Site icon Vistara News

India@75 | ಆತ್ಮನಿರ್ಭರ ಭಾರತ ಮಾದರಿಯಲ್ಲಿ ಅಭಿವೃದ್ಧಿಯತ್ತ ಭಾರತೀಯ ರಕ್ಷಣಾ ಉದ್ಯಮ

India@75

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಅಭಿವೃದ್ಧಿಗೆ ಆತ್ಮನಿರ್ಭರ ಭಾರತ ಎಂಬ ಮಂತ್ರವೇ ಆಧಾರ ಎಂದು ನಂಬಿದ್ದಾರೆ. ರಕ್ಷಣಾ ಉತ್ಪಾದನಾ ಉದ್ಯಮದಲ್ಲೂ ಆತ್ಮನಿರ್ಭರ ಭಾರತದ ಸಾಧನೆಯಾಗಬೇಕು ಎನ್ನುವುದೂ ಈ ಉದ್ದೇಶದ ಭಾಗವಾಗಿದೆ. ಆಗಸ್ಟ್ 2020ರಲ್ಲಿ ನಡೆದ ರಕ್ಷಣಾ ಉದ್ಯಮದ ಸೆಮಿನಾರ್ ಒಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ರಕ್ಷಣಾ ಉದ್ಯಮದ ಅಭಿವೃದ್ಧಿಯ ಕುರಿತು ನೀಲಿನಕ್ಷೆಯನ್ನು ವಿವರಿಸಿ, ರಕ್ಷಣಾ ಉದ್ಯಮದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಬೇಕು, ಆತ್ಮನಿರ್ಭರ ಆಗಬೇಕು ಎಂದು ಕರೆ ನೀಡಿದ್ದರು. ಪ್ರಧಾನ ಮಂತ್ರಿಗಳು ಭಾರತದ ಮುಂದಿನ ಗುರಿ ಎಂದರೆ ರಕ್ಷಣಾ ಉತ್ಪಾದನೆಯನ್ನು ದೇಶೀಯವಾಗಿ ಹೆಚ್ಚಿಸುವುದು, ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು ಹಾಗೂ ಖಾಸಗಿ ಉತ್ಪಾದಕರು ರಕ್ಷಣಾ ಉದ್ಯಮದಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸಲು ಅನುಮತಿಸುವುದು ಎಂದಿದ್ದರು.

ಪ್ರಧಾನಿಯವರ ಮಾತಿನ ಪ್ರಕಾರ, ಭಾರತ ಸ್ವಾತಂತ್ರ್ಯ ಗಳಿಸಿದ ಸಂದರ್ಭದಲ್ಲಿ ಭಾರತಕ್ಕೆ ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನಾ ಕಾರ್ಯ ಕೈಗೊಳ್ಳಲು ಅಪಾರ ಸಾಮರ್ಥ್ಯವಿತ್ತು ಮತ್ತು ಅಗತ್ಯವಿದ್ದ ವ್ಯವಸ್ಥೆಗಳಿದ್ದವು. ಆ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಭಾರತ ಅಭಿವೃದ್ಧಿ ಹೊಂದಬಹುದಾಗಿತ್ತು. ಆದರೆ ದಶಕಗಳ ಕಾಲ ಆ ನಿಟ್ಟಿನಲ್ಲಿ ಸರಿಯಾದ ಪ್ರಯತ್ನಗಳು ನಡೆಯಲಿಲ್ಲ. ಆದರೆ ಪ್ರಸ್ತುತ ಆ ಪರಿಸ್ಥಿತಿ ಬದಲಾವಣೆ ಹೊಂದುತ್ತಿದ್ದು, ಭಾರತೀಯ ರಕ್ಷಣಾ ಉದ್ಯಮದಲ್ಲಿ ಅಭಿವೃದ್ಧಿ ತರಲು ಸತತ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಅಭಿಪ್ರಾಯ ಪಡುತ್ತಾರೆ. ಅವರು ಈ ನಿಟ್ಟಿನಲ್ಲಿ ಕೈಗೊಂಡಿರುವ ಕೆಲವು ಪ್ರಮುಖ ಕ್ರಮಗಳನ್ನು ಕುರಿತು ತಿಳಿಸುತ್ತಾ, ರಕ್ಷಣಾ ಉತ್ಪಾದನೆಗೆ ಬೇಕಾದ ಪರವಾನಗಿ ಪಡೆಯುವ ಕಾರ್ಯ ಈಗ ಸರಳವಾಗಿದೆ, ಹಾಗೂ ರಫ್ತು ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ ಎಂದಿದ್ದರು.

