ಕ್ರಾಂತಿಕಾರಿಗಳೇ ಹಾಗೆ. ತಾಯ್ನಾಡಿನ ಬಿಡುಗಡೆಗಾಗಿ ತಮ್ಮ ಪ್ರಾಣವನ್ನೇ ಪಣವಾಗಿಡುತ್ತಿದ್ದರು. ಬ್ರಿಟಿಷರ ದಬ್ಬಾಳಿಕೆಗೆ ಹೆದರಲಿಲ್ಲ. ಬೆದರಿಕೆಗೆ ಬಗ್ಗಲಿಲ್ಲ. ಗಲ್ಲು ಶಿಕ್ಷೆಗೂ ಜಗ್ಗಲಿಲ್ಲ. ಗಲ್ಲಿಗೇರುವ ಮುನ್ನ ʼನಿನಗೇನು ಬೇಕು, ಕೇಳುʼ ಎಂದಾಗ ರಸಗುಲ್ಲ ಬೇಕೆಂದ ಹದಿಹರೆಯದ ಕ್ರಾಂತಿಕಾರಿಯೊಬ್ಬನ ಕಥೆ ಅಳ್ಳೆದೆಯ ಹೇಡಿಗಳಲ್ಲೂ ಧೈರ್ಯ ಚಿಮ್ಮಿಸದೆ ಇದ್ದೀತೇ?
ಬಂಗಾಳದಲ್ಲೊಬ್ಬ ಬ್ರಿಟಿಷರ ಬೂಟು ನೆಕ್ಕುವ, ಅವರೆಸೆವ ಎಂಜಲಿಗೆ ಜೊಲ್ಲು ಸುರಿಸುವ ಪೊಲೀಸ್ ಅಧಿಕಾರಿ ಇದ್ದ. ೧೯೦೯ ಫೆಬ್ರವರಿ ೧೦ ರಂದು ಆಲಿಪುರ ಮೊಕದ್ದಮೆಯಲ್ಲಿ ಅರವಿಂದ ಘೋಷ್ ಮೊದಲಾದ ಕ್ರಾಂತಿಕಾರಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳನ್ನು ಒದಗಿಸಲು ಹಗಲಿರುಳೂ ಆಂಗ್ಲರ ಪಾದಸೇವಕನಂತೆ ಆತ ಶ್ರಮಿಸುತ್ತಿದ್ದ. ಆತನೇ ಷಂಸುಲ್ ಆಲಂ ಎಂಬ ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್. ಕ್ರಾಂತಿಕಾರಿಗಳ ಹುಟ್ಟಡಗಿಸುವುದೇ ತನ್ನ ಗುರಿ. ಅದು ಪೂರ್ತಿಯಾಗುವವರೆಗೆ ತಾನು ವಿರಮಿಸುವುದಿಲ್ಲವೆಂದು ಬಹಿರಂಗ ಹೇಳಿಕೆಯನ್ನು ನೀಡಿದ್ದ.
ಇಂತಹ ದೇಶದ್ರೋಹಿಗೆ ತಕ್ಕ ಪಾಠವೊಂದನ್ನು ಕಲಿಸಲೇಬೇಕೆಂದು ಕ್ರಾಂತಿಕಾರಿಗಳು ನಿರ್ಧರಿಸಿದರು. ಕಲ್ಕತ್ತೆಯ ಹ್ಯಾರಿಸನ್ ರಸ್ತೆಯಲ್ಲಿದ್ದ ಛಾತ್ರ ಭಂಡಾರ್ ಅಂಗಡಿಯ ಮೇಲಂತಸ್ತಿನಲ್ಲಿದ್ದ ಕ್ರಾಂತಿಕಾರಿಗಳ ಅಡ್ಡೆಯಲ್ಲಿ ಅತುಲ್ ಕೃಷ್ಣ ಘೋಷ್, ಬಿಪಿನ್ ಬಿಹಾರಿ ಗಂಗೂಲಿ ಮೊದಲಾದ ಕ್ರಾಂತಿಕಾರಿಗಳು ಈ ನಿರ್ಧಾರ ಕೈಗೊಂಡರು. ಈ ಯೋಜನೆಯನ್ನು ಕಾರ್ಯಗತಗೊಳಿಸುವ ಹೊಣೆಯನ್ನು ಬೀರೇಂದ್ರನಾಥ ದತ್ತ ಗುಪ್ತನಿಗೆ ವಹಿಸಿದರು.
