Site icon Vistara News

Amrit Mahotsav | ಎರಡನೇ ಶಿವಾಜಿ ಮಹಾರಾಜ ಎಂದು ಕರೆಸಿಕೊಂಡಿದ್ದ ಕ್ರಾಂತಿಕಾರಿ ಊಮಾಜಿ ನಾಯಕ

amrit mahotsav
https://vistaranews.com/wp-content/uploads/2022/08/WhatsApp-Audio-2022-08-24-at-09.47.51.mp3

ಹಳೆಯ ಪುಣೆ ಷಹರಿನ ಖಡಕ್‌ಮಾಲ್‌ ಪ್ರದೇಶದಲ್ಲಿರುವ ತಹಶೀಲ್ದಾರ್‌ ಕಚೇರಿಯ ಪ್ರಾಂಗಣದಲ್ಲಿ ಒಂದು ಅರಳೀಮರ ಇದೆ. ಅದು ನೋಡಲು ಸಾಮಾನ್ಯ ಅರಳೀಮರದಂತೆ ಕಂಡರೂ ಒಬ್ಬ ವೀರ ಹುತಾತ್ಮನ ಕಥೆ ಹೇಳುತ್ತದೆ. ಅದೇ ಅರಳೀಮರದ ಕೊಂಬೆಯ ಮೇಲೆ ಆ ವೀರನನ್ನು ೧೮೩೨ರ ಫೆಬ್ರವರಿ ೩ರಂದು ಗಲ್ಲಿಗೇರಿಸಿ ಮೂರು ದಿನಗಳ ಕಾಲ ಶರೀರವನ್ನು ಅಲ್ಲೇ ತೂಗು ಹಾಕಲಾಗಿತ್ತು. ಬ್ರಿಟಿಷರ ವಿರುದ್ಧ ಸಿಡಿದೆದ್ದರೆ ನಿಮ್ಮ ಗತಿಯೂ ಹೀಗೇ ಆಗುತ್ತದೆ, ಎಂಬುದು ಅದರ ಸಂದೇಶವಾಗಿತ್ತು. ತನ್ನನ್ನು ತಾನೇ ʼಎರಡನೇ ಶಿವಾಜಿ ಮಹಾರಾಜʼ ಎಂದು ಕರೆದುಕೊಂಡು ಅಭಿಮಾನಿಗಳಿಂದ ಆದ್ಯ ಕ್ರಾಂತಿಕಾರಿ ಎಂದು ಗೌರವಿಸಲ್ಪಟ್ಟ ಆ ಹುತಾತ್ಮನೇ ಊಮಾಜಿ ನಾಯಕ ಖೋಮಣೆ.

ಛತ್ರಪತಿ ಶಿವಾಜಿಯ ಆದರ್ಶ ಪಾಲಿಸುತ್ತಿದ್ದ, ʼಗೆರಿಲ್ಲಾ ಯುದ್ಧದ ಮೂಲಕ ಇಂಗ್ಲಿಷರೊಂದಿಗೆ ಸೆಣಸಾಡಿದ ಊಮಾಜಿ ಜನಿಸಿದ್ದು ಮಹಾರಾಷ್ಟ್ರದ ಪುರಂದರಗಢದ ತಪ್ಪಲಿನ ಸಮೀಪದ ಭಿವಡಿ ಎಂಬ ಗ್ರಾಮದಲ್ಲಿ, ೧೭೯೧ರ ಸೆಪ್ಟೆಂಬರ್‌ ೮ ರಂದು. ತಂದೆ ದಾದೋಜಿ ಖೋಮಣೆ, ತಾಯಿ ಲಕ್ಷ್ಮೀಬಾಯಿ.

