Site icon Vistara News

Amrit Mahotsav | ಹೈದರಾಬಾದ್‌ ಬ್ರಿಟಿಷ್‌ ರೆಸಿಡೆನ್ಸಿ ಮೇಲೆ ದಾಳಿ ನಡೆಸಿದ ಮೌಲ್ವಿ ಸೈಯದ್‌ ಅಲ್ಲಾವುದ್ದೀನ್‌

amrit mahotsav
http://vistaranews.com/wp-content/uploads/2022/08/ALLAUDIN.mp3

ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಪ್ರಗತಿಯ ಸುದ್ದಿ ಹೈದರಾಬಾದ್‌ ಮತ್ತು ಇತರ ಕಡೆಗಳಿಗೆ ಹರಡಿತ್ತು. ಬ್ರಿಟಿಷರ ವಿರುದ್ಧ ದಂಗೆ ಏಳುವಂತೆ ಜನರನ್ನು, ಸಶಸ್ತ್ರ ಪಡೆಗಳನ್ನು ಮತ್ತು ನಿಜಾಮರನ್ನು ಆಗ್ರಹಿಸುವ ಭಿತ್ತಿ ಪತ್ರಗಳು ಹೈದರಾಬಾದ್‌ ನಗರದ ಗೋಡೆಗಳ ಮೇಲೆ ಪ್ರತ್ಯಕ್ಷವಾದವು. ಭಾರತದ ವಿವಿಧತೆಗಳಲ್ಲಿ ಬ್ರಿಟಿಷ್‌ ಸೈನ್ಯದಲ್ಲಿ ನಡೆಯುತ್ತಿದ್ದ ದಂಗೆ ಮತ್ತು ಯುದ್ಧದ ಕುರಿತ ಬೆಳವಣಿಗೆಗಳ ಬಗ್ಗೆ ಹೈದರಾಬಾದ್‌ನ ಕ್ರಾಂತಿಕಾರಿ ನಾಯಕ ಮೌಲ್ವಿ ಸೈಯದ್‌ ಅಲ್ಲಾವುದ್ದೀನ್‌ ಮತ್ತಿತರರಿಗೆ ಮಿರ್ಧಾ ಮೊಹಮದ್‌ ಚಾಂದ್‌ ಮತ್ತು ಕುತುಬ್‌ ಖಾನ್‌ ಮಾಹಿತಿ ನೀಡುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೈಜೋಡಿಸಲು ವಚನಬದ್ಧರಾಗಿರುವ ೩೦೦ ಮಂದಿಯ ಸಹಿಯುಳ್ಳ ಒಂದು ದಾಖಲೆಯ ಪಟ್ಟಿ ಮೌಲ್ವಿ ಅಲ್ಲಾವುದ್ದೀನ್‌ ಬಳಿ ಇತ್ತು.

ಫರಂಗಿಗಳ ವಿರುದ್ಧ ಕೈ ಜೋಡಿಸುವಂತೆ ಹೈದರಾಬಾದ್‌ ಜನರನ್ನು ಆಗ್ರಹಿಸಲು ತಾತ್ಯಾ ಟೋಪೆ ತನ್ನ ದೂತರನ್ನು ಹೈದರಾಬಾದ್‌ ನಗರದಲ್ಲಿಟ್ಟಿದ್ದ. ಹೈದರಾಬಾದ್‌ನ ಮುಖ್ಯ ಮೌಲ್ವಿಯಾಗಿದ್ದ ಮೌಲ್ವಿ ಇಬ್ರಾಹಿಂ ನೇತೃತ್ವದಲ್ಲಿ ೧೮೫೭ ಜೂನ್‌ ೧೦ರಂದು ಹೈದರಾಬಾದ್‌ ನಗರದಲ್ಲಿ ದಂಗೆಯೊಂದು ನಡೆಯುವಂತೆ ಯೋಜಿಸಲಾಗಿತ್ತು. ಆದರೆ ಬ್ರಿಟಿಷ್‌ ರೆಸಿಡೆಂಟ್‌ ಅದು ನಡೆಯದಂತೆ ನಿಜಾಮನ ಪ್ರಭಾವ ಬಳಸಿ ಇಬ್ರಾಹಿಂನನ್ನು ಹದ್ದುಬಸ್ತಿನಲ್ಲಿಟ್ಟಿತು. ಅದೇ ರೀತಿ ಜನರನ್ನು ದಂಗೆಗೆ ಪ್ರಚೋದಿಸುವ ಯತ್ನಗಳು ಮೌಲ್ವಿ ಅಕ್ಬರ್‌ನಂತಹ ನಾಯಕರಿಂದಲೂ ನಡೆದಿತ್ತು. ಆದರೆ ಪ್ರತಿಬಾರಿ ಬ್ರಿಟಿಷ್‌ ರೆಸಿಡೆಂಟ್‌ ಕಡೆಯಿಂದ ಅದನ್ನು ವಿಫಲಗೊಳಿಸುವ ವ್ಯವಸ್ಥಿತ ಕಾರ್ಯಾಚರಣೆ ನಡೆಯುತ್ತಿತ್ತು.

