Site icon Vistara News

ಮನಿ ಕಹಾನಿ ಅಂಕಣ | ಹೆತ್ತವರ ಋಣಕ್ಕೊಂದು ಲೆಕ್ಕಚಾರ ಬೇಡವೇ?

money kahani

“ತಂದೆ ತಾಯಿಗಳ ಋಣ ತೀರಿಸೋಕೆ ಈ ಜನ್ಮದಲ್ಲಿ ಸಾಧ್ಯವಿಲ್ಲ” ಹೀಗಂತ ಒಂದಿಲ್ಲೊಂದು ಬಾರಿ ನಾವು ಕೇಳಿಯೇ ಇರುತ್ತೇವೆ. ಋಣ ಅಂದರೇನು? ಸಾಲ ಅಂತ. ಯಾವುದನ್ನ ತೀರಿಸುತ್ತೇವೆ ಅಂತ ಕಮಿಟ್ ಆಗಿರುತ್ತೇವೋ ಅದನ್ನ ಮಾತ್ರ ಸಾಲ ಎನ್ನುತ್ತೇವೆ. ಇದನ್ನ ತೀರಿಸುವುದೇ ಇಲ್ಲ ಅಂತ ಪಡೆದದ್ದನ್ನ ಉಡುಗೊರೆ ಅಥವಾ ಕೊಡುಗೆ ಅಂತೀವಿ. ಹೀಗಾಗಿಯೇ ದೈವದತ್ತವಾಗಿ ಬಂದದ್ದನ್ನೆಲ್ಲಾ ದೇವರ ಕೊಡುಗೆ ಎನ್ನುತ್ತೇವೆ. ಯಾವುದನ್ನ ಪ್ರೀತಿಯಿಂದ ಪಡೆದಿರುತ್ತೇವೆಯೋ ಅದನ್ನ ಉಡುಗೊರೆ ಎನ್ನಬಹುದು, ಯಾವುದನ್ನ ಕರ್ತವ್ಯ ಎಂದು ಪಡೆದಿರುತ್ತೇವೆಯೋ ಅದನ್ನ ಋಣ ಎನ್ನಬಹುದು.

ನಿನಗಾಗಿ ನನ್ನ ಇಡೀ ಬದುಕನ್ನೇ ಸವೆಸಿದೆ, ನಿನ್ನ ಓದಿಗಾಗಿ ಒಂದೊತ್ತಿನ ಊಟವನ್ನೂ ಕಾಂಪ್ರಮೈಸ್ ಮಾಡಿದೆ, ನಿನ್ನ ಭವಿಷ್ಯಕ್ಕಾಗಿ ನನ್ನ ಸರ್ವಸ್ವವನ್ನೂ ತ್ಯಾಗ ಮಾಡಿದೆ ಅಂತ ಮಕ್ಕಳ ಮುಂದೆ ದಿನಗಟ್ಟಲೆ ಗೋಳಾಡುವ ತಂದೆತಾಯಿಗಳಿರುತ್ತಾರಲ್ಲ ಅಸಲಿಗೆ ಅವರೊಳಗೊಂದು ಅಭದ್ರತೆ ಕಾಡುತ್ತಿರುತ್ತದೆ. ಮುಂದೆ ನನ್ನ ಮಗ ಅಥವಾ ಮಗಳು ಎಲ್ಲಿ ನನ್ನನ್ನು ಮರೆತುಬಿಡುತ್ತಾರೋ, ಕೊನೆಗಾಲದಲ್ಲಿ ಎಲ್ಲಿ ನಮ್ಮನ್ನು ಸಾಕುವುದಿಲ್ಲವೋ ಎಂಬಿತ್ಯಾದಿ ಆತಂಕಗಳು ಅವರ ಮನಸಿನಾಳದಲ್ಲಿ ಕೊರೆಯುತ್ತಲೇ ಇರುತ್ತವೆ. ಹಾಗಾದರೆ ನಾವೇ ಹೆತ್ತ ಮಕ್ಕಳಿಂದ ಪ್ರೀತಿಯನ್ನು ಎದುರು ನೋಡುವುದು ತಪ್ಪಾ? ಖಂಡಿತ ಇಲ್ಲ. ಆದರೆ ಪ್ರೀತಿಯ ಹೆಸರಿನಲ್ಲಿ ತೀರಿಸಲಾಗದ ಋಣಗಳ ಬಗ್ಗೆ ಮಾತನಾಡುವುದು ತಪ್ಪು. ಅಸಲಿಗೆ ನೀವು ಹೇಳುತ್ತಿರುವುದಷ್ಟನ್ನೂ ಕರ್ತವ್ಯ ಎಂದು ಮಾಡಿರುತ್ತೀರಿ. ಯಾವಾಗ ನೀವು ಋಣಗಳ ಬಗ್ಗೆ ಮಾತನಾಡುತ್ತೀರೋ ಆಗ ನಿಮ್ಮ ಮಗುವಿಗೆ ನೀವು ಕೊಟ್ಟ ಪ್ರೀತಿಯೂ ಋಣವಾಗಿಯೇ ಕಾಣುತ್ತದೆ. ಆಗ ಅದಕ್ಕೆ ನಿಮ್ಮ ವಾತ್ಸಲ್ಯವೂ ಭಾರವೆನಿಸುತ್ತದೆ. ಮೊದಲು ನೀವು ಯಾವುದು ವಾತ್ಸಲ್ಯ, ಯಾವುದು ಕರ್ತವ್ಯ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.

