ಭಾರತ ಕ್ರಿಕೆಟ್ ತಂಡದ ಧ್ರುವ ತಾರೆ ಸಚಿನ್ ತೆಂಡೂಲ್ಕರ್ ಅವರ ಬದುಕನ್ನು ಅಧ್ಯಯನ ಮಾಡಿದಾಗ ನಮಗೆ ನೂರಾರು ಸ್ಫೂರ್ತಿದಾಯಕ ಘಟನೆಗಳು ದೊರೆಯುತ್ತವೆ. ಅದರಲ್ಲಿ ಒಂದು ಘಟನೆ ಇದೀಗ ನಿಮ್ಮ ಮುಂದೆ. ಅದು 1998ರ ಹೊತ್ತು. ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಮೂರು ಟೆಸ್ಟ್ ಪಂದ್ಯಗಳಿದ್ದವು. ಆಗ ಸಚಿನ್ ತೆಂಡೂಲ್ಕರ್ ಅವರು ಉತ್ತುಂಗದಲ್ಲಿದ್ದರು. ಆದರೆ, ಅಲ್ಲಿ ಆಸ್ಟ್ರೇಲಿಯಾದಲ್ಲಿ ಶೇನ್ ವಾರ್ನ್ ಅವರ ಘಾತಕ ಸ್ಪೀನ್ ಎಂಥವರನ್ನಾದರೂ ಅಡ್ಡಡ್ಡ ಮಲಗಿಸುವ ಶಕ್ತಿಯನ್ನು ಹೊಂದಿತ್ತು.
ಆಗೆಲ್ಲ ಪತ್ರಿಕೆಗಳಲ್ಲಿ ಅದೇ ಸುದ್ದಿ ಶೇನ್ ವಾರ್ನ್‌ನನ್ನು ಎದುರಿಸುವುದು ಹೇಗೆ? ಅದರಲ್ಲೂ ಭಾರತದ ಸ್ಟಾರ್ ಬ್ಯಾಟ್ಸ್‌ಮ್ಯಾನ್ ಸಚಿನ್‌ಗೆ ಕಡಿವಾಣ ಹಾಕಬಲ್ಲರೇ ವಾರ್ನ್ ಎಂಬ ಕುತೂಹಲ. ಹೆಚ್ಚಿನವರು, ಸಚಿನ್ ಆಟ ವಾರ್ನ್ ಮುಂದೆ ನಡೆಯುವುದಿಲ್ಲ ಎಂದೇ ಮಾತನಾಡಿಕೊಳ್ಳುತ್ತಿದ್ದರು.
ಮೊದಲ ಟೆಸ್ಟ್ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಶುರುವಾಗಿತ್ತು. ಶೇನ್ ವಾರ್ನ್ ಭಾರತ ತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿದ್ದರು. ರಾಹುಲ್ ದ್ರಾವಿಡ್, ಮಹಮ್ಮದ್ ಅಜರುದ್ದೀನ್, ತೆಂಡೂಲ್ಕರ್, ಶ್ರೀನಾಥ್-ಹೀಗೆ ನಾಲ್ಕು ವಿಕೆಟ್ ಕಿತ್ತಿದ್ದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ೨೫೭ಕ್ಕೆ ಆಲೌಟ್ ಆಗಿತ್ತು. ತೆಂಡೂಲ್ಕರ್ ಆವತ್ತು ಐದನೇ ಎಸೆತಕ್ಕೇ ಔಟ್ ಆಗಿದ್ದರು. ಜನ ಮಾತನಾಡಿಕೊಳ್ಳುತ್ತಿದ್ದುದು ನಿಜವಾಗಿ ಹೋಗಿತ್ತು.
