Site icon Vistara News

ರಾಜಮಾರ್ಗ ಅಂಕಣ | ಇಂಗ್ಲೆಂಡ್ ರಾಣಿಯ ಆಮಿಷಕ್ಕೂ ಬಗ್ಗದ ಉಸ್ತಾದ್ ಬಿಸ್ಮಿಲ್ಲಾ ಖಾನ್!

Bismillah khan

ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ಉಸ್ತಾದ್ ಬಿಸ್ಮಿಲ್ಲಾ ಖಾನರು ವಿಶ್ವ ಖ್ಯಾತಿಯನ್ನು ಪಡೆದ ಶೆಹನಾಯ್ ವಾದಕರು. 1947 ಆಗಸ್ಟ್ 15ರ ಮೊದಲನೆಯ ಸ್ವಾತಂತ್ರ್ಯದ (ಕೆಂಪು ಕೋಟೆಯ) ಕಾರ್ಯಕ್ರಮದಲ್ಲಿ ಶೆಹನಾಯ್ ನುಡಿಸಿದ ಕೀರ್ತಿಗೆ ಭಾಜನರಾದವರು.

ಆರು ವರ್ಷ ಪ್ರಾಯದಲ್ಲಿ ಬಿಸ್ಮಿಲ್ಲಾ ಖಾನರು ತನ್ನ ಹೆತ್ತವರ ಜೊತೆಗೆ ಕಾಶಿ ವಿಶ್ವನಾಥನ ಸನ್ನಿಧಿಗೆ ಬಂದವರು ಶೆಹನಾಯಿ ಕಲಿತು ಅಲ್ಲಿಯೇ ನೆಲೆ ನಿಂತರು. ಪ್ರತೀ ದಿನ ಸೂರ್ಯೋದಯಕ್ಕೆ ಗಂಗಾ ನದಿಯ ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿ ಕಾಶಿ ವಿಶ್ವನಾಥನ ದೇವಾಲಯದ ಜಗಲಿಯಲ್ಲಿ ಕೂತು ಅವರ ಸಂಗೀತ ಸೇವೆಯು ನಡೆಯುತ್ತಿತ್ತು. ಉಸ್ತಾದರು ಎಷ್ಟು ಬ್ಯುಸಿ ಇದ್ದರೂ ಈ ಸೇವೆಯು ನಿಲ್ಲುತ್ತಾ ಇರಲಿಲ್ಲ.

ಮುಂದೆ ಭಾರೀ ಪ್ರಸಿದ್ಧಿಗೆ ಬಂದ ನಂತರ ವಿದೇಶದ ಪ್ರವಾಸದ ಅಂಗವಾಗಿ ಅವರು ಇಂಗ್ಲೆಂಡಿಗೆ ಬಂದರು. ಅಲ್ಲಿ ಇಂಗ್ಲೆಂಡಿನ ರಾಣಿಯ ಎದುರು ಮತ್ತು ಸಾವಿರಾರು ಸಂಗೀತ ಪ್ರೇಮಿಗಳ ಮುಂದೆ ಅವರ ಸಂಗೀತ ಕಛೇರಿಯು ಅದ್ಭುತವಾಗಿಯೇ ನಡೆಯಿತು. ಅವರು ಕಣ್ಣು ಮುಚ್ಚಿ ನಾದವನ್ನು ಹೊಮ್ಮಿಸುತ್ತಿದ್ದರೆ ಇಡೀ ಸಭಾಂಗಣವು ಮಂತ್ರಮುಗ್ಧವಾಗಿ ಕೇಳಿತು. ರಾಣಿಯೂ ಭಾರೀ ಸಂಗೀತದ ಪ್ರಭಾವಕ್ಕೆ ಒಳಗಾದರು.

