ಈ ಲೇಖನದ ಆಡಿಯೊ ಇಲ್ಲಿ ಕೇಳಿ:
ಬ್ರಿಟಿಷರ ವಿರುದ್ಧ ನಡೆದ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಗಣಿತ ದೇಶಭಕ್ತರು ಬಗೆಬಗೆಯ ಕಷ್ಟಕಾರ್ಪಣ್ಯ ಅನುಭವಿಸಿದ್ದಾರೆ. ಜೈಲುವಾಸವಷ್ಟೇ ಅಲ್ಲದೆ ಪ್ರಾಣವನ್ನೂ ಅರ್ಪಿಸಿದ್ದಾರೆ. ಲಕ್ಷಾಂತರ ಮಂದಿಯ ಬೆವರು – ಕಣ್ಣೀರು – ನೆತ್ತರು ಹರಿದಿದ್ದರ ಪರಿಣಾಮವಾಗಿ ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ದೊರಕಿತು ಎಂಬುದು ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನು ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಧ್ಯೇಯವಾಗುವ ಸತ್ಯಸಂಗತಿ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದರು. ಸ್ವಾತಂತ್ರ್ಯ ಯಜ್ಞದಲ್ಲಿ ಸಮಿಧೆಯಾಗಿ ಉರಿದರು. ಅವರೆಲ್ಲ ಯಾರು? ಕುಲ – ಗೋತ್ರಗಳೇನು? ಪಟ್ಟ ಯಮಯಾತನೆ ಎಂತಹದು ಎಂಬುದು ಈ ಹೊತ್ತಿಗೂ ಯಾರಿಗೂ ತಿಳಿಯದು.
ಹೋರಾಟದಲ್ಲಿ ಪಾಲ್ಗೊಂಡು ದೊಡ್ಡವರೆನಿಸಿಕೊಂಡವರ ದೇಶಭಕ್ತಿ, ತ್ಯಾಗ, ಬಲಿದಾನ ಇವು ವ್ಯಾಪಕವಾಗಿ ಪ್ರಸಿದ್ಧವಾಗುತ್ತವೆ. ಇತಿಹಾಸದ ಪುಟಗಳಲ್ಲಿ ಮಹತ್ವದ್ದಾಗಿ ದಾಖಲಾಗುತ್ತದೆ. ಆಗಲಿ, ಅದಕ್ಕೆ ಯಾರದೂ ತಕರಾರು ಇರುವುದಿಲ್ಲ. ಆದರೆ ಶ್ರೀಸಾಮಾನ್ಯ ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ತನು-ಮನ-ಧನ ಎಲ್ಲವನ್ನೂ ಅರ್ಪಿಸಿದರೂ ಅದು ಬೆಳಕಿಗೆ ಬರುವುದೇ ಇಲ್ಲ. ಇತಿಹಾಸದ ಪುಟಗಳಲ್ಲಿ ಆ ಮಹನೀಯರ ಹೆಸರು ದಾಖಲಾಗುವುದೇ ಇಲ್ಲ.
