1980ರ ದಶಕದ ಅಂತ್ಯದಲ್ಲಿ ಇಂಗ್ಲೆಂಡಿನಲ್ಲಿ ಅಲ್ಲಿಯ ಡೇರಿಯಲ್ಲಿದ್ದ ದನಗಳು ಇದ್ದಕ್ಕಿದ್ದಂತೆ ಸಾಯಲು ಪ್ರಾರಂಭಿಸಿದವು. ನೋಡ ನೋಡುತ್ತಿದ್ದಂತೆ ಇವುಗಳ ಸಾವಿನ ಪ್ರಮಾಣ ಹಲವು ಲಕ್ಷಗಳನ್ನು ಮೀರತೊಡಗಿತು. ಒಂದು ಅಧಿಕೃತ ಮಾಹಿತಿಯ ಪ್ರಕಾರ ಸುಮಾರು ಒಂದು ಲಕ್ಷದ ಎಪ್ಪತ್ತೊಂಬತ್ತು ಸಾವಿರ ಹಸುಗಳು ತರಗೆಲೆಗಳಂತೆ ಸತ್ತು ಬಿದ್ದಿದ್ದವು. ಹೀಗೆ ಸಾವಿನ ಸರಮಾಲೆ ಇಂಗ್ಲೆಂಡ್ ದಾಟಿ ಐರ್ಲೆಂಡ್, ಫ್ರಾನ್ಸ್, ಪೋರ್ಚುಗಲ್, ಸ್ವಿಡ್ಜರ್‌ಲ್ಯಾಂಡ್ ಹಾಗೂ ಸ್ಪೇನ್‌ಗೂ ವಿಸ್ತರಿಸತೊಡಗಿತು. ಅಲ್ಲಿಯೂ ಸಹ ಸಾವಿರಾರು ಸಂಖ್ಯೆಯಲ್ಲಿ ಹಸುಗಳು ವಿನಾಕಾರಣ ಸಾಯತೊಡಗಿದವು. ಬರಬರುತ್ತಾ ಪ್ರಪಂಚದಾದ್ಯಂತ ಈ ರೀತಿಯ ಹಸುಗಳ ಸಾವು ವರದಿಯಾಗತೊಡಗಿತು.
ದನ ಸಾವಿನ ಸಂಖ್ಯೆಗೆ ಸಾಕ್ಷಿಯಾಗಿದ್ದ ಇಂಗ್ಲೆಂಡ್ ಇದರಿಂದ ಕಂಗಾಲಾಗಿ ತುರ್ತಾಗಿ ಇದ್ದಕ್ಕಿದ್ದಂತೆ ಹಸುಗಳು ಸಾಯುತ್ತಿರುವುದಕ್ಕೆ ಕಾರಣವನ್ನು ಹುಡುಕಲು ಸಂಶೋಧಕರ ದಂಡನ್ನೇ ನೇಮಿಸಿತು. ಹೀಗೆ ನೇಮಕಗೊಂಡ ಸಂಶೋಧಕರ ನಾನಾ ಸಂಶೋಧನೆಗಳ ನಂತರ ದನಗಳ ಸಾವಿಗೆ ಕಾರಣ ತಿಳಿದು ಬಂದಿತು. ಹೀಗೆ ಸತ್ತವೆಲ್ಲವಕ್ಕೂ ಹಿಂದೆಂದೂ ಕಂಡಿರದ ಕಾಯಿಲೆಯೊಂದು ಬಾಧಿಸಿದ್ದು ದೃಢಪಟ್ಟಿತು. ಆ ಕಾಯಿಲೆಗೆ ‘ಹುಚ್ಚು ರೋಗ’ ಅಥವಾ ‘ಮ್ಯಾಡ್ ಕೌ ಡಿಸೀಸ್’ ಎಂಬುದಾಗಿ ನಂತರ ಹೆಸರಿಡಲಾಯಿತು.
