Site icon Vistara News

Amrit Mahotsav | ಟೆಲಿಗ್ರಾಫ್‌ ತಂತಿಗಳನ್ನು ತುಂಡರಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದ ಚೆಂಗಲ್‌ಪೇಟೆ ಕ್ರಾಂತಿಕಾರಿಗಳು

Vistara-Logo-Azadi-ka-amrit-Mahotsav
https://vistaranews.com/wp-content/uploads/2022/08/chingalpete.mp3

ಮದ್ರಾಸ್‌ನ ದಕ್ಷಿಣಕ್ಕೆ ಹಾಗೂ ಪಕ್ಕದಲ್ಲೆ ಇರುವ ಚೆಂಗಲ್‌ಪೇಟೆ ಒಂದು ಕರಾವಳಿ ಜಿಲ್ಲೆ. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಮುನ್ನಾ ದಿನಗಳಲ್ಲಿ ಇದು ಗುಪ್ತ ಸಮಾವೇಶ ಮತ್ತು ಕ್ರಾಂತಿಕಾರಿ ಚಟುವಟಿಕೆಗಳಿಗೆ ಒಂದು ಸೂಕ್ತ ತಾಣವಾಗಿತ್ತು.

೧೮೫೭ರ ಜುಲೈ ತಿಂಗಳಲ್ಲಿ ಚೆಂಗಲ್‌ಪೇಟೆ ನಗರದಿಂದ ನೈರುತ್ಯಕ್ಕೆ ಮೂರು ಮೈಲಿ ದೂರದಲ್ಲಿರುವ ಮಣಿಪಾಕಂನ ಸಣ್ಣ ದೇವಸ್ಥಾನ ಹಾಗೂ ಚೆಂಗಲ್‌ಪೇಟೆಯ ಉತ್ತರಕ್ಕಿರುವ ಪಲ್ಲಾವರಂ ಸಮೀಪದ ಇನ್ನೊಂದು ದೊಡ್ಡ ದೇವಸ್ಥಾನ. ಇವೆರಡೂ ಈ ಪ್ರದೇಶದ ಕ್ರಾಂತಿಕಾರಿಗಳಿಗೆ ತಮ್ಮ ಚಟುವಟಿಕೆಯ ಕೇಂದ್ರಗಳಾದವು. ತಾವು ಜ್ಯೋತಿಷಿಗಳೆಂದು ಹೇಳಿಕೊಳ್ಳುತ್ತಿದ್ದ ಆರ್ನಗೆರೆ ಮತ್ತು ಕೃಷ್ಣ ಎಂಬವರಿಬ್ಬರು ಕ್ರಾಂತಿಕಾರಿಗಳ ಪ್ರಮುಖ ಮುಖಂಡರಾಗಿದ್ದರು.

ಆ ಸಮಯದಲ್ಲಿ, ಅಂದರೆ ೧೮೫೭ ಜುಲೈಯಲ್ಲಿ ದೆಹಲಿಯ ಬಾದಶಾಹಾ ಬಹಾದ್ದೂರ್‌ ಶಾಹಾ ರಾಜಮನೆತನದೊಂದಿಗೆ ಸಂಬಂಧ ಹೊಂದಿದ್ದ ಸದಸ್ಯ ಮತ್ತು ಅದೇ ಹಿರಿತನದಲ್ಲಿ ಪಿಂಚಣಿ ಪಡೆಯುತ್ತಿದ್ದ ಸುಲ್ತಾನ್‌ಭಕ್ಷ್‌ ಮದ್ರಾಸ್‌ನಿಂದ ಚೆಂಗಲ್‌ಪೇಟೆಗೆ ಆಗಮಿಸಿದ. ಆತನನ್ನು ಬಹಳ ಮರ್ಯಾದೆಯಿಂದ ಬರಮಾಡಿಕೊಳ್ಳಲಾಯಿತು. ಅನಂತರ ಆತ ತನ್ನ ಸಹಕಾರಿಗಳೊಂದಿಗೆ ಹಾಗೂ ಸ್ಥಳೀಯ ಕ್ರಾಂತಿಕಾರಿಗಳೊಂದಿಗೆ ಗುಪ್ತಸಭೆಗಳನ್ನು ನಡೆಸಲು ಆರಂಭಿಸಿದ. ಆತನ ಉದ್ದೇಶ ಕ್ರಾಂತಿ ಕಾರ್ಯಕ್ಕೆ ಜೈಲಿನಲ್ಲಿರುವ ಕೈದಿಗಳನ್ನು ಸಿದ್ಧಗೊಳಿಸುವುದು ಮತ್ತು ಬಂಡಾಯ ಎದ್ದಾಗ ಅವರನ್ನು ಸಹಕಾರಿಗಳಾಗಿ ಬಳಸುವುದೇ ಆಗಿತ್ತು. ಹೀಗಂತ ಚೆಂಗಲ್‌ಪೇಟೆಯ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರೇ ಅಭಿಪ್ರಾಯಪಟ್ಟ ದಾಖಲೆ ಇದೆ.

