Site icon Vistara News

Amrit Mahotsav | ಮ್ಯಾನ್ಸನ್‌ನ ರುಂಡ ಕತ್ತರಿಸಿ ಹಾಕಿದ ನರಗುಂದದ ಕೇಸರಿ ಬಾಬಾಸಾಹೇಬ

amrit mahotsav
https://vistaranews.com/wp-content/uploads/2022/08/WhatsApp-Audio-2022-08-26-at-13.01.08.mp3

ಈಗ ಗದಗ ಜಿಲ್ಲೆಗೆ ಸೇರಿರುವ ನರಗುಂದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿಹೋಗಿರುವ ಒಂದು ಪ್ರಮುಖ ಪ್ರದೇಶ. ಬ್ರಿಟಿಷ್‌ ಅಧಿಕಾರಿ ಮ್ಯಾನ್ಸನ್‌ನ ರುಂಡ ಕತ್ತರಿಸಿ ಅದನ್ನು ಕೋಟೆಯ ಬಾಗಿಲಿಗೆ ನೇತುಹಾಕಿದ ಕದನ ಕೇಸರಿ ಬಾಬಾಸಾಹೇಬನ ಜನ್ಮಸ್ಥಳ ಹಾಗೂ ಆತನಾಳಿದ ಸಂಸ್ಥಾನ.

ಜನರಿಗೆ ಬಾಬಸಾಹೇಬನೆಂದೇ ಚಿರಪರಿಚಿತನಾಗಿದ್ದ ಭಾಸ್ಕರರಾವ್‌ ಭಾವೆಯು ನರಗುಂದದ ದೊರೆ ದಾದಾಜಿರಾವ್‌ ಭಾವೆಯ ಹಿರಿಯ ಮಗ. ಅವನ ತಮ್ಮ ಹರಿಹರರಾವ್‌ ಭಾವೆಯನ್ನು ೧೮೨೯ ರಲ್ಲಿ ರಾಮದುರ್ಗದ ಸಂಸ್ಥಾನಿಕರು ದತ್ತು ತೆಗೆದುಕೊಂಡಿದ್ದರು. ೧೮೪೨ ರಲ್ಲಿ ತಂದೆಯ ನಿಧನದ ನಂತರ ಬಾಬಾಸಾಹೇಬನು ನರಗುಂದದ ಒಡೆಯನಾದನು. ಪ್ರತಿಭಾವಂತನಾಗಿದ್ದ ೨೮ ರ ಹರೆಯದ ಬಾಬಾಸಾಹೇಬ ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದಿದ್ದ. ಸಾಹಸಿ ಮತ್ತು ಸಮರ್ಥ ಆಡಳಿತಗಾರನೆಂದು ಅವನ ಕೀರ್ತಿ ಎಲ್ಲೆಡೆ ಹರಡಿತ್ತು.

೧೮೪೬ ರ ವೇಳೆಗೆ ಅವನಿಗಿದ್ದ ಏಕಮಾತ್ರ ಗಂಡುಮಗು ಅಕಾಲಮರಣಕ್ಕೆ ಈಡಾಯಿತು. ಬೇರೆ ಮಗುವನ್ನು ದತ್ತು ಪಡೆಯಲು ತಮ್ಮ ಕಡೆಯಿಂದ ಅನುಮತಿ ಪಡೆಯಬೇಕೆಂದು ಕಂಪನಿ ಸರ್ಕಾರದವರು ಷರತ್ತು ವಿಧಿಸಿದರು. ಅನುಮತಿ ಆಗ ದೊರೆಯುತ್ತಲೇ ಇರಲಿಲ್ಲ. ಬಾಬಾಸಾಹೇಬ ಇದಕ್ಕಾಗಿ ಅರ್ಜಿ ಸಲ್ಲಿಸಿ ಹತ್ತು ವರ್ಷ ಕಾದರೂ ಅನುಮತಿ ದೊರೆಯಲಿಲ್ಲ. ಬದಲಿಗೆ ದತ್ತು ಮಾಡಿಕೊಳ್ಳಕೂಡದೆಂದು ಹುಕುಂ ಜಾರಿಯಾಯಿತು. ಆ ವೇಳೆಗೆ ಭಾರತದ ಬೇರೆ ಬೇರೆ ಸಂಸ್ಥಾನಗಳಲ್ಲಿ ಇಂಗ್ಲಿಷರು ನಡೆಸುತ್ತಿದ್ದ ದಾಂಧಲೆಗಳನ್ನು ನರಗುಂದದ ದೊರೆ ಸೂಕ್ಷ್ಮವಾಗಿ ಗಮನಿಸಿದ. ದೇಶದ ಸ್ವಾತಂತ್ರ್ಯವನ್ನು ತುತ್ತುತುತ್ತಾಗಿ ಕಬಳಿಸುತ್ತಿದ್ದ ಪರಕೀಯ ಇಂಗ್ಲಿಷರ ಬಗ್ಗೆ ಅವನಿಗೆ ತಿರಸ್ಕಾರ, ದ್ವೇಷ ಬೆಳೆದವು