ಸ್ವಸ್ಥವಾಗಿದ್ದ ದನಗಳು ಹೀಗೆ ಏಕಾಏಕಿ ಸಾಯಲು ಕಾರಣವಾದ ಈ ಕಾಯಿಲೆ ಬಂದದ್ದಾದರೂ ಹೇಗೆ ಎಂಬುದಕ್ಕೆ ಸರ್ಕಾರ ನೇಮಿಸಿದ್ದ ಆ ಸಮಿತಿ ಕೂಲಂಕುಷವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ಒಂದು ವರದಿಯನ್ನು ನೀಡಿತು. ನೀಡಿದ ಆ ವರದಿಯಲ್ಲಿ ದನಗಳಿಗೆ ಪೌಷ್ಟಿಕಾಂಶದ ಹೆಸರಲ್ಲಿ ನೀಡುತ್ತಿರುವ ಆಹಾರ ವ್ಯವಸ್ಥೆಯೇ ಇದಕ್ಕೆಲ್ಲಾ ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹಾಗೆಯೇ ಆಹಾರದ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರುವಂತೆಯೂ ಸೂಚಿಸಿತು.
ಭಾಗಶಃ ವಿದೇಶಿಯರಿಗೆ ಹಸುವೆಂಬುದು ಒಂದೋ ಹಾಲು ಕೊಡುವ ಯಂತ್ರ, ಇಲ್ಲವೇ ಅದೊಂದು ಮಾಂಸದ ಮುದ್ದೆಯಷ್ಟೇ. ಹೀಗಾಗಿ ಅಂದು ಇಂಗ್ಲೆಂಡ್‌ನ ಡೇರಿ ಉದ್ದಿಮೆದಾರರಿಗೆ ಹಸುವೆಂಬ ಪ್ರಾಣಿ ಹಾಲು ಕೊಡುವುದನ್ನು ನಿಲ್ಲಿಸಿದ ನಂತರ ಇಲ್ಲವೇ ಅಸ್ವಸ್ಥವಾದ ನಂತರ ಅದನ್ನೇನು ಮಾಡುವುದು ಎಂಬುದೇ ದೊಡ್ಡ ತಲೆನೋವಾಗಿತ್ತು. ಇದರೊಂದಿಗೆ ನಾನಾ ಕಾಯಿಲೆಯಿಂದ ಪ್ರತಿ ನಿತ್ಯ ಸಾಯುತ್ತಿದ್ದ ಒಂದಷ್ಟು ಗೋವುಗಳ ಮೃತ ದೇಹದ ವಿಲೇವಾರಿ ಮತ್ತಷ್ಟು ಜಟಿಲವಾಗಿತ್ತು.
ಇಂತಹ ಸಂದರ್ಭದಲ್ಲಿ ಅವರಿಗೆ ಅನುಪಯುಕ್ತವಾದ ಈ ದನಗಳ ಮೃತ ದೇಹದಿಂದ ಪ್ರತಿನಿತ್ಯ ಇರುವ ದನಗಳಿಗೆ ಬೇಕಾದ ಅವಶ್ಯಕ ಪೌಷ್ಠಿಕ ಆಹಾರವನ್ನೇಕೆ ತಯಾರಿಸಬಾರದು ಎಂಬ ಯೋಜನೆಯೊಂದು ಹೊಳೆಯಿತು. ಹೀಗೆ ಹೊಳೆದಿದ್ದೆ ತಡ ಅಹಿಂಸೆಯನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಅಲ್ಲಿಯ ಡೇರಿ ಉದ್ದಿಮೆದಾರರು ತಮ್ಮಲ್ಲಿ ಸಾಯುತ್ತಿದ್ದ ಹಾಗೂ ಅನುಪಯುಕ್ತವೆಂದು ತೋರಿದ ಹಸುಗಳ ಕಳೆಬರಹವನ್ನು ಡೈಜೆಸ್ಟರ್‌ನಲ್ಲಿ ಹಾಕಿ ಇಡೀ ದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಲು ಪ್ರಾರಂಭಿಸಿದರು. ತದ ನಂತರ ಅದಕ್ಕೊಂದಷ್ಟು ರಾಸಾಯನಿಕ ಬೆರೆಸಿ ಅದನ್ನೇ ಪಶು ಆಹಾರವನ್ನಾಗಿ ಪರಿವರ್ತಿಸಿ, ಅದನ್ನೆಲ್ಲಾ ಅಲ್ಲಿಯ ಹಸುಗಳಿಗೆ ತಿನಿಸಲು ಪ್ರಾರಂಭಿಸಿದರು.
