Site icon Vistara News

ರಾಜ ಮಾರ್ಗ ಅಂಕಣ | ವೀರ ಸಾವರ್ಕರ್ ಹೇಳಿದ ಗಜೇಂದ್ರ ಮೋಕ್ಷದ ಕತೆ

savarkar

ನಮಗೆಲ್ಲ ತಿಳಿದಿರುವಂತೆ ವೀರ ಸಾವರ್ಕರ್ ಅವರು ಭಾರತದ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು. ಅವರ ಪೂರ್ತಿ ಹೆಸರು ವಿನಾಯಕ ದಾಮೋದರ ಸಾವರ್ಕರ್. ಲಂಡನ್ ನಗರಕ್ಕೆ ಬ್ಯಾರಿಸ್ಟರ್ ಪದವಿ ಓದಲು ಹೋಗಿದ್ದ ಅವರು ಅಲ್ಲಿಯ ಭಾರತ ಭವನದಲ್ಲಿ ಶಿಕ್ಷಣ ಪಡೆಯಲು ಬಂದಿದ್ದ ನೂರಾರು ಭಾರತೀಯ ಯುವಕರಿಗೆ ತರಬೇತಿ ಕೊಟ್ಟು ಅವರನ್ನು ಕ್ರಾಂತಿಕಾರಿಗಳಾಗಿ ರೂಪಿಸಿದವರು. ಅವರ ಬದುಕಿನಲ್ಲಿ ನೂರಾರು ಪ್ರೇರಣಾದಾಯಕ ಘಟನೆಗಳು ದೊರೆಯುತ್ತವೆ. ಅದರಲ್ಲಿ ಒಂದು ಘಟನೆ ಇಲ್ಲಿದೆ.

ಅವರನ್ನು ಕ್ರಾಂತಿಕಾರಿಗಳಿಗೆ ಪ್ರೇರಣೆ ಕೊಟ್ಟ ಕಾರಣಕ್ಕೆ ಇಂಗ್ಲೆಂಡಿನಲ್ಲಿ ಬಂಧಿಸಲಾಯಿತು. ಅಲ್ಲಿನ ಪೊಲೀಸರು ಅವರನ್ನು ಚಿತ್ರಹಿಂಸೆ ಕೊಟ್ಟು ಬಾಯಿ ಬಿಡಿಸುವ ಶತಪ್ರಯತ್ನ ಮಾಡಿದ್ದರೂ ಅವರು ಬಗ್ಗುವವರೇ ಅಲ್ಲ!

ಅದೇ ಹೊತ್ತಿಗೆ ಅವರಿಗೆ ಅವರ ಭಾರತದ ಮನೆಯಿಂದ ಪತ್ರ ಬರುತ್ತದೆ. ಅದು ಅವರ ಮಾತೃ ಸಮಾನರಾದ ಅತ್ತಿಗೆ ಬರೆದ ಪತ್ರ. ಅದರ ಒಕ್ಕಣೆ ಹೇಗಿತ್ತು.

“ವಿನಾಯಕ, ನೀನು ಬ್ಯಾರಿಸ್ಟರ್ ಓದಲು ಹೋಗಿ ಜೈಲು ಪಾಲಾದ ವಿಷಯ ತಿಳಿಯಿತು. ಇಲ್ಲಿ ನಮ್ಮ ಪರಿಸ್ಥಿತಿ ತುಂಬಾ ಕೆಟ್ಟು ಹೋಗಿದೆ. ಪೊಲೀಸರು ಎರಡು ದಿನಕ್ಕೊಮ್ಮೆ ಬಂದು ನಮ್ಮನ್ನು ವಿಚಾರಣೆಯ ನೆಪದಲ್ಲಿ ಹೊಡೆಯುತ್ತಿದ್ದಾರೆ. ನಮ್ಮ ಗಂಜಿಯ ಪಾತ್ರೆ ಒಡೆದು ಹಾಕಿದ್ದಾರೆ. ಊಟ ಮಾಡದೇ ತುಂಬಾ ದಿನ ಆಯ್ತು. ಎಲ್ಲರೂ ಕಷ್ಟ ಪಡುತ್ತ ಇದ್ದೇವೆ. ನೀನು ಭಾರತಕ್ಕೆ ಬರುವುದು ಒಳ್ಳೆಯದು!”

