ಕೇಶವ ಪ್ರಸಾದ್ ಬಿ. ಬೆಂಗಳೂರು
ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಅದೊಂದು ಕುತೂಹಲ ಇತ್ತು! ಕಳೆದ ಸುಮಾರು ಮೂರು ದಶಕದಿಂದಲೂ ಅಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಹಜವಾಗಿ ಉಂಟಾಗುವ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಲಿದೆಯೇ? ಆಮ್ ಆದ್ಮಿ ಮತ್ತು ಕಾಂಗ್ರೆಸ್ ಇದರ ಲಾಭ ಪಡೆಯಲಿವೆಯೇ ಎಂಬ ಪ್ರಶ್ನೆ ರಾಜಕೀಯದ ಪಡಸಾಲೆಯಲ್ಲಿ ಚರ್ಚೆಯಾಗಿತ್ತು. ಬಿಜೆಪಿ ಗೆಲ್ಲಬಹುದು ಎಂಬ ನಿರೀಕ್ಷೆ ಇದ್ದರೂ, 182 ಕ್ಷೇತ್ರಗಳ ಪೈಕಿ 156 ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳನ್ನು ಧೂಳಿಪಟಗೊಳಿಸಿ, ಐತಿಹಾಸಿಕ ಜಯ ಗಳಿಸಬಹುದು ಎಂಬ ಅಂದಾಜು ಗ್ರಹಿಕೆಗೂ ನಿಲುಕದ ಸಂಗತಿಯಾಗಿತ್ತು. ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆಯನ್ನು ಸಂಪೂರ್ಣ ಮಟ್ಟ ಹಾಕಿದ ಬಿಜೆಪಿಯ ಮಹಾ ನಾಯಕರ ಸಾಲಿಗೆ ಸದ್ದಿಲ್ಲದೆ ಸೇರಿದ್ದಾರೆ ಎರಡನೇ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿರುವ ಭೂಪೇಂದ್ರ ರಜನಿಕಾಂತ್ ಪಟೇಲ್!
ದಾಖಲೆಯ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಅವರು ಗೆದ್ದಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೂ, ತಮ್ಮ ಭಾಷಣದಲ್ಲಿ “ನರೇಂದ್ರನ ದಾಖಲೆಯನ್ನು ಮುರಿದ ಭೂಪೇಂದ್ರʼ ಎಂದು ಹಾಡಿ ಹೊಗಳಿದ್ದಾರೆ. ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ಎಂದರೆ ಲೋಕಸಭೆ ಚುನಾವಣೆಯಲ್ಲೂ ಅಪರೂಪವೇ ಎನ್ನುತ್ತಾರೆ ರಾಜ್ಯದ ರಾಜಕಾರಣಿಗಳು. ಗುಜರಾತ್ ರಾಜಕೀಯದ ಚರಿತ್ರೆಯಲ್ಲಿ, ಇದುವರೆಗೆ ಅತಿ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಮರಳಿದ ದಾಖಲೆಯ ಮುಖ್ಯಮಂತ್ರಿ ಎಂಬ ಕೀರ್ತಿ ಭೂಪೇಂದ್ರ ಪಟೇಲರಿಗೆ ಸಲ್ಲುತ್ತದೆ. ಮೃದು ಮಾತಿನ, ಆದರೆ ದೃಢ ವ್ಯಕ್ತಿತ್ವದ ಪಟೇಲರು ಇದೇ ಡಿಸೆಂಬರ್ 12ರಂದು ಗುಜರಾತಿನ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೂಲತಃ ಬಿಲ್ಡರ್, ಈಗ ಬಿಜೆಪಿಯ ಟ್ರಬಲ್ ಶೂಟರ್!
