Site icon Vistara News

Shastri Birthday | ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಾಮಾಣಿಕರಷ್ಟೇ ಅಲ್ಲ, ದೇಶದ ಬಲಾಢ್ಯ ನಾಯಕ!

Lal Bahduru Shastri

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಪಂಡಿತ ಜವಾಹರ್ ಲಾಲ್ ನೆಹರು ಅವರು ತಮ್ಮ ಕಾರ್ಯಕ್ಷಮತೆಯ ಮೂಲಕವೇ ಪ್ರಭಾವ ಬೀರಿದ್ದರು. ಆಧುನಿಕ ಭಾರತವನ್ನು ಕಟ್ಟುವುದಕ್ಕಾಗಿ ಭದ್ರ ಅಡಿಪಾಯವನ್ನು ಹಾಕಿದ್ದರು. ಈ ಕಾರಣದಿಂದಲೇ ಅವರ ಬಳಿಕ ಭಾರತವನ್ನು ಮುನ್ನಡೆಸುವವರಾರು ಎಂಬ ಪ್ರಶ್ನೆಗೆ ಸ್ವತಃ ಕಾಂಗ್ರೆಸ್ ಬಳಿಯೂ ಉತ್ತರವಿರಲಿಲ್ಲ. ನೆಹರು ನಿಧನದ ಬಳಿಕ ಉಂಟಾದ ಶೂನ್ಯವನ್ನು ಸಮರ್ಥವಾಗಿ ತುಂಬಿದವರು ಬೇರೆ ಯಾರೂ ಅಲ್ಲ, ಅವರೇ ಲಾಲ್ ಬಹದ್ದೂರ್ ಶಾಸ್ತ್ರಿ(Lal Bahadur Shastri). ನೆಹರು ಅವರಷ್ಟೇ ಸಶಕ್ತವಾಗಿ ಭಾರತವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಶಾಸ್ತ್ರಿ ಅವರು ಸಕ್ಸೆಸ್ ಕಂಡರು. ಅವರಿಗೆ ಮರಣೋತ್ತರವಾಗಿ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ.

ಮಹಾತ್ಮ ಗಾಂಧಿ ಅವರ ಗ್ರಾಮೀಣ ಭಾರತ ಮತ್ತು ಜವಾಹರ್ ಲಾಲ್ ನೆಹರು ಅವರು ಆಧುನಿಕ ಭಾರತದ ಚಿಂತನೆ; ಯೋಜನೆ; ನೀತಿಗಳನ್ನು ಶಾಸ್ತ್ರಿ ಅವರು ಅಕ್ಷರಶಃ ಅನುಷ್ಠಾನಗೊಳಿಸಿದರು. ದಂಡೆತ್ತಿ ಬಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದ ಶಾಸ್ತ್ರಿ ಅವರು, ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿ ಭಾರತವನ್ನು ರೂಪಿಸಲು ಯಶಸ್ವಿಯಾದರು. 1964ರಿಂದ 1966ರವರೆಗೆ ಪ್ರಧಾನಿಯಾಗಿ ಕಡಿಮೆ ಅವಧಿಗೆ ಕೆಲಸ ಮಾಡಿದರೂ ಅವರ ಮೂಡಿಸಿದ ಛಾಪು ಹಿರಿದಾಗಿದೆ. ಪ್ರಧಾನಿಯಾಗುವುದಕ್ಕಿಂತಲೂ ಮೊದಲು ಅವರು ಕೇಂದ್ರ ಗೃಹ ಸಚಿವರು, ರೈಲ್ವೆ ಸಚಿವರಾಗಿಯೂ ಅತ್ಯುತ್ತಮ ಕೆಲಸ ಮಾಡಿದ್ದಾರೆ.

ಬಿಬಿಸಿಗೆ ಸಂದರ್ಶನ ನೀಡುತ್ತಿರುವ ಶಾಸ್ತ್ರಿ.

