“ಪ್ರತಿ ಪರೀಕ್ಷೆಯೂ ಒಂದು ಸ್ಪರ್ಧೆ ಆಗಿರುತ್ತದೆ”. ಇದು ನಿಜ ಕೂಡ. ಇಂದು ನೀವು ಯಾವುದೇ ಕ್ಷೇತ್ರಕ್ಕೆ ಹೋಗಿ, “ಬದಲಾವಣೆʼʼ ಮತ್ತು “ಸ್ಪರ್ಧೆʼʼ ಇದ್ದೇ ಇರುತ್ತವೆ. ನಮ್ಮ ದೇಶದ ಶಿಕ್ಷಣ ಕ್ಷೇತ್ರವಂತೂ ನಿರಂತರ ಬದಲಾವಣೆ ಮತ್ತು ಸ್ಪರ್ಧೆಗೆ ಹೆಸರುವಾಸಿಯಾಗಿದೆ.
ಇಂದು ವಿವಿಧ ಕ್ಷೇತ್ರ ಮತ್ತು ವಿಷಯಕ್ಕೆ ಸಂಬಂಧಿಸಿ ಉನ್ನತ ಮಟ್ಟದ ಅಧ್ಯಯನ ಮಾಡಲು ಆವಕಾಶಗಳು ಧಾರಾಳವಾಗಿ ಲಭ್ಯವಿವೆ. ಇದರ ಜತೆಗೆ ಉನ್ನತ ಶಿಕ್ಷಣ ಪಡೆಯಲು ಹಾತೊರೆಯುವ ಯುವಕ ಯುವತಿಯರ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ದೇಶಾದ್ಯಂತ ಆರಂಭಿಕ ಮತ್ತು ಮೂಲ ಶಿಕ್ಷಣದ ಗುಣಮಟ್ಟದಲ್ಲಿ, ಮೌಲ್ಯಮಾಪನದಲ್ಲಿ, ಫಲಿತಾಂಶದಲ್ಲಿ ಸಮಾನತೆ ಇಲ್ಲ. ಮಾತ್ರವಲ್ಲದೆ, ಪ್ರದೇಶದಿಂದ ಪ್ರದೇಶಕ್ಕೆ, ಸಂಸ್ಥೆಯಿಂದ ಸಂಸ್ಥೆಗೆ, ಒಂದು ಪಠ್ಯಕ್ರಮದಿಂದ ಇನ್ನೊಂದು ಪಠ್ಯಕ್ರಮಕ್ಕೆ ಅಗಾಧ ವ್ಯತ್ಯಾಸವಿರುತ್ತದೆ.
ಒಂದು ನಿರ್ದಿಷ್ಟ ಕೋರ್ಸಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಲ್ಲಿ ಆ ನಿರ್ದಿಷ್ಟ ಕೋರ್ಸಿಗೆ ಸಂಬಂಧಿಸಿದಂತೆ ಅವರ ಆಸಕ್ತಿ, ಆಭಿರುಚಿ, ಆರ್ಹತೆ ಎಷ್ಟರ ಮಟ್ಟಿಗೆ ಆಪೇಕ್ಷಿತ ಪ್ರಮಾಣದಲ್ಲಿದೆ ಎಂದು ಪರೀಕ್ಷಿಸಲು ಮತ್ತು ಬಹುಸಂಖ್ಯಾತ ವಿದ್ಯಾರ್ಥಿಗಳು ಪ್ರವೇಶ ಬಯಸುವ ಹಿನ್ನೆಲೆಯಲ್ಲಿ ಆಯ್ಕೆಯಲ್ಲಿ ಒಂದು ರೀತಿಯ ನ್ಯಾಯವನ್ನು ಎತ್ತಿಹಿಡಿಯಲು ಪ್ರವೇಶ ಪರೀಕ್ಷೆಗಳನ್ನು (Competitive Exam) ನಡೆಸಲಾಗುತ್ತದೆ.
