Site icon Vistara News

Amrit Mahotsav | ಇಂಗ್ಲಿಷ್‌ನಲ್ಲಿ ಬ್ರಿಟಿಷರನ್ನೇ ಮೀರಿಸುತ್ತಿದ್ದ ರಣವಿಕ್ರಮ ಮುಂಡರಗಿ ಭೀಮರಾಯ

Vistara-Logo-Azadi-ka-amrit-Mahotsav
http://vistaranews.com/wp-content/uploads/2022/08/mundaragi.mp3

ಹತ್ತೊಂಬತ್ತನೇ ಶತಮಾನದ ನಡುಗಾಲ ಅದು. ಮುಂಡರಗಿಯ ಗಂಡುಗಲಿ ಮೊಂಡಗೈ ಭೀಮರಾಯರು ದೊಡ್ಡ ವಂಶದ ಶೂರ ಸರದಾರ. ಈತನ ಮಗ ರಂಗರಾಯರು ಮುಂಡರಗಿಯ ಇನಾಮದಾರರು. ರಂಗರಾಯರ ಮಗನೇ ಮಾಮಲೆದಾರನಾಗಿದ್ದ ಮುಂಡರಗಿಯ ಭೀಮರಾಯ. ಕತ್ತಿವರಸೆ, ಯುದ್ಧವಿದ್ಯೆ. ಬೇಟೆ ಮುಂತಾದ ಸಕಲ ವಿದ್ಯೆಗಳಲ್ಲಿ ಆತನನ್ನು ಮೀರಿಸುವವರೇ ಇರಲಿಲ್ಲ. ಹುಲಿ ಹೊಡೆಯೋದರಲ್ಲೂ ಸೈ ಎನಿಸಿಕೊಂಡಿದ್ದನು. ಜೊತೆಗೆ ಇಂಗ್ಲಿಷ್ ಮಾತನಾಡುವುದರಲ್ಲಿ ಇಂಗ್ಲಿಷರನ್ನೇ ಮೀರಿಸುವಂತಹ ಜಾಣನಾಗಿದ್ದನು.

ಮುಂಡರಗಿ ಎಂಬ ಒಂದು ಪೇಟೆ ಇರುವುದು ಈಗಿನ ಗದಗ ಜಿಲ್ಲೆಯಲ್ಲಿ. ಭೀಮರಾಯನ ಸ್ವತಂತ್ರ ಮನೋವೃತ್ತಿ, ಕಾರ್ಯತತ್ಪರತೆ, ದಿಟ್ಟತನಗಳನ್ನು ಎಲ್ಲರೂ ಕೊಂಡಾಡುವವರೇ ಆಗಿದ್ದರು. ಇಂಗ್ಲಿಷರ ಅನ್ಯಾಯಗಳನ್ನು ಭೀಮರಾಯ ಒಂದಿನಿತೂ ಸಹಿಸುತ್ತಿರಲಿಲ್ಲ. ಆಗ ಹಿರಿಯ ಅಧಿಕಾರಿಗಳೆಲ್ಲರೂ ಬಿಳಿಯರೇ ಆಗಿದ್ದರು. ಗುಲಾಮೀ ಜನಾಂಗಕ್ಕೆ ಸೇರಿದ ಭಾರತೀಯನೊಬ್ಬ ತಮಗಿಂತ ಎರಡು ಪಟ್ಟು ಹೆಚ್ಚು ಸಮರ್ಥಶಾಲಿಯಾಗಿದ್ದದ್ದು ಕಂಡು ಬ್ರಿಟಿಷರು ಹೇಗೆ ತಾನೇ ಸಹಿಸಿಯಾರು? ಆಳುವವರಿಗಿಂತ ಆಳಿಸಿಕೊಳ್ಳುವವರಲ್ಲಿ ಹೆಚ್ಚು ಪ್ರತಿಭೆ ಇದ್ದರೆ ಅದೊಂದು ಘೋರ ಅಪರಾಧ ಆಗಿತ್ತು. ಹೀಗಾಗಿ ಬಳ್ಳಾರಿಯ ಮಾಮಲೆದಾರನಾಗಿದ್ದ ಮುಂಡರಗಿ ಭೀಮರಾಯನ ಮೇಲೆ ಅನೇಕ ಸುಳ್ಳು ಆರೋಪಗಳನ್ನು ಹೊರಿಸಿ, ಆತನನ್ನು ಶಿಕ್ಷೆಗೊಳಪಡಿಸಲು ಆಂಗ್ಲರು ಸಂಚು ನಡೆಸುತ್ತಲೇ ಇದ್ದರು.

ಸ್ವಾಭಿಮಾನಧನರಾಗಿದ್ದ ಭೀಮರಾಯನಿಗೆ ಆಳರಸರ ಗುಲಾಮಗಿರಿ ಚಾಕರಿ ಎಂದೋ ಸಾಕಾಗಿತ್ತು. ಸ್ವಾತಂತ್ರ್ಯಕ್ಕಾಗಿ ಆತನ ಜೀವ ಹಾತೊರೆಯುತ್ತಿತ್ತು. ೧೮೫೪ರಲ್ಲಿ ತನ್ನ ಹುದ್ದೆಯನ್ನು ಒದ್ದು, ಊರಿಗೆ ಹಿಂದಿರುಗಿದ. ಅವನ ಇನಾಮಿನಲ್ಲಿ ಬೆಣ್ಣೆಹಳ್ಳಿ ಮತ್ತು ಹೈತಾಪುರಗಳು ಕೂಡ ಸೇರಿದ್ದವು. ಬೆಣ್ಣೆಹಳ್ಳಿಯನ್ನೇ ತನ್ನ ಕೇಂದ್ರವಾಗಿ ಮಾಡಿಕೊಂಡ.

ನೌಕರಿಗೆ ಶರಣು ಹೊಡೆದು ಬಂದ ಬಳಿಕ ಭೀಮರಾಮ ಸ್ವಾತಂತ್ರ್ಯದ ಅಗ್ರದೂತನಾದ. ಹಳ್ಳಿಹಳ್ಳಿಗೆ ಹೋಗಿ ಕ್ರಾಂತಿಮಂತ್ರದ ಉಪದೇಶದಲ್ಲಿ ತೊಡಗಿದ. ಮೊದಲು ಹಮ್ಮಿಗೆ, ಸೊರಟೂರು ಮತ್ತು ಗೋವಿನಕೊಪ್ಪದ ದೇಸಾಯಿಗಳನ್ನು ನೇರವಾಗಿ ಕ್ರಾಂತಿಕಾರ್ಯಕ್ಕೆ ತೊಡಗುವಂತೆ ಮಾಡಿದ. ನಂತರ ಹೆಬ್ಬಳ್ಳಿಯ ಜಹಗೀರುದಾರರು, ಸವಣೂರು ನವಾಬ, ಶಿರಹಟ್ಟಿ, ಶಿರಸಂಗಿಗಳ ದೇಸಾಯರು ತನಗೆ ಬೆಂಬಲ ನೀಡುವಂತೆ ಒಲಿಸಿಕೊಂಡನು. ಸುರಪುರ, ನರಗುಂದ, ಜಮಖಂಡಿ ಮುಂತಾದ ಸಂಸ್ಥಾನಗಳ ಅರಸರೊಡನೆಯೂ ಸಂಬಂಧ ಬೆಳೆಯಿತು. ಬ್ರಿಟಿಷರ ದಾಸ್ಯದಿಂದ ಜನತೆಯನ್ನು ಮುಕ್ತಗೊಳಿಸಬೇಕೆಂಬುದೊಂದನ್ನು ಬಿಟ್ಟರೆ ಭೀಮರಾಯನಿಗೆ ಬೇರೆ ಯಾವ ಸ್ವಾರ್ಥವೂ ಇರಲಿಲ್ಲ.

