Site icon Vistara News

Amrit Mahotsav | ಬಂಗಾಳದ ಕ್ರಾಂತಿಕಾರಿ ಆಂದೋಲನದ ಜನಕ ಅಶಾಂತ ಸಂತ ರಾಜನಾರಾಯಣ ಬಸು

amrti mahotsav
https://vistaranews.com/wp-content/uploads/2022/08/WhatsApp-Audio-2022-08-30-at-13.12.04.mp3

ಅತುಲ್‌ ಸೇನ್‌, ಶ್ರೀ ಅರವಿಂದೋ, ಬಿನಯ್ ಬಸು, ಬೀರೇನ್‌ ದತ್ತ ಗುಪ್ತ, ಖುದಿರಾಂ ಬೋಸ್‌, ಚಾರುಚಂದ್ರ ಬೋಸ್‌, ರಾಶ್‌ ಬಿಹಾರಿ ಬೋಸ್‌, ಪ್ರಫುಲ್ಲ ಚಾಕಿ, ಸುನೀತಿ ಚೌಧರಿ, ಕನಯ್ಯಲಾಲ್‌ ದತ್ತ, ಬಾಘಾ ಜತಿನ್‌, ಬಾದಲ್‌ ಗುಪ್ತ ನಿರ್ಮಲ್‌ ಜಿಬಾನ್‌ ಘೋಷ್‌, ಸತ್ಯೇಂದ್ರನಾಥ್‌ ಬೋಸ್‌, ಅಮರೇಂದ್ರನಾಥ ಚಟರ್ಜಿ….ಅಬ್ಬಾ! ಈ ಪಟ್ಟಿ ಮುಗಿಯುವುದೇ ಇಲ್ಲ. ಇವರೆಲ್ಲಾ ಯಾರು ಅಂದುಕೊಂಡಿರಾ? ಇದೇನೂ ಪಶ್ವಿಮ ಬಂಗಾಲದ ಯಾವುದೋ ವಿಧಾನಸಭೆ ಅಥವಾ ಲೋಕಸಭೆ ಕ್ಷೇತ್ರದ ಮತದಾರರ ಪಟ್ಟಿಯಲ್ಲ, ಮತ್ತೆ!

ಇವರೆಲ್ಲ ಬ್ರಿಟಿಷ್‌ ಸರ್ವಾಧಿಕಾರದ ವಿರುದ್ಧ ಸೆಟೆದೆದ್ದು ೧೯ ನೇ ಶತಮಾನದಲ್ಲಿ ಹೋರಾಡಿ ಮಡಿದ ಬಂಗಾಳದ ವೀರ ಕ್ರಾಂತಿಕಾರಿಗಳು. ಆ ಅವಧಿಯಲ್ಲಿ ಬಂಗಾಳವೆಂದರೆ ಕ್ರಾಂತಿಕಾರಿಗಳ ತವರೂರೇ ಆಗಿತ್ತು. ೧೯೨೫ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿ, ಇಂದು ಅದು ವಿಶಾಲ ವಟವೃಕ್ಷವಾಗಿ ಬೆಳೆಯುವಂತೆ ಮಾಡಿದ ಮಹಾತ್ಮ ಡಾ.ಕೇಶವ ಬಲಿರಾಂ ಹೆಡಗೇವಾರ್‌ ಕಲ್ಕತ್ತೆಗೆ ವೈದ್ಯಕೀಯ ಪದವಿ ವ್ಯಾಸಂಗಕ್ಕೆ ತೆರಳಿದ್ದು ಕೇವಲ ಅದೊಂದೇ ಉದ್ದೇಶಕ್ಕಾಗಿ ಆಗಿರಲಿಲ್ಲ. ಓದಿನ ನೆಪದಲ್ಲಿ ಅಲ್ಲಿ ನೂರಾರು ಕ್ರಾಂತಿಕಾರಿಗಳನ್ನು ಪ್ರತ್ಯಕ್ಷ ಭೇಟಿಯಾಗಬಹುದೆಂಬ ದೂರದೃಷ್ಟಿಯಿಂದಲೇ ಅಲ್ಲಿಗೆ ಅವರು ತೆರಳಿದ್ದು. ʼಇಂದು ಬಂಗಾಳ ಯೋಚಿಸುವುದನ್ನು ನಾಳೆ ಇಡೀ ಭಾರತ ಯೋಚಿಸುತ್ತದೆʼ ಎಂಬ ಜನಪ್ರಿಯವಾದ ಮಾತೊಂದು ಆಗ ಪ್ರಚಲಿತದಲ್ಲಿತ್ತು. ಅದು ನಿಜವೂ ಆಗಿತ್ತು.