ಮಗು ಹೆತ್ತವರಿಗೆ ಸಿಕ್ಕ ದಿವ್ಯ ಅನುಭೂತಿ. ಅದಕ್ಕೆ ನಾವು ಕೊಡುವ ಪ್ರೀತಿಗೆ ಬೆಲೆ ಕಟ್ಟಲಾಗದು, ಮುದ್ದಿಸಿದ ಕ್ಷಣಗಳನ್ನು ಸಾಲ ಪಡೆಯಲಾಗದು, ಮಗುವಿಗೆ ಜ್ವರ ಬಂದಾಗ ಹೆತ್ತ ಮನಸು ವಿಲ ವಿಲ ಒದ್ದಾಡಿ ಕಂಡ ದೇವರಿಗೆಲ್ಲಾ ಹರಕೆ ಹೊರುತ್ತದಲ್ಲಾ ಅದಕ್ಕೆ ಲೆಕ್ಕ ಇಡಲಾಗದು. ಆಫೀಸಲ್ಲಿ ಕೂತು ಮನೆಗೆ ಫೋನ್ ಮಾಡಿದಾಗ ಮಗುವಿನ ಅಳು ಕೇಳಿಸಿದರೆ ಕರುಳು ಚುರುಕ್ ಅಂದು ಕಣ್ಣೀರು ಜಾರುವ ಸಮಯ ಇದೆಯಲ್ಲಾ, ಇನ್ಯಾವತ್ತೋ ಮೂವತ್ತು ವರ್ಷಗಳ ನಂತರ ಕುಳಿತು ಅವನೆದುರು ಅದನ್ನ ಋಣ ಅಂತ ಹೇಳಲು ಸಾಧ್ಯವೇ ಇಲ್ಲ. ಇದೆಲ್ಲ ಹೆತ್ತವರಾಗಿ ನಾವು ಪಡೆಯುವ ದಿವ್ಯಾನುಭವ. ಅದಕ್ಕ ಮಮತೆ ಎನ್ನುತ್ತಾರೆ, ಅದೇ ವಾತ್ಸಲ್ಯ.

ಇದನ್ನೂ ಓದಿ | ಮನಿ ಕಹಾನಿ ಅಂಕಣ | ನಮ್ಮ ಸ್ವಾತಂತ್ರ್ಯ ಮನೆ ಮಗಳ ಕಣ್ಣೀರನ್ನು ಅಣಕಿಸದಿರಲಿ!

