ಈ ಅಂಕಣವನ್ನು ಇಲ್ಲಿ ಕೇಳಿ:
ಶಾಲೆಯ ಬಸ್ಸು (school bus) ಬರುವ ಸಮಯಕ್ಕಿಂತ ಎರಡು ನಿಮಿಷ ತಡವಾಗಿದ್ದಕ್ಕೆ ಆ ಚಿಣ್ಣಿ ಚಡಪಡಿಸುತ್ತಿದ್ದಳು. ಕ್ಷಣಕ್ಕೊಮ್ಮೆ ಅಮ್ಮನ ಮೊಬೈಲಿನಲ್ಲಿ ಗಂಟೆ ನೋಡುವುದೇನು, ರಸ್ತೆಯಂಚಿಗೆ ಬಗ್ಗಿ ನೋಡುವುದೇನು, ಸಮವಸ್ತ್ರದ ತುದಿಯನ್ನು ಬೆರಳಿನಿಂದ ತಿರುಚುವುದೇನು, ಪ್ರತಿಯೊಂದು ಹಾರ್ನಿನ ಶಬ್ದವನ್ನೂ ಕಿವಿಗೊಟ್ಟು ಕೇಳುವುದೇನು, ʻಅಮ್ಮ, ಯಾಕಿನ್ನೂ ಬಸ್ಬಂದಿಲ್ಲ?ʼ ಎಂದು ನಾಲ್ಕಾರು ಬಾರಿ ಕೇಳುವಷ್ಟರಲ್ಲಿ ʻಅದ್ಯಾಕೆ ಹಂಗಾಡ್ತಿದ್ದೀಯ? ಬರತಂಕ ತಾಳುʼ ಎಂದು ಅಮ್ಮ ಮೆಲ್ಲಗೆ ಗದರಿದರು. ವಿಷಯವೇನೆಂದರೆ, ಅವಳ ಬಸ್ಸಲ್ಲೇ ಬರುತ್ತಿದ್ದ ಗೆಳತಿಯ ಹುಟ್ಟಿದ ದಿನ ಅವತ್ತು. ಅಂಥ ದಿನವೇ ಹಾಳಾದ ಬಸ್ಸು ನಾಲ್ಕಾರು ನಿಮಿಷ ತಡೆದು ಬರಬೇಕೆ? ಕಾಯುವುದಕ್ಕೇ ಆಗದ ಸ್ಥಿತಿ ಆಕೆಯದ್ದು. ಆದರೆ ಕಾಯುವುದು (waiting) ಜಗದ ನಿಯಮ ಎಂಬುದು ಆ ಪುಟ್ಟಿಗೆಲ್ಲಿ ತಿಳಿಯಬೇಕು!
ಕಾಯುವುದು ಅಥವಾ ನಿರೀಕ್ಷೆ ಎಂದಾಕ್ಷಣ ಎಷ್ಟೊಂದು ಭಾವಗಳು ನವಿಲಿನಂತೆ ಗರಿಗೆದರುತ್ತದಲ್ಲ. ಸ್ವಲ್ಪ ಯೋಚಿಸಿದರೆ, ಇವೆಲ್ಲಾ ಭಾವಗಳು ತೆರೆದುಕೊಳ್ಳುವುದು ಕೇವಲ ಭಾವಗಳಾಗಿ ಮಾತ್ರವೇ ಅಲ್ಲ- ಚಿತ್ರಗಳಾಗಿ! ಅಂದರೆ, ಆಯಾ ಭಾವಗಳಿಗೆ ತಕ್ಕ ಲೆಕ್ಕವಿಲ್ಲದಷ್ಟು ಸನ್ನಿವೇಶಗಳೂ ನಮ್ಮೆದುರು ಬಿಚ್ಚಿಕೊಳ್ಳುತ್ತವೆ. ಈಗಷ್ಟೇ ಶಾಲೆಗೆ ಹೊರಟಿದ್ದ ಪುಟ್ಟಿಯನ್ನು ಸಂಜೆ ಇದಿರು ನೋಡುವ ಅಮ್ಮ, ಸರಿಯಾಗಿ ಮಳೆ ಸುರಿಸಲೊಲ್ಲದ ಮೋಡದತ್ತ ಬೀರುವ ನಿರೀಕ್ಷೆಯ ನೋಟ, ಹನಿ ಕಡಿಯದೆ ಮಳೆ ಸುರಿಯುವೆಡೆ ʻಎಂದು ನಿಂತೀತೊ!ʼ ಎಂದು ಕಳವಳಿಸುವ ಜನ, ಬೆಳೆ ಹೇಗಾದೀತೋ, ಬೆಳೆಗೆ ಬೆಲೆ ಎಂತಾದೀತೊ ಎಂಬ ಆತಂಕ, ಹೊಸ ವರುಷ, ಹೊಸ ಕೆಲಸ, ಹೊಸ ಮನೆ- ಅಂತೂ ಹೊಸದಾದ ಎಲ್ಲದರ ಬಗೆಗಿನ ಆಸೆ, ಮಾತು ಕೊಟ್ಟವನು ಬಾರದಿದ್ದರೆ ಎಂಬ ನಿರೀಕ್ಷೆಯ ಭಾರ, ತವರಿಗೆ ಹೋದವಳು ಎಂದು ಬರುವಳೋ ಎಂಬ ಕಾತರ, ನವಮಾಸಗಳ ನಿರೀಕ್ಷೆಯ ಸುಖ, ಪರೀಕ್ಷೆಯ ಫಲಿತಾಂಶದ ಉತ್ಕಟತೆ, ಯಾರದೋ ಮುಖವನ್ನು ನೋಡುವ ಬಯಕೆ, ಯಾವುದೋ ದನಿ ಕೇಳುವ ತವಕ- ನಿರೀಕ್ಷೆಗೆಷ್ಟೊಂದು ಮುಖಗಳು ನೋಡಿ! ಆಸೆ, ಕಾತರ, ಕಳವಳ, ಕುತೂಹಲ, ಆತಂಕ, ಸುಖ, ವಿರಹ, ತವಕ, ಪ್ರತೀಕ್ಷೆ- ಇವೆಲ್ಲವೂ ನಿರೀಕ್ಷೆಯ ಭಿನ್ನ ಮಗ್ಗುಲುಗಳು ತಾನೇ?
ಪತ್ರಗಳನ್ನು ಬರೆಯುವ ಸುಂದರ ಕಾಲವೊಂದಿತ್ತು. ಅಂದರೆ, ತೀರಾ ಹಂಸೆಯೋ ಪಾರಿವಾಳವೋ ಓಲೆಕಾರರಾಗಿದ್ದ ಕಾಲದ ಮಾತಲ್ಲವಿದು. ಸೈಕಲ್ ಮೇಲೆ ಟ್ರಿಣ್ ಟ್ರಿಣ್ ಮಾಡುತ್ತಾ ಬರುವ ಅಂಚೆಯಣ್ಣನ ಕಾಲದ ವಿಷಯ. ಪ್ರತಿ ದಿನ ಅಂಚೆಯಣ್ಣನನ್ನು ನಿರೀಕ್ಷಿಸುತ್ತಿದ್ದ ಜನರನ್ನು ಲೆಕ್ಕವಿಟ್ಟವರಾರು? ಯಾವುದೋ ನೌಕರಿಯ ಕರೆ, ಪತ್ರಿಕೆಗೆ ಬರೆದಿದ್ದ ಲೇಖನದ ಸ್ವೀಕೃತಿಯ ಓಲೆ, ಎಲ್ಲೋ ಹೋಗಿದ್ದ ಮಗನಿಂದ ಪತ್ರ, ಪ್ರೇಮಿಗಳ ಸಂದೇಶ, ಯಾವುದೋ ಬೇಡದ ಸುದ್ದಿ ಹೊತ್ತ ತಾರು, ಹಾಸ್ಟೆಲ್‌ನಲ್ಲಿದ್ದ ಮಗಳ ಕ್ಷೇಮ ಸಮಾಚಾರ, ಹೊಸ ವರ್ಷಕ್ಕೊಂದು ಗ್ರೀಟಿಂಗ್ ಕಾರ್ಡು, ಆಪ್ತರ ಮನೆಯ ಮಂಗಲ ಒಸಗೆ- ನಿರೀಕ್ಷಿಸುತ್ತಿದ್ದ ಸುದ್ದಿಗಳಿಗೆ ಕೊನೆಮೊದಲೇ ಇರುತ್ತಿರಲಿಲ್ಲ. ಹಾಗಾಗಿ ಅಂಚೆಯಣ್ಣನ ದಾರಿ ಕಾಯುವುದನ್ನೇ ವಸ್ತುವಾಗಿರಿಸಿಕೊಂಡು ಹೆಣೆದಿದ್ದ ಕಥೆಗಳು, ಕಟ್ಟಿದ್ದ ಕವನಗಳು, ಸುತ್ತಿದ್ದ ಸಿನೆಮಾಗಳು, ದೇಶ-ಭಾಷೆಗಳನ್ನೂ ಮೀರಿ ಅಗಣಿತ ಎನ್ನುವಷ್ಟಿವೆ.
ಈಗಿನ ದಿನಗಳಲ್ಲಿ ನೆಂಟರನ್ನು ದಿಢೀರನೆ ನಿರೀಕ್ಷಿಸುವುದು ಅಪರೂಪ. ಹಿಂದೆಲ್ಲಾ ಮನೆಗಳಿಗೆ ನೆಂಟರು ಬರುವುದು ಗಾಳಿ-ಬಿಸಿಲು ಬರುವಷ್ಟೇ ಮಾಮೂಲು. ನಮ್ಮ ಅಜ್ಜಿಯರ ಕಾಲದಲ್ಲಿ ನೆಂಟರ ನಿರೀಕ್ಷೆಯನ್ನು ಸಾರುವ ಅಂದರೆ ನೆಂಟರ ಬರುವಿಕೆಯನ್ನು ಮುಂಚಿತವಾಗಿ ತಿಳಿಸುವ ಅನಧಿಕೃತ ವ್ಯವಸ್ಥೆಯೊಂದು ಜಾರಿಯಲ್ಲಿತ್ತು. ಮನೆಯಂಗಳದಲ್ಲಿ ಕಾಗೆ ಒಂದೇ ಸಮ ಕರೆಯುತ್ತಿದ್ದರೆ, ಒಲೆಯಲ್ಲಿ ಉರಿಯುವ ಬೆಂಕಿ ವಿಚಿತ್ರವಾಗಿ ಶಬ್ದ ಮಾಡುತ್ತಿದ್ದರೆ, ತಲೆ ಬಾಚುವಾಗ ಬಾಚಣಿಕೆ ಪದೇಪದೆ ಬೀಳುತ್ತಿದ್ದರೆ- ಇಂಥ ಎಲ್ಲಾ ಸಂದರ್ಭಗಳಲ್ಲಿ (ಶಕುನಗಳಲ್ಲಿ) ಎಷ್ಟೋ ಮನೆಗಳಲ್ಲಿ ಒಂದೆರಡು ಹಿಡಿ ಅಕ್ಕಿಯನ್ನು ಎಸರಿಗೆ ಹೆಚ್ಚಾಗಿಯೇ ಹಾಕುತ್ತಿದ್ದರು. ನೆಂಟರನ್ನು ಇಷ್ಟೊಂದು ಪ್ರೀತಿಯಿಂದ ಇದಿರುನೋಡುವ ದಿನಗಳು ಈಗಿಲ್ಲ, ಬಿಡಿ.