೧೮೫೭ರಲ್ಲಿ ಭೀಮರಾಯನ ಓಡಾಟ, ಚಟುವಟಿಕೆಗಳು ಇನ್ನಷ್ಟು ಗರಿಗೆದರಿದವು. ಉತ್ತರದಿಂದ ನಾನಾ ಸಾಹೇಬ ಪೇಶ್ವೆಯಿಂದ ಕ್ರಾಂತಿ ಸಂದೇಶದ ಪ್ರತಿಗಳು ಅವನಿಗೆ ಬಂದು ತಲಪಿದವು. ಹಮ್ಮಿಗೆಯ ಕೆಂಚನಗೌಡನಿಗೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುವಂತೆ ಸೂಚನೆ ಕೊಟ್ಟನು. ಅದರಂತೆ ಗೌಡನು ತನ್ನ ಭದ್ರವಾದ ಕೋಟೆಯಲ್ಲಿ ಮದ್ದುಗುಂಡು, ಕತ್ತಿ ತುಪಾಕಿಗಳನ್ನು ಹೇರಳವಾಗಿ ಶೇಖರಿಸಿಟ್ಟನು. ಭೀಮರಾಯನ ಬೆಂಬಲಕ್ಕೆ ನಿಂತ ಇನ್ನೊಬ್ಬ ಪ್ರಮುಖನೆಂದರೆ ಸೊರಟೂರಿನ ದೇಸಾಯಿ ಶ್ರೀನಿವಾಸ ವೆಂಕಟಾದ್ರಿ. ಆತನೊಬ್ಬ ಉಗ್ರ ದೇಶಭಕ್ತರ ವಂಶಕ್ಕೆ ಸೇರಿದವನಾಗಿದ್ದ. ಧೋಂಡಜಿವಾಘ ಎಂಬ ಪರಾಕ್ರಮಿ ಸರದಾರನಿಗೆ ಆಶ್ರಯ ಕೊಟ್ಟಿದ್ದ ಕಾರಣಕ್ಕಾಗಿ ವೆಂಕಟಾದ್ರಿಯ ತಾತನನ್ನು ಆಂಗ್ಲರು ತೋಫಿನ ಬಾಯಿಗೆ ಕಟ್ಟಿಸಿ ಉಡಾಯಿಸಿದ್ದರು.

ಭೀಮರಾಯನ ಗುಪ್ತ ಚಟುವಟಿಕೆಗಳ ಬಗ್ಗೆ ಗುಪ್ತಚಾರರೂ ಕ್ರೈಸ್ತ ಪಾದ್ರಿಗಳೂ ಸರಕಾರಕ್ಕೆ ವರದಿ ಮಾಡುತ್ತಲೇ ಇದ್ದರು. ಧಾರವಾಡದ ಕಲೆಕ್ಟರ್ ಪದೇ ಪದೇ ಭೀಮರಾಯನನ್ನು ಕರೆಸಿ ಭೇಟಿಯ ನೆಪದಲ್ಲಿ ವಿಚಾರಣೆ ನಡೆಸುತ್ತಲೇ ಇದ್ದರು. ಆದರೆ ಪ್ರತಿ ಬಾರಿ ಬಹಳ ಎಚ್ಚರಿಕೆಯಿಂದ ಹೋಗಿ, ಕಲೆಕ್ಟರ್ಗೆ ಅಪಾರ ಗೌರವ ತೋರಿಸಿ ಭೀಮರಾಯ ವಾಪಾಸುಗುತ್ತಿದ್ದ. ಕಂಪನಿ ಸರ್ಕಾರದ ಕುತಂತ್ರಗಳಿಗೆ ಸಿಕ್ಕಿಹಾಕಿಕೊಳ್ಳಲೇ ಇಲ್ಲ, ಹಾಗಾಗಿ ಭೀಮರಾಯನ ವಿರುದ್ಧ ಬ್ರಿಟಿಷರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.