ದೇಶದಲ್ಲಿ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಗಳಿಗೆ ಶಾಸ್ತ್ರಿ ಅವರು ಮುನ್ನುಡಿ ಬರೆದರು. ಅಮುಲ್ ಮಿಲ್ಕ್ ಕೋ ಆಪರೇಟಿವ್ ಸೊಸೈಟಿಗೆ ಕೇಂದ್ರ ಸರ್ಕಾರ ಬೆಂಗಾವಲಾಗಿ ನಿಂತಿತು. ದೇಶದಲ್ಲಿ ಹೈನುಗಾರಿಕೆಗೆ ಹೊಸ ದಿಕ್ಕು ನೀಡುವುದಕ್ಕಾಗಿಯೇ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್ ಸ್ಥಾಪಿಸಿದರು. ಆಹಾರೋತ್ಪಾದನೆಯಲ್ಲಿ ಸ್ವಾಲಂಬನೆ ಸಾಧಿಸುವುದು 60ರ ದಶಕದಲ್ಲಿ ಭಾರತಕ್ಕೆ ಕೈಗೊಳ್ಳಬೇಕಿದ್ದ ಪ್ರಮುಖ ಆದ್ಯತೆಯ ಕೆಲಸವಾಗಿತ್ತು. ಈ ಸಂಗತಿಯನ್ನು ಮನಗಂಡ ಶಾಸ್ತ್ರಿ ಅವರು ಹಸಿರು ಕ್ರಾಂತಿಗೆ ಶ್ರೀಕಾರ ಹಾಕಿದರು. ಆಹಾರೋತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಮುಕ್ತವಾಗಿ ಕೈಗೊಂಡರು. ಇದರ ಪರಿಣಾಮವಾಗಿ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳು ದೇಶಕ್ಕೆ ಸಾಕಾಗುವಷ್ಟು ಗೋಧಿಯನ್ನು ಬೆಳೆಯಲು ಯಶಸ್ವಿಯಾದವು.

ಅಕ್ಟೋಬರ್ 2ರಂದು ಜನನ
1904 ಅಕ್ಟೋಬರ್ 02ರಂದು ಉತ್ತರ ಪ್ರದೇಶದ ಮೊಘಲ್‌ಸರಾಯ್‌ನಲ್ಲಿ ಶಾಸ್ತ್ರಿ ಜನಿಸಿದರು. ತಂದೆ ಶಾರದಾ ಪ್ರಸಾದ್ ಶ್ರೀವಾಸ್ತವ್ ಮತ್ತು ತಾಯಿ ರಾಮದುಲಾರಿ ದೇವಿ. ಶಾಸ್ತ್ರಿ ಅವರು ಹರೀಶ್ ಚಂದ್ರ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣವನ್ನು ಪೂರೈಸಿದರು. ಬಳಿಕ ಈಸ್ಟ್ ಸೆಂಟ್ರಲ್ ರೈಲ್ವೆ ಇಂಟರ್ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕಾಗಿ ಸೇರಿಕೊಂಡರು. ಕಾಶಿ ವಿದ್ಯಾಪೀಠದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶಾಸ್ತ್ರಿ ಅವರು ಕಾಲೇಜನ್ನು ತೊರೆದಿದ್ದರು. ಅಸ್ಪೃಶ್ಯರನ್ನು ಮೇಲೆತ್ತುವ ಗಾಂಧಿ ಕಾರ್ಯದಲ್ಲಿ ಶಾಸ್ತ್ರಿ ಕೂಡ ಭಾಗಿಯಾದರು. ಇದಕ್ಕಾಗಿ ಶಾಸ್ತ್ರಿ ಅವರು, ತಮ್ಮ ಉಚ್ಚ ಜಾತಿಯ ಸೂಚಕವಾಗಿದ್ದ ‘ಶ್ರೀವಾಸ್ತವ್’ ಎಂಬ ಅಡ್ಡ ಹೆಸರನ್ನೇ ಕೈ ಬಿಟ್ಟರು.

