ಕೋವಿಡ್-೧೯ ಸಂದರ್ಭದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ನೇಮಕ ಪ್ರಕ್ರಿಯೆಗಳನ್ನು ಸರಿಯಾಗಿ ನಡೆಸಿರಲಿಲ್ಲ. ಹೀಗಾಗಿ ಈಗ ಖಾಲಿ ಇರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಕೇಂದ್ರ ಸರ್ಕಾರ ೧೦ ಲಕ್ಷ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿರುವುದು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೇ ಸರಿ.
ಈ ರೀತಿ ನೇಮಕ ಪ್ರಕ್ರಿಯೆ ಚುರುಕುಗೊಂಡಾಗ, ಅವಕಾಶವನ್ನು ಕರ್ನಾಟಕದ ಅಭ್ಯರ್ಥಿಗಳು ಸದುಪಯೋಗಪಡಿಸಿಕೊಳ್ಳಲೇಬೇಕು. ಸರಿಯಾದ ಸಿದ್ಧತೆ ಮಾಡಿಕೊಂಡು, ಒಂದಿಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಸರ್ಕಾರಿ ನೌಕರಿ ಪಡೆಯುವುದು ಕಷ್ಟವೇನಲ್ಲ. ಇತ್ತೀಚೆಗೆ ಸರ್ಕಾರಿ ನೇಮಕಾತಿಯಲ್ಲಿ ತಪ್ಪು ಹೆಜ್ಜೆಗಳನ್ನು ಇಡುವವರು, ಅಕ್ರಮಗಳಲ್ಲಿ ಭಾಗಿಯಾಗುವವರ ಸಂಖ್ಯೆ ಬಹಳ ಹೆಚ್ಚಿದೆ. ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ “ಉಪ್ಪು ತಿಂದವರು ನೀರು ಕುಡಿಯಲೇಬೇಕುʼʼ. ಇಂದಲ್ಲ ನಾಳೆ ಹೀಗೆ ಅಕ್ರಮವಾಗಿ ನೇಮಕಗೊಂಡವರು ಶಿಕ್ಷೆ ಅನುಭವಿಸುವ ದಿನ ಬಂದೇ ಬರುತ್ತದೆ. ಹೀಗಾಗಿ ಅಭ್ಯರ್ಥಿಗಳಲ್ಲಿ ನನ್ನ ಮನವಿ ಎಂದರೆ ಯಾವುದೇ ಕಾರಣಕ್ಕೂ ತಪ್ಪು ಹೆಜ್ಜೆ ಇಡಬೇಡಿ.
ಮೋಸ ಮಾಡುವವರಿದ್ದಾರೆ, ಎಚ್ಚರವಿರಲಿ!
ಈ ನೇಮಕಾತಿ ಚುರುಕುಗೊಂಡ ಸಂದರ್ಭದಲ್ಲಿ ವಂಚಕರು ಕೂಡ ಚುರುಕಾಗುತ್ತಾರೆ. ಹೀಗಾಗಿ ನೇಮಕಾತಿಯ ಅಧಿಸೂಚನೆ ಪ್ರಕಟಗೊಂಡಿದೆ ಎಂಬ ಮಾಹಿತಿ ಬಂದಾಗ ಅದು ಅಧಿಕೃತ ವೆಬ್‌ಸೈಟೇ ಎಂದು ಖಚಿತಪಡಿಸಿಕೊಂಡೇ ಮುಂದುವರಿಯಿರಿ. ಸರ್ಕಾರಿ ನೇಮಕಾತಿಗೆ (ಖಾಯಂ) ನೀತಿ, ನಿಯಮಗಳಿರುತ್ತವೆ. ಸರ್ಕಾರ ರೂಪಿಸಿದ ನೇಮಕಾತಿ ನಿಯಮದ ಪ್ರಕಾರವೇ ಪ್ರಕಟಣೆ ಹೊರಡಿಸಿ, ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಯಾರಾದರೂ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ಹಣ ಕೇಳಿದರೆ, ಮೋಸ ಹೋಗಬೇಡಿ. ಸರ್ಕಾರದ ಪ್ರತಿಯೊಂದು ನೇಮಕಾತಿಯ ಕುರಿತು ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಮ್ಮ “ವಿಸ್ತಾರ ನ್ಯೂಸ್ʼʼ (http://vistaranews.com/attribute-category/job/)ನಲ್ಲಿ ವಿವರವಾದ ಮಾಹಿತಿ ಪ್ರಕಟಿಸಿರುತ್ತಾರೆ. ಇದನ್ನೆಲ್ಲಾ ಗಮನಿಸಿಯೇ ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರಗಳ ಮೂಲಕವೇ ನೇಮಕ
ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ, ನಿಯಮಿತ ಹಾಗೂ ಇನ್ನಿತರ ಸಂಸ್ಥೆಗಳಲ್ಲಿನ ಹುದ್ದೆಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಮಾಡಿಕೊಳ್ಳುತ್ತದೆ. ಇದನ್ನು ಬಿಟ್ಟರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ನೇಮಕ ನಡೆಯುತ್ತದೆ. ಪ್ರಮುಖ ಇಲಾಖೆಗಳು ಉದಾಹರಣೆಗೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಕೆಪಿಟಿಸಿಎಲ್ ತಾವೇ ನೇಮಕಾತಿ ಪ್ರಾಧಿಕಾರ ರೂಪಿಸಿಕೊಂಡು ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತವೆ.
ಕೇಂದ್ರ ಸರ್ಕಾರ ಕೂಡ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೇ ಇಲಾಖೆಯಲ್ಲಿನ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹೀಗೆ ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕ ನೇಮಕ ಮಾಡಿಕೊಳ್ಳುತ್ತವೆ. ಹಾಗೆ ನೇರವಾಗಿ ಕಾಯಂ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಬರುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.
ಮೀಸಲಾತಿ ಲಾಭಕ್ಕೆ ದಾಖಲೆ ಬೇಕು!
ಸರ್ಕಾರದ ಎಲ್ಲ ಹುದ್ದೆಗಳೂ ಮೀಸಲಾತಿಯನ್ವಯ ಹಂಚಿಕೆಯಾಗಿರುತ್ತವೆ. ನೇಮಕಾತಿ ಅಧಿಸೂಚನೆಯಲ್ಲಿ ಈ ಹಂಚಿಕೆಯ ವಿವರವನ್ನು ನೀಡಲಾಗಿರುತ್ತದೆ. ಇದನ್ನು ನೋಡಿಕೊಂಡು ಮುಂದುವರಿಯಿರಿ. ಮೀಸಲಾತಿಯ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳನ್ನು ನೀವು ಹೊಂದಿರಲೇಬೇಕು. ದಾಖಲೆಗಳಿಲ್ಲದೆ, ನೀವು ಮೀಸಲಾತಿಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೆ, ನಿಮ್ಮ ಅರ್ಜಿ ಅನರ್ಹಗೊಳ್ಳುತ್ತದೆ.
ಪ.ಜಾ/ಪ.ಪಂ. ಅಭ್ಯರ್ಥಿಗಳು ನಮೂನೆ -ಡಿ ಯಲ್ಲಿ, ಪ್ರವರ್ಗ-1ರ ಅಭ್ಯರ್ಥಿಗಳು ನಮೂನೆ-ಇ ಯಲ್ಲಿ ಹಾಗೂ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ನಮೂನೆ -ಎಫ್ ನಲ್ಲಿ ಸಂಬಂಧಿತ ತಹಶೀಲ್ದಾರರವರಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ಹುದ್ದೆಗಳಿಗಾಗಿ ಆಯ್ಕೆ ಹೊಂದುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಜಾತಿ ಮೀಸಲಾತಿ ಪ್ರಮಾಣ ಪತ್ರಗಳನ್ನು ಆಯಾ ನೇಮಕಾತಿ ಪ್ರಾಧಿಕಾರದವರು ಅವುಗಳ ಸಿಂಧುತ್ವದ ಪರಿಶೀಲನೆಗೆ ಒಳಪಟ್ಟಂತೆ ನೇಮಕಾತಿಗೆ ಬದ್ದರಾಗಿರುತ್ತಾರೆ.