ರಕ್ಷಣಾ ವಲಯದಲ್ಲಿ ಇರುವ ಆತ್ಮವಿಶ್ವಾಸ ಆಧುನಿಕ, ಸ್ವಾವಲಂಬಿಯಾದ ಭಾರತದ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾಗಿದೆ. ಈ ಮೊದಲು ಕೈಗೊಂಡ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ, ಅವುಗಳು ದಶಕಗಳ ಕಾಲ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ರಕ್ಷಣಾ ಪಡೆಗಳ ಮುಖ್ಯಸ್ಥರ (ಚೀಫ್ ಆಫ್ ಆರ್ಮಿ ಸ್ಟಾಫ್) ನೇಮಕವೂ ಅಂತಹಾ ನೆನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಯೇ ಆಗಿತ್ತು. ರಕ್ಷಣಾ ಪಡೆಗಳ ಮುಖ್ಯಸ್ಥರ ನೇಮಕವಾದ ಬಳಿಕ ಮೂರೂ ರಕ್ಷಣಾ ಪಡೆಗಳ ಮಧ್ಯದ ಸಂವಹನ ಮತ್ತು ಸಹಕಾರ ಸಾಕಷ್ಟು ಅಭಿವೃದ್ಧಿ ಹೊಂದಿ, ರಕ್ಷಣಾ ಅಗತ್ಯತೆಗಳನ್ನು ಹೊಂದಲು ಸಹಕಾರಿಯಾಗಿತ್ತು. ಒಂದು ಸ್ವಯಂಚಾಲಿತ ಮಾರ್ಗದ ಮೂಲಕ ರಕ್ಷಣಾ ಕ್ಷೇತ್ರದಲ್ಲಿ 74% ವಿದೇಶೀ ನೇರ ಬಂಡವಾಳ ಹೂಡಿಕೆಗೂ ಅನುಮತಿ ನೀಡಲಾಯಿತು. ಇದು ನೂತನ ಭಾರತದ ಹೆಚ್ಚಾದ ಆತ್ಮವಿಶ್ವಾಸವನ್ನು ತೋರಿಸುತ್ತದೆ.

ರಕ್ಷಣಾ ಬಂಡವಾಳ ಹೂಡಿಕೆಯ ಒಂದು ಭಾಗವನ್ನು ದೇಶೀಯ ಆಯುಧ ಹೊಂದಲು ಬಳಸುವುದು ಮತ್ತು 101 ಮಾದರಿಯ ದೇಶೀಯ ರಕ್ಷಣಾ ಉಪಕರಣಗಳ ಕೊಳ್ಳುವಿಕೆಯೂ ದೇಶೀಯ ರಕ್ಷಣಾ ಉದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸರ್ಕಾರವೂ ಸಹ ಈಗ ಆಯುಧಗಳನ್ನು ಕೊಳ್ಳುವ ವೇಗವನ್ನು ವೃದ್ಧಿಸಲು, ಆಯುಧಗಳ ಪರೀಕ್ಷಾ ಪ್ರಯೋಗ ವ್ಯವಸ್ಥೆಯನ್ನು ಸಮರ್ಪಕವಾಗಿಸುವುದು ಮತ್ತಿತರ ಅಗತ್ಯ ಕ್ರಮಗಳ ಮೇಲೆ ಗಮನ ಹರಿಸುತ್ತಿದೆ. ಆಯುಧಗಳ ಉತ್ಪಾದನಾ ಕಾರ್ಖಾನೆಗಳಿಗೆ ಕಾರ್ಪೋರೆಟ್ ರೂಪ ನೀಡುವುದರ ಕುರಿತು ಪ್ರಧಾನಿ ಈ ಕ್ರಮ ಪೂರ್ಣಗೊಂಡ ಬಳಿಕ ರಕ್ಷಣಾ ಉದ್ಯಮ ಮತ್ತು ರಕ್ಷಣಾ ಉದ್ಯಮದ ಕಾರ್ಮಿಕರು ಇಬ್ಬರಿಗೂ ಲಾಭದಾಯಕವಾಗಲಿದೆ ಎಂದಿದ್ದರು.

