Site icon Vistara News

ರಾಜ ಮಾರ್ಗ ಅಂಕಣ | ಆತ ಡೆತ್ ಬೆಡ್ ಮೇಲೆ ಮಲಗಿ ಕೂಡ ಗಣಿತದ ಕನಸು ಬರೆದಿದ್ದ!

Everest galwa

ಆತನ ಹೆಸರು ಎವರೆಸ್ಟ್ ಗಾಲ್ವಾ. ಫ್ರಾನ್ಸ್ ದೇಶದ ಗಣಿತಜ್ಞ ಆಗಿದ್ದ. ಆತ ಬದುಕಿದ್ದು ಕೇವಲ 21 ವರ್ಷ ಮಾತ್ರ(1811-1832)! ಆದರೆ ಸಾಧಿಸಿದ್ದು ಅಗಾಧ.

ಸಂಕೀರ್ಣ ಬೀಜಗಣಿತದ ವಿಭಾಗದಲ್ಲಿ ಬಹುಪದೋಕ್ತಿಗಳನ್ನು ಬಿಡಿಸುವ ಅವನ ವಿಧಾನವು 350 ವರ್ಷಗಳ ದೀರ್ಘ ಅವಧಿಯ ಸಮಸ್ಯೆಯನ್ನು ಸುಲಭವಾಗಿ ಬಿಡಿಸಿತ್ತು! ಅಂತಹ ಎವರೆಸ್ಟ್ ಗಾಲ್ವಾನ ಅಂತ್ಯವು ಅತ್ಯಂತ ದಾರುಣ ಆಗಿತ್ತು.

ಯುವಕನಾಗಿದ್ದ ಗಾಲ್ವಾ 1830ರ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಒಬ್ಬ ಕ್ರಾಂತಿಕಾರಿ ಆಗಿ ಬದಲಾದ. ಸರ್ವಾಧಿಕಾರಿ ಸರಕಾರವು ಆತನನ್ನು ಹಲವು ಬಾರಿ ಜೈಲಿಗೆ ತಳ್ಳಿತು. ಪ್ರತೀ ಬಾರಿ ಜೈಲಿಂದ ಹೊರಬರುವಾಗ ಗಾಲ್ವಾ ಇನ್ನಷ್ಟು ರಕ್ತ ಬಿಸಿ ಮಾಡಿಕೊಂಡು ಬರುತ್ತಿದ್ದ. ಜನ ಸೇರಿಸಿ ಕ್ರಾಂತಿಕಾರಿ ಭಾಷಣಗಳನ್ನು ಮಾಡುತ್ತಿದ್ದ.

ಒಮ್ಮೆಯಂತೂ ಫ್ರೆಂಚ್ ಪೊಲೀಸರು ಅವನ ಕಿಬ್ಬೊಟ್ಟೆಗೆ ಗುಂಡು ಹೊಡೆದರು. ಅವನು ರಕ್ತದ ಮಡುವಿನಲ್ಲಿ ಆಸ್ಪತ್ರೆಗೆ ಸೇರಬೇಕಾಯಿತು. ಗುಂಡು ಅವನ ಕರುಳನ್ನು ಸೀಳಿ ಒಳನುಗ್ಗಿತ್ತು. ವೈದ್ಯರು ಅವನು ಬದುಕುವ ಆಸೆ ಬಿಟ್ಟು ನಿನ್ನ ಕೊನೆಯ ಆಸೆ ಏನಪ್ಪ? ಎಂದು ಕೇಳಿದರು.

