Site icon Vistara News

Amrit mahotsav | ಬ್ರಿಟಿಷರನ್ನು ಬಗ್ಗುಬಡಿದ ಕಟ್ಟುನಿಟ್ಟಿನ ಅಧಿಕಾರಿ ಕಾಜಿಸಿಂಗ್‌

Vistara-Logo-Azadi-ka-amrit-Mahotsav
http://vistaranews.com/wp-content/uploads/2022/08/ಕಾಂಜಿ-ಸಿಂಗ್_.mp3

ಖಂದೇಶ್ ಮಹಾರಾಷ್ಟ್ರದ ಈಗಿನ ಜಳಗಾಂವ್ ಜಿಲ್ಲೆಯಲ್ಲಿರುವ ಒಂದು ಪ್ರದೇಶ. ೧೮೧೮ರಲ್ಲಿ ಬ್ರಿಟಿಷರು ಖಂದೇಶ್ ಸಂಸ್ಥಾನವನ್ನು ವಶಪಡಿಸಿಕೊಂಡರು. ಆದರೆ ಸ್ಥಳೀಯ ಭಿಲ್ಲರು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿದರು. ಕೂಡಲೇ, ಪೇಶ್ವೆ ಬಾಜಿರಾವ್-೨ ಅವರ ಸರ್ದಾರ ತ್ರ್ಯಂಬಕ್‌ಜೀ ಡೇಂಗ್ಲೆ ಮತ್ತು ಆತನ ಇಬ್ಬರು ಪುತ್ರರಾದ ಗೋಡಾಜಿ ಮತ್ತು ಮಹಿಪತ್ ಭಿಲ್ಲರ ಬಂಡಾಯದ ನೇತೃತ್ವ ವಹಿಸಿದರು. ೮೦೦೦ಕ್ಕೂ ಹೆಚ್ಚು ಭಿಲ್ಲರು ಇದರಲ್ಲಿ ಪಾಲ್ಗೊಂಡಿದ್ದರು. ೧೮೩೫ರಲ್ಲಿ ಸೇವಾರಾಂ ಎಂಬ ಅಕ್ಕಸಾಲಿ ಸತಾರಾದ ರಾಜನ ಹೆಸರಲ್ಲಿ ಬ್ರಿಟಿಷ್ ವಿರೋಧಿ ಬಂಡಾಯದ ನೇತೃತ್ವ ವಹಿಸಿದ್ದರು. ಖಂದೇಶ್‌ನಲ್ಲಿ ನಡೆದ ಈ ಬಂಡಾಯಕ್ಕೆ ಅನೇಕ ಸ್ಥಳೀಯ ದೇಶಮುಖರು ಸಕ್ರಿಯವಾಗಿ ಬೆಂಬಲ ನೀಡಿದರು.

ಕಾಜಿಸಿಂಗ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪೊಲೀಸ್ ಪಡೆಯಲ್ಲಿ ಖಂದೇಶ್‌ನಲ್ಲಿ ೧೮೩೧ರಿಂದ ೧೮೫೧ರವರೆಗೆ ಸೇವೆ ಸಲ್ಲಿಸಿದ್ದ ಒಬ್ಬ ಸಿಪಾಯಿ. ಸಿಂದ್ವಾದಿಂದ ಸಿರ್‌ಪುರ್‌ವರೆಗಿನ ೪೦ ಮೈಲಿ ರಸ್ತೆಯನ್ನು ಕಾವಲು ಕಾಯುವುದಕ್ಕೆ ತನ್ನ ಪಡೆಯೊಂದಿಗೆ ಆತನನ್ನು ನೇಮಿಸಲಾಗಿತ್ತು. ಕಾಜಿಸಿಂಗ್ ಒಬ್ಬ ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದರು. ೧೮೫೧ರಲ್ಲಿ ದರೋಡೆಕೋರನೊಬ್ಬನನ್ನು ಗಂಭೀರವಾಗಿ ಹೊಡೆದು ಸಾಯಿಸಿದ್ದಕ್ಕೆ ಆತನನ್ನು ಸೇವೆಯಿಂದ ವಜಾಗೊಳಿಸಲಾಯಿತು. ಮತ್ತು ೧೦ ವರ್ಷ ಸೆರೆವಾಸಕ್ಕೆ ತಳ್ಳಲಾಯಿತು. ೧೮೫೫ರಲ್ಲಿ, ಅದು ಹೇಗೋ ಆತನನ್ನು ಐದು ವರ್ಷಗಳ ಬಳಿಕ ಬ್ರಿಟಿಷರು ಬಂಧನದಿಂದ ಬಿಡುಗಡೆಗೊಳಿಸಿದ್ದರು.

