Site icon Vistara News

Amrit mahotsav | ಕೊಲ್ಹಾಪುರದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ ಚೀಮಾ ಸಾಹೇಬ್

Vistara-Logo-Azadi-ka-amrit-Mahotsav
http://vistaranews.com/wp-content/uploads/2022/08/cheema.mp3

೧೮೫೭ರಲ್ಲಿ ಸೈನಿಕ ಬಂಡಾಯ ವಿಫಲ ಅಂತ್ಯ ಕಂಡ ಬಳಿಕ, ಕೊಲ್ಹಾಪುರದ ರಾಜನ ಕಿರಿಯ ಸಹೋದರ ಚೀಮಾ ಸಾಹೇಬರ ನೇತೃತ್ವದಲ್ಲಿ ದೇಶಭಕ್ತ ಗುಂಪುಗಳು ಮತ್ತೇ ಒಟ್ಟಿಗೆ ಸೇರುವ ಯತ್ನ ನಡೆಸಿದವು. ಚೀಮಾ ಸಾಹೇಬ್ ೧೮೫೭ರ ಜುಲೈನಲ್ಲಿ ನಡೆದ ದಂಗೆಯ ಪ್ರಧಾನ ಪಾತ್ರಧಾರಿ ಕೂಡ ಆಗಿದ್ದರು. ಕೊಲ್ಹಾಪುರದ ಶ್ರೀಮಂತ ವಿಧವೆ ರಾಣಿ ತಾಯಿಬಾಯಿ ಕೂಡ ಕೊಲ್ಹಾಪುರದಲ್ಲಿ ಎರಡನೆಯ ಬಾರಿ ಬಂಡಾಯ ಸಿಡಿಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೧೮೫೭ನೇ ನವೆಂಬರ್ ಮಧ್ಯಭಾಗದಲ್ಲಿ ಹೀಗೆ ಎರಡನೇ ದಂಗೆಗೆ ಪ್ರಯತ್ನಗಳು ನಡೆಯುತ್ತಿರುವುದರ ವಾಸನೆ ಬ್ರಿಟಿಷರಿಗೆ ಹೊಡೆಯಿತು.

ಬುವಾ ಸಾಹೇಬ್ ಮತ್ತು ರಾಣಿ ನರ್ಮದಾಬಾಯಿಯವರೆಂದೇ ಖ್ಯಾತರಾದ ರಾಜ ಶಹಾಜಿ-೧ ಅವರ ಎರಡನೇ ಪುತ್ರ ಚೀಮಾ ಸಾಹೇಬ್. ಆತ ಜನಿಸಿದ್ದು ೧೮೩೧ರ ಜನವರಿ ೮ರಂದು. ಶಾಹು ಎಂದು ಹೆಸರಿಡಲಾಯ್ತು. ಆದರೆ ಆತನನ್ನು ಚಿಕ್ಕಂದಿನಿಂದಲೂ ಚೀಮಾ ಸಾಹೇಬ್ ಎಂದೇ ಸಂಬೋಧಿಸಲಾಯ್ತು. ಆತ ಶಿವಾಜಿ-೩ರ ಕಿರಿಯ ಸೋದರ ಕೂಡ ಆಗಿದ್ದರು. ೧೮೩೮ರ ನವೆಂಬರ್ ೨೯ರಂದು ಬುವಾ ಸಾಹೇಬ್ ನಿಧನಾನಂತರ, ಶಿವಾಜಿ-೩ ಪಟ್ಟವನ್ನೇರಿದರು. ಚೀಮಾ ಸಾಹೇಬ್ ೧೮೫೭ ಜುಲೈ ೩೧ರ ಸೈನಿಕ ಕ್ರಾಂತಿಯ ಒಬ್ಬ ಪ್ರಧಾನ ಸೂತ್ರಧಾರರಾಗಿದ್ದರು. ಕೊಲ್ಹಾಪುರದಲ್ಲಿ ಡಿಸೆಂಬರ್ ೬-೭ರಂದು ನಡೆದ ಜನಪ್ರಿಯ ಬಂಡಾಯದಲ್ಲಿ ಇವರ ಪಾತ್ರವಿತ್ತು.

