Site icon Vistara News

ಮನಿ ಕಹಾನಿ ಅಂಕಣ: ಹಣವನ್ನಷ್ಟೇ ಅಲ್ಲ, ಸಮಯವನ್ನೂ ಹೂಡಿಕೆ ಮಾಡಿ

parenting

ಬೆಳಗ್ಗೆ ಎದ್ದ ತಕ್ಷಣ ಆಫೀಸಿನ ತಯಾರಿ, ಆಫೀಸಿಗೆ ಹೋದರೆ ಲೊಕದ ಪರಿವೆಯೇ ಇಲ್ಲದಷ್ಟು ಕೆಲಸ, ಮತ್ತೆ ಮನೆಗೆ ಬಂದರೆ ನಾಳೆಯ ಕೆಲಸದ ಬಗ್ಗೆ ಯೋಜನೆ ಹೀಗೆ ಸದಾ ಒಂದಿಲ್ಲೊಂದು ಕೆಲಸದಲ್ಲೇ ತೊಡಗಿರುವ ಎಷ್ಟೋ ಮಂದಿಯಿದ್ದಾರೆ, ಇನ್ನೂ ಕೆಲವರಿದ್ದಾರೆ. ಅವರು ತಮ್ಮದೇ ವ್ಯವಹಾರ ಆರಂಭಿಸಿರುತ್ತಾರೆ. ಅವರಿಗೆ ಅವರ ಬ್ಯುಸಿನೆಸ್ ಹೊರತುಪಡಿಸಿ ಜಗತ್ತಿನ ಯಾವ ವಿಚಾರವೂ ಅಷ್ಟೊಂದು ಮುಖ್ಯ ಎನಿಸುವುದಿಲ್ಲ. ಟಿವಿಯಲ್ಲಿ ಬರುವ ಕರೋನಾ ವಿಷಯದಲ್ಲೂ ಎಲ್ಲಿ ನನ್ನ ವ್ಯವಹಾರಕ್ಕೆ ಧಕ್ಕೆ ಬಂದೀತೋ ಎಂಬುದೇ ಚಿಂತೆ, ಸ್ವತಹ ಅವರಿಗೇ ಕೊರೊನಾ ಬಂದಾಗಲೂ ಅವರು ಅಷ್ಟರ ಮಟ್ಟಿಗೆ ಚಿಂತಿಸಿರೋದಿಲ್ಲ. ಒಂದು ಪ್ರಾಜೆಕ್ಟ್ ಮುಗಿಯುವುದರೊಳಗೆ ಮತ್ತೊಂದು, ಒಂದು ಸಮಸ್ಯೆ ಬಗೆಹರಿಸುವುದರೊಳಗೆ ಇನ್ನೊಂದು. ಒಂದೂರಿನಿಂದ ಬಂದ ತಕ್ಷಣ ಮತ್ತೊಂದು ಜರ್ನಿಗೆ ತಯಾರಾಗಬೇಕು. ಇಂತಹಾ ಬದುಕು ಸಾಗಿಸುವಾಗ ನಾವು ನೀವೆಲ್ಲರೂ ಗಮನಿಸಲೇಬೇಕಾದ ಮತ್ತೊಂದು ವಿಚಾರವಿದೆ. ಅದು ನಾವು ಮತ್ತು ನಮ್ಮ ಕುಟುಂಬ.

