Site icon Vistara News

ಮೊಗಸಾಲೆ ಅಂಕಣ: ಬಿಜೆಪಿಯ ಸೂತಕದ ಕಳೆ ಎಂದು ಮುಗಿದೀತು?

bjp leaders karnataka

ಮೇ ತಿಂಗಳ 13ರಂದು ಮಧ್ಯಾಹ್ನದ ಹೊತ್ತಿಗೆಲ್ಲ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಅಧಿಕಾರ ಕಳೆದುಕೊಂಡಾಗಿತ್ತು. ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ತುಸು ಹೆಚ್ಚೂಕಡಿಮೆ ಒಂದು ತಿಂಗಳಾಗುತ್ತಿದೆ, ಹೊಸ ಸರ್ಕಾರ ಬಂದು. ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟರು ಭಾಷಣ ಮಾಡಿ ಸಿದ್ದರಾಮಯ್ಯ ಸರ್ಕಾರವನ್ನು ಹಾಡಿ ಹೊಗಳಿದ್ದಾಗಿದೆ. ಅರ್ಥ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹೆಸರಿನಲ್ಲಿ ಹದಿನಾಲ್ಕನೆಯ ಬಜೆಟ್ ಮಂಡಿಸುವ ಮೂಲಕ ರಾಮಕೃಷ್ಣ ಹೆಗಡೆ ಹೆಸರಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಧಾನ ಸಭೆಯ ಎರಡೂ ಸದನಗಳಲ್ಲಿ ಕಲಾಪ ನಿರೀಕ್ಷಿತ ರೀತಿಯಲ್ಲಿಯೇ ಸಾಗಿದೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಗಟ್ಟಿ ಕಾಳು ಎನ್ನುವಂಥದು ಜನಕ್ಕೆ ಕಂಡಿಲ್ಲ. ಏರು ಧ್ವನಿಯ ಅರಚಾಟ, ಕಿರುಚಾಟ, ಆರೋಪ ಪ್ರತ್ಯಾರೋಪ ಉಭಯ ಸದನದ ಕಲಾಪವನ್ನು ನುಂಗಿದೆ. ಮಳೆ ಇಲ್ಲದ ಸ್ಥಿತಿ ರೈತಾಪಿ ಸಮುದಾಯದ ನಿದ್ರೆಗೆಡಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಬಡತನ, ಹಸಿವು ತತ್ತರಗೊಳಿಸುತ್ತಿದೆ. ಜನ ಸಮುದಾಯದ ಸಮಸ್ಯೆಗಳಿಗೆ ಗಂಭೀರ ನೆಲೆಯಲ್ಲಿ ಚರ್ಚಿಸಿ ಅಷ್ಟೇ ಗಂಭೀರವಾದ ಪರಿಹಾರೋಪಾಯಗಳನ್ನು ರೂಪಿಸಬೇಕಾದ ಈ ಎರಡೂ ಸಾಂವೈಧಾನಿಕ ಸಂಸ್ಥೆಗಳು ಕಾಲಹರಣ ಮಾಡುತ್ತಿವೆ ಎಂದು ಜನ ಭಾವಿಸುವಂತಾಗಿದೆ.

ಈ ವಿಧಾನ ಮಂಡಲದ ವಿಶೇಷ ಎಂದರೆ ವಿರೋಧ ಪಕ್ಷಕ್ಕೆ ಅಧಿಕೃತ ನಾಯಕತ್ವವೇ ಇಲ್ಲವಾಗಿರುವುದು. ವಿಧಾನ ಸಭೆಯಲ್ಲಿ 66 ಶಾಸಕರನ್ನು ಹೊಂದಿರುವ ಬಿಜೆಪಿಗೆ ಅಧಿಕೃತ ವಿರೋಧ ಪಕ್ಷ ಸ್ಥಾನದ ಮಣೆ ಹಾಕಿ ಮನ್ನಣೆ ಕೊಡಲು ಸಭಾಧ್ಯಕ್ಷ ಯು.ಟಿ. ಖಾದರ್ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇಷ್ಟು ದಿವಸದ ಬಳಿಕವೂ ವಿಧಾನ ಸಭೆಯಲ್ಲಿ ತನ್ನ ನಾಯಕ ಯಾರೆನ್ನುವುದು ಬಿಜೆಪಿಗೇ ಗೊತ್ತಿಲ್ಲವಾಗಿದೆ. ಇದೇ ಸ್ಥಿತಿ ವಿಧಾನ ಪರಿಷತ್ತಿನದೂ.

