Site icon Vistara News

Amrit Mahotsav | ಇಳಿ ವಯಸ್ಸಿನಲ್ಲಿಯೂ ಹಸನ್ಮುಖರಾಗಿ ನೇಣುಗಂಬ ಏರಿದ ಮಹಾರಾಜ ನಂದಕುಮಾರ

amrit mahotsav
https://vistaranews.com/wp-content/uploads/2022/08/nanda-kumara.mp3

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸುಮಾರು ನೂರು ವರ್ಷಗಳ ಹಿಂದೆಯೇ ಬ್ರಿಟಿಷರನ್ನು ದೇಶ ಬಿಟ್ಟು ಓಡಿಸುವ ಪ್ರಯತ್ನ ಭಾರತೀಯ ಹೋರಾಟಗಾರರಿಂದ ಆರಂಭವಾಗಿತ್ತು. ಅಂತಹ ಪ್ರಯತ್ನ ಕೈಗೊಂಡವರಲ್ಲಿ ಬಂಗಾಳದ ಮಹಾರಾಜ ನಂದಕುಮಾರ ಕೂಡ ಒಬ್ಬರು.

ನಂದಕುಮಾರ ಜನಿಸಿದ್ದು1705ರ ಆಸುಪಾಸಿನಲ್ಲಿ. ಬಂಗಾಳದ ಭೀರಭೂಮ್ ಪ್ರದೇಶದ ಭದ್ರಾಪುರ ಎಂಬಲ್ಲಿ ನೆಲೆಸಿದ್ದ ಪದ್ಮನಾಭ ರಾಯ್ ಎಂಬ ಶ್ರೀಮಂತನೇ ಆತನ ತಂದೆ. ಆತ ರಾಧಮೋಹನ ಠಾಕೂರ್ ಎಂಬ ಸಂತರಿಂದ ವೈಷ್ಣವ ಮತದ ದೀಕ್ಷೆ ಪಡೆದಿದ್ದರು. ಮೊಘಲ್ ಬಾದಶಹ ಎರಡನೇ ಷಾ ಅಲಂ ಆತನ ಪ್ರತಿಭೆ ಮತ್ತು ನಿಷ್ಠೆಗೆ ಮೆಚ್ಚಿ 1764ರಲ್ಲಿ ಮಹಾರಾಜ ಎಂಬ ಬಿರುದನ್ನು ದಯ ಪಾಲಿಸಿದ್ದ.

ಪ್ರಸಿದ್ಧ ಪ್ಲಾಸಿ ಕದನದ ಮುಖ್ಯ ಪಾತ್ರಧಾರಿ ಸಿರಾಜ್-ಉದ್-ದೌಲಾನ ಕಾಲದಲ್ಲಿ ನಂದಕುಮಾರ ಫೌಜುದಾರನಾಗಿದ್ದ. ಅನಂತರ ರಾಬರ್ಟ್ ಕ್ಲೈವನ ವಕೀಲನಾಗಿದ್ದ. ಆ ಕಾಲದಲ್ಲಿ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿದ್ದವನು ವಾರನ್ ಹೇಸ್ಟಿಂಗ್ಸ್. ಆತನಿಗೆ ಈಸ್ಟ್ ಇಂಡಿಯಾ ಕಂಪನಿ ಜೊತೆ ಕೆಲವು ಭಿನ್ನಾಭಿಪ್ರಾಯ ಉಂಟಾಗಿ, ಇಂಗ್ಲೆಂಡ್‌ಗೆ ಹಿಂದಿರುಗಿದ್ದ. ಆ ವೇಳೆಗೆ ಆತ ಬರ್ದ್ವಾನ್, ನಾಡಿಯಾ ಮತ್ತು ಹೂಗ್ಲಿ ಜಿಲ್ಲೆಗಳ ಕಲೆಕ್ಟರ್ ಆಗಿದ್ದ. ಹೇಸ್ಟಿಂಗ್ಸ್ ನಿಂದ ತೆರವಾದ ಈ ಸ್ಥಾನಕ್ಕೆ ನಂದಕುಮಾರನನ್ನು ಕಲೆಕ್ಟರ್ ಆಗಿ ಕಂಪನಿ ಸರ್ಕಾರ ನೇಮಿಸಿತು. ಕ್ಲೈವ್ ಗೆ ಆತ್ಮೀಯನಾಗಿದ್ದುದರಿಂದ ನಂದಕುಮಾರ್ ಬಗ್ಗೆ ಬ್ರಿಟಿಷರಿಗೆ ನಂಬಿಕೆ ಇತ್ತು.

