ಆತ ಲಂಡನ್ನಿಗೆ ಹೋಗಿದ್ದು ಇಂಜಿನಿಯರಿಂಗ್ ಉನ್ನತ ವಿದ್ಯಾಭ್ಯಾಸಕ್ಕೆ. ಅಲ್ಲಿನ ಇಂಗ್ಲಿಷ್ ಸಂಸ್ಕೃತಿಯಿಂದ ಪ್ರಭಾವಿತನಾಗಿ ಮೊದಮೊದಲು ಪ್ರಣಯೋನ್ಮಾದದ ಗೀತೆ ಹಾಡುತ್ತಾ ಶುದ್ಧ ಪೋಕರಿಯಂತೆ ವರ್ತಿಸಿದ್ದ. ಪಡ್ಡೆ ಹುಡುಗಿಯರತ್ತ ಕಣ್ಣು ಮಿಟುಕಿಸುತ್ತಾ ಅದರಲ್ಲೇ ಸುಖಸಂತೋಷ ಕಂಡುಕೊಂಡಿದ್ದ. ಆದರೆ ಲಂಡನ್ನಿನಲ್ಲಿದ್ದ ʼಭಾರತ ಭವನʼದ ಸಂಪರ್ಕಕ್ಕೆ ಬಂದ ಮೇಲೆ ಆತನ ಬದುಕಿನ ಶೈಲಿಯೇ ಬದಲಾಯಿತು. ಚಿಂತನೆಯ ದಿಕ್ಕು ರಾಷ್ಟ್ರೀಯತೆ, ದೇಶಪ್ರೇಮದ ಕಡೆಗೆ ಹೊರಳಿತು. ಲಂಡನ್ ನಲ್ಲಿದ್ದಾಗಲೇ ಕರ್ಜನ್ ವಾಯಲಿ ಎಂಬ ದುರಹಂಕಾರಿ ಆಂಗ್ಲ ಅಧಿಕಾರಿಯನ್ನು ತುಂಬಿದ ಸಭೆಯಲ್ಲೇ ಗುಂಡುಹಾರಿಸಿ ತಣ್ಣಗೆ ಕೊಂದು ಹಾಕಿದ. ಕೋರ್ಟು ಗಲ್ಲು ಶಿಕ್ಷೆ ವಿಧಿಸಿದಾಗ ʼವಂದೇ ಮಾತರಂʼ ಎಂದು ಜಯಘೋಷ ಮೊಳಗಿಸಿ ಹುತಾತ್ಮನಾದ. ಅನಂತರ, ಅಸಂಖ್ಯಾತ ದೇಶಭಕ್ತ ಯುವಕರಿಗೆ ʼರೋಲ್ ಮಾಡೆಲ್ʼ ಆದ. ಆತನೇ ಯುವ ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾ.
ಮದನ್ ಲಾಲ್ ಧಿಂಗ್ರಾ ಅಮೃತಸರದ ಪ್ರಖ್ಯಾತ ವೈದ್ಯ. ಬ್ರಿಟಿಷ್ ಆಳರಸರ ಆಪ್ತಬಂದು ಸಾಹಿಬ್ ಡಿತ್ತಾರ ಎರಡನೇ ಸುಪುತ್ರ. ಆತನ ಪ್ರಾಥಮಿಕ ವಿದ್ಯಾಭ್ಯಾಸ ಅಮೃತಸರ, ಲಾಹೋರ್ ಗಳಲ್ಲಿ. ಕೆಲಕಾಲ ಡಾರ್ಜಿಲಿಂಗ್‌ನ ಒಂದು ಇಲಾಖೆಯಲ್ಲಿ ವೃತ್ತಿ ಜೀವನ. ಹೇಳಿಕೇಳಿ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಜನಿಸಿದ ಶ್ರೀಮಂತ ಕುಟುಂಬದ ಧಿಂಗ್ರಾನಿಗೆ ಇಂಗ್ಲೆಂಡ್‌ಗೆ ತೆರಳಿ ಉನ್ನತ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ಬಯಕೆ. ತಂದೆ ʼಎಸ್ʼ ಅಂದರು. ಮತ್ತೆ ಕೇಳಬೇಕೆ? ೧೯೦೬ ನೇ ಇಸವಿ ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸಿಯೇ ಬಿಟ್ಟ. ಅದೇ ವರ್ಷ ಅಕ್ಟೋಬರ್ ೧೯ ರಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ದಾಖಲಾದ.