ಇಂತಹುದೊಂದು ಸನ್ನಿವೇಶದಲ್ಲಿ ೧೮೫೭ ಜೂನ್‌ ೧೨ರಂದು ಬೆಳಿಗ್ಗೆ ಔರಂಗಾಬಾದ್‌ನಲ್ಲಿದ್ದ ಒಂದನೇ ಹೈದರಾಬಾದ್‌ ಸೈನ್ಯ ವಿಭಾಗದ ಅಶ್ವದಳ ಬ್ರಿಟಿಷರ ವಿರುದ್ಧ ದಂಗೆ ಎದ್ದಿತು. ಬುಲ್ದಾನಾದಲ್ಲಿದ್ದ ಇದರ ಮೂರನೇ ಟ್ರೂಪ್‌ ಕೂಡ ಸಿಡಿದೆದ್ದಿತು. ಛಿಡಾಖಾನ್‌ ನೇತೃತ್ವದಲ್ಲಿ ಆ ತಂಡದಲ್ಲಿದ್ದ ಜನರು ಬುಲ್ಡಾನಾ ತೊರೆದು ಹೈದರಾಬಾದ್‌ಗೆ ಬಂದರು. ಹೈದರಾಬಾದಿನ ನಿಜಾಮ ಬ್ರಿಟಿಷರ ಚೇಲಾ ಆಗಿದ್ದ.

ಹಾಗಾಗಿ ನಿಜಾಮನ ಮಂತ್ರಿ ಸಲಾರ್‌ ಜಂಗ್‌ ಅವರನ್ನೆಲ್ಲ ತಕ್ಷಣ ಬಂಧಿಸಿ, ಬ್ರಿಟಿಷ್‌ ರೆಸಿಡೆಂಟ್ ಗೆ ಹಸ್ತಾಂತರಿಸಿದ. ಅವರನ್ನೆಲ್ಲ ರೆಸಿಡೆನ್ಸಿಯಲ್ಲಿ ಸೆರೆಯಲ್ಲಿಡಲಾಯಿತು. ಇದು ಹೈದರಾಬಾದ್‌ ನಗರದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿತು. ಬ್ರಿಟಿಷ್‌ ವಿರೋಧಿ ವಾತಾವರಣ ನಗರದೆಲ್ಲೆಡೆ ಕುದಿಯತೊಡಗಿತು. ೧೮೫೭ ಜುಲೈ ೧೭ರಂದು ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ನಡೆದ ಸಭೆಯಲ್ಲಿ, ಬ್ರಿಟಿಷ್‌ ರೆಸಿಡೆನ್ಸಿಯಿಂದ ಬುಲ್ಡಾನಾ ಸೆರೆಯಾಳುಗಳನ್ನು ಬಿಡುಗಡೆಗೊಳಿಸಬೇಕೆಂದು ನಿರ್ಧರಿಸಲಾಯಿತು. ಅದಕ್ಕಾಗಿ ಬ್ರಿಟಿಷ್‌ ರೆಸಿಡೆನ್ಸಿ ಮೇಲೆ ದಾಳಿ ನಡೆಸುವ ಯೋಜನೆಯನ್ನೂ ಹೆಣೆಯಲಾಯಿತು.