೧೮೫೭ರ ಕಡೆಗೆ ಹಲಗಲಿಯ ಪತನ ಹಾಗೂ ೧೮೫೮ರ ಫೆಬ್ರವರಿಯಲ್ಲಿ ಸುರಪುರದ ಗಲಭೆಗಳಾದ ಮೇಲೆ ಬ್ರಿಟಿಷರು ತಮ್ಮ ಆಡಳಿತವನ್ನು ಇನ್ನಷ್ಟು ಬಿಗಿಗೊಳಿಸಿದರು. ಈ ನಡುವೆ ಡಂಬಳದ ಕೋಟೆಯೊಳಗೆ ಶಸ್ತ್ರಾಸ್ತ್ರಗಳಿರಬಹುದೆಂದು ಅನುಮಾನ ಬಂದು ಆಂಗ್ಲರ ಸೇನಾ ತುಕಡಿಯೊಂದು ಆ ಕೋಟೆಯ ಮೇಲೆರಗಿತು. ಆದರೆ ಅಲ್ಲಿ ಏನೂ ದೊರೆಯಲಿಲ್ಲ. ಸಿಟ್ಟಿಗೆದ್ದ ಸೈನ್ಯ ಆ ಕೋಟೆಯನ್ನು ಧ್ವಂಸಗೊಳಿಸಿ ನೆಲಸಮ ಮಾಡಿತು.

ಇತ್ತ ಕ್ರಾಂತಿಯ ಸಿದ್ಧತೆ ಭರದಿಂದ ಸಾಗಿತ್ತು. ಮುಂಡರಗಿ ಭೀಮರಾಯ ಸುತ್ತಮುತ್ತಲಿನ ಹೊಸಪೇಟೆ, ಕಮಲಾಪುರ ಮತ್ತಿತರ ಸ್ಥಾನಗಳಲ್ಲಿ ಜನಬಲ ಸಂಘಟಿಸಿದನು. ಗಂಗಾವತಿ, ಶಿವಪುರಗಳಲ್ಲಿ ತನ್ನ ಸೈನ್ಯಬಲ ವಿಸ್ತರಿಸಿಕೊಂಡನು. ಎಲ್ಲರೂ ಮೇ ೨೭ರಂದು ಒಟ್ಟಿಗೆ ಬಂಡಾಯವೇಳಲು ಆವೇಶದಿಂದ ಕಾದಿದ್ದರು.

ಇನ್ನೇನು ಕ್ರಾಂತಿಗೆ ಕೇವಲ ನಾಲ್ಕು ದಿನಗಳಿದ್ದಾಗ ಅನರ್ಥವೊಂದು ನಡೆದುಹೋಯಿತು. ಪ್ರಮುಖ ನಾಯಕ ಭೀಮರಾಯನ ಬಳಿ ನೌಕರಿ ಮಾಡಿಕೊಂಡಿದ್ದ ಮುಸಲ್ಮಾನನೊಬ್ಬ ಕೆಲಸ ತ್ಯಜಿಸಿ, ಹಮ್ಮಿಗಿ ಕೋಟೆಯಲ್ಲಿ ಶಸ್ತ್ರಾಸ್ತ್ರಗಳಿರುವ ಸಂಗತಿಯನ್ನು ಡಂಬಳದ ಸರಕಾರೀ ಫೌಜುದಾರನಾಗಿದ್ದ. ವೆಂಕಟರಾಯ ರಾಮಚಂದ್ರ ಎಂಬ ಬ್ರಿಟಿಷರ ಬಾಲಬಡುಕನಿಗೆ ತಿಳಿಸಿಬಿಟ್ಟ. ಕೂಡಲೇ ವೆಂಕಟರಾಯ ಈ ಸಂಗತಿಯನ್ನು ಡಂಬಳಕ್ಕೆ ಸಮೀಪದಲ್ಲೇ ಬಿಡಾರ ಹೂಡಿದ್ದ ಡಿ.ಎಸ್.ಪಿ. ಥಾಮಸ್ ಗೆ ಅರುಹಿದ. ಥಾಮಸ್ ನ ಸೂಚನೆಯಂತೆ ಫೌಜುದಾರ ಹಮ್ಮಿಗೆ ಕೋಟೆಗೆ ದಿಢೀರನೆ ಭೇಟಿ ನೀಡಿ ತನಿಖೆ ನಡೆಸಿದ. ದಿಕ್ಕುತೋಚದ ಕೆಂಚಗೌಡ ಪೋಲೀಸರ ಕಣ್ತಪ್ಪಿಸಿ, ಭೀಮರಾಯನ ಭೇಟಿಗೆ ಬೆಣ್ಣೆಹಳ್ಳಿಗೆ ಧಾವಿಸಿದ. ಇತ್ತ ಫೌಜುದಾರ ಅಲ್ಲಿದ್ದ ಮುಸಲ್ಮಾನನ ನೆರವಿನಿಂದ ಕೋಟೆಗೆ ಬೀಗಮುದ್ರೆ ಹಾಕಿ, ನಾಲ್ಕಾರು ಜನರನ್ನು ಕಾವಲಿರಿಸಿದ.

