: ಡಾ. ಡಿ.ಸಿ. ರಾಮಚಂದ್ರ
ಎ.ಕೆ ರಾಮಾನುಜನ್ ವಿಶ್ವಮಾನ್ಯ ಕವಿ, ವಿದ್ವಾಂಸ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ. ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪೇಟೆ ಕೃಷ್ಣಸ್ವಾಮಿ ರಾಮಾನುಜನ್ ಅವರು ಮಾರ್ಚ್ 16, 1929ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಬಿ.ಎ. ಮತ್ತು ಎಮ್.ಎ. ಪದವಿ ಮುಗಿಸಿ ಅಧ್ಯಾಪಕರಾದರು. ಅಮೆರಿಕದ ಇಂಡಿಯನ್ ಯುನಿವರ್ಸಿಟಿಯಲ್ಲಿ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಗಳಿಸಿದರು. 1962ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಹಾಗೂ ದ್ರಾವಿಡ ಅಧ್ಯಯನದ ಅಧ್ಯಾಪಕರಾಗಿ ಸೇರಿದ ರಾಮಾನುಜನ್ 1993ರಲ್ಲಿ ನಿಧನರಾಗುವ ತನಕದ ತಮ್ಮ ಬಹುತೇಕ ವೃತ್ತಿ ಜೀವನವನ್ನು ಅಲ್ಲಿಯೇ ನಡೆಸಿದರು. ಜೊತೆಗೆ ವಿಸ್ಕಾನ್ಸಿನ್, ಬರ್ಕ್‌ಲಿ, ಮಿಚಿಗನ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾದ್ಯಾಪಕರಾಗಿದ್ದರು. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಪೀಠ ಸ್ಥಾಪನೆ ಮಾಡಿದ ಕೀರ್ತಿ ಎ. ಕೆ. ರಾಮಾನುಜನ್ ಅವರಿಗೆ ಸಲ್ಲುತ್ತದೆ.
ರಾಮಾನುಜನ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆಗಳನ್ನು ಕೊಡುವುದರ ಜೊತೆಗೆ ಜೊತೆಗೆ ಕನ್ನಡದ ಕಸ್ತೂರಿಯನ್ನು ವಿಶ್ವದೆಲ್ಲೆಡೆ ಇಂಗ್ಲಿಷ್ ಭಾಷೆಯ ಮೂಲಕ ಪಸರಿಸುವ ಮನೋಜ್ಞ ಕಾರ್ಯ ಮಾಡಿದರು. ಈ ನಿಟ್ಟಿನಲ್ಲಿ ಅವರು ಇಂಗ್ಲಿಷ್‍ನಲ್ಲಿ ಮೂಡಿಸಿದ ಬಸವಣ್ಣನವರ ‘ಉಳ್ಳವರು ಶಿವಾಲಯವ ಮಾಡುವರು’ ವಚನದ ಕನ್ನಡದ ಭಾಷಾಂತರ ಇಲ್ಲಿ ನೆನಪಾಗುತ್ತದೆ.
ಪ್ರಸಿದ್ದ ನವ್ಯ ಕವಿ ಗೋಪಾಲಕೃಷ್ಣ ಅಡಿಗರ ಪ್ರಭಾವದಿಂದ ಹೊರಬಂದು ಹೊಸ ಸಂವೇದನೆಗಳೊಂದಿಗೆ ತಮ್ಮದೇ ಆದ ರೀತಿಯಲ್ಲಿ ಕಾವ್ಯ ರಚಿಸಿದ ರಾಮಾನುಜನ್ ಅವರು ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಹೊಕ್ಕುಳಲ್ಲಿ ಹೂವಿಲ್ಲ’ (1969) ಇವರ ಪ್ರಥಮ ಸಂಕಲನ. ಪದ್ಯ ರಚನೆ, ಭಾಷಾ ಬಳಕೆ, ಪ್ರತಿಮೆಗಳ ಬಳಕೆ- ಈ ದೃಷ್ಟಿಯಿಂದ ಇವರ ಕವನಗಳಿಗೆ ನವ್ಯ ಸಾಹಿತ್ಯದಲ್ಲಿ ಪ್ರತ್ಯೇಕ ಸ್ಥಾನ ಸಲ್ಲುತ್ತದೆ. ‘ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು’ ಅಲ್ಲದೆ ‘ಕುಂಟೋ ಬಿಲ್ಲೆ’, ‘ಮತ್ತೊಬ್ಬನ ಆತ್ಮಚರಿತ್ರೆ’ ಎ. ಕೆ. ರಾಮಾನುಜನ್ ಅವರ ಪ್ರಸಿದ್ಧ ಕೃತಿಗಳು. ರಾಮಾನುಜನ್ ಅವರ ಕೃತಿಗಳ ಸಮಗ್ರ ಸಂಪುಟವನ್ನು ಮನೋಹರ ಗ್ರಂಥಮಾಲೆ ಹೊರತಂದಿದ್ದು ಅದರಲ್ಲಿ ರಾಮಾನುಜನ್ ಅವರ ಮೂರು ಕವನ ಸಂಕಲನಗಳು, ಒಂದು ಕಾದಂಬರಿ, ನಾಲ್ಕು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆಗಳು ಇಲ್ಲಿ ಕೂಡಿವೆ. ‘ನಡೆದು ಬಂದ ದಾರಿ’ ಗ್ರಂಥದಲ್ಲೂ, ‘ಸಾಕ್ಷಿ’ ಪತ್ರಿಕೆಯಲ್ಲೂ ಪ್ರಕಟವಾಗಿರುವ ಕವನಗಳೂ, ಐವತ್ತರ ದಶಕದಲ್ಲಿ ರಾಶಿ ಅವರ ‘ಕೊರವಂಜಿ’ಯಲ್ಲಿ ಪ್ರಕಟವಾದ ಹಲವು ನಗೆ ಬರಹಗಳೂ ಇಲ್ಲಿ ಸೇರಿವೆ.
ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿದ್ದ ಪ್ರಮುಖ ಭಾರತೀಯ ಲೇಖಕರಲ್ಲಿ ರಾಮಾನುಜನ್ ಅವರೂ ಒಬ್ಬರು. 1966ರಲ್ಲಿ ರಾಮಾನುಜನ್ ಅವರ ‘ದಿ ಸ್ಟ್ರೈಡರ್ಸ್’ ಮತ್ತು 1971 ರಲ್ಲಿ ‘ರಿಲೇಶನ್ಸ್’ ಎಂಬ ಕವನ ಸಂಕಲನಗಳು ಪ್ರಕಟವಾದವು. ಕನ್ನಡ, ಇಂಗ್ಲಿಷ್, ತಮಿಳು, ಮಲಯಾಳಂ ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿರುವ ರಾಮಾನುಜನ್ ಅವರು ಭಾಷಾವಿಜ್ಞಾನ, ಜಾನಪದ, ಭಾರತೀಯ ಸಾಹಿತ್ಯ ಈ ಮೊದಲಾದ ವಿಷಯಗಳನ್ನು ಕುರಿತಾಗಿ ಬರೆದ ಲೇಖನಗಳು ಭಾರತ, ಅಮೆರಿಕ, ಗ್ರೇಟ್ ಬ್ರಿಟನ್ ಮೊದಲಾದ ದೇಶಗಳ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ರಾಮಾನುಜನ್ ಕೇವಲ ಕವಿಗಳಾಗಿರದೆ ಉತ್ತಮ ಭಾಷಾಂತರಕಾರರೂ ಹೌದು. ಕನ್ನಡ ವಚನ ಸಾಹಿತ್ಯವನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿ ಕೊಡುವ ಒಂದು ವಿಶಿಷ್ಟ ಪ್ರಯತ್ನ ‘ಸ್ಪೀಕಿಂಗ್ ಆಫ್ ಶಿವ’ (1973). ‘ದಿ ಇಂಟೀರಿಯರ್ ಲ್ಯಾಂಡ್‌ಸ್ಕೇಪ್’ (1970) ಎಂಬ ಪುಸ್ತಕದಲ್ಲಿ ಪ್ರಾಚೀನ ತಮಿಳು ಸಾಹಿತ್ಯದಿಂದ ಆರಿಸಿದ ಭಾಗಗಳನ್ನು ಅನುವಾದಿಸಲಾಗಿದೆ. ಎಂ.ಜಿ.ಕೃಷ್ಣಮೂರ್ತಿಯವರೊಡನೆ ಗೋಪಾಲಕೃಷ್ಣ ಅಡಿಗರ ಕೆಲವು ಕವನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇದರ ಹೆಸರು ‘ಸಾಂಗ್ ಆಫ್ ಅರ್ಥ್ ಅಂಡ್ ಅದರ್ ಪೋಯಂ’ (1968). ಯು.ಆರ್. ಅನಂತಮೂರ್ತಿಯವರ ಸುಪ್ರಸಿದ್ದ ಕಾದಂಬರಿ ‘ಸಂಸ್ಕಾರ’ವನ್ನು ಅವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ.