ಆಗೆಲ್ಲ ಲಂಡನ್‌ಗೆ ಉನ್ನತ ವಿದ್ಯಾಭ್ಯಾಸಕ್ಕೆಂದು ತೆರಳುವ ಯುವಕರನ್ನು ಅಲ್ಲೇ ಬ್ಯಾರಿಸ್ಟರ್ ಪದವಿ ಪಡೆಯಲೆಂದು ಬಂದಿದ್ದ ಮಹಾರಾಷ್ಟ್ರದ ವಿನಾಯಕ ದಾಮೋದರ ಸಾವರ್ಕರ್ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದರು. ಲಂಡನ್‌ನ ರಸ್ತೆಯೊಂದರಲ್ಲಿ ಭಾರತ ಭವನ ಎಂಬ ಕಟ್ಟಡವೊಂದಿತ್ತು. ಅದು ಮುಂದೆ ಸ್ವಾತಂತ್ರ್ಯವೀರ ಸಾವರ್ಕರ್ ಎಂದು ಖ್ಯಾತರಾದ ಸಾವರ್ಕರ್ ಮತ್ತು ಇತರ ಕ್ರಾಂತಿಕಾರಿಗಳ ಚಟುವಟಿಕೆಗಳ ತಾಣವಾಗಿತ್ತು. ಧಿಂಗ್ರಾನಿಗೆ ಸಾವರ್ಕರ್ ಪರಿಚಿತರಾದ ಬಳಿಕ, ಅವರ ವ್ಯಕ್ತಿತ್ವದಿಂದ ಪ್ರಭಾವಿತನಾಗಿ ಅವರ ಭಾಷಣಗಳನ್ನು ಕೇಳತೊಡಗಿದ. ಅವನ ಎದೆಯೊಳಡಗಿದ್ದ ದೇಶಪ್ರೇಮ ಕ್ರಮೇಣ ಚಿಗುರೊಡೆಯತೊಡಗಿತು. ೧೯೦೮ ರ ಏಪ್ರಿಲ್ ವೇಳೆಗೆ ಭಾರತ ಭವನವನ್ನೇ ತನ್ನ ಖಾಯಂ ನಿವಾಸ ಮಾಡಿಕೊಂಡ.
ಒಮ್ಮೆ ಜಪಾನೀಯರ ಶೌರ್ಯ ಪರಾಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ʼನಾವು ಹಿಂದುಗಳೇನು ಕಡಿಮೆಯವರಲ್ಲʼ ಎಂದ ಧಿಂಗ್ರಾ. ಅಲ್ಲಿದ್ದವರಿಗೆ ನಗು ಬಂತು. ಈ ಶೋಕಿಲಾಲ ಹೇಳಿದರೆ ನಂಬಬೇಕೆ? ಎಂದೊಬ್ಬರು ಕಾಲೆಳೆದರು. ʼನಾನು ಹೇಳೋದು ನಿಜ, ಬೇಕಿದ್ದರೆ ಪರೀಕ್ಷಿಸಿʼ ಎಂದ ಧಿಂಗ್ರಾ. ಸರಿ, ಪರೀಕ್ಷೆ ನಡೆದೇಬಿಡಲೆಂದು ಒಬ್ಬರು ಒಂದು ಉದ್ದನೆಯ ಸೂಜಿ ತಂದು ಅವನ ಅಂಗೈಯನ್ನು ಮೇಜಿನ ಮೇಲಿಟ್ಟು ಗಟ್ಟಿಯಾಗಿ ಚುಚ್ಚಿದರು. ಸೂಜಿ ಅಂಗೈಯಿಂದ ಕೆಳಗಿಳಿದು ಮೇಜಿನ ಹಲಗೆಗೆ ತಲುಪಿತು. ರಕ್ತ ಚಿಮ್ಮಿತು. ಆದರೆ ಧಿಂಗ್ರಾನ ಮುಖದ ಮೇಲಿದ್ದ ಮಂದಹಾಸ ಮರೆಯಾಗಲಿಲ್ಲ.