ಶಸ್ತ್ರಾಸ್ತ್ರಗಳ ಸಂಗ್ರಹವೇ ಸರ್ಕಾರದ ವಶವಾದ ನಂತರ ಇನ್ನೇನು ಉಳಿದೀತು? ಆದರೆ ಕೆಂಚಗೌಡ ತಿಳಿಸಿದ ಮಾಹಿತಿಯಿಂದ ಭೀಮರಾಯ ಅಧೀರನಾಗಲಿಲ್ಲ. ತನ್ನ ಇನ್ನೂರು ಆಪ್ತ ಬಂಟರನ್ನು ಕರೆದುಕೊಂಡು ಬಿರುಗಾಳಿಯಂತೆ ಹಮ್ಮಿಗಿಯ ಬಾಗಿಲಿಗೆ ನುಗ್ಗಿಬಂದನು. ಕೋಟೆಯ ಕಾವಲಿನವರ ಜೊತೆಗೆ ತನ್ನ ನೌಕರನಾಗಿದ್ದ ಮುಸಲ್ಮಾನ ಕೂಡ ಅಲ್ಲಿರುವುದನ್ನು ಭೀಮರಾಯ ದೂರದಿಂದಲೇ ನೋಡಿದ. ಅವನಿಗೆ ಎಲ್ಲವೂ ಅರ್ಥವಾಯಿತು. ಪೊಲೀಸರಿಗೆ ಸುದ್ದಿಕೊಟ್ಟ ಮುಸಲ್ಮಾನ ದ್ರೋಹಿಯನ್ನು ಮೊದಲು ತುಂಡುತುಂಡಾಗಿ ಕತ್ತರಿಸಿ ಹಾಕಿದ. ನಂತರ ರಕ್ತಸಿಕ್ತ ಕತ್ತಿಯನ್ನು ಮೇಲೆತ್ತಿ ಝಳಪಿಸಿ ಕ್ರಾಂತಿಯ ಉದಯವನ್ನು ಘೋಷಿಸಿದ. ಕಾವಲಿನವರೆಲ್ಲ ಭಯಗೊಂಡು ಕಾಲ್ಕಿತ್ತರು. ಕ್ರಾಂತಿಕಾರರು ಕೋಟೆಯ ಬೀಗ ಮುರಿದು ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಹಂಚಿಕೊಂಡು ಹೊರಬಂದರು.

ಅನಂತರ ಭೀಮರಾಯನ ಪಯಣ ಡಂಬಳದ ಕಡೆಗೆ. ಅಲ್ಲಿ ಫೌಜುದಾರ ವೆಂಕಟರಾಯನನ್ನು ಸೆರೆ ಹಿಡಿದನು. ಅಲ್ಲಿನ ಪೊಲೀಸರಿಂದ ಹದಿನೈದು ಬಂದೂಕುಗಳನ್ನು ಕಿತ್ತುಕೊಳ್ಳಲಾಯಿತು. ಡಂಬಳದಿಂದ ಕ್ರಾಂತಿಸೇನೆ ಗದಗಿನೆಡೆಗೆ ಮುನ್ನುಗ್ಗಿತು. ಸುದ್ದಿ ಕೇಳಿಯೇ ಅಲ್ಲಿದ್ದ ಅಧಿಕಾರಿಗಳೆಲ್ಲರೂ ಓಡಿಹೋದರು. ಭೀಮರಾಯ ಅಂಚೆ ಮತ್ತು ತಂತಿಕಚೇರಿಯನ್ನು ನಾಶಗೊಳಿಸಿ ಕವಲೂರು ಸೇರಿದನು.