ಅವನು ನನಗೆ ಬರೆಯಬೇಕು ಅನ್ನಿಸ್ತಾ ಇದೆ. ಪೇಪರ್ ಮತ್ತು ಪೆನ್ ಬೇಕು ಎಂದು ಹೇಳಿದ! ವೈದ್ಯರು ತಂದುಕೊಟ್ಟರು. ಅವನು ತಲೆ ದಿಂಬನ್ನು ಕಾಲ ಮೇಲೆ ಇಟ್ಟು ಬರೆಯಲು ಕೂತ. ರಕ್ತದ ಪ್ರವಾಹ ನಿಲ್ಲುತ್ತಲೇ ಇರಲಿಲ್ಲ. ಕಣ್ಣು ಮಂಜಾಗುತ್ತಿತ್ತು. ನಾಡಿ ಬಡಿತ ನಿಧಾನ ಆಗುತ್ತಿತ್ತು. ಮೈ ತುಂಬಾ ನೋವು ಅವನನ್ನು ಜರ್ಜರಿತ ಮಾಡಿತ್ತು. ಆದರೂ ಇಡೀ ರಾತ್ರಿ ಬರೆಯುತ್ತ ಹೋದ!

ಬೆಳಿಗ್ಗೆ ವೈದ್ಯರು ಬಂದು ಪರೀಕ್ಷೆ ಮಾಡಿದಾಗ ಅವನ ಪ್ರಾಣ ಹೋಗಿತ್ತು! ಆದರೆ ರಕ್ತದಲ್ಲಿ ಮುಳುಗಿ ಹೋಗಿದ್ದ ಒಂದಷ್ಟು ಅವನು ಬರೆದ ಹಾಳೆಗಳು ಇದ್ದವು. ವೈದ್ಯರು ಅದನ್ನು ಕುತೂಹಲದಿಂದ ಓದಲು ಆರಂಭ ಮಾಡಿದರು. ಏನಿತ್ತು ಅದರಲ್ಲಿ?

ಹೌದು. ಅದರಲ್ಲಿ ಅವನು ತನ್ನ ತಲೆಯಲ್ಲಿ ಅಪೂರ್ಣವಾದ ಕೆಲವು ಗಣಿತ ಸೂತ್ರಗಳನ್ನು ಬರೆಯುತ್ತ ಹೋಗಿದ್ದ! ಯಾವ ಪ್ರಮೇಯಗಳನ್ನು ತನಗೆ ಬಿಡಿಸಲು ಸಾಧ್ಯ ಆಗಿರಲಿಲ್ಲವೊ ಅವುಗಳನ್ನು ಬರೆದಿದ್ದ! ಅವುಗಳನ್ನು ಮುಂದೆ ಯಾರಾದರೂ ಬಿಡಿಸಲಿ ಎಂದು ಅವನ ಆಸೆ ಆಗಿತ್ತು. ಅದನ್ನೇ ಅವನು ಕೊನೆಯ ಚರಣದಲ್ಲಿ ಬರೆದಿದ್ದ!

ಅದರ ಜೊತೆಗೆ ಮಾರ್ಜಿನ್ ಉದ್ದಕ್ಕೂ ‘ನನಗೆ ಸಮಯ ಕೊಡು ದೇವರೇ’ ಎಂದು ಬರೆಯುತ್ತ ಹೋಗಿದ್ದ!

ತನ್ನ ಡೆತ್ ಬೆಡ್ ಮೇಲೆ ಕೂಡ ಗಣಿತದ ಕನಸು ಕಂಡ ಮತ್ತು ಅದನ್ನು ಬರೆದಿಟ್ಟ ಅವನ ಸ್ಟ್ರಾಂಗ್ ಇಚ್ಛಾ ಶಕ್ತಿ ಮತ್ತು ದೂರದೃಷ್ಟಿಗಳು ನಿಜಕ್ಕೂ ಶ್ಲಾಘನೀಯ ಎಂದು ನನಗೆ ಅನಿಸುತ್ತದೆ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ| ಧೀರೂಭಾಯಿ ಅಂಬಾನಿ ಮಾನವೀಯ ಮುಖಗಳು, ಜವಾನನಿಗೂ ಬಹುವಚನದ ಗೌರವ

Exit mobile version