೧೮೫೭ ಜುಲೈ ೨೭ರ ರಾತ್ರಿ ಚೆಂಗಲ್‌ಪೇಟೆಯ ದಕ್ಷಿಣಕ್ಕಿರುವ ವಪಂಗೋಲಂ ಟ್ಯಾಂಕ್‌ ಬಳಿ ಸುಮಾರು ಐನೂರರಿಂದ ಆರುನೂರು ಕ್ರಾಂತಿಕಾರಿಗಳು ಜಮಾಯಿಸಿದರು. ಅಲ್ಲವರು ಮುಂಜಾನೆ ನಾಲ್ಕು ಗಂಟೆಯವರೆಗೂ ಉಳಿದಿದ್ದರು. ಅನಂತರ, ಅವರ ನಾಯಕರಾದ ಆರ್ನಗೆರಿ ಮತ್ತು ಕೃಷ್ಣ ಅವರ ಸೂಚನೆಯಂತೆ ಬ್ರಿಟಿಷ್‌ ಆಡಳಿತದ ವಿರುದ್ಧ ಬಂಡಾಯ ಶುರು ಮಾಡಿದರು. ಅವರ ಮುಖ್ಯಗುರಿ – ಸುತ್ತಮುತ್ತ ಇದ್ದ ಟೆಲಿಗ್ರಾಫ್‌ ಕಚೇರಿ ಮತ್ತು ಟೆಲಿಗ್ರಾಫ್‌ ತಂತಿಗಳಾಗಿದ್ದು, ಅವನ್ನೆಲ್ಲ ತುಂಡರಿಸಿ ಹಾಕಿದರು.

ಜುಲೈ ೩೧ ರಂದು ಮತ್ತೆ ಚೆಂಗಲ್‌ಪೇಟೆ ಪ್ರದೇಶದಲ್ಲಿ ಅದೇ ಬಗೆಯ ಬಂಡಾಯ ನಡೆಯಿತು. ಈ ಚಳವಳಿ ಸಾಂಕ್ರಾಮಿಕದಂತೆ ಎಲ್ಲೆಡೆ ಹರಡಲಾರಂಭಿಸಿತು. ೧೮೫೭ ಆಗಸ್ಟ್‌ ೮ ರಂದು ಸೈದಾಪೇಟ್‌ನಿಂದ ಮದ್ರಾಸ್‌ ಸರ್ಕಾರಕ್ಕೆ ಪತ್ರ ಬರೆದ ಚೆಂಗಲ್‌ಪೇಟೆಯ ಮ್ಯಾಜಿಸ್ಟ್ರೇಟರು, ಗಂಭೀರ ರಾಜದ್ರೋಹಾತ್ಮಕ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲಿಂದಾಚೆಗೆ ಮದ್ರಾಸ್‌ ಸರ್ಕಾರ ಟೆಲಿಗ್ರಾಫ್‌ ತಂತಿಗಳನ್ನು ಕತ್ತರಿಸಿ ಹಾಕಿದ ತಂಡದವರನ್ನು ಪತ್ತೆಹಚ್ಚಿ ಶಿಕ್ಷಿಸುವ ಉಗ್ರ ಕ್ರಮ ಕೈಗೊಂಡರು.