ಹಾಗಾದರೆ ಕರ್ತವ್ಯ? ಹೆತ್ತವರಾಗಿ ನಾವೊಂದಿಷ್ಟು ಕರ್ತವ್ಯ ಅಂತಲೂ ಮಾಡಿರುತ್ತೇವೆ, ಅವನ್ನು ಖಂಡಿತಾ ಲೆಕ್ಕವಿಡಬಹುದು. ಹಾಗೆ ಲೆಕ್ಕವಿಡುವ ಒಂದು ಚೆಂದದ ಪರಿಪಾಠವಿದ್ದರೆ ಅದನ್ನು “ಕಿಡ್ಸ್ ಎಕನಾಮಿಕ್ಸ್” ಎನ್ನಬಹುದು. ಈಗೀಗ ಹುಟ್ಟಿದ ಮಕ್ಕಳ ಜೀವನದ ಪ್ರತೀ ಹಂತವನ್ನೂ ಅಪ್ಡೇಟ್ ಮಾಡಲಿಕ್ಕಾಗಿ ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡುವ ಪರಿಪಾಠವಿದೆ. ಮಗುವಿನ ನಾಮಕರಣದಿಂದ ಹಿಡಿದು ಅದು ಮೊದಲ ದಿನ ಶಾಲೆಗೆ ಹೋಗುವಾಗಿನ ಚೋಟುದ್ದ ಲಂಗದ ಫೋಟೋ ಕೂಡ ಆ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ಅಪ್ಡೇಟ್ ಆಗಿರುತ್ತದೆ. ಇಪ್ಪತ್ತು ವರ್ಷದ ನಂತರ ಆ ಮಗು ಇವನ್ನೆಲ್ಲ ನೋಡಿದರೆ ಖಂಡಿತಾ ಹೆಮ್ಮೆ, ಖುಷಿ, ಅಚ್ಚರಿ ಎಲ್ಲವನ್ನೂ ವ್ಯಕ್ತಪಡಿಸುತ್ತದೆ. ಇದು ನೀವು ಮಾಡಬಹುದಾದ ಬೆಸ್ಟ್ ಕೆಲಸ. ಹಾಗೆಯೇ ನಿಮ್ಮ ಮಗುವಿಗೊಂದು ಬ್ಯಾಂಕ್ ಅಕೌಂಟ್ ಕೂಡ ತೆರೆಯಿರಿ. ನಿಮ್ಮ ಮಗುವಿಗೆ ನೀವು ಮಾಡುವ ಯಾವುದೇ ರೀತಿಯ ಖರ್ಚಾದರೂ ಅದನ್ನು ಆ ಅಕೌಂಟಿನಿಂದಲೇ ಮಾಡಿ. ಮಗು ಹುಟ್ಟಿದಾಗಿನಿಂದ ಅದಕ್ಕೆ ನೀವು ಕೊಡಿಸುವ ಬಟ್ಟೆ, ನೀವು ಕೊಡಿಸುವ ದುಬಾರಿ ಆಭರಣಗಳು, ಸ್ಕೂಲ್ ಫೀಸು, ಯೂನಿಫಾರ್ಮ್ಸ್, ಮಗುವೇ ಡಿಮ್ಯಾಂಡ್ ಮಾಡಿ ತೆಗೆಸಿಕೊಳ್ಳುವ ಸೈಕಲ್ ಎಲ್ಲವೂ ಇದೇ ಅಕೌಂಟಿನಿಂದ ಬಂದವಾಗಿರಬೇಕು. ಯಾಕೆಂದರೆ ಇವೆಲ್ಲವೂ ನೀವು ಮಾಡುವ ಕರ್ತವ್ಯಗಳು. ಇವನ್ನು ನೀವು ಮಾಡಲೇ ಬೇಕು. ಇವಕ್ಕೆ ಲೆಕ್ಕ ಇಡುವುದರಲ್ಲಿ ತಪ್ಪೇನಿಲ್ಲ.

