| ರಾಧಿಕಾ ವಿಟ್ಲ
ಅಲೆಗ್ಸಾಂಡರ್ ಎಂಬ ಜಗದೇಕವೀರ ದಂಡೆತ್ತಿ ಬಂದ ಕತೆ ನಾವೆಲ್ಲ ಶಾಲಾ ದಿನಗಳಲ್ಲಿ ಇತಿಹಾಸದ ಪುಸ್ತಕಗಳಲ್ಲಿ ಓದಿರುತ್ತೇವೆ. ಕ್ರಿಸ್ತಪೂರ್ವ ೩೨೬ರ ಸುಮಾರಿನಲ್ಲಿ ಹೀಗೆ ಬಂದ ಅಲೆಗ್ಸಾಂಡರ್ ಪಂಜಾಬಿನಲ್ಲಿ ಬಿಯಾಸ್ ನದೀ ತೀರದವರೆಗೆ ಬಂದು ಆಮೇಲೆ ತಿರುಗಿ ತನ್ನೂರಿಗೆ ಪ್ರಯಾಣ ಬೆಳೆಸಿದನಂತೆ. ಆಗ ಒಂದಿಷ್ಟು ಮಂದಿ ಅಲೆಗ್ಸಾಂಡರನ ಜೊತೆಯಿದ್ದ ಸೈನಿಕರು ಹಿಮಾಚಲ ಪ್ರದೇಶದ ಒಂದೆಡೆ ನೆಲೆ ನಿಂತರಂತೆ. ಅದೇ ಇಂದಿನ ʻಮಲಾನಾʼ ಹಳ್ಳಿ!
ಇದು ಕತೆ. ಬಹಳ ಮಂದಿಯ ಕುತೂಹಲದ ಮೂಲ. ಇದು ಹೌದಾ ಎಂದರೆ ಹೌದು, ಅಲ್ಲವಾ ಅಂದರೆ ಅಲ್ಲ. ಹೀಗೊಂದು ದಂತಕತೆ ದಶಕಗಳಿಂದ ಮಲಾನಾದ ಜೊತೆಜೊತೆಗೇ ಸಾಗುತ್ತಿದೆ. ಇದರ ಸತ್ಯಾಸತ್ಯತೆಯ ಪರೀಕ್ಷೆ ಕಾಲಕಾಲಕ್ಕೂ ನಡೆಯುತ್ತಲೇ ಇವೆ. ಎಲ್ಲಿಯ ಅಲೆಗ್ಸಾಂಡರ್? ಎಲ್ಲಿಯ ಮಲಾನಾ ಎಂದೆನಿಸಿದರೂ ಈ ಕತೆಗೆ ಸಾಕಷ್ಟು ಪುರಾವೆಗಳೂ ಸಿಗುತ್ತದೆ. ಇದು ಕೇವಲ ದಂತಕತೆಯಾಗಿ ಉಳಿಯದೆ, ಈ ಹಿನ್ನೆಲೆಯಲ್ಲಿ ಸುದೀರ್ಘ ಸಂಶೋಧನೆಗಳೂ, ಅಧ್ಯಯನಗಳು, ಡಿಎನ್‌ಎ ಪರೀಕ್ಷೆಗಳೂ ನಡೆದಿವೆ.
ಚಳಿಗಾಲದಲ್ಲಿ ಹಿಮಸುರಿವ ಹಿಮಾಲಯ ಪರ್ವತಗಳಿಂದಾವೃತವಾಗಿರುವ ಪಾರ್ವತೀ ಕಣಿವೆಯ ಚಂದದ ಪುಟ್ಟ ಹಳ್ಳಿ ಮಲಾನಾ. ಹೊಸ ಊರುಗಳ ಬಗ್ಗೆ ಸದಾ ಕುತೂಹಲಗಳನ್ನಿಟ್ಟುಕೊಂಡು ತಿರುಗಾಡುವ ಮಂದಿಗೆ ಇಂದಿಗೂ ಮಲಾನಾ ಎಂಬುದೊಂದು ಚುಂಬಕ ಶಕ್ತಿ. ಇಲ್ಲಿನ ಜನರ ಭಾಷೆ, ಸಂಸ್ಕೃತಿ, ಆಚರಣೆಗಳ ಜೊತೆಗೆ ಇಲ್ಲಿನ ಮಂದಿಯ ದೈಹಿಕ ರೂಪುರೇಷೆಗಳೂ ಎಲ್ಲರಿಗಿಂತ ಭಿನ್ನ.