ಆದರೆ ಬ್ರಿಟಿಷರು ಹಾಗೂ ಸಿರಾಜ್-ಉದ್-ದೌಲ್ ನಡುವೆ ನಡೆದ ಯುದ್ಧದ ಸಮಯದಲ್ಲಿ ಬ್ರಿಟಿಷರ ಮೋಸ, ವಂಚನೆ, ಕುಟಿಲ ತಂತ್ರಗಳನ್ನು ಕಣ್ಣಾರೆ ಕಂಡ ನಂದಕುಮಾರನಿಗೆ, ಬ್ರಿಟಿಷರು ಎಂದಿದ್ದರೂ ಭಾರತವನ್ನು ಸಂಪೂರ್ಣವಾಗಿ ಕಬಳಿಸಲು ಬಂದ ಖದೀಮರು ಎಂಬುದು ಮನದಟ್ಟಾಯಿತು. ಆ ದಿನಗಳಲ್ಲಿ ಬ್ರಿಟಿಷರ ದರ್ಪ ದಬ್ಬಾಳಿಕೆ ವಿರುದ್ಧ ಭಾರತದಲ್ಲಿ ಯಾವುದೇ ಬಗೆಯ ಜಾಗೃತಿಯಾಗಲಿ, ಜನರಲ್ಲಿ ರಾಷ್ಟ್ರಪ್ರಜ್ಞೆಯಾಗಲಿ, ಸ್ವಾತಂತ್ರ್ಯ ಪಡೆಯಬೇಕೆಂಬ ಇಚ್ಚೆಯಾಗಲಿ ಇರಲೇ ಇಲ್ಲ. ಈ ಕೊರತೆಯನ್ನು ಮೊದಲು ನೀಗಿಸಬೇಕೆಂದು ನಂದಕುಮಾರ ಜನಜಾಗೃತಿ ಹಾಗೂ ವಿಭಿನ್ನ ಸಂಸ್ಥಾನದ ದೊರೆಗಳನ್ನು ಸಂಘಟಿಸುವ ಕಾರ್ಯಕ್ಕೆ ಕೈ ಹಾಕಿದ.

ಬಹುಕಾಲ ಹೇಸ್ಟಿಂಗ್ಸ್‌ನ ಸಮೀಪವರ್ತಿಯಾಗಿದ್ದ ನಂದಕುಮಾರನಿಗೆ ಹೇಸ್ಟಿಂಗ್ಸ್‌ನ ಕುಟಿಲ ತಂತ್ರಗಾರಿಕೆ, ಲಂಚಗುಳಿ ತನ ಗಮನಕ್ಕೆ ಬರುವುದು ತಡವಾಗಲಿಲ್ಲ. ಹೇಸ್ಟಿಂಗ್ಸ್ ಗವರ್ನರ್ ಜನರಲ್ ಆಗಿ ನೇಮಕಗೊಂಡ ಎರಡೇ ವರ್ಷಗಳಲ್ಲಿ ಆತನ ವಿರುದ್ಧ ಲಂಚ ಪಡೆದ ಆರೋಪವನ್ನು ನಂದಕುಮಾರ ಹೊರಿಸಿದ್ದ. ಆ ದಿನಗಳಲ್ಲಿ ಬ್ರಿಟಿಷರೆಂದರೆ ಗಡಗಡ ಹೆದರಿ ನಡುಗುತ್ತಿದ್ದರು. ಅಂಥದ್ದರಲ್ಲಿ ನಂದಕುಮಾರ ಬ್ರಿಟಿಷ್ ಅಧಿಕಾರಿಯ ಮೇಲೆ ಲಂಚ ಪಡೆದ ಆರೋಪ ಹೊರಿಸುವ ದಿಟ್ಟತನ ಪ್ರದರ್ಶಿಸಿದ್ದ!

ನಂದಕುಮಾರ ಕೌನ್ಸಿಲ್ ಎದುರು ಹಾಜರಾಗಿ ತನ್ನ ವಾದವನ್ನು ಮಂಡಿಸಲು ಮುಂದಾದಾಗ ಹೇಸ್ಟಿಂಗ್ಸ್ “ಮನುಕುಲದ ಮಹಾ ರಾಕ್ಷಸ ನಂದಕುಮಾರ” ಎಂದು ಆತನನ್ನು ಬೈದು, ತನ್ನ ಬಗ್ಗೆ ವಿಚಾರಣೆ ನಡೆಸಲು ಕೌನ್ಸಿಲ್‌ಗೆ ಹಕ್ಕಿಲ್ಲ ಎಂದು ಅಬ್ಬರಿಸಿ, ಕೌನ್ಸಿಲ್ ಸಭೆಯನ್ನೇ ವಿಸರ್ಜಿಸಿ ಹೊರಗೆ ನಡೆದುಬಿಟ್ಟ. ಅನಂತರ ನಂದಕುಮಾರನ ಮೇಲೆಯೇ ಹೇಸ್ಟಿಂಗ್ಸ್ ಆರೋಪ ಹೊರಿಸಿದ. ಬೋಲಾಕಿದಾಸ್ ಎಂಬ ಬ್ಯಾಂಕರ್‌ಗೆ ನೀಡಿದ ಪ್ರಾಮಿಸರಿ ನೋಟ್‌ನಲ್ಲಿ ಫೋರ್ಜರಿ ಮಾಡಿ ಕಂಪನಿಯ ಖಜಾನೆಯಿಂದ ಹಣ ಲಪಟಾಯಿಸಿದ್ದಾನೆ ಎಂದು ಹೇಳಿ, ನಂದಕುಮಾರನನ್ನು ಕಟಕಟೆಯಲ್ಲಿ ನಿಲ್ಲಿಸಿದ. ಆದರೆ ಇದೊಂದು ಸುಳ್ಳು ಆರೋಪವಾಗಿತ್ತು.

