Site icon Vistara News

Amrit Mahotsav | ವನವಾಸಿಗಳಲ್ಲಿ ಸ್ವಾಭಿಮಾನ, ದೇಶಪ್ರೇಮ ಬಡಿದೆಬ್ಬಿಸಿದ ಬಿರ್ಸಾ ಮುಂಡಾ

amrit mahotsav
http://vistaranews.com/wp-content/uploads/2022/08/BIRSA.mp3

ಬ್ರಿಟಿಷರ ಆಡಳಿತದ ವಿರುದ್ಧ ಬಿಹಾರದ ವನವಾಸಿಗಳಿಂದ ನಡೆದ ಹೋರಾಟ ಇತ್ತೀಚಿನವರೆಗೂ ಅಜ್ಞಾತವಾಗಿಯೇ ಉಳಿದಿತ್ತು. ೧೯೯೮ರ ಡಿಸೆಂಬರ್‌ ತಿಂಗಳಲ್ಲಿ ಆಗಿನ ರಾಷ್ಟ್ರಪತಿ ಕೆ.ಆರ್.‌ ನಾರಾಯಣ್‌ ಅವರು ಸಂಸತ್‌ ಆವರಣದಲ್ಲಿ ಮೂರ್ತಿಯೊಂದನ್ನು ಅನಾವರಣಗೊಳಿಸಿದ ಬಳಿಕವೇ ವನವಾಸಿಗಳು ತಮ್ಮ ಹಕ್ಕುಗಳಿಗಾಗಿ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ವ್ಯಾಪಕ ಹೋರಾಟ ಮಾಡಿದ್ದರೆಂಬುದು ಇಡೀ ದೇಶಕ್ಕೆ ಗೊತ್ತಾಗಿದ್ದು. ಅಂದಿನ ರಾಷ್ಟ್ರಪತಿಗಳು ಅನಾವರಣ ಮಾಡಿದ ಮೂರ್ತಿಯೇ ಬಿರ್ಸಾ ಭಗವಾನ್‌ ಅಥವಾ ಬಿರ್ಸಾ ಮುಂಡಾ ಎಂಬ ವನವಾಸಿ ವೀರ ಹುತಾತ್ಮನದು.

ಬಿರ್ಸಾ ಮುಂಡಾ ಜನಿಸಿದ್ದು ೧೮೭೫ರ ನವೆಂಬರ್‌ ೧೫ರಂದು (೧೮೭೨ರ ಜುಲೈ ೨೨ ರಂದು, ಎಂದು ಕ್ರೈಸ್ತ ಪಾದ್ರಿಗಳಿಗೆ ಸಂಬಂಧಿಸಿದ ಸಂಸ್ಥೆ ಹೇಳಿಕೊಂಡಿದೆ.). ಆತನ ಜನ್ಮಸ್ಥಳ ಝಾರ್ಖಂಡ್‌ ರಾಜ್ಯದ ರಾಂಚಿ ಸಮೀಪದ ಬಂಬಾ ಎಂಬ ಕುಗ್ರಾಮ. ತಂದೆ ಸುಗನಾ ಮುಂಡಾ. ತಾಯಿ ಕರ್ಮಿಹಟು. ಜೊಹಾಂಡಾ ಎಂಬ ವನ್ಯ ಪ್ರದೇಶದಲ್ಲಿ ಕುರಿಗಳನ್ನು ಕಾಯುತ್ತಾ ಬುಡಕಟ್ಟು ಜನಾಂಗದ ನರ್ತನ ಕೂಟಗಳಲ್ಲಿ ಭಾಗವಹಿಸುತ್ತಿದ್ದ ಬಿರ್ಸಾ ಚಿಕ್ಕಂದಿನಿಂದಲೂ ಕುಶಾಗ್ರಮತಿಯಾಗಿದ್ದ.

ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ಬಿರ್ಸಾನಿಗೆ ಶಾಲೆಗೆ ಸೇರಬೇಕೆಂಬ ಬಯಕೆ. ಆಗ ವನ್ಯ ಪ್ರದೇಶಗಳಲ್ಲಿ ಕ್ರೈಸ್ತ ಪಾದ್ರಿಗಳ ವಿಪರೀತ ಹಾವಳಿ. ಔಷಧಿ, ಆಹಾರ ವಿತರಣೆ, ಶಿಕ್ಷಣದ ಹೆಸರಿನಲ್ಲಿ ಎಲ್ಲೆಡೆ ಸಂಚರಿಸುತ್ತಾ ಅಮಾಯಕ ವನವಾಸಿಗಳನ್ನು ಕ್ರೈಸ್ತ ಮತಕ್ಕೆ ಮತಾಂತರಿಸುತ್ತಿದ್ದರು. ವನವಾಸಿ ಮಕ್ಕಳು ಶಾಲೆಗೆ ಸೇರಬೇಕಾದರೆ ಮೊದಲನೇ ಷರತ್ತೇ ಅವರು ಕ್ರೈಸ್ತ ಮತಕ್ಕೆ ಮತಾಂತರಗೊಳ್ಳಬೇಕೆಂಬುದಾಗಿತ್ತು.

