Site icon Vistara News

Amrit Mahotsav | ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೈದರಾಬಾದ್‌ನ ರಂಗರಾವ್, ಪಗಾಯ್ ಮಿಂಚಿನ ಸಂಚಾರ

Vistara-Logo-Azadi-ka-amrit-Mahotsav
https://vistaranews.com/wp-content/uploads/2022/08/rangarao.mp3

1857ರಲ್ಲಿ ಹಾಗೂ ಅನಂತರ ದಕ್ಷಿಣ ಭಾರತದಲ್ಲಿ ಒಂದು ಪ್ರಮುಖ ಪ್ರದೇಶವಾಗಿದ್ದ ಹೈದರಾಬಾದ್ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಬ್ರಿಟಿಷ್ ವಿರೋಧಿ ದಂಗೆಗಳನ್ನು ಯೋಜಿಸಲಾಗಿತ್ತು. ಆಗ ಇಂತಹ ದಂಗೆಗಳಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖರೆಂದರೆ: ರಂಗರಾವ್, ರತ್ನಾಕರ ಪಗಾಯ್, ನಾರ್ಖೇಡ್‌ನ ಪಟ್ವಾರಿರಾಜ ದೀಪ್ ಸಿಂಗ್ ಮೊದಲಾದವರು. ಇವರೆಲ್ಲರೂ ಕ್ರಾಂತಿಯ ಪ್ರಮುಖ ಸಂಘಟಕರಾಗಿದ್ದರು. ಸೈನ್ಯಕ್ಕೆ ಸೈನಿಕರನ್ನು ಭರ್ತಿ ಮಾಡುವುದು, ಮದ್ದುಗುಂಡು, ಶಸ್ತ್ರಾಸ್ತ್ರ ಸಂಗ್ರಹ, ಗೂಢಚಾರರ ನೇಮಕ, ಹಣ ಸಂಗ್ರಹ, ಭಿತ್ತಿಪತ್ರಗಳನ್ನು ಅಂಟಿಸುವುದು ಮುಂತಾದ ಕಾರ‍್ಯಚಟುವಟಿಕೆಗಳಲ್ಲಿ ವಿವಿಧೆಡೆ ಸ್ಥಳೀಯ ಮುಖಂಡರೇ ಸಾಥ್ ನೀಡಿದ್ದರು. ನಾನಾ ಸಾಹೇಬ್ ಪೇಶ್ವೆ ಮತ್ತು ತಾತ್ಯಾಟೋಪೆಯಂತಹ ರಾಷ್ಟ್ರೀಯ ಸ್ತರದ ನಾಯಕರೊಂದಿಗೆ ಸ್ಥಳೀಯ ನಾಯಕರು ಸಂವಹನ ಕೊಂಡಿಗಳನ್ನು ಬೆಸೆದಿದ್ದರು.

ಯುದ್ಧದಲ್ಲಿ ಹೈದರಾಬಾದಿನ ವ್ಯೂಹಾತ್ಮಕ ಪ್ರಾಮುಖ್ಯತೆಯ ಕುರಿತು ಭಾರತೀಯ ನಾಯಕರಿಗೆ ಸಮಾನವಾಗಿಯೇ ಅರಿವಿತ್ತು. ಹೈದರಾಬಾದಿನ ಒಬ್ಬ ಕುಲೀನ ವ್ಯಕ್ತಿ. ರಾಜಾ ರವಿರಾಯನ್ ಎಸ್ಟೇಟ್‌ನಲ್ಲಿ ದಫ್ತರದಾರ ಆಗಿದ್ದ ಸೋನಾಜಿ ಪಂತ್ 1857 ಫೆಬ್ರವರಿಗೂ ಮೊದಲು ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಸಮರವನ್ನು ಸಂಘಟಿಸುವುದಕ್ಕೆ ಸಂಬಂಧಿಸಿ ಕಾನ್ಪುರದಲ್ಲಿದ್ದ ನಾನಾ ಸಾಹೇಬ್ ಪೇಶ್ವೆಗೆ ಪತ್ರವೊಂದನ್ನು ಬರೆದಿದ್ದರು. ಹೈದರಾಬಾದಿನಿಂದ ಗಡೀಪಾರು ಮಾಡಲಾಗಿದ್ದ ಸೋನಾಜಿ ತನ್ನ ಪತ್ರವನ್ನು ರಂಗರಾವ್ ಪಗಾಯ್ ಸುಪರ್ದಿಗೆ ಒಪ್ಪಿಸಿದರು. ರಂಗರಾವ್ ಪಗಾಯ್ ಆ ಪತ್ರದಲ್ಲಿ ತನ್ನ ತಲೆಗೆ ಧರಿಸುವ ಪಗಡಿಯಲ್ಲಿ ಅಡಗಿಸಿಟ್ಟು ಕಾನ್ಪುರಕ್ಕೆ ತೆರಳಿದರು. ಅಲ್ಲಿ ಅದನ್ನು ನಾನಾ ಸಾಹೇಬ್‌ಗೆ ತಲುಪಿಸಿ, ಬರುವಾಗ ಬ್ರಿಟಿಷ್ ಶಕ್ತಿ ವಿರುದ್ಧ ಬಂಡೇಳುವಂತೆ ಜನರಿಗೆ ಹಾಗೂ ಮುಖಂಡರಿಗೆ ಕರೆಕೊಡುವ ಘೋಷಣೆಗಳು ಹಾಗೂ ಸೂಚನೆಗಳಿರುವ ಪತ್ರವನ್ನು ತಂದಿದ್ದರು.