ಆಧುನಿಕ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ‌ ಸಾಧಿಸಲು ತಂತ್ರಜ್ಞಾನದಲ್ಲಿ ಭಾರತ ಅಭಿವೃದ್ಧಿ ಸಾಧಿಸಬೇಕಿದೆ. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ (ಡಿಆರ್‌ಡಿಓ) ಜೊತೆಗೆ, ಸರ್ಕಾರ ಈಗ ಖಾಸಗಿ ರಂಗದಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಕ್ಷಣಾ ರಂಗಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಕಾರ್ಯ ನಿರ್ವಹಿಸಲು ಪ್ರೋತ್ಸಾಹ ನೀಡುತ್ತಿದೆ. ವಿದೇಶೀ ಕಂಪನಿಗಳ ಜೊತೆ ಜಂಟಿಯಾಗಿ ಕಾರ್ಯ ನಿರ್ವಹಿಸಿ, ಆಯುಧಗಳ ನಿರ್ಮಾಣಕ್ಕೂ ಈಗ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಸರ್ಕಾರ ಈಗ ರಿಫಾರ್ಮ್, ಇಂಪ್ಲಿಮೆಂಟ್ ಮತ್ತು ಟ್ರಾನ್ಸ್‌ಫಾರ್ಮ್ ಎಂಬ ಘೋಷಣೆಯಡಿ ಕಾರ್ಯ ನಿರ್ವಹಿಸುತ್ತಿದೆ. ಬೌದ್ಧಿಕ ಆಸ್ತಿ, ತೆರಿಗೆ, ದಿವಾಳಿತನ, ಬಾಹ್ಯಾಕಾಶ ಮತ್ತು ನ್ಯೂಕ್ಲಿಯರ್ ಎನರ್ಜಿ ಕ್ಷೇತ್ರಗಳಲ್ಲಿ ನೂತನ ಬದಲಾವಣೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗುತ್ತಿದೆ.

ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎರಡು ನೂತನ ಡಿಫೆನ್ಸ್ ಕಾರಿಡಾರ್‌ಗಳನ್ನು ನಿರ್ಮಾಣಗೊಳಿಸಲಾಗಿದೆ. ಈ ಎರಡೂ ರಾಜ್ಯಗಳ ಸಹಕಾರದಿಂದ ಇಲ್ಲಿ ಮೂಲಭೂತ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. 2020ರ ವೇಳೆ ಮುಂದಿನ ಐದು ವರ್ಷಗಳಲ್ಲಿ 2 ಮಿಲಿಯನ್ ಮೊತ್ತದ ಹೂಡಿಕೆ ಸಂಪಾದಿಸುವ ಗುರಿ ಹೊಂದಲಾಗಿತ್ತು.

