Site icon Vistara News

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ back to school

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2024/06/WhatsApp-Audio-2024-06-27-at-8.35.45-AM.mp3

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Exit mobile version