ಭೂಪೇಂದ್ರ ಪಟೇಲ್ ಅವರು ವೃತ್ತಿಯಲ್ಲಿ ಮೂಲತಃ ಬಿಲ್ಡರ್. ಅವರೊಳಗಿದ್ದ ರಾಜಕಾರಣಿ ಹೊರಹೊಮ್ಮಿದ ಬಗೆ ವಿಸ್ಮಯಕಾರಿ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಬದಲಿಗೆ ಮೊದಲ ಬಾರಿಗೆ ಶಾಸಕರಾಗಿದ್ದ ಭೂಪೇಂದ್ರ ಪಟೇಲ್ ಅವರನ್ನು ನೇರವಾಗಿ ಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಅಲ್ಲಿಯವರೆಗೆ ಬಿಜೆಪಿಯ ವಲಯದಲ್ಲಿಯೇ ಅವರು ಅಷ್ಟಾಗಿ ಚಿರಪರಿಚಿತರಾಗಿರಲಿಲ್ಲ. ಮಾಜಿ ಸಿಎಂ ಆನಂದಿಬೆನ್ ಪಟೇಲ್ ಅವರ ಆಪ್ತರು ಎಂದಷ್ಟೇ ಗೊತ್ತಿತ್ತು. ಪಟೇಲ್ ಸಮುದಾಯ ಮೀಸಲಾತಿಗೆ ಆಗ್ರಹಿಸಿ ಚಳುವಳಿ ನಡೆಸಿದ ಬಳಿಕ ಮಾಜಿ ಸಿಎಂ ಆನಂದಿಬೆನ್ ಪಟೇಲ್ ನೇಪಥ್ಯಕ್ಕೆ ಸರಿದರು. ಅವರ ಆಪ್ತರಾಗಿದ್ದ ಭೂಪೇಂದ್ರ ಪಟೇಲ್ ಮುಂಚೂಣಿಗೆ ಬಂದರು. 2017ರಿಂದ ಅಹಮದಾಬಾದ್‌ನ ಘಾಟ್ಲೊಡಿಯಾ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು, ಯಾವುದೇ ಆಡಂಬರಗಳಿಂದ ದೂರ ಉಳಿಯುವುದು ಅವರ ಕಾರ್ಯವೈಖರಿ. ಅವರು ನೋಡಲು ಅತ್ಯಂತ ಸರಳ ವ್ಯಕ್ತಿ, ಆದರೆ ತೆಗೆದುಕೊಳ್ಳುವ ನಿರ್ಧಾರಗಳು ಪರಿಣಾಮಕಾರಿ. ಸಿಎಂ ಆಗಿ ಒಂದೇ ವರ್ಷದಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದರು. ಅದ್ಯಾವುದಕ್ಕೂ ಪ್ರಚಾರವನ್ನೂ ತೆಗೆದುಕೊಂಡಿರಲಿಲ್ಲ. ಪಿಎಂ-ಆವಾಸ್ ಯೋಜನೆಯಿಂದ ಬಿಲ್ಡರ್‌ಗಳಿಗೆ ಆಗಿದ್ದ ಸಂಕೀರ್ಣ ಸಮಸ್ಯೆಗಳನ್ನು ಕ್ಷಿಪ್ರವಾಗಿ, ಚಾಕಚಕ್ಯತೆಯಿಂದ ಪರಿಹರಿಸಿದ್ದರು. ಯಾವುದೇ ಹೊಸ ವಿವಾದಗಳನ್ನು ಸೃಷ್ಟಿಸಿರಲಿಲ್ಲ. ಕೋವಿಡ್ ಬಿಕ್ಕಟ್ಟನ್ನೂ ನಿಭಾಯಿಸಿದ್ದರು. ಗುಜರಾತ್‌ನ ಜನತೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಟ್ಟಿರುವ ವಿಶ್ವಾಸದಿಂದ ಇದು ಎಲ್ಲವೂ ಸಾಧ್ಯವಾಗಿದೆ ಎಂದು ವಿನಮ್ರರಾಗಿ ಹೇಳಿದ್ದಾರೆ ಭೂಪೇಂದ್ರ ಪಟೇಲ್.
ಭೂಪೇಂದ್ರ ಪಟೇಲ್ 1962ರ ಜುಲೈ 15ರಂದು ಜನಿಸಿದರು. 2017ರಲ್ಲಿ ಮೊದಲ ಬಾರಿಗೆ ಶಾಸಕರಾಗುವುದಕ್ಕೆ ಮುನ್ನ ಅಹಮದಾಬಾದ್‌ನ ಸ್ಥಳೀಯ ಸಂಸ್ಥೆಗಳ ರಾಜಕಾರಣದಲ್ಲಿದ್ದರು. ಅವರು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಗಳಿಸಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು. ಸರ್ದಾರ್ ಧಾಮ್ ವಿಶ್ವ ಪಾಠೀದಾರ್ ಕೇಂದ್ರದ ಟ್ರಸ್ಟಿ. ವಿಶ್ವ ಉಮಿಯಾ ಫೌಂಡೇಷನ್ ಅಧ್ಯಕ್ಷರಾಗಿದ್ದರು. ದಾದಾ ಭಗವಾನ್ ಅವರ ಅಕ್ರಮ್ ವಿಜ್ಞಾನ್ ಆಂದೋಲನದ ಅನುಯಾಯಿ. ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಪ್ರಿಯರು. ಓದು ಮುಗಿಸಿದ ಬಳಿಕ ಮೂರು ವರ್ಷ ಖಾಸಗಿ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಕಾಲೇಜು ಸ್ನೇಹಿತರೊಡನೆ ವರ್ಧಾನ್ ಟವರ್ ಪ್ರಾಜೆಕ್ಟ್ ಅನ್ನೂ ನಿರ್ಮಿಸಿದ್ದರು.