೧೮೫೭ರ ವೇಳೆಗೆ ಉತ್ತರದಲ್ಲಿ ಪ್ರಾರಂಭವಾಗಿದ್ದ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದ ಕಿಡಿಗಳು ದಕ್ಷಿಣಕ್ಕೂ ಹರಡತೊಡಗಿತು. ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯದ ಕಿಡಿಗಳು ಬೆಳಗಲಾರಂಭಿಸಿದವು. ಉತ್ತರ ಕರ್ನಾಟಕದ ಸಂಸ್ಥಾನಿಕರೆಲ್ಲರ ಆಶಾಕೇಂದ್ರವಾಗಿದ್ದ ಸುರಪುರದ ವೆಂಕಟಪ್ಪ ನಾಯಕ, ಕ್ರಾಂತಿಯ ಮತ್ತೊಬ್ಬ ಮುಂದಾಳು ಜಮಖಂಡಿಯ ರಾಜ ಮೊದಲಾದ ಅಗ್ರಪಂಕ್ತಿಯ ಕ್ರಾಂತಿಕಾರಿಗಳು ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯಗಳಿಗೆ ಬಲಿಯಾದಾಗ ಕ್ರಾಂತಿಯ ಪಂಜನ್ನು ಎತ್ತಿಹಿಡಿದು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡಿತ್ತು. ಆಗ ಉಳಿದವರಿಗೆ ಧೈರ್ಯ ತುಂಬಿ ಕ್ರಾಂತಿಯ ಪಂಜು ನಂದಿಹೋಗದಂತೆ ಎತ್ತಿಹಿಡಿದು ಅದಕ್ಕೆ ತೈಲವೆರೆದಿದ್ದು ನರಗುಂದದ ಕಲಿ ಬಾಬಾಸಾಹೇಬ.

ಧಾರವಾಡದಿಂದ ಈಶಾನ್ಯಕ್ಕೆ ಸುಮಾರು ೫೦ ಮೈಲಿಗಳ ದೂರದಲ್ಲಿದ್ದ ನರಗುಂದದ ದುರ್ಗವು ಎತ್ತರದಲ್ಲಿತ್ತು. ಅಭೇದ್ಯವಾಗಿತ್ತು. ಸುಭದ್ರವಾಗಿತ್ತು. ಬಾಬಾಸಾಹೇಬ ಅಲ್ಲಿ ಹೇರಳವಾಗಿ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವನೆಂಬ ಸುದ್ದಿ ಬ್ರಿಟಿಷರಿಗೆ ತಿಳಿಯಿತು. ಕಂಪನಿ ಸರ್ಕಾರ ಜಾರಿಗೆ ತಂದಿದ್ದ ನಿಶ್ಯಸ್ತ್ರೀಕರಣ ಕಾಯ್ದೆಯನ್ವಯ ಆಗ ಯಾರೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುವಂತಿರಲಿಲ್ಲ. ಅದೇ ವೇಳೆಗೆ ದಕ್ಷಿಣ ಮರಾಠಾ ಸಂಸ್ಥಾನಗಳ ಉಪರಾಜಕೀಯ ಪ್ರತಿನಿಧಿಯಾಗಿ ನೇಮಕಗೊಂಡವನು ಚಾರ್ಲಸ್‌ ಮ್ಯಾನ್ಸನ್‌ ಎಂಬ ಐ.ಸಿ.ಎಸ್.‌ ಪದವೀಧರ. ಗವರ್ನರ್‌ ಜನರಲ್ ಡಾಲ್‌ ಹೌಸಿಯಂತೆ ಈತನೂ ದುರಹಂಕಾರ ಮತ್ತ ಕ್ರೌರ್ಯಗಳ ಪ್ರತಿಮೂರ್ತಿಯಾಗಿದ್ದ. ದುಡುಕು ಸ್ವಭಾವದ ಮ್ಯಾನ್ಸನ್‌ ಭಾರತೀಯರನ್ನು ನಾಯಿಗಳಿಗಿಂತ ಕೀಳಾಗಿ ಕಾಣುತ್ತಿದ್ದ. ತಾನು ಅಧಿಕಾರ ವಹಿಸಿಕೊಂಡ ತಕ್ಷಣವೇ ೧೮೫೮ ರ ಮೇ ೧೬ ರಂದು ʼನಿಮ್ಮ ಬಳಿಯಿರುವ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನೆಲ್ಲ ಕೂಡಲೇ ಧಾರವಾಡಕ್ಕೆ ಕಳುಹಿಸಿಕೊಡತಕ್ಕದ್ದು. ಅವುಗಳು ದಂಗೆಕೋರರ ಪಾಲಾಗದಂತೆ ರಕ್ಷಿಸಿಡುವ ಹೊಣೆ ನಮ್ಮದುʼ ಎಂದು ಆಜ್ಞೆ ಹೊರಡಿಸಿದ.

