Site icon Vistara News

ರಾಜ ಮಾರ್ಗ ಅಂಕಣ | ಅವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದಾಗ ಹುಟ್ಟಿದ್ದು ರಾಮಾನುಜಂ ಸಂಖ್ಯೆ!

srinivasa ramanujam

ಜಗತ್ತು ಕಂಡ ಮಹಾ ಮೇಧಾವಿ ಗಣಿತಜ್ಞರಾದ ಶ್ರೀನಿವಾಸ್ ರಾಮಾನುಜಂ ಹುಟ್ಟಿದ್ದು ತಮಿಳುನಾಡಿನ ಕುಂಭಕೋಣಂನಲ್ಲಿ. ಅವರಿಗೆ ಬಾಲ್ಯದಿಂದ ಗಣಿತ ಬಿಟ್ಟರೆ ಬೇರೆ ಜಗತ್ತೇ ಇರಲಿಲ್ಲ. ತನ್ನ ಮನೆಯ ಜಗಲಿಯ ಮೇಲೆ ಕೂತು ಸ್ಲೇಟ್ ಹಿಡಿದು ನೂರಾರು ಗಣಿತ ಸಮಸ್ಯೆಗಳನ್ನು ಬಿಡಿಸುತ್ತಾ ಅದನ್ನು ಪುಸ್ತಕದಲ್ಲಿ ನೀಟಾಗಿ ಬರೆದು ಇಡುತ್ತಿದ್ದರು.

ಅಂತಹ ಮಹಾಮೇಧಾವಿ ಪಿಯುಸಿ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆದರು! ಏಕೆಂದರೆ ಅವರು ಗಣಿತ ಬಿಟ್ಟು ಬೇರೆ ವಿಷಯಗಳನ್ನು ಓದುತ್ತಲೇ ಇರಲಿಲ್ಲ. ಆದರೆ ಬೇರೆ ಸಣ್ಣ ಸಣ್ಣ ಉದ್ಯೋಗ ಮಾಡುತ್ತಾ ಹೊಟ್ಟೆಪಾಡು ಮಾಡುತ್ತಿದ್ದ ರಾಮಾನುಜಂ ಗಣಿತವನ್ನು ಬಿಡಲಿಲ್ಲ. ತನ್ನ ಸಂಶೋಧನೆಯ ಅಷ್ಟೂ ಟಿಪ್ಪಣಿಗಳನ್ನು ಅವರು ಕೇಂಬ್ರಿಜ್ ವಿವಿಯ ಗಣಿತ ಪ್ರೊಫೆಸರ್ ಹಾರ್ಡಿ ಅವರಿಗೆ ಕಳುಹಿಸಿಕೊಡುತ್ತಾರೆ.

ಆ ಟಿಪ್ಪಣಿಗಳನ್ನು ನೋಡಿ ಹಾರ್ಡಿ ಸರ್ ನಿಬ್ಬೆರಗಾದರು. ಯಾಕೆಂದರೆ ಅವರು ಸಿದ್ಧಪಡಿಸಿದ ಅಷ್ಟೂ ಟಿಪ್ಪಣಿಗಳು ಗಣಿತದ ಪ್ರಪಂಚಕ್ಕೆ ಹೊಸತಾಗಿದ್ದವು. ಅವರು ವಿಶೇಷ ಆಸ್ಥೆಯನ್ನು ವಹಿಸಿ ರಾಮಾನುಜಂ ಅವರನ್ನು ಇಂಗ್ಲೆಂಡಿಗೆ ಕರೆಸಿಕೊಂಡರು. ಹಡಗಿನಲ್ಲಿ ಪ್ರಯಾಣ ಮಾಡುತ್ತಾ ರಾಮಾನುಜಂ ಇಂಗ್ಲೆಂಡಿಗೆ ಬಂದರು. ಅಲ್ಲಿ ಸಂಶೋಧನೆ ಮಾಡುತ್ತಾ ರಾಮಾನುಜಂ ಕೇಂಬ್ರಿಜ್ ವಿವಿಯ ಮೂಲಕ ಗಣಿತದಲ್ಲಿ FRS ( ಫೆಲೋ ಆಫ್ ರಾಯಲ್ ಸೊಸೈಟಿ) ಪದವಿ ಪಡೆದರು. ಈ ಪದವಿಯನ್ನು ಪಡೆದ ಮೊದಲ ಭಾರತೀಯ ಅವರು ಅನ್ನುವುದೇ ಒಂದು ಹೆಗ್ಗಳಿಕೆ.