ಹೀಗೆ ಸೋಂಕಿತ ಹಾಗೂ ಅನುಪಯುಕ್ತ ಎಂದು ಪರಿಗಣಿಸಲಾದ ಜಾನುವಾರುಗಳ ಮಾಂಸ ಮತ್ತು ಅವುಗಳ ಮೂಳೆಗಳಿಂದ ತಯಾರಿಸಲಾದ ಪಶು ಆಹಾರವನ್ನು ಪ್ರಾಣಿಗಳು ಸಹ ಹೆಚ್ಚಾಗಿಯೇ ತಿನ್ನಲು ಪ್ರಾರಂಭಿಸಿದ್ದವು.
ಡೇರಿ ಉದ್ದಿಮೆದಾರರಿಗೆ ಈ ಪ್ರಯೋಗ ಪ್ರಾರಂಭದಲ್ಲಿ ಉತ್ತಮ ಹಾಗೂ ಲಾಭದಾಯಕವಾಗಿ ಕಂಡುಬಂದಿತು. ಆದರೆ ಒಂದಷ್ಟು ದಿನ ಕಳೆದಂತೆ ಇದರಿಂದ ಉಂಟಾಗುತ್ತಿದ್ದ ದುಷ್ಟರಿಣಾಮ ನಿಯಂತ್ರಣಕ್ಕೆ ಸಿಗದಂತಾಯಿತು.
ಅನಾರೋಗ್ಯ ಪೀಡಿತ ಹಸುಗಳ ಮಾಂಸ ಮತ್ತು ಅದರಿಂದ ಪಡೆದ ಇನ್ನಿತರೆ ಉತ್ಪನ್ನಗಳ ಸೇವನೆಯಿಂದ ರೋಗ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತಿರುವುದು ದೃಢಪಟ್ಟಿತು. ರೋಗದ ಲಕ್ಷಣ ಬರಬರುತ್ತಾ ದನಗಳಿಂದ ಮನುಷ್ಯರಲ್ಲಿಯೂ ಕಾಣಿಸಿಕೊಳ್ಳಲಾರಂಭಿಸಿತು. ಹೀಗೆ ಮಾನವ ಸೃಷ್ಠಿತ ಒಂದು ಪ್ರಯೋಗದಿಂದ ಅಲ್ಲಿಯ ಡೇರಿ ಉದ್ಯಮದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗತೊಡಗಿತು. ಸರ್ಕಾರದ ಬಳಿ ಇದ್ದ ಯಾವುದೇ ಚಿಕಿತ್ಸಾ ವಿಧಾನ ಫಲಕಾರಿಯಾಗದೇ ಸಮಸ್ಯೆ ಇನ್ನಷ್ಟು ಉಲ್ಬಣಿಸತೊಡಗಿತು.
ಬಾಧಿಸಿದ ಹುಚ್ಚು ರೋಗಕ್ಕೆ ಔಷಧಿ ಕಂಡು ಹಿಡಿಯುವಲ್ಲಿ ಸರ್ಕಾರ ಸಂಪೂರ್ಣವಾಗಿ ಸೋತಿತ್ತು. ಇದರಿಂದ ಬೇರೆ ದಾರಿ ಕಾಣದೆ ಸಾವಿರಾರು ಹಸುಗಳನ್ನು ವಿನಾಕಾರಣ ಹತ್ಯೆಮಾಡಿ ದೊಡ್ಡದೊಂದು ಹೊಂಡದಲ್ಲಿ ಹೂಳುವ ಕಾರ್ಯಕ್ಕೆ ಸರ್ಕಾರ ಮುಂದಾಯಿತು. ಇಂತಹ ವಿಷಮ ಸ್ಥಿತಿಯಲ್ಲಿ ಆಗ ಅಲ್ಲಿಯ ಸಂಶೋಧಕರಿಗೆ ಕಂಡಿದ್ದೇ ಇಲ್ಲಿಯ ಅತ್ಯಂತ ಪ್ರಾಚೀನ ಹಾಗೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹತ್ಯೆಗೊಳಗಾಗುತ್ತಾ ತನ್ನ ಸಂತತಿಯನ್ನೇ ಇನ್ನಿಲ್ಲವಾಗಿಸಿಕೊಳ್ಳುತ್ತಿರುವ ಹಳ್ಳಿಕಾರ್ ಎಂಬ ಗೋವಿನ ತಳಿ.
