ಪೋರ್ಚುಗೀಸರು 1510ರಲ್ಲಿ ಗೋವಾದ ಒಂದು ಭಾಗದಲ್ಲಿ ತಮ್ಮ ʼಮೊದಲʼ ಅಧಿಪತ್ಯ ಸ್ಥಾಪಿಸಿದರು. ಹಾಗೂ ಕ್ರಮೇಣ ಸುತ್ತಮುತ್ತಲಿನ ಪ್ರದೇಶಗಳಿಗೆ ಅದನ್ನು ವಿಸ್ತರಿಸಲು ಯತ್ನಿಸಿದರು. 1688ರ ವೇಳೆಗೆ ಅವರು ಉತ್ತರದಲ್ಲಿ ಸಾವಂತವಾಡಿ, ದಕ್ಷಿಣದಲ್ಲಿ ಕಾರವಾರ, ಪೂರ್ವದಲ್ಲಿ ಸೂದಾ ಹಾಗೂ ಪಶ್ಚಿಮದಲ್ಲಿ ಕರಾವಳಿ ತನಕ ಸಂಸ್ಥಾನದ ಅಧಿಪತಿಗಳಾದರು. ಸಾವಂತವಾಡಿ ಸಂಸ್ಥಾನದ ಭಾಗವಾಗಿದ್ದ ಹಾಗೂ ಪಶ್ಚಿಮದಲ್ಲಿ ಕರಾವಳಿ ತನಕ ಗೋವಾದ ಈಶಾನ್ಯ ಗಡಿಗೆ ತಾಗಿದ್ದ ಸತ್ತಾರಿ ಮಹಲ್ ಅನ್ನು ಪೋರ್ಚುಗೀಸರು 1740ರಲ್ಲಿ ಗೆದ್ದುಕೊಂಡರು. ಅಲ್ಲಿಂದೀಚೆಗೆ ಸತ್ತಾರಿಯ ರಾಣೆಗಳು ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಗಳಿಸಲು ಹಲವು ಪ್ರಯತ್ನಗಳನ್ನು ನಡೆಸಿದರು.
ಕೇರಿ ಶಾಖೆಯ ರಾಣೆ ಕುಟುಂಬದ ಇಂದ್ರೋಜಿ ದೇಸಾಯಿಯವರ ಕಿರಿಯ ಪುತ್ರನೇ ದೇಪೂಜಿ ರಾಣೆ. ಬ್ರಿಟನ್ ಮತ್ತು ಪೋರ್ಚುಗೀಸ್ ದಾಖಲೆಗಳಲ್ಲಿ ದೀಪೂಜಿ ರಾಣೆಯನ್ನು ದೀಪು ರಾಣೆ,, ದೇಪು ರಾಣಾ, ದೇಪಾ ರಾಣಾ, ದೀಪಾ ರಾಣೈ ಮುಂತಾಗಿ ವಿವಿಧ ರೀತಿಯಲ್ಲಿ ಹೆಸರನ್ನು ತಿರುಚಲಾಗಿದೆ. ಮೂಲತಃ ರಾಜಸ್ಥಾನದವರಾದ ರಾಣೆ ಕುಟುಂಬ ಗೋವಾ ಸಂಸ್ಥಾನದಲ್ಲಿ ಸತ್ತಾರಿ ಮಹಲನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿತ್ತು. ಕುಮಾರ್ಕಂ ಎಂಬಲ್ಲಿ ಈ ಕುಟುಂಬಕ್ಕೆ ಒಂದು ಮಹಲಿತ್ತು. ವರ್ಷಕ್ಕೆ ಸುಮಾರು 900 ರೂ. ಮೌಲ್ಯದ ಕೆಲವು ತೆರಿಗೆಗಳನ್ನು ಸಂಗ್ರಹಿಸುವ ಹಕ್ಕನ್ನು ಈ ಕುಟುಂಬ ಪಡೆದಿತ್ತು. ಪೋರ್ಚುಗೀಸ್ ಸರ್ಕಾರ ಕುಟುಂಬಕ್ಕಿದ್ದ ಈ ವಿಶೇಷಾಧಿಕಾರವನ್ನು ಹಿಂತೆಗೆದುಕೊಂಡಿದ್ದಷ್ಟೇ ಅಲ್ಲದೆ ಕೌಟುಂಬಿಕ ಸಮಾರಂಭಗಳ ಮೇಲೂ ಕೆಲವು ಹೊಸ ತೆರಿಗೆಗಳನ್ನು ಹೇರಿತು. ಗೋವಾದಲ್ಲಿ ರಾಣೆ ಕುಟುಂಬದ ಪ್ರಭಾವವನ್ನು ಹತ್ತಿಕ್ಕುವುದೇ ಇದರ ಹಿಂದಿನ ಹುನ್ನಾರವಾಗಿತ್ತು.