ಅದೊಂದು ಕಾಲವಿತ್ತು. ಮಲಾನಾ ಎಂಬ ಈ ಹಿಮಾಚಲದ ಹಳ್ಳಿ ತಲುಪಲು ಚಂದ್ರಖೇಣಿ, ದೇವತಿಬ್ಬಗಳನ್ನು ಹತ್ತಿಳಿದು ೪೫ ಕಿಮೀ ನಡೆಯಬೇಕಿತ್ತು. ಇನ್ನು ಚಳಿಗಾಲದಲ್ಲಿ ಊಹಿಸಿಯೂ ನೋಡಬೇಕಿಲ್ಲ. ಹಿಮಚ್ಛಾದಿತ ಪರ್ವತಗಳ ಕಣಿವೆಗಳಲ್ಲಿ ಅಕ್ಷರಶಃ ಬೇರೆ ಹಳ್ಳಿಗಳ ಜೊತೆ ಸಂಪರ್ಕವನ್ನೂ ಕಳೆದುಕೊಳ್ಳುವಂಥ ಹಳ್ಳಿಯಿದು. ಆದರೆ ಈಗ ಈ ದೂರ ಕಸೋಲ್‌ನಿಂದ ೨೧ ಕಿಮೀಗೆ ಇಳಿದಿದೆ. ವಾಹನವೇರಿ ಹೊರಟರೆ, ೧೭ ಕಿಮೀ ನಿರಾಯಾಸ. ಇನ್ನುಳಿದ ನಾಲ್ಕು ಕಿಮೀ ಕಾಲ್ನಡಿಗೆಯಿಂದ ಬೆಟ್ಟವೇರಿದರೆ ಮುಗೀತು, ಮಲಾನಾ ಪ್ರತ್ಯಕ್ಷ!
ತೀರಾ ಒಂದೆರಡು ದಶಕಗಳ ಹಿಂದಿನವರೆಗೆ ಈ ಮಲಾನಾ ಎಂಬ ಹಳ್ಳಿಯೊಂದು ಸ್ವತಂತ್ರ ಹಳ್ಳಿ. ತನ್ನದೇ ಆದ ಪ್ರಜಾಪ್ರಭುತ್ವ ವ್ಯವಸ್ಥೆ. ತನ್ನದೇ ನ್ಯಾಯವ್ಯವಸ್ಥೆ. ತನ್ನದೇ ನೀತಿನಿಯಮಗಳು. ಹೊರಗಿನವರಿಗೆ ಪ್ರವೇಶವಿಲ್ಲ. ನಮ್ಮ ದೇಶ ಭಾರತವೆಂಬ ವಿಚಾರವೂ ಇವರ ತಲೆಯೊಳಗೆ ಸುಳಿಯದು. ಹೊರಗಿನ ಯಾವುದೇ ಹಸ್ತಕ್ಷೇಪವೂ ಹಳ್ಳಿಯೊಳಗೆ ಬರದು. ಹೊರಗಿನವರು ಹಳ್ಳಿಯೊಳಗೆ ಬಂದರೂ ಇವರ್ಯಾರನ್ನೂ ಅವರು ಮುಟ್ಟುವ ಹಾಗಿಲ್ಲ. ಹೀಗೆ ತಮ್ಮದೊಂದು ಬೇರೆಯದೇ ಪ್ರಪಂಚ ಕಟ್ಟಿಕೊಂಡಿದ್ದ ಇದು ಕಳೆದ ಒಂದೆರಡು ದಶಕಗಳ ಹಿಂದಿನಿಂದ ನಿಧಾನವಾಗಿ ಹೊರಪ್ರಪಂಚಕ್ಕೆ ತೆರೆದುಕೊಳ್ಳುತ್ತಿದೆ. ಗ್ರಾಮ ಪಂಚಾಯತ್ ಬಂದಿದೆ. ಚುನಾವಣೆಗಳು ನಡೆಯುತ್ತವೆ. ಶಾಲೆ ತೆರೆದಿದೆ. ಆದರೂ, ಹಳೇ ನಿಯಮಗಳು ಇನ್ನೂ ಅಳಿಸಿಹೋಗಿಲ್ಲ. ಊರಿನ ನ್ಯಾಯವೇ ಇಂದಿಗೂ ಇವರಿಗೆ ಅಂತಿಮ.