ಭಾರತೀಯರಿಗೆ ಅದರಲ್ಲೂ ಕರ್ನಾಟಕದ ಜನರ ಅಸಡ್ಡೆಯ ತಳಿಯಾದ ಹಳ್ಳಿಕಾರ್ ವಿದೇಶಿ ಸಂಶೋಧಕರಿಗೆ ಸಂಜೀವಿನಿಯಾಗಿ ಕಂಡಿತು. ಪ್ರಾಚೀನ ಮೂಲ ತಳಿಗಳಲ್ಲಿ ಒಂದಾದ ಈ ತಳಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುವುದನ್ನು ಅಲ್ಲಿಯ ವಿಜ್ಞಾನಿಗಳು ಸತತ ಸಂಶೋಧನೆಗಳಿಂದ ಕಂಡುಕೊಂಡರು. ಈ ತಳಿಯ ಜೀನ್‌ನಲ್ಲಿ ರೋಗ ನಿರೋಧಕ ಶಕ್ತಿ ಅಗಾಧವಾಗಿದ್ದು, ಬಾಧಿಸುತ್ತಿದ್ದ ಹುಚ್ಚು ರೋಗಕ್ಕೆ ಇದು ರಾಮಬಾಣವಾಗಿ ಪರಿಣಮಿಸುವುದು ಸಂಶೋಧನೆಯಿಂದ ಸ್ಪಷ್ಟವಾಯಿತು.
ನಮಗೆ ಬೇಡವಾದ ಒಂದು ಅಮೂಲ್ಯ ಜೀವಿ ಅವರಿಗೆ ಕಾಮಧೇನುವಾಗಿ ಕಂಡಿತು. ಹೀಗೆ ಸಾಕಷ್ಟು ಸಂಶೋಧನೆಗಳ ಸರಮಾಲೆಯ ನಂತರ ಹಳ್ಳಿಕಾರ್ ಎಂಬ ಗೋತಳಿ ಅವರಿಗೆ ಆರ್ಥಿಕತೆಯ ನೆಲೆಯಂತೆ ಕಂಡಿದ್ದಷ್ಟೇ ಅಲ್ಲದೆ ಅಲ್ಲಿರುವ ದನಗಳ ಜೀವ ರಕ್ಷಕವಾಗಿ ಕಂಡಿತು. ಇವುಗಳಲ್ಲಿನ ರೋಗ ನಿರೋಧಕ ಶಕ್ತಿ ಮತ್ತು ಯಾವುದೇ ರೀತಿಯ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವಂತಹ ಇವುಗಳಲ್ಲಿನ ಶಕ್ತಿ ಬೇರೆ ಇನ್ಯಾವುದೇ ತಳಿಯಲ್ಲೂ ಇಲ್ಲದಿರುವುದು ಸ್ಪಷ್ಟವಾಯಿತು. ಹೀಗೆ ಅಲ್ಲಿಯ ಸಂಶೋಧಕರು ಹಳ್ಳಿಕಾರ್ ತಳಿಯ ಜೀನ್‌ನ್ನು ಪರಿಶೀಲಿಸುವ ಮುನ್ನ ಹಲವು ದೇಶದ ಗೋತಳಿಗಳನ್ನು ಪರಿಶೀಲನೆಗೆ ಒಳಪಡಿಸಿ ಹಲವು ಪ್ರಯೋಗಗಳನ್ನು ನಡೆಸಿದ್ದರು. ಆದರೆ ಹಳ್ಳಿಕಾರ್ ತಳಿ ಮತ್ತು ಅದರ ಜೀನ್ ಬೇರೆಲ್ಲಾ ತಳಿಗಳಿಗಿಂತ ಅವರಿಗೆ ಶ್ರೇಷ್ಠ ಹಾಗೂ ಸರ್ವೋತ್ತಮವಾಗಿ ಕಂಡುಬಂದಿತ್ತು.