1995-96ರಲ್ಲಿ ಮೇಮನಗರ್ ನಗರಪಾಲಿಕೆ ಸದಸ್ಯರಾಗಿದ್ದರು. ಬಳಿಕ ಅಧ್ಯಕ್ಷರಾದರು. 2015-17 ತನಕ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಚೇರ್ಮನ್ ಆಗಿದ್ದರು. 2017ರಲ್ಲಿ ಮೊದಲ ಸಲ ಘಾಟ್ಲೋಡಿಯಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 2022ರಲ್ಲಿ ಅಲ್ಲಿಯೇ ಪುನರಾಯ್ಕೆಯಾಗಿದ್ದಾರೆ.
ಗುಜರಾತ್ ಸಿಎಂ ಆಗಿ ಸಾಧನೆ:
ಗುಜರಾತ್ ಸಿಎಂ ವಿಜಯ್ ರೂಪಾನಿ ಅವರು 2021ರ ಸೆಪ್ಟೆಂಬರ್‌ನಲ್ಲಿ ಹುದ್ದೆಗೆ ರಾಜೀನಾಮೆ ನೀಡಿದರು. ಆಗ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾದರು. ನೂತನ ಸಿಎಂ ಆಗಿ ಸೆಪ್ಟೆಂಬರ್ 13ರಂದು ಅಧಿಕಾರ ವಹಿಸಿದರು.
ಗುಜರಾತ್‌ನಲ್ಲಿ ಪಟೇಲ್ ಸಮುದಾಯ ಮೀಸಲಾತಿ ಚಳುವಳಿ ನಡೆಸಿ ಬಿಜೆಪಿ ವಿರುದ್ಧ ತಿರುಗಿ ಬಿದ್ದಾಗ, ಆ ಪ್ರಬಲ ಸಮುದಾಯದ ಆಕ್ರೋಶವನ್ನು ತಣ್ಣಗಾಗಿಸುವ ಜರೂರು ಪಕ್ಷಕ್ಕಿತ್ತು. ಆಗ ಕಣ್ಣಿಗೆ ಬಿದ್ದವರೇ ಭೂಪೇಂದ್ರ ಪಟೇಲ್. ಪಕ್ಷ ನಿಷ್ಠ ಪಟೇಲ್ ತಮ್ಮ ಗುರಿಯನ್ನು ಸಾಧಿಸಿದರು. ಯಾವುದೇ ಹಮ್ಮು ಬಿಮ್ಮಿಲ್ಲದ, ಆಧ್ಯಾತ್ಮಿಕ ಪ್ರವೃತ್ತಿಯ ಶಾಂತ ಚಿತ್ತ ಭೂಪೇಂದ್ರ ಹೈಕಮಾಂಡ್ ಮನಗೆದ್ದಿದ್ದರು. ಭೂಪೇಂದ್ರ ಪಟೇಲ್ ಅವರು ಮೋದಿಯವರ ಅಪ್ಪಟ ಅಭಿಮಾನಿ. ಮೋದಿಯವರೂ ಸಕಲ ಮಾರ್ಗದರ್ಶನ ನೀಡಿದ್ದಾರೆ. ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಸಿಎಂ ಆಗಿ ಭೂಪೇಂದ್ರ ಪಟೇಲ್ ಜಾರಿಗೊಳಿಸಿದ್ದರು. ನೀತಿ ಆಯೋಗದ ಸಭೆಗಳಲ್ಲಿ ಗುಜರಾತ್‌ನ ಆಡಳಿತಾಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದರು. ಉತ್ತಮ ಆಡಳಿತ, ರಫ್ತು, ಲಾಜಿಸ್ಟಿಕ್ಸ್ ಸಾಧನೆ, ಇಂಧನ ಮತ್ತು ಹವಾಮಾನ ಇಂಡೆಕ್ಸ್‌ನಲ್ಲಿ ರಾಜ್ಯ ಸುಧಾರಿಸಿತ್ತು.