ಈ ಆಜ್ಞೆ ನೋಡಿದೊಡನೆ ಬಾಬಾಸಾಹೇಬ ಕಿಡಿಕಿಡಿಯಾದ. ಆದರೆ ಆಂಗ್ಲರ ವಿರುದ್ಧ ಮೇ ೨೭ ರಂದು ಕ್ರಾಂತಿಗೆ ಮಹೂರ್ತವಿಡಲಾಗಿತ್ತು. ಹಾಗಾಗಿ ಅನುಮಾನ ಬರದಂತೆ ಅದುವರೆಗೆ ಗುಟ್ಟನ್ನು ಕಾಪಾಡಿಕೊಳ್ಳಲು ಒಂದಿಷ್ಟು ಸಣ್ಣಪುಟ್ಟ ಶಸ್ತ್ರಾಸ್ತ್ರಗಳನ್ನು ಧಾರವಾಡಕ್ಕೆ ಕಳುಹಿಸಿಕೊಟ್ಟ. ಉಳಿದುದನ್ನು ಮಳೆಗಾಲ ಮುಗಿದ ಬಳಿಕ ಕಳುಹಿಸುವುದಾಗಿ ಪತ್ರ ಬರೆದ. ಆದರೆ ಇದಾಗಿ ಮೂರ್ನಾಲ್ಕು ದಿನಗಳಲ್ಲೇ ಜನರಲ್ ಲೆಸ್ಟರ್‌ ಎಂಬುವನು ಸಣ್ಣದೊಂದು ಪಡೆಯೊಂದಿಗೆ ನರಗುಂದಕ್ಕೆ ಬಂದು, ನಿಮ್ಮಲ್ಲಿರುವ ಎಲ್ಲ ಶಸ್ತ್ರಾಸ್ತ್ರಗಳನ್ನೂ ಕೂಡಲೇ ಒಪ್ಪಿಸಬೇಕೆಂಬ ಮೇಲಧಿಕಾರಿಯ ಆದೇಶ ತೋರಿಸಿದ. ಬಾಬಾಸಾಹೇಬ ಇಂತಹ ಸಂದಿಗ್ಧ ಸ್ಥಿತಿಯಲ್ಲೂ ವಿಚಲಿತನಾಗದೆ ತನ್ನ ಬಳಿಯಿದ್ದ ಎಲ್ಲ ಶಸ್ತ್ರಾಸ್ತ್ರಗಳನ್ನೂ ಬಂಡಿಗಳಿಗೆ ಹೇರಿ, ಲೆಸ್ಟರನ ಸಹಾಯಕ್ಕೆಂದು ತನ್ನ ಕೆಲವರನ್ನೂ ಜೊತೆಗೆ ಕಳುಹಿಸಿಕೊಟ್ಟ. ಶಸ್ತ್ರಾಗಾರ ಸಂಪೂರ್ಣ ಖಾಲಿಖಾಲಿ. ನರಗುಂದದ ಜನತೆ ಗರ ಹೊಡೆದಂತೆ ನೋಡುತ್ತಿದ್ದರು. ಬಾಬಾಸಾಹೇಬ ಹೀಗೇಕೆ ಹೆದರಿ ಶರಣಾದ ಎಂದು ಎಷ್ಟು ಯೋಚಿಸಿದರೂ ಅವರಿಗರ್ಥವಾಗಲಿಲ್ಲ.