ಹಿಮಾಚಲದ ಕುಲ್ಲು ಕಣಿವೆಯೊಳಗೆ ಹತ್ತಿರ ಹತ್ತಿರ ೨೦೦ ಹಳ್ಳಿಗಳಿವೆ. ಆದರೆ ಮಲಾನಾ ಎಂದೆಂದಿಗೂ ಇವೆಲ್ಲ ಹಳ್ಳಿಗಳಿಂದ ತನ್ನ ಅಂತರ ಕಾಯ್ದುಕೊಂಡಿದೆ. ಇಡೀ ಕುಲ್ಲು ಕಣಿವೆಯ ಹಳ್ಳಿಗಳೆಲ್ಲವೂ ಕುಲುಹಿ ಭಾಷೆಯನ್ನು ಮಾತಾಡಿದರೆ, ಮಲಾನಾದಲ್ಲಿ ಮಾತನಾಡುವುದು ಲಿಪಿಯಿಲ್ಲದ ಕಣಶಿ ಭಾಷೆಯನ್ನು. ಮಲಾನಾದ ಜನರು ಕುಲುಹಿ ಭಾಷೆ ಕಲಿತು ಹತ್ತಿರದ ಹಳ್ಳಿಗಳ ಮಂದಿಯೊಂದಿಗೆ ಸಂಪರ್ಕ ಸಾಧಿಸಿದರೂ, ತಮ್ಮ ಹಳ್ಳಿಯ ಭಾಷೆಯನ್ನು ಮಾತ್ರ ಜತನದಿಂದ ತಮಗಾಗಿ ಮಾತ್ರ ಉಳಿಸಿಕೊಂಡಿದ್ದಾರೆ.
ಇಂಥ ಮಲಾನಾಕ್ಕೆ ನಾನು ಕಾಲಿಟ್ಟಾಗ ಸ್ವಾಗತಿಸಿದ್ದು ಜಮ್ಲು ಮಂದಿರ, ಅಂದರೆ ಜಮದಗ್ನಿ ದೇವಸ್ಥಾನ. ಬಹಳ ಚಂದದ ಮರದ ಕಥ್ಕುನಿ ಶೈಲಿಯ ದೇವಸ್ಥಾನದ ಗೋಡೆಯಲ್ಲಿ, ʻಮುಟ್ಟಿದರೆ ೩೫೦೦ ರೂ ದಂಡʼ ಎಂಬ ಬೋರ್ಡು ನೇತಾಡುತ್ತಿತ್ತು. ಇಲ್ಲಿನ ಮಂದಿಯನ್ನು ಮುಟ್ಟಿದರೆ ಹೊರಗಿನ ಮಂದಿ ತೆರಬೇಕಾಗುವ ದಂಡವಿದು. ಗೋಡೆಯ ತುಂಬೆಲ್ಲಾ ಜಿಂಕೆ ತಲೆಬುರುಡೆ, ಕೊಂಬುಗಳು. ಊರಿಗೆ ಊರೇ ತಮ್ಮ ಗದ್ದೆಗಳಲ್ಲಿ ಗಾಂಜಾ ಬೆಳೆಯುತ್ತಾರೆ. ಇದೇ ಕಾರಣಕ್ಕೆ ಈ ಹಳ್ಳಿ ಸಾಕಷ್ಟು ಸಂಖ್ಯೆಯಲ್ಲಿ ವಿದೇಶೀಯರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ. ಹಾಗಾಗಿಯೇ ದೇಸೀ ಪ್ರವಾಸಿಗರಿಗಿಂತ ವಿದೇಶೀ ಮಂದಿಗೆ ಮಲಾನಾ ಎಂಬುದೊಂದು ವಿಸ್ಮಯದ ಹಳ್ಳಿ.
