Site icon Vistara News

ಕೇರಂ ಬೋರ್ಡ್‌ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು

underpass

‌ರಾಜಧಾನಿಯ ಅಂಡರ್‌ಪಾಸ್‌ಗಳಲ್ಲಿ ಒಂದು ಸದ್ದಲ್ಲದ ಸದ್ದು ಇದೆ. ಅದು ಮೇಲಿನಿಂದ ಹಾದುಹೋಗುವ ವಾಹನಗಳ ಸ್ಕ್ರೀಚುಗೀಚು, ಗಿರಾಕಿಗಳನ್ನು ಕೂಗಿ ಕರೆಯುವ ಹಣ್ಣು ತರಕಾರಿಯವರು, ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮರಳುತ್ತಿರುವ ತಾಯಂದಿರ ತಡೆಯಿಲ್ಲದ ಕಲರವದ ನಡುವೆ ಕೂತಿದೆ. ಕೆಳಗೆ ಅರೆಗತ್ತಲು ಕವಿದ ಓಣಿಯಂತಿರುವ ಈ ತಾಣದಲ್ಲಿ ಸಾಗುತ್ತಿರುವ ಜೀವಗಳು ತಮತಮಗೇ ಏನೋ ಹೇಳುತ್ತಿರುವಂತೆ ಕೇಳಿಸುತ್ತದೆ. ಪಕ್ಕದಲ್ಲಿ ದಾಟಿದವರು ಏನೋ ಹೇಳಿದರೆನಿಸುತ್ತದೆ. ಆದರೆ ಆ ಅಂಡರ್‌ಪಾಸುಗಳಲ್ಲಿ ಯಾರೂ ತಿರುಗಿ ನೋಡುವುದಿಲ್ಲ.

ಅಂಡರ್‌ಪಾಸುಗಳಿಗೆ ತಮ್ಮದೇ ಒಂದು ಪ್ರಪಂಚವಿದೆ. ಅಲ್ಲಿ ಒಬ್ಬಳು ಮುದುಕಿ ಒಂದಿಷ್ಟು ನೇರಳೆ ಹಣ್ಣುಗಳನ್ನು ಇಟ್ಟುಕೊಂಡು ಕೂತಿರುತ್ತಾಳೆ. ಅವಳಿಗೆ ದಕ್ಕಿದ್ದು ಮೊಮ್ಮಗನ ಬಿಸ್ಕೀಟಿಗೆ ಸರಿಹೋಗಬಹುದು ಎಂದುಕೊಳ್ಳುತ್ತಿರುವಾಗಲೇ ಆಕೆಯ ಮಗ ಬಂದು ಪಕ್ಕದಲ್ಲಿ ಕೂತು ಅಂದಿನ ಕಾಸನ್ನು ಜೇಬಿಗಿಳಿಸಿಕೊಂಡು ಮನೆಗೆ ಬೇಗ ಬಾ ಎಂದು ಸುಮ್ಮನೇ ಒಂದು ಮಾತುದುರಿಸಿ ಹೋಗುತ್ತಾನೆ. ಅವನ ಕೈಗೆ ಸಿಗದಂತೆ ಸೊಂಟದ ಬಾಳೆಕಾಯಿಯಲ್ಲಿ ಒಂದಿಷ್ಟು ಪಾವಲಿ ಬೆಚ್ಚಗೆ ಕೂತಿವೆ. ಸಣ್ಣ ಗಾಲಿಗಳನ್ನು ಜಡಿದಿರುವ ಮರದ ಹಲಗೆಯಲ್ಲಿ ಕೂತು ಅದನ್ನೆಳೆದುಕೊಂಡು ಸರಿದಾಡುತ್ತಿರುವ ಇನ್ನೊಬ್ಬನಿಗೆ ಒಂದು ಕೈಯೇ ಇಲ್ಲ. ಇನ್ನೊಂದು ಕೈ ಮಂದಿಯೆದುರಿಗೆ ಸದಾ ಚಾಚಿರುತ್ತಾ ನಿರ್ಜನ ಹೊತ್ತಿನಲ್ಲಿ ಮಾತ್ರ ಮಡಚಿಕೊಳ್ಳುತ್ತದೆ. ಹೊತ್ತಲ್ಲದ ಹೊತ್ತಲ್ಲಿ ಇಲ್ಲದ ಕೈಯ ಜಾಗದಲ್ಲಿ ತುರಿಕೆಯೆದ್ದಾಗ ಮಾತ್ರ ಒಂದು ಪ್ರಾಣಿಯಂತೆ ಗೊಗ್ಗರು ಸ್ವರ ಹೊರಡಿಸುತ್ತಾನೆ. ಬಾಚಣಿಗೆ ಟವೆಲ್‌ ಕ್ಲಿಪ್ಪುಗಳನ್ನು ಗುಡ್ಡೆಹಾಕಿಕೊಂಡು ಮಾರುತ್ತಿರುವ ಸಣಕಲ ಬೆವರುತ್ತಿದ್ದರೂ ತನ್ನೆದುರೇ ಇರುವ ಟವೆಲ್‌ನಲ್ಲಿ ಮುಖ ಒರೆಸಿಕೊಳ್ಳಲಾರ.