ಬೀರೇಂದ್ರನಾಥನ ಸ್ವಂತ ಊರು ಈಗಿನ ಬಾಂಗ್ಲಾ ದೇಶದ ಡಾಕಾ ಸಮೀಪದ ಬಿಕ್ರಮಪುರ್. ಜಲಪಾಯಿಗುರಿಯಲ್ಲಿ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಅನಂತರ ಕಲ್ಕತ್ತೆಗೆ ಬಂದು ತನ್ನ ಅಣ್ಣನ ಮನೆಯಲ್ಲಿ ತಂಗಿದ್ದ. ಷಂಸುಲ್ ಆಲಂನ ಮೇಲಿನ ಕಾರ್ಯಾಚರಣೆಯ ಕೆಲಸವನ್ನು ʼಯುಗಾಂತರʼ ಸಂಘಟನೆಯು ಈತನಿಗೆ ವಹಿಸಿದ್ದು ಆವಾಗಲೇ.
ಭಾಘಾ ಜತಿನ್ ಎಂಬ ಯುವ ಕ್ರಾಂತಿಕಾರಿ ಬೀರೇಂದ್ರನನ್ನು ಹರಸಿ, ಅವನಿಗೆ ಆರು ಗುಂಡು ತುಂಬಿದ ರಿವಾಲ್ವರ್ ನೀಡಿದ್ದ. ಪೊಲೀಸ್ ಅಧಿಕಾರಿಯೊಬ್ಬನಿಂದ ಕಸಿದುಕೊಂಡು ಬಂದ ರಿವಾಲ್ವರ್ ಅದಾಗಿತ್ತು.
ಬೀರೇಂದ್ರನಿಗೆ ಸಹಾಯಕನಾಗಿ ಷಂಸುಲ್‌ನ ಪರಿಚಯ ಚೆನ್ನಾಗಿ ಬಲ್ಲ ಸತೀಶ್ ಸರ್ಕಾರ್ ಎಂಬ ಕ್ರಾಂತಿಕಾರಿಯನ್ನು ಜೊತೆ ಮಾಡಲಾಗಿತ್ತು.
ಅದು ೧೯೧೦ ರ ಜನವರಿ ೨೪. ಬೆಳಿಗ್ಗೆಯೇ ಛಾತ್ರ ಭಂಡಾರ್‌ಗೆ ಬಂದಿದ್ದ ಬೀರೇಂದ್ರ ಮತ್ತು ಸತೀಶ್ ಸರ್ಕಾರ್ ಅನಂತರ ಕಲ್ಕತ್ತ ಹೈಕೋರ್ಟ್‌ಗೆ ಬಂದರು. ಕೋರ್ಟ್ ಜನರಿಂದ ಕಿಕ್ಕಿರಿದಿತ್ತು. ಇಬ್ಬರೂ ಕೋರ್ಟಿನ ಮೊದಲ ಮಹಡಿಗೆ ಹೋಗುವ ಮೆಟ್ಟಿಲ ಬಳಿಗೆ ಬಂದರು. ಆಗಷ್ಟೇ ಗರಿಗರಿ ದಿರಿಸು ಧರಿಸಿ ಪೊಲೀಸ್ ಸಮವಸ್ತ್ರದಲ್ಲಿದ್ದ ಷಂಸುಲ್ ಆಲಂ ಕೆಲವರು ಸರ್ಕಾರಿ ವಕೀಲರೊಂದಿಗೆ ಮಾತನಾಡುತ್ತ ಅದೇ ಜಾಗಕ್ಕೆ ಬಂದ. ಆತನ ಹಿಂದೆ-ಮುಂದೆ ವಕೀಲರು, ಇತರೆ ಪೊಲೀಸರು, ಅಂಗರಕ್ಷಕರು ಹೆಜ್ಜೆ ಹಾಕುತ್ತಾ ಬರುತ್ತಿದ್ದರು. ಕೂಡಲೇ ಸತೀಶ್ ಸರ್ಕಾರ್ ಬೀರೇಂದ್ರನಿಗೆ ʼಅವನೇ ಷಂಸುಲ್ ಆಲಂʼ ಎಂದು ಪಿಸುದನಿಯಲ್ಲಿ ಹೇಳಿ ಅವನನ್ನು ತೋರಿಸಿದ.