ಕಾಯುವಿಕೆಗಿಂತ ತಪವು ಬೇರಿಲ್ಲ ಎನ್ನುವಾಗ ನೆನಪಾಗುವುದು ಅಹಲ್ಯೆ. ಗೌತಮ ಮುನಿಯ ಪತ್ನಿಯಾದ ಕಾರಣ, ಆಕೆ ಐಹಿಕ ಸುಖಗಳನ್ನೆಲ್ಲಾ ತ್ಯಜಿಸಬೇಕೆಂಬ ಲೋಕದ ನಿರೀಕ್ಷೆಗೆ ಪ್ರತಿಯಾಗಿ ಆಕೆಯ ಮನಸ್ಸಿನಲ್ಲಿ ಬೇರೆಯೇ ಇತ್ತೇ? ಅರಿತೋ ಅರಿಯದೆಯೋ… ಆಸೆಗೆ ತುತ್ತಾಗಿ, ಇಂದ್ರನ ವಶವಾದಳು. ಕೆರಳಿದ ಗೌತಮರ ಶಾಪಕ್ಕೆ ತುತ್ತಾದಳು. ಅದೆಷ್ಟು ಸುದೀರ್ಘ ಕಾಯುವಿಕೆ ಆಕೆಯದ್ದು ಶಾಪ ವಿಮೋಚನೆಗೆ! ಕಾಯುತ್ತಿದ್ದವಳು- ಕಾಯಾಗಿದ್ದವಳು ಮಾಗುವುದಕ್ಕೋ ಎಂಬಂತೆ ಕಲ್ಲಾಗಿ ಕುಳಿತಳು, ಕಳಿತು ಹಣ್ಣಾದಳು. ರಾಮನೆಂಬ ತಂಗಾಳಿ ಸೋಕಿದ್ದೇ ಸಾಕಾಯಿತು, ಶಾಪವೆಂಬ ಪೊರೆ ಕಳಚಿತು. ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದು ಸುಮ್ಮನೆ ಅಲ್ಲ.
ಸುದೀರ್ಘ ನಿರೀಕ್ಷೆಯ ಬಗ್ಗೆ ಹೇಳುವಾಗ ವಿ. ಸೀತಾರಾಮಯ್ಯನವರ ʻಶಬರಿʼ ಕವನ ನೆನಪಾಗುತ್ತದೆ. “ವನವನವ ಸುತ್ತಿ ಸುಳಿದು/ ತರುತರುವನಲೆದು ತಿರಿದು/ ಬಿರಿವೂಗಳಾಯ್ದು ತಂದು/ ತನಿವಣ್ಗಳಾಯ್ದು ತಂದು/ ಕೊಳದಲ್ಲಿ ಮುಳುಗಿ ಮಿಂದು/ ಬಿಳಿ ನಾರು ಮಡಿಯನುಟ್ಟು/ ತಲೆವಾಗಿಲಿಂಗೆ ಬಂದು/ ಹೊಸತಿಲಲಿ ಕಾದು ನಿಂದು” ಎಷ್ಟೋ ವರುಷಗಳನ್ನು ಕಳೆದು ಬದುಕಿನ ಸಂಜೆಗೆ ಇಳಿದವಳು ಈಕೆ. ರಾಮನ ಕುರಿತಾದ ಆಕೆಯ ನಿರೀಕ್ಷೆಯನ್ನು ಈ ಕವನ ಸಚಿತ್ರವಾಗಿ ವರ್ಣಿಸುತ್ತದೆ. ಹಾಗೆ ನೋಡಿದರೆ ಇಡೀ ರಾಮಾಯಣವೇ ಒಂದು ಸುದೀರ್ಘ ಕಾಯುವಿಕೆಯಂತೆ ಭಾಸವಾಗುವುದಿಲ್ಲವೇ? ಮಕ್ಕಳಿಗಾಗಿ ದಶರಥನ ನಿರೀಕ್ಷೆಯಿಂದ ಆರಂಭವಾಗಿ, ದೀರ್ಘ ವನವಾಸವನ್ನು ಮುಗಿಸಿ ಬರುವ ರಾಮನ ಹೆಜ್ಜೆಯ ಶಬ್ದವನ್ನೇ ಇದಿರು ನೋಡುತ್ತಿದ್ದ ಭರತನವರೆಗೆ ಎಷ್ಟೊಂದು ಆಸೆ-ನಿರೀಕ್ಷೆಯ ಕಥನಗಳು! ರಾಮನಿಗಾಗಿ ತವಕಿಸುವ ಶೂರ್ಪನಖಿ, ಹರಿಣಕ್ಕೆ ಆಸೆ ಪಡುವ ಸೀತೆ, ಸೀತೆಯನ್ನು ಬಯಸುವ ರಾವಣ, ರಾಮನ ನಿರೀಕ್ಷೆಯಲ್ಲಿದ್ದ ಶಬರಿ, ಇತ್ತ ರುಮೆಗಾಗಿ ಕಾಯುತ್ತಿದ್ದ ಸುಗ್ರೀವ… ಕಥೆ ಮುಂದುವರೆದು ಸೀತೆಯ ಕಾಯುವಿಕೆ ಕೊನೆಯಾದಾಗ ನಿಟ್ಟುಸಿರಿಡುತ್ತೇವೆ. ಆದರೆ ತನ್ನಷ್ಟಕ್ಕೆ ೧೪ ವರುಷಗಳ ಕಾಲ ಕಾಯುವ ಊರ್ಮಿಳೆ ಯಾಕೊ ಅಷ್ಟಾಗಿ ಕಣ್ಣಿಗೆ ಬೀಳುವುದೇ ಇಲ್ಲ, ಪಾಪ.
ಇದನ್ನೂ ಓದಿ: ದಶಮುಖ ಅಂಕಣ: ಮಳೆಯೆಂಬ ಮಹಾಕಾವ್ಯದಲಿ ಮಿಂದು…
ನಿರೀಕ್ಷೆಯ ಇನ್ನೊಂದು ಮುಖವಾಗಿ ಭಕ್ತಿಯನ್ನು ಕಾಣಬಹುದೇ? ʻಕಂಡಿರೇ ಚೆನ್ನಮಲ್ಲಿಕಾರ್ಜುನನ?ʼ ಎಂದು ಅಕ್ಕ ಕೇಳುವಾಗ, ಕೃಷ್ಣನನ್ನು ಹಂಬಲಿಸಿ ಮೀರಾ ಅಲೆಯುವಾಗ, ಸೂರದಾಸರೋ ಅಥವಾ ಹರಿದಾಸರುಗಳೊ ತಂತಮ್ಮ ಇಷ್ಟದೈವವನ್ನು ಸೇರುವ ನಿರೀಕ್ಷೆ ಮತ್ತು ಬಯಕೆಯಲ್ಲೇ ಭವವನ್ನು ಕಳೆಯುವಾಗ- ಭಾವಗಳ ನಡುವಿನ ಪರದೆ ಎಷ್ಟೊಂದು ನೀರಾಗಿದೆ ಎನಿಸುವುದಿಲ್ಲವೇ? ಇನ್ನು, ಶೃಂಗಾರ ಮಧುರವಾಗುತ್ತಾ ಸಾಗುವುದು ಬಹುಶಃ ನಿರೀಕ್ಷೆ ಹೆಚ್ಚಿದಾಗಲೇ ಇರಬಹುದೇ? ನಮ್ಮ ವೃಂದಾನದ ಗೋಪಿಕೆಯರನ್ನೇ ನೋಡಿ- ಕೃಷ್ಣನ ನಿರೀಕ್ಷೆಯಲ್ಲೇ ಅವರು ಇಂದಿಗೂ ಕುಳಿತಿದ್ದರೆ ಅಚ್ಚರಿಯಿಲ್ಲ! ಅದನ್ನೇ ಬಣ್ಣಿಸುವ ಕವನಗಳು ಎಷ್ಟು ಬೇಕು? ಕುವೆಂಪು ಅವರ ʻವೃಂದಾವನಕೆ ಹಾಲನು ಮಾರಲು ಹೋಗುವ ಬಾರೇʼ ಎಂದು ಕರೆಯುವ ಗೋಪಿಕೆಯರೇನು; ʻಎಲ್ಲಿ ಹೋಗಲೆ, ಹೇಗೆ ಕಾಣಲೆ, ನನ್ನ ಗಿರಿಧರನʼ ಎಂದು ಹಲುಬುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ರಾಧೆಯೇನು; ʻನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿʼ ಕೃಷ್ಣನಿಗಾಗಿ ಕಾಯುವ ಎಚ್.ಎಸ್.ವೆಂಕಟೇಶಮೂರ್ತಿಗಳ ರಾಧೆಯೇನು; ನಿರೀಕ್ಷೆ ಎಂಬುದು ಭಕ್ತಿ ಮಾತ್ರವಲ್ಲ, ರಕ್ತಿಯೂ ಹೌದಲ್ಲ ಇಲ್ಲಿ!
