Site icon Vistara News

ರಾಜಮಾರ್ಗ ಅಂಕಣ| ಮಧ್ಯ ರಾತ್ರಿ ಎದ್ದುಬಂದು ಎರಡು ಹಾಡು ಹಾಡಿದ್ದರು ಸುಬ್ಬುಲಕ್ಷ್ಮಿ, ಯಾಕೆಂದರೆ..

MS Subbulkshmi

ಭಾರತರತ್ನ ಪ್ರಶಸ್ತಿ ಪಡೆದ ಕರ್ನಾಟಕ ಸಂಗೀತದ ದಿಗ್ಗಜರಾದ ಎಂ.ಎಸ್.ಸುಬ್ಬುಲಕ್ಷ್ಮಿ ಅಮ್ಮ ಯಾರಿಗೆ ಗೊತ್ತಿಲ್ಲ ಹೇಳಿ? ಕರ್ನಾಟಕ ಸಂಗೀತದ ಶಕ್ತಿಯನ್ನು ಅರಿಯಬೇಕಾದರೆ ಅವರು ಹಾಡಿದ ಹಾಡುಗಳನ್ನು ಮತ್ತು ಸುಪ್ರಭಾತಗಳನ್ನು ಕೇಳಬೇಕು. ವಿಶ್ವ ಪ್ರಸಿದ್ದಿ ಪಡೆದ ಮೀರಾ ಸಿನೆಮಾದಲ್ಲಿ ಮೀರಾ ಪಾತ್ರವನ್ನು ವಹಿಸಿದ ಅವರು ಹಾಡಿದ ಮೀರಾ ಭಜನ್‌ಗಳನ್ನು ಮರೆಯಲು ಸಾಧ್ಯವೇ ಇಲ್ಲ.

ಅವರ ಬದುಕಿನ ನೂರಾರು ಘಟನೆಗಳು ಪ್ರತೀ ಒಬ್ಬ ಕಲಾವಿದರ ಜೀವನದ ಮಾರ್ಗದರ್ಶಿ ಸೂತ್ರಗಳು. ಅವುಗಳಲ್ಲಿ ಒಂದು ಘಟನೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಆಗ ಸುಬ್ಬುಲಕ್ಷ್ಮಿ ಅಮ್ಮನಿಗೆ ಎಪ್ಪತ್ತು ವರ್ಷ ದಾಟಿತ್ತು. ಆದರೂ ವೇದಿಕೆಯಲ್ಲಿ ಹಾಡಲು ಕೂತರೆ ಪ್ರಪಂಚವನ್ನೇ ಮರೆತು ಹಾಡುತ್ತಿದ್ದರು. ಒಮ್ಮೆ ಕೊಯಮತ್ತೂರಲ್ಲಿ ಒಂದು ಸಂಗೀತ ಕಛೇರಿ ಏರ್ಪಾಡಾಗಿತ್ತು. ಅಮ್ಮ ಸಾವಿರಾರು ಪ್ರೇಕ್ಷಕರ ಮುಂದೆ ಎರಡೂವರೆ ಗಂಟೆ ಮೈ ಮರೆತು ಹಾಡಿದರು. ನಂತರ ತಮ್ಮ ಕೊಠಡಿಗೆ ಬಂದು ಊಟ ಮುಗಿಸಿ ಮಲಗಿದರು. ಅಮ್ಮನಿಗೆ ತುಂಬಾ ಆಯಾಸ ಆಗಿತ್ತು.