ಗಾಂಧಿ, ವಿವೇಕ, ಆ್ಯನಿಬೆಸೆಂಟ್
ತರುಣ ಲಾಲ್ ಬಹದ್ದೂರ್ ಶಾಸ್ತ್ರಿ ಮೇಲೆ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಹಾಗೂ ಆ್ಯನಿ ಬೆಸೆಂಟ್ ಅವರು ಗಾಢವಾಗಿ ಪ್ರಭಾವ ಬೀರಿದ್ದಾರೆ. ಗಾಂಧಿ ಅವರಿಂದ ಭಾರೀ ಪ್ರಭಾವಿತರಾಗಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಭಾಗವಾಗಿಯೇ, ಲಾಲಾ ಲಜಪತ್ ರೈ ಅವರು ಆರಂಭಿಸಿದ ಸರ್ವೆಂಟ್ಸ್ ಆಫ್ ದಿ ಪೀಪಲ್ಸ್ ಸೊಸೈಟಿ(ಲೋಕ ಸೇವಕ ಮಂಡಲ್)ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹಂತದಲ್ಲಿ ನಾನಾ ಹುದ್ದೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡರು. 1947ರಲ್ಲಿ ಸ್ವಾತಂತ್ರ್ಯ ದೊರೆತ ಬಳಿಕ ಪ್ರಥಮ ಪ್ರಧಾನಿ ನೆಹರು ನೇತೃತ್ವದ ಸರ್ಕಾರದಲ್ಲಿ ಭಾಗಿಯಾದರು. ಮೊದಲಿಗೆ ರೈಲ್ವೆ ಖಾತೆ ನಿರ್ವಹಿಸಿದರು. ಬಳಿಕ ಗೃಹ ಖಾತೆ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿದರು. ನೆಹರು ಅವರ ಸಚಿವ ಸಂಪುಟದಲ್ಲಿಅತ್ಯಂತ ಪ್ರಭಾವಿ ಹಾಗೂ ಮಹತ್ವದ ಸಚಿವರಾಗಿದ್ದರು ಶಾಸ್ತ್ರಿ.

ಪತ್ನಿ ಲಲಿತಾದೇವಿ ಜತೆ ಶಾಸ್ತ್ರಿ ಅವರು.

1965ರ ಯುದ್ಧದಲ್ಲಿ ಗೆಲುವು
1962ರಲ್ಲಿ ಚೀನಾದ ವಿರುದ್ಧ ಭಾರತ ಸೋಲು ಕಂಡಿತ್ತು. ಭಾರತ ಸೇನೆಯು ದುರ್ಬಲವಾಗಿದೆ ಎಂದು ಭಾವಿಸಿದ ಪಾಕಿಸ್ತಾನವು 1965ರಲ್ಲಿ ಭಾರತದ ಮೇಲೆ ಯುದ್ಧ ಘೋಷಿಸಿತು. ಸೌಮ್ಯ ಸ್ವಭಾವದ ಪ್ರಧಾನಿ ಶಾಸ್ತ್ರಿ ಅವರನ್ನು ಪಾಕಿಸ್ತಾನ ಲುಘವಾಗಿ ಪರಿಗಣಿಸಿತ್ತು. ಆದರೆ, ಶಾಸ್ತ್ರಿ ಅವರು ನೋಡಲು ಮಾತ್ರವೇ ಸೌಮ್ಯದವರಾಗಿದ್ದರು. ಯುದ್ಧದಂಥ ಪರಿಸ್ಥಿತಿಯಲ್ಲಿ ಒಬ್ಬ ನಾಯಕ ಯಾವೆಲ್ಲ ಕಠಿಣತೆಯನ್ನು ಪ್ರದರ್ಶಿಸಬೇಕೋ ಅದನ್ನೆಲ್ಲ ಶಾಸ್ತ್ರಿ ಮಾಡಿದರು. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದರು. ಭಾರತೀಯ ಸೇನೆ ಆಲ್ಮೋಸ್ಟ್ ಲಾಹೋರ್ ಹೆಬ್ಬಾಗಿಲಲ್ಲಿ ನಿಂತಿತ್ತು. ಶಾಸ್ತ್ರಿ ಅವರ ಒಂದು ಸಿಗ್ನಲ್ ಕೊಟ್ಟಿದ್ದರೆ ಲಾಹೋರ್ ನಗರವನ್ನು ವಶಪಡಿಸಿಕೊಳುತ್ತಿತ್ತು. ಪಾಕಿಸ್ತಾನವನ್ನು ಬಗ್ಗು ಬಡಿಯುವಲ್ಲಿ ಭಾರತವು ಶಾಸ್ತ್ರಿ ನೇತೃತ್ವದಲ್ಲಿ ಯಶಸ್ವಿಯಾಗಿತ್ತು. ಈ ವೇಳೆ, ಅವರು ‘ಜೈವಾನ್ ಜೈ ಕಿಸಾನ್’ ಎಂಬ ಘೋಷಣೆಯನ್ನು ದೇಶಕ್ಕೆ ನೀಡಿದರು. ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ರೈತರು ಮತ್ತು ಸೈನಿಕರು ಇಬ್ಬರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆಂಬುದು ಈ ಘೋಷಣೆ ಹಿಂದಿನ ಧ್ಯೇಯವಾಗಿತ್ತು.