ರಾಮಾನುಜನ್ ಅವರು ಇಂಗ್ಲಿಷಿನಿಂದಲೂ ಕನ್ನಡಕ್ಕೆ ಕೆಲವು ಕೃತಿಗಳನ್ನು ಭಾಷಾಂತರಿಸಿದ್ದಾರೆ. ‘ಹಳದಿಮೀನು’ ಕಾದಂಬರಿ ಅವುಗಳಲ್ಲಿ ಒಂದು. ಕನ್ನಡ ಜನಪದ ಸಾಹಿತ್ಯದ ಒಂದು ಮುಖ್ಯ ಪ್ರಕಾರವಾದ ಗಾದೆಗಳನ್ನು ಕುರಿತಂತೆ 1955ರಷ್ಟು ಹಿಂದೆಯೇ ‘ಗಾದೆಗಳು’ ಎಂಬ ಕಿರು ಗ್ರಂಥವನ್ನು ಇವರು ಪ್ರಕಟಿಸಿದ್ದರು. ಇಲ್ಲಿ ಗಾದೆಯ ರೂಪರಚನೆಗಳ ಜೊತೆಗೆ ಕೆಲವು ಕನ್ನಡ ಗಾದೆಗಳ ವಿಶ್ಲೇಷಣೆಯೂ ಸೇರಿದೆ. ಕರ್ನಾಟಕದಲ್ಲಿ ಜಾನಪದದ ಬಗ್ಗೆ ಇನ್ನೂ ಅಷ್ಟಾಗಿ ವೈಜ್ಞಾನಿಕ ಪ್ರಜ್ಞೆ ಮೂಡದೆ ಇದ್ದಂಥ ಸಂದರ್ಭದಲ್ಲಿ ಈ ಕೃತಿ ಪ್ರಕಟವಾದದ್ದು ಮಹತ್ವದ ಸಂಗತಿ.
ಕನ್ನಡ ಸಾಹಿತ್ಯದ ಬಗ್ಗೆ ಅದರಲ್ಲಿಯೂ ಸಮಕಾಲೀನ ಸಾಹಿತ್ಯದ ಬಗ್ಗೆ ಅಪಾರ ಕಾಳಜಿ, ಶ್ರದ್ದೆ ಹೊಂದಿದ್ದ ರಾಮಾನುಜನ್ ಅವರು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಪಾಶ್ಚಾತ್ಯರಿಗೆ ಪರಿಚಯ ಮಾಡಿಕೊಡುವ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಅವರು ಅಮೆರಿಕ ಮೊದಲಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದರು. ಅನೇಕ ಲೇಖನಗಳನ್ನು ಬರೆದಿದ್ದರು. ‘ಡಿಕ್ಷನರಿ ಆಫ್ ಓರಿಯಂಟಲ್ ಲಿಟರೇಚರ್ – ಸೌತ್ ಅಂಡ್ ಸೌತ್ ಈಸ್ಟ್ ಏಷ್ಯಾ’ (1975) ಎಂಬ ಗ್ರಂಥದಲ್ಲಿ ಕನ್ನಡದ ಪ್ರಸಿದ್ದ ಲೇಖಕರನ್ನು ಕುರಿತಂತೆ ಇವರು ಬರೆದ ಲೇಖನಗಳಿವೆ.
ರಾಮಾನುಜನ್‍ರ ಇಂತಹ ಬಹುಮುಖ ಸೇವೆಯನ್ನು ಗಮನಿಸಿದ ಭಾರತ ಸರ್ಕಾರ 1976ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1983ರಲ್ಲಿ ಅವರಿಗೆ ಪ್ರಸಿದ್ಧ ಮ್ಯಾಕ್ ಆರ್ಥರ್ ಫೆಲ್ಲೋಷಿಪ್ ಗೌರವ ಅರ್ಪಿತವಾಯಿತು.