ಚಿಕ್ಕಂದಿನಿಂದಲೇ ಬಲು ಚೂಟಿಯ ಹುಡುಗನಾಗಿದ್ದ ಊಮಾಜಿ ತಂದೆ ದಾದೋಜಿ ನಾಯಕನಿಂದ ಖಡ್ಗ ಯುದ್ಧ, ಶೂಲ, ಚೂರಿ, ಬಿಲ್ಗಾರಿಕೆ ಮೊದಲಾದ ಶಸ್ತ್ರವಿದ್ಯೆಗಳನ್ನು ಕಲಿತ. ಹಲಗಲಿಯ ಬೇಡರಂತೆ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ರಾಮೋಶಿಗಳೆಂಬ ಬೇಡರು. ೧೮೧೮ ರಲ್ಲಿ ಮರಾಠರಿಗೆ ಸೋಲಾಗಿ ಇಂಗ್ಲಿಷರ ಕೈ ಮೇಲಾದ ಮೇಲೆ ರಾಮೋಶಿಗಳ ವಂಶಪಾರಂಪರ್ಯ ಕೆಲಸಕ್ಕೆ ಕುತ್ತೊದಗಿಬಂದಿತ್ತು. ರಾಮೋಶಿಗಳಿಗೆ ಅನ್ಯಾಯವಾಗಿತ್ತು. ಅದು ಬಂಡಾಯದ ರೂಪ ತಳೆಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಊಮಾಜಿ ನಾಯಕತ್ವದಲ್ಲಿ ರಾಮೋಶಿಗಳು ಇಂಗ್ಲಿಷರ ವಿರುದ್ಧ ಬಂಡಾಯ ಸಾರಿದರು. ಶಿವಾಜಿಯಿಂದ ಪ್ರೇರಣೆ ಪಡೆದಿದ್ದ ಊಮಾಜಿ, ತನ್ನವರಿಗೆ ಯಾವುದೇ ವೇಳೆ ಸ್ತ್ರೀಯರ ಮೇಲೆ, ಗೋ ಬ್ರಾಹ್ಮಣರ ಮೇಲೆ ಕೈ ಮಾಡಕೂಡದು ಎಂದು ಕಟ್ಟಪ್ಪಣೆ ವಿಧಿಸಿದ.

ಒಮ್ಮೆ ಊಮಾಜಿಯನ್ನು ದರೋಡೆಕೋರನೆಂದು ಹಿಡಿದು ಸೆರೆಯಲ್ಲಿಡಲಾಗಿತ್ತು. ಊಮಾಜಿ ಪಾಲಿಗೆ ಇದೊಂದು ವರದಾನವೇ ಆಯಿತು. ಸೆರೆಮನೆಯಲ್ಲಿದ್ದಾಗ ಓದು, ಬರಹ ಕಲಿತು ತಕ್ಕಮಟ್ಟಿಗೆ ವಿದ್ಯಾವಂತನಾದ. ಅನಂತರ ಆಂಗ್ಲರ ವಿರುದ್ಧ ಆತನ ಆಕ್ರೋಶ ಇನ್ನಷ್ಟು ತಾರಕಕ್ಕೇರಿತು. ಆಂಗ್ಲರ ವಿರುದ್ಧ ಸೆಣಸಲು ಊಮಾಜಿ ರಾಮೋಶಿಗಳ ಪಡೆಯನ್ನು ಒಗ್ಗೂಡಿಸಲಾರಂಭಿಸಿದ. ಊಮಾಜಿಯ ಚಟುವಟಿಕೆಗಳನ್ನು ಕಣ್ಣಿಟ್ಟು ಗಮನಿಸುತ್ತಿದ್ದ ಆಂಗ್ಲರು ಅವನನ್ನು ಸೆರೆ ಹಿಡಿಯಲು ಕುಟಿಲೋಪಾಯಗಳನ್ನು ಹೆಣೆದರು. ಈ ಸಂಬಂಧವಾಗಿ ಆಂಗ್ಲ ಅಧಿಕಾರಿ ಕ್ಯಾಪ್ಟನ್‌ ಅಲೆಕ್ಸಾಂಡರ್‌ ಮ್ಯಾಕಿಂಟೋಷ್‌ ಫರ್ಮಾನು ಹೊರಡಿಸಿದ.

ತನ್ನ ಐದು ಸಾವಿರ ಸೈನಿಕರೊಂದಿಗೆ ಊಮಾಜಿ ಪುರಂದರಗಢದ ಪಶ್ಚಿಮ ಭಾಗದಲ್ಲಿ ಬೀಡುಬಿಟ್ಟಿರುವ ಸಂಗತಿ ಮ್ಯಾಕಿಂಟೋಷ್‌ಗೆ ತಿಳಿಯಿತು. ಕೂಡಲೇ ಮಾಮಲೆದಾರನೊಬ್ಬ ನನ್ನು ಸೈನ್ಯಸಮೇತ ಮ್ಯಾಕಿಂಟೋಷ್‌ ಆ ಪ್ರದೇಶಕ್ಕೆ ಕಳುಹಿಸಿದ. ಆಂಗ್ಲ ಸೈನ್ಯ ಮತ್ತು ಊಮಾಜಿ ಪಡೆಗಳ ನಡುವೆ ಹಣಾಹಣಿ ಹೋರಾಟ ನಡೆದು ಆಂಗ್ಲ ಸೈನ್ಯ ಸೋತು ಹಿಂತಿರುಗಿತು.

