Site icon Vistara News

ಜಗತ್ತಿನಲ್ಲಿ ಮಲಗಿ ದಣಿದವರು ಇರಬಹುದು, ಆದರೆ ದುಡಿದು ದಣಿದವರಿಲ್ಲ!

working

ಯಾವುದೋ ಒಂದು ಆಟ ಆಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಬ್ಯಾಡ್ಮಿಂಟನೇ ಇರಲಿ. ಒಳ್ಳೆಯ ಆಟಗಾರರ ಜತೆ ಒಂದು ಸಿಂಗಲ್ಸ್ ಸೆಟ್ ಆಡಿದರೆ ಸಾಕು, ಮೈ ನರನರಗಳೆಲ್ಲ ಧಿಮ್ಮೆಂದು, ಬೆವರ ಧಾರೆ ಹರಿಯುತ್ತದೆ. ಕಾಲುಗಳು ಇನ್ನು ಸಾಧ್ಯವೇ ಇಲ್ಲ ಎಂದು ಮುಷ್ಕರ ಹೂಡುತ್ತವೆ. ಇನ್ನು ಸಾಧ್ಯವೇ ಇಲ್ಲ ಅನಿಸಿ ಅಲ್ಲೇ ಮಲಗಿಬಿಡುತ್ತೇವೆ. ಆದರೆ, ಗಮನಿಸಿ ನೋಡಿ, ಕೇವಲ ಒಂದೇ ಒಂದು ನಿಮಿಷದಲ್ಲೇ ಮತ್ತೆ ಮೊದಲಿಗಿಂತಲೂ ಹೆಚ್ಚಿನ ಶಕ್ತಿಯೊಂದಿಗೆ ಎದ್ದು ನಿಲ್ಲುತ್ತೇವೆ. ದಣಿವಿದ್ದದ್ದೂ ಸತ್ಯ. ದಣಿವಾರಿದ್ದೂ ಸತ್ಯ.
ಕೆಲವರು ಹೇಳುತ್ತಾರೆ, ಕೆಲಸ ಮಾಡಿದರೆ ದಣಿವಾಗುತ್ತದೆ ಅಂತ. ಇದು ನಿಜವೇ. ಆದರೆ, ಕೆಲಸದ ದಣಿವು ಒಂದು ಬ್ಯಾಡ್ಮಿಂಟನ್ ಆಟದ ನಡುವಿನ ಗ್ಯಾಪ್‍ನಷ್ಟೇ ಅಂತರದಲ್ಲಿ ಕಣ್ಮರೆಯಾಗುತ್ತದೆ. ಈ ಕೆಲಸ ಮತ್ತು ದಣಿವಿಗೆ ತುಂಬ ಹತ್ತಿರದ ಮನೋಸಂಬಂಧವಿದೆ.