ಏಕೆಂದರೆ ಅವರೆಲ್ಲ ಶ್ರೀಸಾಮಾನ್ಯರು! ಶ್ರೀಸಾಮಾನ್ಯರಾಗಿ ಹುಟ್ಟಿದ್ದೇ ಅವರ ಅಪರಾಧವೇ? ಹೋರಾಟದಲ್ಲಿ ಈ ಅನಾಮಿಕರ ಪಾತ್ರವೇನು ಕಡಿಮೆಯದಾಗಿರಲಿಲ್ಲ. ಆದರೆ ಇತಿಹಾಸಕಾರರು ಅಂಥವರ ಬಗ್ಗೆ ಬೆಳಕು ಚೆಲ್ಲುವ ಗೋಜಿಗೆ ಹೋಗಿಲ್ಲ. ಎಲ್ಲೋ ಕೆಲವು ವಿರಳ ಇತಿಹಾಸಕಾರರಷ್ಟೇ ಅಂಥವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅಜ್ಞಾತವೀರರು ದಾಖಲೆಯಲ್ಲಿ ಉಳಿಯುವಂತೆ ಸ್ತುತ್ಯ ಕಾರ್ಯ ಮಾಡಿದ್ದಾರೆ. ಡಾ. ವಿ. ಡಿ ದಿವೇಕರ್, ಪ್ರತಿಭಾ ರಾನಡೆ, ಡಾ. ಜಿ ಎಸ್ ಹಾಲಪ್ಪ, ಡಾ. ಸೂರ್ಯನಾಥ್ ಕಾಮತ್, ಡಾ. ಕೃಷ್ಣಮೂರ್ತಿ ಮೊದಲಾದ ಕೆಲವೇ ಕೆಲವು ಇತಿಹಾಸಕಾರರಷ್ಟೇ ಅಂತಹ ಶ್ರೀಸಾಮಾನ್ಯ ಅಜ್ಞಾತ ಹೋರಾಟಗಾರರ ಕುರಿತು ಇಂಗ್ಲಿಷ್, ಮರಾಠಿ, ಹಿಂದಿ, ಕನ್ನಡ ಹೀಗೆ ವಿವಿಧ ಭಾಷೆಗಳಲ್ಲಿ ಸಂಕ್ಷಿಪ್ತವಾಗಿಯಾದರೂ ಒಂದಿಷ್ಟು ದಾಖಲಿಸಿರುವುದು ಸಮಾಧಾನಕರ ಸಂಗತಿ. ಇಲ್ಲದಿದ್ದರೆ ಆ ಅಜ್ಞಾತರ ಬಗ್ಗೆ ಇಂದಿನ ಪೀಳಿಗೆಯವರಿಗೆ ಕಿಂಚಿತ್ತು ಸುಳಿವೂ ಸಿಗುತ್ತಿರಲಿಲ್ಲ.
ಆದರೆ ಆ ಅಜ್ಞಾತ ಹೋರಾಟಗಾರರು ಕೀರ್ತಿ ಪ್ರಸಿದ್ಧಿಗಳಿಗಾಗಿ ಹೋರಾಡಿದವರಲ್ಲ. ಭವಿಷ್ಯದಲ್ಲಿ ತಾಮ್ರ ಪತ್ರ, ಮಾಸಾಶನ, ನೌಕರಿ ಆಸೆಗಾಗಿಯೂ ಅಲ್ಲ. ಭಾರತಮಾತೆಯ ಬಿಡುಗಡೆಗಾಗಿ ಅಂಥವರ ಎದೆಯಲ್ಲಿ ಹೆಪ್ಪುಗಟ್ಟಿದ್ದ ದೇಶಭಕ್ತಿಯ ಉನ್ಮತ್ತ ಭಾವ ಅದೆಲ್ಲವನ್ನೂ ಮೀರಿದ್ದಾಗಿತ್ತು. ದೇಶಭಕ್ತಿಯ ಆ ಉನ್ಮತ್ತ ಭಾವ ಅಜ್ಞಾತರ ನೆಮ್ಮದಿ, ಸುಖ, ಸಂಸಾರ, ಉದ್ಯೋಗ, ಬಂಧು ಬಾಂಧವರು ಎಲ್ಲವನ್ನೂ ಕಸಿದುಕೊಂಡಿತ್ತು. ಆದರೆ ಅವರ‍್ಯಾರೂ ಶರಣಾಗತಿ ಸೂಚಿಸಲಿಲ್ಲ. ಕ್ಷಮೆಯಾಚಿಸಲಿಲ್ಲ. ಬಂಧನದಿಂದ ತಪ್ಪಿಸಿಕೊಳ್ಳಲಿಲ್ಲ. ಗಲ್ಲು ಶಿಕ್ಷೆಗೆ ಹೆದರಲಿಲ್ಲ. ಅಂಡಮಾನ್‌ನ ಕರಿನೀರಿನ ಶಿಕ್ಷೆಗೆ ಅಂಜಲಿಲ್ಲ. ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ಅಂತಹ ಅಜ್ಞಾತ ವೀರರ ತ್ಯಾಗ ಬಲಿದಾನಗಳಿಂದಲೇ.