ಆ ಪತ್ರದಲ್ಲಿ “ ಬ್ರಿಟಿಷರು ಈ ದೇಶವನ್ನು ಬಿಟ್ಟು ತೊಲಗುವಂತೆ ಮಾಡಲು ಮಿಲಿಟರಿ ಕ್ಯಾಂಪುಗಳಲ್ಲಿ ಎಲ್ಲೆಡೆ ಇಂಗ್ಲಿಷರನ್ನು ಕೊಲ್ಲಲಾಗಿದೆ. ನಿಮ್ಮ ಜಿಲ್ಲೆಗಳಲ್ಲಿ ಅಂತಹ ದಂಗೆ ಇನ್ನಷ್ಟೇ ಶುರುವಾಗಬೇಕಿದೆ. ಹಾಗಾಗಿ ಈ ಮೂಲಕ ಆದೇಶಿಸುವುದೇನೆಂದರೆ, ಆ ಭಾಗಗಳಲ್ಲಿ ಅಂತಹ ಪರಿಣಾಮಕಾರಿ ಪ್ರತಿರೋಧವನ್ನು ಸಂಘಟಿಸುವ ಜವಾಬ್ದಾರಿಯನ್ನು ನಾರ್ಖೇಡ್‌ನ (ಹೈದರಾಬಾದ್) ರತ್ನಾಕರ ಪಗಾಯ್ ಮತ್ತು ಸೋನಾಜಿ ಪಂತ್‌ಗೆ ವಹಿಸಲಾಗಿದೆ. ನಿಮ್ಮ ನಂಬಿಕೆಯ ಹೆಸರಿನಲ್ಲಿ ನೀವು ಮುನ್ನಡೆದು ಇಂಗ್ಲಿಷರು ಎಲ್ಲಿ ಸಿಗುತ್ತಾರೋ ಅಲ್ಲೆಲ್ಲ ಅವರನ್ನು ನಾಶ ಮಾಡಲು ಕರೆ ನೀಡಲಾಗಿದೆ. ಇಂತಹುದೊಂದು ಉತ್ತಮ ಕಾರಣಕ್ಕಾಗಿ ಮುಂದೆ ಬರುವವರಿಗೆ ಸೂಕ್ತ ಬಹುಮಾನವನ್ನು ಕೂಡ ನೀಡಲಾಗುವುದು”.