೧೮೫೭ರಲ್ಲಿ, ಸ್ವಾತಂತ್ರ್ಯ ಸಮರದಲ್ಲಿ ಭಿಲ್ಲರ ವಿರುದ್ಧ ಮೇಲುಗೈ ಸಾಧಿಸಲು ಬ್ರಿಟಿಷ್ ಸರ್ಕಾರ ಮತ್ತೆ ಕಾಜಿಸಿಂಗ್‌ರನ್ನು ಸಿಂದ್ವಾ ಕಣಿವೆಯ ಹೊಣೆ ನೀಡಿ ಕರ್ತವ್ಯಕ್ಕೆ ನೇಮಿಸಿತು. ಆದರೆ ಈ ಬಾರಿ ಕಾಜಿಸಿಂಗ್, ಭೀಮಾ ನಾಯಕ್ ಮತ್ತು ಮೊವಾಸಿಯಾ ನಾಯಕ್‌ರಂತಹ ಸಹಕಾರಿಗಳೊಂದಿಗೆ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಮರದಲ್ಲಿ ಸಾತ್ಪುರ ಪರ್ವತ ಪ್ರದೇಶದಲ್ಲಿ ಸೇರಿಕೊಂಡರು.

೧೮೫೭ ಅಕ್ಟೋಬರ್ ೨೯ರಂದು ರಾತ್ರಿ ಕಾಜಿಸಿಂಗ್ ಮತ್ತು ಭೀಮಾನಾಯಕ್ ಸಾರಥ್ಯದಡಿ ೧೫೦ ಜನರು ಸಿರ್‌ಪುರದ ಮೇಲೆ ದಾಳಿ ನಡೆಸಿ, ಸಂಪತ್ತನ್ನು ದೋಚಿದರು. ಬ್ರಿಟಿಷ್ ಸೈನ್ಯದ ಕ್ಯಾಪ್ಟನ್ ಬಿರ್ಚ್ ೫೬ ಮೈಲಿ ದೂರ ಈ ತಂಡವನ್ನು ಬೆನ್ನಟ್ಟಿದರೂ ಅದು ವ್ಯರ್ಥವಾಯಿತು.

ಇದಲ್ಲದೆ ೧೮೫೭ ನವೆಂಬರ್ ೧ರಂದು ಕಾಜಿಸಿಂಗ್ ಮತ್ತು ಭೀಮಾನಾಯಕ್ ಪಡೆಗಳು ಬ್ರಿಟಿಷ್ ಪ್ರಧಾನ ಕಚೇರಿಗೆ ಕೇವಲ ೬ ಮೈಲು ದೂರವಿರುವ ಎರಡು ಗ್ರಾಮಗಳನ್ನು ವಶಪಡಿಸಿಕೊಂಡಿತು. ಭಿಲ್ಲರ ತಂಡಗಳು ಬ್ರಿಟಿಷ್ ಅಧಿಕಾರಕ್ಕೆ ಸೆಡ್ಡು ಹೊಡೆದು ಪಟ್ಟಣಗಳು ಹಾಗೂ ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯಲು ಕಾರ‍್ಯಾಚರಣೆಗಿಳಿದರು.

ಕಾಜಿಸಿಂಗ್ ಸಿಂದ್ವಾ ಕಣಿವೆ ಮೇಲೆ ಸಂಪೂರ್ಣ ಹತೋಟಿ ಸಾಧಿಸಿದ್ದರು. ೧೮೫೭ ನವೆಂಬರ್ ೧೭ರಂದು ಇಂದೋರ್‌ನಿಂದ ಬಾಂಬೆಗೆ ಸಾಗಿಸಲ್ಪಡುತ್ತಿದ್ದ ೭ ಲಕ್ಷ ರೂ.ಗೆ ಹೆಚ್ಚು ನಗದು ಮೊತ್ತದ ಬಾರೀ ಸಂಪತ್ತನ್ನುಳ್ಳ ಗಾಡಿಗಳು ಕಾಜಿಸಿಂಗ್ ವಶವಾದವು. ಆತ ಅವುಗಳನ್ನು ಖಂದೇಶ್‌ನಿಂದ ೧೦ ಮೈಲು ದೂರದ ಸಿಂದ್ವಾದಿಂದ ಹೊರಗೆ ಸಾಗಿಸಿ ಹೋಳ್ಕರ್ ಸಂಸ್ಥಾನಕ್ಕೆ ತಲುಪಿಸಿದರು.