ಕೆನರಾ ಜಿಲ್ಲೆಯಲ್ಲಿ ರಾಣೆ ವಂಶಕ್ಕೆ ದೊಡ್ಡ ಮಟ್ಟದ ಸಂಪರ್ಕ ಇತ್ತು. ಪೋರ್ಚುಗೀಸರು ತಮ್ಮ ಕುಟುಂಬದ ಅಧಿಕಾರ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಆಕ್ರೋಶಗೊಂಡ ದೀಪೂಜಿ ರಾಣೆ 1857ರಲ್ಲಿ ಗೋವಾ ಸರ್ಕಾರದ ವಿರುದ್ಧ ಶಸ್ತ್ರಸಹಿತವಾಗಿ ತಿರುಗಿಬಿದ್ದರು. ಮೊದಲು ನಾನೂಸ್ ಕೋಟೆಯನ್ನು ವಶಪಡಿಸಿಕೊಂಡ ದೀಪೂಜಿ ತನ್ನ ಹಲವಾರು ಸೈನಿಕ ಕಾರ್ಯಾಚರಣೆ ಮೂಲಕ ಸತ್ತಾರಿ ಮಹಲ್ ಪ್ರದೇಶದಿಂದ ಪೋರ್ಚುಗೀಸರನ್ನು ಒದ್ದು ಹೊರಹಾಕುವಲ್ಲಿ ಯಶಸ್ವಿಯಾದರು. ಕೊನೆಗೂ ರಾಣೆಗಳ ಪೀಳಿಗೆಯ ಮತ್ತು ಜನರ ಕನಸು ನನಸಾಯಿತು. ದೀಪೂಜಿಯ ಪಡೆಗಳು ಅನಂತರ ಕ್ಯೂಪೆಂ, ಕನ್ಕೋನಾ, ಹೇಮದ ಬರ್ಷೆ ಮತ್ತು ಭರಗ್ರಾಮ್ ಗಳನ್ನು ಪೋರ್ಚುಗೀಸ್ ಕಪಿಮುಷ್ಠಿಯಿಂದ ಮುಕ್ತಗೊಳಿಸಿದರು. ದೀಪೂಜಿಯ ಸ್ವಾತಂತ್ರ್ಯ ಹೋರಾಟ ಮತ್ತು ಅವರ ಯಶಸ್ಸು ಹಲವು ದೇಸಾಯಿಗಳು ಮತ್ತು ಗಾಂವ್‌ಕರ್‌ಗಳನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿತು. ದೀಪೂಜಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಬ್ರಿಟಿಷರ ವಿರುದ್ಧವೂ ಸಿಡಿದೆದ್ದರು. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಸಾವಂತವಾಡಿ, ಕಾರವಾರ, ಸೂಪಾ, ಮಂಗಳೂರು ಇತ್ಯಾದಿ ಕಡೆಗಳಲ್ಲೂ ಹೀರೋ ಆಗಿ ಮೆರೆದರು. ಇದರಿಂದಾಗಿ ಬ್ರಿಟಿಷರು ಕೂಡಾ ದೀಪೂಜಿಯ ಕಾರ್ಯಚಟುವಟಿಕೆಗಳ ವಿರುದ್ಧ ಅಸಂತುಷ್ಟರಾಗಿದ್ದರು.
1855ರ ಫೆಬ್ರವರಿಯಲ್ಲಿ ಪೋರ್ಚುಗೀಸ್ ಸರ್ಕಾರ ದೀಪೂಜಿಯನ್ನು ಹಿಡಿದುಕೊಟ್ಟವರಿಗೆ 1500 ರೂ. ಬಹುಮಾನ ಕೊಡುವುದಾಗಿ ಘೋಷಿಸಿತು. ಮುಂದಿನ ತಿಂಗಳು ಮಂಗಳೂರು ಜಿಲ್ಲೆಯಲ್ಲಿರುವ ಸರ್ಕಾರಿ ಸುಂಕದ ಕಟ್ಟಡದ ಮೇಲೆ ದೀಪೂಜಿಯ ಪಡೆಗಳು ದಾಳಿ ಮಾಡಿದವು. ಹೀಗೆ ದೀಪೂಜಿ ಅತ್ತ ಪೋರ್ಚುಗೀಸರು ಹಾಗೂ ಇತ್ತ ಬ್ರಿಟಿಷರಿಬ್ಬರಿಂದಲೂ ತಪ್ಪಿಸಿಕೊಂಡು ಅವರ ಕೆಂಗಣ್ಣಿಗೆ ಗುರಿಯಾಗಿ ಉಳಿದಿದ್ದರು.