ಅದರಂತೆ, ಮೌಲ್ವಿ ಅಲ್ಲಾವುದ್ದೀನ್‌ ಮತ್ತು ಜಮಾದಾರ್‌ ತುರ್ಬಜ್‌ ಖಾನ್‌ ನೇತೃತ್ವದಲ್ಲಿ ೨೦೦ ರೊಹೊಲ್ಲಾಗಳ ಪಡೆ ಗುಲ್ಬಾಗ್‌ನಲ್ಲಿದ್ದ ರೆಸಿಡೆನ್ಸಿ ದಂಡು ಪ್ರದೇಶಕ್ಕೆ ತೆರಳಿ ದಾಳಿ ನಡೆಸಿದರು. ಬಂಡಾಯಗಾರರ ದೊಡ್ಡದೊಂದು ಪ್ರವಾಹವೇ ಅಲ್ಲಾವುದ್ದೀನ್‌ ಮತ್ತು ತುರ್ಬಜ್‌ ಖಾನ್‌ರನ್ನು ಹಿಂಬಾಲಿಸಿತು. ರೆಸಿಡೆನ್ಸಿ ಸಮೀಪವಿದ್ದ ಅಬ್ಬನ್‌ ಸಾಹೇಬ್‌ ಮತ್ತು ಜೈನ್‌ ಗೋಪಾಲದಾಸ್‌ ಎಂಬ ಇಬ್ಬರು ಸಾಹುಕಾರರಿಗೆ ಸೇರಿದ ದೊಡ್ಡ ಮಾಳಿಗೆ ಮನೆಗಳು ದಾಳಿಕೋರರ ಆಶ್ರಯತಾಣಗಳಾಗಿದ್ದವು.

ಎರಡು ದಿನಗಳ ಕಾಲ ಭೀಕರ ಸಂಘರ್ಷವೇ ನಡೆದುಹೋಯಿತು. ಈ ಸಂಘರ್ಷದಲ್ಲಿ ಜಾನ್‌ ಮೊಹಮ್ಮದ್‌ ಮತ್ತು ಅವನ ಬೆಂಬಲಕ್ಕಿದ್ದ ಅರಬ್ಬರೂ ಸೇರಿದಂತೆ ೩೨ ಮಂದಿ ತಮ್ಮ ಪ್ರಾಣ ಕಳೆದುಕೊಂಡರು. ಬ್ರಿಟಿಷ್‌ ರೆಸಿಡೆನ್ಸಿ ಕುಟಿಲೋಪಾಯಗಳಿಂದ ದಾಳಿಕೋರರನ್ನು ಹೆಮ್ಮೆಟ್ಟಿಸಿತ್ತು.

ದಾಳಿಯ ನಂತರ ಅಲ್ಲಾವುದ್ದೀನ್‌ ತಪ್ಪಿಸಿಕೊಂಡ. ಬ್ರಿಟಿಷರು ಮಾತ್ರ ಆತನನ್ನು ಬಿಡಲಿಲ್ಲ. ಅಲ್ಲಾವುದ್ದೀನ್‌ ಹಳ್ಳಿಯಿಂದ ಹಳ್ಳಿಗೆ ತಲೆ ತಪ್ಪಿಸಿಕೊಂಡು ಅಲೆದ. ಸುಮಾರು ಒಂದೂವರೆ ವರ್ಷ ಮೌಜಾ ಮಂಗಲ್‌ಪಲ್ಲಿ ಎಂಬಲ್ಲಿ ಪೀರ್‌ ಮೊಹಮ್ಮದ್‌ ಎಂಬುವರ ಮನೆಯಲ್ಲಿ ವಾಸವಾಗಿದ್ದ. ಅದೇ ರೀತಿ ಫರೂಖ್‌ ನಗರ ಮತ್ತು ಬೆಂಗಳೂರಿನಲ್ಲೂ ಕೆಲವು ಕಾಲ ನೆಲೆಸಿದ್ದ. ಬ್ರಿಟಿಷ್‌ ಸರ್ಕಾರ ಆತನನ್ನು ಹಿಡಿದುಕೊಟ್ಟವರಿಗೆ ೪೦೦೦ ರೂ.ಗಳ ಬಹುಮಾನವನ್ನೂ ಘೋಷಿಸಿತ್ತು.