ಪುನಃ ಅಧಿಕಾರಕ್ಕೆ ಬರುವುದು ಖಚಿತ ಎಂದು ನಂಬಿದ್ದ ರಾಜ್ಯ ಬಿಜೆಪಿ ನಾಯಕರು, ಸೋಲು ಎದುರಾದಾಗ ಸಿಡಿಲು ಬಡಿದವರಂತೆ ನಿಶ್ಚೇಷ್ಟಿತರಾಗಿದ್ದು ಎಲ್ಲ ನೋಡಿರುವ ಬೆಳವಣಿಗೆ. ಆ ಆಘಾತದಿಂದ ಪಕ್ಷದ ರಾಜ್ಯ ನಾಯಕತ್ವ ಹೊರಕ್ಕೆ ಬಂದಿಲ್ಲ, ಕೇಂದ್ರ ನಾಯಕತ್ವ ಉತ್ತರ ಕಾಣದ ಸ್ಥಿತಿಯಲ್ಲಿ ಆಕಾಶ ನೋಡುತ್ತಿದೆ. ಸೋಲು ಗೆಲುವು ಚುನಾವಣಾ ರಾಜಕೀಯದಲ್ಲಿ ಅತ್ಯಂತ ಸಹಜ. ಸೋಲು ಎದುರಾದಾಗ ಧೃತಿಗೆಡದೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿ ಮುಂದಿನ ಚುನಾವಣೆಗೆ ಸಜ್ಜುಗೊಳಿಸುವ ಕೆಲಸವನ್ನು ನಾಯಕರು ಆಂದೋಲನ ರೂಪದಲ್ಲಿ ಕೈಗೆತ್ತಿಕೊಳ್ಳಬೇಕು. ಆದರೆ ಅಂಥ ಯಾವುದೇ ಲಕ್ಷಣ ರಾಜ್ಯ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಇಂದಲ್ಲಾ ನಾಳೆ ಇಂಥದೊಂದು ಯತ್ನ ಆದೀತೆಂಬ ಸಣ್ಣ ಸೂಚನೆಯೂ ತೋರುತ್ತಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್/ಯುಪಿಎ ಸರ್ಕಾರ ಸೋತು ಬಿಜೆಪಿ/ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಗೆದ್ದ ಲೋಕಸಭಾ ಸೀಟು 44 ಮಾತ್ರ. ಅಧಿಕೃತ ವಿರೋಧ ಪಕ್ಷದ ಮಾನ್ಯತೆಯೂ ಅದಕ್ಕೆ ಸಿಗಲಿಲ್ಲ.

ಅಂಥ ಸ್ಥಿತಿಯಲ್ಲಿ “ನಾವು ಸತ್ತಿಲ್ಲ, ಸೋತಿದ್ದೇವೆ ಅಷ್ಟೆ” ಎಂದು ಕಾಂಗ್ರೆಸ್‍ನ ರಾಷ್ಟ್ರಮಟ್ಟದ ನಾಯಕರು ಜನರ ಮುಂದೆ ಬಂದು ನಿವೇದಿಸಿಕೊಳ್ಳುತ್ತಾರೆಂದು ನಿರೀಕ್ಷಿಸಲಾಗಿತ್ತು. ಈ ಸೋಲು ಒಂದು ಆಕಸ್ಮಿಕ, ಮುಂಎದಿನ ಚುನವಣೆಗಳಲ್ಲಿ ಗೆಲುವು ನಮ್ಮದೇ ಎಂಬ ಅಹಂಕಾರದಲ್ಲಿ ಬೀಗಿದ ಕಾಂಗ್ರೆಸ್ ನಾಯಕತ್ವ ಅಲ್ಲಿಂದ ಮುಂದಕ್ಕೆ ಕಂಡ ಸ್ಥಿತಿ ಎಂಥದು ಎನ್ನುವುದು ಲೋಕವಿದಿತ. 2014ರಿಂದ ಎಂಟು ವರ್ಷದ ಬಳಿಕ ರಾಹುಲ್ ಗಾಂಧಿ ಹಮ್ಮಿಕೊಂಡ ಭಾರತ್ ಜೋಡೋ ಯಾತ್ರೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಇಟ್ಟ ದಿಟ್ಟ ಹೆಜ್ಜೆ.

ಕರ್ನಾಟಕದಲ್ಲಿ ಈ ಹೊತ್ತು “ನಾವು ಸೋತಿದ್ದೇವೆ ನಿಜ ಆದರೆ ಸತ್ತಿಲ್ಲ” ಎಂದು ಬಿಜೆಪಿ ಹೇಳಬೇಕಾಗಿದೆ. ಆದರೆ ಆ ಪಕ್ಷದ ನಾಯಕರಲ್ಲಿ ಅಂಥ ಆತ್ಮವಿಶ್ವಾಸ ಕಾಣಿಸುತ್ತಿಲ್ಲ. “ನಾವು ಸೋತಿಲ್ಲ ಸತ್ತಿದ್ದೇವೆ” ಎಂಬ ಸೂತಕದ ಛಾಯೆ ಆ ಪಕ್ಷವನ್ನು ಅಡಿಯಿಂದ ಮುಡಿವರೆಗೆ ಆವರಿಸಿದೆ. ಇಷ್ಟು ಹೀನಾಯ ಸ್ಥಿತಿ ಈ ರಾಜ್ಯದಲ್ಲಿ ಬಿಜೆಪಿಗೆ ಜನಸಂಘ ಕಾಲದಿಂದಲೂ ಬಂದಿಲ್ಲ. ಇದಕ್ಕೆ ಪೂರಕವಾಗಿ ಒಂದೆರಡು ಅಂಶಗಳತ್ತ ಗಮನ ಹರಿಸುವುದು ಅಗತ್ಯ.

ಆರ್. ಗುಂಡೂರಾವ್ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ನಡೆದ 1983ರ ವಿಧಾನ ಸಭಾ ಚುನಾವಣೆ. ಕಾಂಗ್ರೆಸ್, ಜನತಾ ರಂಗ, ಬಿಜೆಪಿ ಹೀಗೆ ತ್ರಿಕೋನ ಸ್ಪರ್ಧೆ. ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಬರಲಿಲ್ಲ. ಕಾಂಗ್ರೆಸ್‍ನ ಸೋಲೇ ಆಗಿನ ದೊಡ್ಡ ಸುದ್ದಿ. ಸಂಖ್ಯಾಬಲದಲ್ಲಿ ತುಸು ಮೇಲುಗೈ ಸಾಧಿಸಿದ್ದ ಜನತಾರಂಗ ಎಡಪಕ್ಷಗಳು, ಪಕ್ಷೇತರರು ಹಾಗೂ ಭಾರತೀಯ ಜನತಾ ಪಾರ್ಟಿಯ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ರಾಜ್ಯ ರಾಜಕಾರಣದಿಂದ ದೂರವಾಗಿ ದೆಹಲಿಯಲ್ಲಿ ಆಶ್ರಯಕಂಡುಕೊಂಡಿದ್ದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಎಸ್. ಬಂಗಾರಪ್ಪ ಮತ್ತು ಎಚ್.ಡಿ. ದೇವೇಗೌಡರಲ್ಲಿ ಮೊಳಕೆಯೊಡೆದಿದ್ದ ತಾವೇ ಮುಖ್ಯಮಂತ್ರಿ ಎನ್ನುವ ಒಳ ಆಸೆಯನ್ನು ಹೊಸಕಿ ಹಾಕಿದ ಆರೋಪವನ್ನು ಹೆಗಡೆ ಹೊತ್ತ ಮುಹೂರ್ತವೂ ಅದಾಯಿತು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂಗ್ರೆಸ್‌ ಭರವಸೆಗಳ ಮುಂದೆ ಬಿಜೆಪಿ ಹತಾಶೆ