ವಿರೋಧಿಗಳ ಪಾಲಿಗೆ ದೀಪೂಜಿ ರಾಣೆ ದಿನೇದಿನೇ ಬಲಶಾಲಿಯಾಗುತ್ತಿದ್ದು ಆತನನ್ನು ಬಂಧಿಸುವುದು ಕಷ್ಟಕರವೆನಿಸಿತ್ತು. ಪೋರ್ಚುಗೀಸ್ ಮತ್ತು ಬ್ರಿಟಿಷ್ ಹಿಡಿತದ ಸಂಸ್ಥಾನಗಳಲ್ಲಿ ದೀಪೂಜಿ ರಾಣೆಯ ಪ್ರಭಾವ ಹೆಚ್ಚಾಗುತ್ತಲೇ ಇತ್ತು. ಬ್ರಿಟಿಷ್ ಮತ್ತು ಪೋರ್ಚುಗೀಸ್ ಸೈನ್ಯಗಳ ಜಂಟಿ ಬಲದ ವಿರುದ್ಧ ಗೋವಾದಲ್ಲಿ ರಾಣೆಯ ಪಡೆಗಳು, ಸಾವಂತವಾಡಿಯಲ್ಲಿ ಸಾವಂತರ ಪಡೆಗಳು, ಕಾರವಾರ ಮತ್ತು ಸೂಪಾಗಳಲ್ಲಿ ಫಡ್ನಿಸ್ ಮತ್ತು ಸಿದ್ದಿ ಪಡೆಗಳು ಪರಸ್ಪರ ಬೆಂಬಲಿಸಿ ಸಹಕರಿಸತೊಡಗಿದವು.
ಹಾಗಿದ್ದರೂ 1858ರ ಜುಲೈ ತಿಂಗಳಲ್ಲಿ ದೀಪೂಜಿ ರಾಣೆಯವರ ಕೆಲವು ಬೆಂಬಲಿಗರನ್ನು ಸೆರೆ ಹಿಡಿಯುವಲ್ಲಿ ಪೋರ್ಚುಗೀಸರು ಯಶಸ್ವಿಯಾದರು. ಆದರೂ ದೀಪೂಜಿಯನ್ನು ಆಗ ಸೆರೆ ಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ. ದೀಪೂಜಿಯ ಬಂಧನಕ್ಕಾಗಿ 1858ರ ಸೆಪ್ಟೆಂಬರ್ ನಲ್ಲಿ ಪೋರ್ಚುಗೀಸ್ ಸರ್ಕಾರ 10,000 ರೂ.ಗಳ ಹೆಚ್ಚುವರಿ ಬಹುಮಾನವನ್ನು ಘೋಷಿಸಿತು. 1858ರ ಅಕ್ಟೋಬರ್ ತಿಂಗಳಲ್ಲಿ ಪೋರ್ಚುಗೀಸ್ ಸೈನ್ಯ ಎಲ್ಲೆಡೆಯಿಂದಲೂ ಸುತ್ತುವರೆದಾಗ ದೀಪೂಜಿ ತನ್ನ ಬೆಂಬಲಿಗರೊಂದಿಗೆ ಹೋರಾಡುತ್ತಲೇ ಶರಣಾಗಬೇಕಾಗಿ ಬಂತು.
ಕ್ರಾಂತಿಯ ಪ್ರಧಾನ ನಾಯಕ ದೀಪೂಜಿ ರಾಣೆ ಸೆರೆಯಾದ ಒಂದು ವರ್ಷದ ನಂತರವೂ ಗೋವಾದಲ್ಲಿ ಸ್ವಾತಂತ್ರ್ಯ ಹೋರಾಟ 1859ರ ಕೊನೆಯವರೆಗೆ ಸಾಗಿತು. 1858ರ ಆರಂಭದಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದ ಸಾವಂತರು ಅಂತಿಮವಾಗಿ 1858ರ ನವೆಂಬರ್‌ನಲ್ಲಿ ಪೋರ್ಚುಗೀಸ್ ಸೈನ್ಯಕ್ಕೆ ಶರಣಾದರು. ಅವರನ್ನು ನಂತರ ತಿಮರ್(ಇಂಡೋನೇಷ್ಯಾದ)ನ ಪೋರ್ಚುಗೀಸ್ ಕಾಲೋನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಾಗಿಸಲಾಯಿತು. ಕಾರವಾರ ಮತ್ತು ಸೂಪಾ ಪ್ರದೇಶದಲ್ಲಿ 1860ರ ಜೂನ್‌ವರೆಗೂ ಸ್ವಾತಂತ್ರ್ಯ ಹೋರಾಟ ಮುಂದುವರಿದಿತ್ತು.
ದೀಪೂಜಿಯ ವಂಶಸ್ಥರಾದ ದಾದಾ ರಾಣೆ 1858ರಿಂದ 1899ರವರೆಗೆ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಿದರು. ಕೊನೆಗೆ ಮೊಝಾಂಬಿಕ್ ಎಂಬ ಪೋರ್ಚುಗೀಸರ ಕಾಲೋನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಳುಹಿಸಲಾಯಿತು.
ಗೋವಾದಲ್ಲಿ ಈಗಲೂ ದೀಪೂಜಿ ರಾಣೆಯನ್ನು ಗುಣಗಾನ ಮಾಡುವ ಲಾವಣಿಗಳು ಜನರ ಬಾಯಲ್ಲಿ ಗುನುಗುತ್ತಿರುತ್ತದೆ.