ಇನ್ನೊಮ್ಮೆ ಧಿಂಗ್ರಾ ಭಾರತ ಭವನದ ಮೇಲಿನ ಮಹಡಿಯಲ್ಲಿ ಬಾಂಬ್ ತಯಾರಿಕೆಯ ಪ್ರಯೋಗಾಲಯದಲ್ಲಿದ್ದ. ಅಲ್ಲಿ ಸಾವರ್ಕರ್ ಜೊತೆ ಮಾತಿನಲ್ಲಿ ಮಗ್ನನಾಗಿದ್ದ. ಅತ್ತ ಒಲೆಯ ಮೇಲೆ ಗಾಜಿನ ಪಾತ್ರೆಯಲ್ಲಿ ರಾಸಾಯನಿಕ ಮಿಶ್ರಣ ಕುದಿಯುತ್ತಿತ್ತು. ಅದರ ಉಷ್ಣತೆ ೩೦೦ ಡಿಗ್ರಿ ಸೆಂಟಿಗ್ರೇಡ್ ಇನ್ನೇನು ದಾಟುವುದರಲ್ಲಿತ್ತು. ಹಾಗೇನಾದರೂ ಆಗಿದ್ದಿದ್ದರೆ ಅಲ್ಲಿ ಆಸ್ಫೋಟವಾಗಿ ಅನಾಹುತ ಸಂಭವಿಸುತ್ತಿತ್ತು. ಭಾರತ ಭವನದ ಗುಟ್ಟು ರಟ್ಟಾಗುತ್ತಿತ್ತು. ಸಾವ ರ್ಕರ್ ಕೂಡಲೇ ಇಕ್ಕಳಕ್ಕಾಗಿ ಹುಡುಕಲಾರಂಭಿಸಿದರು. ತಕ್ಷಣ ಅದು ಸಿಗಲಿಲ್ಲ. ಅಷ್ಟರೊಳಗೇ ಧಿಂಗ್ರಾ ತನ್ನೆರಡೂ ಕೈಗಳಿಂದ ಬಿಸಿಯಾದ ಆ ಗಾಜಿನ ಪಾತ್ರೆಯನ್ನು ಹಿಡಿದು ಒಲೆಯಿಂದ ಕೆಳಗಿಳಿಸಿದ. ಆತನ ಕೈ ಸೀದು ಕೆಂಪಗಾಗಿತ್ತು. ಮಾಂಸ ಸುಟ್ಟ ವಾಸನೆ ಬರುತ್ತಿದ್ದರೂ ಮದನ್ ಲಾಲ್ ಮಾತ್ರ ಶಾಂತನಾಗಿದ್ದ. ಸಾವರ್ಕರ್ ಮನದಲ್ಲೇ ʼಶಹಭಾಸ್ʼ ಎಂದರು.
ಭಾರತದಲ್ಲಿ ಆಗ ಕುದಿಕುದಿ ವಾತಾವರಣ. ಖುದಿರಾಮ್ ಬೋಸ್, ಪ್ರಫುಲ್ಲ ಚಂದ್ರ ಚಾಕಿಗಳು ಮೊಟ್ಟಮೊದಲು ಬಾಂಬ್ ಸಿಡಿಸಿದ್ದರು. ಕ್ರಾಂತಿಕಾರಿಗಳ ಬಾಯಲ್ಲಿ ಆಗ ನಲಿಯುತ್ತಿದ್ದುದು ಅನುಶೀಲನ ಸಮಿತಿ, ಅಭಿನವ ಭಾರತ, ಲೋಕಮಾನ್ಯ ತಿಲಕ್, ಲಾಲಾಲಜಪತರಾಯ್, ವಂದೇಮಾತರಂ ಮೊದಲಾದ ಕ್ರಾಂತಿಗೆ ಸಂಬಂಧಿಸಿದ ಶಬ್ದಗಳೇ.