ಸುಮಾರು ೭೦ ವರ್ಷಗಳಿಂದಲೂ ಮಲಾನಾ ಬಗೆಗೆ ಸಾಕಷ್ಟು ಅಧ್ಯಯನಗಳೂ ನಡೆದಿವೆ. ಇಲ್ಲಿನ ಗ್ರೀಸ್ ಸಂಬಂಧದ ಬಗೆಗೆ ಇರುವ ಕುತೂಹಲ ಮಾತ್ರ ಇಂದಿಗೂ ತಣಿದಿಲ್ಲ. ಇದೀಗ ಇದು ಮತ್ತೆ ಗರಿಗೆದರಿದ್ದು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಡಾ ಅನಿಲ್ ಕುಮಾರ್ ಸಿಂಗ್ ಎಂಬವರು ಮಲಾನಾದ ಬಗೆಗೆ ಕುತೂಹಲಕರ ಮಾಹಿತಿಗಳನ್ನು ಕಲೆಹಾಕಲು ತೊಡಗಿದ್ದಾರೆ ಎಂಬ ಸುದ್ದಿಯೇ ಇಷ್ಟು ಬರೆಯಲು ಕಾರಣವಾಯಿತು.
ಹಾಗೆ ನೋಡಿದರೆ ಮಲಾನಾ ಬಗ್ಗೆ ನಡೆಯುತ್ತಿರುವ ಅಧ್ಯಯನ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಮಂದಿ ಈ ರಹಸ್ಯವನ್ನು ಬೇಧಿಸಲು ಹೊರಟಿದ್ದರು. ವಂಶವಾಹಿನಿಗಳ ಅಧ್ಯಯನವೂ ನಡೆದಿತ್ತು. ೨೦೧೦ರಲ್ಲಿ ಇಂದು ತಲ್ವಾರ್ ಹಾಗೂ ರಾಜೀವ್ ಗಿರೋಟಿ ಅವರ ಸಂಶೋಧನೆಗಳ ಪ್ರಕಾರ, ಮಲಾನಾದ ಮಂದಿಯ ವಂಶವಾಹಿನಿಗಳು ಪ್ರತ್ಯೇಕವಾದವುಗಳು. ಹೊರಗಿನ ಮಂದಿಯ ಜೊತೆಗೆ ಇವರ ವಂಶವಾಹಿನಿ ಹೆಚ್ಚು ಬೆರೆತಿಲ್ಲ, ಹೀಗಾಗಿ ಸಂಬಂಧ ಹೆಚ್ಚು ಕಾಣುವುದಿಲ್ಲ ಎಂದಿದ್ದರು. ಇದಕ್ಕೆ ಕಾರಣ ಇವರ ತಮ್ಮ ಗುಂಪಿನೊಳಗೆ ಮಾತ್ರ ವಿವಾಹವಾಗುವ ಪದ್ಧತಿ.