ಪಾಕಿಸ್ತಾನ-ಭಾರತ ನಡುವೆ ಯುದ್ಧ ವಿರಾಮ ಘೋಷಿಸಲಾಗಿತ್ತು. ಈ ಸಂಬಂಧ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕಲು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಾಷ್ಕೆಂಟ್‌(ಇಂದಿನ ಉಜ್ಬೇಕಿಸ್ತಾನದ ರಾಜಧಾನಿ) ನಗರಕ್ಕೆ ಹೋಗಿದ್ದರು. 1966 ಜನವರಿ 11ರಂದು ಹೃದಯಾಘಾತದಿಂದ ನಿಧನರಾದರು. ಆದರೆ, ಈವರೆಗೂ ಶಾಸ್ತ್ರಿ ಕುಟುಂಬವು, ಸಾವಿನ ಕಾರಣಕ್ಕೆ ಸಹಮತ ವ್ಯಕ್ತಪಡಿಸಿಲ್ಲ.

ಹೆಂಡತಿ, ಮಕ್ಕಳು
ಶಾಸ್ತ್ರಿ ಅವರು 5 ಅಡಿ 2 ಇಂಚ್ ಎತ್ತರವಿದ್ದರು. ಯಾವಾಗಲೂ ಧೋತಿಯನ್ನು ಧರಿಸುತ್ತಿದ್ದರು. 1961ರಲ್ಲಿ ಬ್ರಿಟನ್ ರಾಣಿ ಅವರು ಭಾರತಕ್ಕೆ ಬಂದಾಗ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭೋಜನಕೂಟ ಆಯೋಜಿಸಲಾಗಿತ್ತು. ಆಗ ಮಾತ್ರವೇ ಶಾಸ್ತ್ರಿ ಪೈಜಾಮಾ ಧರಿಸಿದ್ದರಂತೆ. 1928 ಮೇ 16ರಂದು ಮಿರ್ಜಾಪುರದ ಲಲಿತಾ ದೇವಿ ಅವರನ್ನು ಶಾಸ್ತ್ರಿ ಲಗ್ನವಾದರು. ದಂಪತಿಗೆ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರು. ಕುಸುಮ್, ಹರಿಕೃಷ್ಣ್, ಅನಿಲ್, ಸುನಿಲ್, ಅಶೋಕ್. ಈ ಪೈಕಿ ಕೆಲವರು ಕಾಂಗ್ರೆಸ್ ಮತ್ತು ಬಿಜೆಪಿಯ ಪಕ್ಷದ ಸದಸ್ಯರಾಗಿದ್ದಾರೆ. ಅನಿಲ್ ಶಾಸ್ತ್ರಿ ಅವರ ಪುತ್ರ ಆದರ್ಶ ಶಾಸ್ತ್ರಿ ಅವರು ಆಪ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ. ಸುಮನ್ ಶಾಸ್ತ್ರಿ ಅವರ ಪುತ್ರ ಸಿದ್ಧಾರ್ಥ ನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಸ್ತ್ರಿ ಅವರು ಕುಟುಂಬಸ್ಥರು ರಾಜಕೀಯ, ಕಾರ್ಪೊರೇಟ್ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನೆಹರು, ಕಾಮರಾಜ್ ಅವರು ಜತೆಯಲ್ಲಿ ಶಾಸ್ತ್ರಿ.