ಬೆಳಗಿನ ಹೊತ್ತಿನಲ್ಲಿ ಈ ಕೆಳದಾರಿಗಳು ಮರ್ಯಾದಸ್ಥ ಜನರಿಂದ ತುಂಬಿರುತ್ತವೆ. ಮನೆಯಲ್ಲಿ ತುಂಬಿಕೊಟ್ಟ ಬುತ್ತಿಯನ್ನು ಹಿಡಿದು ಇಸ್ತ್ರಿ ಹಾಕಿದ ಅಂಗಿ ನೀಟಾಗಿ ಇನ್‌ಸರ್ಟ್‌ ಮಾಡಿ ಆಫೀಸಿಗೆ ಹೋಗುವವರು ಹಾಗೇ ಅತ್ತಿತ್ತ ನೋಡಲೂ ಪುರುಸೊತ್ತು ಇಲ್ಲದವರಂತೆ ಮಾಯವಾಗುವರು. ಆಗೀಗ ಅಲ್ಲಿ ಓಡಾಡುವ ಪೊಲೀಸರು ಸ್ವಲ್ಪ ಅಸ್ತವ್ಯಸ್ತರಂತೆ ಕಾಣಿಸುವವರನ್ನು ಏ ಹೇ ಅನ್ನುತ್ತ ಹೊರಗೆ ಗದುಮುತ್ತಿರುತ್ತಾರೆ. ಬಿಸಿಬಿಸಿಯಾಗಿ ಕಡಲೆಕಾಯಿ ಮಾರುವವನು ಇನ್ನೂ ಬಂದಿಲ್ಲ ಅಲ್ಲಿ. ಯಾರೋ ತಡೆದರೆ ಯಾರೋ ಸಿಡುಕುತ್ತಾರೆ. ಯಾರೋ ಸೀನಿದರೆ ಇನ್ಯಾರೋ ಮುಖ ಮುಚ್ಚಿಕೊಳ್ಳುತ್ತಾರೆ. ಹಾಜರಿ ಪುಸ್ತಕ ಎತ್ತಿಡುವ ಮುನ್ನ ಕಚೇರಿ ಸೇರುವ ಧಾವಂತ ಹಬ್ಬಿಕೊಂಡಿದೆ ಅಲ್ಲಿ.

ಮಧ್ಯಾಹ್ನದ ವೇಳೆಗೆ ಉಂಡು ಮಲಗಿದವನಂತೆ ಈ ಕೆಳದಾರಿಗಳು ಕೂಡು ತುಸು ಸೋಮಾರಿಯಾಗಿರುತ್ತವೆ. ಬೆಳಗ್ಗೆ ಕಂಡ ಹಲ್‌ಚಲ್ ಇರುವುದಿಲ್ಲ ಆಗ. ಬೆಳಗ್ಗಿನಿಂದ ಕೈಯಲ್ಲಾಡಿಸಿ ಸೋತವನು ಹಾಗೇ ಸುಮ್ಮನೆ ಬಿದ್ದುಕೊಂಡಿರುತ್ತಾನೆ. ನಡುನಡುವೆ ಯಾರೋ ಮೊಬೈಲಿನಲ್ಲಿ ರಾ ರಾ ರಕ್ಕಮ್ಮ ಹಾಡು ಬಜಾಯಿಸುತ್ತಾ ಸರಿದುಹೋಗುತ್ತಾರೆ. ಕೆಳದಾರಿಯ ಮೌನವನ್ನು ಕಲಕಿದ ಅವನನ್ನು ಅಲ್ಲೇ ಮಲಗಿರುವ ಒಂದೆರಡು ಮೈರೋಮ ಉದುರಿದ ನಾಯಿಗಳು ಸಿಟ್ಟಿನಿಂದ ನೋಡುತ್ತವೆ.