ಗಮನಿಸಿ ನೋಡಿ, ಕಚೇರಿಯಲ್ಲಿ ನೀವು ಇಷ್ಟಪಟ್ಟು ಕೆಲಸ ಮಾಡಿದರೆ ದಣಿವೆಂಬುದೇ ಇರುವುದಿಲ್ಲ. ಕೆಲಸ ಮಾಡಲು ಮನಸು ಇಲ್ಲದಿದ್ದರೆ ಹೋಗಿ ಹತ್ತೇ ನಿಮಿಷದಲ್ಲಿ ತೂಕಡಿಕೆ ಆರಂಭವಾಗುತ್ತದೆ. ಒಂದು ಟೀ ಕುಡಿಯೋಣ ಅನಿಸುತ್ತದೆ. ಒಂದು ರೌಂಡ್ ಹೊರಗೆ ಹೋಗಿ ಬರೋಣ ಅನಿಸುತ್ತದೆ. ಕೆಲಸ ಮುಂದೆ ಹೋಗ್ತಾನೇ ಇಲ್ಲ ಅನಿಸುತ್ತದೆ. ಅದೇ ತುಂಬ ಆಸಕ್ತಿಯಿಂದ ಕೆಲಸ ಮಾಡಿದರೆ ಸಮಯ ಹೋದದ್ದೇ ತಿಳಿಯುವುದಿಲ್ಲ. ಬೆಳಗ್ಗೆ ಆಫೀಸಿಗೆ ಬಂದಿದ್ದಷ್ಟೇ ಗೊತ್ತು, ಸ್ವಲ್ಪ ಹೊತ್ತಿನಲ್ಲೇ ಸಂಜೆಯಾಗಿಬಿಡುತ್ತದೆ.
ಮತ್ತೊಂದು ಸಂಗತಿ ಗಮನಿಸಿ, ಆಫೀಸಿನಲ್ಲಿ ಸರಿಯಾಗಿ ಕೆಲಸ ಮಾಡದೆ ಸೋಮಾರಿತನ ಮಾಡಿ ಮನೆಗೆ ಹೊರಡ್ತಾರಲ್ಲ.. ಅವರು ಮನೆಗೆ ಹೋದರೂ ಅಷ್ಟೆ. ಭಾರವಾದ ಹೆಜ್ಜೆಗಳನ್ನು ಹಾಕಿ ಮನೆಗೆ ಹೋಗಿ `ಅಬ್ಬಾ ಸುಸ್ತು’ ಎಂದು ಬಿದ್ದುಕೊಳ್ಳುತ್ತಾರೆಯೇ ಹೊರತು ಬೇರೇನೂ ಇಲ್ಲ.
ಅದೇ ಆಫೀಸಿನಲ್ಲಿ ಖುಷಿ ಖುಷಿಯಾಗಿ ಕೆಲಸ ಮಾಡಿದವರು ಮನೆಯಲ್ಲೂ ಅಷ್ಟೇ ಆ್ಯಕ್ಟಿವ್ ಆಗಿರುತ್ತಾರೆ. ಮಕ್ಕಳೊಂದಿಗೆ ಬೆರೀತಾರೆ. ಇನ್ನೊಂದು ರೌಂಡ್ ಹೊರಗೆ ಹೋಗಿ ಬರಬೇಕು ಎಂದರೂ ಸರಿ ಫ್ರೆಷಪ್ ಆಗಿ ಹೊರಡುತ್ತಾರೆ.
ಇದು ಒತ್ತಟ್ಟಿಗಿರಲಿ. ನಮಗೇ ಆ ದಿನ ರಜೆ ಎಂದಿಟ್ಟುಕೊಳ್ಳಿ. ಮೊದಲೇ ತಡವಾಗಿ ಏಳುವುದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುತ್ತೇವೆ. ಇವತ್ತು ಯಾರದರೂ ಕಿರಿಕಿರಿ ಇಲ್ಲ ಅಂಥ ಆರಾಮಾಗಿ ಎದ್ದು, ಬೇಕಾಬಿಟ್ಟಿ ಮತ್ತೇನೋ ತಿಂದು, ಮತ್ತೆ ಮಲಗಿಬಿಡುವುದು ಹೆಚ್ಚಿನವರ ಜಾಯಮಾನ.
ಗಮನಿಸಿ ನೋಡಿ ರಜೆಯ ದಿನ ಅಷ್ಟೂ ಹೊತ್ತು ಮಲಗ್ತೀವಲ್ಲ.. ದಣಿವು ಇರಲ್ವಾ? ನಿಜವೆಂದರೆ, ಕೆಲಸ ಮಾಡಿದ್ದಕ್ಕಿಂತ ಹೆಚ್ಚಿನ ದಣಿವು ಏನೂ ಮಾಡದೆ ಮಲಗಿಕೊಂಡಾಗಲೇ ಇರುವುದು! ಸೋಫಾದಲ್ಲಿ ಕೂತಾಗಲೂ ಮೈ ಒಂದು ಕಡೆ ವಾಲಲು ತೊಡಗುತ್ತದೆ. ಸ್ನಾನ ಮಾಡುವುದಕ್ಕೂ ಬೇಸರ! ಅದೇ ರಜೆಯ ದಿನ ಎಲ್ಲಾದರೂ ಹೋಗಬೇಕು ಅಂತ ಪ್ಲ್ಯಾನ್ ಮಾಡಿ, ಸುಮ್ಮನೆ ಏನಾದರೂ ಉಪಯುಕ್ತವಾದುದನ್ನು ಮನೆಯಲ್ಲಿ ಮಾಡಲು ಮುಂದಾಗಿ. ಆಯಾಸ, ಆಲಸ್ಯ ಯಾವುದೂ ಹತ್ತಿರ ಬರುವುದಿಲ್ಲ.