೧೯೦೭ ರ ಮೇ ತಿಂಗಳಿನಲ್ಲಿ ಭಾರತ ಭವನದಲ್ಲಿ ಸಾವರ್ಕರ್ ʼ೧೮೫೭ ರ ಮಹಾ ಸ್ವಾತಂತ್ರ್ಯ ಸಂಗ್ರಾಮʼದ ಸುವರ್ಣೋತ್ಸವ ಆಚರಿಸಿದರು.
ಒಮ್ಮೆ ಭಾರತ ಭವನದ ಹೊರಗೆ ಸಿನಿಮಾ ಗೀತೆಯ ಗ್ರಾಮಾಫೋನ್ ರೆಕಾರ್ಡ್ ಹಚ್ಚಿ ಪಡ್ಡೆ ಹುಡುಗಿಯರೊಂದಿಗೆ ಕುಣಿಯುತ್ತಿದ್ದ ಧಿಂಗ್ರಾನನ್ನು ನೋಡಿ ಸಾವರ್ಕರ್ ಸಿಡಿಮಿಡಿಗೊಂಡು ಚೆನ್ನಾಗಿ ಬೈದಿದ್ದರು. ಕೆಲದಿನಗಳವರೆಗೆ ಧಿಂಗ್ರಾ ಸಾವರ್ಕರ್‌ರಿಗೆ ಮುಖ ತೋರಿಸಿರಲಿಲ್ಲ. ಒಂದು ಸಂಜೆ ಇದ್ದಕ್ಕಿದ್ದಂತೆ ಭಾರತ ಭವನದಲ್ಲಿ ಪ್ರತ್ಯಕ್ಷನಾದ ಧಿಂಗ್ರಾ ʼಹುತಾತ್ಮನಾಗುವ ಸಮಯ ಬಳಿ ಸಾರಿದೆಯೆ? ನಿಮಗೇನನಿಸುತ್ತದೆ?ʼ ಎಂದು ತಟ್ಟನೆ ಕೇಳಿದ. ʼಹುತಾತ್ಮನಾಗಬಯಸುವವನ ಹೃದಯದಲ್ಲಿ ಅದು ಸುಳಿದಿದ್ದರೆ ಸಮಯ ಬಂದಿದೆಯೆಂದೇ ಅರ್ಥʼ ಎಂದು ಸಾವರ್ಕರ್ ಗಂಭೀರವಾಗಿಯೇ ಹೇಳಿದರು. ʼಹಾಗಿದ್ದರೆ ನಾನು ಸಿದ್ಧʼ ಎಂದ ಮದನ್ ಲಾಲ್. ಅದಕ್ಕೆ ಸಕಾರಣವೂ ಇತ್ತು.
೧೯೦೯ ರ ಜೂನ್ ೮ ರಂದು ಸಾವರ್ಕರರ ಹಿರಿಯಣ್ಣ ಬಾಬಾ ಸಾಹೇಬ ಸಾವರ್ಕರ್‌ಗೆ ಕರಿನೀರಿನ ಶಿಕ್ಷೆ ವಿಧಿಸಿ ಅಂಡಮಾನಿನ ನರಕದ ಜೈಲಿಗೆ ತಳ್ಳಲಾಗಿತ್ತು. ಈ ವಿದ್ಯಮಾನವು ಧಿಂಗ್ರಾನ ಮನಸ್ಸನ್ನು ಉದ್ರೇಕಗೊಳಿಸಿತ್ತು. ಮುಂದಿನ ಮಹತ್ ಕಾರ್ಯಕ್ಕೆ ಧಿಂಗ್ರಾನ ಭರದ ಸಿದ್ಧತೆ ಸಾಗಿತು.