ಸಲ್ಗಾ ಎಂಬ ಹಳ್ಳಿಯಲ್ಲಿದ್ದ ಬಿರ್ಸಾ ಕೂಡ ಶಾಲೆಗೆ ಸೇರಲು ಕ್ರೈಸ್ತ ಮತಕ್ಕೆ ಮತಾಂತರವಾಗಬೇಕಾಯ್ತು. ಅವನ ಹೆಸರನ್ನು ಬಿರ್ಸಾ ಡೇವಿಡ್‌ ಎಂದು ಬದಲಿಸಲಾಯಿತು. ಬಿರ್ಸಾ ಜರ್ಮನ್‌ ಮಿಷನ್‌ ಸ್ಕೂಲ್‌ ನಲ್ಲಿ ಓದುತ್ತಿದ್ದಾಗ ನಡೆದ ಘಟನೆಯೊಂದು ಆತನಿಗೆ ಕ್ರೈಸ್ತ ಮತ ಹಾಗೂ ಕ್ರೈಸ್ತ ಪಾದ್ರಿಗಳ ಬಗ್ಗೆ ಜಿಗುಪ್ಸೆ ಮೂಡಿಸಿತು. ಡಾ.ನಾರ್ಟನ್‌ ಎಂಬ ಕ್ರೈಸ್ತ ಅಧ್ಯಾಪಕ ತರಗತಿಯಲ್ಲಿ ಮುಂಡಾ ಜನಾಂಗ ಹಾಗೂ ಆ ಜನರ ಪೂಜ್ಯ ದೇವತೆ ಸಿಂಗ್‌ಬೊಂಗಾನನ್ನು ಹೀನಾಯವಾಗಿ ನಿಂದಿಸಿ ಕ್ರಿಸ್ತ ಹಾಗೂ ಕ್ರೈಸ್ತ ಮತವನ್ನು ಹಾಡಿಹೊಗಳಿದ. ಇದನ್ನು ಕೇಳಿಸಿಕೊಂಡ ಬಿರ್ಸಾ ಕೆಂಡಾಮಂಡಲನಾದ. ತಮ್ಮ ಜನಾಂಗದ ದೇವರನ್ನು ಇನ್ನೊಮ್ಮೆ ಹೀಗೆ ಹೀನಾಯವಾಗಿ ನಿಂದಿಸಿದರೆ ನಿಮ್ಮ ಗ್ರಹಚಾರ ನೆಟ್ಟಗಿರುವುದಿಲ್ಲ ಎಂದು ಅಬ್ಬರಿಸಿದಾಗ ನಾರ್ಟನ್‌ ನಿಬ್ಬೆರಗಾದ. ಇಡೀ ತರಗತಿ ಗರಬಡಿದಂತೆ ನಿಶ್ಯಬ್ದವಾಯಿತು. ಬಿರ್ಸಾ ಅಂದೇ ಕ್ರೈಸ್ತರ ಶಾಲೆಗೆ ವಿದಾಯ ಹೇಳಿದ. ಕ್ರೈಸ್ತ ಪಾದ್ರಿಗಳು, ಕ್ರೈಸ್ತ ಶಾಲೆಗಳು ತನ್ನ ಮುಂಡಾ ಸಂಸ್ಕೃತಿಯನ್ನು ಹೇಗೆ ನಾಶಪಡಿಸುತ್ತಿವೆ ಎಂದು ಅರಿವಾಗಿ ಮನಸ್ಸು ವಿಹ್ವಲಗೊಂಡಿತು. ಬ್ರಿಟಿಷ್‌ ಸರ್ಕಾರದ ಕುಮ್ಮಕ್ಕಿನಿಂದಲೇ ಈ ಪಾದ್ರಿಗಳ ಆಟಾಟೋಪ ಎಗ್ಗಿಲ್ಲದೆ ಹೀಗೆ ಸಾಗಿದೆ ಎಂಬುದು ಆತನಿಗೆ ಅರಿವಾಗಲು ತಡವಾಗಲಿಲ್ಲ. ಬ್ರಿಟಿಷರನ್ನು ಹೊರಗಟ್ಟುವವರೆಗೆ ಇದಕ್ಕೆಲ್ಲ ಮುಕ್ತಿಯಿಲ್ಲ ಎಂದು ಅರಿವಾಯಿತು.