ಕಾಡಿನ ದಾರಿಯಲ್ಲಿ ಶಸ್ತ್ರಾಸ್ತ್ರ ಹೊತ್ತ ಬಂಡಿಗಳ ಚಕ್ರ ಸದ್ದುಮಾಡುತ್ತಾ ಉರುಳುತ್ತಿದ್ದಂತೆ ಕತ್ತಲಾಯಿತು. ಮರಗಿಡಗಳ ಗುಂಪು ದಟ್ಟವಾಗಿದ್ದ ಕಡೆ ಇದ್ದಕ್ಕಿದ್ದಂತೆ ನೂರಿನ್ನೂರು ಕಳ್ಳರ ಗುಂಪು ನುಗ್ಗಿ ಬಂದು ಬಂಡಿಗಳಿಗೆ ಕಾವಲಾಗಿ ಬರುತ್ತಿದ್ದ ಕೋವಿ ಹಿಡಿದವರನ್ನು ಹೊಡೆದುರುಳಿಸಿದರು. ಕುದುರೆಗಳ ಮೇಲಿದ್ದ ಸವಾರರನ್ನು ಕೆಳಗೊದ್ದು ಕೆಡವಿ, ತಾವೇ ಸವಾರರಾಗಿ ಬಂಡಿಗಳನ್ನು ಮತ್ತೆ ನರಗುಂದದತ್ತ ಹಿಂತಿರುಗಿಸಿದರು. ಗಾಯಗಳಿಂದ ತತ್ತರಿಸಿಹೋದ ಲೆಸ್ಟರನ ಪಡೆ ಅಲ್ಲಿಂದ ಓಟ ಕಿತ್ತರು. ಕೊಲ್ಹಾಪುರದಲ್ಲಿದ್ದ ಆಂಗ್ಲ ಸೇನಾಧಿಕಾರಿ ಮೇಜರ್‌ ಜನರಲ್ ಜಾರ್ಜ್‌ ಲಿಗ್ರಾಂಡ್‌ ಜೇಕಬ್‌ಗೆ ಕಳ್ಳರ ದಾಳಿ ಘಟನೆಯ ಬಗ್ಗೆ ತಂತಿ ಸಂದೇಶ ಹೋಯಿತು. ಆ ತಂತಿ ಸಂದೇಶವೇನೆಂದರೆ: ʼನರಗುಂದದ ದೊರೆ ನಮಗೊಪ್ಪಿಸಿದ್ದ ಎಲ್ಲ ಶಸ್ತ್ರಾಸ್ತ್ರಗಳನ್ನೂ ಅವರ ಕಡೆಯವರೇ ರಾತ್ರಿ ವೇಳೆ ದಾಳಿ ಮಾಡಿ ದೋಚಿಕೊಂಡು ಹೋದರು. ನಮ್ಮಲ್ಲಿ ಅನೇಕರಿಗೆ ತೀವ್ರ ಗಾಯಗಳಾಗಿವೆ.ʼ