ಜಾತ್ಯತೀತ ನಾಯಕ
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜಾತ್ಯತೀತ ತತ್ವದ ಪ್ರತಿಪಾದಕರಾಗಿದ್ದರು. ರಾಜಕಾರಣದೊಂದಿಗೆ ಧರ್ಮವನ್ನು ಬೆಸೆಯುವುದನ್ನು ಅವರು ವಿರೋಧಿಸುತ್ತಿದ್ದರು. ಶಾಸ್ತ್ರಿ ಅವರು ಹಿಂದೂವಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಬಿಬಿಸಿ ವರದಿಯ ಬಗ್ಗೆ ಅಸಮಾಧಾನ ಹೊಂದಿದ್ದರು. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ಅವರು, ” ನಾನು ಹಿಂದೂ ಆಗಿದ್ದರೆ, ಈ ಸಭೆಯ ಅಧ್ಯಕ್ಷತೆ ವಹಿಸುತ್ತಿರುವ ಮೀರ್ ಮುಷ್ತಾಕ್ ಮುಸ್ಲಿಂ. ನಿಮ್ಮನ್ನು ಉದ್ದೇಶಿಸಿ ಮಾತನಾಡಿದ ಫ್ರಾಂಕ್ ಆಂಟನಿ ಒಬ್ಬ ಕ್ರಿಶ್ಚಿಯನ್. ಇಲ್ಲಿ ಸಿಖ್ ಮತ್ತು ಪಾರ್ಸಿಗಳೂ ಇದ್ದಾರೆ. ನಮ್ಮ ದೇಶದ ವಿಶಿಷ್ಟತೆಯೆಂದರೆ ನಮ್ಮಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಪಾರ್ಸಿಗಳು ಮತ್ತು ಇತರ ಎಲ್ಲ ಧರ್ಮಗಳ ಜನರು ಇದ್ದಾರೆ. ನಮ್ಮಲ್ಲಿ ದೇವಾಲಯಗಳು ಮತ್ತು ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳಿವೆ. ಆದರೆ ಇದನ್ನೆಲ್ಲ ನಾವು ರಾಜಕೀಯಕ್ಕೆ ತರುವುದಿಲ್ಲ. ಇದೇ ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯತ್ಯಾಸ. ಪಾಕಿಸ್ತಾನವು ತನ್ನನ್ನು ತಾನು ಇಸ್ಲಾಮಿಕ್ ಸ್ಟೇಟ್ ಎಂದು ಕರೆದುಕೊಳ್ಳುತ್ತದೆ ಮತ್ತು ಧರ್ಮವನ್ನು ರಾಜಕೀಯ ಅಂಶವಾಗಿ ಬಳಸುತ್ತದೆ. ಆದರೆ ನಾವು ಭಾರತೀಯರು ನಾವು ಆಯ್ಕೆ ಮಾಡಿದ ಯಾವುದೇ ಧರ್ಮವನ್ನು ಅನುಸರಿಸಲು ಮತ್ತು ನಾವು ಇಷ್ಟಪಡುವ ರೀತಿಯಲ್ಲಿ ಪೂಜಿಸಲು ಸ್ವಾತಂತ್ರ್ಯವನ್ನು ಹೊಂದಿದ್ದೇವೆ. ರಾಜಕೀಯಕ್ಕೆ ಸಂಬಂಧಿಸಿದಂತೆ, ನಮ್ಮಲ್ಲಿ ಪ್ರತಿಯೊಬ್ಬರೂ ಭಾರತೀಯರಾಗಿದ್ದಾರೆ,” ಎಂದು ಹೇಳಿದ್ದರು. ಆ ಮೂಲಕ ಭಾರತವು ಜಾತ್ಯತೀತ ತತ್ವದ ಮೇಲೆ ನಿರ್ಮಾಣವಾಗುತ್ತಿದೆ ಎಂಬುದನ್ನು ಸಾರಿದ್ದರು.