ಬ್ರಿಟಿಷರು ಭಾರತದಲ್ಲಿ ಆಗತಾನೆ ಹೊಸದಾಗಿ ಸ್ಥಾಪಿಸಿದ ಟೆಲಿಗ್ರಾಫ್ ಸಂವಹನ ಜಾಲವು ೧೮೫೭ -೫೮ರ ಸ್ವಾತಂತ್ರ್ಯ ಸಮರವನ್ನು ಹತ್ತಿಕ್ಕುವಲ್ಲಿ ಮಹತ್ವದ ಪಾತ್ರ ವಹಿಸಿತ್ತೆಂಬುದನ್ನು ಇಲ್ಲಿ ಗಮನಿಸಬೇಕು. ಬ್ರಿಟಿಷ್‌ ಸೈನ್ಯದಲ್ಲಿದ್ದ ಆಗಿನ ಎಲ್ಲ ಜನರಲ್‌ಗಳಿಗೆ ಭಾರತೀಯ ಸೈನ್ಯವ್ಯೂಹ ರಚನೆ ತಿಳಿದುಕೊಳ್ಳಲು ಹಾಗೂ ಅದಕ್ಕೆ ಪ್ರತಿಯಾಗಿ ಬ್ರಿಟಿಷ್‌ ಚಕ್ರಾಧಿಪತ್ಯದ ಸೇನಾವ್ಯೂಹ ಚಾಲನೆ ಮಾಡಲು ಟೆಲಿಗ್ರಾಫ್‌ ವ್ಯವಸ್ಥೆ ಬಹಳಷ್ಟು ಪ್ರಯೋಜನಕಾರಿಯಾಗಿತ್ತು. ಆದರೆ ಇದರಿಂದಾಗಿ ಭಾರತೀಯರಿಗೆ ಪ್ರತಿಯೊಂದು ಕಡೆ ಶೀಘ್ರ ಸಂವಹನದ ದೊಡ್ಡ ಕೊರತೆ ಎದ್ದು ಕಾಣುತ್ತಿತ್ತು. ಇದನ್ನರಿತ ಕ್ರಾಂತಿಕಾರಿಗಳು, ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಟೆಲಿಗ್ರಾಫ್‌ ತಂತಿಗಳನ್ನು ನಾಶಪಡಿಸುವುದನ್ನೇ ಆದ್ಯತೆಯ ವಿಷಯವಾಗಿ ಪರಿಗಣಿಸಿದರು. ಚೆಂಗಲ್‌ಪೇಟೆ ಕ್ರಾಂತಿಕಾರಿಗಳಿಗೂ ಈ ಸಂದೇಶ ತಲುಪಿದಂತೆ ಕಾಣಿಸುತ್ತದೆ. ಏಕೆಂದರೆ ಅವರೂ ಅದೇ ರೀತಿ ಕಾರ್ಯಾಚರಿಸತೊಡಗಿದರು. ʼಮೂಗು ಹಿಡಿದರೆ ಬಾಯಿ ತಾನಾಗಿ ತೆರೆಯುವುದಂತೆʼ, ಬ್ರಿಟಿಷ್‌ ಸೈನ್ಯದ ಮುಖ್ಯ ಸಂವಹನ ಸಾಧನವಾಗಿರುವ ಟೆಲಿಗ್ರಾಫ್‌ ತಂತಿ ಕತ್ತರಿಸಿ, ಟೆಲಿಗ್ರಾಫ್‌ ಕಚೇರಿ ನಾಶಪಡಿಸಿದರೆ ಅರ್ಧಯುದ್ಧ ಗೆದ್ದಂತೆಯೇ ಎಂದು ಕ್ರಾಂತಿಕಾರಿಗಳು ಭಾವಿಸಿದ್ದರು. ತಂತ್ರಕ್ಕೆ ಪ್ರತಿತಂತ್ರ ಹೂಡುವಲ್ಲಿ ಕ್ರಾಂತಿಕಾರಿಗಳು ನಿಸ್ಸೀಮರಾಗಿದ್ದರು.