ನಮ್ಮ ನಡುವಿನ ದೊಡ್ಡ ದೊಡ್ಡ ಸಾಧಕರೆಲ್ಲ ಒಂದು ನಿಮಿಷವೂ ಬಿಡುವಿಲ್ಲದೆ ದುಡೀತಾ ಇರ್ತಾರಲ್ವಾ? ಅವರಿಗೆ ದಿನಕ್ಕೆಷ್ಟು ಗಂಟೆ ಅಂತ ನಾವೇ ಕೇಳ್ತೀವಲ್ಲಾ.. ಅಷ್ಟೆಲ್ಲ ಬ್ಯುಸಿಯ ನಡುವೆಯೂ ಅವರು ಖುಷಿಖುಷಿಯಾಗಿ ಇರುತ್ತಾರಲ್ಲಾ.. ಇದರ ಹಿಂದಿರುವ ರಹಸ್ಯವೂ ಇದುವೇ.
ಗಮನಿಸಿ ನೋಡಿ, ಮನೆಯಲ್ಲಿ ಹೆಚ್ಚಿನ ಕೆಲಸವಿಲ್ಲದೆ ಇರುವ ಕೆಲವು ಹೆಣ್ಮಕ್ಕಳು ಸಣ್ಣ ವಯಸ್ಸಿನಲ್ಲೇ ಗಂಟು ನೋವು, ಸೊಂಟ ನೋವು ಅಂತ ಯಾತನೆ ಅನುಭವಿಸಲು ಶುರು ಮಾಡುತ್ತಾರೆ. ಕೂದಲು ಬೇಗನೆ ಬೆಳ್ಳಗಾಗುತ್ತದೆ, ಅಕಾಲಿಕ ವೃದ್ಧಾಪ್ಯದ ಕಡೆಗೆ ಮೆಲ್ಲ ಮೆಲ್ಲನೆ ಜಾರುತ್ತಾ ಹೋಗುತ್ತಾರೆ. ಅದೇ ದಿನವಿಡೀ ಏನಾದರೊಂದು ಕೆಲಸ ಮಾಡುತ್ತಿರುವ, ಮನೆಯಲ್ಲೇ ಇದ್ದರೂ ಕಸೂತಿ, ಟೇಲರಿಂಗ್, ಟ್ಯೂಷನ್ ಅಂತ ಮನಸ್ಸಿಗೆ ಏನಾದರೂ ಆಹಾರ ಸಿಗುವ ಕೆಲಸ ಮಡುತ್ತಿದ್ದರೆ ಅಥವಾ ಉದ್ಯೋಗದ ನಿಮಿತ್ತ ಕೆಲಸಕ್ಕೆ ಹೋಗುವ ಮಹಿಳೆಯರು ವಯಸ್ಸು 60 ದಾಟಿದರೂ ಇನ್ನೂ ಉತ್ಪಾಹದಿಂದ ಇರುತ್ತಾರೆ. ಮುಖದಲ್ಲೇ ಏನೋ ಒಂದು ಉಲ್ಲಾಸದ ಕಳೆ.
ದಿನವಿಡೀ ಕೆಲಸ, ವಾರವಿಡೀ ಕೆಲಸ, ಅಂತ ಬೇಜಾರು ಮಾಡಿಕೊಳ್ಳುವವರಿಗೆ, ನಾಲ್ಕು ದಿನ ಸುಮ್ಮನೆ ಏನೂ ಮಾಡದೆ ಮಲಗಿಕೊಳ್ಳಬೇಕು ಅಂತಾ ಇರ್ತಾರಲ್ವಾ.. ಅವರೇ ನಾಲ್ಕು ದಿನ ಏನೋ ಆರೋಗ್ಯ ಸಮಸ್ಯೆಗೆ ಬೆಡ್ ರೆಸ್ಟ್ ಬೇಕು ಅಂತ ಹೇಳಿದರೆ ಎರಡನೇ ದಿನಕ್ಕೇ ಕಂಗಾಲಾಗಿಬಿಡುತ್ತಾರೆ. ಯಾಕೆಂದರೆ, ಆಗ ಅವರಿಗೆ ಗೊತ್ತಾಗುತ್ತದೆ, ಮನುಷ್ಯ ದುಡಿದು ದಣಿಯುವುದಕ್ಕಿಂತಲೂ ಹೆಚ್ಚು ಮಲಗಿ ದಣಿಯುತ್ತಾನೆ ಅಂತ. ಬೇಕಿದ್ದರೆ ನೀವೂ ಒಂದು ಸಾರಿ ಟ್ರೈ ಮಾಡಿ ನೋಡಿ..

Exit mobile version