2021ರ ಒಂದೇ ವರ್ಷದಲ್ಲಿ ರಸ್ತೆ ಅಪಘಾತದಲ್ಲಿ (Road Accident) ಭಾರತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಒಂದೂವರೆ ಲಕ್ಷ ಅಂದರೆ ನಮಗೆ, ನಿಮಗೆ ನಂಬಲು ಕಷ್ಟವಾಗಬಹುದು! (Raja Marga Column) ಅದರಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಸಂಭವಿಸಿದ ಸಾವುಗಳ ಸಂಖ್ಯೆ 50,000ಕ್ಕಿಂತ ಅಧಿಕ. ಇದನ್ನು ವಿಸ್ತಾರವಾಗಿ ಅಧ್ಯಯನ ಮಾಡಿದ ಬಿಹಾರದ ರಾಘವೇಂದ್ರ ಕುಮಾರ್ (Raghavendra Kumar) ಎಂಬ ಯುವ ವಕೀಲರು ದೇಶದಾದ್ಯಂತ ಹೆಲ್ಮೆಟ್ ಜಾಗೃತಿ (Helmet Awareness Campaign) ಮೂಡಿಸುವ ಸಾಹಸಕ್ಕೆ ಇಳಿದಿದ್ದಾರೆ. ಈ ಉದ್ದೇಶಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿ ಇಟ್ಟಿದ್ದಾರೆ. ಅವರನ್ನು ‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ’ (Helmet Man of India) ಎಂದು ಭಾರತವು ಹೆಮ್ಮೆಯಿಂದ ಕರೆಯುತ್ತಿದೆ.
Raja Marga Column: ಗೆಳೆಯನ ಸಾವು ಅವರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು!
ನೋಯ್ಡಾದಲ್ಲಿ ವಕೀಲರಾಗಿ ದುಡಿಯುತ್ತಿದ್ದ ರಾಘವೇಂದ್ರ ಅವರ ಜೀವನದಲ್ಲಿ ಒಂದು ದೊಡ್ಡದಾದ ತಿರುವು 2014ರಲ್ಲಿ ಬಂದಿತ್ತು. ಅವರ ಅತ್ಯುತ್ತಮ ಸ್ನೇಹಿತ ಮತ್ತು ಹಾಸ್ಟೆಲ್ ಮೇಟ್ ಆಗಿದ್ದ ಕೃಷ್ಣಕುಮಾರ್ ಎಂಬವರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದಾಗ ಅವರ ಕಿವಿಗೆ ಬಿದ್ದ ಒಂದು ಮಾತು ಅವರನ್ನು ಯೋಚನೆಗೆ ಹಚ್ಚಿತು. ಅದೇನೆಂದರೆ – ಹೆಲ್ಮೆಟ್ ಹಾಕಿದ್ದರೆ ಆತನ ಪ್ರಾಣ ಉಳಿಯುತ್ತಿತ್ತು ಎಂದು! ಅದು ಅವರ ನಿದ್ದೆಯನ್ನು ಕಸಿಯಿತು. ಈ ರೀತಿ ಹೆಲ್ಮೆಟ್ ಇಲ್ಲದೇ ಸಾಯುವ ಜನರನ್ನು ತಡೆಯಲು ತಾನು ಏನಾದರೂ ಮಾಡಬೇಕು ಎಂದು ಅವರು ನಿರ್ಧಾರ ಮಾಡಿ ಆಗಿತ್ತು. ಅಲ್ಲಿಂದ ಅವರ ಹೆಲ್ಮೆಟ್ ಜಾಗೃತಿ ಪರ್ವ ಆರಂಭ ಆಗಿತ್ತು. ಅದೀಗ ದೇಶದ ಮೂಲೆ ಮೂಲೆಗೂ ಹರಡಿದೆ.
Raja Marga Column: ಅವರು ಹೆಲ್ಮೆಟ್ ಜಾಗೃತಿ ಮಾಡಿದ್ದು ಹೇಗೆ?