ಅದೆಷ್ಟೇ ಬ್ಯುಸಿ ಇದ್ದರೂ ನಮ್ಮ ಕುಟುಂಬದೊಂದಿಗೆ ಕೊಂಚ ಸಮಯ ಕಳೆಯಲೇ ಬೇಕು. ಅವರಿಗಾಗೇ ತಾನೆ ನಾನು ಇಷ್ಟೆಲ್ಲಾ ಮಾಡ್ತಿರೋದು, ಮತ್ತೆ ಅವರೊಂದಿಗೆ ಕುಳಿತು ಮಾತನಾಡೋದೇನಿದೆ? ಐದು ನಿಮಿಷವೂ ನನ್ನೊಂದಿಗೆ ಮಾತನಾಡುವಷ್ಟು ವಿಷಯ ಅವರಲ್ಲಿಲ್ಲ ಅನ್ನೋದು ಹಲವು ಗಂಡಸರ ವಾದ. ಹೌದು ಅವರಿಗೆ ನಿಮ್ಮೊಂದಿಗೆ ನಿಮ್ಮ ವ್ಯವಹಾರದ ಬಗ್ಗೆ, ಲೋಕದ ಆಗುಹೋಗುಗಳ ಬಗ್ಗೆ ಐದು ನಿಮಿಷ ಮಾತನಾಡುವುದೂ ಕಷ್ಟ. ಆದರೆ ನಿಮ್ಮಿಬ್ಬರ ಸಂಸಾರದ ಬಗ್ಗೆ, ಅವರ ಕನಸುಗಳ ಬಗ್ಗೆ, ಅವರಿಗಿರುವ ದುಃಖ, ದುಗುಡ, ತಕರಾರುಗಳ ಬಗ್ಗೆ ಒಮ್ಮೆ ಮಾತನಾಡಿಸಿ ನೋಡಿ ಅವರು ಗಂಟೆಗಟ್ಟಲೆ ಮಾತನಾಡಬಲ್ಲರು. ಮದುವೆಗಿಂತ ಮುಂಚೆ ಅಥವಾ ಮದುವೆಯಾದ ಹೊಸತರಲ್ಲಿ ನೀವಿಬ್ಬರೂ ಕಂಡ ಕನಸುಗಳ ಬಗ್ಗೆ ಒಮ್ಮೆ ಕೆದಕಿ ನೋಡಿ, ಆಗ ಅದೆಷ್ಟೋ ವರ್ಷ ಕಾಣದ ಹೊಸ ಬೆಳಕು ಆ ಹೆಣ್ಣಿನ ಮುಖದಲ್ಲಿ ಮೂಡುತ್ತದೆ. ನಿಮ್ಮದೇ ಕಂದನ ಜತೆ ಒಂದು ಗಂಟೆ ಕುಳಿತು ನಿಮ್ಮ ಬಗ್ಗೆ ಅವಳಿಗಿರುವ ಬಯಕೆಗಳನ್ನು ಕೇಳಿ. ಅವನಿ/ಳಿಗಾಗಿ ನೀವು ಕಟ್ಟಿರುವ ಹೊಸ ಆಫೀಸಿಗಿಂತ ಒಮ್ಮೆ ನೀವು ನಿಮ್ಮದೇ ಕಾರಿನಲ್ಲಿ ಅವರ ಗೆಳೆಯರೆದುರು ಒಂದು ಸುತ್ತು ಸುತ್ತಿಸಿದರೆ ಅವನಿಗೆ ಪರಮಾನಂದ. ಶಾಲೆಯನ್ನು ಅವರು ತಮ್ಮ ತಂದೆಯ ಬಗ್ಗೆ ತಮ್ಮದೇ ಆದ ಕನಸು ಮತ್ತು ಕಲ್ಪನೆಗಳನ್ನು ಗೆಳೆಯರ ಜೊತೆ ಹಂಚಿಕೊಂಡಿರುತ್ತಾರೆ. ಆ ಎಲ್ಲಾ ಮಾತುಗಳೂ ಸತ್ಯ ಅಂತ ಒಮ್ಮೆ ಅವರೆದುರು ನಿರೂಪಿಸಿದರೆ ಅವರ ಜನ್ಮ ಸಾರ್ಥಕ ಎನಿಸಿಬಿಡುತ್ತದೆ. ಅದಕ್ಕೆ ನೀವು ಕೋಟ್ಯಂತರ ರೂಪಾಯಿ ಕೊಡಬೇಕಿಲ್ಲ. ಜಸ್ಟ್ ನಿಮ್ಮ ಸಮಯ ಕೊಡಿ ಸಾಕು.