ಮೊದಲು ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ನಿನ ಟೈಪಿಸ್ಟ್ ಏಮಾ ಜೋಸೆಫಿನ್ ಬೆಕ್ ಎಂಬ ಚೆಲುವೆಯೊಂದಿಗೆ ಸ್ನೇಹ ಬೆಳೆಸಿದ. ಅದರ ಸದಸ್ಯನೂ ಆದ. ಭಾರತೀಯ ವಿದ್ಯಾರ್ಥಿಗಳನ್ನು ಆಂಗ್ಲರ ಗುಲಾಮರನ್ನಾಗಿ ಮಾಡುವುದೇ ಈ ಅಸೋಸಿಯೇಷನ್ನಿನ ಮುಖ್ಯ ಗುರಿಯಾಗಿತ್ತು. ಅಲ್ಲೊಬ್ಬ ಸರ್ ವಿಲಿಯಂ ಕರ್ಜನ್ ವಾಯಲಿ ಎಂಬ ಪರಂಗಿ ವ್ಯಕ್ತಿ ಇದ್ದ. ಮೊದಲು ಭಾರತದಲ್ಲಿ ಸೈನ್ಯದಲ್ಲಿದ್ದ ಆತ ಈಗ ಭಾರತ ಸರ್ಕಾರದ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿಯಾಗಿದ್ದ. ಭಾರತೀಯರನ್ನು ಬ್ರಿಟಿಷರ ದಾಸಾನುದಾಸರನ್ನಾಗಿ ಮಾಡುವುದೇ ಅವನ ಕಾಯಕ. ಧಿಂಗ್ರಾನ ಕಣ್ಣು ಅವನತ್ತ ತಿರುಗಿತು.
ಇದಕ್ಕೂ ಮೊದಲು ಧಿಂಗ್ರಾ ಭಾರತದ ವೈಸರಾಯ್ ಜಾರ್ಜ್ ಕರ್ಜನ್‌ನನ್ನು ಕೊಲೆ ಮಾಡಬೇಕೆಂದಿದ್ದ. ಬಂಗಾಳದ ಮಾಜಿ ಗವರ್ನರ್ ಬ್ಯಾಂಪಿಲ್ಡ್ ಫುಲ್ಲರ್‌ನನ್ನೂ ಯಮಸದನಕ್ಕಟ್ಟಬೇಕೆಂದುಕೊಂಡಿದ್ದ. ಅವರಿಬ್ಬರೂ ಭಾರತೀಯ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಕಿರುಕುಳ ಅಷ್ಟಿಷ್ಟಲ್ಲ, ಆದರೆ ಧಿಂಗ್ರಾನ ಯೋಜನೆ ಸಫಲವಾಗದೆ ಕೊನೆಗೆ ಕರ್ಜನ್ ವಾಯಲಿಯನ್ನು ಮುಗಿಸಲು ಸಿದ್ಧನಾದ.
೧೯೦೯ ರ ಜುಲೈ ೧. ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ನಿನ ವಾರ್ಷಿಕೋತ್ಸವ ಇಂಪೀರಿಯಲ್ ಇನ್‌ಸ್ಟಿಟ್ಯೂಟ್‌ನ ಜಹಾಂಗೀರ್ ಹಾಲ್‌ನಲ್ಲಿ ನಡೆಯುವುದಿತ್ತು. ಧಿಂಗ್ರಾ ಮೊದಲೇ ಆ ಕಾರ್ಯಕ್ರಮದ ಆಧಿಕೃತ ಆಮಂತ್ರಣ ಗಿಟ್ಟಿಸಿ ನೀಲಿ ಪಂಜಾಬಿ ಪೇಟ, ಗಾಗಲ್ಸ್ ಧರಿಸಿ ಸಿದ್ಧನಾದ. ಮೂರು ಪಿಸ್ತೂಲು, ಎರಡು ಚೂರಿಗಳನ್ನು ಕೋಟಿನ ಜೇಬಿನೊಳಗೆ ಅಡಗಿಸಿಟ್ಟುಕೊಂಡು ಸಭೆಗೆ ಬಂದ. ಏಮಾ ಬೆಕ್‌ಗೆ ಹಾಯ್ ಎಂದು ಕೈಬೀಸಿ ಮುಗುಳ್ನಕ್ಕ.