ಒಂದು ಇನಿಂಗ್ಸ್ ಮುಗಿದ ಕೂಡಲೇ ಸಚಿನ್ ರವಿ ಶಾಸ್ತ್ರಿಯನ್ನು ಸಂಪರ್ಕಿಸಿದರು. ಏನು ಮಾಡುವುದೀಗ ಎಂದು ಕೇಳಿದರು. ನಾನಾಗಿದ್ದರೆ ಒಂದು ಹೆಜ್ಜೆ ಮುಂದಿಟ್ಟು ಡಿಫೆನ್ಸ್ ಮಾಡುತ್ತಿದ್ದೆ ಎಂದು ಹೇಳಿದ್ದರು ರವಿ ಶಾಸ್ತ್ರಿ (ಅವರು ಇಂಥ ಆಟಕ್ಕೆ ಫೇಮಸ್). ಸಚಿನ್‌ಗೆ ಇದು ಸರಿ ಎನಿಸಿತು. ಆದರೆ, ತೆಂಡೂಲ್ಕರ್ ಆಗ ಡಿಫೆನ್ಸ್ ಮೂಡ್‌ನಲ್ಲಿ ಇರಲಿಲ್ಲ. ಅವರಿಗೆ ಅಟ್ಯಾಕಿಂಗ್ ಬೇಕಾಗಿತ್ತು. ಶೇನ್ ವಾರ್ನ್‌ನನ್ನು ಎದುರಿಸುವ ಮುನ್ನ ಅವನಂತೆ ಬೌಲ್ ಮಾಡುವವರನ್ನು ಎದುರಿಸಬೇಕು ಎಂದು ಯೋಚಿಸಿದರು.
ಆಗ ಅವರ ಹುಡುಕಾಟಕ್ಕೆ ಸಿಕ್ಕಿದ್ದು, ತಮಿಳುನಾಡಿನ ಲೆಜೆಂಡರಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್. ಅವರನ್ನು ಭೇಟಿ ಮಾಡಿ ನನಗೆ ನೆಟ್‌ನಲ್ಲಿ ಬೌಲಿಂಗ್ ಮಾಡಬಹುದೇ ಎಂದು ವಿನಂತಿಸಿಕೊಂಡರು. ಆವತ್ತು ಸಚಿನ್ ತೆಂಡೂಲ್ಕರ್ ನೆಟ್‌ನಲ್ಲಿ ಒಬ್ಬ ಪುಟ್ಟ ಹುಡುಗನಂತೆ ಎಲ್ ಶಿವರಾಮಕೃಷ್ಣನ್ ಅವರಿಂದ ಬೌಲಿಂಗ್ ಮಾಡಿಸಿಕೊಂಡರು. ಕೊನೆಯ ಕ್ಷಣದಲ್ಲಿ ದಿಕ್ಕು ತಪ್ಪಿಸುತ್ತಿದ್ದ ಬಾಲ್‌ಗಳನ್ನು ಹೇಗೆ ನಿಭಾಯಿಸುವುದು ಎನ್ನುವುದನ್ನು ಅರ್ಥ ಮಾಡಿಕೊಂಡರು. ಇದರ ಫಲ ಎರಡನೇ ಇನ್ನಿಂಗ್ಸ್‌ನನ್ನೇ ಸಿಕ್ಕಿಬಿಟ್ಟಿತು. ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ರನ್‌ಗೆ ಔಟಾಗಿದ್ದ ತೆಂಡೂಲ್ಕರ್ ಎರಡನೇ ಇನ್ನಿಂಗ್ಸ್‌ನಲ್ಲಿ ೧೫೫ ರನ್ ಬಾರಿಸಿ ನಾಟೌಟ್ ಆಗಿ ಉಳಿದರು. ಶೇನ್ ವಾರ್ನ್ ವಿರುದ್ಧ ಅಧಿಕಾರಯುತ ಆಟವಾಡಿದರು. ಭಾರತ ಎರಡನೇ ಇನಿಂಗ್ಸ್‌ನಲ್ಲಿ ೪೧೮-೪ಕ್ಕೆ ಡಿಕ್ಲೇರ್ ಮಾಡಿಕೊಂಡಿತು. ಈ ಪಂದ್ಯವನ್ನು ಭಾರತ ೧೭೯ ರನ್‌ಗಳಿಂದ ಜಯಿಸಿತು. ಮುಂದೆ ಎರಡನೇ ಟೆಸ್ಟನ್ನೂ ಭಾರತವೇ ಗೆದ್ದಿತು.