ಈ ಪತ್ರವನ್ನು ರಂಗರಾವ್ ಪಗಾಯ್ ತಂದು ಸೋನಾಜಿಯವರಿಗೆ ತಲುಪಿಸಿದರು. ಜತೆಗೆ ಸಪ್ದರ್-ಉದ್-ಪಾಲಾ, ರಾವ್ ರಂಭಾ ನಿಂಬಾಲ್ಕರ್, ಗುಲಾಬ್ ಖಾನ್ ಮತ್ತು ಬಜುರಿಯವರಿಗೆ ನಾನಾ ಸಾಹೇಬರು ಬರೆದ ವೈಯಕ್ತಿಕ ಪತ್ರಗಳನ್ನು ತಲುಪಿಸಿದರು. ರಂಗರಾವ್ ಬಹಳ ಚತುರ, ಪೇಶ್ವೆಯವರ ಘೋಷಣೆ, ಆದೇಶ ಇತ್ಯಾದಿ ಒಳಗೊಂಡಿದ್ದ ಪತ್ರಗಳನ್ನು ಮತ್ತು ಇತರ ದಾಖಲಾತಿಗಳನ್ನು ರಹಸ್ಯವಾಗಿ ದುಂಡಗಿರುವ ಶೇವಿಂಗ್ ಗ್ಲಾಸಿನ ಹಿಂದೆ ಅಡಗಿಸಿ ತಂದಿದ್ದರು. ಆ ವೇಳೆಗೆ ಸೋನಾಜಿ ಪಂತ್ ನಿಧನರಾಗಿದ್ದರಿಂದ ರಂಗರಾವ್ ಸೋನಾಜಿಯವರ ಹುಟ್ಟೂರಿಗೆ ತೆರಳಿದರು. ಅನಂತರ ಹೈದರಾಬಾದ್‌ಗೆ ಹೋದರು. ಮಾರ್ಗಮಧ್ಯೆ ಮಾಧಾಪುರವೆಂಬಲ್ಲಿ ಆ ಹಳ್ಳಿಯ ನಾಯಕನಿಗೆ ನಾನಾ ಸಾಹೇಬರ ಆದೇಶವನ್ನು ತೋರಿಸಿದರು. ಅಲ್ಲಿಂದ ಹೀಗೆ ಹಳ್ಳಿಯಿಂದ ಹಳ್ಳಿಗೆ ಮಾರುವೇಷದಲ್ಲಿ ಸಾಗಿ ನಾನಾ ಸಾಹೇಬರ ಆದೇಶಗಳ ಬಗ್ಗೆ ಜನರೊಂದಿಗೆ ಚರ್ಚಿಸಿದರು. ದಂಗೆಯ ಬಗ್ಗೆಯೂ ಸಮಾಲೋಚಿಸಿದರು. ಅನಂತರ ಜೋಶಿ ಪೂಜಾರಿಯವರ ಮನೆಯಲ್ಲಿ ತಂಗಿ, ಅಲ್ಲಿ ರಾಮೇಶ್ವರ ರಾವ್ ವಿಠಲರಾವ್ ಕುಲಕರ್ಣಿ, ಯಶವಂತರಾವ್ ದಾಜಿ ಕುಲಕರ್ಣಿ ಮತ್ತು ಬಕ್ತಾವರ ಸಿಂಗ್‌ರನ್ನು ಭೇಟಿಯಾದರು. ಎರಡು ಸಾವಿರ ಜನರ ಸೈನ್ಯವೊಂದರ ನಿರ್ಮಾಣ ಯೋಜನೆ ಕುರಿತು ಚರ್ಚಿಸಿದರು. ಖರ್ಚುವೆಚ್ಚಗಳನ್ನು ನಿಭಾಯಿಸಲು ಕೌಲಾಸ್‌ನ ರಾಜನಿಂದ ರಂಗರಾವ್‌ಗೆ ಒಂದಿಷ್ಟು ಹಣ ದೊರಕಿತು. ಸೈನ್ಯಕ್ಕೆ ಜನರನ್ನು ಭರ್ತಿ ಮಾಡುವುದಕ್ಕಾಗಿ ಕಾಸಿರಾಂನನ್ನು ರಿಸಲ್ದಾರ್ ಆಗಿ ಕೌಲಾಸ್ ರಾಜ ನೇಮಿಸಿದರು.