ಚೀಮಾ ಸಾಹೇಬ್ ನಗರ ಮತ್ತು ಬ್ರಿಟಿಷ್ ಮೊಕ್ಕಾಂ ನಡುವೆ ಅನುಕೂಲಕರ ಜಾಗದಲ್ಲಿದ್ದ ರಾಯಲ್ ಗಾರ್ಡನ್ ೨೭ನೇ ರೆಜಿಮೆಂಟ್ ನಾಯಕರೊಂದಿಗೆ ರಹಸ್ಯ ಸಂದರ್ಶನಗಳನ್ನು ನಡೆಸಿದ್ದರು. ಅಲ್ಲದೆ ತನ್ನ ದೊಡ್ಡಣ್ಣ ರಾಜನ ಮದುವೆ ಸಂದರ್ಭದಲ್ಲಿ ಬಂದಿದ್ದ ೬೦ ಅಶ್ವದಳವೂ ಸೇರಿದಂತೆ ಗ್ವಾಲಿಯರ್ ನಿಯೋಗದೊಂದಿಗೆ ಚೀಮಾ ಸಾಹೇಬ್ ರಹಸ್ಯ ಮಾತುಕತೆ ನಡೆಸಿದರು. ನಾನಾ ಸಾಹೇಬ್ ಪೇಶ್ವೆ ಕಡೆಯ ದೂತರು ಕೂಡ ಚೀಮಾ ಸಾಹೇಬರನ್ನು ಭೇಟಿಯಾಗಿದ್ದರು.

೧೮೫೭ ಡಿಸೆಂಬರ್‌ನಲ್ಲಿ ಕೊಲ್ಹಾಪುರದಲ್ಲಿ ಎರಡನೇ ಬಂಡಾಯ ಜರುಗಿದ ಬಳಿಕ ಕೊಲ್ಹಾಪುರ ರಾಜರ ಗದ್ದುಗೆಗೆ ಚೀಮಾ ಸಾಹೇಬರ ವಾರಸುದಾರಿಕೆಯನ್ನು ಬ್ರಿಟಷ್ ಸರ್ಕಾರ ರದ್ದುಗೊಳಿಸಿತು. ಚೀಮಾ ಸಾಹೇಬರನ್ನು ಕೊಲ್ಹಾಪುರದಿಂದ ದೂರ ಸಾಗಿಸುವ ನಿರ್ಧಾರವನ್ನು ಬ್ರಿಟಿಷ್ ಸರ್ಕಾರ ಕೈಗೊಂಡಿತು. ೧೮೫೮ರ ಮಾರ್ಚ್ ೩೧ರಂದು ಚೀಮಾ ಸಾಹೇಬರ ವಿರುದ್ಧ ತಪ್ಪು ಆರೋಪ ಹೊರಸಿ ಅವರನ್ನು ಬಂಧಿಸಿತು. ಅನಂತರ ಅವರನ್ನು ಗಡೀಪಾರು ಮಾಡಲು ಯೋಚಿಸಿತು. ನಗರದ ಎಲ್ಲ ದ್ವಾರಗಳನ್ನು ಮುಚ್ಚಿ ಆತನ ಬೆಂಬಲಿಗರು ಯಾವುದೇ ಗಲಭೆ ಎಬ್ಬಿಸದಂತೆ ಗಡೀಪಾರು ವಿಷಯವನ್ನು ಗುಟ್ಟಾಗಿಡಲಾಯಿತು. ಚೀಮಾ ಸಾಹೇಬರ ಪತ್ನಿ ಸಕ್ವಾರಬಾಯಿ ಮರುದಿನ ತನ್ನನ್ನೂ ಪತಿಯೊಂದಿಗೆ ಕರೆದೊಯ್ಯಲು ಅವಕಾಶ ನೀಡುವಂತೆ ಕೊಲ್ಹಾಪುರದ ಸ್ಪೆಶಲ್ ಕಮೀಶನರ್ ಮೇಜರ್ ಜನರಲ್ ಲೆಗ್ರಾಂಡ್ ಜಾಕೋಬ್‌ಗೆ ಸಂತಪ್ತಳಾಗಿ ಹೇಳಿದರು. ಆದರೆ ಆಕೆಯ ಈ ಮನವಿಯನ್ನು ತಿರಸ್ಕರಿಸಲಾಯಿತು. ತೀವ್ರ ದುಃಖಿತಳಾದ ಸಕ್ವಾರಬಾಯಿ ೧೮೫೮ರ ಏಪ್ರಿಲ್ ೨ರಂದು ಮುಂಜಾನೆ ಆತ್ಮಹತ್ಯೆಗೆ ಶರಣಾದರು.

