Site icon Vistara News

ರಾಜ ಮಾರ್ಗ | ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!

neethu ganghas

ಮೊನ್ನೆ ಆದಿತ್ಯವಾರ ಮ್ಯಾಂಚೆಸ್ಟರ್ ನಗರದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್ ವಿಭಾಗದ ಪದಕ ಪ್ರದಾನ ಕಾರ್ಯಕ್ರಮವು ಒಂದು ಭಾವುಕ ಕ್ಷಣಕ್ಕೆ ಸಾಕ್ಷಿ ಆಯಿತು!

ಆಕೆ ನೀತು ಗಂಘಾಸ್. ವಯಸ್ಸು 21. ಭಾರತದ ಬಾಕ್ಸಿಂಗ್‌ನ ನವೋದಿತ ತಾರೆ. ಇದು ಆಕೆಯ ಮೊದಲ ಕಾಮನ್ವೆಲ್ತ್ ಗೇಮ್ಸ್ ಆಗಿತ್ತು. ಆಕೆಯನ್ನು ಈಗಲೇ ಜನರು ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಜೊತೆ ಹೋಲಿಸಲು ತೊಡಗಿದ್ದಾರೆ.

ಕೊರಳಲ್ಲಿ ಚಿನ್ನದ ಪದಕವನ್ನು ತೋಡಿಸಿದಾಗ ಭಾರತದ ತ್ರಿವರ್ಣ ಧ್ವಜ ಮೇಲೇರುವ ಕ್ಷಣ, ರಾಷ್ಟ್ರಗೀತೆ ಜನಗಣಮನವನ್ನು ನುಡಿಸುವಾಗ ಆಕೆಯ ಕಣ್ಣಲ್ಲಿ ಗಂಗಾ ಭಾಗೀರಥಿ ಎಲ್ಲವೂ ಸುರಿಯಿತು. ಅದೇ ಹೊತ್ತಿಗೆ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!

ಹೌದು, ಅವಳು ಹುಡುಕುತ್ತ ಇದ್ದದ್ದು ಅವಳ ಪ್ರೀತಿಯ ಅಪ್ಪನನ್ನು! ಅವರ ಹೆಸರು ಜೈ ಭಗವಾನ್. ಹರಿಯಾಣದ ಸರಕಾರಿ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ನೌಕರ ಆಗಿದ್ದ ಅವರು ತನ್ನ ಮಗಳ ಸಾಧನೆಗೆ ಒತ್ತಾಸೆ ಆಗಿ ನಿಂತವರು. ಕಳೆದ ಮೂರು ವರ್ಷಗಳಿಂದ ಅವರು ವೇತನವಿಲ್ಲದ ರಜೆ ಹಾಕಿ ಮಗಳ ಜೊತೆಗೆ ಓಡಾಟ ಮಾಡುತ್ತಿದ್ದರು! ಮಗಳ ಕೋಚಿಂಗ್, ಆಹಾರ, ಪ್ರಯಾಣ ಎಲ್ಲ ಉಸ್ತುವಾರಿ ಕೂಡ ಅವರದ್ದೇ! ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಮಗಳ ಜೊತೆ ಬಾಕ್ಸಿಂಗ್ ರಿಂಗ್‌ಗೆ ಬರುವ ಅಪ್ಪ ಮಧ್ಯರಾತ್ರಿ ಆದರೂ ಮಲಗುತ್ತಲೆ ಇರಲಿಲ್ಲ!

ಕೊರಳಲ್ಲಿ ಚಿನ್ನದ ಪದಕ ಧರಿಸಿ ಆಕೆ ವಿಜಯ ವೇದಿಕೆಯಿಂದ ಓಡಿ ಬಂದು ಸ್ಟೇಡಿಯಂ ಮೂಲೆಯಲ್ಲಿ ಮೈ ಮುದುರಿಕೊಂಡು ನಿಂತ ತನ್ನ ಅಪ್ಪನನ್ನು ಗಾಢವಾಗಿ ಅಪ್ಪಿಕೊಂಡಳು. ಇಬ್ಬರೂ ಬ್ಲಾಸ್ಟ್ ಆಗಿದ್ದರು! ಅಪ್ಪನಿಗೂ ಕಣ್ಣೀರು ನಿಯಂತ್ರಣ ಮಾಡುವುದು ಕಷ್ಟ ಆಗ್ತಿತ್ತು.

ರಿಂಗ್‌ನಲ್ಲಿ ಸಿಂಹದ ಹಾಗೆ ಎರಗಿ ಹೋಗುವ ನೀತು ಹೊರಗೆ ಬಂದಾಗ ಮೆತ್ತನೆ ಮಾತಾಡುತ್ತಾಳೆ. ಜನರು ಅವಳ ಆಟದ ಖದರು ನೋಡಿ ‘ಗಬ್ಬರ್ ಶೇರ್ನಿ’ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.