ಇತ್ತ ತನ್ನ ದರ್ಪ, ದೌಲತ್ತು, ದುರಹಂಕಾರ ತೋರಿಸಿಕೊಳ್ಳಲು ಕೊಲ್ಹಾಪುರದಲ್ಲಿದ್ದ ಮ್ಯಾನ್ಸನ್‌ ಕರ್ನಾಟಕದ ಸಂಸ್ಥಾನಗಳಲ್ಲಿ ಸಂಚರಿಸತೊಡಗಿದ. ಜೇಕಬ್‌ ನರಗುಂದದ ಘಟನೆಯ ಬಗ್ಗೆ ಮ್ಯಾನ್ಸನ್‌ಗೆ ಪತ್ರ ಬರೆದು ತಕ್ಷಣ ಕೊಲ್ಹಾಪುರಕ್ಕೆ ಹಿಂದಿರುಗಿ ಬರುವಂತೆ ಸೂಚನೆ ನೀಡಿದ. ಕುರಂದವಾಡ ಎಂಬ ಸ್ಥಳದಲ್ಲಿ ಆ ಪತ್ರ ಹಿಡಿದು ಬಂದ ಕುದುರೆ ಸವಾರ ಮ್ಯಾನ್ಸನ್‌ನನ್ನು ಭೇಟಿ ಮಾಡಿ ಪತ್ರ ಕೊಟ್ಟ. ಆದರೆ ಮ್ಯಾನ್ಸನ್‌ಗೆ ತನ್ನ ಹಿರಿಯ ಅಧಿಕಾರಿಯ ಸೂಚನೆಯನ್ನು ಪಾಲಿಸುವಷ್ಟು ಸೌಜನ್ಯ ಇರಲಿಲ್ಲ. ʼಈಗ ನಾನು ಕೊಲ್ಹಾಪುರಕ್ಕೆ ಬರಲಾರೆ. ನೇರವಾಗಿ ನರಗುಂದಕ್ಕೆ ಹೋಗಿ ಬ್ರಿಟಿಷ್‌ ಸಾಮ್ರಾಜ್ಯಕ್ಕೆ ದ್ರೋಹವೆಸಗುವ ಪುಂಡರ ಸೊಕ್ಕಡಗಿಸಿಯೇ ವಾಪಸ್‌ ಬರುವೆʼ ಎಂದು ಜೇಕಬ್‌ನಿಗೆ ಪ್ರತ್ಯುತ್ತರ ಬರೆದು ಕಳುಹಿಸಿದ.

ನರಗುಂದದತ್ತ ಹೊರಟ ಮ್ಯಾನ್ಸನ್‌ ದಾರಿಯಲ್ಲಿ ಕಲಾದಗಿಯ ಪೂರ್ಣಸಿಂಗ್‌ ಎಂಬ ಮರಾಠಾ ಅಶ್ವದಳದ ಶೂರ ಅಧಿಕಾರಿಯನ್ನು ಬುಟ್ಟಿಗೆ ಹಾಕಿಕೊಂಡ. ರಾಮದುರ್ಗದಲ್ಲಿ ರಾಜನಾಗಿದ್ದ, ಬಾಬಾಸಾಹೇಬನ ಸ್ವಂತ ತಮ್ಮನೇ ಆಗಿದ್ದ ಹರಿಹರರಾವ್‌ ಭಾವೆ ತಾಯ್ನೆಲಕ್ಕೆ ಕಳಂಕ ಹಚ್ಚುವ ಪಾಪಿಯಾಗಿ ಮ್ಯಾನ್ಸನ್‌ ಜೊತೆ ಶಾಮೀಲಾಗಿ ತನ್ನಣ್ಣನಿಗೇ ದ್ರೋಹ ಬಗೆಯಲು ಹೊರಟ. ಬಾಬಾಸಾಹೇಬನ ತಮ್ಮನೇ ತನ್ನ ಕಡೆ ಸೇರಿಕೊಂಡ ಮೇಲೆ ಇನ್ನು ಬಾಬಾಸಾಹೇಬ ತನ್ನ ಬೂಟಿನ ಸಪ್ಪಳಕ್ಕೇ ಹೆದರಿ ಶರಣಾಗುವುದರಲ್ಲಿ ಸಂಶಯವಿಲ್ಲವೆಂದು ಮ್ಯಾನ್ಸನ್‌ ಮಂಡಿಗೆ ತಿನ್ನುತ್ತಾ ನರಗುಂದದಿಂದ ೨೦ ಮೈಲಿ ದೂರವಿದ್ದ ಸುರೇಬಾನಿಗೆ ತಲುಪಿದ.