ಸಭೆ ಪ್ರಾರಂಭವಾಗಿ ಭಾಷಣ, ಗಾಯನ, ನೃತ್ಯ ಇತ್ಯಾದಿ ಮುಗಿದು ವಾಯಲಿ ವೇದಿಕೆಯಿಂದ ಕೆಳಗಿಳಿದು ಅಲ್ಲಿದ್ದವರೊಂದಿಗೆ ನೃತ್ಯ ಆರಂಭಿಸಿದ. ಧಿಂಗ್ರಾ ಕೂಡ ಅಲ್ಲಿಗೆ ಬಂದವನೇ ಸರಕ್ಕನೆ ಪಿಸ್ತೂಲು ಹೊರತೆಗೆದು ಒಂದಾದ ಮೇಲೊಂದರಂತೆ ಐದು ಗುಂಡುಗಳನ್ನು ವಾಯಿಲಿಯತ್ತ ಗುರಿಯಿಟ್ಟು ಹಾರಿಸಿದ. ವಾಯಿಲಿ ವಿಕಾರವಾಗಿ ಅರಚುತ್ತಾ ಕೆಳಗೆ ಬಿದ್ದ. ಮುಖ ಛಿದ್ರವಾಗಿತ್ತು. ಬಲಗಣ್ಣು ಪೂರ್ತಿ ಕಿತ್ತು ಹೋಗಿತ್ತು. ತನ್ನ ಉದ್ದೇಶ ಪೂರ್ತಿಯಾದ ನಂತರ ಮದನ್‌ಲಾಲ್ ನಿಶ್ಚಿಂತನಾಗಿದ್ದ. ಸಭಾಂಗಣ ಮಾತ್ರ ತತ್ತರಿಸಿಹೋಗಿತ್ತು. ಧಿಂಗ್ರಾನನ್ನು ಹಿಡಿಯಲು ಯಾರೋ ಧಾವಿಸಿ ಬಂದರು. ʼಸ್ವಲ್ಪ ತಾಳಿ, ಗಾಗಲ್ಸ್ ಜಾರಿದೆ, ಸರಿಪಡಿಸಿಕೊಳ್ಳುತ್ತೇನೆʼ ಎಂದ ಧಿಂಗ್ರಾ. ಆತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಲಂಡನ್ನಿನ ಜಹಾಂಗೀರ್ ಹಾಲ್‌ನಲ್ಲಿ ಹಾರಿದ ಗುಂಡುಗಳು ಅಲ್ಲಷ್ಟೇ ಅಲ್ಲ, ಭಾರತ ಹಾಗೂ ಯುರೋಪ್‌ನಲ್ಲೂ ಬ್ರಿಟಿಷರು ಹೆದರಿ ಗಡಗಡ ನಡುಗುವಂತೆ ಮಾಡಿತು. ಸಿಂಹದ ಗುಹೆಗೇ ನುಗ್ಗಿ, ಅದರ ಗಡ್ಡ ಹಿಡಿದು ಜಗ್ಗಿ ಕೊಂದುಹಾಕಿದ ಸಾಹಸಸಿಂಹ ಧಿಂಗ್ರಾನ ಬಗ್ಗೆ ಕ್ರಾಂತಿಕಾರಿಗಳಿಗೆ ದೇಶಪ್ರೇಮಿಗಳಿಗೆ ಹೆಮ್ಮೆಯೋ ಹೆಮ್ಮೆ. ವಾರೆವ್ಹಾಹ್, ಇದ್ದರೆ ಧಿಂಗ್ರಾನಂತಿರಬೇಕು ಎಂದು ಬಿಸಿರಕ್ತದ ದೇಶಭಕ್ತರು ಮಾತಾಡಿಕೊಂಡರು.
ಧಿಂಗ್ರಾನ ತಂದೆ ಡಾ.ದಿತ್ತಾ ಮಲ್ ಧಿಂಗ್ರಾ ಮಾತ್ರ ʼಆತ ನನ್ನ ಮಗನೇ ಅಲ್ಲ, ಮೂರ್ಖ, ನನ್ನ ಮುಖಕ್ಕೆ ಮಸಿ ಬಳಿದಿದ್ದಾನೆʼ ಎಂದು ನಿಂದಿಸಿದರು. ʼಟೈಮ್ಸ್ʼ ಪತ್ರಿಕೆಯಲ್ಲಿ ಕ್ರಾಂತಿಕಾರಿ ಶ್ಯಾಮಜಿ ಕೃಷ್ಣವರ್ಮ ʼಧಿಂಗ್ರಾನ ಈ ಕೃತ್ಯಕ್ಕೆ ನನ್ನ ಸಹಮತ ಇದೆ, ಆತನನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮನೆಂದು ನಾನು ಪರಿಗಣಿಸುವೆʼ ಎಂದು ಬರೆದರು.