ಇವರ ಮಾತನ್ನೇ ಹೇಳಿದಂಥ ಅನೇಕ ಇತಿಹಾಸಕಾರರ ಹೇಳಿಕೆಗಳು ದಾಖಲಾಗಿವೆ. ೧೯೫೦ರ ದಶಕದಲ್ಲಿ ಕೋಲಿನ್ ರೋಸರ್ ಎಂಬ ಖ್ಯಾತ ಮಾನವಶಾಸ್ತ್ರಜ್ಞ ಎರಡು ವರ್ಷಗಳ ಕಾಲ ಮಲಾನಾದಲ್ಲಿದ್ದು, ಈ ಕುರಿತು ಅಧ್ಯಯನಗಳನ್ನು ನಡೆಸಿದ್ದರು. ಅವರು ಕಂಡುಕೊಂಡ ವಿಚಾರಗಳ ಪ್ರಕಾರ, ಇವರು ತಮ್ಮ ಜನಾಂಗದ ಮಂದಿಯನ್ನು ಬಿಟ್ಟು ಹೊರಗಿನ ಯಾರ ಜೊತೆಗೂ ತಮ್ಮನ್ನು ತಾವು ತೆರೆದುಕೊಂಡಿಲ್ಲ, ಸಂಪರ್ಕ ಸಾಧಿಸಿಲ್ಲ. ಇಂದಿಗೂ ತಮ್ಮದೇ ಆದ ಸಂಸ್ಕೃತಿ ಪದ್ಧತಿಗಳಿಂದ ಹೊರಗೆ ಬಾರದೆ ದೊಡ್ಡ ಕೋಟೆಯನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ.
ವಿಶೇಷವೆಂದರೆ, ಅಲೆಗ್ಸಾಂಡರನ ವಂಶವಾಹಿನಿ ಮಲಾನಾದಲ್ಲಿ ಇದೆ ಎಂಬುದನ್ನು ಪುಷ್ಠೀಕರಿಸುವ ಯಾವ ಐತಿಹಾಸಿಕ ಆಧಾರವೂ ಸಿಗುವುದಿಲ್ಲ. ಆದರೂ ಇಂಥದ್ದೊಂದು ಕತೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇಸ್ರೇಲಿನ ಇತಿಹಾಸಕಾರ, ʻಫ್ರಂ ಅಲೆಗ್ಸಾಂಡರ್ ಟು ಜೀಸಸ್ʼ ಎಂಬ ಕೃತಿಯನ್ನು ಬರೆದ ಡಾ. ಓರಿ ಅಮಿತಯ್ ಎಂಬವರು ಹೇಳುವಂತೆ, ಮಲಾನಾ ಹಾಗೂ ಅಲೆಗ್ಸಾಂಡರನ ಸಂಬಂಧಕ್ಕೆ ಯಾವ ಐತಿಹಾಸಿಕ ಆಧಾರಗಳು ಇಲ್ಲ.
ಅಲೆಗ್ಸಾಂಡರ ವಿರುದ್ಧ ಸಿಡಿದೆದ್ದ ಒಂದಿಷ್ಟು ಸೈನಿಕರು ಅಂದಿನ ಹಿಫಸಿಸ್ ಅಂದರೆ ಈಗಿನ ಬಿಯಾಸ್ ನದಿಯನ್ನು ದಾಟಿ ನೆಲೆ ನಿಂತರು ಎಂಬುದು ಕೇವಲ ಊಹಾಪೋಹಗಳು, ಅಷ್ಟೇ. ಅವರು ನದಿ ದಾಟಿದರೆಂಬುದಕ್ಕೆ ಆಧಾರಗಳಿಲ್ಲ. ಹಾಗಾಗಿ ಈ ವಾದಕ್ಕೆ ಪೂರಕ ಮಾಹಿತಿಗಳು ಸಿಗುವುದಿಲ್ಲ ಎನ್ನಲಾಗಿದೆ. ಐತಿಹಾಸಿಕ ಆಧಾರಗಳಿಲ್ಲದಿರುವುದರಿಂದ ಇದು ಕೇವಲ ದಂತಕತೆಯಷ್ಟೇ ಎಂಬುದುದ ಅವರ ಲೆಕ್ಕಾಚಾರ.
