1921ರ ಸೆಪ್ಟೆಂಬರ್ 21ರಂದು ಗಾಂಧೀಜಿಯವರು ಮಧುರೆಗೆ ಭೇಟಿ ಕೊಡುತ್ತಾರೆ. ಅವರನ್ನು ನೋಡಲು ಸಾವಿರಾರು ಶ್ರಮಿಕ ವರ್ಗದ ಜನರು ಅಲ್ಲಿಗೆ ಬಂದಿದ್ದರು. ಅವರೆಲ್ಲ ಒಂದು ತುಂಡು ಪಂಚೆ, ಹೆಗಲ ಮೇಲೆ ಒಂದು ತುಂಡು ಬೈರಾಸು ಹಾಕಿಕೊಂಡು ಬಂದಿದ್ದರು. ದೇಶದಲ್ಲಿ ಆಗ ಇದ್ದ ತೀವ್ರವಾದ ಬಡತನ ಮತ್ತು ಹಸಿವು ಗಾಂಧೀಜಿಯವರನ್ನು ಮಾನಸಿಕವಾಗಿ ಅಲ್ಲಾಡಿಸಿಬಿಟ್ಟಿತು. ರಾತ್ರಿ ಇಡೀ ಅವರಿಗೆ ನಿದ್ದೆ ಬರಲಿಲ್ಲ.
“ನನ್ನ ಬದುಕಿನಲ್ಲಿ ಇನ್ನುಳಿದ ದಿನಗಳಲ್ಲಿ ನಾನು ರಾಟೆಯಿಂದ ನಾನೇ ನೂಲು ತೆಗೆದು ಮಾಡಿದ ಪಂಚೆ ಮತ್ತು ಅಂಗ ವಸ್ತ್ರ ಬಿಟ್ಟು ಬೇರೇನೂ ಧರಿಸುವುದಿಲ್ಲ!” ಎಂದು ಪ್ರತಿಜ್ಞೆ ಮಾಡಿದರು ಮತ್ತು ಅದರ ಹಾಗೆಯೇ ಬದುಕಿದರು. ಬ್ರಿಟಿಷರು ಅವರನ್ನು ‘ಅರೆಬೆತ್ತಲೆ ಫಕೀರ’ ಎಂದು ಹೀಗಳೆದರು. ಆದರೆ ಗಾಂಧೀಜಿಯವರ ಡ್ರೆಸ್ ಕೋಡ್ ಬದಲಾಗಲೆ ಇಲ್ಲ!
ಗಾಂಧೀಜಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಖಾದಿ ಪಂಚೆಯನ್ನು ಕೂಡ ಒಂದು ಆಯುಧವನ್ನಾಗಿ ಮಾಡಿದರು. ಮುಂದೆ ದುಂಡು ಮೇಜಿನ ಪರಿಷತ್ ಸಭೆಯಲ್ಲಿ ಭಾಗವಹಿಸಲು ಗಾಂಧೀಜಿ ಇಂಗ್ಲೆಂಡಿಗೆ ಹೋದರು. ವಿನ್‌ಸ್ಟನ್ ಚರ್ಚಿಲ್ ಅವರು ಗಾಂಧೀಜಿ ಜೊತೆಗೆ ಒಂದೇ ಟೇಬಲ್ ಮೇಲೆ ಊಟ ಮಾಡಲು ಒಪ್ಪಲಿಲ್ಲ! ಗಾಂಧೀಜಿ ತಲೆ ಕೆಡಿಸಿಕೊಳ್ಳಲಿಲ್ಲ.
ಮುಂದೆ ಇಂಗ್ಲೆಂಡ್ ಸಾಮ್ರಾಟನ ಮುಂದೆ ಅವರು ಅದೇ ಡ್ರೆಸ್ ಹಾಕಿಕೊಂಡು ಹೋದರು. ಹೊರಗೆ ಬರುವಾಗ ಅವರನ್ನು ಪತ್ರಿಕೆಯವರು ” ಗಾಂಧೀಜಿ. ನಿಮಗೆ ಈ ಡ್ರೆಸಲ್ಲಿ ಮಹಾರಾಜರ ಮುಂದೆ ಕುಳಿತುಕೊಳ್ಳಲು ಸಂಕೋಚ ಆಗಲಿಲ್ಲವೆ?” ಎಂದು ಕೇಳಿದರು.
ಗಾಂಧೀಜಿ ನಗುತ್ತಾ “ನನಗೆ ಯಾಕೆ ಸಂಕೋಚ ಆಗಬೇಕು? ನಮ್ಮಿಬ್ಬರಿಗೂ ಸಾಕಾಗುವಷ್ಟು ಡ್ರೆಸ್ಸನ್ನು ಅವರೊಬ್ಬರೇ ಧರಿಸಿದ್ದರು!” ಎಂದರು. ಪರೋಕ್ಷವಾಗಿ ಇಂಗ್ಲೆಂಡ್ ಭಾರತದ ಸಂಪತ್ತನ್ನು ಲೂಟಿ ಮಾಡಿ ಎಷ್ಟು ಶ್ರೀಮಂತ ಆಗಿದೆ ಎಂದವರು ಹೇಳಿದ್ದರು.
ಒಂದು ಕೋಲು, ಒಂದು ಕನ್ನಡಕ, ಒಂದು ಗಡಿಯಾರ, ಒಂದು ಪಂಚೆ, ಒಂದು ಚರಕ, ಒಂದು ಭಗವದ್ಗೀತೆ ಇವುಗಳನ್ನು ರಾಷ್ಟ್ರೀಯ ಸಂಕೇತಗಳನ್ನಾಗಿ ಮಾಡುವ ಶಕ್ತಿ ಕೇವಲ ಗಾಂಧೀಜಿಗೆ ಇತ್ತು! ಆದ್ದರಿಂದ ಅವರು ಮಹಾತ್ಮ ಆದರು.
ಇದನ್ನೂ ಓದಿ| ರಾಜಮಾರ್ಗ ಅಂಕಣ| ಮಧ್ಯ ರಾತ್ರಿ ಎದ್ದುಬಂದು ಎರಡು ಹಾಡು ಹಾಡಿದ್ದರು ಸುಬ್ಬುಲಕ್ಷ್ಮಿ, ಯಾಕೆಂದರೆ..