ಆದರೆ ಪೂರ್ಣ ಸಸ್ಯಾಹಾರಿ ಆಗಿದ್ದ ರಾಮಾನುಜಂ ಅವರಿಗೆ ಇಂಗ್ಲೆಂಡಿನ ಚಳಿಯ ವಾತಾವರಣ ಕೂಡ ಆರೋಗ್ಯವನ್ನು ಕೆಡಿಸಿತು. ಅದರ ಜೊತೆಗೆ ಮನೆಯವರ ಪ್ರೀತಿಯ ಸೆಳೆತ ಅವರನ್ನು ಪೂರ್ತಿ ಜರ್ಜರಿತ ಆಗಿ ಮಾಡಿತು. ಅವರು ಆಸ್ಪತ್ರೆಗೆ ಸೇರಬೇಕಾಯಿತು.

ಒಮ್ಮೆ ಅವರನ್ನು ನೋಡಲು ಅವರ ಗುರುಗಳಾದ ಹಾರ್ಡಿ ಸರ್ ಅವರು ಕಾರಿನಲ್ಲಿ ಬಂದರು. ರಾಮಾನುಜಂ ಅವರ ಎರಡೂ ಕೈಗಳನ್ನು ಹಿಡಿದು ಗೊಳೋ ಎಂದು ಕಣ್ಣೀರು ಹಾಕಿದ್ದರು. ನಂತರ ಮಾತಾಡುತ್ತ ಗುರುಗಳ ಕಾರಿನ ನಂಬರ್ ಕೇಳಿದರು. ಹಾರ್ಡಿ ಸರ್ 1729 ಅಂದರು. ತಕ್ಷಣ ರಾಮಾನುಜಂ ಸರ್, ನಿಮಗೆ ಗೊತ್ತಿದೆಯಾ? ಅದು ವಿಶೇಷ ಸಂಖ್ಯೆ ಅಂದರು.

ಹಾರ್ಡಿ ಸರ್ ಅದು ಹೇಗೆ? ಎಂದು ಕೇಳಿದರು.

ರಾಮಾನುಜಂ ಹೀಗೆ ಹೇಳಿದರು.
ಸರ್, ಹತ್ತರ ಘನ 1000. ಒಂಬತ್ತರ ಘನ 729. ಕೂಡಿಸಿದರೆ 1729 ಆಗುತ್ತದೆ.

ಹಾಗೆಯೇ 12ರ ಘನ 1728. ಒಂದರ ಘನ 1. ಅವುಗಳನ್ನು ಕೂಡಿಸಿದರು ಕೂಡ 1729 ಆಗುತ್ತದೆ. ಹೀಗೆ ಎರಡೆರಡು ಘನಗಳ ಮೊತ್ತ ಕೊಡುವ ಒಂದೇ ಸಂಖ್ಯೆ 1729!

ಮತ್ತು ಈ ಗುಣವನ್ನು ಹೊಂದಿರುವ ಅತೀ ಸಣ್ಣ ಸಂಖ್ಯೆ ಅದು ಎಂದು ರಾಮಾನುಜಂ ಉತ್ಸಾಹದಲ್ಲಿ ಹೇಳುತ್ತಾ ಹೋದಂತೆ ಹಾರ್ಡಿ ಸರ್ ವಿಭ್ರಮೆಯಿಂದ ಕೇಳುತ್ತಾ ಹೋದರು! ಹೀಗೆ ಮಹಾ ಮೇಧಾವಿ ಗಣಿತಜ್ಞ ಶ್ರೀನಿವಾಸ್ ರಾಮಾನುಜಂ ಒಂದು ಅನನ್ಯ ಸಂಖ್ಯೆಯನ್ನು ಆಸ್ಪತ್ರೆಯ ಬೆಡ್ ಮೇಲೆ ಹೇಳಿದ್ದರು. ಮುಂದೆ ಅದು ರಾಮಾನುಜಂ ಸಂಖ್ಯೆ ಎಂದೇ ಜನಪ್ರಿಯ ಆಯಿತು!

ಮುಂದೆ ಆರೋಗ್ಯ ಕ್ಷೀಣಿಸಿ ಭಾರತಕ್ಕೆ ಹಿಂದೆ ಬಂದ ಶ್ರೀನಿವಾಸ್ ರಾಮಾನುಜಂ ಕೆಲವೇ ತಿಂಗಳಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡರು. ಹಾಗೆ ಸಾಯುವಾಗ ಅವರ ವಯಸ್ಸು ಕೇವಲ 32 ಆಗಿತ್ತು!

ಇದನ್ನೂ ಓದಿ| ರಾಜಮಾರ್ಗ ಅಂಕಣ | ಇಂಗ್ಲೆಂಡ್ ರಾಣಿಯ ಆಮಿಷಕ್ಕೂ ಬಗ್ಗದ ಉಸ್ತಾದ್ ಬಿಸ್ಮಿಲ್ಲಾ ಖಾನ್!

Exit mobile version