ಅಂದಹಾಗೆ ಈ ಕೆಳದಾರಿಗಳ ಚಾವಣಿಗಳಲ್ಲಿ ಒಂದೆರಡು ಪಾರಿವಾಳಗಳೂ ಮನೆ ಮಾಡಿಕೊಂಡಿರುತ್ತವೆ. ಹೊತ್ತಲ್ಲದ ಹೊತ್ತಲ್ಲಿ ಗುಡುಗುಡುಗುಡು ಎಂದು ಅವು ಹೊರಡಿಸುವ ಶಬ್ದ ಆ ಒಳಗನ್ನು ಕಲಕುತ್ತದಾದರೂ ಅಲ್ಲಿ ಸಾಗುವವರು ಅತ್ತ ಕತ್ತೆತ್ತಿಯೂ ನೋಡುವುದಿಲ್ಲ. ಆಗಾಗ ಅವು ಹೊರಗಿನಿಂದ ಕಸಕಡ್ಡಿ ಕಚ್ಚಿಕೊಂಡು ಬರುತ್ತವೆ. ಆದರೆ ಅವು ಗೂಡು ಕಟ್ಟಿದ್ದನ್ನು ಯಾರೂ ನೋಡಿದವರಿಲ್ಲ. ಕೆಳದಾರಿಗಳು ದಾರಿಗಳಷ್ಟೇ, ಮನೆಗಳಲ್ಲ.

ಸಂಜೆ ಆಗುತ್ತಿದ್ದಂತೆ ಈ ಕೆಳದಾರಿಗಳು ವಿಚಿತ್ರ ಲವಲವಿಕೆ ಪಡೆದುಕೊಳ್ಳುತ್ತವೆ. ಶಾಲೆಯಿಂದ ಬರುವ ಮಕ್ಕಳನ್ನು ಕರೆದುಕೊಂಡ ಅಮ್ಮಂದಿರು ಆ ಮಕ್ಕಳು ಏನನ್ನೋ ನೋಡಿ ವಿಚಿತ್ರವೆನಿಸಿ ಬಾಯ್ತೆರೆದರೆ ಉತ್ತರಿಸದೇ ಲೇಟಾಯ್ತು ಬಾ ಎಂದು ಅವರನ್ನು ಎಳೆದುಕೊಂಡೇ ಹೋಗುತ್ತಾರೆ. ಯಾರೋ ಕೆಲವರು ಮಾತ್ರ ಅಲ್ಲಿ ನಿಂತು ಮಲ್ಲಿಗೆ ಮಾರುತ್ತಿರುವ ಅಜ್ಜಿಯ ಜತೆಗೆ ವ್ಯಾಪಾರ ಕುದುರಿಸುತ್ತಾರೆ. ಸಂಜೆ ಹೋಗಿ ಕತ್ತಲಾಗುತ್ತಿದ್ದಂತೆ ಮುಖಕ್ಕೆ ಗಾಢ ಪೌಡರು ತುಟಿಗೆ ಕೆಂಪು ರಂಗು ಬಳಿದು ಅಗ್ಗದ ಅತ್ತರು ಹೊಡೆದುಕೊಂಡವರು ಅಲ್ಲಿ ಸುಳಿದಾಡುತ್ತಾರೆ. ಗಂಡಸರು ನಿಧಾನ ಅವರನ್ನು ನೋಡುತ್ತಾ ಹೆಜ್ಜೆ ಹಾಕುತ್ತಾರೆ. ಅಂದ ಹಾಗೆ ಈಗ ಅಲ್ಲಿ ಸಾಗುತ್ತಿರುವವರಲ್ಲಿ ಹೆಣ್ಣು ಜೀವಗಳೇ ಇಲ್ಲ. ಹೆಂಗಸರು ಅಂಡರ್‌ಪಾಸಿನ ಬಾಗಿಲವರೆಗೂ ಬಂದು ಅಲ್ಲಿನ ಅರೆಬೆಳಕಿಗೆ ಬೆಚ್ಚಿ ಮರಳಿ ಹೋಗುತ್ತಾರೆ.