ಓಲ್ಡ್ ಬೈಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ತೀರ್ಪು ಇನ್ನೇನಿರಲು ಸಾಧ್ಯ? ಮದನ್‌ಲಾಲ್ ಧಿಂಗ್ರಾನಿಗೆ ಫಾಸಿ ಶಿಕ್ಷೆ! ೧೯೦೯ ರ ಆಗಸ್ಟ್ ೧೭ ರಂದು ಆತನನ್ನು ಪೆಂಟೋನ್ ವಿಲ್ಲೆಯಲ್ಲಿ ಗಲ್ಲಿಗೇರಿಸಲಾಯಿತು. ಗಲ್ಲಿಗೇರುವ ಮುನ್ನ ಆತ ನೀಡಿದ ಹೇಳಿಕೆ ಚರಿತ್ರಾರ್ಹ: “ನಾನು ಬ್ರಿಟಿಷರ ರಕ್ತ ಹರಿಸಲು ಯತ್ನಿಸಿದ್ದು ನಿಜ. ಅದು ನನ್ನ ದೇಶಕ್ಕೆ ಮಾಡಿದ ಅಪಮಾನದ ವಿರುದ್ಧ ನನ್ನ ಸೇಡು. ನನ್ನ ದೇಶದ ಅಪಮಾನ ನನ್ನ ದೇವರ ಅಪಮಾನ ಎಂದು ಹಿಂದುವಾದ ನನ್ನ ಭಾವನೆ. ಮಾತೃಭೂಮಿಯ ಕಾರ್ಯ ಶ್ರೀರಾಮನ, ಶ್ರೀಕೃಷ್ಣನ ಕಾರ್ಯ. ಆ ಕಾರ್ಯದಲ್ಲಿ ನಾನು ಹೆಮ್ಮೆಯಿಂದ ಹುತಾತ್ಮನಾಗುತ್ತಿದ್ದೇನೆ. ವಂದೇ ಮಾತರಂ”.
ಮುಂದೆ ಬ್ರಿಟನ್ನಿನ ಪ್ರಧಾನಿಗಳಾದ ಡೇವಿಡ್ ಲಾಯ್ಡ್ ಜಾರ್ಜ್, ವಿನ್‌ಸ್ಟನ್ ಚರ್ಚಿಲ್ ಧಿಂಗ್ರಾನ ಸಾಹಸಕೃತ್ಯಕ್ಕೆ ಮೆಚ್ಚಿಕೊಂಡು ʼಅಬ್ಬಾʼ ಎಂದು ಉದ್ಗಾರ ತೆಗೆದರು. ಆಂಗ್ಲ ಸಾಹಿತಿ ಡಬ್ಲ್ಯು.ಎಸ್.ಬ್ಲಂಟ್ “ಭಾರತದಲ್ಲಿ ೫೦೦ ಧಿಂಗ್ರಾಗಳು ಹುಟ್ಟಿದರೆ ಸಾಕು, ಅದು ಸ್ವಾತಂತ್ರ್ಯ ಗಳಿಸುತ್ತದೆ. ಪ್ರಾಚೀನ ಕ್ರಿಶ್ಚಿಯನ್ ಹುತಾತ್ಮರಾರೂ ಧಿಂಗ್ರಾನಷ್ಟು ಅದಮ್ಯ ಧೈರ್ಯ ಹೊಂದಿರಲಿಲ್ಲ” ಎಂದು ಬರೆದಿದ್ದಾನೆ.
ಇದನ್ನೂ ಓದಿ | Amrit Mahotsav | ಮ್ಯಾನ್ಸನ್‌ನ ರುಂಡ ಕತ್ತರಿಸಿ ಹಾಕಿದ ನರಗುಂದದ ಕೇಸರಿ ಬಾಬಾಸಾಹೇಬ