ಯಾರು ಯಾವ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂಬುದನ್ನು, ಪ್ರಮಾಣ ಪತ್ರ ಹೇಗಿರಬೇಕೆಂಬುದನ್ನು ಪ್ರತಿ ಅಧಿಸೂಚನೆಯ ಕೊನೆಯಲ್ಲಿ ನೀಡಲಾಗಿರುತ್ತದೆ. ಇದನ್ನು ಗಮನಿಸಿ, ಅಂತೆಯೇ ಪ್ರಮಾಣ ಪತ್ರ ಪಡೆದುಕೊಳ್ಳಿ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಮೀಸಲಾತಿ ಪ್ರಮಾಣ ಪತ್ರವನ್ನು ಸಂಬಂಧಿತ ತಹಸೀಲ್ದಾರ್‌ರವರಿಂದ ಅಂದರೆ ತಹಶೀಲ್ದಾರ್‌ರವರ ಸಹಿ ಮತ್ತು ಮೊಹರು ಅಥವಾ ಬಾರ್ ಕೋಡ್, ಹಾಲೋಗ್ರಾಮ್ ಮತ್ತು ವಾಟರ್ ಮಾರ್ಕ್‌ನೊಂದಿಗೆ ಪಡೆದಿಟ್ಟುಕೊಂಡಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಮೀಸಲಾತಿ ಪ್ರಮಾಣ ಪತ್ರಗಳು ರದ್ದಾಗುವವರೆಗೂ ಚಾಲ್ತಿಯಲ್ಲಿರುವುದರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನಿಗದಿಪಡಿಸಿದ ನಮೂನೆಯಲ್ಲಿ ಪಡೆದಿಟ್ಟುಕೊಂಡಿರಬೇಕು. ಹಿಂದುಳಿದ ವರ್ಗಗಳ ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತುಪ್ರವರ್ಗ-3ಬಿ ವರ್ಗದ ಮೀಸಲಾತಿ ಪ್ರಮಾಣ ಪತ್ರಗಳು 5 ವರ್ಷ ಚಾಲ್ತಿಯಲ್ಲಿರುತ್ತವೆ. ಅಭ್ಯರ್ಥಿಗಳು ಪಡೆದಿರುವ ಪ್ರಮಾಣ ಪತ್ರವು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರಬೇಕು. ಮೂಲ ದಾಖಲಾತಿ ಪರಿಶೀಲನೆಗೆ ಅರ್ಹರಾದಾಗ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಮೀಸಲಾತಿ ಪ್ರಮಾಣ ಪತ್ರದ ಮೂಲ ಪ್ರತಿಯನ್ನು ಪರಿ ಶೀಲನೆಗೆ ತಪ್ಪದೇ ಹಾಜರುಡಿಸಬೇಕು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಿ ಅವರ ಅಭ್ಯರ್ಥಿತನವನ್ನು ಸಾಮಾನ್ಯ ಅರ್ಹತೆಯಡಿಯಲ್ಲಿ ಅರ್ಹರಾದಲ್ಲಿ ಮಾತ್ರ ಪರಿಗಣಿಸಲಾಗುತ್ತದೆ.
ಈ ಹಿಂದೆ ಹೇಳಿದ ಹಾಗೆ ಪ್ರಮಾಣ ಪತ್ರಗಳ ನಮೂನೆಗಳನ್ನು ಅಧಿಸೂಚನೆಯ ಕೊನೆಯಲ್ಲಿ ತೋರಿಸಲಾಗಿರುತ್ತದೆ. ಈ ನಮೂನೆಗಳನ್ನು ಹೊರತುಪಡಿಸಿ ಇತರೆ ಯಾವುದೇ ನಮೂನೆಯಲ್ಲಿ ಪಡೆಯಲಾದ ಮೀಸಲಾತಿ ಪ್ರಮಾಣ ಪತ್ರಗಳನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿ ಶುಲ್ಕಕ್ಕೆ ದುಡ್ಡು ಹೊಂದಿಸಿಕೊಳ್ಳಿ!