ಆದರೆ ಇತಿಹಾಸದಲ್ಲಿ ನಾವು ಓದುತ್ತಿರುವುದೇನು? ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಮೌಲಾನಾ ಅಬುಲ್ ಕಲಾಂ ಆಜಾದ್ ಮೊದಲಾದ ಮಹನೀಯರು ಅವಿಶ್ರಾಂತ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿತು ಎಂಬ ಅದೇ ಗಿಳಿಪಾಠ. ಗಾಂಧಿಯಾಗಲಿ ನೆಹರು ಆಗಲಿ, ಮೌಲಾನಾ ಆಗಲಿ ಸ್ವಾತಂತ್ರ್ಯ ಪ್ರಾಪ್ತಿಗೆ ಏನು ಮಾಡಿಯೇ ಇಲ್ಲ ಎಂದು ಈ ಮಾತಿನ ಅರ್ಥವಲ್ಲ. ಅವರೆಲ್ಲ ಹೋರಾಟದಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾಗಿದ್ದರು. ಸೆರೆವಾಸವನ್ನು ಅನುಭವಿಸಿದ್ದರು. ಬ್ರಿಟಿಷರ ವಿರುದ್ದ ಒತ್ತಡ ಹೇರಿದ್ದರು. ಆದರೆ ಗಾಂಧಿ ಅಥವಾ ನೆಹರು ಮೈಮೇಲೆ ಸ್ವಾತಂತ್ರ್ಯದ ಹೋರಾಟದ ವೇಳೆ ಒಂದಾದರು ಗಾಯವಾಗಿದ್ದುದನ್ನು ಎಲ್ಲಾದರು ಓದಿದ್ದೇವಾ? ಗಾಂಧಿ, ನೆಹರು, ಸಾವರ್ಕರ್‌ರಂತೆ ಎಣ್ಣೆಯ ಗಾಣದಿಂದ ಎಣ್ಣೆ ತೆಗೆಯುವ ಶಿಕ್ಷೆ ಅನುಭವಿಸಿದರಾ? ಛಡಿಏಟು ತಿಂದರಾ? ಜೈಲಿನಲ್ಲಿ ಆಹಾರ ಸಿಗದೇ ಒಂದು ದಿನವಾದರೂ ಕೊರಗಿದರಾ? ಉಹುಂ, ಇಲ್ಲವೇ ಇಲ್ಲ.
ಸಾಮಾನ್ಯ ಕೈದಿಗಳಂತೆ ಅವರಿಗೆ ಜೈಲಿನಲ್ಲಿ ಯಾವ ಯಾತನೆಯೂ ಇರಲಿಲ್ಲ. ಒಂದು ರೀತಿಯಲ್ಲಿ ರಾಜಾತಿಥ್ಯವೇ ಇತ್ತೆನ್ನಬಹುದು. ಜೈಲಿನಲ್ಲಿ ಉತ್ತಮ ಆಹಾರ, ಮಾಹಿತಿ, ಸಮಾಚಾರ ತಿಳಿದುಕೊಳ್ಳಲು ಸುದ್ದಿ ಪತ್ರಿಕೆಗಳು, ಬೇರೆಯವರನ್ನು, ಮನೆಯವರನ್ನು ಭೇಟಿಯಾಗಲು ಅವಕಾಶ – ಹೀಗೆ ಎಲ್ಲ ಸೌಲಭ್ಯಗಳು ಅವರಿಗಿದ್ದವು. ಜೈಲಿಗೆ ಆಗಾಗ ಹೋಗುತ್ತಿದ್ದರೂ ಹೋದಷ್ಟೇ ಬೇಗ ವಾಪಾಸು ಕೂಡ ಬರುತ್ತಿದ್ದರು. ಹೀಗಾಗಿ ಇತಿಹಾಸದಲ್ಲಿ ಇಂಥವರ ಹೆಸರಷ್ಟೇ ರಾರಾಜಿಸುತ್ತಿದೆ. ಏಕೆಂದರೆ ಅವರೆಲ್ಲ ಸೆಲೆಬ್ರಿಟಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
ಸ್ವಾತಂತ್ರ್ಯ ಹೋರಾಟವೇನಿದ್ದರೂ ಉತ್ತರ ಭಾರತಕ್ಕೆ ಸೀಮಿತವಾಗಿತ್ತು. ದಕ್ಷಿಣ ಭಾರತದಲ್ಲಿ ಅಂತಹ ಹೇಳಿಕೊಳ್ಳಬಹುದಾದ ಹೋರಾಟ ನಡೆದಿಲ್ಲ ಎಂಬ ತಪ್ಪು ಭಾವನೆಯನ್ನು ಇತಿಹಾಸಕಾರರು ಬಿತ್ತಿದ್ದಾರೆ. ಆದರೆ ವಾಸ್ತವ ಮಾತ್ರ ಅದಲ್ಲ. ದಕ್ಷಿಣ ಭಾರತವು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಕ್ಷಿಯಾಗಿತ್ತು. ಇಲ್ಲಿಯೂ ಬ್ರಿಟಿಷರ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿದ ಹಲವು ಮಂದಿ ನಾಯಕರಿದ್ದರು. ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು. ಸತಾರಾದ ರಂಗೋ ಬಾಪೂಜೀ, ಹೈದರಾಬಾದ್‌ನಲ್ಲಿ ಸೋನಾಜಿ ಪಂಡಿತ್, ರಂಗರಾವ್ ಪಾಗೆ ಮತ್ತು ಮೌಲ್ವಿ ಸೈಯದ್ ಅಲ್ಲಾವುದ್ದಿನ್, ಕರ್ನಾಟಕದಲ್ಲಿ ಭೀಮರಾಮ್ ಮುಂಡರಗಿ, ನರಗುಂದದ ಬಾಬಾ ಸಾಹೇಬ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಮೈಲಾರ ಮಹಾದೇವ, ಕರಿಯಪ್ಪ ಸಂಗೂರು, ಈ ಸೂರಿನ ಗೂರಪ್ಪ, ಮಲ್ಲಪ್ಪ, ಸೂರ್ಯನಾರಾಯಣಚಾರಿ, ಕೆಳಮನೆ ಸಿದ್ದಲಿಂಗಪ್ಪ, ಪಣಜಿ ಚನ್ನಬಸಪ್ಪ, ಬಡಕಳ್ಳಿ ಹಾಲಪ್ಪ, ಮದ್ರಾಸಿನಲ್ಲಿ ಗುಲಾಂ ಗೌಸ್, ಚೆಂಗಲ್‌ಪಟ್ಟುವಿನಲ್ಲಿ ಅರುಣಗಿರಿ ಮತ್ತು ಕೃಷ್ಣ, ಕೊಯಮತ್ತೂರಿನಲ್ಲಿ ಮುಳಬಾಗಲ ಸ್ವಾಮಿ, ಗೋವಾದಲ್ಲಿ ದೀಪೂಜಿ ರಾಣಿ ಹೀಗೆ ಹಲವರು.
ವನವಾಸಿ ಸಮುದಾಯಗಳಾದ ಮಹಾರಾಷ್ಟ್ರದ ಭಿಲ್ಲರೂ, ಕೋಲಿಗಳು ಹಾಗೂ ಗೊಂಡರು, ಕರ್ನಾಟಕದಲ್ಲಿ ಬೇಡರು, ಆಂಧ್ರದಲ್ಲಿ ಕೋಯಾಗಳು ಮತ್ತು ಶಬರರು ಬ್ರಿಟಿಷ್ ಆಡಳಿತದ ವಿರುದ್ಧ ಸಿಡಿದೆದ್ದು ಹೋರಾಡಿದ ದಾಖಲೆ ಇತಿಹಾಸದಲ್ಲಿದೆ. ಭೀಮಾ ನಾಯ್ಕ, ಕಾಜೀ ಸಿಂಹ, ರಾಮಜೀ ಗೊಂಡ, ಗುಡ್ಣ್ಯ ಮೊದಲಾದ ಆದಿವಾಸಿ ನಾಯಕರು 1857ರ ʼಉಳ್ಳೆ ದಿಲ್ʼ ಹೋರಾಟದ ಭಾಗವಾಗಿ ಬಂಡೆದ್ದರು.
ಹಿಂದುಗಳು, ಮುಸ್ಲಿಮರು, ಪಟ್ಟಣ ವಾಸಿಗಳು, ಆದಿವಾಸಿಗಳು, ಪೌರರು, ಸೇನಾ ಯೋಧರು ಹೀಗೆ ಎಲ್ಲಾ ಸಮುದಾಯಗಳವರು 1857ರಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗಾಣಿಸಲು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಅಂತಹ ಕ್ರಾಂತಿಕಾರಿ ಹೋರಾಟಗಾರರ ಸಂಕ್ಷಿಪ್ತ ಪರಿಚಯವನ್ನು ಮುಂದಿನ ಸಂಚಿಕೆಯಲ್ಲಿ ಮಾಡಿ ಕೊಳ್ಳೋಣ.
ನಿರೀಕ್ಷಿಸಿ…
(ಲೇಖಕರು ಹಿರಿಯ ಪತ್ರಕರ್ತರು)
ಇದನ್ನೂ ಓದಿ| MyBharat | ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಪಾತ್ರ; ಆಗಸ್ಟ್ 2ರಂದು ವಿಚಾರ ಸಂಕಿರಣ