ಚುನಾವಣೆಯಲ್ಲಿ ಕಾಂಗ್ರೆಸ್-ಜನತಾ ರಂಗದ ವಿರುದ್ಧ ಸೆಣೆಸಿ 18 ಸೀಟು ಗೆದ್ದಿದ್ದ ಬಿಜೆಪಿಗೆ ಅಷ್ಟು ಸುಲಭದಲ್ಲಿ ಹೆಗಡೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಕೊಡುವ ಮನಸ್ಸಿರಲಿಲ್ಲ. ಅಂದಿನ ಬಿಜೆಪಿ ಅಧ್ಯಕ್ಷ ಎ.ಕೆ.ಸುಬ್ಬಯ್ಯನವರಂತೂ ರಾಜಿಗೆ ಸುತರಾಂ ಸಿದ್ಧವಿರಲಿಲ್ಲ. ರಾಮಕೃಷ್ಣ ಹೆಗಡೆಯವರು ತುರ್ತುಪರಿಸ್ಥಿತಿ ಕಾಲದಿಂದ ಗೆಳೆತನ ಬೆಳೆಸಿಕೊಂಡ ಅಟಲ್ ಬಿಹಾರಿ ವಾಜಪೇಯಿ ಮನವೊಲಿಸುವಲ್ಲಿ ಯಶಸ್ವಿಯಾದರು. ಸುಬ್ಬಯ್ಯ ಅಸಹಾಯಕತೆಯಲ್ಲಿ ಒಪ್ಪಿ ಬಾಹ್ಯ ಬೆಂಬಲ ನೀಡಿದರು. ಎರಡು ವರ್ಷದ ಬಳಿಕ ಲೋಕಸಭಾ ಚುನಾವಣೆ. ಜನತಾ ಪಕ್ಷ ದಯನೀಯ ಸೋಲಿಗೆ ಒಳಗಾದಾಗ ಅದರ ನೈತಿಕ ಹೊಣೆ ಹೊತ್ತ ಹೆಗಡೆ, ವಿಧಾನ ಸಭೆ ವಿಸರ್ಜಿಸಿ ಮತ್ತೆ ಜನಾದೇಶ ಪಡೆಯಲು ನಿರ್ಧರಿಸಿದರು. “ಮಿತ್ರ ಪಕ್ಷ” ಬಿಜೆಪಿ ಬಹುತೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆದ್ದಿದ್ದು ಎರಡೇ ಎರಡು ಸೀಟು ಮಾತ್ರ. ಗೆದ್ದವರು ಬಿ.ಎಸ್.ಯಡಿಯೂರಪ್ಪ (ಶಿಕಾರಿಪುರ ಕ್ಷೇತ್ರ) ಮತ್ತು ವಸಂತ ಬಂಗೇರ (ಬೆಳ್ತಂಗಡಿ ಕ್ಷೇತ್ರ). ವಿಧಾನ ಸಭೆ ಅಧಿವೇಶನ ನಡೆದಾಗಲೇ ಬಂಗೇರಾ ಬಿಜೆಪಿ ತೊರೆದು ಜನತಾದಳದೊಂದಿಗೆ ಸೇರಿದರು. ಒಂಟಿ ಯಡಿಯೂರಪ್ಪ ಅವರದು ಸರ್ಕಾರದ ಜನ ವಿರೋಧಿ ನೀತಿ-ಕಾರ್ಯಕ್ರಮಗಳ ವಿರುದ್ಧ ಜನ ಮೆಚ್ಚುವ ರೀತಿಯಲ್ಲಿ ಹೋರಾಟ. ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧವೇ ನಡುಗುತ್ತದೆ ಎಂಬ ಮಾತು ಚಾಲ್ತಿಗೆ ಬರುವ ಪೂರ್ವ ಸೂಚನೆ ಸಿಕ್ಕಿದ್ದು ಆವಾಗಲೇ.‌