೧೮೯೦ – ದೇಶದಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಬ್ರಹ್ಮಸಮಾಜ, ಚೈತನ್ಯ ಮಹಾಪ್ರಭು ಮೊದಲಾದ ಮಹನೀಯರು ಹಿಂದು ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಿದ್ದ ಕಾಲಘಟ್ಟವಾಗಿತ್ತು. ಬಡೆಗಾಂವ್‌ ಎಂಬ ಊರಿನಲ್ಲಿ ಆನಂದ ಪಾಂಡೆ ಎಂಬ ಬ್ರಾಹ್ಮಣ ಪಂಡಿತನ ಮೂಲಕ ಬಿರ್ಸಾನಿಗೆ ಹಿಂದು ಧರ್ಮದ ಕುರಿತು ಪ್ರಾಥಮಿಕ ಪರಿಚಯ ಆಯಿತು. ಚೈತನ್ಯ ಮಹಾಪ್ರಭುಗಳ ಪ್ರವಚನಗಳನ್ನು ಕೇಳಿ ಆತನ ಧರ್ಮಶ್ರದ್ಧೆ ಇನ್ನಷ್ಟು ಬಲಗೊಂಡಿತು. ಕ್ರಮೇಣ ಆತನ ವೇಷಭೂಷಣಗಳಲ್ಲೂ ಬದಲಾವಣೆ ತಲೆಹಾಕಿತು. ಬಿರ್ಸಾ ಅರಿಶಿನ ಪಂಚೆ ಉಡಲಾರಂಭಿಸಿದ. ಜನಿವಾರ ಧರಿಸಿದ. ಮಾಂಸಾಹಾರ ತ್ಯಜಿಸಿದ. ತುಳಸಿ ಪೂಜೆ ಮಾಡುತ್ತಾ ಏಕನಾದ ಕೈಯಲ್ಲಿ ಹಿಡಿದು ವೈಷ್ಣವ ಕೀರ್ತನೆಗಳನ್ನು ಹಾಡತೊಡಗಿದ. ಮುಂಡಾ ಜನಾಂಗದ ಜನರು ಬಿರ್ಸಾನ ಈ ಹೊಸ ಅವತಾರ ನೋಡಿ ಆಕರ್ಷಿತರಾದರು. ಭಗವಂತನಲ್ಲಿ ಸಂಪೂರ್ಣ ಶರಣಾಗತನಾಗಿ ಮದ್ಯಮಾಂಸ ತ್ಯಜಿಸಿ, ಪ್ರಾಣಿಬಲಿ ನಿಲ್ಲಿಸಿ, ಎಂಬ ಆತನ ಉಪದೇಶವನ್ನು ಶಿರಸಾವಹಿಸಿ ಪಾಲಿಸತೊಡಗಿದರು. ಬಿರ್ಸಾಯತ್‌ ಎಂಬ ಹೊಸ ಪಂಥವನ್ನೇ ಆತ ಆರಂಭಿಸಿದ.

ಬಿರ್ಸಾಯತ್‌ ವೇಗವಾಗಿ ಬೆಳೆಯಲಾರಂಭಿಸಿತು. ಜನರು ಬಿರ್ಸಾ ಮುಂಡಾನನ್ನು ಸಾಕ್ಷಾತ್‌ ದೇವರೆಂದೇ ಭಾವಿಸಿ ʼಬಿರ್ಸಾ ಭಗವಾನ್‌ʼ ಎಂದೇ ಕರೆಯತೊಡಗಿದರು. ಆಗಲೇ ಆತ ತನ್ನ ಜನರಿಗೆ ನಮ್ಮ ಗುರಿ – ಉಲ್‌ ಗುಲನ್‌ (ಸಂಪೂರ್ಣ ಕ್ರಾಂತಿ) ಮತ್ತು ಅಬುವಾ ದಿಸುನ್‌ (ಸ್ವಯಮಾಡಳಿತ) ಎಂದು ಘೋಷಿಸಿದ್ದು. ಬಿರ್ಸಾನತ್ತ ಜನರು ಆಕರ್ಷಿತರಾದುದನ್ನು ಕಂಡು ಕ್ರೈಸ್ತ ಪಾದ್ರಿಗಳು ಕುಪಿತರಾದರು. ವನವಾಸಿ ಮುಂಡಾಗಳು, ಒರಾನ್‌ರು ಮತ್ತು ಖರಿಯಾಗಳೆಂಬ ವನವಾಸಿ ಜನಾಂಗ ಬಿರ್ಸಾನ ಉಪದೇಶಕ್ಕೆ ಮಾರುಹೋಗಿ ಮರಳಿ ಎಲ್ಲರೂ ಹಿಂದು ಧರ್ಮಕ್ಕೆ ಬರಲಾರಂಭಿಸಿದರು.