ಸರ್ಕಾರದ ಯಾವುದೇ ನೇಮಕಾತಿಗಾದರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ. ಇದನ್ನು ಪಾವತಿಸಿದವರಿಗೆ ಮಾತ್ರ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಮೀಸಲಾತಿ ಅನ್ವಯವಾಗುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಶುಲ್ಕದಲ್ಲಿ ವಿನಾಯಿತಿಗಳನ್ನು ನೀಡಲಾಗಿರುತ್ತದೆ. ಒಂದೊಂದು ನೇಮಕಾತಿ ಪರೀಕ್ಷೆಗೆ ಅರ್ಜಿ ಶುಲ್ಕ ಬೇರೆ ಬೇರೆಯಾಗಿರುತ್ತವೆ. ಉದಾಹರಣೆಗೆ ಕೆಪಿಎಸ್‌ಸಿ ನಿಗದಿಪಡಿಸಿದಷ್ಟೇ ಅರ್ಜಿ ಶುಲ್ಕವನ್ನು ಕೆಇಎ ನಿಗದಿಪಡಿಸಿರಬೇಕೆಂದೇನೂ ಇಲ್ಲ. ಇದನ್ನು ತಿಳಿದುಕೊಂಡು, ಪರೀಕ್ಷೆಗೆ ಸಿದ್ಧತೆ ನಡೆಸುವುದರ ಜತೆಗೆ ಅರ್ಜಿ ಶುಲ್ಕ ಪಾವತಿಸಲು ಹಣ ಹೊಂದಿಸಿಕೊಳ್ಳಿ.
ಈಗ ಸರ್ಕಾರದ ಎಲ್ಲ ಹುದ್ದೆಗಳಿಗೂ ಆನ್‌ಲೈನ್‌ನಲ್ಲಿಯೇ ಅರ್ಜಿ ಆಹ್ವಾನಿಸಲಾಗುತ್ತದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಲೂ ಅವಕಾಶ ನೀಡಲಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಬ್ಯಾಂಕ್ ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲೂ ಅವಕಾಶ ನೀಡಲಾಗಿರುತ್ತವೆ. ನಿಮಗೆ ಯಾವುದು ಅನುಕೂಲವೋ ಅದನ್ನು ನೋಡಿಕೊಂಡು ಅರ್ಜಿ ಶುಲ್ಕ ಪಾವತಿಸಿ. ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸುವ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ಅಕೌಂಟ್ ಮಾಹಿತಿ ವಂಚಕರ ಪಾಲಾಗಿ, ನಿಮ್ಮ ಜೇಬು ಅಲ್ಲಲ್ಲ, ನಿಮ್ಮ ವ್ಯಾಲೆಟ್ ಖಾಲಿಯಾಗಿಬಿಡಬಹುದು!
ವಯೋಮಿತಿಯನ್ನು ಗಮನಿಸಿಕೊಳ್ಳಿ
ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದರೆ ಸರಿಯಾದ ವಯಸ್ಸಿರಬೇಕು. ಯಾವುದೇ ಹುದ್ದೆಗಾದರೂ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ತಿಳಿಸಿದಂತೆ ಆಯಾ ಹುದ್ದೆಗಳ ಎದುರಿಗೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಮೀಸಲಾತಿಗೆ ಅರ್ಹರಾದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿರುತ್ತದೆ. ಇದನ್ನು ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡೇ ಅರ್ಜಿ ಸಲ್ಲಿಸಬೇಕು.