ಹದಿನೆಂಟು ಶಾಸಕ ಬಲ ಒಂದು ಸ್ಥಾನಕ್ಕೆ ಕುಸಿದಾಗ ನೋವು ಸಹಜ. ಯಡಿಯೂರಪ್ಪ ನೋವು ಅನುಭವಿಸಿದರು. ಆ ನೋವಿನಲ್ಲಿ ಹುಟ್ಟಿದ ಛಲ ಅವರನ್ನು ಬಿಜೆಪಿಯ ಉನ್ನತ ನಾಯಕ ಸ್ಥಾನಕ್ಕೆ ಒಯ್ಯಿತು. ಅವರ ಮುಖ ನೋಡಿದ ರಾಜ್ಯದ ಜನತೆ ಒಮ್ಮೆ 110 (2008ರ ಚುನಾನವಣೆ) ಮತ್ತೊಮ್ಮೆ 104 (2018ರ ಚುನಾವಣೆ) ಸ್ಥಾನವನ್ನು ಬಿಜೆಪಿಗೆ ಕೊಟ್ಟರು. ಈಗಿನ ನಾಯಕರಂತೆ ಮುಖಹೀನ ಸ್ಥಿತಿಗೆ ಅಂದು ಯಡಿಯೂರಪ್ಪ ಹೋಗಿದ್ದರೆ ಇವತ್ತು ಈ ರಾಜ್ಯದಲ್ಲಿ ಬಿಜೆಪಿ ಖಂಡಿತವಾಗಿಯೂ ಲೆಟರ್‌ಹೆಡ್ ಪಕ್ಷವಾಗಿರುತ್ತಿತ್ತು. ಅಂದು ಯಡಿಯೂರಪ್ಪ ತೋರಿದ ಆತ್ಮವಿಶ್ವಾಸ ಮತ್ತು ಛಲ ಇಂದು ಆ ಪಕ್ಷದಲ್ಲಿ ದುರ್ಬೀನು ಹಾಕಿ ನೋಡಿದರೂ ಕಾಣಿಸುತ್ತಿಲ್ಲ. ರಾಜಕೀಯ ಪಕ್ಷವೊಂದು ಒಂದು ಸೋಲಿನೊಂದಿಗೆ ತನ್ನ ಇನ್ನಿಂಗ್ಸ್ ಮುಗಿಯಿತೆಂದು ಮೂಲೆ ಹಿಡಿಯುವುದು ತನಗೆ ತಾನೇ ಮಾಡಿಕೊಳ್ಳುವ ಆತ್ಮವಂಚನೆಯಲ್ಲದೆ ಬೇರೆ ಇನ್ನೇನೂ ಅಲ್ಲ. ಚುನಾವಣೆ ಮುಂದಿನ ಮಾತಾಯಿತು, ಉಭಯ ಸದನಗಳಲ್ಲಿ ಇವರು ನಮ್ಮ ನಾಯಕರು ಎನ್ನಲು ಬಿಜೆಪಿಗೆ ಇನ್ನೆಷ್ಟು ಸಮಯ ಬೇಕೋ…ಗೊತ್ತಿಲ್ಲ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಆ ಕರಾಳ ದಿನಗಳ ಮರೆತೇನೆಂದರೆ ಮರೆಯಲಿ ಹ್ಯಾಂಗ?

Exit mobile version