ಬೀರೇಂದ್ರನಾಥ ತಡಮಾಡಲಿಲ್ಲ. ಷಂಸುಲ್ ಮೊದಲ ಮಹಡಿ ತಲಪುವ ವೇಳೆಗೆ ಅವನ ಮುಂದೆ ಯಮನಂತೆ ಧಾವಿಸಿ ರಿವಾಲ್ವರ್ ಹಿಡಿದು ನಿಂತ. ಕ್ಷಣಮಾತ್ರದಲ್ಲಿ ರಿವಾಲ್ವರ್‌ನ ಟ್ರಿಗ್ಗರ್ ಒತ್ತಿ ಗುಂಡು ಹಾರಿಸಿದ. ಗಾಬರಿಗೊಂಡ ಷಂಸುಲ್ ಆಲಂ ʼಪಕ್ಡೋ ಪಕ್ಡೋʼ ಎಂದರಚುತ್ತಾ ಕೆಳಕ್ಕೆ ಬಿದ್ದ. ಗುಂಡೇಟು ತಿಂದ ಆಲಂ ವಿಲವಿಲನೆ ನರಳುತ್ತ ಕೊನೆಯುಸಿರೆಳೆದ.
ತನ್ನ ಕೆಲಸ ಮುಗಿದೊಡನೆ ಬೀರೇಂದ್ರ ಅಲ್ಲಿಂದ ತಪ್ಪಿಸಿಕೊಳ್ಳಲು ಓಡಲಾರಂಭಿಸಿದ. ಹೆಬ್ಬಾಗಿಲ ಬಳಿ ಜನರ ಗುಂಪೊಂದು ʼಕಳ್ಳ ಕಳ್ಳʼ ಎನ್ನುತ್ತಾ ಅಟ್ಟಿಸಿಕೊಂಡು ಬಂತು. ಬೀರೇಂದ್ರ ಗಾಳಿಯಲ್ಲಿ ಗುಂಡುಹಾರಿಸಿ ʼಮುಂದೆ ಬಂದರೆ ಹುಷಾರ್ʼ ಎಂದು ಗರ್ಜಿಸಿದ. ಜನರೆಲ್ಲ ದಿಕ್ಕಾಪಾಲಾದರು.