ಯಾವುದೇ ಪ್ರವೇಶ ಪರೀಕ್ಷೆಗಳ ಕುರಿತು ಎಲ್ಲರಿಗೂ ತಿಳಿಯುವಂತೆ ಪತ್ರಿಕೆಗಳಲ್ಲಿ, ಪರೀಕ್ಷೆ ನಡೆಸುವ ಸಂಸ್ಥೆಯ ವೆಬ್‌ಸೈಟ್‌ನಲ್ಲಿ, ಶಿಕ್ಷಣ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ನಿಯತಕಾಲಿಕೆಗಳಲ್ಲಿ ಜಾಹೀರಾತನ್ನು ನೀಡಿ, ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿಯೇ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪ್ರವೇಶ ಪರೀಕ್ಷೆಗಳ ಸ್ವರೂಪ
ಹೆಚ್ಚಿನ ಎಲ್ಲಾ ಪ್ರವೇಶ ಪರೀಕ್ಷೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳು) ವಿದ್ಯಾರ್ಥಿಗಳ/ಅಭ್ಯರ್ಥಿಗಳ ಬುದ್ಧಿವಂತಿಕೆ ಯಾ ಬುದ್ಧಿಶಕ್ತಿಯನ್ನು ಮಾಪನ ಮಾಡಲು ಮಹತ್ವ ನೀಡುವುದಿಲ್ಲ. ಪ್ರವೇಶ ಪರೀಕ್ಷೆಗಳು ಮುಖ್ಯವಾಗಿ ಒಂದು ನಿರ್ದಿಷ್ಟ ಕೋರ್ಸಿಗೆ ಸೇರಲು ಬಯಸುವ ವಿದ್ಯಾರ್ಥಿಯು ಆ ಕೋರ್ಸಿಗೆ ಸೇರಲು ಮತ್ತು ಅದನ್ನು ಅಧ್ಯಯನ ಮಾಡಲು ಎಷ್ಟರ ಮಟ್ಟಿಗೆ ಆರ್ಹ ಎಂದು ಪರೀಕ್ಷಿಸುವ ಉದ್ದೇಶದಿಂದ ನಡೆಸಲ್ಪಡುತ್ತವೆ. ಈ ದೃಷ್ಟಿಯಲ್ಲಿ ಪ್ರವೇಶ ಪರೀಕ್ಷೆಗಳಿಗೆ ಮತ್ತು ಶಾಲಾ-ಕಾಲೇಜುಗಳ ಅಂತಿಮ ಸೆಮಿಸ್ಟಾರ್‌ನಲ್ಲಿ ನಡೆಸಲಾಗುವ ವಾರ್ಷಿಕ ಪರೀಕ್ಷೆಗಳಿಗೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ.
ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಸೀಮಿತ ಸೀಟುಗಳಿಗೆ ಪ್ರವೇಶ ಪಡೆಯಲು ತುಂಬಾ ಸ್ಪರ್ಧೆಯಿರುತ್ತದೆ. ಇದನ್ನು ನೋಡಿದಾಗ (ವಾಸ್ತವಿಕವಾಗಿ!) ಪ್ರವೇಶ ಪರೀಕ್ಷೆಗಳು ಆಯ್ಕೆಯ ಪರೀಕ್ಷೆಯಾಗುವ ಬದಲು ಆಯ್ಕೆ ನಿರಾಕರಿಸುವ ಪರೀಕ್ಷೆಗಳೆಂದರೂ ಅದು ಅತಿಶಯೋಕ್ತಿಯಾಗಲಾರದು. ಉದಾಹರಣೆಗೆ ದೇಶದ ಅತ್ಯಂತ ಪ್ರತಿಷ್ಠೆಯ ತಾಂತ್ರಿಕ ಪ್ರವೇಶ ಪರೀಕ್ಷೆಯಾಗಿರುವ ಐಐಟಿಯವರು ನಡೆಸುವ ಜೆಇಇಗೆ 2017-18ನೇ ಶೈಕ್ಷಣಿಕ ವರ್ಷದಲ್ಲಿ ಮೇನ್ ಪರೀಕ್ಷೆಗೆ ಒಟ್ಟಾರೆ 11,98,999 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ಕೇವಲ 2,20,000 ಮಂದಿ ಜೆಇಇ ಆಡ್ವಾನ್ಸ್ ಪರೀಕ್ಷೆ ತೆಗೆದುಕೊಳ್ಳಲು ಆರ್ಹತೆ ಪಡೆದಿದ್ದರು. ದೇಶಾದ್ಯಂತವಿರುವ 23 ಐಐಟಿಗಳಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟಾರೆ 11,100 ಸೀಟ್‌ಗಳಿದ್ದು, ಇವರಲ್ಲಿ 50,676 ವಿದ್ಯಾರ್ಥಿಗಳು ಅಂತಿಮವಾಗಿ ಐಐಟಿ ಸೇರಲು ಆರ್ಹತೆಗಳಿಸಿದ್ದರು.