ಇದನ್ನೂ ಓದಿ: ಮನಿ ಕಹಾನಿ ಅಂಕಣ: ಗಣಿತ ಅರ್ಥ ಆಗದಿದ್ದರೂ ಅರ್ಥಶಾಸ್ತ್ರ ಗೊತ್ತಿದ್ದರೆ ಸಾಕು!

ಮನೆಗೆ ಬಂದು ಟಿವಿ ಮುಂದೆ ಕೂರುವ ಬದಲು ಸೀದಾ ಅಡುಗೆ ಮನೆಗೆ ಹೋಗಿ ಹೆಂಡತಿ ಅಡುಗೆ ಮಾಡುವಾಗ ಸ್ಲ್ಯಾಬಿನ ಮೇಲೆ ಕುಳಿತು ನಾಲ್ಕು ಮಾತಾಡಿ. ವಾರಕ್ಕೊಮ್ಮೆಯಾದರೂ ಮನೆ ಮಂದಿಯೆಲ್ಲಾ ಕುಳಿತು ಸಿನಿಮಾ, ಸಾಹಿತ್ಯ, ರಿಯಾಲಿಟಿ ಶೋ, ಪಕ್ಕದೂರಿನ ಸುದ್ದಿ, ಎಲ್ಲೊ ಕೇಳಿದ ಹಾಸ್ಯ ಹೀಗೆ ಯಾವುದಾದರೊಂದು ವಿಷಯದ ಬಗ್ಗೆ ಸುಮ್ಮನೆ ಹರಟಿ. ನಿಮ್ಮೊಂದಿಗೆ ವ್ಯವಹಾರದ ಬಗ್ಗೆ ಮಾತನಾಡುವ ಜ್ಞಾನ ಅವರಿಗಿಲ್ಲದಿದ್ದರೆ ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳ ಬಗ್ಗೆಯೇ ಮಾತನಾಡಿ. ಯಾವುದೋ ಶಾಪಿಂಗ್, ಮತ್ಯಾವುದೋ ಟ್ರಿಪ್, ಜಾತ್ರೆ ಹೀಗೆ ಅವರಿಗೆ ಆಸಕ್ತಿಯಿರುವ ಜಾಗಗಳಿಗೆ ಅವರೊಂದಿಗೆ ಭೇಟಿ ನೀಡಿ. ಆ ನೆನಪುಗಳು ಶಾಶ್ವತವಾಗಿ ಉಳಿಯುತ್ತವೆ.