ಬಂಗಾಳ ಅಂದರೆ ತಕ್ಷಣ ನೆನಪಿಗೆ ಬರುವುದು – ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟಾಗೋರ್‌, ಶ್ರೀ ಅರವಿಂದೋ, ಬಂಕಿಂಚಂದ್ರ ಚಟರ್ಜಿ, ಶರಶ್ಚಂದ್ರ ಚಟ್ಟೋಪಾಧ್ಯಾಯ ಮೊದಲಾದ ಪ್ರತಿಭಾವಂತ, ಮೇರುಸದೃಶ ಪ್ರಾತಃಸ್ಮರಣೀಯರು. ಆದರೆ ಇಂಥ ಪ್ರಾತಃಸ್ಮರಣೀಯರಿಗೂ ಪ್ರೇರಣೆ ನೀಡಿದ ಮಹನೀಯರೊಬ್ಬರ ಬಗ್ಗೆ ಈಗಿನ ಪೀಳಿಗೆಗೆ ಅಷ್ಟಾಗಿ ತಿಳಿದೇ ಇಲ್ಲ. ಅವರೇ ಋಷಿ ರಾಜನಾರಾಯಣ ಬಸು. ಈ ಲೇಖನದ ಮೊದಲ ಪ್ಯಾರಾದಲ್ಲಿ ವಿವರಿಸಲಾದ ಕ್ರಾಂತಿಕಾರಿಗಳೆಲ್ಲರಿಗೂ ಇವರು ಸ್ಫೂರ್ತಿದಾತರಾಗಿದ್ದರೆಂದರೆ ನಿಮಗೆ ಅಚ್ಚರಿಯೇ ಆಗಬಹುದು. ಆದರಿದು ನಿಜ.

೧೯ ನೇ ಶತಮಾನದ ಆರಂಭದಲ್ಲಿ ಬಂಗಾಳದಲ್ಲಿ ಭಾರತೀಯ ರಾಷ್ಟ್ರೀಯತೆ ಹಾಗೂ ಹಿಂದುತ್ವದ ಶ್ರೇಷ್ಠತೆ ಕುರಿತು ಪ್ರಭಾವಿ ಆಂದೋಲನವನ್ನು ರೂಪಿಸಿದ ಕೀರ್ತಿ ಸಲ್ಲುವುದಿದ್ದರೆ ಇವರಿಗೇ. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದ ರಾಜನಾರಾಯಣ ಬಸು ಬಂಗಾಳದಲ್ಲಿ ಕ್ರಾಂತಿಯ ಜನಕ ಎಂದೇ ಪ್ರಸಿದ್ಧರು. ರಾಷ್ಟೀಯ ಭಾವನೆಗಳನ್ನು ಬಂಗಾಳಿ ಮನಸ್ಸು, ಹೃದಯಗಳಲ್ಲಿ ಬಡಿದೆಬ್ಬಿಸಿದ ಕರ್ಮಯೋಗಿ.