ಬಿರ್ಸಾನ ಚಳುವಳಿ ಚರ್ಚ್‌ ಬುಡಕ್ಕೇ ಬಿಸಿನೀರು ಕಾಯಿಸಿ ಹೊಯ್ದಂತಾಗಿತ್ತು. ಇದನ್ನು ಸಹಿಸದ ಪಾದ್ರಿಗಳು ರಾಂಚಿಯ ಡೆಪ್ಯುಟಿ ಕಮಿಷನರ್‌ ಸ್ಟೇಟ್‌ಫೀಲ್ಡ್‌ಗೆ ದೂರು ನೀಡಿ ಆತನನ್ನು ಬಂಧಿಸುವಂತೆ ಆಗ್ರಹಿಸಿದರು. ಒಂದು ದಿನ ಮಲಗಿ ನಿದ್ರಿಸುತ್ತಿದ್ದ ವೇಳೆ ಬಿರ್ಸಾನನ್ನು ಬಂಧಿಸಿ, ಬ್ರಿಟಿಷರು ೨ ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರು.

೧೮೯೮ರಲ್ಲಿ ಬಿರ್ಸಾನ ಬಿಡುಗಡೆಯಾಯಿತು. ಜೈಲುವಾಸ ಬಿರ್ಸಾನನ್ನು ಬ್ರಿಟಿಷರ ವಿರುದ್ಧ ಇನ್ನಷ್ಟು ಉನ್ಮತ್ತಗೊಳಿಸಿತ್ತು. ೧೮೮೨ರಲ್ಲಿ ಬ್ರಿಟಿಷ್‌ ಸರ್ಕಾರ ಜಾರಿಗೆ ತಂದಿದ್ದ ಅನ್ಯಾಯದ ಅರಣ್ಯಕಾಯ್ದೆ ಕೂಡ ಆತನನ್ನು ರೊಚ್ಚಿಗೆಬ್ಬಿಸಿತ್ತು. ಚರ್ಚ್‌, ಪಾದ್ರಿಗಳು ಹಾಗೂ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಜನರನ್ನು ಅಣಿಗೊಳಿಸಿದ. ಚರ್ಚ್‌ಗಳಿಗೆ, ಸರ್ಕಾರಿ ಕಟ್ಟಡಗಳಿಗೆ ಬೆಂಕಿಯಿಟ್ಟು, ಐರೋಪ್ಯ ಪಾದ್ರಿಗಳನ್ನು ಕೊಚ್ಚಿಹಾಕಬೇಕೆಂದು ನಿರ್ಧರಿಸಿದ. ಸುಮಾರು ಎರಡು ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಅವಿಶ್ರಾಂತ ಹೋರಾಟ ನಡೆಸಿದ. ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿಬಿಟ್ಟ. ತನ್ನ ಜನರ ಪಾಲಿಗೆ ಬಿರ್ಸಾ ಆರಾಧ್ಯ ದೇವತೆಯಾದ.

ಹಳ್ಳಿಯಿಂದ ಹಳ್ಳಿಗೆ ಅಂಡಲೆಯುತ್ತಾ ಬಿರ್ಸಾ ಬ್ರಿಟಿಷರ ವಿರುದ್ಧ ಜನರನ್ನು ಎತ್ತಿಕಟ್ಟಿದ. ಹಲವು ಹಳ್ಳಿಗಳಲ್ಲಿ ಬ್ರಿಟಿಷ್‌ ಪೊಲೀಸರ ವಿರುದ್ಧ ಸೆಣಸಾಟ ನಡೆಯಿತು. ದೊಂಬರಿಗುಡ್ಡ ಎಂಬಲ್ಲಿ ಬಿರ್ಸಾನ ಪಡೆಗೂ ಪೊಲೀಸರಿಗೂ ನಡೆದ ಕಾಳಗದಲ್ಲಿ ನೂರಾರು ಮಂದಿ ಬಲಿಯಾದರು. ಆ ಗುಡ್ಡದ ತುಂಬಾ ಹೆಂಗಸರು, ಮಕ್ಕಳು, ವೃದ್ಧರು ಹೆಣಗಳಾಗಿ ಬಿದ್ದರು. ವನವಾಸಿಗಳ ಬಿಲ್ಲುಬಾಣ, ಭರ್ಜಿಗಳು ಬ್ರಿಟಿಷರ ಬಂದೂಕು, ತೋಪುಗಳ ಮುಂದೆ ನಿಸ್ತೇಜವಾದವು.