ಕೊಲ್ಹಾಪುರದಲ್ಲಿ ಸಿಡಿದೆದ್ದ ಬಂಡಾಯದಲ್ಲಿ ಪ್ರಧಾನ ಪಾತ್ರ ವಹಿಸಿದವರು ಚೀಮಾ ಸಾಹೇಬ್ ಅವರೇ ಎನ್ನುವುದರಲ್ಲಿ ಬ್ರಿಟಿಷರಿಗೆ ಯಾವುದೇ ಸಂಶಯ ಇರಲಿಲ್ಲ. ಹಾಗಾಗಿಯೇ ಅವರನ್ನು ಸೆರೆ ಹಿಡಿದದ್ದು. ಅವರನ್ನು ಗಡೀಪಾರು ಮಾಡಲು ಪಶ್ಚಿಮ ಕರಾವಳಿಯ ವಾಘೋಟನ್ ಎಂಬಲ್ಲಿ ಯುದ್ಧನಾವೆಯೊಂದನ್ನು ಸಿದ್ಧಪಡಿಸಿ ಇಡಲಾಯ್ತು. ಎಲ್ಲವೂ ಸಿದ್ಧವಾದ ಬಳಿಕ ಆತನ ೧೫ ಮಂದಿ ಸೇವಕರೊಂದಿಗೆ ಚೀಮಾ ಸಾಹೇಬರನ್ನು ರಾತ್ರಿ ವೇಳೆ ಶರವೇಗದಲ್ಲಿ ವಾಘೋಟನ್‌ಗೆ ಕರೆದೊಯ್ದು, ಅಲ್ಲಿ ‘ಬೆರೆಸಿನ್’ ಎಂಬ ಉಗಿಹಡಗಿಗೆ ಹತ್ತಿಸಲಾಯಿತು.

ಈ ಸುದ್ಧಿ ತಿಳಿಯುತ್ತಿದ್ದಂತೆ ಕೊಲ್ಹಾಪುರ ನಗರದಲ್ಲಿ ಚೀಮಾ ಸಾಹೇಬರ ಬೆಂಬಲಿಗರು ಹಾಗೂ ನಗರದ ಜನತೆ ಆಕ್ರೋಶಗೊಂಡರು.

ದೊಡ್ಡ ಪ್ರಮಾಣದಲ್ಲಿ ಕೋಲಾಹಲ ಸೃಷ್ಟಿಯಾಯಿತು. ವಾಘೋಟನ್‌ನಿಂದ ಚೀಮಾ ಸಾಹೇಬ್ ಮತ್ತು ಆತನ ಸೇವಕರನ್ನು ಬಾಂಬೆಗೆ ಕರೆದೊಯ್ದು, ಅಲ್ಲಿಂದ ಮೇ ೧೨ರಂದು ಅವರೆಲ್ಲರನ್ನೂ ಸಿಂಧ್‌ನಲ್ಲಿರುವ ಕರಾಚಿಗೆ ಸಾಗಿಸಲಾಯಿತು. ಸೆರೆಮನೆಯಲ್ಲಿರುವಾಗಲೇ ೧೮೬೯ ಮೇ ೧೫ರಂದು ಚೀಮಾ ಸಾಹೇಬ್ ಸಾವಿಗೀಡಾದರು. ಅವರ ಮೃತದೇಹವನ್ನು ಲಿಯರಿ ನದಿಯ ದಡದ ಮೇಲಿನ ಹಿಂದು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿ, ಅನಂತರ ಸ್ಥಳೀಯರು ಅವರ ನೆನಪಿಗಾಗಿ ಅಲ್ಲೊಂದು ಸ್ಮಾರಕವನ್ನು ನಿರ್ಮಿಸಿದರು.

ಬಂಡಾಯದಲ್ಲಿ ಪಾಲ್ಗೊಂಡಿದ್ದ ನಗರದ ನಾಗರಿಕರ ವಿಚಾರಣೆ ಜೊತೆಗೆ ಕೆಲವು ಸೈನ್ಯದ ವ್ಯಕ್ತಿಗಳ ವಿಚಾರಣೆಯೂ ನಡೆಯಿತು ಬಂಡಾಯದಲ್ಲಿ ಪಾತ್ರ ವಹಿಸಿದ್ದ ೫೧ ಮಂದಿಗೆ ಬ್ರಿಟಿಷ್ ಸರ್ಕಾರ ಮರಣದಂಡನೆ ಶಿಕ್ಷೆ ವಿಧಿಸಿತು.

ಇದನ್ನೂ ಓದಿ | Amrit Mahotsav | ಸಾವಂತವಾಡಿಯಲ್ಲಿ ಸಶಸ್ತ್ರ ಬಂಡಾಯ

Exit mobile version