ಅಂತಿಮವಾಗಿ ರೋಗ ಬಾಧಿತ ಹಸುಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ, ಆ ಕಾಯಿಲೆ ಬರದಂತೆ ತಡೆಯುವುದೇ ಅತಿ ಸೂಕ್ತವೆಂದು ಅಲ್ಲಿಯ ಸರ್ಕಾರ ಹಾಗೂ ಸಂಶೋಧಕರು ತೀರ್ಮಾನಿಸಿದರು. ಅಲ್ಲಿಯ ದನಗಳ ಶರೀರಕ್ಕೆ ಹಳ್ಳಿಕಾರ್ ಗೋತಳಿಯ ಜೀನ್‌ನ್ನು ಸೇರಿಸಿದರೆ ಹುಚ್ಚು ರೋಗದ ಭೀತಿಯಿಂದ ಮುಕ್ತರಾಗಬಹುದು ಎಂಬುದನ್ನು ಮನಗಂಡು ಕಾರ್ಯಪ್ರವರ್ತವಾದರು. ಮುಖ್ಯವಾಗಿ ಮುಂದಿನ ದಿನಗಳಲ್ಲಿ ತಳಿ ಅಭಿವೃದ್ಧಿ ಮತ್ತು ಸಂವರ್ಧನೆಯ ಸಮಯದಲ್ಲಿಯೂ ಸಹ ಹುಚ್ಚು ರೋಗದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮತ್ತು ಪ್ರತಿಯೊಂದು ಅಲ್ಲಿಯ ಹಸುಗಳಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಹಳ್ಳಿಕಾರ್ ತಳಿಯ ಜೀನ್‌ನ್ನು ಕಡ್ಡಾಯವಾಗಿ ಅವುಗಳ ದೇಹಕ್ಕೆ ಇಂಜೆಕ್ಟ್ ಮಾಡುವ ಮೂಲಕ ಶಾಶ್ವತ ಪರಿಹಾರಕ್ಕೆ ಅಲ್ಲಿಯ ವಿಜ್ಞಾನಿಗಳು ಮುಂದಾದರು. ಈ ಪ್ರಯೋಗದ ಯಶಸ್ಸಿನಿಂದ ಇಂದಿಗೂ ಸಹ ಅಲ್ಲಿಯ ಪ್ರತಿಯೊಂದು ಹಸುಗಳಿಗೆ ಹಳ್ಳಿಕಾರ್ ತಳಿಯ ಜೀನ್‌ನ್ನು ಅದರ ದೇಹದೊಳಗೆ ಸೇರಿಸುವ ವ್ಯವಸ್ಥೆ ಜಾರಿಯಲ್ಲಿದೆ.