ಅರ್ಹತೆ ಅಂಕ ನಿಗದಿ
ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಬೇಕಾದರೆ ಆರ್ಹತಾ ವಿಷಯಗಳಲ್ಲಿ ನಿಗದಿ ಪಡಿಸಿದ ಕನಿಷ್ಠ ಅಂಕಗಳನ್ನು ಗಳಿಸುವುದು ಆಗತ್ಯ. ಪ್ರತಿಯೊಂದು ಪ್ರವೇಶ ಪರೀಕ್ಷೆಗೆ ತನ್ನದೇ ಆದ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯ ನಿರ್ಬಂಧ ಕೂಡ ಇರುತ್ತದೆ. ಕೆಲವು ವಿಷಯಗಳಲ್ಲಿ/ ಸಂಸ್ಥೆಗಳಲ್ಲಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಮತ್ತು ಅರ್ಹತಾ ಶಿಕ್ಷಣದ ಅಂತಿಮ ಪರೀಕ್ಷೆಯ ಅಂಕಗಳನ್ನು 50:50 ಮಾದರಿಯಲ್ಲಿ ಗಣನೆಗೆ ತೆಗೆದುಕೊಂಡು ಅಂತಿಮ ಅರ್ಹತಾಪಟ್ಟಿಯನ್ನು ಸಿದ್ಧ ಪಡಿಸಲಾಗತ್ತದೆ. ಇನ್ನು ಕೆಲವು ಪ್ರವೇಶ ಪರೀಕ್ಷೆಯಲ್ಲಿ ಆ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ (ಕೆಲವು ಪರೀಕ್ಷೆಗಳಲ್ಲಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಲಾಗುತ್ತದೆ).
ಕೆಲವು ಪ್ರವೇಶ ಪರೀಕ್ಷೆಗಳು ಲಿಖಿತ ಪರೀಕ್ಷೆ ಮಾತ್ರ ಒಳಗೊಂಡಿರುತ್ತವೆ. ಇನ್ನು ಕೆಲವು ಲಿಖಿತ ಪರೀಕ್ಷೆ, ಗುಂಪು ಪರೀಕ್ಷೆ ಮತ್ತು ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಯ ಸಮೇತ ಮೂರು ಹಂತದಲ್ಲಿ ನಡೆಯುತ್ತವೆ.
ಹೇಗಿರುತ್ತದೆ ಲಿಖಿತ ಪರೀಕ್ಷೆ?