ಕಣಶಿ ಭಾಷೆಯ ಬಗ್ಗೆ ನಡೆದ ಅಧ್ಯಯನಗಳ ಪ್ರಕಾರವೂ ಮಲಾನಾದ ಈ ಭಾಷೆಗೂ ಗ್ರೀಕ್‌ಗೂ ಯಾವ ಸಂಬಂಧವೂ ಸಿಗುವುದಿಲ್ಲ. ಇದು ಸೈನೋ ಟಿಬೆಟಿಯನ್ ಭಾಷೆ ಕಿನೌರಿ ಜೊತೆಗೆ ಹೆಚ್ಚು ಹೋಲುತ್ತದೆ ಎನ್ನಲಾಗಿದೆ. ಬದಲಾಗಿ ಇಲ್ಲಿನ ಮಂದಿ ಬಹುಶಃ ಕಿನೌರ್ ಪ್ರಾಂತ್ಯದಲ್ಲಿದ್ದ ಕಿನ್ನೌರಿ ಕಣಶಿ ಭಾಷಿಗರು ಇಲ್ಲಿಂದ ವಲಸೆ ಬಂದು ಮಲಾನಾದಲ್ಲಿ ಬಹಳ ಹಿಂದೆ ನೆಲೆ ನಿಂತವರಿರಬಹುದು. ಹಾಗಾಗಿ ಕಣಶಿ ಭಾಷಿಗರು ತಮ್ಮ ಭಾಷೆಯನ್ನು ಮಲಾನಾದಲ್ಲೂ ಮುಂದುವರಿಸಿಕೊಂಡು ಹೋಗಿರಬಹುದು ಎಂದೂ ಅಂದುಕೊಂಡಿದ್ದಾರೆ.
ಈ ಬಗೆಗಿನ ಆಸಕ್ತಿಯಿಂದ ಮಾಹಿತಿಗಳನ್ನು ಕಲೆ ಹಾಕುತ್ತಾ ಹೋದರೆ, ಅಲೆಗ್ಸಾಂಡರನ ಸೇನಾ ವಂಶಸ್ಥರು ಬಂದಿದ್ದೂ ಹೌದು, ಇಲ್ಲೇ ಹತ್ತಿರ ನೆಲೆ ನಿಂತಿದ್ದೂ ಹೌದು. ಆದರೆ ಅದು ಮಲಾನಾ ಅಲ್ಲ. ಅದು ಈಗಿನ ಪಾಕಿಸ್ಥಾನದ ಕಲಶ್ ಎಂಬ ಕಣಿವೆಯಲ್ಲಿ ಎಂಬ ಮಾಹಿತಿಗಳೂ ಸಿಗುತ್ತವೆ. ಈ ಬಗ್ಗೆ ಡಿಎನ್‌ಎ ಪರೀಕ್ಷೆಗಳೂ ನಡೆದಿದ್ದು, ಈ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲಾಗುತ್ತಿದೆ. ಮಲಾನಾದ ಜನರ ಡಿಎನ್‌ಎ ದಕ್ಷಿಣ ಏಷ್ಯಾ/ಇಂಡೋ- ಆರ್ಯನ್ ಡಿಎನ್‌ಎಯನ್ನು ಹೋಲುವುದರಿಂದ ಗ್ರೀಸ್ ಸಂಬಂಧವನ್ನು ತಳ್ಳಿಹಾಕಲಾಗಿದೆ.