ಮ್ಯಾನ್ಸನ್‌ನ ಚಲನವಲನಗಳ ಮೇಲೆ ನರಗುಂದದ ಗುಪ್ತಚಾರರು ಮಾತ್ರ ಕಣ್ಣಿಟ್ಟು ಕಾಯುತ್ತಿದ್ದರು. ಆತ ಸುರೇಬಾನಿಗೆ ತಲುಪಿದ ವಾರ್ತೆ ಬಾಬಾಸಾಹೇಬನಿಗೆ ಕೂಡಲೇ ರವಾನೆಯಾಯಿತು. ತಕ್ಷಣ ವಿಷ್ಣು ಹಿರೇಕೊಪ್ಪ ಮತ್ತು ಇನ್ನೂ ಕೆಲವು ತರುಣ ಸವಾರರೊಡನೆ ಸುರೇಬಾನಿಗೆ ಬಾಬಾಸಾಹೇಬ ಧಾವಿಸಿದ. ರಾತ್ರಿ ವೇಳೆ ಚಳಿ ಕಾಯಿಸಲೆಂದು ಬೆಂಕಿಯ ಸುತ್ತ ಕುಳಿತಿದ್ದರು, ಕಾವಲುಗಾರರು ಹಾಗೂ ದುರುಳ ಮ್ಯಾನ್ಸನ್.‌ ಮೊದಲು ಕಾವಲುಗಾರರನ್ನು ಕತ್ತರಿಸಿಹಾಕಿದ ನರಗುಂದದ ತರುಣರು ಅನಂತರ ಮ್ಯಾನ್ಸನ್‌ ಮೇಲೆರಗಿದರು. ಮ್ಯಾನ್ಸನ್‌ ತನ್ನ ಪಿಸ್ತೂಲಿನಿಂದ ಹಾರಿಸಿದ ಗುಂಡಿನಿಂದ ಒಬ್ಬನಿಗೆ ಗಾಯವಾಯಿತು. ಬಾಬಾಸಾಹೇಬ ತಡಮಾಡದೆ ಮುಂದೆ ನುಗ್ಗಿ ಮ್ಯಾನ್ಸನ್‌ನನ್ನು ನೆಲಕ್ಕೆ ಕೆಡವಿ, ಆತನ ತಲೆ ಹಾರಿಸಿದ. ಮುಂಡವನ್ನು ಉರಿಯುತ್ತಿದ್ದ ಬೆಂಕಿಗೆಸೆದು ರುಂಡವನ್ನು ಕತ್ತಿಯ ತುದಿಗೆ ಸಿಕ್ಕಿಸಿಕೊಂಡು ಕುದುರೆಯೇರಿ ನರಗುಂದಕ್ಕೆ ಎಲ್ಲರೂ ರಾತ್ರಿ ಹೊರಟರು. ಬೆಳಗಾಗುವ ವೇಳೆಗೆ ನರಗುಂದದ ಕೋಟೆಯ ಅಗಸೆ ಬಾಗಿಲಲ್ಲಿ ಮ್ಯಾನ್ಸನ್‌ ಎಂಬ ದುಷ್ಟ ಆಂಗ್ಲ ಅಧಿಕಾರಿಯ ರಕ್ತಸಿಕ್ತ ರುಂಡ ನೇತಾಡುತ್ತಿದ್ದುದನ್ನು ಜನರು ಕಂಡರು. ನರಗುಂದದ ದೊರೆಯ ಕ್ಷಾತ್ರತೇಜಸ್ಸು ಎಂತಹದೆಂದು ಆ ವಿದ್ಯಮಾನ ಸಾರಿಸಾರಿ ಹೇಳುತ್ತಿತ್ತು.

ಮ್ಯಾನ್ಸನ್‌ನ ರುಂಡದೊಂದಿಗೆ ಆತನ ಬಳಿಯಿದ್ದ ಕಾಗದಪತ್ರಗಳನ್ನೂ ಬಾಬಾಸಾಹೇಬ ತಂದಿದ್ದ. ಅವುಗಳನ್ನು ಪರಿಶೀಲಿಸಿ ನೋಡಲಾಗಿ ತನ್ನ ಕೆಲವು ನೆಚ್ಚಿನ ವ್ಯಕ್ತಿಗಳೇ ವಿಶ್ವಾಸದ್ರೋಹ ಬಗೆದಿರುವ ಸಂಗತಿ ತಿಳಿದು ಸಿಡಿಲು ಬಡಿದಂತಾಯಿತು. ಗಾಬರಿಯಿಂದ ಶಸ್ತ್ರಾಸ್ತ್ರ ಸಂಗ್ರಹದ ಉಗ್ರಾಣಕ್ಕೆ ಧಾವಿಸಿದಾಗ ಮದ್ದುಗುಂಡುಗಳಿಗೆ ಸೆಗಣಿ ನೀರು ತುಂಬಿಸಿಟ್ಟಿದ್ದು ಕಂಡುಬಂತು. ಮಂತ್ರಿಯಾಗಿದ್ದ ಬನ್ಯಾಬಾಪು ಮತ್ತು ಕೃಷ್ಣಾಜಿಪಂತ ಜೋಶಿ ಎಂಬುವರು ಇಂಗ್ಲಿಷರ ಬಾಲಬಡುಕರಾಗಿ ಉಂಡಮನೆಗೇ ದ್ರೋಹ ಬಗೆದಿದ್ದರು.