ರಾಜನಾರಾಯಣ ಬಸು ಹುಟ್ಟಿದ್ದು ೧೮೨೬ ರಲ್ಲಿ, ಈಗಿನ ಪಶ್ಚಿಮ ಬಂಗಾಳದ ೨೪ ಪರಗಣ ಜಿಲ್ಲೆಯ ಬೊರ್ಹಾಲ್‌ ಎಂಬ ಗ್ರಾಮದಲ್ಲಿ. ಮನೆಯಲ್ಲಿ ಬ್ರಹ್ಮ ಸಮಾಜದ ವಾತಾವರಣ. ತಂದೆ ನಂದಕಿಶೋರ ಬಸು ಸಮಾಜ ಸುಧಾರಕ ರಾಜಾರಾಮ ಮೋಹನ ರಾಯ್‌ ಅವರಿಗೆ ಕಾರ್ಯದರ್ಶಿಯಾಗಿದ್ದರು. ಮಹರ್ಷಿ ಅರವಿಂದ ಘೋಷರ ತಾತನವರೇ ಈ ರಾಜನಾರಾಯಣ ಬಸು. ಅವರ ಹಿರಿಯ ಪುತ್ರಿ ಸ್ವರ್ಣಲತಾದೇವಿ ಅರವಿಂದ ಘೋಷರ ತಾಯಿ. ಅಳಿಯ ಕೃಷ್ಣಧನ ಘೋಷ್‌ ಮಾತ್ರ ತಮ್ಮ ಮಾವನ ಚಿಂತನೆಗಳಿಗೆ ತದ್ವಿರುದ್ಧವಾಗಿದ್ದರು. ತಮ್ಮ ಮಕ್ಕಳನ್ನು ಸಂಪೂರ್ಣ ಆಂಗ್ಲಮಯ ಸಂಸ್ಕೃತಿ, ವಾತಾವರಣದಲ್ಲೇ ಬೆಳೆಸಲು ನಿರ್ಧರಿಸಿದ್ದರು. ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎಂಬಂತಾಗಿದ್ದು ಇತಿಹಾಸ. ತಂದೆ ಕೃಷ್ಣಧನ ಘೋಷರಿಗಿಂತ ತಾತ ರಾಜನಾರಾಯಣ ಬಸು ಅವರ ಪ್ರಭಾವವೇ ಅರವಿಂದರ ಮೇಲೆ ಹೆಚ್ಚು ಪರಿಣಾಮ ಬೀರಿರಬೇಕೆನಿಸುತ್ತದೆ. ಅದಕ್ಕೇ ತಾತ ಋಷಿ ಎನಿಸಿಕೊಂಡರೆ ಮೊಮ್ಮಗ ಮಹರ್ಷಿ ಎಂದು ಪ್ರಖ್ಯಾತನಾಗಿದ್ದ!

ರಾಜನಾರಾಯಣ ಬಸುಗಳದು ಸದಾ ಅಶಾಂತ ಮನಸ್ಸು. ಅತೃಪ್ತ ಆತ್ಮ, ಅವರ ತಿಳಿವಿನ ಉದ್ದಗಲ ಆಳಕ್ಕೆ ಮಿತಿಯಿರಲಿಲ್ಲ. ೧೮೪೪ ರಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಬಳಿಕ ಬ್ರಹ್ಮ ಸಮಾಜ ಹಾಗೂ ಭಾರತೀಯ ಸಂಸ್ಕೃತಿಯ ಅದ್ಯಯನದ ಪ್ರಭಾವ ರಾಜನಾರಾಯಣ ಬಸುಗಳನ್ನು ಕಟ್ಟಾ ಹಿಂದುವನ್ನಾಗಿ ಮಾಡಿತು. ʼಭಾರತೀಯ ಶಿಕ್ಷಣ ಪದ್ಧತಿʼ ಜಗತ್ತಿನಲ್ಲೇ ಸರ್ವಶ್ರೇಷ್ಠವೆಂದೂ ಪಾಶ್ಚಾತ್ಯರ ಕೊಡುಗೆಗಳೆಲ್ಲವೂ ಭಾರತೀಯ ಸಂಸ್ಕೃತಿ, ಪರಂಪರೆಗೆ ಮಾರಕವೆಂದೂ ಪ್ರಬಲವಾಗಿ ಪ್ರಚಾರ ಮಾಡಿದರು. ಹಾಗೆಂದೇ ಜನರು ಅವರನ್ನು, ಅವರ ಜೀವಿತ ಕಾಲದಲ್ಲೆ ಋಷಿ ಎಂದು ಗೌರವದಿಂದ ಸಂಬೋಧಿಸಿದ್ದು.