ಇದಾದ ಬಳಿಕ ಊಮಾಜಿ ಆಂಗ್ಲರ ಖಜಾನೆಯ ಮೇಲೆ ದಾಳಿ ಮಾಡಿ, ಅಲ್ಲಿ ದೊರಕಿದ ಹಣವನ್ನು ದೇವಾಲಯವೊಂದರ ನಿರ್ವಹಣೆಗೆ ಕೊಟ್ಟುಬಿಟ್ಟ. ೧೮೩೧ ರ ಫೆಬ್ರವರಿ ೧೬ ರಂದು ಇನ್ನೊಂದು ಘೋಷಣಾ ಪತ್ರ ಹೊರಡಿಸಿದ ಊಮಾಜಿ, ಜನರು ಇಂಗ್ಲಿಷರ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದ. ಆಂಗ್ಲರಿಗೆ ಯಾವುದೇ ರೀತಿಯ ಸಹಾಯ ಮಾಡಕೂಡದೆಂದು ತಾಕೀತು ಮಾಡಿದ. ನನ್ನ ಸೂಚನೆ ಪಾಲಿಸಿದರೆ ಸ್ವರಾಜ್ಯ ಸ್ಥಾಪನೆಯ ಗುರಿ ಈಡೇರಲಿದೆ ಎಂದು ಭರವಸೆ ನೀಡಿದ. ಅನಂತರ ಪುಣೆ-ಮುಂಬಯಿ ನಡುವೆ ಇದ್ದ ಪ್ರಬಲಗಢ ಎಂಬ ಕೋಟೆಯನ್ನು ವಶಪಡಿಸಿಕೊಂಡು ಅಲ್ಲಿಯೇ ತನ್ನವರೊಂದಿಗೆ ಕೆಲಕಾಲ ನೆಲೆಸಿ ಆಡಳಿತ ನಡೆಸಿದ.

ಆಂಗ್ಲರಿಗೆ ಊಮಾಜಿ ಎಂಬ ರಾಮೋಶಿ ನಾಯಕ ನುಂಗಲಾರದ ಬಿಸಿ ಕೆಂಡವಾಗಿ ಕಾಡಿದ. ಹೇಗಾದರೂ ಆತನನ್ನು ಹಿಡಿಯಬೇಕೆಂದು ಆಂಗ್ಲರು ಸಂಚು ಹೂಡಿದರು. ಭಾರಿ ಸಾಹುಕಾರರು ಮತ್ತು ಜಮೀನುದಾರರಿಗೆ ಆಮಿಷಗಳನ್ನೊಡ್ಡಿ ಆತನನ್ನು ಹಿಡಿಯುವಂತೆ ಪ್ರೇರೇಪಿಸಿದರು. ಊಮಾಜಿಯ ಸೈನ್ಯದಲ್ಲಿದ್ದ ಕೆಲವರು ಸ್ವಾರ್ಥಿಗಳನ್ನು ಹಿಡಿದು ಆಸೆ ಆಮಿಷವೊಡ್ಡಿ ಪಿತೂರಿ ನಡೆಸಿದರು.

ಊಮಾಜಿಯ ಸೈನ್ಯದಲ್ಲಿದ್ದ ಕಾಳೋಜಿ ನಾಯಕ ಎಂಬಾತ ಊಮಾಜಿಯ ಬಗ್ಗೆ ಒಳಗೊಳಗೇ ದ್ವೇಷ ಸಾಧಿಸಿದ್ದ. ಏಕೆಂದರೆ ವಿವಾಹಿತ ಹೆಣ್ಣುಮಗಳನ್ನು ಅಪಹರಿಸಿಕೊಂಡು ಹೋಗಿದ್ದ ಅಪರಾಧಕ್ಕಾಗಿ ಊಮಾಜಿ ಆತನ ಕೈಗಳನ್ನೇ ಕತ್ತರಿಸಿದ್ದ. ಸೇಡು ತೀರಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶವೆಂದು ಬಗೆದ ಕಾಳೋಜಿ ಇಂಗ್ಲಿಷ್‌ ಅಧಿಕಾರಿಗಳನ್ನು ಭೇಟಿಯಾಗಿ ಊಮಾಜಿಯ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ. ಸರ್ಕಾರವೂ ಊಮಾಜಿಯನ್ನು ಹಿಡಿಯಲು ನೆರವಾದವರಿಗೆ ಹತ್ತು ಸಾವಿರ ರೂಪಾಯಿ ನಗದು ಮತ್ತು ನಾಲ್ಕು ಎಕರೆ ಭೂಮಿಯನ್ನು ಬಹುಮಾನ ಕೊಡುವುದಾಗಿ ಘೋಷಿಸಿತ್ತು. ನಾನಾ ಚವ್ಹಾಣ್‌ ಎಂಬ ಊಮಾಜಿಯ ಕಡೆಯವನೇ ಒಬ್ಬ ಸ್ವಾರ್ಥಿ ಊಮಾಜಿಯ ಬಗ್ಗೆ ತನಗೆ ಗೊತ್ತಿರುವ ಎಲ್ಲ ಮಾಹಿತಿಗಳನ್ನೂ ರಹಸ್ಯವಾಗಿ ಬ್ರಿಟಿಷರಿಗೆ ತಲುಪಿಸಲಾರಂಭಿಸಿದ. ಬ್ರಿಟಿಷರೆಸೆದ ಬಿಸ್ಕೆಟ್‌ಗೆ ಹೀಗೆ ಕೆಲವು ದೇಶದ್ರೋಹಿ ಕುನ್ನಿಗಳು ಜೊಲ್ಲು ಸುರಿಸಿದವು. ಹೀಗಾಗಿ ಊಮಾಜಿಯನ್ನು ಸೆರೆಹಿಡಿಯುವ ಕೆಲಸ ಬ್ರಿಟಿಷರಿಗೆ ಇನ್ನಷ್ಟು ಸುಲಭವಾಯಿತು.