ಬಿರ್ಸಾನನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಕೊಡುವುದಾಗಿ ಬ್ರಿಟಿಷ್‌ ಸರ್ಕಾರ ಘೋಷಿಸಿತು. ಕೆಲವು ಮನೆಮುರುಕರು ಬಹುಮಾನದಾಸೆಗೆ ಶರಣಾಗಿ ಗುಂಪು ಕಟ್ಟಿಕೊಂಡು ಬಿರ್ಸಾನನ್ನು ಹುಡುಕಲಾರಂಭಿಸಿದರು. ಬಿರ್ಸಾ ಅಡಗಿದ್ದ ನೆಲೆ ಪತ್ತೆಹಚ್ಚಿ, ಆತ ಭೋಜನ ಮುಗಿಸಿ ವಿಶ್ರಾಂತಿಯಲ್ಲಿದ್ದ ವೇಳೆಯಲ್ಲೆ ಹಠಾತ್ತನೆ ಆತನ ಮೇಲೆ ಬಿದ್ದು ಹಿಡಿದುಕೊಂಡರು. ಮಿಕ್ಕೆಲ್ಲ ಕ್ರಾಂತಿಕಾರಿಗಳಂತೆ ಬಿರ್ಸಾ ಕೂಡ ಸ್ವಜನರ ದ್ರೋಹಕ್ಕೆ ಬಲಿಯಾಗಿ ಬಂದಿಯಾದ. ೧೯೦೦ರ ಫೆಬ್ರವರಿ ೩ರಂದು ಬಿರ್ಸಾನನ್ನು ರಾಂಚಿಗೆ ಸಾಗಿಸಿ ಜೈಲಿಗೆ ತಳ್ಳಲಾಯಿತು.

ಆ ದಿನ ಮೇ ೨೦. ಅವನನ್ನು ಕೂಡಿಹಾಕಿದ್ದ ಏಕಾಂಗಿ ಸೆಲ್‌ನಲ್ಲಿ ಬೆಳಿಗ್ಗೆ ಜೈಲು ಸಿಬ್ಬಂದಿ ಆತನಿಗೆ ಆಹಾರ ನೀಡಿದರು. ಅದನ್ನು ಸೇವಿಸಿದ ಅರ್ಧ ಗಂಟೆಯೊಳಗೇ ಬಿರ್ಸಾನ ಆರೋಗ್ಯ ಸಂಪೂರ್ಣ ಕೆಟ್ಟಿತು. ನಾಡಿಬಡಿತ ಕ್ಷೀಣಿಸಿತು. ಹೀಗೆಯೇ ದಿನೇ ದಿನೇ ಕೃಷವಾಗಿ ಜೂನ್‌ ೯ರಂದು ರಕ್ತವಾಂತಿ ಮಾಡುತ್ತಾ ಬಿರ್ಸಾ ಭಗವಾನ್‌ ಇಹಲೋಕ ತ್ಯಜಿಸಿದ.

ವಿಷ ಪ್ರಾಷನದಿಂದ ಆ ಸಾವು ಸಂಭವಿಸಿತ್ತೆಂದು ಎಲ್ಲರೂ ಶಂಕಿಸಿದರು. ಆದರೆ ಆತ ಕಾಲರಾದಿಂದ ಸಾವಿಗೀಡಾದನೆಂದು ಬ್ರಿಟಿಷ್‌ ಸರ್ಕಾರ ಷರಾ ಬರೆಯಿತು!

ವನವಾಸಿ ಜನರಲ್ಲಿ ಸ್ವಾಭಿಮಾನ, ದೇಶಪ್ರೇಮ, ಸ್ವಧರ್ಮ ಪ್ರೇಮಗಳ ಭಾವನೆ ಬಡಿದೆಬ್ಬಿಸಿ ಬಿರ್ಸಾ ಮುಂಡಾ ಹುತಾತ್ಮನಾದಾಗ ಆತನಿಗಿನ್ನೂ ಇಪ್ಪತ್ತೈದು ವರ್ಷ ದಾಟಿರಲಿಲ್ಲ!

Exit mobile version