ಈ ಸಂಶೋಧನೆಯ ಫಲಶೃತಿಯ ಪರಿಣಾಮ ಹಳ್ಳಿಕಾರ್ ಗೋತಳಿಗೆ ಹಾಗೂ ಅದರ ಜೀನ್‌ಗೆ ವಿಶ್ವವ್ಯಾಪಿ ಬೇಡಿಕೆ ಸೃಷ್ಠಿಯಾದುದಷ್ಟೇ ಅಲ್ಲದೆ ಈ ತಳಿಯ ಹೆಸರು ಜಗಜ್ಜಾಹೀರಾಗುವಂತಾಯಿತು. ನಂತರದ ದಿನಗಳಲ್ಲಿ ದಕ್ಷಿಣ ಮತ್ತು ಉತ್ತರ ಅಮೆರಿಕಾ ಯೂರೋಪ್ ದೇಶಗಳಿಗೆ ಭಾರತದಿಂದ ರಫ್ತಾದ ಎಲ್ಲಾ ಭಾರತೀಯ ಗೋ ತಳಿಗಳ ಮುಖ್ಯ ಉದ್ದೇಶ ಅಲ್ಲಿಯ ಹಸುಗಳ ರೋಗ ನಿರೋಧಕ ಶಕ್ತಿಯನ್ನು ನಮ್ಮ ಗೋತಳಿಗಳ ಮೂಲಕ ಮುಂದಿನ ತಲೆಮಾರಿನವರೆಗೂ ಹೆಚ್ಚಿಸುವುದೇ ಆಗಿದ್ದುದು ಸ್ಪಷ್ಟವಾಗಿತ್ತು.
ಕೃಷಿಗೆ ಸಂಬಂಧಿಸಿದ ಲೇಖನ, ವರದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಈ ಎಲ್ಲಾ ಕಾರಣಗಳಿಂದ ಹಿಂದೊಮ್ಮೆ ಭಾರತೀಯರ ವಶದಲ್ಲಿದ್ದ ಬಹುತೇಕ ಪ್ರಮುಖ ಮತ್ತು ಬಲಾಢ್ಯ ಗೋವಿನ ತಳಿಗಳಿಂದು ವಿದೇಶಿಯರ ಕಪಿಮುಷ್ಠಿಯಲ್ಲಿವೆ. ಅಷ್ಟೇ ಅಲ್ಲದೆ ಇಂದಿಗೂ ಭಾರತೀಯ ತಳಿಗಳಿಂದ ಹೊಸ ಹೊಸ ತಳಿಗಳನ್ನು ಅಲ್ಲೆಲ್ಲಾ ಆವಿಷ್ಕರಿಸುತ್ತಲೇ ಇದ್ದಾರೆ. ವಿಪರ್ಯಾಸವೆಂದರೆ ಹೀಗೆ ವಿದೇಶಗಳಲ್ಲಿ ಭಾರತೀಯ ತಳಿಗಳ ಬಗ್ಗೆ ಆಸಕ್ತಿ, ಮಹತ್ವದ ಅರಿವು ಮತ್ತು ಚಿಂತನೆಗಳು ವಿದೇಶಿಗರ ಮಾನಸಿಕತೆಯಲ್ಲಿ ಹೆಚ್ಚುತ್ತಿರುವ ಇಂತಹ ಸಮಯದಲ್ಲಿ ನಾವು ಮಾತ್ರ ಹಾಲೆಂಬ ಬಿಳಿ ದ್ರಾವಣವನ್ನು ನೀಡುವ ವಿದೇಶಿ ತಳಿಗಳ ಬಗ್ಗೆ ಚಿಂತನೆ ಮಾಡುತ್ತಾ, ನಮ್ಮ ತನವನ್ನು ಮರೆಯುತ್ತಾ, ಅವುಗಳಲ್ಲಿ ಇಲ್ಲದ ಮಹತ್ವವನ್ನು ಹುಡುಕುವ ಪ್ರಯತ್ನ ಮಾಡುತ್ತಾ, ನಮ್ಮಲ್ಲಿಯ ಶ್ರೇಷ್ಠ ತಳಿಗಳ ಮಹತ್ವಪೂರ್ಣ ಹಾಗೂ ಬೆಲೆ ಕಟ್ಟಲಾಗದ ವೈಶಿಷ್ಟ್ಯತೆಯನ್ನು ಕಡೆಗಣಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದೇವೆ.
ಇದನ್ನೂ ಓದಿ : ಗೋ ಸಂಪತ್ತು: ದಕ್ಷಿಣ ಭಾರತದ ಬಹುತೇಕ ಗೋ ತಳಿಗಳ ಮೂಲ ಹಳ್ಳಿಕಾರ್ ತಳಿ!