ರಾಘವೇಂದ್ರ ಅವರು ಕಾರಿನಲ್ಲಿ ಹೋಗುವಾಗಲೂ ಹೆಲ್ಮೆಟ್ ಧರಿಸಲು ಆರಂಭ ಮಾಡಿದರು. ದೇಶದ ಪ್ರಮುಖ ನಗರಗಳ ರಸ್ತೆಗಳಲ್ಲಿ ನಿಂತು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನಗಳ ಚಾಲಕರಿಗೆ ಉಚಿತವಾಗಿ ಹೆಲ್ಮೆಟ್ ಹಂಚುವ ಕೆಲಸ ಮಾಡುತ್ತಾ ಇದ್ದಾರೆ. ಕಾನ್ಪುರ, ನೋಯ್ಡಾ , ಲಕ್ನೋ, ದೆಹಲಿ, ಮೀರತ್…ಹೀಗೆ ಎಲ್ಲ ನಗರಗಳ ಉದ್ದಕ್ಕೂ ಅವರ ಈ ಅಭಿಯಾನ ನಡೆದಿದೆ. ಅವರು ಈವರೆಗೆ ಹಂಚಿದ ಹೆಲ್ಮೆಟ್ ಗಳ ಸಂಖ್ಯೆ 60,000 ದಾಟಿದೆ!
ಶಾಲೆ, ಕಾಲೇಜುಗಳಿಗೆ ಹೋಗಿ ಹೆಲ್ಮೆಟ್ ಧರಿಸುವ ಬಗ್ಗೆ ಸಂಕಲ್ಪ ಬೋಧನೆ ಮಾಡುತ್ತಾರೆ. ಜಾಗೃತಿ ಮೂಡಿಸಲು ಸುಂದರವಾದ ವಿಡಿಯೋಗಳನ್ನು ಮಾಡಿ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ದ್ವಿಚಕ್ರ ವಾಹನಗಳನ್ನು ಹಿಂಬಾಲಿಸಿ ಹೆಲ್ಮೆಟ್ ವಿತರಣೆ ಮಾಡುವ ಅವರ ಕಾರಿನ ಹಿಂದೆ ಹೇಗೆ ಬರೆದಿದೆ – ಯಮರಾಜ ನೆ ಬೇಜಾ ಹೈ ಬಚಾನೆ ಕೇಲಿಯೆ. ಉಪರ್ ಜಗಹ್ ನಹೀ ಹೈ ಜಾನೇ ಕೆಲಿಯೇ (ಯಮರಾಜನು ಕಳುಹಿಸಿದ್ದಾನೆ ನಿಮ್ಮನ್ನು ರಕ್ಷಿಸಲು. ಮೇಲೆ ಜಾಗವಿಲ್ಲ ಹೋಗಲು)!
Raja Marga Column: ಅದಕ್ಕಾಗಿ ರಾಘವೇಂದ್ರ ತಮ್ಮ ಕೆಲಸವನ್ನು ಬಿಟ್ಟಿದ್ದಾರೆ.