ಮುಂದೇನೆಂದು ಚಿಂತಿಸಲು ಸಮಯವೇ ಇರಲಿಲ್ಲ. ಹೊರಗೆ ಅಳಿದುಳಿದಿದ್ದ ಮದ್ದುಗುಂಡುಗಳಿಂದಲೇ ಶತ್ರುವನ್ನು ಎದುರಿಸಲು ಸನ್ನದ್ಧನಾದ. ಕಂಪನಿಯ ಸೈನ್ಯ ಮಾಲ್ಕಮ್‌ನ ನೇತೃತ್ವದಲ್ಲಿ ನರಗುಂದದ ಮೇಲೆ ಏರಿಬಂತು. ಶತ್ರು ಸೈನ್ಯ ದುರ್ಗವನ್ನು ಮುತ್ತಿತು. ಘನಘೋರ ಯುದ್ಧವೇ ನಡೆದುಹೋಯಿತು. ಮದ್ದುಗುಂಡು ಮುಗಿಯುವವರೆಗೂ ಇಂಗ್ಲಿಷರಿಗೆ ಕೋಟೆಯೊಳಗಿನಿಂದ ತಕ್ಕ ಉತ್ತರ ದೊರಕುತ್ತಲೇ ಇತ್ತು. ಆದರೆ ನಿಧಾನವಾಗಿ ಸದ್ದಡಗಿತು. ಕಂಪನಿಯ ಸೈನಿಕರು ಕೋಟೆಯೊಳಗೆ ಲಗ್ಗೆಯಿಟ್ಟು ಲೂಟಿ, ಸುಲಿಗೆ ನಡೆಸಿದರು. ಬಾಬಾಸಾಹೇಬ ಬಹು ಪರಿಶ್ರಮದಿಂದ ಸಂಗ್ರಹಿಸಿದ್ದ ನಾಲ್ಕೈದು ಸಾವಿರ ಅಮೂಲ್ಯ ಸಂಸ್ಕೃತ ಗ್ರಂಥಗಳ ಭಂಡಾರಕ್ಕೂ ಬೆಂಕಿಯಿಟ್ಟರು.