ನಮ್ಮ ಜನಪದರಲ್ಲೂ ನಿರೀಕ್ಷೆಯ ಭಾವಗಳು ಬಹಳಷ್ಟು ಮಡುಗಟ್ಟಿವೆ. ಗಂಡನ ಮನೆಗೆ ಹೋಗುವಾಗಿನ ಹೆಣ್ಣು ಮಗಳ ನಿರೀಕ್ಷೆ-ಕಾತರಗಳು; ದಂಡಿಗೆ ಹೋದ ಗಂಡನ ನಿರೀಕ್ಷೆಯಲ್ಲೇ ಕುಳಿತ ಹೆಂಡತಿ; ʻಆಷಾಢ ಮಾಸ ಬಂದೀತವ್ವ/ ಅಣ್ಣ ಬರಲಿಲ್ಲ ಕರಿಯಾಕʼ ಎನ್ನುವ ಕಾತರದ ಕಣ್ಣುಗಳು; ʻಪಂಚ್ಮಿ ಹಬ್ಬಕ್ಕುಳ್ದಾವ ದಿನ ನಾಕ/ ಅಣ್ಣ ಬರಲಿಲ್ಲ ಯಾಕ ಕರಿಯಾಕʼ ಎಂಬ ಕಾಯುವಿಕೆ- ಇಂಥವು ಎಷ್ಟೋ ಕಾಣಬಹುದು.
ನಿರ್ಗುಣ, ನಿರಾಕಾರ ಎಂಬಂತೆ ಮೇಲ್ನೋಟಕ್ಕೆ ಕಾಣುವ ನಿರೀಕ್ಷೆಗೆ ಎಷ್ಟೊಂದು ಗುಣ-ದೋಷಗಳು! ಯಾವುದನ್ನು ನಿರೀಕ್ಷಿಸುತ್ತೇವೋ, ಅದಕ್ಕಾಗಿ ಹುಡುಕುತ್ತಲೂ ಇರುತ್ತೇವಲ್ಲ ನಾವು. ಹಾಗಿಲ್ಲದಿದ್ದರೆ, ʻಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು…ʼ ಎಂದು ಆರಂಭದಲ್ಲಿ ಲೌಕಿಕ ಸುಖದ ನಿರೀಕ್ಷೆಯನ್ನೇ ಹುಟ್ಟಿಸುವ ಗೋಪಾಲಕೃಷ್ಣ ಅಡಿಗರ ಸಾಲುಗಳು ಹುಡುಕುತ್ತಾ ಮುಂದೆ ಸಾಗಿ, ʻಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನʼ ಎಂಬಂತೆ ಜೀವನದ ಪರಮ ಸತ್ಯವನ್ನು ಕಂಡರಿಸುವುದಿಲ್ಲವೇ!
ಇದನ್ನೂ ಓದಿ: ದಶಮುಖ ಅಂಕಣ: ಮಳೆ ಕಾಣದೆ ಮೊರೆವ ಮನ!