ಸರ್ಕಾರ ಉದ್ಯಮಿಗಳಿಗೆ ಉತ್ತೇಜನ ನೀಡಲು ಇನೋವೇಷನ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (ಐಡಿಇಎಕ್ಸ್) ಎಂಬ ಯೋಜನೆಗೆ ಚಾಲನೆ ನೀಡಿದ್ದು, ಇದು ವಿಶೇಷವಾಗಿ ಎಂಎಸ್ಎಂಇ ಮತ್ತು ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುತ್ತದೆ. ಐಡಿಇಎಕ್ಸ್ ಯೋಜನೆ 2018ರಲ್ಲಿ ಆರಂಭಗೊಂಡಿದ್ದು, ಎಂಎಸ್ಎಂಇ, ಸ್ಟಾರ್ಟ್‌ಅಪ್‌ಗಳು, ವೈಯಕ್ತಿಕವಾಗಿ ಆವಿಷ್ಕಾರ ಕೈಗೊಳ್ಳುವವರು, ಆರ್&ಡಿ ಸಂಸ್ಥೆಗಳು, ಹಾಗೂ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದ್ದು, ಇದು ತಾಂತ್ರಿಕ ಅಭಿವೃದ್ಧಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುತ್ತದೆ. 50ಕ್ಕೂ ಹೆಚ್ಚು ಸ್ಟಾರ್ಟಪ್ ಸಂಸ್ಥೆಗಳು ಐಡಿಇಎಕ್ಸ್ ವೇದಿಕೆಯ ಮಿಲಿಟರಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾಗಿ ಸರ್ಕಾರಿ ದಾಖಲೆಗಳು ತಿಳಿಸುತ್ತವೆ.

ಮುಂದಿನ ಸವಾಲೇನು?

ಭಾರತದ ಮುಂದಿರುವ ಸವಾಲೆಂದರೆ ಜಾಗತಿಕ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಹಾಗೂ ಸ್ಥಿರವಾಗಿರುವಂತೆ ಮಾಡುವ ಭಾರತವನ್ನು ನಿರ್ಮಿಸುವುದು. ಇದಕ್ಕಾಗಿ ಆತ್ಮನಿರ್ಭರ ಭಾರತ ರಕ್ಷಣಾ ವಲಯದಲ್ಲೂ ಸಾಧಿತವಾಗಬೇಕು. ಭಾರತ ತನ್ನ ಸಾಕಷ್ಟು ಮಿತ್ರ ರಾಷ್ಟ್ರಗಳಿಗೆ ರಕ್ಷಣಾ ಉತ್ಪನ್ನಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿರುವ ನಂಬಿಕಸ್ತ ರಾಷ್ಟ್ರವಾಗಿದೆ. ಇದು ಭಾರತಕ್ಕೆ ಕಾರ್ಯತಂತ್ರದ ಸಹಕಾರಕ್ಕೆ ಮತ್ತು ಹಿಂದೂ ಮಹಾಸಾಗರದ ಪ್ರಾಂತ್ಯದಲ್ಲಿ ಪ್ರಮುಖ ರಕ್ಷಣಾ ಶಕ್ತಿ ಎನಿಸಿಕೊಳ್ಳಲು ಸಹಕರಿಸಲಿದೆ. ಭಾರತ ರಕ್ಷಣಾ ಕ್ಷೇತ್ರದಲ್ಲಿ 5 ಬಿಲಿಯನ್ ಡಾಲರ್ (350 ಬಿಲಿಯನ್ ರುಪಾಯಿ) ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲು ಉದ್ದೇಶಿಸಿದ್ದು, ಆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ಪ್ರಮುಖ ರಕ್ಷಣಾ ರಫ್ತುದಾರನಾಗಿಸುವ ಉದ್ದೇಶ ಹೊಂದಿದೆ.