ಕೆಲ ಅಭ್ಯರ್ಥಿಗಳು ಬೇರೆಲ್ಲೋ ಕೆಲಸ ಮಾಡುತ್ತಿರುತ್ತಾರೆ. ಕೊನೆಗೆ ಸರ್ಕಾರಿ ಕೆಲಸವೇ ಒಳ್ಳೆಯದು ಎಂದುಕೊಂಡು ನೇಮಕ ಪ್ರಕ್ರಿಯೆ ಪ್ರಾರಂಭವಾದಾಗ ಅರ್ಜಿ ಸಲ್ಲಿಸುತ್ತಾರೆ. ಇಂತವರು ವಯಸ್ಸಿನ ಕಡೆಗೆ ಗಮನ ನೀಡಿರುವುದಿಲ್ಲ. ವಯಸ್ಸು ಮೀರಿದ್ದರೆ ನೀವು ಅರ್ಹರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಏನೇನು ದಾಖಲೆಗಳಿರಬೇಕು?
ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗುವವರು ಕೆಲವು ಸಾಮಾನ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳು ಯಾವವು ಎಂಬುದನ್ನು ನೋಡೊಣ;
- ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ/ ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಅಥವಾ ಪ್ರಮಾಣ ಪತ್ರ /ಪಿಪಿಸಿ.
- ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ /ಶಾಲೆಯ ವರ್ಗಾವಣೆ ಪ್ರಮಾಣ ಪತ್ರ / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದೃತ ಭಾಗ.
- ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣ ಪತ್ರ ಮತ್ತು ಪಿಂಚಣಿ /ಗ್ರಾಚ್ಯುಟಿ ಪಡೆಯುತ್ತಿರುವ ಪ್ರಮಾಣ ಪತ್ರ ಮಾಜಿ ಸೈನಿಕ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಸೇವೆಯಲ್ಲಿರುವಾಗ ಮೃತಪಟ್ಟಿದ್ದಲ್ಲಿ ಅಥವಾ ಖಾಯಂ ಆಗಿ ಗಾಯಗೊಂಡಿರುವ ಪ್ರಮಾಣ ಪತ್ರ(ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ ಮಾತ್ರ)
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು -3ಬಿ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ)
- ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2ರಲ್ಲಿ ಗ್ರಾಮೀಣ ಮೀಸಲಾತಿ ಕೋರಿದ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು) (ಗ್ರಾಮೀಣ ಮೀಸಲಾತಿ ಕೋರಿದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1/ ಪ್ರವರ್ಗ-2ಎ/ ಪ್ರವರ್ಗ-2ಬಿ/ ಪ್ರವರ್ಗ-3ಎ/ಪ್ರವರ್ಗ-3ಬಿ ಅಭ್ಯರ್ಥಿಗಳು ನಮೂನೆ-2 ರಲ್ಲಿ ಮಾತ್ರ)
- ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
- ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರು (ಮೀಸಲಾತಿ ಕೋರಿದ್ದಲ್ಲಿ)
- ಸೇವಾನುಭವ ಪ್ರಮಾಣ ಪತ್ರಗಳು (ನಿಗದಿಪಡಿಸಿದ್ದಲ್ಲಿ)
- ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳ ಮೀಸಲಾತಿಗೆ ಸಂಬಂಧಿಸಿದ ಅರ್ಹತಾ ಪ್ರಮಾಣ ಪತ್ರ(ಮೀಸಲಾತಿ ಕೋರಿದ್ದಲ್ಲಿ- ಪ್ರಮಾಣ ಪತ್ರಗಳನ್ನು ಮೂಲ ದಾಖಲಾತಿ ಪರಿಶೀಲನೆ ಸಮಯದಲ್ಲಿ ಸಲ್ಲಿಸಿದ್ದರೂ ಪರಿಗಣಿಸಲಾಗುವುದು.)