ಆದರೆ ರಾಜನಾರಾಯಣ ಬಸು ತಮ್ಮ ಯೌವನದ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಆರಾಧಕರಾಗಿದ್ದರು! ಪೋರ್ಚುಗೀಸ್‌ ಮೂಲದ ಹೆನ್ರಿ ಲೂಯಿಸ್‌ ವಿವಿಯನ್‌ ಡೆರೋಝಿಯೋ ಎಂಬ ಅಧ್ಯಾಪಕನೊಬ್ಬ ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ಹಂಗಿಸಿ, ಅವೆಲ್ಲ ಮೂಢನಂಬಿಕೆಗಳ ಕಂತೆ ಎಂದು ಹೀಯಾಳಿಸುತ್ತಿದ್ದ. ಮದ್ಯಪಾನ, ಮುಕ್ತ ಸ್ತ್ರೀಸಂಗ, ಗೋಮಾಂಸ ಭಕ್ಷಣೆ ಮುಂತಾದ ಸಂಗತಿಗಳನ್ನು ಪ್ರಚಾರ ಮಾಡಿ ಯುವಜನರನ್ನು ಹಾದಿತಪ್ಪಿಸುತ್ತಿದ್ದ. ಭಾರತೀಯತೆಯ ಬಗ್ಗೆ ಅಸಹಿಷ್ಣುತೆಯ ವಿಷಬೀಜ ಬಿತ್ತುತ್ತಿದ್ದ ಡೆರೋಝಿಯೋನ ಧೋರಣೆ ಬಸು ಅವರಿಗೆ ಹಿಡಿಸಲಿಲ್ಲ. ಆಗಲೇ ಅವರು ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಶ್ರೇಷ್ಠತೆಯನ್ನು ಅರಿಯಲು ಮುಂದಾಗಿದ್ದು. ಅಗೆದಷ್ಟೂ, ಬಗೆದಷ್ಟೂ ಭಾರತೀಯ ಸಂಸ್ಕೃತಿಯ ಮಹಾನತೆಯ ಅರಿವಾಗತೊಡಗಿದ ಮೇಲೆ ಅವರು ಹಿಂತಿರುಗಿ ನೋಡಲಿಲ್ಲ.

ಸಂಸ್ಕೃತ, ಪರ್ಷಿಯನ್‌, ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದ್ದ ರಾಜನಾರಾಯಣ ಬಸು ೧೮೫೭ ರಲ್ಲಿ ಭುಗಿಲೆದ್ದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪ್ರತ್ಯಕ್ಷದರ್ಶಿಗಳಲ್ಲೊಬ್ಬರು. ಬ್ಯಾರಕ್‌ಪುರದಲ್ಲಿ ಮಂಗಲಪಾಂಡೆ ʼಮಾರೋ ಫಿರಂಗಿ ಕೋʼ ಎಂದು ಗರ್ಜಿಸಿ ಸಂಗ್ರಾಮದ ಮೊದಲ ಗುಂಡು ಹಾರಿಸಿದ್ದನ್ನು ಸಮೀಪದಿಂದ ಕಂಡಿದ್ದರು. ಅದು ಅವರಲ್ಲಿ ಕ್ರಾಂತಿಯ ಕಿಡಿಯನ್ನು ಹಚ್ಚಿತು. ಮುಂದೆ ಸಾಮಾಜಿಕ, ರಾಜಕೀಯ ಜಾಗೃತಿಗಾಗಿ ರಾಜನಾರಾಯಣ ಬಸು ಹತ್ತುಹಲವು ಗ್ರಂಥಗಳನ್ನು ರಚಿಸಿದರು. ʼಸಂಜೀವನಿ ಸಭಾʼ ಎಂಬ ರಾಜಕೀಯಾಸಕ್ತರ ಬಳಗ ಹುಟ್ಟುಹಾಕಿದರು. ನವಗೋಪಾಲ ಮಿತ್ರ ಆರಂಭಿಸಿದ ಹಿಂದು ಮೇಳವನ್ನು ಉದ್ಘಾಟಿಸಿ, ಪ್ರಚಾರ ಮಾಡಿದರು. ರಾಜ್ಯದಲ್ಲಿ ವೀರಧರ್ಮ ಪ್ರಜ್ವಲಿಸಬೇಕು. ವೀರಧರ್ಮ ಅಳಿದರೆ ಮಾನವ ಧರ್ಮವೇ ಅಳಿದಂತೆ ಎಂದು ಸಭೆಗಳಲ್ಲಿ ಉಪನ್ಯಾಸ ಮಾಡಿದರು.