ಯಾವಾಗ ಮಗುವಿಗೆ ತಿಳಿವಳಿಕೆ ಅಂತ ಆರಂಭವಾಗುತ್ತದೆಯೋ ಆಗಲೇ ಮಗುವಿಗೆ ಈ ಅಕೌಂಟೆಬಿಲಿಟಿಯ ಬಗ್ಗೆಯೂ ತಿಳಿಯುತ್ತಿರಬೇಕು. ಅದರ ಎಜುಕೇಷನ್ನಿಗೆ ಮಾಡುವ ಲಕ್ಷಾಂತರ ರೂಪಾಯಿ ಖರ್ಚು ಅವನಿಗೆ ಗೊತ್ತಾಗುತ್ತಿರಬೇಕು. ದಿನೇ ದಿನೆ ಆ ಅಕೌಂಟಿನ ಅಮೌಂಟ್ ಎಷ್ಟು ಹೆಚ್ಚಾಗುತ್ತಿದೆ ಎಂಬುದು ಕೂಡ ಅವನ ಗಮನಕ್ಕಿರಬೇಕು. ಆಗ ಮಾತ್ರ ಮಕ್ಕಳು ಅಸಂಬದ್ಧವಾದ ಬೇಡಿಕೆಗಳನ್ನಿಡುವುದಿಲ್ಲ. ಇನ್ನೂ ಹದಿನೆಂಟು ತುಂಬಿಲ್ಲದ ಮಗ ಬೈಕಿಗಾಗಿ ಉಪವಾಸ ಕೂರುವುದಿಲ್ಲ. ಕಾಲೇಜಿಗೆ ಹೋಗುವಾಗಲೇ ಕಾರು ಕೇಳುವುದಿಲ್ಲ, ಏಕೆಂದರೆ ನೀವು ಕೊಡಿಸಿದರೂ ಅವನ ಅಕೌಂಟಿನ ಕ್ರೆಡಿಟ್ ಎಷ್ಟು ಏರುತ್ತದೆ ಎಂಬುದರ ಕಲ್ಪನೆ ಅವನಿಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಈ ಅಕೌಂಟಿನ ಕ್ರೆಡಿಟ್ ಅನ್ನು ಸಮಯ ಬಂದಾಗ ನಾನು ತೀರಿಸಬೇಕಾಗಬಹುದು ಎಂಬ ಎಚ್ಚರಿಕೆಯೂ ಅವನಿಗಿರುತ್ತದೆ. ಇದು ಗೊತ್ತಿದ್ದ ಮಗು ಯಾವತ್ತೂ ಹೆತ್ತವರೆದುರು ಬಂದು ನನಗಾಗಿ ನೀವು ಏನ್ ಮಾಡಿದ್ದೀರಿ? ಎಂಬಂಥಾ ಅಸಂಬದ್ಧದ ಪ್ರಶ್ನೆ ಕೇಳುವುದೇ ಇಲ್ಲ. ಕೇಳಿದರೂ ನೀವು ಅವನಿಗಾಗಿ ಮಾಡಿರುವ ಅಷ್ಟನ್ನೂ ಲೆಕ್ಕ ಇಟ್ಟಿರುತ್ತೀರಿ. ತೆಗೆದು ತೋರಿಸಿದರಾಯ್ತು.

ಇದನ್ನೂ ಓದಿ | ಮನಿ ಕಹಾನಿ ಅಂಕಣ | ನಮಗೆ ದುಡ್ಡು ಕೊಡೋ ಕಾನ್ಫಿಡೆನ್ಸೇ ಬೇರೆ!

ಹೀಗೆ ಮಾಡೋಕೆ ಸಂಬಂಧ ಅನ್ನೋದು ವ್ಯವಹಾರವಲ್ಲವಲ್ಲ, ಅಂತ ಸಾಕಷ್ಟು ಜನ ಹೇಳಬಹುದು. ಅವರಿಗೆ ಇನ್ನೂ ಎಕನಾಮಿಕ್ಸ್ ಅರ್ಥವಾಗಿಲ್ಲ ಎಂದರ್ಥ. ನಾನು ಆರಂಭದಲ್ಲೇ ಹೇಳಿದೆ, ಹೆತ್ತವರಾಗಿ ನಾವು ಕೊಡುವ ವಾತ್ಸಲ್ಯ, ಮಮತೆ, ಪ್ರೀತಿ ಇದ್ಯಾವುದನ್ನೂ ಲೆಕ್ಕ ಇಡಲಾಗುವುದಿಲ್ಲ, ಮತ್ತು ಅವುಗಳಿಗೆ ಲೆಕ್ಕ ಇಡಬಾರದು ಕೂಡ. ಆದರೆ ನಾವು ಕೊಡುವ, ನಮ್ಮಿಂದ ಮಕ್ಕಳೇ ಡಿಮ್ಯಾಂಡ್ ಮಾಡಿ ಪಡೆಯುವ ಹಣಕ್ಕೆ ಲೆಕ್ಕ ಇಡಬಾರದು ಎಂದೇನಿಲ್ಲ. ಅದು ಹಣವೇ ಹೊರತು ಪ್ರೀತಿಯಲ್ಲ. ಪ್ರೀತಿಗೆ ಬೆಲೆ ಕಟ್ಟಲಾಗದು, ಹಣಕ್ಕೆ ಅದರದ್ದೇ ಬೆಲೆ ಇದೆ.

ವಾತ್ಸಲ್ಯ ಹಾಗೂ ಕರ್ತವ್ಯದ ನಡುವಿನ ಸಣ್ಣ ಗೆರೆಯನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ಖಂಡಿತ ಕಾಣಬಹುದು.

(ಲೇಖಕರು ಫಿನ್‌ಪ್ಲಸ್‌. ಕಾಮ್‌ ಮುಖ್ಯಸ್ಥರು)

Exit mobile version