- ಸ್ವ ಗ್ರಾಮ ಪ್ರೃಮಾಣ ಪತ್ರ (ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರಿದ್ದಲ್ಲಿ)
- ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅವರ ನೇಮಕಾತಿ ಪ್ರಾಕಾರದ ಸಹಿ ಹಾಗೂ ಮೊಹರುನೊಂದಿಗೆ ಪಡೆಯಲಾದ ನಿರಾಕ್ಷೇಪಣ ಪ್ರಮಾಣ ಪತ್ರು. (ಕ್ರೂಢೀಕೃತ/ ಆನ್ -ಲೈನ್ ಮುಖಾಂತರ ಪಡೆದಿರುವ ನಿರಾಕ್ಷೇಪಣ ಪ್ರೃಮಾಣ ಪತ್ರಗಳು ಇದ್ದಲ್ಲಿ ಅಂತಹ ನಿರಾಕ್ಷೇಪಣ ಪತ್ರಗಳನ್ನು ನೇಮಕಾತಿ ಪ್ರಾಧಿಕಾರಿದಿಂದ ದೃಢೀಕರಿಸಿರಬೇಕು).
ಗಮನಿಸಿ: ಎಲ್ಲ ಪ್ರಮಾಣ ಪತ್ರಗಳೂ ನಿಗದಿತ ನಮೂನೆಯಲ್ಲಿರಬೇಕು. ಪ್ರಸ್ತುತ ಚಾಲ್ತಿಯಲ್ಲಿರಬೇಕು. ನಿಗದಿತ ನಮೂನೆಯು ಕೆಂದ್ರ ಮತ್ತು ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಬೇರೆ ಬೇರೆಯಾಗಿರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅಧಿಸೂಚನೆಯಲ್ಲಿ ನೀಡಲಾಗಿರುವ ನಮೂನೆಯಲ್ಲಿಯೇ ಪ್ರಮಾಣ ಪತ್ರವನ್ನು ಪಡೆದುಕೊಳ್ಳಿ. ಮಾರುಕಟ್ಟೆಯಲ್ಲಿ ನಮೂನೆಗಳು ಸಿಗುತ್ತವೆ. ಇದನ್ನು ಕೊಂಡುಕೊಳ್ಳುವ ಮೊದಲು ಸರಿಯಾದ ನಮೂನೆಯೇ ಎಂದು ಪರೀಕ್ಷಿಸಿಕೊಳ್ಳಿ.
ಲೇಖಕರ ಪರಿಚಯ: ಬ್ಯಾಂಕ್‌ನ ನಿವೃತ್ತ ಅದಿಕಾರಿಯಾಗಿರುವ ಆರ್ ಕೆ ಬಾಲಚಂದ್ರ ಅವರು ಕಳೆದ 38 ವರ್ಷಗಳಿಂದ ವಿವಿಧ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ರಾಜ್ಯದ ಅಭ್ಯರ್ಥಿಗಳನ್ನು ಅದರಲ್ಲೂ ಕನ್ನಡ ಮೀಡಿಯಂನಲ್ಲಿ ಓದಿದ, ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಾ ಬಂದಿದ್ದಾರೆ. ಇದುವರೆಗೂ ಒಟ್ಟಾರೆ 4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಇವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದು, ಇವರಲ್ಲಿ ಸಾವಿರಾರು ಅಭ್ಯರ್ಥಿಗಳು ಬ್ಯಾಂಕುಗಳಲ್ಲಿಯೇ ಉದ್ಯೋಗ ಪಡೆದುಕೊಂಡಿದ್ದಾರೆ. ಸುಮಾರು 45 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಸರಕಾರಿ/ಅರೆಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಲು ತಮ್ಮ ಬಿಡುವಿನ ವೇಳೆಯನ್ನು ಬಳಸಿಕೊಳ್ಳುತ್ತಾ ಬಂದಿರುವ ಇವರು ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ 3,84೮ ತರಬೇತಿ ಕಾರ್ಯಗಾರ ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶಿಯಾಗಿಯೂ ಚಿರಪರಿಚಿತರಾಗಿದ್ದಾರೆ.
ಇದನ್ನೂ ಓದಿ | Job News | ಸರ್ಕಾರಿ ಹುದ್ದೆಗೆ ಪರೀಕ್ಷೆ; 15 ಸಾವಿರ ಅಭ್ಯರ್ಥಿಗಳಿಗೆ ಸರ್ಕಾರದಿಂದ ಉಚಿತ ತರಬೇತಿ