ಆದರೆ ಕೊನೆಗೂ ಅಲ್ಲಾವುದ್ದೀನ್‌ನನ್ನು ಸೆರೆ ಹಿಡಿಯುವುದರಲ್ಲಿ ಬ್ರಿಟಿಷ್‌ ಸೈನ್ಯ ಯಶಸ್ವಿಯಾಯಿತು. ಹೈದರಾಬಾದ್‌ನ ಸಿಟಿ ಕೋರ್ಟ್ ನಲ್ಲಿ ಮೌಲ್ವಿ ಸೈಯದ್‌ ಅಲ್ಲಾವುದ್ದೀನ್‌ನ ವಿಚಾರಣೆ ನಡೆಸಲಾಯಿತು. ಆತನನ್ನು ಗಡೀಪಾರು ಮಾಡಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಅದರಂತೆ ೧೮೫೯ ಜೂನ್‌ ೨೮ ರಂದು ಆತನನ್ನು ಹೈದರಾಬಾದ್‌ನಿಂದ ಅಂಡಮಾನ್‌ಗೆ ಸಾಗಿಸಲಾಯಿತು. ೧೮೮೪ರಲ್ಲಿ ಸಾಯುವವರೆಗೂ ಅಲ್ಲಾವುದ್ದೀನ್‌ ೨೫ ವರ್ಷಗಳ ಕಾಲ ಅಂಡಮಾನ್‌ ಸೆರೆಯಲ್ಲೇ ಕೊಳೆಯಬೇಕಾಯಿತು.

ಅಲ್ಲಾವುದ್ದೀನ್‌ ಜೊತೆಗೆ ಹೋರಾಡಿದ ತುರ್ಬಜ್‌ ಖಾನ್‌ನನ್ನೂ ಗಡೀಪಾರು ಮಾಡಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಆದರೆ ಆತ ಬಂಧನದಿಂದ ತಪ್ಪಿಸಿಕೊಂಡ. ಅನಂತರ ನಡೆದ ಸೆಣಸಾಟವೊಂದರಲ್ಲಿ ಆತನನ್ನು ಕೊಲ್ಲಲಾಯಿತು. ಮತ್ತು ಹೈದರಾಬಾದ್‌ನ ಸಾರ್ವಜನಿಕ ಸ್ಥಳದಲ್ಲಿ ಆತನ ಶವವನ್ನು ನೇತುಹಾಕಲಾಯಿತು.

೧೯೫೭ರಲ್ಲಿ ಪ್ರಥಮ ಸ್ವಾತಂತ್ರ್ಯದ ಸಮರದ ಶತಾಬ್ದಿ ನೆನಪಿಗಾಗಿ ಹೈದರಾಬಾದ್‌ನ ಹಳೆಯ ರೆಸಿಡೆನ್ಸಿ ಕಟ್ಟಡದ ಸಮೀಪದ ರಸ್ತೆಯೊಂದಕ್ಕೆ ತುರ್ಬಜ್‌ ಖಾನ್‌ ಹೆಸರನ್ನಿಟ್ಟು ಗೌರವಿಸಲಾಯಿತು.

ಇದನ್ನೂ ಓದಿ | Amrit Mahotsav | ಮುಳುಬಾಗಿಲು ಸ್ವಾಮಿ ಎಂಬ ಕ್ರಾಂತಿಕಾರಿ

Exit mobile version