ಅರಬ್ಬರು, ರೊಹಿಲ್ಲಾಗಳು ಮತ್ತು ದಕ್ಷಿಣದವರನ್ನೊಳಗೊಂಡ ಎರಡು ಸಾವಿರ ಮಂದಿ ಇರುವ ಸೈನ್ಯ ನಿರ್ಮಾಣದ ಉದ್ದೇಶಕ್ಕೆ ಕಾಸಿರಾಂಗೆ ಹಣ ಒದಗಿಸಲು ಬಸವಂತರಾವ್ ಬರೆದುಕೊಟ್ಟ ಬಾಂಡ್ ಪಡೆದರು. ಈ ಅವಧಿಯಲ್ಲಿ ರಂಗರಾವ್ ಪರ್ಗಿ, ಸರ್ವೆಂಗಾಂವ್ ವಸತೋಲಿ, ಹೊಮಿನಾಬಾದ್‌ಗಳ ನಾಯಕರುಗಳನ್ನು ಭೇಟಿ ಮಾಡಿದರು. ಹೊಮಿನಾಬಾದ್, ಔರಂಗಾಬಾದ್, ನಲ್‌ದುರ್ಗ, ಮತ್ತಿತರ ಕಡೆಗಳಿಂದ ಬಂದಿದ್ದ ಕ್ರಾಂತಿಕಾರಿಗಳಿಗೆ ಆಸರೆತಾಣವಾಗಿತ್ತು.

ರಂಗರಾವ್ ಪಗಾಯ್ ಅವರದು ಇಂತಹ ಅವಿಶ್ರಾಂತ ದಣಿವರಿಯದ ಚಟುವಟಿಕೆಗಳಾಗಿದ್ದವು. ರಂಗರಾವ್ ಮಾತ್ರ ನಾನಾ ಸಾಹೇಬರ ಆದೇಶದ ಪ್ರತಿಗಳನ್ನು ಕೈಯಲ್ಲಿ ಹಿಡಿದು ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಸಮರವನ್ನು ಸಂಘಟಿಸುವ ಯೋಜನೆಗಾಗಿ ನಿಸ್ವಾರ್ಥವಾಗಿ ಶ್ರಮಿಸಿದರು. ಅಂಬಾಲಾದ ಹೊರವಲಯಕ್ಕೆ ಇನ್ನೇನು ತಲುಪುವುದರೊಳಗೆ ಬ್ರಿಟಿಷ್ ಸೇವೆ ರಂಗರಾವ್ ಅವರನ್ನು ಬಂಧಿಸಿತು. ತಮ್ಮ ಕ್ಷಿಪ್ರಗತಿಯ ಪ್ರಯಾಣ ಹಾಗೂ ಸಮಾಲೋಚನೆಯ ಅವಧಿಯಲ್ಲಿ, ರಂಗರಾವ್ ವಿವಿಧ ವ್ಯಕ್ತಿಗಳೊಂದಿಗೆ ವಿಶ್ವಾಸಾರ್ಹತೆಯೊಂದಿಗೆ ಸಮಾಲೋಚಿಸಿದ್ದರು. ಬಂಧನದ ಬಳಿಕ ಅವರನ್ನು ಹೈದರಾಬಾದ್‌ಗೆ ಕರೆತರಲಾಯಿತು. 1859 ಏಪ್ರಿಲ್‌ನಲ್ಲಿ ಕ್ಯಾ|| ಬುಲ್ಲಕ್ ರಂಗರಾಯರ ವಿಚಾರಣೆ ನಡೆಸಿ, ಜೀವಾವಧಿ ಶಿಕ್ಷೆ ವಿಧಿಸಿದರು. ತಕ್ಷಣವೇ ರಂಗರಾವ್ ಅವರನ್ನು ಅಂಡಮಾನ್‌ಗೆ ಸಾಗಿಸಲಾಯ್ತು. ಅಲ್ಲಿ 1890ರಲ್ಲಿ ಅವರು ತಮ್ಮ ಕೊನೆಯುಸಿರೆಳೆದರು.
ರಂಗರಾವ್ ಜೊತೆಗೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರನ್ನೆಲ್ಲ ಬಂಧಿಸಿ ಜೈಲಿನಲ್ಲಿ ವಿವಿಧ ಬಗೆಯ ಶಿಕ್ಷೆ ನೀಡಲಾಯಿತು.

ಇದನ್ನೂ ಓದಿ | Amrit Mahotsav | ಸತಾರಾದ ರಂಗೋ ಬಾಪೂಜಿ ಗುಪ್ತೆಯ ಸಾಹಸ

Exit mobile version