ಗುಜರಾತ್‌ನಲ್ಲಿ ಬಿಜೆಪಿಯ ಪ್ರಬಲ ಮತ ಬ್ಯಾಂಕ್ ಎಂದೇ ಪಾಟೀದಾರ್ ( ಪಟೇಲ್) ಸಮುದಾಯ ಗುರುತಿಸಿಕೊಂಡಿದೆ. ಈ ಸಮುದಾಯದ ಆಕ್ರೋಶಕ್ಕೂ ಬಿಜೆಪಿ ಗುರಿಯಾಗಿತ್ತು. 2015ರಲ್ಲಿ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಪಾಟೀದಾರ್ ಸಮುದಾಯ ಬೀದಿಗಿಳಿದಿತ್ತು. ಮೀಸಲಾತಿಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪಟ್ಟು ಹಿಡಿದಿತ್ತು. ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಮುದಾಯಕ್ಕೆ ಕೋಟಾ ನೀಡಬೇಕು ಎಂದು ಆಗ್ರಹಿಸಿತ್ತು. ಪಟೇಲ್ ಸಮುದಾಯದ ಆಕ್ರೋಶದ ಪರಿಣಾಮ ಸೂರತ್‌ನಲ್ಲಿ ಬಿಜೆಪಿಗೆ ಪರ್ಯಾಯವಾಗಿ ಆಮ್ ಆದ್ಮಿ ಚಿಗುರಿಕೊಂಡಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇದು ಸ್ಪಷ್ಟವಾಗಿ ಕಾಣಿಸಿತ್ತು. ಬಿಜೆಪಿಯ ಹಿರಿಯ ನಾಯಕ ಕೇಶುಭಾಯಿ ಪಟೇಲ್ ಅವರ ನಿರ್ಗಮನದ ಬಳಿಕ ಪಾಟೀದಾರ್ ಸಮುದಾಯದಲ್ಲಿ ಬಿಜೆಪಿಗೆ ನಾಯಕರ ಕೊರತೆ ಕಾಡಿತ್ತು. ಈ ನಿರ್ವಾತವನ್ನು ಇದೀಗ ಭೂಪೇಂದ್ರ ಪಟೇಲ್ ತುಂಬಿದ್ದಾರೆ. ಸಮುದಾಯದ ಪ್ರಬಲ ನಾಯಕನಾಗಿ ಹೊರಹೊಮ್ಮಿದ್ದಾರೆ. ಪಟೇಲ್ ಸಮುದಾಯ ಕೆಲ ವರ್ಷಗಳಿಂದಲೂ ಭವಿಷ್ಯದ ನಾಯಕ ಎಂದು ಭೂಪೇಂದ್ರ ಅವರ ಮೇಲೆ ವಿಶ್ವಾಸ ಇಟ್ಟಿತ್ತು. ಚುನಾವಣಾ ಫಲಿತಾಂಶದಲ್ಲಿ ಅದು ಈಗ ಸಾಬೀತಾಗಿದೆ. ಪಾಟೀದಾರ್ ಸಮುದಾಯದ ಐದನೇ ಸಿಎಂ ಭೂಪೇಂದ್ರ ಪಟೇಲ್ ಆಗಿದ್ದಾರೆ. ರಾಜ್ಯದಲ್ಲಿ ಕೃಷಿಕ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ಸಿಎಂ ಆಗಿ ಅವರು ಜಾರಿಗೊಳಿಸಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡಿದ್ದಾರೆ. ಒಂದು ಕಡೆ ಪಕ್ಷದ ಸಂಘಟನೆ ಮತ್ತೊಂದು ಕಡೆ ಪಾಟೀದಾರ್ ಸಮುದಾಯದ ಪ್ರಬಲ ನಾಯಕನಾಗಿ ಹೊರಹೊಮ್ಮಿರುವುದು ಅವರ ಹೆಗ್ಗಳಿಕೆ. ಕೈಗಾರಿಕೆ, ಕೃಷಿ, ಶಿಕ್ಷಣ, ಆರೋಗ್ಯ ವಲಯದ ಸಾಧನೆ, ಪ್ರಧಾನಿ ಮೋದಿಯವರ ಆಪ್ತ ಶಿಷ್ಯನಾಗಿ, ಪಕ್ಷ ನಿಷ್ಠರಾಗಿ ಸಲ್ಲಿಸಿರುವ ಸೇವೆಯಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ ಭೂಪೇಂದ್ರ ಪಟೇಲ್.
ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ | ʼಕ್ಯಾಲ್ಕುಲೇಟಿವ್ ಟಾಸ್ಕ್‌ಮಾಸ್ಟರ್ʼ ಅರುಣ್ ಗೋಯಲ್