ಹಗಲಿನ ಬೆಳಕಲ್ಲಿ ಕಾಣದ ದೃಶ್ಯಗಳು ನಿಮಗಲ್ಲಿ ಕಂಡರೂ ಕಾಣಬಹುದು. ಮೆಜೆಸ್ಟಿಕ್ಕಿನ ಅಂಡರ್‌ಪಾಸ್‌ನಲ್ಲಿ ಸಾಮಾನ್ಯವಾಗಿ ಹೊತ್ತಲ್ಲದ ಹೊತ್ತಲ್ಲಿ ಯಾರೂ ಇಣುಕಲು ಇಷ್ಟಪಡುವುದಿಲ್ಲ. ತುಸು ದೀರ್ಘ ಕೆಳದಾರಿಗಳ ಕತ್ತಲಿನ ಸಂದುಗಳಲ್ಲಿ, ಕತ್ತಲು ಹೊರಳುತ್ತಿರುವ ಹೊತ್ತಿನಲ್ಲಿ ಮೇಲಿನ ಸಭ್ಯ ಲೋಕ ನಿರಾಕರಿಸುವ ಇನ್ನೂ ಏನೇನೋ ನಡೆಯುತ್ತಿರಬಹುದು. ಕೆಲಸ ಮುಗಿಸಿದ ಕೆಲವರು ಪ್ಯಾಂಟ್ ಜಿಪ್ ಹಾಕಿಕೊಳ್ಳುತ್ತಲೂ, ಇನ್ನು ಕೆಲವರು ಕುಪ್ಪಸದೊಳಗೆ ನೋಟುಗಳನ್ನು ಹುದುಗಿಸಿಕೊಳ್ಳುತ್ತಲೂ ಇರಬಹುದು. ಅದೇ ಹೊತ್ತಿಗೆ ಲಾಠಿ ಕುಟ್ಟುತ್ತಾ ಖಾಕಿ ಬಟ್ಟೆಯವನು ಪ್ರವೇಶಿಸಿದರೆ ಅವನ ಲಾಠಿಯೂ ಬೂಟೂ ಹುಟ್ಟಿಸಿದ ಒಂದು ಭಯಾತಂಕದ ಆವರಣದಲ್ಲಿ ಎಲ್ಲರೂ ಚೆಲ್ಲಾಚೆದುರಾಗುವರು.

ಈಗ ಇನ್ನಷ್ಟು ಕತ್ತಲಾಗಿದೆ. ಮೇಲಿನ ರಸ್ತೆಯಲ್ಲಿ ಬಸ್ಸು ಕಾರುಗಳ ಸಂಖ್ಯೆ ವಿರಳವಾಗುತ್ತಿರುವಂತೆ ಕೆಳದಾರಿಯ ಕತ್ತಲಲ್ಲಿ ಕೆಲವೇ ಲೋಕ ಪರಿತ್ಯಕ್ತ ಜೀವಗಳು ಇರುವ ಒಂದೇ ಹೊದಿಕೆ ಎಳೆದುಕೊಂಡು ಪೇಪರಿನ ಮೇಲೆ ಮಗ್ಗುಲಾಗುತ್ತವೆ. ಪೇಪರಿನಲ್ಲಿ ಕಟ್ಟಿ ತಂದ ಅರೆಮುಗಿದ ಕುಷ್ಕಾ ಈಗ ನಾಯಿಗಳ ಪಾಲಾಗಿದೆ. ನಡುರಾತ್ರಿ ಇಲ್ಲಿ ಏನೇ ಸಂಭವಿಸಿದರೂ ಎಚ್ಚರವಾದರೂ ಎದ್ದು ನೋಡಬಾರದು ಎಂಬ ಅಲಿಖಿತ ನಿಯಮವನ್ನು ಈ ಜೀವಗಳು ಪಾಲಿಸಿಕೊಂಡು ಬಂದಿವೆ. ಒಂದು ಸಲ ಸುಲಿಗೆ ಮಾಡಿಸಿಕೊಂಡವರು, ಪೃಷ್ಠದ ಮೇಲೆ ಯಾರದೋ ಕೈ ಓಡಾಡಿ ಬೆಚ್ಚಿಬಿದ್ದವರು ಮುಂದೆಂದೂ ಇರುಳಿನಲ್ಲಿ ಈ ದಾರಿಗಳಲ್ಲಿ ಓಡಾಡುವ ಧೈರ್ಯ ತೋರಲಾರರು.