ಮೂರು ವರ್ಷಗಳಿಂದ ವೇತನವೆ ಇಲ್ಲದ ಅಪ್ಪ ಮನೆಯ ಖರ್ಚಿಗೆ, ಮಗಳ ಕೋಚಿಂಗ್‌ಗೆ, ಮಗಳ ಪ್ರಯಾಣಕ್ಕೆ, ಮಗಳ ಆಹಾರಕ್ಕೆ, ಕ್ರೀಡಾ ಸಾಮಗ್ರಿಗೆ ಎಲ್ಲಿಂದ ದುಡ್ಡು ಹೊಂದಿಸುತ್ತ ಇದ್ದರು ಅನ್ನುವುದೇ ಮಗಳಿಗೆ ಆಶ್ಚರ್ಯ! ಮಗಳು ಹಸಿದಾಗ ಅಪ್ಪ ಎಲ್ಲಿಂದಲೋ ದುಬಾರಿ ಆಹಾರ ತಂದು ಮಗಳಿಗೆ ತುತ್ತು ಕೊಡುತ್ತಿದ್ದರು. ನನ್ನ ಊಟ ಆಗಿದೆ ಮಗಳೆ, ನೀನು ಊಟ ಮಾಡು ಎಂದು ತಿನ್ನಿಸುತ್ತಿದ್ದರು. ಅಪ್ಪನ ಊಟ ಆಗಿಲ್ಲ ಎಂದು ಅವಳಿಗೆ ತುಂಬಾ ತಡವಾಗಿ ಗೊತ್ತಾಗುತ್ತಿತ್ತು!

ʻʻಕಳೆದ ಆರು ವರ್ಷಗಳಲ್ಲಿ ಆಕೆ ಹತ್ತಾರು ದೇಶ ಸುತ್ತಾಡುವ ಪ್ರಸಂಗ ಬಂದಾಗ ಆಕೆಯ ನೆರಳಾಗಿ ಓಡಾಟ ಮಾಡಿದ್ದು ಅದೇ ಅಪ್ಪ! ಅವರಿಗೆ ಬಾಕ್ಸಿಂಗ್ ಪಟ್ಟುಗಳು ಗೊತ್ತಾಗುತ್ತ ಇರಲಿಲ್ಲ. ಆದರೂ ರಿಂಗ್ಸ್ ಹೊರಗೆ ನಿಂತು ಜೋರಾಗಿ ಕೂಗಿ ಸಪೋರ್ಟ್ ಮಾಡುತ್ತಿದ್ದರು. ನನಗೆ ಗಾಯವಾದಾಗ ಅವರ ಜೀವವೇ ಹಾರಿ ಹೋಗುತ್ತಿತ್ತು. ರಿಂಗ್ಸ್ ಒಳಗೆ ಚಿರತೆ ಹಾಗೆ ಓಡಾಡುವಾಗ ನನಗೆ ಜಗತ್ತು ಎಲ್ಲವೂ ಮರೆತುಹೋಗುತ್ತಿತ್ತು. ಆದರೆ ನನಗೆ ಯಾವಾಗ ಏನು ಬೇಕು ಅನ್ನುವುದು ನನಗಿಂತ ಮೊದಲೇ ಅಪ್ಪನಿಗೆ ಗೊತ್ತಿರುತ್ತಿತ್ತು! ಅವರ ಸಪೋರ್ಟ್ ಇಲ್ಲ ಅಂದರೆ ನಾನಿಷ್ಟು ಎತ್ತರಕ್ಕೆ ಏರಲು ಸಾಧ್ಯವೇ ಇರಲಿಲ್ಲ” ಎಂದಾಕೆ ಹೇಳುವಾಗ ಅಪ್ಪ ಜೈ ಭಗವಾನ್ ಎದೆ ಉಬ್ಬಿಸಿ ನಿಂತಿದ್ದರು.

ತನ್ನ ಕೊರಳ ಚಿನ್ನದ ಪದಕವನ್ನು ಆಕೆ ತೆಗೆದು ಅಪ್ಪನ ಕೊರಳಿಗೆ ಹಾಕಿ ಅಪ್ಪನ ಕಣ್ಣೀರು ಒರೆಸಿದ್ದಳು. ಅಪ್ಪ ಅವಳ ನೆತ್ತಿಯ ಮೇಲೆ ಹೂ ಮುತ್ತು ಸುರಿದು ಜಗತ್ತನ್ನೇ ಮರೆತು ನಿಂತಿದ್ದರು! ಅವರ ಜೀವಮಾನದ ಕನಸು ಅಂದು ನಿಜವಾಗಿತ್ತು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆ ಕ್ರಾಂತಿಕಾರಿ ಸಾವಿನಲ್ಲಿಯೂ ತನ್ನ ಮಾತನ್ನು ಉಳಿಸಿಕೊಂಡಿದ್ದ!

Exit mobile version