ಆ ಪತ್ರವನ್ನು ಓದಿ ಸಾವರ್ಕರ್ ದುಃಖವನ್ನು ಸಹಿಸಲು ಸಾಧ್ಯ ಆಗದೆ ಜೋರಾಗಿ ಅಳುತ್ತಾರೆ. ನಂತರ ತನ್ನನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ. ಆಗಲೇ ಕೂತು ತನ್ನ ಅತ್ತಿಗೆಗೆ ಮರು ಉತ್ತರ ಬರೆಯುತ್ತಾರೆ. ಅತ್ತಿಗೆಗೆ ಧೈರ್ಯ ಹೇಳುತ್ತಾರೆ. ತಾನು ದೇಶಕ್ಕೆ ಸಮರ್ಪಣೆ ಆಗಲು ಆಶೀರ್ವಾದ ಮಾಡಿ ಅತ್ತಿಗೆ ಎಂದು ವಿನಂತಿ ಮಾಡುತ್ತಾರೆ. ಅದಕ್ಕೆ ಪೂರಕವಾಗಿ ಅವರು ಭಾರತೀಯ ಪುರಾಣಗಳಲ್ಲಿ ಅಡಕ ಆಗಿರುವ ಗಜೇಂದ್ರ ಮೋಕ್ಷದ ಕತೆ ಹೇಳುತ್ತಾರೆ.

ಆನೆಯೊಂದು ತಾವರೆ ತುಂಬಿದ ಕೊಳದಲ್ಲಿ ಒಂದು ಮೊಸಳೆಯಿಂದ ಬಂಧಿಸಲ್ಪಡುತ್ತದೆ. ಮೊಸಳೆ ನೀರಲ್ಲಿ ಬಂದು ಆನೆಯ ಕಾಲನ್ನು ಕಚ್ಚಿ ನೀರಿಗೆ ಎಳೆಯಲು ತೊಡಗುತ್ತದೆ. ಆಗ ಗಜೇಂದ್ರನು ಶ್ರೀ ಹರಿಯ ಸ್ಮರಣೆ ಮಾಡುತ್ತಾನೆ.

ಆಗ ಪ್ರತ್ಯಕ್ಷನಾದ ಶ್ರೀ ಹರಿಯು ಮೊಸಳೆಯನ್ನು ಕೊಂದು ಗಜೇಂದ್ರನನ್ನು ಬಿಡುಗಡೆ ಮಾಡುತ್ತಾನೆ. ಆಗ ಧನ್ಯತಾ ಭಾವದಿಂದ ಗಜೇಂದ್ರನು ಆ ತಿಳಿಗೊಳದಿಂದ ಒಂದು ತಾವರೆಯನ್ನು ಕಿತ್ತು ಹರಿಗೆ ಅರ್ಪಣೆ ಮಾಡುತ್ತಾನೆ. ಅದು ದೇವರ ಪಾದವನ್ನು ಸೇರುತ್ತದೆ ಮತ್ತು ಅಮರತ್ವವನ್ನು ಪಡೆಯುತ್ತದೆ. ಉಳಿದ ಅಷ್ಟೂ ತಾವರೆಗಳು ಆ ಕ್ಷಣಕ್ಕೆ ಖುಷಿ ಪಟ್ಟರೂ ಸಂಜೆ ಆಗುವಾಗ ಬಾಡಿ ಹೋಗುತ್ತವೆ. ನಾನು ಹರಿಯ ಪಾದವನ್ನು ಸಮರ್ಪಣೆ ಆಗುವ ತಾವರೆ ಆಗಲು ಬಯಸುತ್ತೇನೆ! ನನ್ನ ಅಗತ್ಯ ಈಗ ಕುಟುಂಬಕ್ಕಿಂತ ದೇಶಕ್ಕೆ ಜಾಸ್ತಿ ಇದೆ- ಎಂದು ಅತ್ತಿಗೆಗೆ ಪತ್ರ ಬರೆದರು.

ಆ ಪತ್ರವನ್ನು ಓದಿದ ಅತ್ತಿಗೆ ತನ್ನ ಕಣ್ಣೀರು ಒರೆಸಿಕೊಂಡು ತನ್ನ ಮೈದುನನ ಬಗ್ಗೆ ಹೆಮ್ಮೆ ಪಡುತ್ತಾರೆ ಮತ್ತು ಎಷ್ಟು ಕಷ್ಟ ಬಂದರೂ ನಾವು ಸಹಿಸುತ್ತೇವೆ. ನಿನ್ನ ಹೋರಾಟ ಮುಂದುವರಿಸು ಎಂದು ಮತ್ತೆ ಪತ್ರ ಬರೆಯುತ್ತಾರೆ.

ಈ ವರ್ಷ ಆಗಸ್ಟ್ 15ರಂದು ರಾಷ್ಟ್ರ ಧ್ವಜ ಹಾರಿಸುವ ಸಂದರ್ಭ ನಮಗೆ ಆ ಕುಟುಂಬದ ತ್ಯಾಗವು ಒಮ್ಮೆ ಆದರೂ ನೆನಪಾಗಲಿ. ಜೈ ಹಿಂದ್.

ಇದನ್ನೂ ಓದಿ| ರಾಜ ಮಾರ್ಗ ಅಂಕಣ | ಅವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದಾಗ ಹುಟ್ಟಿದ್ದು ರಾಮಾನುಜಂ ಸಂಖ್ಯೆ!

Exit mobile version