ಹಾಗಾದರೆ ಇಂಥ ಕತೆಗಳು ಹುಟ್ಟಿದ್ದು ಹೇಗೆ ಎಂದರೆ, ಬಹುಶಃ, ೧೯೯೦ರ ದಶಕದಲ್ಲಿ ಇಲ್ಲಿಗೆ ಬಂದ ವಿದೇಶೀ ಪ್ರವಾಸಿಗರ ಮೂಲಕ ಮಲಾನಾ ಹಾಗೂ ಗ್ರೀಕ್ ಸಂಬಂಧದ ಕುರಿತು ದಂತಕತೆಗಳು ಹುಟ್ಟಿರಬಹುದು. ಯುರೋಪಿಯನ್ನರು ಮಲಾನಾ ಸೇರಿದಂತೆ ಹಲವು ಹಳ್ಳಿಗಳಿಗೆ ಪ್ರವಾಸ ಬಂದಿದ್ದ ಸಂದರ್ಭ ಕುತೂಹಲ ಕೆರಳಿಸಲು ಇಂಥ ಕತೆಗಳು ಹುಟ್ಟಿರುವ ಸಾಧ್ಯತೆಗಳಿವೆ. ಭಾರತ ಹಾಗೂ ಗ್ರೀಕ್ ಸಂಬಂಧದ ಕೆಲವು ಐತಿಹಾಸಿಕ ಘಟನೆಗಳ ಕಾರಣ ಇಂತಹ ಕತೆಗಳು ಇನ್ನೂ ರೆಕ್ಕೆಪುಕ್ಕ ಕಟ್ಟಿಕೊಂಡು ಹುಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಇವರೆಲ್ಲರ ವಾದಗಳನ್ನೂ ಬದಿಗಿಟ್ಟು, ಮಲಾನಾ ಮೂಲನಿವಾಸಿಗಳ ಮಾತಿಗೆ ಕಿವಿಗೊಟ್ಟರೆ, ಅವರೂ ಕೂಡ ತಮ್ಮ ಮೂಲ ಗ್ರೀಸ್ ದೇಶದಿಂದ ಬಂದಿದೆ ಎಂಬ ವಾದವನ್ನು ಒಪ್ಪುವುದಿಲ್ಲ. ನಮಗೂ ಗ್ರೀಸ್‌ಗೂ, ಅಲೆಗ್ಸಾಂಡರನಿಗೂ ಸಂಬಂಧವೇ ಇಲ್ಲ. ನಾವು ಜಮ್ಲು ದೇವರ ವಂಶಸ್ಥರು. ನಾವು ಮಾತನಾಡುವ ಭಾಷೆ ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈ ಭಾಷೆ ಹೊರಗಿನವರಿಗೆ ಹೇಳಿಯೂ ಕೊಡುವುದಿಲ್ಲ. ಇದು ನಮ್ಮದೇ ಸಂಸ್ಕೃತಿ. ಇದು ಸತ್ಯ. ಇದನ್ನು ಬಿಟ್ಟರೆ ಉಳಿದ ವಾದಗಳಿಗೆ ಆಧಾರಗಳಿಲ್ಲ ಎನ್ನುತ್ತಾರೆ. ಈ ಹಳ್ಳಿಗರು ನಂಬುವ ಸ್ಥಳಪುರಾಣದ ಪ್ರಕಾರ ಇವರ ಆರಾಧ್ಯ ದೇವರು ಜಮ್ಲು ಟಿಬೆಟ್‌ನಿಂದ ಸ್ಪತಿ ಕಣಿವೆಗಳ ಮೂಲಕ ಭಾರತದೊಳಕ್ಕೆ ಬಂದು ಮಲಾನಾದಲ್ಲಿ ನೆಲೆ ನಿಂತು ಈ ಹಳ್ಳಿಯನ್ನು ಕಟ್ಟಿ ಬೆಳೆಸಿದ್ದಾರೆ!
ಇದನ್ನೂ ಓದಿ | ಪುರಾಣ ಕತೆ: ದ್ರೌಪದಿಗೆ ಯಾಕೆ ಐವರು ಗಂಡಂದಿರು?