ರಕ್ಷಣಾ ಉತ್ಪಾದನೆ ಮತ್ತು ರಫ್ತು ನೀತಿಯ ಗುರಿ ಭಾರತೀಯ ರಕ್ಷಣಾ ಪಡೆಗಳು ರಕ್ಷಣಾ ಉದ್ಯಮದಿಂದ ಎದುರು ನೋಡುವ ಅಗತ್ಯತೆಯನ್ನು ಪೂರೈಸುವುದೇ ಆಗಿದೆ. ನಿರ್ವಹಣೆಯ ಮೇಲೆ ಗಮನ ಹರಿಸುವ ಏರ್‌ಕ್ರಾಫ್ಟ್ ಇಂಜಿನ್ ಕಾಂಪ್ಲೆಕ್ಸ್ ನಿರ್ಮಾಣ (ಎಂಆರ್‌ಓ) ಮತ್ತು ಇತರ ತಂತ್ರಜ್ಞಾನಗಳ ಅಭಿವೃದ್ಧಿ ಈ ಯೋಜನೆಯ ಭಾಗವಾಗಿದೆ. ಈ ಯೋಜನೆಯಡಿ ರಫ್ತಿನ ಮೂಲಕ 25% ಲಾಭಗಳಿಸುವ ಉದ್ದೇಶ ಹೊಂದಲಾಗಿದೆ. 2025ರ ವೇಳೆಗೆ ವಾರ್ಷಿಕ ವ್ಯವಹಾರ 1.75 ಟ್ರಿಲಿಯನ್ ರುಪಾಯಿ ಆಗಿರಲಿದೆ ಎಂದು ಅಂದಾಜಿಸಲಾಗಿದೆ. ದೇಶೀಯ ನಿರ್ಮಾಣದ ಅಗತ್ಯ ಖರೀದಿಗಾಗಿ, ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತದ ಉತ್ತೇಜನಕ್ಕಾಗಿ 5.2 ಮಿಲಿಯನ್ ರುಪಾಯಿಯ ಪ್ರತ್ಯೇಕ ಬಜೆಟನ್ನೂ ಹೊಂದಲಾಗಿದೆ.

ಇದಕ್ಕೆ ಲಭಿಸುವ ಪ್ರತಿಕ್ರಿಯೆಗಳು ಮತ್ತು ಸಲಹೆಗಳು ಈ ನೀತಿಗಳನ್ನು ಶೀಘ್ರವಾಗಿ ಜಾರಿಗೆ ತರಲು ಸಹಾಯಕವಾಗಲಿದೆ.

ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರ ಹಲವು ದಿಟ್ಟ ಸುಧಾರಣೆಗಳನ್ನು ಕೈಗೊಂಡಿದೆ. ಈ ಸುಧಾರಣೆಗಳು ವಿದೇಶೀ ನೇರ ಬಂಡವಾಳ ಹೂಡಿಕೆಯ ಮೇಲಿನ ಮಿತಿಯನ್ನು 74%ಕ್ಕೆ ಹೆಚ್ಚಿಸುವ, ಡಿಫೆನ್ಸ್ ಕಾರಿಡಾರ್‌ಗಳ ಮೂಲಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿವೆ. ಇದರೊಡನೆ ಉದ್ಯಮ‌ ಪರವಾನಗಿ ಮತ್ತು ಡಿಫೆನ್ಸ್ ಇನ್ವೆಸ್ಟರ್ ಸೆಲ್‌ನಲ್ಲಿ ಬಂಡವಾಳ ಹೂಡಿಕೆದಾರರ ಸಹಾಯ ಕೇಂದ್ರದ ಸ್ಥಾಪನೆ ಹೂಡಿಕೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ. ಈ ಸುಧಾರಣೆಗಳು ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಆತ್ಮನಿರ್ಭರವಾಗಿಸಲು ಸಹಕಾರಿಯಾಗಲಿವೆ.

(ಗಿರೀಶ್ ಲಿಂಗಣ್ಣ ಅವರು ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಇಂಡೋ – ಜರ್ಮನ್ ಸಹಯೋಗದ ಸಂಸ್ಥೆ) ನಿರ್ದೇಶಕರಾಗಿದ್ದಾರೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ವಿಶ್ಲೇಷಕರಾಗಿದ್ದಾರೆ. ಅವರ ಲೇಖನಗಳು ಅಂತಾರಾಷ್ಟ್ರೀಯ, ರಾಷ್ಟ್ರ ಹಾಗೂ ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ.)

ಇದನ್ನೂ ಓದಿ | ಸ್ವಾತಂತ್ರ್ಯ ಅಮೃತ ಮಹೋತ್ಸವ | ಸು-30 ಎಂಕೆಐ ವಾಯುಪಡೆಯ ಬೆನ್ನೆಲುಬಾದರೆ ಮಿರೇಜ್ 2000 ತೋಳ್ಬಲ!

Exit mobile version