ಈ ವೇಳೆಗೆ ಕೊಪ್ಪಳದಲ್ಲಿ ಜನರೆಲ್ಲ ಕ್ರಾಂತಿಗೆ ಸಿದ್ಧವಾಗಿದ್ದಾರೆಂದು ಸಂದೇಶ ಭರಮನಾಯಕನ ಮೂಲಕ ತಲಪಿತು. ಮೇ ೨೬ರಂದು ಭೀಮರಾಯ ಕವಲೂರಿನಿಂದ ಕೊಪ್ಪಳದತ್ತ ತನ್ನ ಜನತಾಸೇನೆಯನ್ನು ಮುನ್ನಡೆಸಿದ. ಕೊಪ್ಪಳಕ್ಕೆ ಸಮೀಪದ ಗುಡ್ಡಗಾಡಿನ ದುರ್ಗಗಳಲ್ಲಿ ತನ್ನ ಸ್ವಾತಂತ್ರ್ಯಯೋಧರ ಸೈನ್ಯವನ್ನು ಅಡಗಿಸಿಟ್ಟ.

ಕ್ರಾಂತಿಯ ಸೈನ್ಯ ರಣವಿಕ್ರಾಂತ ಭೀಮರಾಯನ ಸಾರಥ್ಯದಲ್ಲಿ ಮೇ ೩೦ರಂದು ಕೊಪ್ಪಳಕ್ಕೆ ಪ್ರವೇಶಿಸಿತು. ಈ ಸುದ್ದಿ ಬ್ರಿಟಿಷರಿಗೆ ಗೊತ್ತಾಗುತ್ತಲೇ ಮೇಜರ್ ಹ್ಯೂಜ್ ಎಂಬ ಆಂಗ್ಲ ಸೇನಾಧಿಕಾರಿ ನೇತೃತ್ವದಲ್ಲಿ ಬಳ್ಳಾರಿಯಿಂದ ಕೊಪ್ಪಳಕ್ಕೆ ಬ್ರಿಟಿಷ್ ಸೈನ್ಯವನ್ನು ಕಳಿಸಿತು. ಆ ಸೈನ್ಯದಲ್ಲಿ ೫ನೇ ಅಶ್ವದಳದ ಒಂದು ಭಾಗ, ೭೪ನೇ ಹೈಲ್ಯಾಂಡರ್ಸ್ ಪಡೆ ಮತ್ತು ೪೭ನೇ ಹಿಂದಿ ಕಾಲ್ದಳಗಳಿದ್ದವು. ಜೊತೆಗೆ ಅಪಾರ ಪ್ರಮಾಣದ ತೋಫುಗಳು. ಭೀಮರಾಯನಿಗೆ ಗೊತ್ತಾಗದಂತೆ ಕೊಪ್ಪಳದ ಸುತ್ತಲೂ ತನ್ನ ಸೈನ್ಯವನ್ನು ಹರಡಿ ನಿಲ್ಲಿಸಿ, ಮೇಜರ್ ಹ್ಯೂಜ್ ಜೂನ್ ೧ರಂದು ಇನ್ನು ಮೂರು ಗಂಟೆಯೊಳಗೆ ಶರಣಾಗತರಾಗಬೇಕೆಂಬ ಪತ್ರವನ್ನು ಭೀಮರಾಯನಿಗೆ ಕಳುಹಿಸಿದ.