ಕಚೇರಿಯ ಕೊನೆಗೆ ಇಂಗ್ಲೆಂಡ್ ರಾಣಿ ಉಸ್ತಾದರ ಮುಂದೆ ನಿಂತು “ಉಸ್ತಾದರೇ, ನೀವು ನನಗೆ ಮೋಡಿ ಮಾಡಿದ್ದೀರಿ. ನೀವು ಇಲ್ಲಿಯೇ ಇದ್ದು ಬಿಡಿ. ಭಾರತಕ್ಕೆ ಹೋಗುವುದೇ ಬೇಡ. ನಿಮಗೆ ಬೇಕಾದ ಎಲ್ಲ ಸೌಕರ್ಯ ನಾವು ಮಾಡಿಕೊಡುತ್ತೇವೆ” ಅಂದರು.

ಉಸ್ತಾದರು ಮುಜುಗರ ಪಡುತ್ತ, “ಮಹಾರಾಣಿ, ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು. ನನಗೆ ಕಾಶಿ ನಗರ ಬಿಟ್ಟು ಬರಲು ಕಷ್ಟ ಆಗುತ್ತದೆ. ನನ್ನನ್ನು ಕ್ಷಮಿಸಿ” ಅಂದರು. ಆಗ ರಾಣಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಉಸ್ತಾದರೇ, ನಾನು ನಿಮಗಾಗಿ ಕಾಶಿ ನಗರವನ್ನು ಇಲ್ಲಿಯೇ ನಿರ್ಮಾಣ ಮಾಡುತ್ತೇನೆ. ನೀವು ಇಲ್ಲಿಯೇ ಇದ್ದು ಬಿಡಿ” ಎಂದು ಮತ್ತೆ ವಿನಂತಿ ಮಾಡಿದರು.

ಆಗ ಉಸ್ತಾದರು ಹೇಳಿದ ಮಾತು ತುಂಬಾ ಮಾರ್ಮಿಕ ಆಗಿತ್ತು.
“ಮಹಾರಾಣಿ. ನಿಮ್ಮ ಹತ್ತಿರ ಬೇಕಾದಷ್ಟು ಸಂಪತ್ತು ಇದೆ. ನಿಮಗೆ ಇಲ್ಲಿ ಕಾಶಿ ನಗರವನ್ನು ನಿರ್ಮಾಣ ಮಾಡುವುದು ಖಂಡಿತ ಕಷ್ಟ ಆಗಲಾರದು. ಆದರೆ ವಿಶ್ವನಾಥನ ಮಂದಿರ ಕಟ್ಟುವುದಕ್ಕೆ ಆಗುವುದೇ? ಅದೊಮ್ಮೆ ಸಾಧ್ಯ ಆದರೂ ಗಂಗಾ ನದಿಯನ್ನು ಲಂಡನ್ ನಗರಕ್ಕೆ ತರಲು ಸಾಧ್ಯವೇ ಇಲ್ಲ! ಸಾರಿ, ನಾನು ಲಂಡನ್ನಿಗೆ ಬರಲಾರೆ” ಎಂದು ಎದ್ದು ಹೊರಟುಬಂದರು!

ತೊಂಬತ್ತು ವರ್ಷಗಳ ಕಾಲ ಬದುಕಿದ್ದ ಉಸ್ತಾದರು ತೀರಿ ಹೋದಾಗ ಅವರ ಜೊತೆಗೆ ಅವರ ಬೇಗಂ (ಶೆಹನಾಯಿ)ನ್ನು ಅವರ ಕೊನೆಯ ಆಸೆಯಂತೆ ಅವರ ಜೊತೆಗೆ ದಫನ ಮಾಡಲಾಯಿತು. ಪ್ರಾಯಶಃ ಅವರು ಈಗ ಸ್ವರ್ಗದಲ್ಲಿ ಕೂಡ ಸಂಗೀತ ಕಛೇರಿ ಮಾಡುತ್ತಾ ಇರಬಹುದು! ಯಾರಿಗೆ ಗೊತ್ತು!

iಇದನ್ನೂ ಓದಿ| ರಾಜಮಾರ್ಗ ಅಂಕಣ | ಎ‌ಸ್ಪಿಬಿ ಹೃದಯ ವೈಶಾಲ್ಯತೆ ಒಬ್ಬ ಹೊಸ ಗಾಯಕನಿಗೆ ಜನ್ಮ ಕೊಟ್ಟಿತು!

Exit mobile version