ತೆಂಡೂಲ್ಕರ್ ಇಷ್ಟಕ್ಕೇ ನಿಲ್ಲಿಸಲಿಲ್ಲ. ಶಿವರಾಮಕೃಷ್ಣನ್ ಅವರನ್ನು ಮುಂಬಯಿಗೆ ಕರೆಸಿಕೊಂಡರು. ಅಲ್ಲಿನ ಬ್ರೆಬೋರ್ನ್ ಸ್ಟೇಡಿಯಂಗೆ ಕರೆದೊಯ್ದು ಮೂರು ಮೂರು ದಿನ ಇಬ್ಬರೂ ಬೆವರು ಹರಿಸಿದರು. ಸಚಿನ್ ಒಬ್ಬ ಪುಟ್ಟ ಹುಡುಗನಂತೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದರು. ಸಾಲದ್ದಕ್ಕೆ ಸ್ವಲ್ಪ ಅದೇ ಸ್ಟೈಲಲ್ಲಿ ಬೌಲ್ ಮಾಡುವ ನೀಲೇಶ್ ಕುಲಕರ್ಣಿ, ರಾಜೇಶ್ ಪೊವಾರ್, ಸಾಯಿರಾಜ್ ಬಹುತುಳೆ ಅವರನ್ನು ಕೂಡಾ ಕರೆಸಿಕೊಂಡು ಸಹಾಯ ಕೇಳಿದರು.
ನೆನಪಿಡಿ, ಸಚಿನ್ ಆಗಲೇ ವಿಶ್ವಮಾನ್ಯ ಬ್ಯಾಟರ್ ಆಗಿದ್ದ! ಆದರೆ ಒಂದಿಷ್ಟೂ ಇಗೋ ಇಲ್ಲದೆ ತಾಂತ್ರಿಕತೆಯನ್ನು ಕಲಿತ ಮತ್ತು ಆತ್ಮವಿಶ್ವಾಸವನ್ನು ವೃದ್ದಿಸಿಕೊಂಡರು.
ಮುಂದೆ ಏನಾಯಿತು ಎನ್ನುವುದನ್ನು ಇಡೀ ಜಗತ್ತು ನೋಡಿತು. ಶೇನ್ ವಾರ್ನ್ ಬೌಲಿಂಗ್ ಬಂದಾಗಲೆಲ್ಲ ಸಚಿನ್ ಬ್ಯಾಟನಿಂದ ಬೌಂಡರಿ, ಸಿಕ್ಸರ್ ಗಳು ಸಿಡಿಯಲು ಆರಂಭ ಆದವು! ಸ್ವತಃ ಶೇನ್ ವಾರ್ನ್ ನನಗೆ ನಿದ್ದೆಯಲ್ಲಿ ಕೂಡ ಸಚಿನ್ ತೆಂಡೂಲ್ಕರ್ ಬಂದು ಸಿಕ್ಸರ್ ಹೊಡೆದ ಹಾಗೆ ಕನಸು ಬೀಳುತ್ತಿದೆ ಎಂದು ಹೇಳಿಕೆಯನ್ನು ಕೊಟ್ಟ!
ಸಚಿನ್ ತೆಂಡೂಲ್ಕರ್ ಗ್ರೇಟ್ ಆಗುವುದು ಇಂತಹ ಕಾರಣಗಳಿಗೆ!
ಇದನ್ನೂ ಓದಿ| ಎವರೆಸ್ಟ್ ವೀರ ಎಡ್ಮಂಡ್ ಹಿಲರಿ ಹೇಳಿದ ಸವಾಲು ಎದುರಿಸುವ ಪಾಠ