್ಬನ ಬಳಿ ಪತ್ತೆಯಾದವು. ಮಿಲಿಟರಿ ಇಲಾಖೆ ಆ ಕಾಗದಪತ್ರಗಳನ್ನು ಇಂಗ್ಲಿಷ್‌ಗೆ ಅನುವಾದಿಸಲೆಂದು ಕೊಯಮತ್ತೂರಿನ ಜಿಲ್ಲಾ ಕಲೆಕ್ಟರ್‌ಗೆ ಪತ್ರ ಬರೆದು, ಕಳುಹಿಸಿತು.

ಅದಾದ ಬಳಿಕ ಶೇಖ್ ಅಬ್ದುಲ್ಲಾ, ಮುತಿಗಾರ್ ಬ್ರಾಹ್ಮಣ, ಲಕ್ಷ್ಮಣರಾವ್ ಅಲಿಯಾಸ್ ಅಂಬಾಜಿರಾವ್, ಬಳಗದಾಸ್ ಮೊದಲಾದ ಸಂಶಯಾಸ್ಪದ ವ್ಯಕ್ತಿಗಳ ಬಂಧನವೂ ನಡೆಯಿತು.

ಸನ್ಯಾಸಿಯಾಗಿದ್ದರೂ ದೇಶದ ಸ್ವಾತಂತ್ರ್ಯಕ್ಕೆ ಹಲವರನ್ನು ಹುರಿದುಂಬಿಸಿ, ಸ್ವಾತಂತ್ರ್ಯ ಜ್ಯೋತಿಗೆ ತೈಲವೆರೆದ ಮುಳುಬಾಗಿಲು ಸ್ವಾಮಿ ಒಬ್ಬ ಅಜ್ಞಾತ ಕ್ರಾಂತಿಯ ಕಿಡಿಯಾಗಿಯೇ ಉಳಿದರು.

ಇದನ್ನೂ ಓದಿ | Amrit Mahotsav | ಬ್ರಿಟಿಷರ ವಿರುದ್ಧ ದಂಗೆ ಸಂಘಟಿಸಿದ್ದ ಅಪ್ಪಾಸಾಹೇಬ ಪಟವರ್ಧನ್‌

Exit mobile version