ಅದು ೧೮೩೧ ರ ಡಿಸೆಂಬರ್‌ ೧೫ ರ ಮಧ್ಯರಾತ್ರಿ. ಊಮಾಜಿ ಭೋರ್ ತಾಲ್ಲೂಕಿನ ಉತ್ರೋಳಿ ಎಂಬ ಹಳ್ಳಿಯಲ್ಲಿ ಗಾಢ ನಿದ್ದೆಯಲ್ಲಿದ್ದ. ಆಂಗ್ಲ ಸೈನಿಕರು ಏಕಾಏಕಿ ದಾಳಿ ನಡೆಸಿ ಆತನನ್ನು ಬಂಧಿಸಿದರು. ರಾಜದ್ರೋಹದ ಖಟ್ಲೆ ಹೊರಿಸಿ ಪುಣೆಯ ತಹಶೀಲ್ದಾರ್‌ ಕಚೇರಿಯ ಒಂದು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದರು. ವಿಚಾರಣೆ ನಡೆದು ಜೇಮ್ಸ್‌ ಟೇಲರ್‌ ಎಂಬ ಆಂಗ್ಲ ನ್ಯಾಯಾಧೀಶ ಆತನಿಗೆ ಗಲ್ಲು ಶಿಕ್ಷೆ ಘೋಷಿಸಿದ.

ಊಮಾಜಿಯನ್ನು ಬಂಧಿಸಿದ್ದು ರಾಜದ್ರೋಹದ ಆರೋಪದ ಮೇಲೆ, ಆದರೆ ಆತನೊಬ್ಬ ದರೋಡೆಕೋರನೆಂದು ಬಿಂಬಿಸಿ ಸಾರ್ವಜನಿಕವಾಗಿ ಗಲ್ಲಿಗೇರಿಸುವುದಾಗಿ ಪುಣೆ ಷಹರಿನಲ್ಲಿ ಡಂಗುರ ಹೊಡೆಸಲಾಯಿತು. ಪುಣೆಯ ಖಡಕ್‌ಮಾಲ್‌ ಎಂಬಲ್ಲಿ ತಹಶೀಲ್ದಾರ್‌ ಕಚೇರಿಯ ಬಳಿ ಇರುವ ಅರಳಿಮರದ ಕೊಂಬೆಗೆ ನೇಣು ಬಿಗಿದು ಸಾರ್ವಜನಿಕರ ಮುಂದೆ ಊಮಾಜಿಯನ್ನು ಗಲ್ಲಿಗೇರಿಸಲಾಯಿತು. ಊಮಾಜಿಯ ನಿರ್ಜೀವ ಶರೀರ ಮೂರು ದಿವಸಗಳ ಕಾಲ ಹಾಗೆಯೇ ಆ ಕೊಂಬೆಗೆ ಕಟ್ಟಿದ ನೇಣಿನಲ್ಲಿ ತೂಗಾಡುತ್ತಿತ್ತು.

ಇದನ್ನೂ ಓದಿ | Amrit Mahotsav | ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಸಿಡಿದೆದ್ದ ಶ್ರಮಜೀವಿಗಳಾದ ಸಂತಾಲರು

Exit mobile version