ಶಾಸ್ತ್ರಿ ಬಳಿ ಇದ್ದದ್ದುಒಂದು ಕಾರಷ್ಟೇ
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳನ್ನು ನಿರ್ವಹಿಸಿದವರು. ಎರಡು ವರ್ಷ ಕಾಲ ಪ್ರಧಾನಿಯಾಗಿದ್ದವರು. ಆದರೆ, ಅವರ ನಿಧನದ ಬಳಿಕ ಗೊತ್ತಾಗಿದ್ದು ಏನೆಂದರೆ, ಅವರ ಹೆಸರಿನಲ್ಲಿ ಆಸ್ತಿ ಅಂತ ಇದ್ದದ್ದು ಕಾರ್ ಮಾತ್ರ. ಅದನ್ನು ಅವರು ತಿಂಗಳ ಕಂತಿನ ಆಧಾರದ ಮೇಲೆ ಖರಿದಿಸಿದ್ದರು. ಇಂದಿನ ಕಾಲದ ರಾಜಕಾರಣಿಗಳಿಗೆ ಒಮ್ಮೆ ಅಧಿಕಾರ ಸಿಕ್ಕರೆ ಸಾಕು ನಾಲ್ಕು ತಲೆಮಾರುಗಳಿಗಾಗುವಷ್ಟು ಆಸ್ತಿಯನ್ನು ಸಂಪಾದಿಸುತ್ತಾರೆ. ಅಂಥದ್ದರಲ್ಲಿ ಶಾಸ್ತ್ರಿ ಅವರು ಬಡವರಾಗಿಯೇ ಇದ್ದರು ಎಂದರೆ ಅವರ ಪ್ರಮಾಣಿಕತೆಯ ಅರಿವು ನಮಗಾಗುತ್ತದೆ.

ಸರಳತೆ, ಪ್ರಾಮಾಣಿಕತೆ, ನಿಷ್ಠ, ಶೃದ್ಧೆಯ ಮೂಲಕ ಇಡೀ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು ಶಾಸ್ತ್ರಿ ಅವರು. ಗಾಂಧಿ ಹಾದಿಯಲ್ಲೇ ಸಾಗಿ ನೆಹರು ಕಂಡ ಕನಸು ನನಸಾಗಿಸುವ ಮೂಲಕ ದೇಶವನ್ನು ಪ್ರಗತಿಯ ಮತ್ತೊಂದು ಹಂತಕ್ಕೆ ಕೊಂಡ್ಯೊಯುವಲ್ಲಿ ಶಾಸ್ತ್ರಿ ಅವರ ಕಾಣಿಗೆ ಪ್ರಮುಖವಾಗಿದೆ.

ಇದನ್ನೂ ಓದಿ | ವಿಸ್ತಾರ Explainer: ಹೋಮಿ ಭಾಭಾ, ಶಾಸ್ತ್ರಿಯವರನ್ನು ಅಮೆರಿಕ ಕೊಂದಿತೇ? ವೆಬ್‌ ಸರಣಿ ಎಬ್ಬಿಸಿದ ಕುತೂಹಲ

Exit mobile version