ಬಾಬಾಸಾಹೇಬ ಕ್ರಾಂತಿಗೆ ಸಂಬಂಧಿಸಿದ ರಹಸ್ಯ ಕಾಗದಪತ್ರಗಳನ್ನೆಲ್ಲ ಸುಟ್ಟುಹಾಕಿ, ತನ್ನ ಜೀವದ ಗೆಳೆಯರಾದ ಗಂಗಾಧರ ಚಿಂತಾಮಣಿ, ಅಣ್ಣಾ ಸಹಸ್ರಬುದ್ಧೆ, ಪುರಚೂರು ಬಸ್ಸಾಜಿ, ಹನುಮಂತ ಬುರೆಗಲ್‌, ಬಾಬಾಜಿ ಜಾಂಬಿಯಾ ಮೊದಲಾದವರ ಜೊತೆ ಗುಪ್ತಮಾರ್ಗದಿಂದ ಕೋಟೆ ದಾಟಿ ಹೊರಗೆ ಹೊರಟ. ಆತನ ಪತ್ನಿ ಸಾವಿತ್ರಿ ಬಾಯಿ ಹಾಗೂ ಬಾಬಾಸಾಹೇಬನ ತಾಯಿ ಯಮುನಾಬಾಯಿ ಸುರಂಗ ಮಾರ್ಗದಿಂದ ಪಾರಾಗಿ ಕಾಡುಮೇಡುಗಳಲ್ಲಿ ಅಲೆದರು. ಕೊನೆಗೆ ಸಂಗಳಹಳ್ಳಿಯ ಬಳಿ ತಲುಪಿದಾಗ ಅವರಿಗೆ ಎದುರಿಗೆ ಕಂಡಿದ್ದು ರಭಸವಾಗಿ ಹರಿಯುತ್ತಿದ್ದ ಮಲಪ್ರಭಾ ನದಿ. ಇಬ್ಬರೂ ಕಡಿದಾದ ಜಾಗದಲ್ಲಿ ನಿಂತು ಸೆರಗಿಗೆ ಸೆರಗು ಸೇರಿಸಿ ಗಂಟುಹಾಕಿಕೊಂಡು ನದಿಗೆ ಹಾರಿದರು. ಮರುದಿನ ಬೆಳಿಗ್ಗೆ ಬೂದಿಹಾಳ ಗ್ರಾಮದ ಬಳಿ ಅವರಿಬ್ಬರ ಶವ ಪತ್ತೆಯಾಯಿತು. ತಕ್ಷಣ ಊರಿನ ಜನರು ಇಂಗ್ಲಿಷರಿಗೆ ಸುದ್ದಿ ಹೋಗುವ ಮೊದಲೇ ಅವೆರಡೂ ದೇಹಗಳಿಗೆ ಗೌರವಪೂರ್ವಕ ಅಗ್ನಿಸಂಸ್ಕಾರ ನೆರವೇರಿಸಿದರು.

ನರಗುಂದ ಸಂಪೂರ್ಣ ಕೈವಶವಾದ ಬಳಿಕ ಬಿಳಿಯರು ಬಾಬಾಸಾಹೇಬನ ಶೋಧನೆಗೆ ತೊಡಗಿದರು. ಬೆಳಗಾವಿಯ ಜಿಲ್ಲಾ ಪೊಲೀಸ್‌ ಅಧಿಕಾರಿ ಫ್ರಾಂಕ್‌ ಸೂಟರ್‌ ಎಲ್ಲೆಡೆಗೆ ಗುಪ್ತಚಾರರನ್ನು ಕಳಿಸಿದ. ಬಾಬಾಸಾಹೇಬ ಮಲಪ್ರಭೆ ನದಿ ದಾಟಿ ಉತ್ತರ ಹಿಂದುಸ್ಥಾನಕ್ಕೆ ತೆರಳಿ ನಾನಾಸಾಹೇಬನನ್ನು ಕೂಡಿಕೊಳ್ಳುವುದಕ್ಕೆ ಹೊರಟಿದ್ದಾನೆಂಬ ಮಾಹಿತಿ ಸಿಕ್ಕಿತು. ನದಿ ದಾಟಿ ಬಂದ ಸೂಟರ್‌ ತನ್ನ ತಂಡದೊಂದಿಗೆ ಅರಣ್ಯದಲ್ಲಿದ್ದ ಬಾಬಾಸಾಹೇಬ್‌ ಮತ್ತು ಜೊತೆಗಿದ್ದ ಇತರರನ್ನೂ ಬಂಧಿಸಿದ. ೧೮೫೮ ರ ಜೂನ್‌ ೧೨ ರಂದು ಬೆಳಗಾವಿಯಲ್ಲಿ ಸಾರ್ವಜನಿಕವಾಗಿ ಬಾಬಾಸಾಹೇಬನನ್ನು ಫಾಸಿಯ ಕಂಬಕ್ಕೆ ಆಂಗ್ಲರು ತೂಗುಹಾಕಿದರು.


ಅಮರಚೇತನದ ಸಮರಯಾತ್ರೆಗೆ ಕೊನೆಗೂ ಪೂರ್ಣವಿರಾಮ ಬಿತ್ತು.

ಇದನ್ನೂ ಓದಿ | Amrit Mahotsav | ಬ್ರಿಟಿಷರಿಗೆ ಭಯ ಹುಟ್ಟಿಸಿದ್ದ ಗಂಡೆದೆಯ ಧೀರ ರಾಮ್‌ಜಿ ಗೋಂಡ್

Exit mobile version