ಈ ಅಂಕಣವನ್ನೂ ಓದಿ: ಶಬ್ದಸ್ವಪ್ನ ಅಂಕಣ: ಸ್ಪರ್ಶದಲ್ಲಿ ಸರ್ವಸ್ವ

ಈ ಅಂಡರ್‌ಪಾಸುಗಳಿಗೆ ಎಷ್ಟೇ ಬಣ್ಣ ಬಳಿದರೂ ಎಷ್ಟೇ ಬಲ್ಬುಗಳನ್ನು ತೂಗು ಹಾಕಿದರೂ ಅಲ್ಲಿರುವ ಒಂದು ವಿಷಣ್ಣತೆ ಮಂಕುತನಗಳು ಹೋಗುವುದಿಲ್ಲ. ಅಲ್ಲಿ ಸಾಗುವ ಹೊತ್ತಿನಲ್ಲಿ ನೀವು ತುಂಬಾ ಹೊತ್ತು ನಿಲ್ಲುವ ಯತ್ನ ಮಾಡಿದರೆ, ಅಲ್ಲಿರುವವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹೋದರೆ ಉಸಿರು ಕಟ್ಟಿದಂತಾಗುತ್ತದೆ. ಇದು ಪರಿತ್ಯಕ್ತರ ತಾಣ. ಕೆಳದಾರಿಗಳಲ್ಲಿ ದೊಡ್ಡವರು ಓಡಾಡುವುದಿಲ್ಲ. ಅವರು ಮೇಲ್ದಾರಿಗಳಲ್ಲಿ ವೇಗವಾಗಿ ಹೋಗುತ್ತಾರೆ.

ಫ್ಲೈ ಓವರುಗಳ ಹಾಗಲ್ಲ ಈ ಅಂಡರ್‌ಪಾಸುಗಳು. ಅದನ್ನು ಕಟ್ಟಿಸಿದ ಇಂಜಿನಿಯರೇ ಇದನ್ನು ಕಟ್ಟಿಸಿರಲೂ ಸಾಕು. ಆದರೆ ಸ್ವಭಾವದಲ್ಲಿ ಎರಡೂ ಬೇರೆಯೇ. ಒಂದು ಆಕಾಶದಲ್ಲಿ ನೆಗೆಯಲು ರೆಕ್ಕೆ ಬಿಡಿಸಿದ್ದರೆ ಇನ್ನೊಂದು ಪಾತಾಳದಲ್ಲಿ ಕುಸಿದು ಕೂತಿದೆ. ಒಂದರ ಮೇಲೆ ಗಾಲಿಗಳು ರೊಂಯ್ಯನೆ ಹಾಯ್ದರೆ ಇನ್ನೊಂದರಲ್ಲಿ ತೆವಳುತ್ತವೆ. ಒಂದರಲ್ಲಿ ಆಕಾಶದ ಗಾಢ ಪ್ರಭೆ ಕಣ್ಣು ಕುಕ್ಕಿದರೆ ಇನ್ನೊಂದರಲ್ಲಿ ಕಣ್ಣು ಕಿರಿದಾಗಿಸುವ ಕತ್ತಲಿದೆ. ಒಂದರಲ್ಲಿ ಸಾಗುವವರು ಈ ಇಕ್ಕಟ್ಟು ಮುಗಿದುಬಿಡಲಿ ಎಂದು ಹಾರೈಸಿದರೆ ಇನ್ನೊಂದರಲ್ಲಿ ಹೋಗುತ್ತಿರುವವರು ಪಯಣ ಹೀಗೇ ಅನಂತವಾಗಿರಲಿ ಎಂದುಕೊಳ್ಳುತ್ತಾರೆ. ಆಮೇಲೆ ಇಬ್ಬರೂ ಮೇಲೇರಿ ಕೆಳಗಿಳಿದು ಸಹಸ್ರಾರು ಜೀವಗಳ ನಡುವೆ ತಾವೂ ಒಂದು ಜೀವವಾಗಿ ಕರಗಿ ಹೋಗುತ್ತಾರೆ.

ಈ ಅಂಕಣವನ್ನೂ ಓದಿ: ಪ್ರಣಾಮ್ ಭಾರತ್ ಅಂಕಣ: ಸ್ಟೆತಾಸ್ಕೋಪಿನ ಆತ್ಮಕಥೆ

Exit mobile version