ರವೀಂದ್ರನಾಥ ಟಾಗೋರ್‌ರ ತಂದೆ ಮಹರ್ಷಿ ದೇವೇಂದ್ರನಾಥ ಟಾಗೋರರಿಗೂ ರಾಜನಾರಾಯಣರಿಗೂ ಗಳಸ್ಯ ಕಂಠಸ್ಯ. ಮಹರ್ಷಿಗಳು ಹೋದಲ್ಲೆಲ್ಲ ರಾಜನಾರಾಯಣರೂ ಸಾಥ್ ನೀಡುತ್ತಿದ್ದರು. ರವೀಂದ್ರನಾಥ ಟಾಗೋರರ ಅಣ್ಣ ಜ್ಯೋತಿರೀಂದ್ರನಾಥರು ಮತ್ತವರ ಸ್ನೇಹಿತರ ಜೊತೆಗೂಡಿ ʼಹಮ್‌ ಚುಪಾ ಮುಹಾಫ್‌ʼ ಎಂಬ ಗುಪ್ತ ಕ್ರಾಂತಿಕಾರಿ ಸಂಸ್ಥೆಯನ್ನು ಆರಂಭಿಸಿದ್ದರು. ೧೮೭೨ ರಲ್ಲಿ ರಾಜನಾರಾಯಣ ಬಸು ಅಧ್ಯಕ್ಷತೆಯಲ್ಲಿ ನಡೆದ ʼಹಿಂದೂ ಮೇಳʼದಲ್ಲಿ ಚಿಕ್ಕ ವಯಸ್ಸಿನ ರವೀಂದ್ರರು ʼಹಿಂದೂ ಮೇಲಾರ್‌ ಉಪ್‌ಹಾರ್‌ʼ ಮತ್ತು ʼಡೆಲ್ಹೀರ್‌ ದರ್ಬಾರ್‌ʼ ಎಂಬ ಎರಡು ಬಂಗಾಳಿ ಕವನ ರಚಿಸಿ ಹಾಡಿದ್ದರು. ವಿವೇಕಾನಂದರಿಗೆ ಬಸು ಮುಂಚಿನಿಂದಲೂ ಚಿರಪರಿಚಿತರೇ. ಆಗಾಗ ಬಸು ಅವರ ಮನೆಗೆ ವಿವೇಕಾನಂದರು ಹೋಗುತ್ತಿದ್ದರು. ರಾಜನಾರಾಯಣರು ಸ್ಥಾಪಿಸಿದ ಎರಡು ಸೊಸೈಟಿಗಳು ಬಹಿರಂಗವಾಗಿ ಮೊಟ್ಟಮೊದಲಿಗೆ ಕ್ರಾಂತಿ ಸಂದೇಶವನ್ನು ಸಾರಿದ್ದವು. ಅವರ ಮೊಮ್ಮಕ್ಕಳು ಅರವಿಂದ ಮತ್ತು ಬಾರೀಂದ್ರ ಇಬ್ಬರೂ ಉಗ್ರ ಕ್ರಾಂತಿಕಾರಿಗಳೇ. ಅವರ ಅಳಿಯ ಕೃಷ್ಣಕುಮಾರ ಮಿತ್ರನೂ ಕ್ರಾಂತಿಕಾರಿ ಹಾಗೂ ಪತ್ರಕರ್ತ. ಇಬ್ಬರು ಸೋದರಳಿಯಂದಿರಾದ ಜ್ಞಾನೇಂದ್ರನಾಥ ಬಸು ಮತ್ತು ಸತ್ಯೇಂದ್ರನಾಥ ಬಸು ಕೂಡ ಉಗ್ರ ಕ್ರಾಂತಿಕಾರಿಗಳು. ಆಲಿಪುರ ಕೇಸ್‌ನಲ್ಲಿ ಸತ್ಯೇಂದ್ರನನ್ನು ಗಲ್ಲಿಗೇರಿಸಲಾಗಿತ್ತು.

೧೮೭೯ ರಲ್ಲಿ ನಿವೃತ್ತರಾಗಿ ದೇವಘಡದಲ್ಲಿ ಕೊನೆಯವೆರಗೂ ನೆಲೆಸಿದ್ದರು. ಕೊನೆಯವರೆಗೂ ಅವರು ಬಂಗಾಳಿ ಯುವಕರ ಆಕರ್ಷಣೆಯ ಕೇಂದ್ರವಾಗಿದ್ದರು. ೧೮೯೯ ರ ಸೆಪ್ಟೆಂಬರ್‌ ೧೧ ರಂದು ಮತಿಭ್ರಮಣೆ ಹಾಗೂ ಪಾರ್ಶ್ವವಾಯು ಉಂಟಾಗಿ ಅಸುನೀಗಿದರು. ರಾಜನಾರಾಯಣ ಬಸು ಅವರ ಬಗ್ಗೆ ಮೊಮ್ಮಗ ಅರವಿಂದ ಘೋಷರು ಸುಂದರವಾದ ಇಂಗ್ಲಿಷ್‌ ಕವನ ಬರೆದು ಗೌರವ ಸಮರ್ಪಿಸಿದ್ದಾರೆ.

Exit mobile version