ಬೀರೇಂದ್ರ ಒಂದೇ ಉಸುರಿನಲ್ಲಿ ಹೊರಗೆ ಬಂದು ಓಡತೊಡಗಿದ. ಆದರೆ ಆಲಿ ಅಹಮದ್ ಖಾನ್ ಎಂಬ ಪೊಲೀಸ್ ಅಧಿಕಾರಿ ಕುದುರೆಯೇರಿ ಈತನನ್ನು ಹಿಂಬಾಲಿಸಿದ. ಬೀರೇಂದ್ರ ಆತನ ಮೇಲೆ ಹಾರಿಸಿದ ಗುಂಡಿನಿಂದ ತಪ್ಪಿಸಿಕೊಂಡು ಕುದುರೆಯಿಂದ ಕೆಳಗೆ ಜಿಗಿದು ಬೀರೇಂದ್ರನನ್ನು ಬಿಗಿಯಾಗಿ ಹಿಡಿದು ಬಂಧಿಸಿದ. ಅನಂತರ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ವಿಚಾರಣೆ ನಡೆಯಿತು. ಡಿ.ಐ.ಜಿ ಡ್ಯಾಲಿ, ಅಸಿಸ್ಟೆಂಟ್ ಡಿ.ಐ.ಜಿ. ಡೆನ್ ಹ್ಯಾಂ ಮೊದಲಾದವರು ಧಾವಿಸಿ ಬಂದು ಚಿತ್ರಹಿಂಸೆ ನೀಡಿದರು. ಆತನ ಬಾಯಿ ಬಿಡಿಸಲು ಪ್ರಯತ್ನಿಸಿದರು. ಬೀರೇಂದ್ರ ಮಾತ್ರ ತನ್ನ ಹಿಂದೆ ಯಾರಿದ್ದಾರೆಂಬುದನ್ನು ಹೇಳಲೇ ಇಲ್ಲ. ಕೊನೆಗೆ ಕೋರ್ಟ್ ಆತನನ್ನು ತಪ್ಪಿತಸ್ಥನೆಂದು ತೀರ್ಪಿತ್ತು ಗಲ್ಲುಶಿಕ್ಷೆ ವಿಧಿಸಿತು.
ನಿನ್ನ ಕೊನೆಯಾಸೆ ಏನೆಂದು ಗಲ್ಲುಗಂಬವೇರುವ ಮುನ್ನ ಕೇಳಿದಾಗ ಬೀರೇಂದ್ರ ಹೇಳಿದ್ದು – ತನಗೆ ರಸಗುಲ್ಲ ಬೇಕೆಂದು! ಜೈಲು ಅಧಿಕಾರಿ ರಸಗುಲ್ಲ ತರಿಸಿಕೊಟ್ಟ. ಅದೇ ಜೈಲಿನಲ್ಲಿದ್ದ ತನ್ನ ಗುರು ಜತಿನ್ ಬಾಘಾನನ್ನು ನೋಡಬೇಕೆಂದ. ಆತನನ್ನೂ ಕರೆಸಲಾಯಿತು. ಒಂದು ರಸಗುಲ್ಲವನ್ನು ಬೀರೇಂದ್ರ ತನ್ನ ಗುರುವಿನ ಬಾಯೊಳಗಿಟ್ಟು ʼತಾಯ್ನಾಡಿನ ಬಿಡುಗಡೆಗಾಗಿ ಗಲ್ಲಿಗೇರುವ ಈ ಕ್ಷಣವನ್ನು ಸಂಭ್ರಮಿಸಬೇಕಲ್ಲವೆ? ಸಿಹಿ ತಿನ್ನಿ ದಾದಾʼ ಎಂದ. ಜತಿನ್ ಬೀರೇಂದ್ರನ ತಲೆಯ ಮೇಲೆ ಕೈಯಿಟ್ಟು ʼವಂದೇ ಮಾತರಂʼ ಎಂದು ಹರಸಿದ. ಹಸನ್ಮಖನಾಗಿ ಮರುವಂದಿಸಿದ ಹದಿನೆಂಟು ವರ್ಷದ ಬೀರೇಂದ್ರನಾಥ ದತ್ತಗುಪ್ತ ೧೯೧೦ ರ ಫೆಬ್ರವರಿ ೨೧ ರಂದು ʼವಂದೇ ಮಾತರಂʼ ಘೋಷಣೆಯೊಂದಿಗೆ ಆಲಿಪುರ ಸೆರೆಮನೆಯಲ್ಲಿ ಗಲ್ಲುಗಂಬವೇರಿದ.
ಬೀರೇಂದ್ರನಾಥ ಸ್ವಾತಂತ್ರ್ಯ ಸಮರದ ಇತಿಹಾಸದಲ್ಲಿ ಚರಿತ್ರಕಾರರ ಲೇಖನಿಗೂ ಸಿಗದೆ ಅಜ್ಞಾತ ಕ್ರಾಂತಿಕಾರಿಯಾಗಿಯೇ ಉಳಿದ.