ಅದಾದ ಮೇಲೆ, ಕಾಜಿಸಿಂಗ್, ಭೀಮಾನಾಯಕ್ ನೇತೃತ್ವದ ಪಡೆಗಳು ಸುಲ್ತಾನ್‌ಪುರ್ ಪ್ರದೇಶದ ಹಲವು ಹಳ್ಳಿಗಳ ಮೇಲೆ ದಾಳಿ ನಡೆಸಿದವು. ಆ ಪಡೆಗಳು ಅಫೀಮಿನಿಂದ ಭರ್ತಿಯಾಗಿದ್ದ ಅಂಗಡಿಗಳನ್ನು ಕೊಳ್ಳೆ ಹೊಡೆದದ್ದಲ್ಲದೆ ಅಂಚೆಕಚೇರಿಗಳನ್ನು ಧ್ವಂಸಗೊಳಿಸಿದರು. ಸಿಂದ್ವಾ ಕಣಿವೆಯಲ್ಲಿದ್ದ ಟೆಲಿಗ್ರಾಫ್ ತಂತಿಗಳನ್ನು ಕಡಿದು ಹಾಕಿದರು.

ಭಾರತೀಯರು ಹಾಗೂ ಬ್ರಿಟಿಷರ ನಡುವೆ ೧೮೫೮ ಏಪ್ರಿಲ್ ೧೧ರಂದು ಅಂಬಾಪಾನಿ ಎಂಬಲ್ಲಿ ಯುದ್ಧ ಆರಂಭವಾಯಿತು. ಅಂಬಾಪಾನಿಯಲ್ಲಿ ಆ ವೇಳೆ ಮೊಕ್ಕಾಂ ಹೂಡಿದ್ದ ಕಾಜಿಸಿಂಗ್, ದೌಲತ್‌ಸಿಂಗ್ ಮತ್ತು ಕಾಲು ಹವಾ ಇವರು ಬ್ರಿಟಿಷ್ ಸೈನ್ಯದ ಮೇಜರ್ ಇವಾನ್ಸ್ ವಿರುದ್ಧ ಭಯಂಕರ ದಾಳಿಯನ್ನೇ ನಡೆಸಿದರು. ಭಾರತೀಯ ಪಡೆಯಲ್ಲಿ ೩ ಸಾವಿರ ಬಲಶಾಲಿ ಸೈನಿಕರಿದ್ದು, ಅವರಲ್ಲಿ ಬಹುತೇಕರು ಭಿಲ್ಲರು ಮತ್ತು ಮಕ್ರಣಿಗಳು ಆಗಿದ್ದರು. ಜೊತೆಗೆ ಅರಬ್ಬರು ಹಾಗೂ ರೊಹಿಲ್ಲಾಗಳೂ ಇದ್ದರು.

ದೊಡ್ಡ ದೊಡ್ಡ ಕಲ್ಲುಬಂಡೆಗಳಿಂದಾವೃತವಾದ ಬೆಟ್ಟದ ಮೇಲೆ ಏಪ್ರಿಲ್ ೧೧ರಂದು ಭೀಷಣ ಕದನವೇ ಜರುಗಿತು. ಎರಡೂ ಕಡೆ ಸಾಕಷ್ಟು ಸಾವುನೋವುಗಳು ಸಂಭವಿಸಿದವು. ಬ್ರಿಟಿಷರ ಕಡೆ ಕ್ಯಾಪ್ಟನ್ ಬಿರ್ಚ್ ಹಾಗೂ ಲೆಫ್ಟಿನೆಂಟ್ ಬಸೇವಿ ಇಬ್ಬರೂ ಕೊಲ್ಲಲ್ಪಟ್ಟರು. ಭಾರತೀಯ ಪಡೆಯಲ್ಲಿ ಕಾಜಿಸಿಂಗ್ ಅವರ ಏಕೈಕ ಪುತ್ರ ಪೊಲಾರ್ ಸಿಂಗ್ ಸಾವಿಗೀಡಾದ. ಯಾವುದೇ ಖಚಿತ ಫಲಿತಾಂಶವಿಲ್ಲದೆ ಯುದ್ಧ ಕೊನೆಗೊಂಡಿತು. ಭಾರತೀಯರ ಕಡೆ ೨೪೨ ಮಂದಿ ತಮ್ಮ ಜೀವ ಕಳೆದುಕೊಂಡರು. ೭೨ ಮಂದಿಯನ್ನು ಬ್ರಿಟಿಷ್ ಸೈನ್ಯ ಸೆರೆ ಹಿಡಿದು, ವಿಚಾರಣೆ ನಡೆಸಿ, ಸಾಮಾಹಿಕವಾಗಿ ಸ್ಥಳದಲ್ಲೇ ಗುಂಡು ಹಾರಿಸಿ ಸಾಯಿಸಲಾಯಿತು.

ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತಮ್ಮ ಮನೆಯವರಿಗೆ ಸಹಕರಿಸಿದ ೪೦೦ಕ್ಕೂ ಹೆಚ್ಚು ಮಹಿಳೆಯರು ಹಾಗೂ ಅವರ ಜತೆ ಮಕ್ಕಳನ್ನು ಸೆರೆಯಾಳುಗಳನ್ನಾಗಿ ಬಂಧಿಸಲಾಯಿತು. ಇವರ ಪೈಕಿ ಕಾಜಿಸಿಂಗ್‌ರ ಪತ್ನಿ ಮತ್ತು ಸಹೋದರಿ ಕೂಡ ಇದ್ದರು. ೪೬ ಮಂದಿ ಮಹಿಳೆಯರು ನಾಪತ್ತೆಯಾದರು. ಕಾಜಿಸಿಂಗ್ ಬಂಧನವಾಗುವವರೆಗೂ ಭಾರತೀಯ ಪಡೆಯ ಮಹಿಳೆಯರು ಹಾಗೂ ಸಂಬಂಧಿಕರನ್ನು ಬ್ರಿಟಿಷರು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು

ಕಾಜಿಸಿಂಗ್ ಬಂಧನಕ್ಕೆ ಬ್ರಿಟಿಷರು ಭಾರೀ ಬಲೆಯನ್ನೇ ಬೀಸಿದರು. ಆದರೆ ಬೆಟ್ಟದಿಂದ ಬೆಟ್ಟಕ್ಕೆ ಅಲೆದಾಡಿದರೂ ಎರಡು ವರ್ಷಗಳವರೆಗೆ ಕಾಜಿಸಿಂಗ್‌ರನ್ನು ಬಂಧಿಸಲು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಆತನನ್ನು ಹಿಡಿದು ಕೊಟ್ಟವರಿಗೆ ಭಾರೀ ಬಹುಮಾನದ ಆಸೆಯನ್ನು ಬ್ರಿಟಿಷರು ಒಡ್ಡಿದರು. ಬ್ರಿಟಿಷರ ಬಹುಮಾನದಾಸೆಗಾಗಿ ಕಾಜಿಸಿಂಗ್‌ನ ಜೊತೆಗಾರನೊಬ್ಬ ಆತ ನಿದ್ರಿಸುತ್ತಿದ್ದಾಗ ಮೋಸದಿಂದ ತಲೆ ಕಡಿದು (೧೮೬೦?) ಸಾಯಿಸಿದನೆಂದು ಖಂದೇಶ್ ಹೋರಾಟಕ್ಕೆ ಸಂಬಂಧಿಸಿದ ದಾಖಲೆಗಳು ತಿಳಿಸುತ್ತವೆ. ಹೀಗೆ ಕಾಜಿಸಿಂಗ್ ಜೊತೆಗಾರನಿಂದಲೇ ಕೊಲೆಗೀಡಾಗಬೇಕಾಗಿ ಬಂತು.

ಅಂಬಾಪಾನಿಯ ಯುದ್ಧ ಮುಗಿದ ನಂತರವೂ ಸಿರ್‌ಪುರ್, ಸುಲ್ತಾನ್‌ಪುರ್, ಪಚೋರ, ಯವಲ್ ಮುಂತಾದೆಡೆ ಭಾರತೀಯ ಹಾಗೂ ಬ್ರಿಟಿಷ್ ಪಡೆಗಳ ನಡುವೆ ಸಶಸ್ತ್ರ ಸಂಘರ್ಷ ಮುಂದುವರಿದಿತ್ತು.

ಇದನ್ನೂ ಓದಿ | Amrit mahotsav | ಕೊಲ್ಹಾಪುರದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ ಚೀಮಾ ಸಾಹೇಬ್

Exit mobile version