ಮಧ್ಯರಾತ್ರಿ ಯಾರೋ ಬಾಗಿಲು ಬಡಿದ ಸದ್ದು ಕೇಳಿ ಅಮ್ಮ ಎದ್ದು ಬಾಗಿಲು ತೆರೆದರು. ಹೊರಗಡೆ ತುಂಬಾ ಪ್ರಾಯ ಆದ ವೃದ್ಧ ದಂಪತಿಗಳು ನಿಂತಿದ್ದರು. ಅಮ್ಮ ಅವರನ್ನು ಒಳಗೆ ಬರಲು ಹೇಳಿದರು. ಆ ವೃದ್ಧ ದಂಪತಿಗಳು ಅಮ್ಮನ ಪಾದ ಸ್ಪರ್ಶ ಮಾಡಿ ” ಅಮ್ಮ, ನಾವು ನಿಮ್ಮ ಸಂಗೀತ ಕಛೇರಿ ಕೇಳಬೇಕು ಎಂದು ಹತ್ತಾರು ಕಿಲೋಮೀಟರ್ ದೂರದಿಂದ ನಡೆದುಕೊಂಡು ಬಂದೆವು. ನಾವು ಬರುವಾಗ ತಡ ಆಯಿತು. ನಿಮ್ಮ ಕಛೇರಿ ಮಿಸ್ ಆಯಿತು. ಕೊನೆಗೆ ನಿಮ್ಮ ಪಾದಸ್ಪರ್ಶ ಆದರೂ ಮಾಡಿ ಹೋಗಬೇಕು ಅಂತ ನಿರ್ಧಾರ ಮಾಡಿ ಇಲ್ಲಿಯವರೆಗೆ ಬಂದೆವು” ಅಂದರು.

ಅಮ್ಮನ ಮನಸ್ಸು ಕರಗಿ ಹೋಯಿತು. ಅವರನ್ನು ಚಾಪೆ ಹಾಕಿ ಕೆಳಗೆ ಕೂರಿಸಿದರು. ತಾವೂ ಕೆಳಗೆ ಕೂತರು. ಮಧ್ಯರಾತ್ರಿ ಎಲ್ಲಿಂದಲೋ ಅವರಿಗಾಗಿ ಎರಡು ಊಟ ತರಿಸಿ ಊಟ ಮಾಡಲು ಹೇಳಿದರು.

ನಂತರ ಕೊಠಡಿಯ ಮೂಲೆಯಲ್ಲಿದ್ದ ತಂಬೂರಿಯನ್ನು ತೊಡೆಯ ಮೇಲೆ ಇಟ್ಟು ಶ್ರುತಿ ಮಾಡಿದರು. ಮತ್ತೆ ಅಂದು ಕಚೇರಿಯಲ್ಲಿ ಹಾಡಿದ್ದ ಎರಡು ಹಾಡುಗಳನ್ನು ಆ ಎರಡು ಪ್ರೇಕ್ಷಕರನ್ನು ಮುಂದೆ ಕೂರಿಸಿ ಮತ್ತೆ ಹಾಡಿದರು. ಆ ವೃದ್ಧ ದಂಪತಿಗಳ ಕಣ್ಣಲ್ಲಿ ಆನಂದಬಾಷ್ಪ ಸುರಿಯಿತು.

ಆ ವೃದ್ಧ ದಂಪತಿಯನ್ನು ಸುಬ್ಬು ಲಕ್ಷ್ಮಿ ಅಮ್ಮ ಅಂದು ತನ್ನ ಕೊಠಡಿಯಲ್ಲಿಯೇ ಮಲಗಿಸಿ ಬೆಳಿಗ್ಗೆ ಬೆಳಕಾದ ನಂತರ ಅವರ ಊರಿಗೆ ಬೀಳ್ಕೊಟ್ಟರು. ಒಬ್ಬ ಕಲಾವಿದೆ ಎಷ್ಟೇ ಎತ್ತರದ ಸಾಧನೆಯನ್ನು ಮಾಡಿದರೂ ಕಲೆಯನ್ನು ಮತ್ತು ತನ್ನ ಅಭಿಮಾನಿಗಳನ್ನು ಹೇಗೆ ಗೌರವಿಸಬೇಕು ಎಂದು ನಾವು ಅವರಿಂದ ಕಲಿಯಬೇಕು.

ಇದನ್ನೂ ಓದಿ| ರಾಜ ಮಾರ್ಗ ಅಂಕಣ: ಶೇನ್‌ ವಾರ್ನ್‌ ಅಂದರೆ ಹೆದರುತ್ತಿದ್ದ ಸಚಿನ್‌ ತಿರುಗಿಬಿದ್ದಿದ್ದು ಹೇಗೆ?
ಇದನ್ನೂ ಓದಿ| ಎವರೆಸ್ಟ್‌ ವೀರ ಎಡ್ಮಂಡ್ ಹಿಲರಿ ಹೇಳಿದ ಸವಾಲು ಎದುರಿಸುವ ಪಾಠ

Exit mobile version