ಆದಾಗ್ಯೂ ಬ್ರಿಟಿಷರು ಇತರ ಕೆಲವು ಕ್ರಾಂತಿಕಾರಿಗಳೊಂದಿಗೆ , ಮುಖಂಡರಾದ ಆರ್ನಗೇರಿ ಮತ್ತು ಕೃಷ್ಣ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾದರು. ಗುಪ್ತ ಸಭೆಗಳನ್ನು ನಡೆಸಿದ್ದು, ಬ್ರಿಟಿಷ್‌ ಸರ್ಕಾರದ ವಿರುದ್ಧ ಜನರನ್ನು ಸಭೆ ಸೇರಿಸಿ ಪ್ರಚೋದಿಸಿದ್ದು, ೧೮೫೭ರ ಜುಲೈ ೨೭ ಮತ್ತು ೩೧ರಂದು ನಿರ್ದಿಷ್ಟವಾಗಿ ಗಲಭೆಗಳನ್ನು ಪ್ರಚೋದಿಸಿದ್ದು ಹಾಗೂ ಟೆಲಿಗ್ರಾಫ್ ಕಚೇರಿಗಳನ್ನು ಧ್ವಂಸಗೊಳಿಸಿದ್ದು – ಹೀಗೆ ಹಲವು ಆರೋಪಗಳಡಿಯಲ್ಲಿ ಅವರಿಬ್ಬರನ್ನು ಚೆಂಗಲ್‌ ಪೇಟೆಯಲ್ಲಿ ವಿಚಾರಣೆಗೊಳಪಡಿಸಲಾಯಿತು. ಆರ್ನಗೆರಿ ಮತ್ತು ಕೃಷ್ಣ ಇಬ್ಬರನ್ನೂ ಬಂಧಿಸಿದ ಬಳಿಕ, ತಲಾ ಎರಡು ಮುಚ್ಚಳಿಕೆಗಳನ್ನು ಸಲ್ಲಿಸಬೇಕು, ತಪ್ಪಿದಲ್ಲಿ ನಾಲ್ಕು ತಿಂಗಳು ಸೆರೆವಾಸ ಅನುಭವಿಸಬೇಕೆಂದು ಆದೇಶಿಸಲಾಯಿತು.

ಸುಲ್ತಾನ್ ಭಕ್ಷ್‌ ಮತ್ತು ಆತನ ನಾಲ್ವರು ಅನುಯಾಯಿಗಳನ್ನೂ ಅದೇ ರೀತಿ ಬಂಧಿಸಲಾಯಿತು. ಕ್ರಾಂತಿಕಾರಿಗಳ ಜತೆ ಒಡನಾಡಿದ್ದಕ್ಕೆ ಮುಚ್ಚಳಿಕೆ ಸಲ್ಲಿಸಬೇಕು. ನಗರವನ್ನು ಯಾವುದೇ ಕಾರಣಕ್ಕೂ, ಬಿಟ್ಟು ತೆರಳಕೂಡದೆಂದು ತಾಕೀತು ಮಾಡಲಾಯಿತು.

ಚೆಂಗಲ್‌ಪೇಟೆ ಬಂಡಾಯವನ್ನು ಕಟ್ಟಕಡೆಗೆ ಬ್ರಿಟಿಷರು ಭಾರೀ ಬಲ ಪ್ರಯೋಗಿಸಿ ದಮನಿಸಿದರು. ರಾಜದ್ರೋಹದ ಸಂಚಿನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಹಲವರನ್ನು ವಿಚಾರಣೆಗೊಳಪಡಿಸಿ ಶಿಕ್ಷೆ ವಿಧಿಸಿದರು. ತಮ್ಮ ವಿರುದ್ಧ ಸೆಟೆದು ನಿಲ್ಲುವವರೇ ಇಲ್ಲ ಎಂದು ಬೀಗುತ್ತಿದ್ದ ಬ್ರಿಟಿಷರಿಗೆ ಚೆಂಗಲ್‌ಪೇಟೆ ಬಂಡಾಯ ಮಾತ್ರ ಬಹುದೊಡ್ಡ ಪಾಠವನ್ನೇ ಕಲಿಸಿತ್ತು. ಅವರ ದುರಹಂಕಾರಕ್ಕೆ ಕೊಡಲಿಪೆಟ್ಟು ಕೊಟ್ಟಿತ್ತು.

ಇದನ್ನೂ ಓದಿ | Amrit Mahotsav | ಹಲಗಲಿಯ ಬಲಶಾಲಿ ಕಲಿಗಳು

Exit mobile version