ಅದನ್ನು ಬಿಟ್ಟು ನಾನು ಮಾಡ್ತಿರೋದೆ ಅವರ ಭವಿಷ್ಯಕ್ಕಾಗಿ ಅಲ್ವಾ, ನನ್ನ ದುಡಿಮೆಯೆಲ್ಲಾ ನನ್ನ ಮನೆಯವರ ಸುಖಕ್ಕೇ ಅಲ್ವಾ ಅಂತ ಮನೆಯವರಿಗೇ ಸಮಯ ಕೊಡದೇ ಅವರೊಂದಿಗೆ ಕುಳಿತು ಮಾತನಾಡದೆ, ಅವರೊಂದಿಗೆ ಯಾವ ನೆನಪುಗಳನ್ನೂ ಉಳಿಸಿಕೊಳ್ಳದೇ ಹೋದರೆ ಮುಂದೊಂದು ದಿನ ನಿಮ್ಮ ದುಡಿಮೆಯೆಲ್ಲಾ ಒಂದು ಹಂತಕ್ಕೆ ತಲುಪಿ, ನಿಮ್ಮ ವ್ಯವಹಾರ ನಿಮ್ಮ ಕೈ ದಾಟಿ ಮುಂದಿನ ಪೀಳಿಗೆಗೆ ಹೋಗುವ ನಿಮ್ಮ ರಿಟೈರ್ಮೆಂಟ್ ಸಮಯದಲ್ಲಿ ನಿಮಗಿರುವ ಸಮಯ ಉಳಿದವರಿಗಿರುವುದಿಲ್ಲ. ನಿಮ್ಮದೇ ಹೆಂಡತಿಗೆ ಆಗ ನೀವಿಲ್ಲದೇ ಬದುಕುವುದು ಅಭ್ಯಾಸವಾಗಿರುತ್ತದೆ. ಮಕ್ಕಳು ಮೊಮ್ಮಕ್ಕಳೊಂದಿಗೆ ಆಕೆ ಬೆರೆತು ನೀವಿಲ್ಲದ ಒಂದು ಜಗತ್ತು ಕಟ್ಟಿಕೊಂಡಿರುತ್ತಾಳೆ. ನಿಮ್ಮದೇ ಮಕ್ಕಳಿಗೆ ಆಗ ಅಪ್ಪನ ಅವಶ್ಯಕತೆಯಿರುವುದಿಲ್ಲ. ‌ಅವಶ್ಯಕತೆಯಿದ್ದಾಗ ಬಾರದ ಅಪ್ಪ ಕೊನೆಗಾಲದಲ್ಲಿ ಬಿಡುವಾಗಿ ಕುಳಿತರೆ ಆ ಮಕ್ಕಳು ತಿರುಗಿ ನೋಡುವುದಿಲ್ಲ. ಅವರು ನೀವಿಲ್ಲದೇ ಒಂದು ಬದುಕು ಕಟ್ಟಿಕೊಂಡಿರುತ್ತಾರೆ. ಅದು ನಿಮ್ಮದೇ ದುಡಿಮೆಯ ಫಲವಾಗಿರಬಹುದು; ಆದರೆ ಅದು ನಿಮ್ಮ ಕರ್ತವ್ಯ ಎಂದಷ್ಟೇ ಅವರು ಭಾವಿಸಿರುತ್ತಾರೆ. ಈಗ ಕೊನೆಗಾಲದಲ್ಲಿ ನೀವು ಕೊಡುವ ಸಮಯ ಅವರಿಗಿರುವುದಿಲ್ಲ. ಕಾಲಚಕ್ರ ಉರುಳಿ ನೀವಿದ್ದ ಜಾಗದಲ್ಲಿ ಅವರು ನಿಂತಿರುತ್ತಾರೆ. ಅವರಿದ್ದ ಜಾಗ ಈಗ ನಿಮ್ಮದಾಗಿರುತ್ತದೆ.

ಇದನ್ನೂ ಓದಿ: ಮನಿ ಕಹಾನಿ ಅಂಕಣ: ಬ್ಯುಸಿನೆಸ್ ಈಗ ವೃತ್ತಿಗೆ ಸೀಮಿತವಾಗಿಲ್ಲ, ಬದುಕಿಗೂ ಬಂದಾಗಿದೆ!

ಅದಷ್ಟೂ ವರ್ಷ ದುಡಿದ ಹಣ ನಿಮಗೆ ನೆಮ್ಮದಿ ನೀಡುವುದಿಲ್ಲ. ಆ ಸಮಯದಲ್ಲಿ ಕುಟುಂಬದವರು ನಿಮಗೆ ನೀಡುವ ಟೈಮ್ ಬಹಳ ಮುಖ್ಯ. ಅದಕ್ಕೇ ಹೇಳಿದೆ. ಈಗಲೇ ನೀವು ನಿಮ್ಮ ಕುಟುಂಬಕ್ಕಾಗಿ ಒಂದಷ್ಟು ಟೈಮ್ ಇನ್ವೆಸ್ಟ್ ಮಾಡಿಬಿಡಿ. ಅದು ಖಂಡಿತಾ ಬೆಳೆಯುತ್ತದೆ. ಹೂಡಿಕೆ ಮಾಡಿದ ಹಣ ಹೇಗೆ ಬೆಳೆಯುತ್ತದೆಯೊ ಸಮಯವೂ ಹಾಗೆಯೇ.

(ಅಂಕಣಕಾರರು ಫಿನ್ ಫ್ಲಸ್.ಕಾಮ್ ಮುಖ್ಯಸ್ಥರು)

Exit mobile version