ಈ ಜಾಗೃತಿ ಕಾರ್ಯಕ್ರಮಕ್ಕಾಗಿ ಆರಂಭದಲ್ಲಿ ಬಿಡುವು ಇದ್ದಾಗ ಮಾತ್ರ ತೊಡಗಿಸಿಕೊಳ್ಳುತ್ತಿದ್ದ ಅವರು 2016ರಲ್ಲಿ ಕೆಲಸ ಬಿಟ್ಟು ಪೂರ್ಣಾವಧಿಗೆ ತೊಡಗಿಸಿಕೊಂಡರು. ಅವರು ಹಲವು ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದರು. ಮುಂದೆ 2020ರಲ್ಲಿ ‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ ‘ಎಂಬ NGO ಸ್ಥಾಪನೆ ಮಾಡಿದರು. ಹೆಲ್ಮೆಟ್ ದಾನ ಮಾಡುತ್ತಾ ಬರಿಗೈಯ ದಾಸ ಆದರು. ತನ್ನ ಫ್ಲ್ಯಾಟ್, ಹೆಂಡತಿಯ ಬಂಗಾರ ಎಲ್ಲವನ್ನೂ ಮಾರಿದರು. ಈಗ ಹಳ್ಳಿಗೆ ಹೋಗಿ ಕೃಷಿ ಮಾಡುತ್ತ ಇದ್ದಾರೆ. ತನ್ನ ಮಗನನ್ನು ಸರಕಾರಿ ಶಾಲೆಗೆ ಸೇರಿಸಿದ್ದಾರೆ. ಅವರ ಈ ಅಭಿಯಾನದಲ್ಲಿ ಅವರ ಹೆಂಡತಿ ಧನಲಕ್ಷ್ಮಿ ಕೂಡಾ ಪೂರ್ಣ ಬೆಂಬಲ ನೀಡುತ್ತಿದ್ದಾರೆ.
ಇದನ್ನೂ ಓದಿ: Raja Marga Column : ಕ್ಯಾಪ್ಟನ್ ಪ್ರಾಂಜಲ್ ಅಪ್ಪ, ಅಮ್ಮ ಯಾಕೆ ಗ್ರೇಟ್ ಗೊತ್ತಾ?
ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಮೆಚ್ಚುಗೆ
ಅವರು ಹೆಲ್ಮೆಟ್ ನೀಡಿದವರಲ್ಲಿ ಸುಮಾರು 30 ಜನ ಗಂಭೀರ ರಸ್ತೆ ಅಪಘಾತಕ್ಕೆ ಒಳಗಾದರೂ ಹೆಲ್ಮೆಟ್ ಕಾರಣಕ್ಕೆ ಪ್ರಾಣ ಉಳಿಸಿಕೊಂಡಿದ್ದಾರೆ ಅನ್ನುವ ದಾಖಲೆ ಅವರ ಹತ್ತಿರ ಇದೆ. ಸಾಯುವತನಕ ಈ ಅಭಿಯಾನವನ್ನು ಮುಂದುವರೆಸುತ್ತೇನೆ ಎಂದವರು ಹೇಳಿದ್ದಾರೆ. ‘ನನ್ನ ಗೆಳೆಯನನ್ನು ಉಳಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಆದರೆ ಕೆಲವು ಜೀವಗಳನ್ನಾದರೂ ಉಳಿಸಿದ ತೃಪ್ತಿ ಇದೆ’ ಎಂದವರು ಹೇಳಿದಾಗ ಅವರ ಕಣ್ಣುಗಳಲ್ಲಿ ಖುಷಿಯ ಬೆಳಕು ಕಾಣುತ್ತದೆ. ಕೇಂದ್ರ ರಸ್ತೆ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಟ್ವೀಟ್ ಮಾಡಿ ಅವರ ಕೆಲಸವನ್ನು ಶ್ಲಾಘನೆ ಮಾಡಿದ್ದಾರೆ. ಸ್ವಾರ್ಥ ಇಲ್ಲದೇ ಸಮಾಜಕ್ಕಾಗಿ ಈ ಅಭಿಯಾನ ನಡೆಸುತ್ತಿರುವ ರಾಘವೇಂದ್ರ ಅವರಿಗೆ ನಮ್ಮದೊಂದು ಸಲಾಂ ಕೂಡಾ ಇರಲಿ ಅಲ್ಲವೇ?
यही पल सबसे अच्छा होता है, एक हेलमेट की कीमत एक मां से अच्छा कोई नहीं समझ सकता.🙏🚦🇮🇳 #Helmetman #helmetmanofindia #RoadSafety #helmet #TrafficRules pic.twitter.com/83HvwHi1eB
— Helmet man of India (@helmet_man_) January 31, 2024