ಸಾಮಾನ್ಯವಾಗಿ ಲಿಖಿತ ಪರೀಕ್ಷೆಗಳು ವಸ್ತುನಿಷ್ಠ ಮಾದರಿಯದ್ದಾಗಿರುತ್ತವೆ. ಈ ಪರೀಕ್ಷೆಗಳಲ್ಲಿ ಆಭ್ಯರ್ಥಿಗಳು ಬರೆಯುವಂತಿರುವುದಿಲ್ಲ. ಪ್ರತಿ ಪ್ರಶ್ನೆಗೆ ನಾಲ್ಕು ಅಥವಾ ಐದು ಉತ್ತರಗಳನ್ನು ನೀಡಲಾಗಿರುತ್ತದೆ. ಇದರಲ್ಲಿ ಸರಿಯಾದ ಉತ್ತರವನ್ನು ಅಭ್ಯರ್ಥಿಯು ಗುರುತಿಸಬೇಕಾಗಿರುತ್ತದೆ. ಪ್ರತಿ ಪ್ರಶ್ನೆಯ ಎಲ್ಲಾ ಅಯ್ಕೆಗಳು ಹೊರನೋಟಕ್ಕೆ ಸರಿ ಎಂದು ಗೋಚರಿಸಿದರೂ, ಕೇವಲ ಒಂದು ಉತ್ತರ ಮಾತ್ರ ಸರಿಯಾಗಿರುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಸಮಯದ ನಿರ್ಬಂಧವಿರುವುದರಿಂದ ಅತೀ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಬೇಕು ಮತ್ತು ಉತ್ತರಿಸುವಾಗ ಖಚಿತವಾಗಿ ತಿಳಿದಿರುವ ಸರಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು. ತಪ್ಪಾದ ಉತ್ತರಗಳಿಗೆ ಅಂಕಗಳನ್ನು ಕಳೆಯುತ್ತಾರೆ (ನೆಗೆಟೀವ್ ಮಾರ್ಕ್ಸ್). ಲಿಖಿತ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕಾದರೆ “ವೇಗ” ಮತ್ತು “ಖಚಿತತೆ” ತುಂಬಾ ಆಗತ್ಯವಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ತಯಾರಿ ನಡೆಸುವುದು ಅತೀ ಆಗತ್ಯ. ಕೆಲವು ಲಿಖಿತ ಪರೀಕ್ಷೆಗಳು ಅರ್ಹತಾ ಶಿಕ್ಷಣದ ಪಠ್ಯಕ್ರಮದ ಆದಾರದಲ್ಲಿ ನಡೆಯುತ್ತವೆ. ಮತ್ತೆ ಕೆಲವು ಸಾಮಾನ್ಯ ಪಠ್ಯಕ್ರಮವನ್ನು ಆಧರಿಸಿ ನಡೆಸುತ್ತಾರೆ.
ಇಂತಹ ಪರೀಕ್ಷೆಗಳಲ್ಲಿ ಇಂಗ್ಲಿಷ್ ಪದಗಳ ಜ್ಞಾನ ಮತ್ತು ಸಾಮರ್ಥ್ಯ, ಗಣಿತದ ಜ್ಞಾನ, ಅಂಕೆ-ಸಂಖ್ಯೆಗಳ ಮತ್ತು ಗ್ರಾಫ್-ಚಾರ್ಟ್‌ಗಳ ವಿಶ್ಲೇಷಣೆ, ವ್ಯಾಕರಣ, ತರ್ಕಬದ್ಧ ವಿಷ್ಲೇಷಣೆ, ವ್ಯವಾಹಾರಿಕ ಜ್ಞಾನದ ವಿಶ್ಲೇಷಣೆ, ಸೃಜನಶೀಲತೆ ಮತ್ತು ಮನೋಭಾವದ ವಿಶ್ಲೇಷಣೆ, ಇತ್ಯಾದಿ ವಿಷಯಗಳ ಮೇಲೆ ಪ್ರಶ್ನೆಗಳು ಇರುತ್ತವೆ.
ಗುಂಪು ಚರ್ಚೆ/ಪರೀಕ್ಷೆ
ಕೆಲವು ಪ್ರವೇಶ ಪರೀಕ್ಷೆಗಳಲ್ಲಿ ಲಿಖಿತ ಪರೀಕ್ಷೆಯ ಜೊತೆಗೆ ಗುಂಪು ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳನ್ನು ನಡೆಸುತ್ತಾರೆ. ಗುಂಪು ಪರೀಕ್ಷೆಯಲ್ಲಿ 8 ರಿಂದ 12 ಆಭ್ಯರ್ಥಿಗಳ ತಂಡ ರಚಿಸಿ, ಗುಂಪು ಚಟುವಟಿಕೆಗಳು ಅಥವಾ ಯಾವುದಾದರೂ ಒಂದು ವಿಷಯದ ಮೇಲೆ ಚರ್ಚೆ ನಡೆಸುತ್ತಾರೆ. ಆಭ್ಯರ್ಥಿಯ ನಾಯಕತ್ವ, ಸಂಘಟನಾ ಚತುರತೆ, ವಿವಿಧ ವಿಷಯಗಳ ಮೇಲಿನ ಜ್ಞಾನ ಮತ್ತು ಮಾಹಿತಿ , ಅಂತರ್ ವ್ಯಕ್ತಿ ಸಂಬಂಧ, ಸಂವಹನ ಸಾಮರ್ಥ್ಯ ಮತ್ತು ಇತರ ಮಾನವ ಕೌಶಲ್ಯಗಳನ್ನು ಪರೀಕ್ಷಿಸಲಾಗುತ್ತದೆ.
ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ
ಈ ಪರೀಕ್ಷೆಯನ್ನು 2 ರಿಂದ 4 ಆಥವಾ ಹೆಚ್ಚು ಪರಿಣಿತರು ಜೊತೆಯಾಗಿ ನಡೆಸುತ್ತಾರೆ. ಆಭ್ಯರ್ಥಿಯ ಮಾನಸಿಕ ಪರಿಪಕ್ವತೆ, ಆಭಿರುಚಿ, ಆಸಕ್ತಿ, ಹವ್ಯಾಸಗಳು, ಸಾಧನೆಗಳು, ಆಭಿಪ್ರಾಯಗಳು, ಸಾಮಾನ್ಯ ಜ್ಞಾನ, ಮೌಲ್ಯಗಳ ಮೇಲಿನ ದೃಢತೆ ಹೀಗೆ ಒಟ್ಟಾರೆಯಾಗಿ ಆಭ್ಯರ್ಥಿಯ ವ್ಯಕ್ತಿತ್ವ ಮತ್ತು ನಿರ್ದಿಷ್ಟ ಕೋರ್ಸಿಗೆ ಅವನ ಸೂಕ್ತತೆಯನ್ನು ಈ ಪರೀಕ್ಷೆಯಲ್ಲಿ ಅಳೆಯಲಾಗುತ್ತದೆ. ಆನ್ವಯಿಸುವ ಪರೀಕ್ಷೆಗಳ ಎಲ್ಲಾ ಅಂಕಗಳನ್ನು ಒಟ್ಟು ಸೇರಿಸಿ ಅಂತಿಮ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಪ್ರವೇಶ ಪರೀಕ್ಷೆಗಳು ಹೇಗೆಯೇ ನಡೆಯಲಿ ಅವು ನಮ್ಮ ಶಿಕ್ಷಣದ ಅವಿಭಾಜ್ಯ ಆಂಗಗಳೆಂದು ತಿಳಿದುಕೊಂಡು ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡು ಅವುಗಳಲ್ಲಿ ಯಶಸ್ಸು ಪಡೆಯಬೇಕು. ಆ ಮೂಲಕ ನಮ್ಮ ಆಸಕ್ತಿಯ ಮತ್ತು ಉದ್ದೇಶಿತ ಶಿಕ್ಷಣವನ್ನು ಮುಂದುವರಿಸಬೇಕು.
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪ್ರತಿಯೊಬ್ಬರಿಗೂ ಶುಭವಾಗಲಿ.
ಲೇಖಕರ ಪರಿಚಯ
ಡಾ. ಕೆ.ಎನ್. ಲೋಬೋ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. ಮಂಗಳೂರು ವಿವಿಯಿಂದ ಡಾಕ್ಟರೇಟ್ ಪಡೆದಿರುವ ಇವರು, ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್, ಇಂಡಿಯನ್ ಸೋಸಿಯಲ್ ಸೈನ್ಸ್ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. 17 ಕೃತಿಗಳನ್ನು ಬರೆದಿರುವ ಇವರು ನಾಡಿನ ಹೆಸರಾಂತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ಮೂವರು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ವಿಷಯ ಬೋಧನೆಯ ಜತೆಜತೆಗೆ ಸ್ವ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಕರಿಯರ್ ಮಾರ್ಗದರ್ಶನ ನೀಡುತ್ತಿರುವ ಇವರು ಇದಕ್ಕೆ ಸಂಬಂಧಿಸಿದ ಹತ್ತಾರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ.
ಇದನ್ನೂ ಓದಿ| Job News: ಸೇನಾಧಿಕಾರಿಯಾಗಬೇಕಾ? ಎನ್‌ಡಿಎ-ಎನ್‌ಎ ಪರೀಕ್ಷೆ ಬರೆಯಿರಿ