ಈ ಆರೋಪದ ವಿಚಾರಣೆ1775ರ ಜೂನ್8 ರಿಂದ 16ರವರೆಗೆ ಹಗಲು ರಾತ್ರಿ ನಡೆದು ,16ನೇ ತಾರೀಖು ನಂದಕುಮಾರನಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಈ ವಿಚಾರಣೆ ನಡೆಸಿದ ನ್ಯಾಯಾಧೀಶ ಎಲಿಜ ಇಂಪೇ ಎಂಬ ಹೇಸ್ಟಿಂಗ್ಸ್ ನ ಆಪ್ತಮಿತ್ರ ಹಾಗೂ ಸಹಪಾಠಿ.1775ರ ಆಗಸ್ಟ್ 5ರಂದು ನಂದಕುಮಾರನನ್ನು ಗಲ್ಲಿಗೇರಿಸಬೇಕೆಂಬ ತೀರ್ಪು ಕೂಡ ಹೊರಬಿತ್ತು. ಬ್ರಿಟಿಷರ ನ್ಯಾಯದಾನ ವೈಖರಿಗೆ ಇದೊಂದು ಸ್ಯಾಂಪಲ್, ಅಷ್ಟೇ!

ಆದರೆ ಹೆನ್ರಿ ಬಿವರಿಜ್ ಎಂಬ ಬ್ರಿಟಿಷ್ ಮುತ್ಸದ್ದಿ “ನಂದಕುಮಾರ ನಿಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆ ನ್ಯಾಯಾಂಗ ಮಾಡಿದ ಬರ್ಬರ ಕೊಲೆ”ಎಂದು ಬಹಿರಂಗ ಹೇಳಿಕೆ ನೀಡಿದ. ಅಪಾರ ಸಂಖ್ಯೆಯ ಬ್ರಿಟಿಷ್ ಗಣ್ಯರೂ ನ್ಯಾಯಾಧೀಶ ಎಲಿಜ ಇಂಪೆಯ ಪಕ್ಷಪಾತ ಕೃತ್ಯವನ್ನು ಖಂಡಿಸಿದರು. ಇಂಗ್ಲೆಂಡ್ ನ ಹೌಸ್ ಆಫ್ ಕಾಮನ್ಸ್ ಸಭೆಯಲ್ಲಿ ಈ ಸಂಬಂಧವಾಗಿ ಹೇಸ್ಟಿಂಗ್ಸ್ ಮತ್ತು ಅವನ ಮಿತ್ರ ಎಲಿಜ ಇಂಪೇ ಇಬ್ಬರಿಗೂ ಛೀ ಮಾರಿ ಹಾಕಲಾಯಿತು.

ಆದರೇನು? ನಂದಕುಮಾರನಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದಾಗಲಿಲ್ಲ. ಆ ಹೊತ್ತಿಗೆ ನಂದಕುಮಾರನಿಗೆ ಎಪ್ಪತ್ತು ವರ್ಷ . ಗಲ್ಲು ಶಿಕ್ಷೆಯ ದಿನವಾದ1775 ರ ಆಗಸ್ಟ್ 5 ರಂದು ನಂದಕುಮಾರ ಶಾಂತಚಿತ್ತನಾಗಿ, ಹಸನ್ಮುಖಿಯಾಗಿ ವಧಾಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಕುಳಿತು ತೆರಳಿದ. ಪ್ರಸನ್ನ ಚಿತ್ತನಾಗಿ ಗಂಗಾನದಿಯೆಡೆಗೆ ದಿಟ್ಟಿಸುತ್ತಾ ಗಲ್ಲುಗಂಬವೇರಿ ಪ್ರಾಣ ತ್ಯಜಿಸಿದ.ಮರಣದಂಡನೆ ಜಾರಿಗೊಳಿಸಿದ ಕಲ್ಕತ್ತಾದ ಅಧಿಕಾರಿ ಅಲೆಕ್ಸಾಂಡರ್ ಮ್ಯಾಕ್ಸಾಬಿ ಇದನ್ನೆಲ್ಲ ದಾಖಲಿಸಿ ಬರೆದಿಟ್ಟಿದ್ದಾನೆ.

ಇದನ್ನೂ ಓದಿ | Amrit Mahotsav | ವನವಾಸಿಗಳಲ್ಲಿ ಸ್ವಾಭಿಮಾನ, ದೇಶಪ್ರೇಮ ಬಡಿದೆಬ್ಬಿಸಿದ ಬಿರ್ಸಾ ಮುಂಡಾ

Exit mobile version