ಹ್ಯೂಜನು ಕೊಟ್ಟ ಮೂರು ಗಂಟೆಗಳ ಅವಧಿ ಮುಗಿಯಿತು. ಆದರೆ ಕೊಪ್ಪಳದ ಕೋಟೆಯೊಳಗಿಂದ ನಿರಾಯುಧರಾಗಿ ಕೈಯೆತ್ತಿದ ಶರಣಾಗತರ ಸಾಲು ಬರಲಿಲ್ಲ. ಹ್ಯೂಜನ ಕಿವಿಗೆ ಗುಂಡಿನ ಸಪ್ಪಳ ಅಪ್ಪಳಿಸಿತು. ಇತ್ತ ಆಂಗ್ಲರ ಫಿರಂಗಿಗಳೂ ಗರ್ಜಿಸಿದವು. ಕೊಪ್ಪಳದ ಕೋಟೆ ಕೆಳಗುರುಳಗೊಡಗಿತು. ಒಳಗೆ ನುಗ್ಗುತ್ತಿದ್ದ ಶತ್ರುಗಳೊಡನೆ ಮುಂಡರಗಿ ಭೀಮರಾಯ ಪ್ರಚಂಡ ವೀರಾವೇಶದಿಂದ ಹೋರಾಡಿದ. ಕೊನೆಗೆ ಕೆನ್ನೆತ್ತರಿನ ಅಭಿಷೇಕದಲ್ಲಿ ತೊಯ್ದು ಭೀಮರಾಯನೂ ಕೆಂಚನಗೌಡನೂ ಕೋಟೆಯ ದ್ವಾರದಲ್ಲಿ ಹತರಾಗಿ ಬಿದ್ದರು.

ಶತ್ರುಸೈನ್ಯ ಅಳಿದುಳಿದ ಕ್ರಾಂತಿವೀರರನ್ನು ಸೆರೆಹಿಡಿಯಿತು. ಅವರಲ್ಲಿ ೭೭ ಜನರನ್ನು ಆಂಗ್ಲರು ಗುಂಡು ಹೊಡೆದು ಹತ್ಯೆ ಮಾಡಿದರು. ೪೦ ಜನರಿಗೆ ೧೪ ವರ್ಷಗಳ ಕಠಿಣ ಶಿಕ್ಷೆ, ೨೦ ಮಂದಿಗೆ ಒಂದರಿಂದ ೫ ವರ್ಷಗಳವರೆಗೆ ಸಶ್ರಮ ಶಿಕ್ಷೆ, ಮುಕ್ತುಂ ನಾಯಕನನ್ನು ಗಲ್ಲಿಗೇರಿಸಿದರು.

ಗುಂಡಿನ ಹೊಡೆತಕ್ಕೆ ಆಹುತಿಯಾದ ೭೭ ಜನರು ಸುಮಾರು ಮೂವತ್ತು ಹಳ್ಳಿಗಳಿಂದ ಬಂದವರಾಗಿದ್ದರು. ಭೀಮರಾಯನ ಜನಪ್ರಿಯತೆ, ಪ್ರಭಾವ ಎಷ್ಟಿತ್ತೆಂಬುದಕ್ಕೆ ಇದೊಂದು ಉಜ್ವಲ ಸಾಕ್ಷಿ. ಕರ್ನಾಟಕದ ಕ್ರಾಂತಿಯ ಇತಿಹಾಸದಲ್ಲಿ ಆಳರಸರೆದುರು ಅಂಜದೆ ಅಳುಕದೆ ಎದೆ ಸೆಟೆಸಿ ಹೋರಾಡುತ್ತಲೇ ರಣಾಂಗಣದಲ್ಲಿ ವೀರಸ್ವರ್ಗ ಸೇರಿದ ಕ್ರಾಂತಿನಾಯಕರಲ್ಲಿ ಮುಂಡರಗಿ ಭೀಮರಾಯ ಅಗ್ರಗಣ್ಯ ಕಲಿ ಎನಿಸಿಕೊಂಡನು.

ಇದನ್ನೂ ಓದಿ |Amrit mahotsav | ಬ್ರಿಟಿಷರನ್ನು ಬಗ್ಗುಬಡಿದ ಕಟ್ಟುನಿಟ್ಟಿನ ಅಧಿಕಾರಿ ಕಾಜಿಸಿಂಗ್‌

Exit mobile version